ಹೊಣೆಗೇಡಿ ಪತ್ರಕರ್ತರ ಸೋಗು

ಇತ್ತೀಚೆಗೆ ’ಹೋಯ್ ಬೆಂದಗಾಳೂರ್’ ಪತ್ರಿಕೆಯಲ್ಲಿ ’ಇಂಡಿಯಾ ಟುಡೇ ಯಾವ ಮಟ್ಟಕ್ಕಿಳಿದಿದೆ ನೋಡಿ’ ಲೇಖನವನ್ನು ನೋಡಿ ಗಲಿಬಿಲಿಗೊಂಡೆನು. ತಮ್ಮ ಲೇಖನದಲ್ಲಿ ’ಇಂಡಿಯಾ ಟುಡೆ’ಯು ತನ್ನ ಸಪ್ಲಿಮೆಂಟ್ ಪತ್ರಿಕೆಯಲ್ಲಿ ಕಾಮಪ್ರಚೋದಕ ಚಿತ್ರಗಳಿಂದೊಡಗೂಡಿದ ಐಷಾರಾಮಿ ವಸ್ತುಗಳನ್ನು ಕುರಿತಾದ ಲೇಖನಗಳನ್ನು ನಮ್ಮ ಬುದ್ದಿಜೀವಿ ಪತ್ರಕರ್ತ/ಸಾಹಿತಿ ಸಂಪಾದಕರು ಹೀಗಳೆದು ಬರೆದಿದ್ದರು. ತಮ್ಮ ’ಹೋಯ್ ಬೆಂದಗಾಳೂರ್’ ಪತ್ರಿಕೆಯಲ್ಲಿ ರೌಡಿಯಿಸಂ, ಕ್ರೈಂ, ರೇಪ್, ಮರ್ಡರ್ ಗಳನ್ನು ವಿಜೃಂಭಿಸಿ ಬರೆದೇ ಈ ಮಟ್ಟಕ್ಕೆ ಬೆಳೆದಿರುವ ಈ ಮಹಾಶಯರು ಇದನ್ಯಾಕೆ ಹೀಗಳೆದರೆಂದು ಆಶ್ಚರ್ಯವಾಯಿತು. ವಿಕೃತ ಮನಸ್ಸುಗಳು, ’ರತಿವಿಜ್ಞಾನ’ದಂತಹ ಕೆಳಮಟ್ಟದ ಪತ್ರಿಕೆ ದೊರಕದೆ ಚಡಪಡಿಸುತ್ತಿದ್ದಾಗ ’ಹೋಯ್ ಬೆಂದಗಾಳೂರ್’, ’ಪೋಲೀ(ಸ್) ನ್ಯೂಸ್’ ಮುಂತಾದ ಪತ್ರಿಕೆಗಳು ಪರ್ಯಾಯವಾಗಿ ಆ ಗ್ಯಾಪ್ ಅನ್ನು ತುಂಬಿ ವಿಕೃತತೆಯನ್ನು ತೃಪ್ತಿಪಡಿಸಿಯೇ ಈ ಮಟ್ಟಕ್ಕೆ ಬೆಳೆದುವೆಂಬುದನ್ನು ಯಾರೂ ಅರಿಯರೆ?. ಕಾಲಕ್ರಮೇಣ ’ಹೋಯ್ ಬೆಂದಗಾಳೂರ್’ ತನ್ನ ದೃಷ್ಟಿಕೋನವನ್ನು ಬದಲಿಸಿಕೊಂಡಿರಬಹುದು. ಆದರೆ ಇಂದು ಕನ್ನಡದ ಯುವಜನತೆ ರೌಡಿಯಿಸಂ ಕಡೆಗೆ ತೀವ್ರ ಆಕರ್ಷಿತಗೊಂಡಿರುವುದರಲ್ಲಿ ’ಹೋಯ್ ಬೆಂದಗಾಳೂರ್’ ಕೊಡುಗೆ ಗಣನೀಯವಾಗಿದೆಯೆಂಬುದನ್ನು ಇದರ ಸಂಪಾದಕರು ಮರೆತಿರಬೇಕು.

ಈಗಲೂ ಅದೆಂತದೋ ಸುಡುಗಾಡು ಕ್ರೈಂ...... ಧಾರಾವಾಹಿಯನ್ನು ತೆಗೆಯುತ್ತ, ಕೀಳುಮಟ್ಟದ ಗೂಂಡಾಗಿರಿ ಸಿನೆಮಾಗಳಲ್ಲಿ ನಟಿಸುತ್ತ ತಮ್ಮ ತಿಕ್ಕಲುತನವನ್ನು ಮೆರೆಯುತ್ತಿರುವ ಈ ಬುದ್ದಿಜೀವಿ ಪತ್ರಕರ್ತ ಕಂ ಸಾಹಿತಿ ಕಂ ನಟ, ಇತ್ತೀಚೆಗೆ ಮಕ್ಕಳಿಂದ ಮುದುಕರಾದಿಯಾಗಿ ಎಲ್ಲರಿಗೂ ಲೈಫ್ ಕೋಚ್ ರಂತೆ ಪೋಸ್ ಕೊಡುತ್ತಿದ್ದಾರೆ. ಒಮ್ಮೊಮ್ಮೆ ಹೃದಯ ಚೆಕ್ ಮಾಡಿಸಿಕೊಳ್ಳಿರೆಂದೋ, ಒಮ್ಮೊಮ್ಮೆ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳಿರೆಂದೋ, ಹುಡುಗಿಯರು ತಮ್ಮ ಬಾಯ್ ಫ್ರೆಂಡ್ ಗಳನ್ನು ಪರೀಕ್ಷಿಸಿರೆಂದೋ ಇಲ್ಲ ಗೃಹಿಣಿಯರು ತಮ್ಮ ಗಂಡಂದಿರ ನೆತ್ತಿಯನ್ನು ಕುಕ್ಕಿರೆಂದೋ ಉಚಿತ ಸಲಹೆ ಕೊಡುತ್ತಾರೆ. ಒಮ್ಮೊಮ್ಮೇ ದಿಢೀರೆಂದು ಅವರಲ್ಲಿನ ಕೀಳರಿಮೆ ಎದ್ದಾಗ ಇನ್ಫಿಯ ನಾರಾಯಣಮೂರ್ತಿಯವರನ್ನೋ ಅಥವಾ ಯು. ಆರ್. ಅನಂತಮೂರ್ತಿಯವರನ್ನೋ ಹೀಗಳೆದು ತಮ್ಮನ್ನು ಸಮಾಧಾನಿಸಿಕೊಳ್ಳುವುದು, ಮಗದೊಮ್ಮೆ ಗರ್ವದ ಮದವೇರಿದಾಗ, ಬದುಕಿದ್ದರೆ ಒಂದು ಕೈ ನೋಡಿಯೇ ಬಿಡುತ್ತಿದ್ದೆ ಎಂದು ಲಂಕೇಶ್ ರನ್ನು ಜರೆದು, ಮತ್ತೊಮ್ಮೆ ನೇರ ತಮ್ಮ ಲೆವೆಲ್ ಅನ್ನು ಇಂಟರ್ ನ್ಯಾಶನಲ್ ಮಟ್ಟಕ್ಕೆ ತೆಗೆದುಕೊಂಡುಹೋಗಿ ಬಿಲ್ ಗೇಟ್ಸ್, ಕ್ಲಿಂಟನ್ ರನ್ನೋ ಅಥವಾ ಒಟ್ಟಾರೆ ಅಮೆರಿಕಾವನ್ನು ಮೂದಲಿಸಿ ತಮ್ಮ ಲೆವೆಲ್ ಅನ್ನು ಐಟಿ/ಬಿಟಿಯಂತೆ ಗ್ಲೋಬಲ್ ಆಗಿ ಸಮೀಕರಿಸಿಕೊಳ್ಳುತ್ತ ತಮ್ಮನ್ನು ವಿಶ್ವದ ಒಬ್ಬ ವಿಶಿಷ್ಟ ಬುದ್ದಿಜೀವಿಯಂತೆ ಚಿತ್ರಿಸಿಕೊಳ್ಳುತ್ತಾರೆ.

ವಿಷಾದದ ಸಂಗತಿಯೆಂದರೆ ಬೆಂಗಳೂರಿನ ವಿಕೃತ ಪ್ರೇಮಿಯೊಬ್ಬನ ಆಸಿಡ್ ದಾಳಿಗೆ ತುತ್ತಾಗಿ ಇವರ ಸಹಾಯಹಸ್ತವನ್ನು ಪಡೆದಿರುವ ಮುಗ್ಧ ಯುವತಿಯೋರ್ವಳಿಗೆ ಈ ಮಹಾಶಯರು ಒಂದಾನೊಂದು ಕಾಲದಲ್ಲಿ ಕ್ರೌರ್ಯವನ್ನು ವಿಜೃಂಭಿಸಿ ಭೂಗತರಾಗಿದ್ದ ರೌಡಿಗಳಿಗೆಲ್ಲ ’ನಾಯಕ’ ಪಟ್ಟ ಕಟ್ಟಿ, ಆ ವಿಕೃತಪ್ರೇಮಿಯಷ್ಟೇ ಅಲ್ಲದೆ ಇಂದಿನ ಯುವಜನಾಂಗವೇ ಅಂತಹ ಕ್ರೌರ್ಯವನ್ನು ಮೆರೆಯುವ ರೌಡಿಯಿಸಂ ಗೆ ತೀವ್ರ ಆಕರ್ಷಿತರಾಗಿ ಅದನ್ನೇ ಮಾಡಹೊರಟಿರುವುದಕ್ಕೆ ಬೀಜ ನೆಟ್ಟಿದ್ದರೆಂಬುದನ್ನು ಅರಿಯದವಳಾಗಿದ್ದಾಳೆ.

ಹಾಗೆ ವಿಮರ್ಶಿಸುವುದಾದರೆ, ಕರ್ನಾಟಕದ ಇಂದಿನ ಸ್ಥಿತಿಗತಿಗಳಿಗೆ ಪತ್ರಕರ್ತರ (ದಿನಪತ್ರಿಕೆಗಳ) ಕೊಡುಗೆಯನ್ನೇ ಪ್ರಶ್ನಿಸಿಕೊಳ್ಳಿ. ಸುಮ್ಮನೆ ಇಂದಿನ ದಿನಪತ್ರಿಕೆಗಳ ಸುದ್ದಿಗಳೆಡೆ ಒಮ್ಮೆ ಕಣ್ಣು ಹಾಯಿಸಿ ನೋಡಿ. ಸಂಪುಟ ವಿಸ್ತರಣೆಯ ಸಮಯದಲ್ಲಾದರೆ ಒಬ್ಬ ರಾಜಕಾರಣಿ ತಾನು ಪ್ರಬಲ ಕೋಮಿನವನೆಂದೂ ತನಗೆ ಅಬಕಾರೀ ಖಾತೆ ಬೇಕೆಂದು ಹೇಳಿದ್ದನ್ನೋ ಅಥವ ಮತ್ತೊಬ್ಬ ತಾನು ಹಿಂದುಳಿದ ವರ್ಗದವನೆಂದೋ ತನಗೆ ಪ್ರಮುಖ ಖಾತೆ ಬೇಕೆಂತಲೂ ಕೇಳುವುದನ್ನೋ ರೋಚಕವಾಗಿ ವರದಿಸುವ ಈ ಪತ್ರಕರ್ತರು ಕಡೆಯಪಕ್ಷ ಕೊನೆಗೊಂದು ಸಾಲಾದರೂ ತಮ್ಮ ವಿವೇಚನೆಯ ವಾಕ್ಯವನ್ನು ಸೇರಿಸಿರುವುದಿಲ್ಲ. ಆ ರಾಜಕಾರಣಿಗೆ ಆ ಖಾತೆಯ ಕುರಿತಾದ ವಿದ್ಯಾಭ್ಯಾಸ, ಅನುಭವಗಳನ್ನು ಪ್ರಶ್ನಿಸಿಯೋ ಅಥವಾ ಆ ಖಾತೆಯಲ್ಲಿ ಅವನ ಉದ್ದೇಶ ಹೆಚ್ಚಿನ ಹಣ ಮಾಡುವುದೆಂದೋ ಒಂದು ವಾಕ್ಯವನ್ನಾದರೂ ಸೇರಿಸಿ, ಪ್ರಶ್ನಿಸಿ ಬರೆದರೆ ಎಷ್ಟೋ ಜನಜಾಗೃತಿಯನ್ನು ಮೂಡಿಸಬಹುದು. ಜಾತಿ ಪಂಗಡಗಳ ಸಂಘಗಳ ಸಭೆಗಳ ಕುರಿತು, ಬೇವಿನಮರದಲ್ಲಿ ಹಾಲು ಬರುವುದು, ಭಿಕ್ಷುಕನೊಬ್ಬ ಟ್ಯೂಬ್ ಲೈಟ್ ತಿನ್ನುವುದು, ತಲೆ ಕೆಟ್ಟ ಯಾವನೋ ಮರವೇರಿ ಕುಳಿತದ್ದು ಇನ್ನು ಮುಂತಾದ ವಿವೇಚನೆ, ವಿಶ್ಲೇಷಣೆ ಇಲ್ಲದ ವರದಿಗಳಿಂದ ಜಾತೀಯತೆ ಮೂಢತೆಗಳನ್ನು ಪ್ರಮುಖಾಂಶವಾಗಿ ಮೆರೆಸುವರು. ಕೆಲವೊಮ್ಮೆ ಪಾಶ್ಚಿಮಾತ್ಯ ಪತ್ರಿಕೆಗಳನ್ನು ಅನುಕರಿಸುತ್ತ ಜೂ ಒಂದರ ಹುಲಿ ನಾಲ್ಕು ಮರಿ ಹಾಕಿದ್ದು, ಒಬ್ಬ ಸಿನಿಮಾ ನಟ ಬಿರಿಯಾನಿ ತಿನ್ನುವುದೂ ಸುದ್ದಿಯಾಗುತ್ತವೆ. ನಿತ್ಯವೂ ಇಂತಹ ವರದಿಗಳನ್ನು ಓದಿದ ಜನರಲ್ಲಿ ಇನ್ನೆಲ್ಲಿಂದ ವಿವೇಚನೆಗಳು ಹುಟ್ಟುತ್ತವೆ?

ಗಮನಿಸಿ ನೋಡಿ, ಈ ವರದಿಗಾರರು ತಮ್ಮ ವರದಿಯನ್ನು ರೋಚಕಗೊಳಿಸುವ ಭರದಲ್ಲಿ, ’ಕುಮಾರಣ್ಣ’, ’ದಾವಣಗೆರೆ ದೊರೆ’, ’ಬಳ್ಳಾರಿ ಧಣಿ’, ’ಅಪ್ಪಾಜಿ’, ’ಅಮ್ಮ’, ’ನೀಲಿ ಕಣ್ಣಿನ ಹುಡುಗ’, ’ಮೇಡಂ’ ಇನ್ನು ಮುಂತಾದ ಪದಪ್ರಯೋಗದಿಂದ ಜನಗಳಲ್ಲಿ ಕೀಳರಿಮೆಯೆಂಬ ಮಾರಿಯನ್ನು ವ್ಯಾಪಕವಾಗಿ ಹಬ್ಬಿಸುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯದ ಮೇಲೆ ಯಾವ ರೀತಿಯ ಪರಿಣಾಮಗಳಾಗಬಹುದೆಂಬ ಕಲ್ಪನೆಯೂ ಇಲ್ಲದೆ ತಮ್ಮ ವರದಿಗಳನ್ನು ರೋಚಕಗೊಳಿಸುತ್ತ ರಾಜಕಾರಣಿಗಳ ಬಾಲಬಡುಕರೇ ಆಗಿಬಿಟ್ಟಿದ್ದಾರೆ.

ವೃತ್ತಪತ್ರಿಕೆಗಳು ಪ್ರಸ್ತುತ ವಿದ್ಯಾಮಾನಗಳನ್ನು ವಿಶ್ಲೇಷಿಸಿ ಜಾಗೃತಿ ಮೂಡಿಸುತ್ತಿವೆ ನಿಜ. ಆದರೆ ಈ ಪತ್ರಿಕೆಗಳು ಎಷ್ಟು ಜನರನ್ನು ಮುಟ್ಟುತ್ತಿವೆ? ಸಹಜವಾಗಿ ಹೆಚ್ಚು ಸರ್ಕ್ಯುಲೇಷನ್ ಇರುವ ದಿನಪತ್ರಿಕೆಗಳೇ ಹೆಚ್ಚು ಜನರನ್ನು ಮುಟ್ಟುವುದು. ಆದ್ದರಿಂದ ಈ ಪತ್ರಿಕೆಗಳು ತಮ್ಮ ವರದಿಗಳನ್ನು ಪ್ರಾಮಾಣಿಕವಾಗಿ ವರದಿಸುತ್ತ, ದೇವೇಗೌಡರ ಬಾಲಬಡುಕರು ಅವರನ್ನು ’ಅಪ್ಪಾಜಿ’ಯೆಂದೋ, ಕುಮಾರಸ್ವಾಮಿಯನ್ನು ’ಕುಮಾರಣ್ಣ’ನೆಂದೋ, ಕಾಂಗ್ರೆಸ್ಸಿಗರು ಸೋನಿಯಾರನ್ನು ’ಮೇಡಂ’ ಎಂದೋ ಗುಲಾಮರಂತೆ ಕರೆದರೆ ಕರೆದುಕೊಳ್ಳಲು ಬಿಟ್ಟು ತಮ್ಮ ಪಾಡಿಗೆ ತಾವು ಸುದ್ದಿಯನ್ನು ಸುಶಿಕ್ಷಿತ ಶೈಲಿಯಲ್ಲಿ ಬರೆದರೆ ಸಮಾಜದಲ್ಲಿ ಎಷ್ಟೋ ಕೀಳರಿಮೆ ನಿಲ್ಲುತ್ತದೆ.

ವಿಷಾದ:

ಒಟ್ಟಿನಲ್ಲಿ ಬ್ರಿಟಿಷರಿಂದ ಭ್ರಷ್ಟ ನೇತಾರರಿಗೂ, ಬಲಾಢ್ಯರಿಗೂ ಸ್ವೇಚ್ಚಾಚಾರ (ಸ್ವಾತಂತ್ರ್ಯವಲ್ಲ) ಹಸ್ತಾಂತರಗೊಂಡು ದಿನಪತ್ರಿಕೆಗಳು ಜನಸಾಮಾನ್ಯರಿಗೆ ಈ ಪುಢಾರಿಗಳ, ಬಲಾಢ್ಯರ ದಾಸ್ಯವನ್ನು ಪ್ರಸರಿಸುವ ಮಾಧ್ಯಮವಾಗಿ ಪರಿವರ್ತಿತಗೊಳ್ಳುತ್ತಿವೆಯೇನೋ ಎಂದಿನಿಸುತ್ತಿದೆ.

ನಿಜಕ್ಕೂ "ಭಾರತ ಪ್ರಕಾಶಿಸುತ್ತಿದೆ!"

ಕುಟಿಲ ಬುದ್ದಿಜೀವಿಗಳ ಓಲಾಟ

ಕಳೆದೆರಡು ವಾರಗಳ ಹಿಂದೆ ಮಠಾಧೀಶ್ವರರೋರ್ವರ ಅಧಿಕಾರ ಹಸ್ತಾಂತರದ ಅಭಿಪ್ರಾಯವನ್ನು ಕುರಿತು ವಿಶ್ಲೇಷಿಸಿದ್ದ ನಮಗೆ, ಈಗ ಸಾಹಿತಿಗಳ ವಲಯದಲ್ಲಿ ಮೂಡಿರುವ ಭಿನ್ನಾಭಿಪ್ರಾಯ ಈ ವಾರದ ಅಂಕಣವಾಗುತ್ತಿದೆ. ಒಟ್ಟಿನಲ್ಲಿ ಎಲ್ಲೆಲ್ಲೂ ಅಧಿಕಾರ ಹಸ್ತಾಂತರವೇ ಸುದ್ದಿಗೆ ಗ್ರಾಸವಾಗಿದ್ದರೂ ಇಲ್ಲಿ ಅದು ನೆಪ ಮಾತ್ರವಾಗಿ ಈ ಲೇಖನದ ಮುಖ್ಯಾಂಶ ಬೇರೆಯದೇ ಆಗಿದೆ.

ಇತ್ತೀಚೆಗೆ ಚಾಮರಾಜನಗರದ ಜಿಲ್ಲಾ ಕಸಾಪ ಸಭೆಯಲ್ಲಿ ಹಿರಿಯ ಸಾಹಿತಿ ಹಂಪನಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಸಮ್ಮಿಶ್ರ ಸರಕಾರದ ಪಾಲುದಾರ ಜೆಡಿಎಸ್ ಪಕ್ಷವು ಅಧಿಕಾರವನ್ನು ಹಸ್ತಾಂತರಿಸದಿದ್ದರೆ ತಾವು ವಿಧಾನಸಭೆಯ ಮುಂದೆ ನಿರಶನ ಹೂಡುವುದಾಗಿ ಹೇಳಿದ್ದನ್ನೂ ಮತ್ತು ಅಲ್ಲಿಯೇ ಇದ್ದ ಕಸಾಪ ಅಧ್ಯಕ್ಷ ಚಂಪಾ ಅವರು ಇದನ್ನು ವಿರೋಧಿಸುತ್ತ "ಸಾಹಿತಿಗಳು ಮಾಡಲಿಕ್ಕಿರುವ ಅನೇಕ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಹೀಗೆ ಅನವಶ್ಯಕವಾಗಿ ರಾಜಕೀಯವನ್ನು ಮಾತನಾಡಬಾರದು" ಎಂದು ವಿರೋಧಿಸಿದರೆಂದು ಪತ್ರಿಕೆಗಳಲ್ಲಿ ಓದಿದ ನನಗೆ ಆಶ್ಚರ್ಯವೇನೂ ಆಗಲಿಲ್ಲ.

ಸರಿಯಾಗಿ ಯೋಚಿಸಿದರೆ, ಸಾಮಾಜಿಕ ಬದ್ದತೆ ಮತ್ತು ಜವಾಬ್ದಾರಿಯನ್ನು ಹೊತ್ತ ಸಾಹಿತಿಗಳು ಸಾಮಾಜಿಕ ಕಳಕಳಿಗೆ, ಜನರಿಂದಾಗಲೀ, ಅಧಿಕಾರಿಗಳಿಂದಾಗಲೀ, ಮಠಾಧಿಪತಿಗಳಿಂದಾಗಲೀ, ಧೂರ್ತ ರಾಜಕಾರಣಿಗಳಿಂದಾಗಲೀ ಅಥವಾ ಅಂತಹ ಧೂರ್ತರೇ ತುಂಬಿರುವ ಸರ್ಕಾರದ ಯಾವುದೇ ಮೂರ್ಖ ನಿರ್ಧಾರಗಳಿಂದಾಗಲೀ ಧಕ್ಕೆಯುಂಟಾದಾಗ ಅಥವ ಅಂತಹ ಪರಿಸ್ಥಿತಿಯೊದಗಬಹುದೆಂಬ ಸುಳಿವು ಸಿಕ್ಕಾಗಲೆಲ್ಲ ದನಿಯೆತ್ತಿ ಜನಜಾಗೃತಿಗೊಳಿಸುವುದೂ ಮತ್ತು ಗಟ್ಟಿಯಾಗಿ ಹೋರಾಡುವುದೂ ಜವಾಬ್ದಾರಿಯುತ ಸಾಹಿತಿಗಳ ಕರ್ತವ್ಯವೇ ಆಗಿದೆ.

ನಮ್ಮ ಬುದ್ದಿಜೀವಿಗಳು ಹರೆಯದ ಬಿಸಿರಕ್ತದ ಹುರುಪಿನಲ್ಲಿ ಸಮಾಜದ ಹುಳುಕುಗಳನ್ನೆತ್ತಿ ತೋರಿಸುತ್ತ ತಮ್ಮ ಬರವಣಿಗೆಯಿಂದ ಕ್ರಾಂತಿಯನ್ನೇ ಮೆರೆದು, ಬೆಳೆಯುತ್ತಿದ್ದ ಅಂದಿನ ಯುವಪೀಳಿಗೆಗೆ ಮಾದರಿಯೆನಿಸಿ, ಯುವಜನಾಂಗದ ಅಘೋಷಿತ ’ರ್‍ಓಲ್ ಮಾಡೆಲ್’ಗಳೆನಿಸಿದ್ದ ಈ ಬುದ್ದಿಜೀವಿ ಸಾಹಿತಿಗಳು ವಯಸ್ಸಾದಂತೆ ಬಿಸಿ ಆರಿ, ಯಾವುದೇ ಒಬ್ಬ ಮಾಮೂಲೀ ವ್ಯಕ್ತಿಯಂತೆ ತಮ್ಮ ಆಸ್ತಿ, ಅಂತಸ್ತು, ಪ್ರತಿಷ್ಟೆ, ತಮ್ಮ ಮಕ್ಕಳ ಉನ್ನತಿ ಮತ್ತು ಅಧಿಕಾರದಾಹಗಳ ದಾಸರೇ ಆಗಿ ಮಾರ್ಪಾಟಾಗಿದ್ದಾರೆ.

ಇತ್ತೀಚಿನ ನಮ್ಮ ಬುದ್ದಿಜೀವಿ ಸಾಹಿತಿಗಳ ವರ್ತನೆಯನ್ನೇ ಗಮನಿಸಿ. ಬಹುಪಾಲು ಬುದ್ದಿಜೀವಿಗಳು ಜವಾಬ್ದಾರಿಯುತವಾಗಿ ವರ್ತಿಸದೆ ವಿವೇಚನೆಯಿಲ್ಲದೆ ಜಾತ್ಯಾತೀತ ರಾಜಕಾರಣಿಗಳನ್ನು ಮೀರಿಸುವಷ್ಟು ’ಓಲೈಕೆ’ ಗೆ ಶರಣಾಗಿದ್ದಾರೆ. ಒಂದು ಕೋಮಿನ ಜನ ಪೂಜಿಸುವ ದೇವತೆಗಳನ್ನು ಕಾಮಪ್ರಚೋದಕವಾಗಿ ಚಿತ್ರಿಸಿದ ಎಂ. ಎಫ್. ಹುಸೇನ್ ರನ್ನು ಅಪ್ರತಿಮ ಕಲಾಕಾರರೆಂದೂ ಮತ್ತೊಂದು ಕೋಮಿನ ದೇವನನ್ನು ಚಿತ್ರಿಸಿದ ನೆದರ್ ಲ್ಯಾಂಡಿನ ವ್ಯಂಗಚಿತ್ರಗಾರನನ್ನು ಕೋಮು ಗಲಭೆಯ ಪ್ರಚೋದಕನೆಂದೂ ಅಭಿವ್ಯಕ್ತಿತ್ವದ ಸಮನ್ವಯವನ್ನು ಮೆರೆಯುವುದು, ಇದನ್ನು ಪ್ರಶ್ನಿಸಿದವರನ್ನು ’ಚಡ್ಡಿ’ ಗಳೆಂದು (ಚಿದಾನಂದಮೂರ್ತಿಗಳನ್ನು ಜರೆದಂತೆ) ಜರೆಯುವುದು, ಒಂದೆಡೆ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಅರಿವಿದ್ದು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸಿ, ಬಡ ಮಕ್ಕಳು ಬರುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆಯನ್ನು ಸಲ್ಲದ ನೆಪಗಳನ್ನು ನೀಡಿ ವಿರೋಧಿಸುವುದು ಮತ್ತು ಇಂದು ಕೃಷಿಕರು ಕೃಷಿಕಾರ್ಮಿಕರು ಸಿಗದೆ ನೊಂದು ಫಲವತ್ತಾದ ಭೂಮಿಯನ್ನು ಪಾಳು ಬಿಡುವಂತಹ ಪರಿಸ್ಥಿತಿ ಕರ್ನಾಟಕದ ಉದ್ದಗಲಕ್ಕೂ ಇದ್ದರೂ ಈ ನಿಜಪರಿಸ್ಥಿತಿಯ ಅರಿವಿದ್ದೂ ಇಲ್ಲದಂತೆ ಯಾವೊತ್ತೋ ಸತ್ತು ಇತಿಹಾಸವಾಗಿ ಇಂದಿನ ಸಾಮಾಜಿಕ ಪರಿಸ್ಥಿತಿಗೆ ಅಪ್ರಸ್ತುತವೂ ಅಭಾಸವೂ ಆದ ನಕ್ಸಲ್ (ಆದರ್ಶ?) ವಾದವನ್ನು ಬೆಂಬಲಿಸುತ್ತಿರುವ ಸಂಗತಿಗಳನ್ನು ನೋಡಿದರೆ ನಗಬೇಕೋ ಅಳಬೇಕೋ ತಿಳಿಯದು.

ಅಷ್ಟೇ ಅಲ್ಲದೆ ಪ್ರಶಸ್ತಿಗಳ ಲಾಬಿಗೋ, ಪ್ರಚಾರದ ಹಪಾಹಪಿಗೋ, ತಮಗೊಂದು ಬೆಂಗಳೂರಿನಲ್ಲಿ ಸರ್ಕಾರೀ ಸೈಟು ಗಿಟ್ಟಿಸಿಕೊಳ್ಳಬೇಕೆಂದೋ ಅಥವಾ ತಮ್ಮೊಳಗೆ ಅವಿತಿರುವ ಕುಟಿಲ ಕಾಮನೆಯ ಕಡಿತದ ದೆಸೆಯಿಂದಲೋ ಇಂದು ಕನ್ನಡದ ಬಹುತೇಕ ಬುದ್ದಿಜೀವಿ ಸಾಹಿತಿಗಳು ಸೆಕ್ಯುಲರ್ ಪದದ ನಿಜ ಅರ್ಥವನ್ನು ’ಓಲೈಕೆ’ ಗೆ ವ್ಯಾಖ್ಯಾನಿಸಿ, ತಮ್ಮ ಅನುಕೂಲಕ್ಕನುಗುಣವಾಗಿ ಸೆಕ್ಯುಲರ್ ಪದವನ್ನು ತಿರುಚಿ, ಈ ಬುದ್ಧಿಜೀವಿ ಸಾಹಿತಿಗಳನ್ನು ತಮ್ಮ ’ರೋಲ್ ಮಾಡೆಲ್’ ಗಳೆಂದು ಬಗೆದು ಬೆಳೆದ ಯುವ ಜನಾಂಗವು ತಮ್ಮ ಅಂದಿನ ’ರ್‍ಓಲ್ ಮಾಡೆಲ್’ಗಳ ಬಗೆಗೆ ಅಸಹ್ಯ ಪಡುವಷ್ಟು ಲದ್ಧಿಜೀವಿಗಳೆನಿಸಿದ್ದಾರೆ.

ಇಂತಹ ಮೂರ್ಖರನ್ನು ’ರ್‍ಓಲ್ ಮಾಡೆಲ್’ಗಳೆಂದುಕೊಂಡಿದ್ದೆವೆಲ್ಲಾ ಎಂದು ಕೊರಗುತ್ತಿರುವ ಸಂದರ್ಭದಲ್ಲಿ ಹಂಪನಾ ಅವರು ದನಿಯೆತ್ತಿ, ರಾಜಕೀಯ ಪಕ್ಷಗಳ ಸಾಮಾಜಿಕ ವಚನಬದ್ಧತೆಯನ್ನು ಪ್ರಶ್ನಿಸಿ, ಸಾಹಿತಿಗಳಿಗೆ ತಕ್ಕುದಾದ ಕಾರ್ಯವನ್ನು ಮಾಡಹೊರಟಿರುವುದು ಒಂದು ಅತ್ಯಂತ ಸಮಾಧಾನಕರ ಬೆಳವಣಿಗೆ.

ಯಾಕೋ ಇದನ್ನೆಲ್ಲಾ ನೋಡಿದರೆ, ಕನ್ನಡ ಸಾರಸ್ವತ ಲೋಕದಲ್ಲಿ ಬರೆದಂತೆ ಬಾಳಿ, ಪ್ರತಿಪಾದಿಸಿದ್ದನ್ನು ಜೀವಿಸಿದ ಏಕೈಕ ನಿಜ ಬುದ್ದಿಜೀವಿ ಸಾಹಿತಿಗಳಾದ ಮತ್ತು ನಮ್ಮ ಯುವಜನಾಂಗಕ್ಕೆ ಹೆಮ್ಮೆಯ ಮಾದರೀ ವ್ಯಕ್ತಿಯಾಗಿದ್ದ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ಇನ್ನೂ ಬಹುಕಾಲ ನಮ್ಮೊಂದಿಗಿರಬೇಕಿತ್ತು ಎನಿಸುತ್ತದೆ.

ವಿನೋದ:

ಸಾಹಿತಿ ಚಂಪಾ ರವರಿಗೆ ಅವರದೇ ಸಾಹಿತ್ಯ ಶೈಲಿ ಚುಟುಕು ಮಾದರಿಯ ಕುಟುಕು.

ಚಂಪಾ,
ನೀವೇನಾ ಅಭಿವ್ಯಕ್ತಿತ್ವತೆಯ ಪಂಪ
ಇಲ್ಲಾ ಹಾಗೆಂದುಕೊಂಡವರ ಪಿಂಪಾ? (ಇಂಗ್ಲಿಷ್ ಪದ)
ಹಾಗಿದ್ದರೆ ನಿಮಗಿದೆ ನಮ್ಮ ಅನುಕಂಪ,
ಚಂಪಾ.

ದಿಕ್ಕೆಟ್ಟ ರೈತರೂ, ಔಷಧೀಯ ಬೆಳೆಗಳೂ.

ಮೊನ್ನೆ ಒಬ್ಬ ಮಾದರೀ(?) ರೈತರೊಬ್ಬರು ತಾವು ಕೌಡಿಸಿಫಾರ್ಮ್ ಎಂಬ ಔಷಧೀಯ ಗಡ್ಡೆಗಳನ್ನು ಬೆಳೆದಿರುವುದಾಗಿಯೂ ಅವಕ್ಕೆ ಅಮೇರಿಕಾದಲ್ಲಿ ಮಾರುಕಟ್ಟೆಯನ್ನೊದಗಿಸಿಕೊಡಬೇಕೆಂದು ಈಮೈಲ್ ಕಳುಹಿಸಿದ್ದರು. ಅಮೇರಿಕಾದ (ಎಫ್.ಡಿ.ಎ) ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆಯ ಬಗ್ಗೆ ಅರಿವಿಲ್ಲದೆ, ಅಮೇರಿಕನ್ನರೆಲ್ಲ ಮಲಗಲು ನಿದ್ರೆಮಾತ್ರೆಯನ್ನು, ಎದ್ದಾಗ ಮಲವಿಸರ್ಜನೆಗೆ ಇನ್ನೊಂದು ಮಾತ್ರೆಯನ್ನು, ನಂತರ ವಿಟಮಿನ್ ಗಳನ್ನೂ ಕಾಮಕ್ಕೆ ವೈಯಾಗ್ರವನ್ನು ನಿತ್ಯವೂ ಸೇವಿಸುವರೆಂಬ ಮಾಧ್ಯಮದವರು ಕಲ್ಪಿಸಿರುವ ಕಲ್ಪನೆಯಿರುವ ಇವರಿಗೆ ಅವನ್ನೆಲ್ಲ ತಪ್ಪೆಂದೂ, ಅದೆಲ್ಲ ಮಾಧ್ಯಮದವರು ಸೃಷ್ಟಿಸಿರುವ ಕಪೋಲಕಲ್ಪಿತ ಸಂಗತಿಗಳೆಂದು ಮನವರಿಕೆ ಮಾಡಿಕೊಡುವುದು ಹೇಗೆಂದು ನನಗೆ ತೋಚದಾಯಿತು.

ಸರಿ, ಇದಾವುದು ಆ ಮಾಯಾಗಡ್ಡೆಯೆಂದು ಹುಡುಕಿದಾಗ ಅದೊಂದು ದಕ್ಷಿಣ ಅಮೇರಿಕಾದಲ್ಲಿ ಯಥೇಚ್ಚವಾಗಿ ಬೆಳೆಯುವ ’ಮೊಸಳೆಗಡ್ಡೆ’ ಯೆಂದು ಕರೆಯಲ್ಪಡುವ ಸಾಮಾನ್ಯ ಕಾಡುಗಡ್ಡೆಯಾಗಿತ್ತು. ಇದನ್ನು ದಕ್ಷಿಣ ಅಮೇರಿಕೆಯಲ್ಲಿ ತರಕಾರಿಯಾಗಿಯೂ, ಭಾರತದಲ್ಲಿ ’ವಿಧಾರಿಕಾಂಡ’ವೆಂದು ಆಯುರ್ವೇದದಲ್ಲಿ ಉಪಯೋಗಿಸುವ ಗಡ್ಡೆಯೂ ಆಗಿತ್ತು.

ಎಷ್ಟೊಂದು ಸುಲಭವಾಗಿ ನಮ್ಮ ರೈತರು ಈ ಔಷಧೀಯ ಸಸ್ಯಗಳನ್ನೊ, ಗಡ್ಡೆಗಳನ್ನೊ, ಬೀಜಗಳನ್ನೋ ಕೇವಲ ಗಾಳಿಸುದ್ದಿಗಳನ್ನು ನಂಬಿ ಲಕ್ಷಾಂತರ ಸುರಿದು, ಬೆಳೆದು, ಕನಸಿನರಮನೆಯನ್ನು ಕಟ್ಟಿ, ಕಡೆಗೆ ಮಾರುಕಟ್ಟೆಯಿಲ್ಲದೆ ಕೈಹೊತ್ತು ಕುಳಿತುಕೊಳ್ಳುವಂತಹ ಸ್ಥಿತಿಯನ್ನು ತಂದುಕೊಳ್ಳುತ್ತಿರುವರು.

ಕೆಲವು ವರ್ಷಗಳ ಹಿಂದಿದ್ದ ವೆನಿಲ್ಲಾ ಬೆಳೆಯ ಭರಾಟೆಯನ್ನು ನೆನಪಿಸಿಕೊಳ್ಳಿ. ಇದನ್ನು ಬೆಳೆದ ರೈತರು ವೆನಿಲ್ಲಾ ಹುರುಳಿಯನ್ನು ಕಾಯಲು ಬಂದೂಕುಧಾರಿಗಳನ್ನು ನೇಮಿಸಿಕೊಂಡಿದ್ದರೆಂದೂ, ಅಂದು ಆ ಎಲ್ಲಾ ರೈತರು ಬೆಳೆದ ವೆನಿಲ್ಲಾ ಇತರೆ ರೈತರುಗಳಿಗೆ ಬೀಜವಾಗಿ ಮಾರಲು ಕೂಡಾ ಸಾಕಾಗಲಾರದೆಂದೂ, ಆ ಬೇಡಿಕೆಯನ್ನು ಸರಿತೂಗಿಸಲು ಗೃಹಿಣಿಯರೂ ತಮ್ಮ ಕೈತೋಟದಲ್ಲಿಯೂ ವೆನಿಲ್ಲಾ ಬೆಳೆಯುವಷ್ಟು ಇದು ಪ್ರಚಾರ ಪಡೆದಿತ್ತು.

ಬಹುತೇಕ ಬೀಜವಾಗಿ ನಮ್ಮ ರೈತಬಾಂಧವರಿಗೇ ವೆನಿಲ್ಲಾ ಬಂಗಾರದ ಬೆಲೆಗೆ ಮಾರಾಟವಾಯಿತೇ ವಿನಹ ಅದು ಅಮೇರಿಕಾಕ್ಕೋ ಅಥವಾ ಇನ್ನಾವುದೇ ರಾಷ್ಟ್ರಕ್ಕೋ ರಫ್ತಾಗಿದ್ದು ನಾ ಕಾಣೆ. ಮುಂದಿನ ದಿನಗಳಲ್ಲಿ ವೆನಿಲ್ಲಾ ಬೆಳೆ ಏನಾಯಿತೆಂಬುದನ್ನು ನಾನೇನು ಬಿಡಿಸಿಹೇಳಬೇಕಾದ್ದಿಲ್ಲ. ನಾನು ರಜೆಗೆ ಭಾರತಕ್ಕೆ ಬಂದಿದ್ದಾಗ ನನ್ನ ಕಾಫೀ ಬೆಳೆಗಾರ ಮಿತ್ರರೊಬ್ಬರಲ್ಲಿದ್ದ ವೆನಿಲ್ಲಾ ಬಳ್ಳಿಗಳನ್ನು ನೋಡಿ ಅವರನ್ನು ಪ್ರಶಂಸಿಸಿದಾಗ ಅವರು ತಮ್ಮಲ್ಲಿದ್ದ ಅಷ್ಟೂ ವೆನಿಲ್ಲಾ ಬಳ್ಳಿಗಳನ್ನು ಕೇವಲ ನನ್ನ ತೋಟಕ್ಕೆ ಸಾಗಿಸುವ ಸಾಗಣೆ ವೆಚ್ಚವನ್ನು ಕೊಟ್ಟು ಬೇಕಾದರೆ ಅವುಗಳನ್ನು ಹೇರಿಕೊಂಡು ಹೋಗಿ ನಿಮ್ಮ ತೋಟದಲ್ಲಿ ಹಾಕಿಕೊಳ್ಳಿರೆಂದು ನನಗೆ ಹೇಳಿದರು.

ಇನ್ನು ನಮ್ಮ ನಾಯಕರುಗಳೋ ರೈತರ ಹಿತದ ಅಧ್ಯಯನಕ್ಕಾಗಿ ವಿದೇಶ ಪ್ರವಾಸಗಳನ್ನು ಮಾಡುತ್ತ ಅಲ್ಲಿ ತಮಗೆ ತಿನ್ನಲು ಇಡ್ಲಿ-ವಡೆ, ಚಿತ್ರಾನ್ನ, ಮೊಸರನ್ನ ಸಿಕ್ಕಿತೆಂದೋ ಇಲ್ಲವೆ ಕನ್ನಡ ಮಾತನಾಡಲು ತುಂಬಾ ಕನ್ನಡಿಗರು ಸಿಕ್ಕಿದರೆಂದೋ, ಅಥವಾ ಅಲ್ಲಿನ ಹೆಂಗಸರು ಲಜ್ಜೆಗೆಟ್ಟವರೆಂದೋ ತಮ್ಮ ಅಧ್ಯಯನ ವರದಿಯನ್ನು ಪತ್ರಕರ್ತರಿಗೆ ನೀಡುವರು. ಪತ್ರಕರ್ತರು ಕೂಡ ಅಲ್ಲಿನ ಹೆಂಗಸರು ಲಜ್ಜೆಗೆಟ್ಟದ್ದು ಹೇಗೆ ತಿಳಿಯಿತೆಂದು ಆ ನಾಯಕರನ್ನು ಪ್ರಶ್ನಿಸದೇ ಆಲ್ಲಿನ ಹೆಂಗಸರು ಲಜ್ಜೆಗೆಟ್ಟ ಸಂಗತಿಯನ್ನೇ ಪ್ರಮುಖಾಂಶವಾಗಿ ರೋಚಕ ವರದಿಯನ್ನು ಬರೆಯುವರು. ಅದನ್ನು ಜನರೂ ಕೂಡ ’ಓಹ್, ನಮ್ಮ ಮಂತ್ರಿಗಳಿಗೆ ಅಲ್ಲಿ ಇಡ್ಲಿ, ವಡೆ ಸಿಕ್ಕಿತಂತೆ, ಅಲ್ಲಿ ಬಹಳ ಕನ್ನಡಿಗರಿದ್ದಾರಂತೆ, ಅಲ್ಲಿನ ಹೆಂಗಸರು ತುಂಬಾ ಸಲೀಸಂತೆ’ ಎಂದುಕೊಂಡು ಮನಸ್ಸಿನಲ್ಲಿಯೇ ಆ ಲಜ್ಜೆಗೆಟ್ಟ ಹೆಂಗಸರನ್ನು ಕಲ್ಪಿಸಿಕೊಂಡು ಬೆಚ್ಚಗಾಗುವರು.

ನಮ್ಮಲ್ಲೇ ಅಪಾರ ಬೇಡಿಕೆಯಿರುವ ನಮ್ಮ ಪಾರಂಪಾರಿಕ ಆಹಾರಬೆಳೆಗಳಿಗೆ ಸರಿಯಾಗಿ ಮಾರುಕಟ್ಟೆಯೊದಗಿಸಿ, ಬೆಲೆನಿಯಂತ್ರಣವನ್ನು ತಾರದೆ, ಕೊನೆಯಪಕ್ಷ ರಿಲೈಯನ್ಸ್ ಟಾಟಾ ಸಂಸ್ಥೆಗಳು ಸ್ಥಾಪಿಸುತ್ತಿರುವ ಸೂಪರ್ ಮಾರ್ಕೆಟ್ ಗಳು ರೈತರ ಉತ್ಪನ್ನಗಳಿಗೆ ತಾವಾಗಿಯೇ ಸೃಷ್ಟಿಸಬಹುದಾದ ಮಾರುಕಟ್ಟೆ, ಬೆಲೆನಿಯಂತ್ರಣಗಳ ಅರಿವಿಲ್ಲದೆ ಅವುಗಳನ್ನು ವಿರೋಧಿಸುತ್ತ ರೈತಾಪಿಗಳನ್ನು ದಿಕ್ಕೆಟ್ಟಿಸುತ್ತಿದ್ದಾರೆ.

ಈ ನಮ್ಮ ನಾಯಕರುಗಳು ವಿದೇಶಗಳಿಗೆ ಹೋದಾಗ ಯಾವುದೇ ಅಧ್ಯಯನ ಮಾಡದೆ ಕೇವಲ ಅಲ್ಲಿನ ಸೂಪರ್ ಮಾರ್ಕೆಟ್ ಗಳಲ್ಲಿ ಕಂಡುಬರುವ ಒಣಗಿಸಿದ ಟೊಮ್ಯಾಟೊ, ಒಣಗಿಸಿದ ಮಾವು, ಅನಾನಸ್ ಗಳನ್ನು ಕಂಡಾದರೂ ದಂಡಿಯಾಗಿ ನಮ್ಮಲ್ಲಿ ಪುಕ್ಕಟೆ ದೊರಕುವ ಬಿಸಿಲನ್ನು ಉಪಯೋಗಿಸಿ ಹೆಚ್ಚಿನ ಖರ್ಚಿಲ್ಲದೆ ನಮ್ಮ ರೈತರು ಬೆಳೆದ ಮೆಣಸಿನಕಾಯಿ, ಟೊಮ್ಯಾಟೊಗಳನ್ನು ರಸ್ತೆಗೆ ಸುರಿಯದೆ, ಒಣಗಿಸಿ ಶೇಖರಿಸಿಡುವ ವಿಧಾನವನ್ನು ಅಳವಡಿಸುವತ್ತ ಯೋಚಿಸದೆ, ನಮ್ಮ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿರುವ ಅಮೇರಿಕಾದವರಿಗೆ ವೆನಿಲ್ಲಾ ಬೇಕಂತೆ ಎಂದೋ, ಔಷಧೀಯ ಸಸ್ಯಗಳು ಬೇಕಂತೆ ಎಂತಲೋ, ಅಂತೆಕಂತೆಗಳನ್ನೋ ಬೆಳೆಯುತ್ತ ಹತ್ತಿ, ತೊಗರಿ, ಕಬ್ಬು, ಮತ್ತಿತರೆ ದೇಶೀ ಬೆಳೆಗಳನ್ನು ಬೆಳೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಆತ್ಮಹತ್ಯೆಯ ಪಟ್ಟಿಗೆ ವಿದೇಶೀ ಬೆಳೆಗಳನ್ನು ಸೇರ್ಪಡೆಗೊಳಿಸುತ್ತಿರುವುದು ನಮ್ಮ ದುರಂತವೇ ಸರಿ.

ವಿನೋದ:

ಒಮ್ಮೆ ಮೇಲೆ ತಿಳಿಸಿದ ಮಾದರೀ ರೈತರ ಮಾದರಿಯಲ್ಲೆ ನನ್ನ ಯುವ ರಾಜಕಾರಣಿ ಮಿತ್ರರೋರ್ವರು ಒಂದು ಅತಿ ವೈಯುಕ್ತಿಕವಾದಂತಹ ಈಮೈಲ್ ಕಳುಹಿಸಿದ್ದರು. ಅವರ ಜನನಾಂಗವು ಚಿಕ್ಕದಿರಬಹುದೆಂದೂ ಅದನ್ನು ಕನಿಷ್ಟ ಯಾವುದಕ್ಕೂ ಒಂದೆರಡಂಗುಲದಷ್ಟು ದೊಡ್ಡದು ಮಾಡಿಕೊಳ್ಳುವುದು ಒಳಿತೆಂದೂ, ಹಾಗೆ ಮಾಡುವ ಔಷಧಿಯನ್ನು ಮಾರುವ ಒಂದು ಅಂತರ್ಜಾಲತಾಣವೊಂದರ ಲಿಂಕ್ ಅನ್ನು ತಮ್ಮ ಈಮೈಲ್ ಜೊತೆ ಸೇರಿಸಿ, ಅದನ್ನು ಅಮೇರಿಕನ್ ಡಾಲರ್ ನಲ್ಲಿ ಕೊಳ್ಳಬೇಕಾಗಿರುವುದರಿಂದ ಅದನ್ನು ನಾನು ಕೊಂಡು ಅವರಿಗೆ ಕಳುಹಿಸಬೇಕೆಂದು ಕೇಳಿಕೊಂಡಿದ್ದರು.

ಆ ಅಂತರ್ಜಾಲತಾಣಕ್ಕೆ ನನ್ನ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಕೊಟ್ಟು ಮಂಗನಾಗಲಾರದೆ ನಾನು ನನ್ನ ಆ ಯುವ ರಾಜಕಾರಣಿ ಮಿತ್ರರಿಗೆ ಇದೊಂದು ಪರವಾನಗಿಯಿಲ್ಲದ ಔಷಧಿಯೆಂದೂ ಇದನ್ನು ಸೇವಿಸಿದ ಬಹುತೇಕ ಜನರಿಗೆ ಬೆಳೆಯಬೇಕಾದ್ದು ಬೆಳೆಯದೆ ಯಾವುದಾದರೊಂದು ಬೆರಳೋ, ಕೈಯೋ ಕಾಲೋ ಬೆಳೆದಿರುವ ನಿದರ್ಶನಗಳು ಬೇಕಾದಷ್ಟಿವೆಯೆಂದೂ, ಆದ ಕಾರಣ ಅನವಶ್ಯಕವಾಗಿ ಅವರ ಭಾವೀ ಅಂಗಊನತೆಗೆ ನಾನು ಕಾರಣನಾಗಲಾರೆನೆಂದು ಸಮಜಾಯಿಷಿ ಕೊಟ್ಟು ಪಾರಾದೆನು.

ರವಿ ಹಂಜ್.

ಏನಾಗಿದೆ ನಮ್ಮ ಮಠಾಧೀಶ್ವರರಿಗೆ?

ಮೊನ್ನೆ ವೀರಶೈವ ಪೀಠಾಧೀಶ್ವರರೊಬ್ಬರು, ಎಡೆಯೂರಪ್ಪನವರಿಗೆ ಅಧಿಕಾರ ಹಸ್ತಾಂತರವಾಗದಿದ್ದರೆ ವೀರಶೈವರು ಉಗ್ರ ಹೋರಾಟ ಮಾಡುವರೆಂದು ಹೇಳಿದ್ದನ್ನು, ಇತರೆ ಸ್ವಾಮೀಜಿಗಳು ಖಂಡಿಸಿದ್ದಾಗಿ ಓದಿ ನಮ್ಮ ಈ ಮಠಾಧೀಶರುಗಳಿಗೇನಾಗಿದೆ ಎಂದು ಯೋಚಿಸಿದೆ. ಆಲೋಚಿಸಿ ನೋಡಿ, ಪ್ರತಿಯೊಂದು ಧರ್ಮದವರು, ಕೋಮಿನವರು ತಮ್ಮ ತಮ್ಮ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಳಕಳಿಗಾಗೇ ಈ ಮಠಗಳನ್ನು ಕಟ್ಟಿ ಅಲ್ಲಿ ಮಠಾಧೀಶರುಗಳನ್ನು ಕೂರಿಸಿರುವುದು. ತಮ್ಮ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಈ ಸ್ವಾಮೀಜಿಗಳು ಹೋರಾಟ ಮಾಡಬೇಕಾದ್ದು ಅವರ ಆದ್ಯ ಕರ್ತವ್ಯ ಕೂಡ. ಈ ಹಿನ್ನೆಲೆಯಲ್ಲಿ ಆ ವೀರಶೈವ ಪೀಠಾಧೀಶರು ಸಮ್ಮಿಶ್ರ ಸರ್ಕಾರವು ತನ್ನ ಜಗಜ್ಜಾಹೀರಾಗಿರುವ ಒಪ್ಪಂದಕ್ಕೆ ತಕ್ಕಂತೆ ವಚನಬದ್ಧರಾಗಿ ಅಧಿಕಾರ ಹಸ್ತಾಂತರ ಮಾಡಿ ಪ್ರಾಮಾಣಿಕತೆಯನ್ನು ಮೆರೆಯಬೇಕೆಂದೂ ಇಲ್ಲದಿದ್ದರೆ ಜನರು ಅದರಲ್ಲೂ ವೀರಶೈವ ಜನಾಂಗವು ಉಗ್ರ ಹೋರಾಟ ಮಾಡುವುದೆಂದೂ ಪ್ರತಿಕ್ರಿಯಿಸಿ ತಮ್ಮ ಕೋಮಿನ ಧುರೀಣ ಎಡೆಯೂರಪ್ಪನವರನ್ನು ಬೆಂಬಲಿಸಿರುವುದರಲ್ಲಿ ಯಾವ ತಪ್ಪು ಕಾಣಿಸುತ್ತಿಲ್ಲ. ಒಂದು ಕೋಮಿನ ಪೀಠಾಧೀಶರಾಗಿ ಆ ಕೋಮಿನ ಧುರೀಣನನ್ನು ಬೆಂಬಲಿಸುವುದು ಮತ್ತು ಸಾತ್ವಿಕ ವ್ಯಕ್ತಿಯಾಗಿ ಪ್ರಾಮಾಣಿಕತೆಯನ್ನು ಪ್ರತಿಪಾದಿಸುವುದೆರಡೂ ಅವರ ಕರ್ತವ್ಯವೇ ಆಗಿದೆ.

ಆದರೆ ಹಲವಾರು ಮಠಾಧೀಶರುಗಳು ಇತ್ತೀಚೆಗೆ ಸಾಮಾಜಿಕ ಕಳಕಳಿಯ ಸೋಗು ಹಾಕಿ ರಾಜಕೀಯದಲ್ಲಿ ಕಾಣದ ಹಸ್ತವನ್ನಿಟ್ಟು ಪವಾಡಗಳನ್ನು ಮೆರೆಯುತ್ತಿರುವುದು ಇಂದು ಕಣ್ಣಿಗೆ ಕಾಣದ ವಿಷಯವೇನಲ್ಲ. ಇವರೆಲ್ಲ ತಮ್ಮ ಧಾರ್ಮಿಕ ಹೊಣೆಯನ್ನು ನಡುನೀರಲ್ಲಿ ಬಿಟ್ಟು ಸಂಪೂರ್ಣವಾಗಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದು ಸಂತೋಷದ ಸಂಗತಿಯೇ ಆದರೂ ಭಕ್ತರ ಅಭಿಲಾಷೆಗಳನ್ನು ಗಾಳಿಗೆ ತೂರಿ ತಮ್ಮ ತೆವಲಿಗಾಗಿ ಸೆಕ್ಯುಲರ್ ಸಾಹಿತಿಗಳನ್ನು ಮೀರಿಸುವಷ್ಟು ಮತ್ತು ಲಜ್ಜೆಗೆಟ್ಟ ರಾಜಕಾರಣಿಗಳನ್ನೂ ನಾಚಿಸುವಷ್ಟು ಜಾತ್ಯಾತೀತತೆಯನ್ನು, ಸಾಮಾಜಿಕ ಉದಾರತೆಯನ್ನು ಪ್ರದರ್ಶಿಸುವುದು ಪ್ರಶ್ನಾರ್ಹವಾಗಿದೆ. ಸರ್ವಸಂಗ ಪರಿತ್ಯಾಗಿಗಳಾದ ಇವರುಗಳಿಗೆ ಈ ಪರಿಯ ಪ್ರಚಾರಪ್ರಿಯತೆ ಏಕೋ?

ಚಿತ್ರದುರ್ಗದ ಒಬ್ಬ ಮಠಾಧೀಶರೋರ್ವರಂತೂ ವಾರ್ಷಿಕ ಕಾಲೆಂಡರ್ ಅನ್ನೇ ಸಿದ್ಧಪಡಿಸಿಕೊಂಡಿದ್ದಾರೆ. ನಾಗರಪಂಚಮಿಯಲ್ಲಿ ಕಲ್ಲಿನ ಹಾವಿಗೆ ಹಾಲೆರೆಯಬೇಡಿರೆಂದು ಬೀದಿಮಕ್ಕಳಿಗೆ ಹಾಲು ಕುಡಿಸಿ ಸುದ್ದಿ ಮಾಡುವುದು, ಯುಗಾದಿಗೆ ಕೊಳಚೆ ನಿವಾಸಿ ಮಕ್ಕಳಿಗೆ ಎಣ್ಣೆಮಜ್ಜನ ಮಾಡಿಸುವ ಸುದ್ದಿ, ಆಗಾಗ್ಗೆ ಪ್ರ್‍ಏಮಿಗಳನ್ನು ಒಂದುಗೂಡಿಸುವುದು, ವಿಧವಾವಿವಾಹಗಳನ್ನು ಮಾಡಿಸುವುದು ಅಷ್ಟೇ ಅಲ್ಲದೆ ಇನ್ಯಾವುದೇ ಸುದ್ದಿಯಾಗುವಂತಹ ಸಂಗತಿಯಿದ್ದರೆ ಅದನ್ನು ಶೋಧಿಸಿ ಸುದ್ದಿಯಾಗುವುದೇ ಇವರ ಹವ್ಯಾಸ.

ನಕ್ಸಲರೊ, ಉಗ್ರರೊ, ದೂರದ ಪಾಕಿಸ್ತಾನದ ಭೂಕಂಪದಲ್ಲಿ ಸತ್ತವರಿಗೆಲ್ಲ ಸಂತಾಪ ಸೂಚಿಸಿಯೋ ಅಥವಾ ತಮ್ಮ ಅಭಿಪ್ರ್‍ಆಯದ ಹೇಳಿಕೆಯನ್ನು ಬಿಡುಗಡೆ ಮಾಡಿಯೋ ಪ್ರತಿಕ್ರಿಯಿಸುತ್ತಿದ್ದ ಈ ಶರಣರಿಗೆ ಇತ್ತೀಚೆಗೆ ತಮ್ಮ ಶರಣ ಕುಲಸ್ಥ ಬಸವಣ್ಣನವರ ಕುಲಗೋತ್ರಗಳನ್ನು ಜಾಲಾಡಿದ್ದ ’ಅನುದೇವ ಹೊರಗಣವನು’ (ಇದರ ಸತ್ಯಾಸತ್ಯಗಳನ್ನು ಇನ್ನೊಮ್ಮೆ ಚರ್ಚಿಸೋಣ) ಕೃತಿಯ ಬಗ್ಗೆ ಚಕಾರವನ್ನೂ ಎತ್ತದೆ ತಮ್ಮ ಸ್ಥಾನದ ಆದ್ಯ ಕರ್ತವ್ಯವನ್ನೇ ಮರೆತುಬಿಟ್ಟಿದ್ದಾರೆ.

ಇನ್ನು ಪ್ರತಿದಿನವೂ ದಿನಪತ್ರಿಕೆಯ ಯಾವುದಾದರೊಂದು ಪುಟಗಳಲ್ಲಿ ಒಡಮೂಡುವ ಆದಿಚುಂಚನಗಿರಿ, ಸುತ್ತೂರು, ಮತ್ತು ಉಡುಪಿ ಶ್ರೀಗಳ ಬಗ್ಗೆಯಂತೂ ಹೇಳುವುದೇ ಬೇಡ.

ಇದ್ದುದರಲ್ಲಿ ಮೌಲ್ವಿಗಳು, ಪಾದ್ರಿಗಳು ತಮ್ಮ ಹೊಣೆಯರಿತು ತಮ್ಮ ತಮ್ಮ ಧರ್ಮದ ರಕ್ಷಣೆ ಮತ್ತು ಪ್ರಸಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ತಮ್ಮ ಧರ್ಮದ ಉಗ್ರರ ಬಗ್ಗೆಯಾಗಲೀ, ಮತಾಂತರಿಗಳ ಬಗ್ಗೆಯಾಗಲಿ ಯಾವುದಕ್ಕೂ ಪ್ರತಿಕ್ರಿಯಿಸದೆ ತಮ್ಮ ತಮ್ಮ ಕೈಂಕರ್ಯದಲ್ಲಿ ಕಿಂಕರ್ತವ್ಯಮೂಢರಾಗಿ ಹುದುಗಿಹೋಗಿದ್ದಾರೆ. ಇವರನ್ನು ನೋಡಿ ನಮ್ಮ ಹಿಂದೂ ಮಠಾಧೀಶ್ವರರು ’ಮನೆಗೆ ಮಾರಿ ಪರರಿಗೆ ಉಪಕಾರಿ’ ಯಂತಾಗದೆ ಕಲಿಯಬೇಕಾದ್ದು ಬೆಟ್ಟದಷ್ಟಿದೆ.

ಸೂಕ್ತಿ: ಮನೆ ಗೆದ್ದು ಮಾರು ಗೆಲ್ಲು.

ರವಿ ಹಂಜ್

ಅವಾರ್ಡುಗಳ ರಾಜಕೀಯ.

ಸುಮಾರು ಇಪ್ಪತ್ತೈದು ವರ್ಷಗಳಿಗೂ ಮುಂಚೆ ನಾನು ದಾವಣಗೆರೆಯ ಮಹರಾಜಪೇಟೆ ಸೊಸೈಟಿಯಲ್ಲಿ ಸಕ್ಕರೆ, ಗೋಧಿಗಳನ್ನು ಪಡೆಯಲು ಗಂಟೆಗಟ್ಟಲೆ ಕ್ಯೂ ನಿಂತು ಐದು ಕಿಲೊ ಸಕ್ಕರೆ ಬದಲಿಗೆ ಎರಡೂವರೆ ಕಿಲೊ ಅಥವ ಅಲ್ಲಿರುತ್ತಿದ್ದ ಸದಾ ಮುಖ ಗಂಟಿಕ್ಕಿಕೊಂಡಿರುತ್ತಿದ್ದ, ಸೊಸೈಟಿಗೆ ದಿನಸಿ ಕೊಳ್ಳಲು ಬರುತ್ತಿದ್ದವರನ್ನು ಭಿಕ್ಷುಕರಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬರು ದಯಪಾಲಿಸಿದಷ್ಟು ತೆಗೆದುಕೊಂಡುಬರುತ್ತಿದ್ದೆನು. ಆ ವ್ಯಕ್ತಿಯನ್ನು ಸರದಿಯಲ್ಲಿ ನಿಂತಿರುತ್ತಿದ್ದ ಜನರು ಮನಸಾರೆ ಶಪಿಸುತ್ತ ಸಕ್ಕರೆ, ಗೋಧಿಗಳನ್ನು ಯಾರಿಗೋ ಮಾರಿಕೊಂಡಿದ್ದಾರೆಂದು ಮಾತನಾಡಿಕೊಳ್ಳುತ್ತಿದ್ದರು. ಇದು ನಾನು ಆ ಸೊಸೈಟಿಗೆ ಹೋದಾಗಲೆಲ್ಲ ನಿರಂತರ ನಡೆಯುತ್ತಿದ್ದ ಪ್ರಕ್ರಿಯೆಯಾಗಿತ್ತು. ಬಾಲ್ಯದಲ್ಲಿ ನಾನು ನನ್ನ ಮನೆಯವರನ್ನು ಅಲ್ಲಿಗೆ ಕಳಿಸಿದ್ದಕ್ಕಾಗಿ ಶಪಿಸುತ್ತಿದೆನು.

ನಾನು ದಾವಣಗೆರೆಯನ್ನು ಖಾಲಿ ಮಾಡಿ ಬೆಂಗಳೂರು, ಬಾಂಬೆ ಮತ್ತು ಶಿಕಾಗೊ ನಗರಗಳಲ್ಲಿ ಇಪ್ಪತ್ತು ವರ್ಷಗಳೇ ಕಳೆದಿದ್ದರೂ ಆ ಸೊಸೈಟಿಯ ಅನುಭವವನ್ನೂ ಮತ್ತು ಗಂಟಿಕ್ಕಿಕೊಂಡಿರುತ್ತಿದ್ದ ಆ ಮುಖವನ್ನು ಮರೆಯಲು ಸಾಧ್ಯವಾಗಿರಲಿಲ್ಲ.

ಇತ್ತೀಚೆಗೆ ದಾವಣಗೆರೆಯ ಜನತಾವಾಣಿ ಅಂತರ್ಜಾಲ ಆವೃತ್ತಿಯನ್ನು ನೋಡುತ್ತಿದ್ದಾಗ ಏನಾಶ್ಚರ್ಯ! ಆ ವ್ಯಕ್ತಿಯ ನಗುತ್ತಿರುವ ಭಾವಚಿತ್ರ ಮತ್ತು ಆ ಮಹಾಶಯರಿಗೆ ’ಸಹಕಾರಿ ಧುರೀಣ’ ಎಂಬ ಬಿರುದು ಗೌರವವು ದೊರೆತಿರುವುದಾಗಿ ಸುದ್ದಿ ಪ್ರಕಟವಾಗಿತ್ತು.

ಬಹುಶಃ ಅಂದು ಸರದಿ ನಿಂತು ಇವರನ್ನು ಹಾರೈಸುತ್ತಿದ್ದ ಜನರ ಹಾರೈಕೆಯು ಫಲ ನೀಡಿ ಇಂದು ಆ ಮಹಾಶಯರು ನಗುನಗುತ್ತಿರುವರೆಂದೆನಿಸಿ ಮೇರಾ ಭಾರತ್ ಮಹಾನ್ ಎಂದುಕೊಂಡು ೬೦ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ನನಗೆ ನಾನೆ ಹೇಳಿಕೊಂಡೆನು.

ಕೊಟ್ಟದ್ದು ಸ್ವಾತಂತ್ರ್ಯ, ಗಳಿಸಿದ್ದು ಭ್ರಷ್ಟಾಚಾರ.

ಇತ್ತೀಚೆಗೆ ದಾವಣಗೆರೆಯ ಒಂದು ಸೊಸೈಟಿಯ ಒಬ್ಬ ಸಾಮಾನ್ಯ ಮೇಲ್ವಿಚಾರಕ ’ಸಹಕಾರಿ ಶ್ರೇಷ್ಠ’ ನಾಗಿದ್ದರ ಬಗ್ಗೆ ಬರೆದಿದ್ದೆ. ಸ್ವತಂತ್ರ್ಯ ಭಾರತದಲ್ಲಿ ಇದೇನು ಬೆಚ್ಚಿಬೀಳಿಸುವ ಮಹತ್ವದ ಸಂಗತಿಯೇನಲ್ಲ. ಸ್ವಾತಂತ್ರ್ಯ ಭಾರತದ ಅರವತ್ತು ವರ್ಷಗಳಲ್ಲಿ ಘಟಿಸಿದ ಅನೇಕ ಪವಾಡ ಸದೃಶ ಅಸಂಖ್ಯಾತ ಘಟನೆಗಳಲ್ಲಿ ಭಾರತದ ದಾವಣಗೆರೆಯೆಂಬ ಅಸಂಖ್ಯಾತ ನಗರಗಳಲ್ಲಿ ಸಂಭವಿಸಬಹುದಾದ, ಸಂಭವಿಸಿದ ಸಂಗತಿಗಳಲ್ಲಿ ಅತಿ ಸಾಮಾನ್ಯ ಸಂಗತಿ ಇದಾಗಿತ್ತು.

ಭಾರತದ ಒಬ್ಬ ಬಡ ಮೇಷ್ಟ್ರೊಬ್ಬರ ಮಗನೊಬ್ಬ ಭವ್ಯ ಭಾರತದ ಪ್ರಧಾನಿಯಾಗಿ ಮೆರೆದಿದಿರುವ ಸಾಹಸದ ಇದಿರು, ಯಾಕೋ ಆವರ ದಿನದ ಇಪ್ಪತ್ನಾಲ್ಕು ಗಂಟೆಯೂ ರಾಜಕೀಯವನ್ನೆ ಮಾಡಿ ಮತ್ತಿನ್ಯಾವ ವೃತ್ತಿಯನ್ನು ಮಾಡದೆ ಕೋಟ್ಯಾನುಕೋಟಿ ರೂಪಾಯಿಗಳ ಮೊತ್ತದ ಐಶ್ವರ್ಯ ಶೇಖರಣೆಯ ಸಾಹಸದ ಮುಂದೆ ಅವರ ಭಾರತ ಪ್ರಧಾನಿ ಹುದ್ದೆಯ ಸಂಗತಿ ಅತೀ ಗೌಣವೆನಿಸುತ್ತದೆ. ಅಷ್ಟೆ ಅಲ್ಲದೆ ಈ ಮಾಜಿ ಪ್ರಧಾನಿಯ ಜನಸೇವೆಯ ಕೂಗಿಗೆ ಓಗೊಟ್ಟು ಪೊಲೀಸ್ ಕನಿಷ್ಟಬಿಲ್ಲೆಯಾಗಿದ್ದ, ಉದ್ಯೋಗವಲ್ಲದೆ ಇನ್ಯಾವ ಪೂರ್ವಾಜಿತ ಆಸ್ತಿಯೂ ಇಲ್ಲದ ವ್ಯಕ್ತಿಯೋರ್ವರು ಜನಸೇವೆಯ ಕೈಂಕರ್ಯಕ್ಕೆ ಧುಮುಕಿ ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ ತೊಂಬತ್ತು ಕೋಟಿಗಳಿಗೂ ಮೀರಿ ಆಸ್ತಿಯನ್ನು ಗಳಿಸಿರುವುದರ ಮುಂದೆ ದಾವಣಗೆರೆಯಂತಹ ಸಾಮಾನ್ಯ ನಗರದ ಅತೀ ಸಾಮಾನ್ಯ ನ್ಯಾಯಬೆಲೆಯಂಗಡಿಯ ಗುಮಾಸ್ತನ ಅವಾರ್ಡು ಅತಿ ನಿಕೃಷ್ಟವೆನಿಸುತ್ತದೆ. ಅದಾವ ರಾಜಕಾರಣಿಯ ಕಳ್ಳ ವ್ಯವಹಾರಕ್ಕೆ ಸಕ್ಕರೆ, ಗೋಧಿಗಳನ್ನು ಪೂರೈಸಿದ್ದನೋ ಈ ಮಹಾಶಯ ಅದಕ್ಕೆ ಪ್ರತಿಫಲವಾಗಿ ಈ ಅವಾರ್ಡನ್ನು ಕೊಡಮಾಡಿಸಿರಬಹುದು. ಈ ಸುಧೀರ್ಘ ಅರವತ್ತು ವರ್ಷಗಳಲ್ಲಿ ಭಾರತದಲ್ಲಿ ಬೆಳೆದಿರುವ ಭ್ರಷ್ಟಾಚಾರದ ಬೇರುಗಳು ಎಂತಹ ಕೆಳಮಟ್ಟದಲ್ಲಿಯು ಹಬ್ಬಿರುವುದಕ್ಕೆ ಇದೇ ಸಾಕ್ಷಿ. ಇದನ್ನು ಯಾರು ಹೇಗೆ ಬೆಳೆಸಿದರೆಂಬುದು ಸಾರ್ವಜನಿಕ ಸತ್ಯವೇ ಆಗಿದೆ.

ಸಂತೋಷದ ಸಾಮರಸ್ಯದ ಸಂಗತಿಯೆಂದರೆ ಭ್ರಷ್ಟಾಚಾರವು ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಜವಾನನಿಂದ ದಿವಾನನವರೆಗೂ ಯಾವುದೇ ಭೇದಭಾವವಿಲ್ಲದೆ ಭಾರತದ ಸಾಮರಸ್ಯವನ್ನು ಒಂದುಗೂಡಿಸಿದೆ. ಉದಾಹರಣೆಗೆ ಈ ಮುಂಚೆ ತರ್ಕಿಸಿದ ಜಾತ್ಯಾತೀತ ಪೊಲೀಸ್ ಕನಿಷ್ಟಬಿಲ್ಲೆಯಲ್ಲದೆ ಭಾರತದ ಮೊದಲ ಪ್ರಧಾನಿಯ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಪಟ್ಟದ ಪ್ರಬಲ ಆಕಾಂಕ್ಷಿಯಾದ, ಒಂದಾನೊಂದು ಕಾಲದಲ್ಲಿ (ಛೇ, ಛೇ, ಒಂದಾನೊಂದು ಕಾಲವೆನ್ನಲು ಇದೇನು ಶತಮಾನದಷ್ಟು ಹಳೆಯ ಸಂಗತಿಯೇನಲ್ಲ) ರಾಜಕೀಯ ನಾಯಕರುಗಳ ಸಭೆಗೆ ಕರ್ನಾಟಕದ ರಾಜಧಾನಿಯಲ್ಲಿ ಜನರನ್ನು ಸೇರಿಸುತ್ತಿದ್ದ ಪುಂಡನೋರ್ವನೂ ಅಷ್ಟೇ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸಮಾನಮನಸ್ಕನಾಗಿ ಬೆಳೆದಿದ್ದಾನೆ.

ಇದೆಲ್ಲವನ್ನೂ ಪ್ರಶ್ನಿಸದೆ ಮತದಾರನೂ ತನ್ನ ಸೀರೆ, ಪಂಚೆ, ಸಾರಾಯಿ (ಅಲ್ಲಲ್ಲ, ಇನ್ನು ಮೇಲೆ ಬರೀ ವರ್ಣಮಯ ಸೋಮರಸ) ಇತ್ಯಾದಿ ಅನುಕೂಲಗಳಿಗನುಗುಣವಾಗಿ ಜಾತ್ಯಾತೀತ ಮತ್ತು ಪಕ್ಷಾತೀತನಾಗಿ ಸಮನ್ವಯವನ್ನು ಮೆರೆಯುತ್ತ ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆದಿದ್ದಾನೆ.

ಒಟ್ಟಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷಗಳಾದವೋ ಇಲ್ಲವೋ ಭ್ರಷ್ಟಾಚಾರವಂತೂ ಷಷ್ಟ್ಯಾಭ್ದಿಯನ್ನು ಭವ್ಯವಾಗಿ ನಿತ್ಯವೂ ಆಚರಿಸಿಕೊಳ್ಳುತ್ತಿದೆ.

ವಿನೋದ:

ಇತ್ತೀಚೆಗೆ ಸಚಿವ ರೇವಣ್ಣನವರು ತಮ್ಮ ಹಾಸನದಲ್ಲಿ ಸರ್ಕಾರಿ ಅಧಿಕಾರಿಗಳ ಸಭೆಯನ್ನು ನಡೆಸುತ್ತಿದ್ದಾಗ ಅಲ್ಲಿನ ಸಬ್ ರಿಜಿಸ್ಟ್ರಾರ್ ಓರ್ವರು ಯಾವುದೋ ವಿಷಯಕ್ಕೆ ನಮ್ಮ ಹಾಸನ ಜಿಲ್ಲೆಯಲ್ಲಿ ವರ್ಷದಲ್ಲಿ ಒಂದು ಲಕ್ಷಕ್ಕೂ ಮೀರಿದ ಜನರು ಇಮಾನ (ಚಟ್ಟ) ಯಾನ ಕೈಗೊಳ್ಳುತ್ತಾರೆಂದು ಹಾಸ್ಯವಾಗಿ ಹೇಳಿದರು. ಅದನ್ನು ಕೇಳಿದ ಸಚಿವರು ’ಅರೆ, ಈ ವಿಷಯವನ್ನು ಇಷ್ಟು ದಿನ ನನ್ನ ಗಮನಕ್ಕೆ ಏಕೆ ತರಲಿಲ್ಲ’ ವೆಂದು ಕೂಡಲೆ ತಮ್ಮ ಮುಖ್ಯಮಂತ್ರಿ ಸಹೋದರರ ಕೈಯಲ್ಲಿ ಹೊಚ್ಚ ಹೊಸ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿಬಿಟ್ಟರು. ಪಾಪ, ಈಗ ಬಡ ಬೋರೇಗೌಡರು ತಮ್ಮ ಅಂತಿಮಯಾತ್ರೆಯ ಇಮಾನಯಾನ ಮಾಡುವ ಮುನ್ನ ತಮ್ಮ ಜಮೀನುಗಳನ್ನು ಮಾರಿಕೊಂಡು ಒಮ್ಮೆ ರೇವಣ್ಣನ ವಿಮಾನನಿಲ್ದಾಣವನ್ನು ಉಪಯೋಗಿಸಲು ವಿಮಾನಯಾನವನ್ನು ಮಾಡಬೇಕಾದ ಪರಿಸ್ಥಿತಿ ಬಂದೊದಗಲಿದೆ.
ರವಿ ಹಂಜ್