ದಿಕ್ಕೆಟ್ಟ ರೈತರೂ, ಔಷಧೀಯ ಬೆಳೆಗಳೂ.

ಮೊನ್ನೆ ಒಬ್ಬ ಮಾದರೀ(?) ರೈತರೊಬ್ಬರು ತಾವು ಕೌಡಿಸಿಫಾರ್ಮ್ ಎಂಬ ಔಷಧೀಯ ಗಡ್ಡೆಗಳನ್ನು ಬೆಳೆದಿರುವುದಾಗಿಯೂ ಅವಕ್ಕೆ ಅಮೇರಿಕಾದಲ್ಲಿ ಮಾರುಕಟ್ಟೆಯನ್ನೊದಗಿಸಿಕೊಡಬೇಕೆಂದು ಈಮೈಲ್ ಕಳುಹಿಸಿದ್ದರು. ಅಮೇರಿಕಾದ (ಎಫ್.ಡಿ.ಎ) ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆಯ ಬಗ್ಗೆ ಅರಿವಿಲ್ಲದೆ, ಅಮೇರಿಕನ್ನರೆಲ್ಲ ಮಲಗಲು ನಿದ್ರೆಮಾತ್ರೆಯನ್ನು, ಎದ್ದಾಗ ಮಲವಿಸರ್ಜನೆಗೆ ಇನ್ನೊಂದು ಮಾತ್ರೆಯನ್ನು, ನಂತರ ವಿಟಮಿನ್ ಗಳನ್ನೂ ಕಾಮಕ್ಕೆ ವೈಯಾಗ್ರವನ್ನು ನಿತ್ಯವೂ ಸೇವಿಸುವರೆಂಬ ಮಾಧ್ಯಮದವರು ಕಲ್ಪಿಸಿರುವ ಕಲ್ಪನೆಯಿರುವ ಇವರಿಗೆ ಅವನ್ನೆಲ್ಲ ತಪ್ಪೆಂದೂ, ಅದೆಲ್ಲ ಮಾಧ್ಯಮದವರು ಸೃಷ್ಟಿಸಿರುವ ಕಪೋಲಕಲ್ಪಿತ ಸಂಗತಿಗಳೆಂದು ಮನವರಿಕೆ ಮಾಡಿಕೊಡುವುದು ಹೇಗೆಂದು ನನಗೆ ತೋಚದಾಯಿತು.

ಸರಿ, ಇದಾವುದು ಆ ಮಾಯಾಗಡ್ಡೆಯೆಂದು ಹುಡುಕಿದಾಗ ಅದೊಂದು ದಕ್ಷಿಣ ಅಮೇರಿಕಾದಲ್ಲಿ ಯಥೇಚ್ಚವಾಗಿ ಬೆಳೆಯುವ ’ಮೊಸಳೆಗಡ್ಡೆ’ ಯೆಂದು ಕರೆಯಲ್ಪಡುವ ಸಾಮಾನ್ಯ ಕಾಡುಗಡ್ಡೆಯಾಗಿತ್ತು. ಇದನ್ನು ದಕ್ಷಿಣ ಅಮೇರಿಕೆಯಲ್ಲಿ ತರಕಾರಿಯಾಗಿಯೂ, ಭಾರತದಲ್ಲಿ ’ವಿಧಾರಿಕಾಂಡ’ವೆಂದು ಆಯುರ್ವೇದದಲ್ಲಿ ಉಪಯೋಗಿಸುವ ಗಡ್ಡೆಯೂ ಆಗಿತ್ತು.

ಎಷ್ಟೊಂದು ಸುಲಭವಾಗಿ ನಮ್ಮ ರೈತರು ಈ ಔಷಧೀಯ ಸಸ್ಯಗಳನ್ನೊ, ಗಡ್ಡೆಗಳನ್ನೊ, ಬೀಜಗಳನ್ನೋ ಕೇವಲ ಗಾಳಿಸುದ್ದಿಗಳನ್ನು ನಂಬಿ ಲಕ್ಷಾಂತರ ಸುರಿದು, ಬೆಳೆದು, ಕನಸಿನರಮನೆಯನ್ನು ಕಟ್ಟಿ, ಕಡೆಗೆ ಮಾರುಕಟ್ಟೆಯಿಲ್ಲದೆ ಕೈಹೊತ್ತು ಕುಳಿತುಕೊಳ್ಳುವಂತಹ ಸ್ಥಿತಿಯನ್ನು ತಂದುಕೊಳ್ಳುತ್ತಿರುವರು.

ಕೆಲವು ವರ್ಷಗಳ ಹಿಂದಿದ್ದ ವೆನಿಲ್ಲಾ ಬೆಳೆಯ ಭರಾಟೆಯನ್ನು ನೆನಪಿಸಿಕೊಳ್ಳಿ. ಇದನ್ನು ಬೆಳೆದ ರೈತರು ವೆನಿಲ್ಲಾ ಹುರುಳಿಯನ್ನು ಕಾಯಲು ಬಂದೂಕುಧಾರಿಗಳನ್ನು ನೇಮಿಸಿಕೊಂಡಿದ್ದರೆಂದೂ, ಅಂದು ಆ ಎಲ್ಲಾ ರೈತರು ಬೆಳೆದ ವೆನಿಲ್ಲಾ ಇತರೆ ರೈತರುಗಳಿಗೆ ಬೀಜವಾಗಿ ಮಾರಲು ಕೂಡಾ ಸಾಕಾಗಲಾರದೆಂದೂ, ಆ ಬೇಡಿಕೆಯನ್ನು ಸರಿತೂಗಿಸಲು ಗೃಹಿಣಿಯರೂ ತಮ್ಮ ಕೈತೋಟದಲ್ಲಿಯೂ ವೆನಿಲ್ಲಾ ಬೆಳೆಯುವಷ್ಟು ಇದು ಪ್ರಚಾರ ಪಡೆದಿತ್ತು.

ಬಹುತೇಕ ಬೀಜವಾಗಿ ನಮ್ಮ ರೈತಬಾಂಧವರಿಗೇ ವೆನಿಲ್ಲಾ ಬಂಗಾರದ ಬೆಲೆಗೆ ಮಾರಾಟವಾಯಿತೇ ವಿನಹ ಅದು ಅಮೇರಿಕಾಕ್ಕೋ ಅಥವಾ ಇನ್ನಾವುದೇ ರಾಷ್ಟ್ರಕ್ಕೋ ರಫ್ತಾಗಿದ್ದು ನಾ ಕಾಣೆ. ಮುಂದಿನ ದಿನಗಳಲ್ಲಿ ವೆನಿಲ್ಲಾ ಬೆಳೆ ಏನಾಯಿತೆಂಬುದನ್ನು ನಾನೇನು ಬಿಡಿಸಿಹೇಳಬೇಕಾದ್ದಿಲ್ಲ. ನಾನು ರಜೆಗೆ ಭಾರತಕ್ಕೆ ಬಂದಿದ್ದಾಗ ನನ್ನ ಕಾಫೀ ಬೆಳೆಗಾರ ಮಿತ್ರರೊಬ್ಬರಲ್ಲಿದ್ದ ವೆನಿಲ್ಲಾ ಬಳ್ಳಿಗಳನ್ನು ನೋಡಿ ಅವರನ್ನು ಪ್ರಶಂಸಿಸಿದಾಗ ಅವರು ತಮ್ಮಲ್ಲಿದ್ದ ಅಷ್ಟೂ ವೆನಿಲ್ಲಾ ಬಳ್ಳಿಗಳನ್ನು ಕೇವಲ ನನ್ನ ತೋಟಕ್ಕೆ ಸಾಗಿಸುವ ಸಾಗಣೆ ವೆಚ್ಚವನ್ನು ಕೊಟ್ಟು ಬೇಕಾದರೆ ಅವುಗಳನ್ನು ಹೇರಿಕೊಂಡು ಹೋಗಿ ನಿಮ್ಮ ತೋಟದಲ್ಲಿ ಹಾಕಿಕೊಳ್ಳಿರೆಂದು ನನಗೆ ಹೇಳಿದರು.

ಇನ್ನು ನಮ್ಮ ನಾಯಕರುಗಳೋ ರೈತರ ಹಿತದ ಅಧ್ಯಯನಕ್ಕಾಗಿ ವಿದೇಶ ಪ್ರವಾಸಗಳನ್ನು ಮಾಡುತ್ತ ಅಲ್ಲಿ ತಮಗೆ ತಿನ್ನಲು ಇಡ್ಲಿ-ವಡೆ, ಚಿತ್ರಾನ್ನ, ಮೊಸರನ್ನ ಸಿಕ್ಕಿತೆಂದೋ ಇಲ್ಲವೆ ಕನ್ನಡ ಮಾತನಾಡಲು ತುಂಬಾ ಕನ್ನಡಿಗರು ಸಿಕ್ಕಿದರೆಂದೋ, ಅಥವಾ ಅಲ್ಲಿನ ಹೆಂಗಸರು ಲಜ್ಜೆಗೆಟ್ಟವರೆಂದೋ ತಮ್ಮ ಅಧ್ಯಯನ ವರದಿಯನ್ನು ಪತ್ರಕರ್ತರಿಗೆ ನೀಡುವರು. ಪತ್ರಕರ್ತರು ಕೂಡ ಅಲ್ಲಿನ ಹೆಂಗಸರು ಲಜ್ಜೆಗೆಟ್ಟದ್ದು ಹೇಗೆ ತಿಳಿಯಿತೆಂದು ಆ ನಾಯಕರನ್ನು ಪ್ರಶ್ನಿಸದೇ ಆಲ್ಲಿನ ಹೆಂಗಸರು ಲಜ್ಜೆಗೆಟ್ಟ ಸಂಗತಿಯನ್ನೇ ಪ್ರಮುಖಾಂಶವಾಗಿ ರೋಚಕ ವರದಿಯನ್ನು ಬರೆಯುವರು. ಅದನ್ನು ಜನರೂ ಕೂಡ ’ಓಹ್, ನಮ್ಮ ಮಂತ್ರಿಗಳಿಗೆ ಅಲ್ಲಿ ಇಡ್ಲಿ, ವಡೆ ಸಿಕ್ಕಿತಂತೆ, ಅಲ್ಲಿ ಬಹಳ ಕನ್ನಡಿಗರಿದ್ದಾರಂತೆ, ಅಲ್ಲಿನ ಹೆಂಗಸರು ತುಂಬಾ ಸಲೀಸಂತೆ’ ಎಂದುಕೊಂಡು ಮನಸ್ಸಿನಲ್ಲಿಯೇ ಆ ಲಜ್ಜೆಗೆಟ್ಟ ಹೆಂಗಸರನ್ನು ಕಲ್ಪಿಸಿಕೊಂಡು ಬೆಚ್ಚಗಾಗುವರು.

ನಮ್ಮಲ್ಲೇ ಅಪಾರ ಬೇಡಿಕೆಯಿರುವ ನಮ್ಮ ಪಾರಂಪಾರಿಕ ಆಹಾರಬೆಳೆಗಳಿಗೆ ಸರಿಯಾಗಿ ಮಾರುಕಟ್ಟೆಯೊದಗಿಸಿ, ಬೆಲೆನಿಯಂತ್ರಣವನ್ನು ತಾರದೆ, ಕೊನೆಯಪಕ್ಷ ರಿಲೈಯನ್ಸ್ ಟಾಟಾ ಸಂಸ್ಥೆಗಳು ಸ್ಥಾಪಿಸುತ್ತಿರುವ ಸೂಪರ್ ಮಾರ್ಕೆಟ್ ಗಳು ರೈತರ ಉತ್ಪನ್ನಗಳಿಗೆ ತಾವಾಗಿಯೇ ಸೃಷ್ಟಿಸಬಹುದಾದ ಮಾರುಕಟ್ಟೆ, ಬೆಲೆನಿಯಂತ್ರಣಗಳ ಅರಿವಿಲ್ಲದೆ ಅವುಗಳನ್ನು ವಿರೋಧಿಸುತ್ತ ರೈತಾಪಿಗಳನ್ನು ದಿಕ್ಕೆಟ್ಟಿಸುತ್ತಿದ್ದಾರೆ.

ಈ ನಮ್ಮ ನಾಯಕರುಗಳು ವಿದೇಶಗಳಿಗೆ ಹೋದಾಗ ಯಾವುದೇ ಅಧ್ಯಯನ ಮಾಡದೆ ಕೇವಲ ಅಲ್ಲಿನ ಸೂಪರ್ ಮಾರ್ಕೆಟ್ ಗಳಲ್ಲಿ ಕಂಡುಬರುವ ಒಣಗಿಸಿದ ಟೊಮ್ಯಾಟೊ, ಒಣಗಿಸಿದ ಮಾವು, ಅನಾನಸ್ ಗಳನ್ನು ಕಂಡಾದರೂ ದಂಡಿಯಾಗಿ ನಮ್ಮಲ್ಲಿ ಪುಕ್ಕಟೆ ದೊರಕುವ ಬಿಸಿಲನ್ನು ಉಪಯೋಗಿಸಿ ಹೆಚ್ಚಿನ ಖರ್ಚಿಲ್ಲದೆ ನಮ್ಮ ರೈತರು ಬೆಳೆದ ಮೆಣಸಿನಕಾಯಿ, ಟೊಮ್ಯಾಟೊಗಳನ್ನು ರಸ್ತೆಗೆ ಸುರಿಯದೆ, ಒಣಗಿಸಿ ಶೇಖರಿಸಿಡುವ ವಿಧಾನವನ್ನು ಅಳವಡಿಸುವತ್ತ ಯೋಚಿಸದೆ, ನಮ್ಮ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿರುವ ಅಮೇರಿಕಾದವರಿಗೆ ವೆನಿಲ್ಲಾ ಬೇಕಂತೆ ಎಂದೋ, ಔಷಧೀಯ ಸಸ್ಯಗಳು ಬೇಕಂತೆ ಎಂತಲೋ, ಅಂತೆಕಂತೆಗಳನ್ನೋ ಬೆಳೆಯುತ್ತ ಹತ್ತಿ, ತೊಗರಿ, ಕಬ್ಬು, ಮತ್ತಿತರೆ ದೇಶೀ ಬೆಳೆಗಳನ್ನು ಬೆಳೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಆತ್ಮಹತ್ಯೆಯ ಪಟ್ಟಿಗೆ ವಿದೇಶೀ ಬೆಳೆಗಳನ್ನು ಸೇರ್ಪಡೆಗೊಳಿಸುತ್ತಿರುವುದು ನಮ್ಮ ದುರಂತವೇ ಸರಿ.

ವಿನೋದ:

ಒಮ್ಮೆ ಮೇಲೆ ತಿಳಿಸಿದ ಮಾದರೀ ರೈತರ ಮಾದರಿಯಲ್ಲೆ ನನ್ನ ಯುವ ರಾಜಕಾರಣಿ ಮಿತ್ರರೋರ್ವರು ಒಂದು ಅತಿ ವೈಯುಕ್ತಿಕವಾದಂತಹ ಈಮೈಲ್ ಕಳುಹಿಸಿದ್ದರು. ಅವರ ಜನನಾಂಗವು ಚಿಕ್ಕದಿರಬಹುದೆಂದೂ ಅದನ್ನು ಕನಿಷ್ಟ ಯಾವುದಕ್ಕೂ ಒಂದೆರಡಂಗುಲದಷ್ಟು ದೊಡ್ಡದು ಮಾಡಿಕೊಳ್ಳುವುದು ಒಳಿತೆಂದೂ, ಹಾಗೆ ಮಾಡುವ ಔಷಧಿಯನ್ನು ಮಾರುವ ಒಂದು ಅಂತರ್ಜಾಲತಾಣವೊಂದರ ಲಿಂಕ್ ಅನ್ನು ತಮ್ಮ ಈಮೈಲ್ ಜೊತೆ ಸೇರಿಸಿ, ಅದನ್ನು ಅಮೇರಿಕನ್ ಡಾಲರ್ ನಲ್ಲಿ ಕೊಳ್ಳಬೇಕಾಗಿರುವುದರಿಂದ ಅದನ್ನು ನಾನು ಕೊಂಡು ಅವರಿಗೆ ಕಳುಹಿಸಬೇಕೆಂದು ಕೇಳಿಕೊಂಡಿದ್ದರು.

ಆ ಅಂತರ್ಜಾಲತಾಣಕ್ಕೆ ನನ್ನ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಕೊಟ್ಟು ಮಂಗನಾಗಲಾರದೆ ನಾನು ನನ್ನ ಆ ಯುವ ರಾಜಕಾರಣಿ ಮಿತ್ರರಿಗೆ ಇದೊಂದು ಪರವಾನಗಿಯಿಲ್ಲದ ಔಷಧಿಯೆಂದೂ ಇದನ್ನು ಸೇವಿಸಿದ ಬಹುತೇಕ ಜನರಿಗೆ ಬೆಳೆಯಬೇಕಾದ್ದು ಬೆಳೆಯದೆ ಯಾವುದಾದರೊಂದು ಬೆರಳೋ, ಕೈಯೋ ಕಾಲೋ ಬೆಳೆದಿರುವ ನಿದರ್ಶನಗಳು ಬೇಕಾದಷ್ಟಿವೆಯೆಂದೂ, ಆದ ಕಾರಣ ಅನವಶ್ಯಕವಾಗಿ ಅವರ ಭಾವೀ ಅಂಗಊನತೆಗೆ ನಾನು ಕಾರಣನಾಗಲಾರೆನೆಂದು ಸಮಜಾಯಿಷಿ ಕೊಟ್ಟು ಪಾರಾದೆನು.

ರವಿ ಹಂಜ್.

No comments: