ಮತ್ತೊಂದು ರಾಜ್ಯೋತ್ಸವ

ಮತ್ತೊಂದು ರಾಜ್ಯೋತ್ಸವ ಬರುತ್ತಿದೆ. ಬಹುಶಃ ಅಣ್ಣಮ್ಮ ದೇವಿ ಕನ್ನಡ ಸಂಘದವರು ಈ ಸಾರಿ ಕೂಡ ಚಂದಾ ಎತ್ತಿ ಆರ್ಕೆಸ್ಟ್ರಾ ಹೂಡಿಸಿ ’ಮಾರಿ ಕಣ್ಣು ಹೋರಿ ಮ್ಯಾಗೆ, ನನ್ನ ಕಣ್ಣು ನಿನ್ನ ಮ್ಯಾಗೆ’ ಎಂದು ತಮ್ಮ ತಮ್ಮ ಕೇರಿಯ ಹುಡುಗಿಯರಿಗೆ ಸಂದೇಶ ಕಳುಹಿಸಿ ಕುಣಿದು ಕುಪ್ಪಳಿಸುವ ಕನಸು ಕಾಣುತ್ತ, ಯಾರಾದರೂ ಅಡ್ಡ ಬಂದರೆ ’ಹೊಡಿ ಮಗಾ, ಹೊಡಿ ಮಗಾ’ ಎಂದು ಮಟ್ಟ ಹಾಕಿ ’ರಾಜ್ಯೋಸ್ತವ’ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರಬಹುದು.

ಹಾಗೆಯೇ ಯೋಚಿಸಿ ನೋಡಿ, ಈ ’ರಾಜ್ಯೋಸ್ತವ’ಕ್ಕೆ ಕನ್ನಡ ಚಿತ್ರರಂಗದ ಕೊಡುಗೆ ಅಪಾರ. ಕನ್ನಡಕ್ಕೆ ಹೊಸ ಹೊಸ ಚಿತ್ರ ವಿಚಿತ್ರ ಪದಪುಂಜಗಳಾದ ಪೆಟ್ರೋಮ್ಯಾಕ್ಸ್, ಢಗಾರ್, ಡೌವ್, ಉಡೀಸ್ ಇನ್ನೂ ಮುಂತಾದ ಪದಗಳನ್ನು ಸೇರಿಸಿ, ದ್ರಾವಿಡ ಮಕ್ಕಳೂ ಗಾಬರಿಯಾಗುವಷ್ಟು ಗಿರಿಜಾಮೀಸೆ, ಜರಿಪಂಚೆ ತೊಟ್ಟು, ಮಹಿಳೆಯರೂ ಅಸೂಯೆ ಪಡುವಷ್ಟು ಆಭರಣಭೂಷಿತರಾದ ನಾಯಕನಟನ ಗೆಟಪ್ ನಲ್ಲಿ ನಮ್ಮ ಸಾಹಸಸಿಂಹ, ರೆಬೆಲ್ ಸ್ಟಾರ್ ಅಷ್ಟೇ ಅಲ್ಲದೆ ಇತ್ತೀಚಿನ ಉಪ್ಪಿ ತುಪ್ಪಗಳೂ ಮೆರೆದು, ಕನ್ನಡಾಂಭೆಯ ಸಂಸ್ಕೃತಿ ಸೌರಭವನ್ನು ಶ್ರೀಮಂತಗೊಳಿಸಿದ್ದಾರೆ. ಕೆಲವು ಕನ್ನಡ ಚಿತ್ರಗಳ ಹೆಸರುಗಳನ್ನೇ ಗಮನಿಸಿ, ಮೆಂಟಲ್ ಮಂಜ, ಸೈಕಲ್ ನಂಜನೆಂದೋ, ಇಲ್ಲಾ, ಕುರಿಗಳು, ಕತ್ತೆಗಳೆಂದೋ ಅಥವಾ ಬರೀ ’ಶ್’ ಎಂದೂ ಉಸ್ಸಪ್ಪಾ ಎನಿಸುವರು.

ಉದಾಹರಣೆಗೆ ಈಗಷ್ಟೇ ಸುಪರ್ ಹಿಟ್ ಆದ ’ಮುಂಗಾರುಮಳೆ’ ಯನ್ನೇ ತೆಗೆದುಕೊಳ್ಳಿ. ನಾಯಕ ಫ್ರ್ಇಜ್ ನಿಂದ ಬಿಯರ್ ಬಾಟಲ್ ತೆಗೆಯುತ್ತ ತನ್ನ ಅಮ್ಮನಿಗೆ ತನ್ನಪ್ಪ ಹೇಗೆ ಕಾಳು ಹಾಕಿದನೆಂದು ಕೇಳುವುದನ್ನು ನೋಡಿದ ನನಗೆ ಕೊಂಚ ಕಸಿವಿಸಿಯಾಯಿತು. ಅರೆ ಇದೇನಪ್ಪಾ! ಕಾಳು ಹಾಕುವುದೆಂದರೆ? ಆಗ ಆ ನಾಯಕನ ಮಾತೆ ’ಸನ್ನಿ, ಅದೊಂದು ದೊಡ್ಡ ಕತೆ. ನನಗೊಂದು ವೊಡ್ಕಾ, ಜಿನ್ ಟಾನಿಕ್ ಬೆರೆಸಿ, ಡ್ರಿಂಕ್ ಮಾಡಿಕೊಂಡು ಬಾ. ಹಾಗೆಯೇ ಪಿಜ್ಜಾ ಡೆಲಿವರಿಗೆ ಫೋನ್ ಮಾಡಿಬಿಡು. ಎಲ್ಲಾ ಹೇಳುತ್ತೇನೆ’ ಎನ್ನುತ್ತಾಳೆಂದುಕೊಂಡೆ! ಸದ್ಯ, ಕಾಳು ತಿಂದ ಆ ಕೋಳಿ ತಾಯಿ ಹಾಗೆನ್ನಲಿಲ್ಲ. ಬಹುಶಃ ’ಮುಂಗಾರು ಮಳೆ-೨’ ರಲ್ಲಿ ಈ ಸೀನ್ ಇರಬಹುದು!

ಹೇಮಾವತಿಯ ಹಿನ್ನೀರು, ಜೋಗ, ಸಕಲೇಶಪುರದಂತಹ ಸ್ಥಳಗಳಲ್ಲಿ ಚಿತ್ರಿತವಾಗಿ ಕೊಡಗೆನ್ನುವ, ಕೊಡವರೆನ್ನುತ್ತ ಭಾಂಗ್ರಾ ಕುಣಿತ ಕುಣಿಯುವ, ಧಿಡೀರನೆ ಪಾಪ್ ಆಲ್ಬಮ್ ನಂತಹ ಹಾಡು ನೃತ್ಯಗಳು ಬಂದೆರಗಿ ಹಾಗೆಯೇ ಮಾಯವಾಗಿಬಿಡುವ, ಹಲ್ಲಂಡೆ ತಿರುಗುತ್ತ, ಹುಚ್ಚುಹುಚ್ಚಾಗಿ ಮಾತನಾಡುವುದೇ ಜೀವನ, ಎಂತಹುದೋ ಒಂದು ಹುಡುಗಿಯನ್ನು ಪ್ರೀತಿಸುವುದೇ ಜೀವನದ ಮಹತ್ತರ ಗುರಿ ಎಂಬುವ, ಹುಡುಗಿ ’ಅಯ್ಯೋ’ ಎಂದರೆ ಮದುವೆಯಾಗೆಂದು ಪೀಡಿಸುವ ಈ ಪರಿಯ ಸಿನಿಮಾವು ನೂರಿನ್ನೂರು ದಿನ ಓಡುತ್ತಿರುವುದೆಂದರೆ ಇದಕ್ಕಿಂತ ಕಡಿಮೆ ಓಡಿದ ಅಥವಾ ಡಬ್ಬ ಸೇರಿದ ಚಿತ್ರಗಳು ಹೇಗಿದ್ದವೆಂಬುದನ್ನು ಅವುಗಳನ್ನು ನೋಡಿದ ಚಿತ್ರಪ್ರೇಮಿಗಳೇ ಹೇಳಬೇಕು! ಇದ್ದುದರಲ್ಲಿ ಈಗ ಬರುತ್ತಿರುವ ಕನ್ನಡ ಚಿತ್ರಗಳಲ್ಲಿ ಇದು ಓ.ಕೆ. ಎನ್ನಬಹುದಾದ ಚಿತ್ರವೆಂದು ’ಹಾಳು ಊರಿಗೆ ಉಳಿದವನೇ ಗೌಡ’ ನೆಂಬಂತೆ ಇದು ಯಶಸ್ವಿಯಾಯಿತೆಂದು ನನ್ನ ಬಹುಪಾಲು ಕನ್ನಡ ಚಿತ್ರಪ್ರೇಮೀ ಸ್ನೇಹಿತರು ಅಭಿಪ್ರಾಯಿಸಿದ್ದಾರೆ.

ಒಟ್ಟಿನಲ್ಲಿ ನಿರ್ಮಾಪಕರ ಜೇಬನ್ನಷ್ಟೇ ತುಂಬುವುದಲ್ಲದೆ ’ಮುಂಗಾರುಮಳೆ’ಯು ಜೋಗದ ಗುಂಡಿಗೆ ಹೆಚ್ಚಿನ ಮಟ್ಟಿಗೆ ಪ್ರವಾಸಿಗರನ್ನು ಸೆಳೆಸಿ, ಆ ಪ್ರವಾಸಿಗರು ನಾಯಕ ನಟ ಗಣೇಶನಂತೆ ಬಿಯರ್ ಹಿಗ್ಗಿ ತಾವು ಅವನ ಧಾಟಿಯಲ್ಲಿಯೇ ತಮ್ಮ ತಮ್ಮ ಮಮ್ಮಿ-ಡ್ಯಾಡಿಯರನ್ನು ಪ್ರಶ್ನಿಸುವುದನ್ನು ಕಲ್ಪಿಸಿಕೊಂಡು, ಅದಕ್ಕವರ ಹಿರಿಯರು ಹೇಗೆ ಪ್ರತಿಕ್ರಿಯಿಸಬಹುದೆಂಬ ಕಲ್ಪನೆಯಿಂದ ಬೆಚ್ಚಿ ಬಿದ್ದು ತಾವು ಗಣೇಶನಂತೆ ಕಸದ ಗುಂಡಿಗೆ ಬೀಳದೆ, ತಮ್ಮ ಖಾಲಿ ಬಿಯರ್ ಬಾಟಲಿಗಳನ್ನು ಮಾತ್ರ ಎಸೆದು ಜೋಗವನ್ನು ತಿಪ್ಪೇಗುಂಡಿಯಾಗಿ ಮಾಡಿಸಿರುವ ಮುಂಗಾರುಮಳೆ, ಜೋಗದ ಗುಂಡಿಯನ್ನೂ ಭರ್ಜರಿಯಾಗಿಯೇ ತುಂಬಿಸಿದೆ.

ಸರಿ, ನಂತರ ಕೊಂಚ ವಿಚಾರಿಸಲಾಗಿ ಇತ್ತೀಚಿನ ಯುವಪೀಳಿಗೆ ’ಕಾಳು ಹಾಕುವುದು’, ’ಬಿಸ್ಕೀಟು ಹಾಕುವುದು’ ಎಂದು ಪರೋಕ್ಷವಾಗಿ ಹುಡುಗಿಯರ ಹಿಂದೆ ಸುತ್ತುವುದನ್ನು ಹಾಗೆ ಕರೆಯುತ್ತಾರೆಂದು ತಿಳಿಯಿತು. ಬಹುಶಃ, ಇದು ಅಮೇರಿಕಾವನ್ನು ಅನುಕರಿಸುತ್ತ ಅಲ್ಲಿ ಹುಡುಗಿಯರನ್ನು ಪಡ್ಡೆಗಳು ಬಿಚ್ಚ್, ಚಿಕ್ ಎಂದು ಸಂಭೋದಿಸುವುದರ ವಿಸ್ತೃತ ಭಾಗವಾಗಿ, ಸದಾ ಅಮೇರಿಕಾದ ಕನಸಿಗೆ ಹಾತೊರೆಯುತ್ತಿರುವ ಬೆಂಗಳೂರಿನ ಕನ್ನಡದ ಕಂದಮ್ಮಗಳು, ಈ ಬಿಚ್ಚ್, ಚಿಕ್ ಗಳು ಬಿಸ್ಕೀಟು ಮತ್ತು ಕಾಳು ತಿನ್ನುತ್ತವೆಂದು ಊಹಿಸಿ ಈ ರೀತಿಯ ಭಾಷಾ ಪ್ರಯೋಗ ಜಾರಿಯಾಗಿರಬಹುದೆಂದುಕೊಂಡೆನು!

ಬಹುಶಃ ಬೆಂಗಳೂರಿನ ಕನ್ನಡಮ್ (ಇದೇನು ಕನ್ನಡಮ್ ಎಂದಿರಾ? ಇಂದು ಕನ್ನಡಮ್ಮ ಕೂಡ ಇದು ಓಲ್ಡ್ ಫ್ಯಾಷನ್ ಎಂದು ನೀಲಮ್ಮ ನೀಲಂ ಆದಂತೆ, ಹಾಲಮ್ಮ ಹಲಂ ಆದಂತೆ ತಾನೂ ಮಿನಿ ಸ್ಕರ್‍ಟ್ ತೊಟ್ಟು ’ಕನ್ನಡಮ್’ ಎಂದು ಹೆಸರು ಬದಲಾಯಿಸಿಕೊಂಡಿದ್ದಾಳೆ!) ನ ಲಲನೆಯರು ಬಿಸ್ಕೀಟು ತಿಂದು, ಥೇಟ್ ಪ್ಯಾರಿಸ್ ಹಿಲ್ಟನ್ ಳಂತೆ ’ಹೇ ಬಿಚ್ಚ್, ಇಟ್ಸ್ ಹಾಟ್!’ ಅನ್ನುತ್ತಿರಬಹುದು ಅಥವಾ ಕಾಳು ತಿಂದು ಹಾಲಿವುಡ್ ನ ಹಾಟ್ ಚಿಕ್ ಬ್ರಿಟ್ನಿ ಸ್ಪಿಯರ್ಸ್ ಧಾಟಿಯಲ್ಲಿ ’ಊಪ್ಸ್, ಐ ಡಿಡ್ ಇಟ್ ಅಗೈನ್!’ ಎಂದು ತಮಿಳು, ತೆಲುಗು, ಮತ್ತು ಹಿಂದಿಯ ಬಿಚ್ಚ್-ಅಮ್ಮಗಳಿಗೆ ಸವಾಲು ಹಾಕುತ್ತಿರಬಹುದು.

ಇನ್ನು ಬೆಂಗಳೂರಿನಲ್ಲಿ ಕನ್ನಡವನ್ನು ಆದಷ್ಟೂ ಅಶಿಕ್ಷಿತ / ಅಸಂಸ್ಕೃತ ರೀತಿಯಲ್ಲಿ ಮಾತನಾಡುವುದೇ ಈಗಿನ ಸ್ಟೈಲ್ ಎಂಬಂತೆ ಬೆಂಗಳೂರಿಗರು ಮಾತನಾಡುತ್ತಾರೆ. ಮೊದಲಿನಿಂದಲೂ ಕರ್ನಾಟಕದ ಇತರೆಲ್ಲೆಡೆಗಿಂತ ಭಿನ್ನವಾಗಿ ’ಏನ್ ಗುರು’, ’ಏನಮ್ಮಾ’, ’ಏನ್ಸಾರ್’ ಎಂಬ ವಿಶಿಷ್ಟ ನುಡಿಗಟ್ಟುಗಳನ್ನು ಬಳಸುತ್ತಿದ್ದ ಬೆಂಗಳೂರಿಗರು ಅಪ್ಪಿತಪ್ಪಿ ಯಾರಾದರೂ ಈ ನುಡಿಗಟ್ಟುಗಳಿಲ್ಲದೆ ಸಂಭಾಷಣೆಯನ್ನು ಆರಂಭಿಸಿದರೆ ’ಬಿಟ್ಬಂದಹಳ್ಳಿ’ಯವನೆಂದು ಹೀಗಳೆಯುತ್ತಿದ್ದವರು ತಮ್ಮ ವೈಶಿಷ್ಟವನ್ನು ಮೆರೆವ ಭರದಲ್ಲಿ ಈಗೆಲ್ಲ ’ಏನ್ಲಾ ಮಗಾ’, ’ಬಾರ್‍ಲಾ ಮಚ್ಚಾ’, ಸ್ಕೆಚ್ಚು ಮಚ್ಚು ಎನ್ನುತ್ತಿದ್ದಾರೆ. ಇದು ಕನ್ನಡ ಭಾಷಾ ವಿಕಾಸವೋ ವಿನಾಶವೋ ನಾನರಿಯೇ!

ಬೇಕಿದ್ದರೆ ಬೆಂಗಳೂರು ಕನ್ನಡವನ್ನು ಗಮನಿಸಿ ನೋಡಿ! ಅದು ಯಾವಾಗಲೂ ಕರ್ನಾಟಕದ ಇತರೆ ಪ್ರದೇಶಗಳಿಗಿಂತ ಭಿನ್ನವೆಂಬುದಕ್ಕೆ ಟಿ.ಪಿ. ಕೈಲಾಸಂ ರವರ ನಾಟಕಗಳನ್ನೇ ಓದಿ ನೋಡಿ, ಬೆಂಗಳೂರು ಕನ್ನಡ ಆವಾಗಿನಿಂದಲೂ ಭಿನ್ನವೆಂಬುದು ಮನವರಿಕೆಯಾಗುತ್ತದೆ.

ಇನ್ನು ಇತ್ತೀಚಿನ ಬೆಂಗಳೂರೇ ಕರ್ನಾಟಕವೆಂದು ತಿಳಿದಿರುವ ಐಟಿ/ಬಿಟಿ, ರಾಜಕೀಯ ಧುರೀಣರಿಗೆ ಪೈಪೋಟಿಯೆಂಬಂತೆ ಕನ್ನಡ ಚಿತ್ರರಂಗವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಮಾತನಾಡುವವರೆಲ್ಲ ಕೊಳಚೆ ಪ್ರದೇಶದವರು, ಕೂಲಿಗಳು, ಗಾಡಿ ಎಳೆಯುವವರೆಂದು ವರ್ಗೀಕರಿಸಿ, ವಿಶಾಲ ಸಾಮರ್ಥ್ಯದ ಕನ್ನಡ ಭಾಷೆಯನ್ನು ಕತ್ತರಿಸಿ ಈ ಬೆಂಗಳೂರು ಕನ್ನಡವನ್ನೇ ಕನ್ನಡವೆಂದು ಎತ್ತಿ ತನ್ನ ಕಲಾಕೃತಿಗಳಿಂದ ಇಡೀ ಕರ್ನಾಟಕಕ್ಕೆ ಈ ಭಾಷಾ ವಿಕಾಸವನ್ನು ಪಸರಿಸುತ್ತಿದೆ. ಕಳೆದ ಜೂನ್ ನಲ್ಲಿ ನಾನು ಪ್ರವಾಸದಲ್ಲಿದ್ದಾಗ ಅಪ್ಪಟ ಗಂಡುಮೆಟ್ಟಿನ ಪ್ರದೇಶಗಳಾದ ಹುಬ್ಬಳ್ಳಿ, ಬಿಜಾಪುರದಲ್ಲಿಯೂ ಅಲ್ಲಿನ ಯುವಜನಾಂಗವು ಬೆಂಗಳೂರು ಶೈಲಿಯಲ್ಲಿ ’ಏನ್ಲಾ ಸಿಸ್ಯಾ’, ’ಓಯ್ತಿಯಾ ಮಗಾ’ ಎಂದು ಮಾತನಾಡಿಕೊಳ್ಳುವುದನ್ನು ನಾನು ಕೇಳಿದಾಗ ನನಗೇ ನಂಬಲಾಗಲಿಲ್ಲ! ಅಲ್ಲಿಯ ಗಡಸು ಶೈಲಿಯೊಂದಿಗೆ ಮಿಶ್ರಿತಗೊಂಡು ಈ ಬೆಂಗಳೂರು-ವಿಕಸಿತ-ಕನ್ನಡ ಅತ್ಯಂತ ನಾಟಕೀಯವೆನಿಸಿದರೂ ಆ ಯುವಕರು ಮಾತನಾಡಿಕೊಳ್ಳುತ್ತಿದ್ದುದನ್ನು ನೋಡಿದರೆ ಕುಲಗೆಟ್ಟ ನಮ್ಮ ದೃಶ್ಯಮಾಧ್ಯಮಗಳು ಒಂದು ಪರಿಸರದ ಮೇಲೆ ಯಾವ ರೀತಿಯ ಅಡ್ಡ ಪರಿಣಾಮವನ್ನುಂಟು ಮಾಡಬಹುದೆಂಬ ಸತ್ಯದ ದರ್ಶನ ಬಾದಾಮಿಯಂತಹ ಆ ಸಣ್ಣ ಊರಿನಲ್ಲಿ ನನಗಾಯಿತು.

’ಅವಳ ರಾತ್ರಿಗಳು’, ’ಇವನ ಭ್ರಾಂತಿಗಳು’ ಎಂದು ಸಿನಿಮಾ ಮಾಡುತ್ತಿದ್ದ ಕೇರಳಿಗರು ಅವುಗಳಿಗೆಲ್ಲ ತಿಲಾಂಜಲಿಯಿಟ್ಟು, ಸೀಮಿತ ಮಾರುಕಟ್ಟೆಯಿದ್ದರೂ ಕಲಾಕೃತಿಗಳೆನ್ನುವಂತಹ ಚಿತ್ರಗಳನ್ನು ಮಾಡುತ್ತಿದ್ದರೆ, ಆರು ಜ್ಞಾನಪೀಠಗಳ ಹಿನ್ನೆಲೆಯ, ಅಸಾಧಾರಣ ಸಾಹಿತಿ, ಕತೆಗಾರರಿರುವ, ನಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಕಲೆಗಳಿದ್ದರೂ, ಬರ ಬಿದ್ದವರಂತೆ ಪರಭಾಷೆಯ ಕತೆ, ಸಂಸ್ಕೃತಿಗೆ ಚಿತ್ರರಂಗದವರು ಮುಗಿಬಿದ್ದಿರುವುದು ನಿಜಕ್ಕೂ ನಾಚಿಕೆಗೇಡು. ಉದಾಹರಣೆಗೆ ಮೇಲೆ ಹೇಳಿದ ಜರಿಪಂಚೆ, ದಪ್ಪ ಮೀಸೆ, ಬಿಳಿ ಚಪ್ಪಲಿ ತೊಟ್ಟ ಪಾತ್ರದ ಗಂಡುತನಕ್ಕೂ, ನಮ್ಮ ಉತ್ತರ ಕರ್ನಾಟಕದ ರುಮಾಲು ಸುತ್ತಿ, ಕಚ್ಚೆ ಕಟ್ಟಿ, ಜಿರ್ ಜಿರ್ ಎನ್ನುವ ಜೀರಿಕಿ ಚಪ್ಪಲಿ ತೊಟ್ಟ, ಗಿರಿಜಾ ಮೀಸೆ / ಕತ್ತಿ ಮೀಸೆ ಹೊತ್ತ, ಗಡಸು ಭಾಷೆಯ ಗಂಡುತನಕ್ಕೂ (ಬಾಳಪ್ಪ ಹುಕ್ಕೇರಿ ಮತ್ತು ’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿನ ದೃಶ್ಯದಲ್ಲಿ ಡಾ:ರಾಜ್ ಅವರು ತೊಟ್ಟ ವೇಷ) ಹೋಲಿಸಿ ನೋಡಿ. ಯಾವುದು ಗಟ್ಟಿ ಎಂಬುದು ತಮಗೇ ತಿಳಿಯುತ್ತದೆ!

ಕಡೆಯ ಪಕ್ಷ ತಮಿಳು ಸಿನೆಮಾ ರೀಮೇಕಿಸುವ ಇವರು, ತಮಿಳರು ಪರಭಾಷೆಯ ನಟ ನಟಿಯರನ್ನು ಪ್ರೋತ್ಸಾಹಿಸಿದರೂ ಅವರುಗಳೆಲ್ಲ ದ್ರಾವಿಡ ಲಕ್ಷಣಗಳನ್ನೇ ಹೊಂದಿರುವಂತೆ ನೋಡಿಕೊಳ್ಳುವ ಬಗೆಯನ್ನಾದರೂ ಕಲಿಯುವುದು ಬಾರದೆ? ಉದಾಹರಣೆಗೆ ಕಪ್ಪು ಬಣ್ಣದ ರಜನೀಕಾಂತ್, ಮುರಳಿ, ದಪ್ಪ ತುಟಿಯ ಅರ್ಜುನ್ ಸರ್ಜಾ, ಗುಂಗುರು ಕೂದಲಿನ ಕೋಕಿಲ ಮೋಹನ್. ಇನ್ನು ಸೌಂದರ್ಯವೆಂದರೆ ಗುಂಡು ಗುಂಡಾಗಿ, ಮುದ್ದಾಗಿರುವುದೇ ಎಂದು ತಿಳಿದಿರುವ ತಮಿಳರು ಬಳುಕುವ ಬಳ್ಳಿಗಳನ್ನು ಬಿಟ್ಟು ಗುಂಡು ಗುಂಡಾಗಿರುವ ಖುಷ್ಬು, ನಗ್ಮಾ ಮತ್ತವಳ ತಂಗಿ, ರೋಜಾ, ರಮ್ಯಕೃಷ್ಣ ರಂತವರನ್ನು ಅಮದು ಮಾಡಿಕೊಂಡರೂ ತಮ್ಮ ಸಂಸ್ಕೃತಿಗೆ ಕುಂದಾಗದಂತೆ ನೋಡಿಕೊಳ್ಳುತ್ತಾರೆ.

ಇದನ್ನೆಲ್ಲ ನೋಡಿದರೆ, ಕನ್ನಡಿಗರು ನಿಜ ಅರ್ಥದಲ್ಲಿ ರಾಜ್ಯೋತ್ಸವವನ್ನು ಮಾಡುವುದಾದರೆ ಭಾಷೆ, ಕಲೆ, ಸಂಸ್ಕೃತಿಗಳ ಗಂಧವಿಲ್ಲದೆ, ತೆವಲಿಗೆ ಸಿನೆಮಾ ಮಾಡಿ, ನಮ್ಮ ಭಾಷೆ, ಸಂಸ್ಕೃತಿಯನ್ನು ಕದಡುತ್ತಿರುವ ಇಂದಿನ ಬಹುತೇಕ ಕನ್ನಡ ಚಿತ್ರರಂಗದ ಕನ್ನಡ ಸಿನಿಮಾಗಳನ್ನು ನೋಡುವುದಕ್ಕೆ ಐದು ವರ್ಷಗಳಿಗೆ ರಜಾ ಘೋಷಿಸಿ, ಅರ್ಥಪೂರ್ಣ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಕೊಂಡು ಓದಿದರೆ ಅಥವ ಕನ್ನಡ ಪರ ಸಂಘ-ಸಂಸ್ಥೆಗಳು ಸಿನಿಮಾ ಹಾಡು ಕುಣಿತಗಳನ್ನೇರ್ಪಡಿಸುವುದನ್ನು ಬಂದ್ ಮಾಡಿ (ಕನ್ನಡ ರಾಜ್ಯೋತ್ಸವಕ್ಕಾಗಿಯಾದರೂ) ಆ ಹಣದಿಂದ ತಮ್ಮ ತಮ್ಮ ಬಡಾವಣೆಗಳಲ್ಲೋ, ಬೀದಿಗಳಲ್ಲೋ ಕನ್ನಡ ಪುಸ್ತಕಗಳನ್ನು ಹಂಚಿದರೆ ನಮ್ಮ ಹೆಮ್ಮೆಯ ಸಾಹಿತಿಗಳಾದರೂ ಬದುಕಿಕೊಳ್ಳುತ್ತಾರೆ.

ಅಣಕ:

ರಿಯಲ್ ಎಸ್ಟೇಟ್ ಕಂ ರೌಡಿಯಿಸಂ ನ ಕುಳವೊಂದು ಸಿನೆಮಾ ಮಾಡಬೇಕೆಂದು ನಿರ್ದೇಶಕ, ಚಿತ್ರಸಾಹಿತಿಯೊಂದಿಗೆ ಪಾನಗೋಷ್ಟಿ ನಡೆಸುತ್ತಿತ್ತು. ನಿರ್ಮಾಪಕ ಕುಳವು "’ಮಚ್ಚ’ ಅನ್ನೋ ಒಂದು ಸಿನೆಮಾ ಮಾಡವ್ಹಾ, ಮಚ್ಚನಿಗೊಂದು ಲವ್ವು ಸೈಡಿಗೊಂದು ಡವ್ವು ಸೇರಿಸಿ ಕತೆ ಮಾಡ್ರುಲ್ಹಾ ನನ್ಮಕ್ಳ" ಎಂದು ಅಪ್ಪಣಿಸುತ್ತಾನೆ.

ಆಗ ಚಿತ್ರಸಾಹಿತಿ "ಅಣ್ಣಾ, ನಡುವೆ ಒಂದು ’ಎಲ್ಲೋ ಜೋಗಪ್ಪ ನಿನ್ನರಮಾನೆ’ ಅನ್ನ ಐಟಂ ಥರ ಒಂದು ರಾಜ್ಯೋಸ್ತವ ಸೀನ್ ಆಕಿ, ಅದ್ರಲ್ಲಿ ’ಕನ್ನಡವೆನೆ ಕುಣಿದಾಡುವುದೆನ್ನೆದೆ’ ಅಂತ ಸುರುವಾಗೊ ಐಟಂ ಸಾಂಗ್ ಬರಿತೀನಿ. ಮುಂದಿನ ನೂರು ವರ್ಸವಾದರೂವೆ ಪ್ರತೀ ರಾಜ್ಯೋಸ್ತವಕ್ಕೂ ಎಲ್ಲ ಕಡೆ ಇದೇ ಸಾಂಗ್ ಕೇಳ್ಬೇಕು ಅಂಗ್ ತೆಗಿಯವ್ಹಾ’ ಅಂದ.

ಇದರಿಂದ ಉತ್ಸಾಹಗೊಂಡ ನಿರ್ದೇಶಕ "ರಾಖಿ ಸಾವಂತ್ ನ ಬುಕ್ ಮಾಡವ್ಹ, ಕನ್ನಡ ಬಾವುಟದ ಬಣ್ಣದ್ದೇ ಕಾಸ್ಟೂಮ್ ಹಾಕಿಸಿ, ಕ್ಲೋಸ್-ಅಪ್ ನಲ್ಲಿ ಅವಳು ’ಕನ್ನಡವೆನೆ ಕುಣಿದಾಡುವುದೆನ್ನೆದೆ’ ಅಂತ ಎದೆ ಕುಣುಸ್ಲಿ ಹೀರೋ ’ಮಚ್ಚ’ ಇತ್ಲಗಿಂದ ’ಕನ್ನಡವೆನೆ ಮೈ ನಿಮಿರುವುದು’ ಅಂತ ಸೊಂಟ ತಿರುಗ್ಸದ ಅಂಗೇ ಲಾಂಗ್-ಶಾಟ್ ಮಾಡ್ತಾ ಮೆಜೆಸ್ಟಿಕ್, ಸಿಟಿ ಮಾರ್ಕೆಟಲ್ಲಿ ಕುಣುಸ್ತ ಅಂಗೇ ಆಸ್ಟ್ರೇಲಿಯಾ, ಜಪಾನ್, ಹಾಂಕಾಂಗ್ ಒಂದು ರೌಂಡ್ ಸುತ್ತಿಸಿ ಮತ್ತೆ ಮೆಜೆಸ್ಟಿಕ್ಕಲ್ಲಿ ಎಂಡ್ ಮಾಡವ್ಹಾ." ಎಂದು ಸೀನ್ ವರ್ಣಿಸಿದ.

ಇದರಿಂದ ಖುಷಿಗೊಂಡ ರಿಯಲ್ ಎಸ್ಟೇಟ್ ಕುಳ, ’ಚಿಯರ್ಸ್, ಇಂಗಾದ್ರೂ ನಾನು ಕನ್ನಡ ಸೇವೆ ಮಾಡ್ದಂಗಾಯ್ತದೆ’ ಎಂದ.

ಜೈ ಕರ್ನಾಟಕ ಮಾತೆ!

No comments: