ಹೊಮ್ಮುತ್ತಿರುವ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತ

ಕಳೆದ ವಾರ ನನಗೊಂದು ’ಎಮರ್ಜಿಂಗ್ ಇಕಾನಮೀಸ್’ ಎಂಬ ವಿಷಯವಾಗಿ ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳುವಂತೆ ನನ್ನ ಕಂಪೆನಿ ಕಳುಹಿಸಿಕೊಟ್ಟಿತ್ತು. ಸಾಮಾನ್ಯವಾಗಿ ಶಿಕಾಗೋ ಅಥವಾ ನ್ಯೂಯಾರ್ಕ್ ನಗರಗಳಲ್ಲಿ ಹೆಚ್ಚಾಗಿ ಆಯೋಜಿತಗೊಳ್ಳುತ್ತಿದ್ದ ಆರ್ಥಿಕ ಗೋಷ್ಠಿ, ಸಮಾವೇಶಗಳಿಗಿಂತ ಈ ಬಾರಿ ’ಫಾರ್ ಎ ಚೇಂಜ್’ ಎಂಬಂತೆ ಜಗಮಗಿಸುವ ಲಾಸ್ ವೇಗಸ್ ನಲ್ಲಿ ಈ ಸಮಾವೇಶ ಆಯೋಜಿತಗೊಂಡಿತ್ತು. ನನ್ನ ಸಹೋದ್ಯೋಗಿ ಮಿತ್ರ ಫ್ರ್ಯಾಂಕ್ ನನ್ನು ವೇಗಸ್ ನ ಏರ್ ಪೋರ್ಟ್ ನಲ್ಲಿ ಕಲೆತು ಬಾಡಿಗೆ ಕಾರು ಪಡೆದುಕೊಂಡು ನಾವಿಳಿದುಕೊಳ್ಳಬೇಕಿದ್ದ ಹೋಟೆಲ್ ನೆಡೆಗೆ ಲಾಸ್ ವೇಗಸ್ ನ ಪ್ರಮುಖ ಸ್ಟ್ರಿಪ್ ಮೂಲಕ ಹಾದು ನಾನು ಮತ್ತು ಫ್ರ್ಯಾಂಕ್ ಹೋಗುತ್ತಿದ್ದೆವು.

ಅದಾಗಲೇ ಸಂಜೆ ಆರರ ಸಮಯವಾಗಿ ಲಾಸ್ ವೇಗಸ್ ಎಂದಿನಂತೆ ಜಗಮಗಿಸುತ್ತ ಸಂಪೂರ್ಣ ಜಾತ್ರೆಯ ಕಳೆ ತುಂಬಿಕೊಂಡು ಜನಜಂಗುಳಿಯಿಂದ ತುಂಬಿತುಳುಕುತ್ತಿತ್ತು. ಹಾಗೆಯೇ ಪ್ರಮುಖ ಲಾಸ್ ವೇಗಸ್ ಸ್ಟ್ರಿಪ್ ನ ಟ್ರ್ಯಾಫಿಕ್ ಕೂಡ. ಸರಿ, ಹಾಗೆಯೇ ತೆವಳುತ್ತ ಸಾಗುತ್ತಿದ್ದ ಟ್ರಾಫಿಕ್ಕಿನಲ್ಲಿ ಇತರೆ ಕಾರುಗಳೆಡೆ ಕಣ್ಣಾಡಿಸುತ್ತ ಅಲ್ಲಿರಬೇಕಾದ ಎರಡು ಸಂಜೆಗಳಲ್ಲಿ ಏನೇನು ಮಾಡಬೇಕೆಂದು ಚರ್ಚಿಸುತ್ತ ಸಾಗುತ್ತಿದ್ದ ನಮಗೆ ಪಕ್ಕದಲ್ಲಿಯೇ ಸಾಗಿ ಬಂದ ಕನ್ವರ್ಟಿಬಲ್ ಫೋರ್ಡ್ ಮಸ್ಟ್ಯಾಂಗ್ ಕಾರಿನಲ್ಲಿದ್ದ ನಾಲ್ಕು ಲಲನೆಯರು ನಮ್ಮೆಡೆಗೆ ಮುಗುಳ್ನಗೆ ಹಾಯಿಸಿದರು. ಆ ಟ್ರಾಫಿಕ್ ನಲ್ಲಿ ಬೇಯುತ್ತಿದ್ದ ನಮಗೆ ಆ ಹರೆಯದ ಹೆಣ್ಣುಗಳ ಮುಗುಳ್ನಗೆ ತಂಗಾಳಿಯಂತೆ ಬೀಸಿತು. ಈ ಹುಡುಗಿಯರ ವಿಷಯದಲ್ಲಿ ಪರಿಣಿತನಾಗಿದ್ದ ನನ್ನ ಗೆಳೆಯ ಫ್ರ್ಯಾಂಕ್ ಅವರೊಂದಿಗೆ ಹರಟತೊಡಗಿದ. ಆಗಷ್ಟೇ ಇಪ್ಪತ್ತೊಂದಕ್ಕೆ ಕಾಲಿಟ್ಟು ಮದ್ಯಪಾನ / ಧೂಮಪಾನ ಮಾಡಲು ಲೈಸೆನ್ಸ್ ಗಿಟ್ಟಿಸಿಕೊಂಡಿದ್ದ ಆ ಕನ್ಯೆಯರು ಅದನ್ನು ಆಚರಿಸಿಕೊಳ್ಳಲು ಲಾಸ್ ವೇಗಸ್ ಗೆ ಬಂದಿದ್ದರು. ಆಗಷ್ಟೇ ದೊರಕಿದ ಸ್ವಾತಂತ್ರ್ಯದ ಉನ್ಮಾದದಲ್ಲಿದ್ದ ಆ ತರುಣಿಯರು ಅದನ್ನಾಚರಿಸಿಕೊಳ್ಳುವ ವಿಶಿಷ್ಟ ವಿಧಗಳ ಬಗೆಗೆ ಫ್ರ್ಯಾಂಕ್ ನ ಸಲಹೆ ಕೇಳಿದಾಗ, ನನ್ನ ಗೆಳೆಯನು ಅವರಿಗೆ "ಈ ದರಿದ್ರ ಟ್ರಾಫಿಕ್ಕಿನಲ್ಲಿ ನೀವು ಎಲ್ಲರಿಗೂ ಮನರಂಜನೆಯನ್ನು ಒದಗಿಸುತ್ತ ಆಚರಿಸಿಕೊಳ್ಳುವ ಬಗೆಯೆಂದರೆ ಅತ್ತಿತ್ತ ಇರುವ ಕಾರಿನ ಚಾಲಕರಿಗೆ ’ಇಪ್ಪತ್ತು ಡಾಲರ್ ಕೊಟ್ಟರೆ ತೆರೆದೆದೆಯ ಸುಂದರಿಯರಾಗಿ ಎದೆ ಕುಣಿಸುತ್ತೇವೆ’ ಎನ್ನಿರಿ. ಅದು ನಿಮಗೆ ದೊರೆತ ಸ್ವಾತಂತ್ರ್ಯದ ಸಂಕೇತವೂ ಆಚರಣೆಯೂ ಆಗಿ, ಈ ಸಂಜೆಯ ಪಾರ್ಟಿಗೆ ಹಣ ಮತ್ತು ಟ್ರಾಫಿಕ್ ನಲ್ಲಿ ಸಿಕ್ಕಿರುವ ಎಲ್ಲರಿಗೂ ಕೊಂಚ ಮನರಂಜನೆ" ಎನ್ನುತ್ತ ಇಪ್ಪತ್ತು ಡಾಲರ್ ನ ನೋಟನ್ನು ಅವರೆಡೆಗೆ ಚಾಚಿದ. ಕೂಡಲೇ ಆ ಯುವತಿಯರು ’ಗ್ರೇಟ್ ಐಡಿಯಾ’ ಎನ್ನುತ್ತ ಫ್ರ್ಯಾಂಕ್ ಚಾಚಿದ ಇಪ್ಪತ್ತರ ನೋಟನ್ನು ತೆಗೆದುಕೊಂಡು ತೆರೆದ ಕಾರಿನಲ್ಲಿ ಎದ್ದು ನಿಂತು ಬಿಚ್ಚೆದೆಯ ಸುಂದರಿಯರಾಗಿ ತಮ್ಮ ಕೆಚ್ಚೆದೆಯನ್ನು ಕುಲುಕಿಸಿದರು. ಹಾಗೆಯೇ ಮುಂದೆ ಸಾಗುತ್ತ ಇತರೆ ಕಾರುಗಳ ಚಾಲಕರಿಂದ ಇಪ್ಪತ್ತು ಡಾಲರ್ ಪಡೆದು ತಮ್ಮ ಎದೆ ಕುಣಿಸುತ್ತ ಸಂಭ್ರಮಿಸುತ್ತ ಸಾಗಿದರು. ಲಾಸ್ ವೇಗಸ್ ನಲ್ಲಿ ಇದೇನು ಅಶ್ಲೀಲವಾಗಿರದೇ ತಮ್ಮ ಸ್ವಾತಂತ್ರ್ಯವನ್ನು, ಸಂತೋಷವನ್ನು ವ್ಯಕ್ತಪಡಿಸುವ / ಆಚರಿಸಿಕೊಳ್ಳುವ ಬಗೆಬಗೆಯ ಜನರ ಒಂದು ವಿಧವಾಗಿತ್ತು ಈ ತೆರೆದೆದೆಯ ಕುಣಿತ! ಆ ಎರಡು ಮೈಲಿಗಳ ದೂರದ ಪ್ರಮುಖ ರಸ್ತೆಯ ಟ್ರಾಫಿಕ್ಕಿನಲ್ಲಿ ಸುಮಾರು ಎಂಟುನೂರು ಡಾಲರ್ ಗಳನ್ನು ತಮ್ಮ ಸಾಯಂಕಾಲದ ಪಾರ್ಟಿಗೆ ಹುಡುಗಾಟದ ಚೇಷ್ಟೆಯಾಗಿ ಸಂಪಾದಿಸಿಕೊಂಡವು ಆ ಬಂಧಮುಕ್ತ ಹಕ್ಕಿಗಳು. ಬಹುಶಃ ಭಾರತದಲ್ಲಿ ಈ ರೀತಿಯಾಗಿದ್ದರೆ ಆ ತರುಣಿಯರ ಗತಿ ಏನಾಗುತ್ತಿತ್ತೋ ಊಹಿಸಲೂ ಅಸಾಧ್ಯ!

ಸರಿ, ಮರುದಿನ ಆ ಆರ್ಥಿಕ ಸಮಾವೇಶದಲ್ಲಿ ಕ್ರಿ.ಶ. ೨೦೨೦ ರ ಹೊತ್ತಿಗೆ ಕ್ರಮವಾಗಿ ಚೀನಾ, ಅಮೇರಿಕಾ, ಭಾರತ, ಜಪಾನ್, ಯುರೋಪ್ ಮತ್ತು ಬ್ರೆಜಿಲ್ ಗಳು ಆರ್ಥಿಕ ದೈತ್ಯರಾಗಿ ಹೊರಹೊಮ್ಮುತ್ತಾರೆಂದು, ಅದಕ್ಕೆ ಪರ್ಯಾಯವಾಗಿ ಕಂಪೆನಿಗಳು ಹೇಗೆ ಸಿದ್ಧವಾಗಿರಬೇಕೆಂದೂ, ಯಾವ ಯಾವ ಕೈಗಾರಿಕೆಗಳಲ್ಲಿ ಬಂಡವಾಳವನ್ನು ತೊಡಗಿಸಬೇಕೆಂದೂ ವಿವಿಧ ಪ್ರತಿಷ್ಟಿತ ಬಂಡವಾಳ ಹೂಡಿಕೆ ಕಂಪೆನಿಗಳ ದೊಡ್ಡ ಅಧಿಕಾರಿಗಳು ಅಂಕಿಸಂಖ್ಯೆಗಳೊಂದಿಗೆ ವಿಷಯವನ್ನು ಪ್ರಸ್ತುತಪಡಿಸಿದರು. ಈ ಅಂಕಿಸಂಖ್ಯೆಗಳನ್ನು ಪ್ರಸ್ತುತಪಡಿಸಿದ ಅಧಿಕಾರಿಗಳಲ್ಲಿ ಭಾರತೀಯ ಸಂಜಾತರೊಬ್ಬರೂ ಇದ್ದರು. ಮುಂಬೈನ ಕಾನ್ವೆಂಟ್ ಒಂದರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಪ್ರತಿಷ್ಟಿತ ಕಾಲೇಜೊಂದರಲ್ಲಿ ಪದವಿ ಪಡೆದು, ಅಮೇರಿಕಾದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದ ಅವರಿಗೆ ಭಾರತವೆಂದರೆ ಡೆಲ್ಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಗಳೇ ಆಗಿದ್ದವು.

ಸಂಜೆಯ ಪಾರ್ಟಿಯಲ್ಲಿ ನನ್ನ ಮಿತ್ರ ಫ್ರ್ಯಾಂಕ್ ಮತ್ತೆ ಆ ವ್ಯಕ್ತಿಯೊಂದಿಗೆ ಸಂಭಾಷಿಸುತ್ತ, ಮುಂಬೈನ ಜನನಿಬಿಡ ರೈಲುಗಳಲ್ಲಿ ಅವರು ಯಾವತ್ತಾದರೂ ಪ್ರಯಾಣಿಸಿದ್ದಾರೆಯೇ ಎಂದು ಕೇಳುತ್ತ ತನಗೆ ತುಂಬಿದ್ದ ಆ ರೈಲಿನಲ್ಲಿ ಒಮ್ಮೆ ಸಲಿಂಗಕಾಮಿಯೊಬ್ಬನು ತನ್ನ ಚಡ್ಡಿಯೊಳಗೆ ಕೈತೂರಿಸಿದ್ದ ಅನುಭವವನ್ನು ಹೇಳುತ್ತ, ಜನಭರಿತ ಆ ರೈಲಿನಲ್ಲಿ ಅದಾವ ಮಹಾಶಯನೆಂದು ಕಂಡುಹಿಡಿಯಲಾಗದೆ ಹಾಗೆಯೇ ಆ ಕೈಯನ್ನು ಹಿಡಿದು ತಿರುವಿ ಆ ಸಂಧಿಗ್ದತೆಯಿಂದ ಪಾರಾದ ಕತೆಯನ್ನು ಹೇಳಿದನು. ಹಾಗೆಯೇ ಅವರು ಹೇಳಿದ ಭಾರತದ ಐ.ಟಿ/ಬಿ.ಟಿ ಯಶೋಗಾಥೆಗಳು ಸೃಷ್ಟಿಸಿರುವ ಕೆಲವು ಸಂಕೀರ್ಣತೆಗಳನ್ನು ಬಿಡಿಸಿಡುತ್ತಾ ತನಗೆ ಬೆಂಗಳೂರಿನ ಪಬ್ ಗಳಲ್ಲಿ ಇನ್ನೂ ಹದಿನೆಂಟು ಮುಟ್ಟದ ಯುವಕ/ಯುವತಿಯರು ಯಾವುದೇ ಅಡೆತಡೆಗಳಿಲ್ಲದೆ ಸಿಗರೇಟು ಸೇದುತ್ತ ಬಿಯರ್ ಹೀರುವುದನ್ನು, ಮತ್ತು ತಾನು ನಿರ್ವಹಿಸಲು ಹೋಗಿದ್ದ ಕಾಲ್ ಸೆಂಟರ್ ನ ಯುವಕ ಯುವತಿಯರು ಅಮೇರಿಕೆಯ ಮಾದರಿಯಲ್ಲಿಯೇ ಜೊತೆಗೂಡಿ ವಾಸ ಮಾಡುತ್ತಿದ್ದುದು, ಅವರೆಲ್ಲ ನೀರು ಕುಡಿಯದೆ ಕೋಕ್ ಕುಡಿಯುತ್ತಿದುದನ್ನು ಉದಹರಿಸಿದನು. ಭಾರತದ ಬಗ್ಗೆ ಅಪಾರವಾಗಿ ಓದಿಕೊಂಡು ಪ್ರತ್ಯಕ್ಷವಾಗಿಯೂ ಭಾರತದ ಬಗ್ಗೆ ತಿಳಿದುಕೊಂಡಿದ್ದ ಬಿಳಿಯ ಫ್ರ್ಯಾಂಕ್ ನೊಂದಿಗೆ ವಾದಿಸುವುದರಲ್ಲಿ ಆ ಚಾಕೋಲೇಟ್ ಭಾರತೀಯ ಕಕ್ಕಾಬಿಕ್ಕಿಯಾಗಿದ್ದ. ಕಡೆಗೆ ಅವರು ತೋರಿಸಿದ್ದ ಭಾರತದ ಶೇರು ಮಾರುಕಟ್ಟೆಯ ಬೆಳವಣಿಗೆಯನ್ನು ಎತ್ತುತ್ತಾ ಅದರಲ್ಲಿ ಭಾರತೀಯ ಕಂಪೆನಿಗಳೆಷ್ಟು ಹಣ ತೊಡಗಿಸಿದ್ದಾವೆ ಮತ್ತು ವಿದೇಶೀ ಕಂಪೆನಿಗಳೆಷ್ಟು ಹಣ ತೊಡಗಿಸಿದ್ದಾವೆಂದು ವಿಶ್ಲೇಷಿಸುತ್ತ ಈ ವಿದೇಶೀ ಬಂಡವಾಳ ಹೂಡಿಕೆ ಕಂಪೆನಿಗಳ ’ಪಂಪ್ ಅಂಡ್ ಡಂಪ್’ ನ ಹುನ್ನಾರವಾಗಿ ಭಾರತದ ಶೇರು ಮಾರುಕಟ್ಟೆ ಈ ಪಾಟಿ ಮೇಲೇರಿರುವುದಾಗಿಯೂ ಅದೇ ರೀತಿ ಸುಲಭ ಸಾಲ ಸೌಲಭ್ಯಗಳ ಹುನ್ನಾರವಾಗಿ ಭಾರತದ ನಗರಗಳ ರಿಯಲ್ ಎಸ್ಟೇಟ್ ಗಗನಕ್ಕೇರಿರುವುದಾಗಿಯೂ ಹೇಳಿದನು. ಹಾಗೆಯೇ ತಾನು ಬೆಂಗಳೂರ್‍ಇನಲ್ಲೊಮ್ಮೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ವಿರುದ್ಧವಾಗಿ ’ಬಂದ್’ ನಡೆದುದನ್ನು ನೋಡಿದ್ದಾಗಿಯೂ, ಅದೇ ಮಾದರಿಯಲ್ಲಿ ಮುಂದೆ ಭಾರತೀಯರು ಶೇರುಪೇಟೆ ಬಿದ್ದಾಗ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆ ಸೋತಾಗ ಬಡ ಭಾರತೀಯ ಹೂಡಿಕೆದಾರರು ಭಾರತದ ರೈತರ ಮಾದರಿಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವರೆಂದನು.

ಹಾಗೆಯೇ ಭಾರತದಲ್ಲಿನ ಅಗ್ಗದ ಕಾರ್ಮಿಕರು ಇಂದು ಅಗ್ಗವಾಗಿರದೇ ರಷ್ಯಾ/ ಜೆಕ್ ರಿಪಬ್ಲಿಕ್ ಮತ್ತಿತರೆ ಪೂರ್ವ ಯುರೋಪಿನ ರಾಷ್ಟ್ರಗಳು ಭಾರತಕ್ಕಿಂತ ಅಗ್ಗವಾಗಿ, ಈ ಹೊರಗುತ್ತಿಗೆ ವ್ಯವಸ್ಥೆಯ ಕಂಪೆನಿಗಳು ಅಲ್ಲಿಗೆ ಸ್ಥಾನಪಲ್ಲಟ ಮಾಡುವತ್ತ ಯೋಚಿಸುತ್ತಿರುವುದರ ಬಗೆಗೆ ತಮ್ಮ ಅಭಿಪ್ರಾಯವೇನೆಂದು ಕೇಳಿ ಅವರನ್ನು ಸುಸ್ತುಗೊಳಿಸಿದನು. ಕಡೆಗೆ ಭಾರತದಲ್ಲಿ ತಾನು ಕಳೆದ ಎಂಟು ತಿಂಗಳುಗಳಲ್ಲಿ ತಾನು ಗೋವೆಯಲ್ಲಿ ಮಾಡಿದ ಮಜಾ, ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸಾರ್ವತ್ರಿಕವಾಗಿ ಕಾಣುವ ದೇಹದ ಮಾರುಕಟ್ಟೆ ಮತ್ತು ಮನುಕುಲದ ಮೇಲೆಯೇ ಜುಗುಪ್ಸೆ ತರಿಸುವಂತೆ ಅಲ್ಲಿ ಸಾಲು ಸಾಲಾಗಿ ನಿಲ್ಲಿಸಿರುವ ಅಬಾಲವೃದ್ಧ ವೇಶ್ಯೆಯರು, ಗೋಕರ್ಣದ ಓಂ ಬೀಚಿನಲ್ಲಿ ಒಂದಕ್ಕೆ ಹತ್ತರಷ್ಟು ಜಡಿದು ಸುಲಿಗೆ ಮಾಡುವ ಸ್ಥಳೀಯರು, ಭಾರತ ಸರಕಾರವೇ ತನ್ನ ಐತಿಹಾಸಿಕ ಆಕರ್ಷಣಾ ಸ್ಥಳಗಳಲ್ಲಿ ವಿದೇಶೀಯರಿಗೊಂದು ದರ / ದೇಶೀಯರಿಗೊಂದು ದರವೆಂದು ಭೇಧನೀತಿಯನ್ನು ಸಾರುತ್ತಿರುವುದು, ಹಂಪಿಯಲ್ಲಿನ ಗಲೀಜು, ಬೆಂಗಳೂರು ಬಾಲೆಯರ ಸ್ವೇಚ್ಛಾಚಾರ್‍ಅ, ಕೂರ್ಗ್ ನಲ್ಲಿ ಹೋಂ ಸ್ಟೇ ಎಂದು ಪಂಚತಾರಾ ಹೋಟೆಲ್ಲಿನ ಛಾರ್ಜು ಛಾರ್ಜಿಸುವ ಗತ್ತು, ’ಬಂದ್’ ಒಂದರಲ್ಲಿ ಸಿಲುಕಿ ಊಟಿ-ಮೈಸೂರು ಮಧ್ಯದಲ್ಲೆಲ್ಲೋ ವಿದೇಶೀಯನಾದ ತಾನು ರಾತ್ರಿ ವೀರಪ್ಪನ್ ನ ಭಯದಲ್ಲಿ ಕಾಲ ಕಳೆದಿದ್ದು ಮತ್ತವನನ್ನು ಹಿಡಿಯಲಾಗದ ಭಾರತ ಸರ್ಕಾರದ ಪೋಲೀಸರು, ಯಾವುದನ್ನೂ ವಿರೋಧಿಸದ ಸಾಮಾನ್ಯ ಜನತೆ...ಇತ್ಯಾದಿಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದನು.

ಹಾಗೆಯೇ ತಮ್ಮ ಈ ಸಂಶೋಧನೆಯಲ್ಲಿ ಭಾರತದ ರಾಜಕಾರಣಿಗಳ ಭ್ರಷ್ಟಾಚಾರವನ್ನು ಹತ್ತಿಕ್ಕಿಯೋ ಅಥವಾ ಅದನ್ನು ಆಫ್ ಸೆಟ್ ಮಾಡಿ ಈ ಮಟ್ಟವನ್ನು ಭಾರತವು ಹೇಗೆ ಮುಟ್ಟುವುದೆಂಬುದಕ್ಕೇನಾದರೂ ಪೂರಿತ ಅಂಶಗಳಿವೆಯೇ ಎಂದು ವಿಚಾರಿಸಿದನು. ಇದನ್ನೆಲ್ಲಾ ಕೇಳಿದ ಆ ಭಾರತೀಯ ಸಂಜಾತ ತನ್ನ ಅಂಕಿಆಂಶಗಳನ್ನು ತಲೆಕೆಳಗು ಮಾಡಿದ ಫ್ರ್ಯಾಂಕ್ ನ ವಾದದಿಂದ ಪೇಲವಗೊಂಡು ನಿರುತ್ತರನಾಗಿದ್ದ. ಕಡೆಗೆ ಫ್ರ್ಯಾಂಕ್, ಕ್ರಿ.ಶ. ೨೦೫೦ ಬಂದರೂ ಭಾರತವು ತನ್ನ ಪ್ರಜೆಗಳಿಗೆ ಒಂದೊಂದು ಪಾಯಿಖಾನೆಯನ್ನೂ ಕಟ್ಟಿಸಿಕೊಡಲಾಗದ ಸ್ಥಿತಿಯಲ್ಲಿಯೇ ಇರುತ್ತದೆಂದೂ, ತಾನು ಪ್ರತಿ ಸಾರಿ ಮುಂಬೈ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮುಂಜಾನೆ ಹಾರುವಾಗ ರನ್ ವೇ ಯ ಕೊನೆ ಭಾಗದ ಸಮೀಪದಲ್ಲಿಯೇ ಸಾಲು ಸಾಲಾಗಿ ಚಡ್ಡಿ ಬಿಚ್ಚಿ ಬೆಳಗಿನ ಬಹಿರ್ದೆಶೆಗೆ ಕುಳಿತ ಅಸಂಖ್ಯಾತ ಜನಗಳ ಆ ದೃಶ್ಯ ಈಗಲೂ ಕೂಡ ಹಾಗೆಯೇ ಇರುವುದನ್ನು ಹೇಳಿ ಮತ್ತೊಂದು ಬಿಯರ್ ಪಡೆಯಲು ಬಾರ್ ನೆಡೆಗೆ ನಡೆದ.

ಈ ಫ್ರ್ಯಾಂಕ್ ಮತ್ತು ನಾನು ಸುಮಾರು ಹತ್ತು ವರ್ಷಗಳಿಂದ ಸಹೋದ್ಯೋಗಿಗಳಾಗಿ, ಒಮ್ಮೊಮ್ಮೆ ಅವನಿಗೆ ನಾನು ಬಾಸ್ ಆಗಿಯೂ ಮಗದೊಮ್ಮೆ ಅವನು ನನಗೆ ಬಾಸ್ ಆಗಿಯೂ ಹಲವಾರು ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇವೆ. ಅಮೇರಿಕೆಯ ಜೀವನದ ಬಹು ಮಜಲುಗಳನ್ನು ನನಗೆ ಪರಿಚಯಿಸಿದ ಫ್ರ್ಯಾಂಕ್ ನಿಗೆ ನಾನೊಮ್ಮೆ ಭಾರತದಲ್ಲಿನ ಹೊರಗುತ್ತಿಗೆ ಪ್ರಾಜೆಕ್ಟ್ ನಿಭಾಯಿಸಲು ಕಳುಹಿಸಿದ್ದೆ. ಆಗ ಭಾರತದಾದ್ಯಂತ ಸುತ್ತಿ, ನನ್ನ ಅನೇಕ ಭಾರತದಲ್ಲಿನ ಸ್ನೇಹಿತರುಗಳನ್ನು ಭೇಟಿಸಿ, ಎಲ್ಲೆಡೆ ತಿರುಗಿ ಬಂದಿದ್ದ ಈ ಫ್ರ್ಯಾಂಕ್. ಹಾಗೆಯೇ ತಾನು ಉಳಿದುಕೊಂಡಿದ್ದ ಹೋಟೇಲಿನಲ್ಲಿ ನಿತ್ಯವೂ ಹಾಕುತ್ತಿದ್ದ ಭಾರತೀಯ ದಿನಪತ್ರಿಕೆಗಳನ್ನೂ ಓದಿದ್ದ. ಅವನ ಆ ದಿನಗಳ ಅನುಭವದ ನುಡಿಯೇ ಅವನ ಮೇಲಿನ ವಾದಕ್ಕೆ ಪುಷ್ಠಿ ನೀಡಿದ್ದವು. ಯಾರಾದರೂ ನಮ್ಮ ಸ್ನೇಹಿತರು ಬೆಂಗಳೂರಿನಲ್ಲಿ ಮನೆಯನ್ನೋ, ಸೈಟನ್ನೋ ಕೊಂಡೆವೆಂದು ಹೇಳಿದಾಗ ಅವರೆಲ್ಲ ಹುಚ್ಚರೆಂದು ಕರೆಯುವ ಫ್ರ್ಯಾಂಕ್ ಹಿಂದೊಮ್ಮೆ ಗೋವೆಯಲ್ಲೊಂದು ಬಾರ್ ಅನ್ನು ತೆರೆದು ವಿಶ್ರಾಂತ ಜೀವನ ನಡೆಸುವ ಯೋಜನೆಯಲ್ಲಿದ್ದು ತಾನು ವಾಪಸ್ ಬರುವುದಿಲ್ಲವೆಂದು ನನಗೆ ಈಮೈಲ್ ಮಾಡಿದ್ದ. ಆದರೆ ಭಾರತವನ್ನು ಪ್ರತ್ಯಕ್ಷ ದರ್ಶಿಸಿ ಪ್ರಮಾಣಿಸಿ ನೋಡಿದ ಮೇಲೆ ಜ್ಞಾನೋದಯಗೊಂಡು ’ಒಂದು ರಾಷ್ಟ್ರ ಎಷ್ಟೇ ಬಡವಾಗಿದ್ದರೂ ಅದರ ಪ್ರಜೆಗಳು ಪ್ರಾಮಾಣಿಕರಾಗಿ ದೇಶಭಕ್ತರಾಗಿದ್ದರೆ ಅದು ಮುಂದೊಂದು ದಿನ ಉನ್ನತಿಗೇರಿಯೇ ಏರುತ್ತದೆ. ಆದರೆ ಎಲ್ಲಿ ಜನರು ಅಪ್ರಮಾಣಿಕರೂ, ಭ್ರಷ್ಟರೂ ಆಗಿರುವರೋ ಆ ದೇಶ ಎಷ್ಟೇ ಉನ್ನತಿಯಲ್ಲಿದ್ದರೂ ಅದರ ಅವನತಿ ಕಟ್ಟಿಟ್ಟಿದ್ದೇ’ ಎಂದುಕೊಂಡು ತನ್ನ ತಾಯ್ನಾಡಾದ ಅಮೇರಿಕೆಯೇ ವಾಸಿಯೆಂದು ಭ್ರಮನಿರಸನಗೊಂಡು ಹಿಂದಿರುಗಿದ್ದ.

ಕೇವಲ ಕೆಲವಾರು ತಿಂಗಳು ಭಾರತದಲ್ಲಿ ಸುತ್ತಿ, ಅಲ್ಲಿನ ಪತ್ರಿಕೆಗಳನ್ನು ಓದಿ ಫ್ರ್ಯಾಂಕ್ ನು ಕಂಡುಕೊಂಡ ಭಾರತವು, ಭಾರತದಲ್ಲಿಯೇ ಹುಟ್ಟಿ ಬೆಳೆದ ನಮಗೇಕೆ ಹಾಗೆ ಕಾಣುವುದಿಲ್ಲವೋ?

ಅಣಕ:

ಹಿಂದೊಮ್ಮೆ ನನಗೆ ಫ್ರ್ಯಾಂಕ್ ನಂತೆಯೇ ಭಾರತದ ಇತಿಹಾಸ, ಹಿಂದೂ ಧರ್ಮವನ್ನು ಓದಿಕೊಂಡಿದ್ದ ಮೈಕೆಲ್ ಡಫ್ ಎಂಬ ಸಹೋದ್ಯೋಗಿಯೊಬ್ಬನಿದ್ದ. ನಮ್ಮ ಕಂಪೆನಿಯ ಮತ್ತೊಂದು ಡಿಪಾರ್ಟಮೆಂಟಿನಲ್ಲಿ ಮೃತ್ಯುಂಜಯ ಎಂಬ ಭಾರತೀಯ ಸಂಜಾತನೋರ್ವನಿದ್ದು ಅವನು ತನ್ನ ಹೆಸರನ್ನು ’ಮೃತ್’ ಎಂದು ತುಂಡರಿಸಿಕೊಂಡಿದ್ದ (ಕೃಷ್ಣಮಾಚಾರಿ ಕ್ರಿಸ್ ಆದಂತೆ). ಅದನ್ನು ನಾನೂ ಹೆಚ್ಚಾಗಿ ಗಮನಿಸದೆ ’ಮೃತ್’ ಎಂದೇ ಸಂಭೋಧಿಸುತ್ತಿದ್ದೆನು. ಆದರೆ ಈ ಮೈಕೆಲ್ ಒಮ್ಮೆ ತುಂಬಿದ ಸಭೆಯಲ್ಲಿ "ಭಾರತೀಯರು ತಮ್ಮ ಹೆಸರುಗಳನ್ನು ಹೆಚ್ಚು ವಿಶ್ಲೇಷಿಸದೆ ತುಂಡರಿಸಿಕೊಳ್ಳುವ ಹವ್ಯಾಸ ಎಷ್ಟು ಅನರ್ಥವಾಗಿರುತ್ತದೆಂದು ವರ್ಣಿಸಿತ್ತ ’ಮೃತ್ಯುವನ್ನು ಜಯಿಸಿ ಮೃತ್ಯುಂಜಯನಾಗೆಂದು ಹರಸಿ ಹೆಸರಿಟ್ಟರೆ, ನಮ್ಮ ಸಹೋದ್ಯೋಗಿ ಮಿತ್ರ ’ಮೃತ್’ ತನ್ನ ಹೆಸರಿನ ಅರ್ಥದ ತದ್ವಿರುದ್ಧವಾಗಿ ’ಡೆಡ್ ಮ್ಯಾನ್’ ಆಗಿರುವುದೂ ಒಂದು ಉದಾಹರಣೆ" ಎಂದು ನಮ್ಮ ’ಮೃತ್’ ನಿಗೆ ಮೃತ್ಯು ಸಂದೇಶವನ್ನು ಕೊಟ್ಟನು.

ಮೃತ್ಯುಂಜಯನು ’ಮೃತ’ನಾದದ್ದು ಅತ್ಯಂತ ಸಣ್ಣ ನಿರ್ಲಕ್ಷಿಸುವಂತಹ ಘಟನೆಯಾದರೂ ಅದರರ್ಥ ಸುಧೀರ್ಘವೂ ಅತ್ಯಂತ ಗಾಢವೂ ಆಗಿದೆಯೇನೋ ಎಂದಿನಿಸುತ್ತದೆ!

No comments: