ನಾನೇಕೆ ಬರೆಯುತ್ತೇನೆ?

೨೦೦೭ ಇನ್ನೇನು ಮುಗಿದು ೨೦೦೮ ಬರಲಿದೆ. ಹಾಗೆಯೇ ಕುಳಿತು ನನ್ನೆಲ್ಲ ಈ ವರ್ಷದ ಲೇಖನಗಳನ್ನೂ ಮತ್ತು ಸಹೃದಯೀ ಓದುಗರ ಓಲೆಗಳನ್ನು ಅವಲೋಕಿಸುತ್ತಿರುವಾಗ ಒಂದು ಗಮನಾರ್ಹ ವಿಚಾರವೊಂದು ನನ್ನ ಗಮನಕ್ಕೆ ಬಂತು. ನಿಮ್ಮೆಲ್ಲರಂತೆ ಭಾರತವನ್ನು ಅತೀವವಾಗಿ ಪ್ರ್‍ಈತಿಸುವ ನಾನು ಭಾರತವನ್ನು ಹೊಗಳದೇ ಅಲ್ಲಿನ ಹುಳುಕುಗಳನ್ನೇ ಕೆದಕಿ ಬರೆಯಲು ಕಾರಣವೇನೆಂದು ನನ್ನಲ್ಲೇ ಪ್ರ್‍ಅಶ್ನಿಸಿಕೊಂಡೆನು. ವ್ಯಾಪಾರೀ ಹಿನ್ನೆಲೆಯ, ಕೃಷಿ ಸಂಪರ್ಕದ, ಮಧ್ಯ ಕರ್ನಾಟಕದ ಪಟ್ಟಣವೊಂದರ, ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಜೀವನದ ಬಹುಸ್ತರಗಳನ್ನು ನೋಡುತ್ತ ಬೆಳೆಯುವ ಅವಕಾಶ ದೊರೆತಿತ್ತು. ಆಗೆಲ್ಲ ಪ್ರತಿಷ್ಟೆಯ ಶಾಲೆಗಳಿರದೆ ಎಲ್ಲಾ ವರ್ಗದ ಜನರೂ ಇದ್ದ ಕೆಲವೇ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಲಿಯಲು ಕಳಿಸಬೇಕಿತ್ತು. ಆ ಕಾರಣದಿಂದ ಭಾರತದ ಕೆಳವರ್ಗದಿಂದ ಮೇಲ್ವರ್ಗದ ಮಕ್ಕಳೆಲ್ಲರೊಂದಿಗೆ ಕಲೆತು ನಾನು ’ಏಕ ಕೊಠಡಿ ನಾಲ್ಕು ತರಗತಿ’ಗಳ ಶಾಲೆಗೆ ಹೋಗಿ, ತರಗತಿಯಲ್ಲಿ ಮೊದಲಿಗನೆನಿಸಿ, ಹೈಸ್ಕೂಲು ಸೇರಿದ ಮೇಲೆ ನನ್ನ ಸುತ್ತಲ ಬಾಹ್ಯ ಪ್ರಪಂಚವನ್ನು ಹೆಚ್ಚಾಗಿ ಗಮನಿಸುತ್ತ ಮತ್ತದರಿಂದ ಕಲಿಯುತ್ತ, ನಾಲ್ಕು ಗೋಡೆಗಳ ಮಧ್ಯದ, ಸೀಮಿತ ಪುಸ್ತಕಗಳ ಪಠ್ಯಶಾಸ್ತ್ರದಲ್ಲಿ ಆಸಕ್ತಿ ಕಳೆದುಕೊಂಡು ಎಸ್.ಎಸ್.ಎಲ್.ಸಿ ಫೇಲಾಗಿ, ಕೃಷಿ ಮಾರುಕಟ್ಟೆಯೊಂದರಲ್ಲಿ ರೈತರು, ಹಮಾಲರು, ದಲಾಲರು, ಖರೀದಿದಾರರೊಂದಿಗೆ ವ್ಯವಹರಿಸಿ ಮತ್ತೆ ನಂತರ ವಿದ್ಯಾಭ್ಯಾಸ ಮುಂದುವರಿಸಿ, ನನ್ನ ಪರಿಸರದಲ್ಲಿ ವಾಸಿಸುವ ರೈತಾಪಿಗಳು, ವರ್ತಕರು, ಮಾರ್ವಾಡಿಗಳು, ಅಕ್ಕಸಾಲಿಗರು, ಹಮಾಲರು, ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕ ಮಹಿಳೆಯರು....ಈ ಎಲ್ಲ ವರ್ಗಗಳ ಜನ ಮತ್ತವರ ಜೀವನವನ್ನು ನೋಡಿ ಕಲಿಯುತ್ತ, ನನ್ನ ಪಠ್ಯಗಳಲ್ಲಿ ಎಡರುತ್ತ ತೊಡರುತ್ತ ನನ್ನ ಇಂದಿನ ಮಟ್ಟವನ್ನು ತಲುಪಿರುವ ನನಗೆ ನನ್ನೆಲ್ಲಾ ಆ ಸೋಲು ಗೆಲುವುಗಳು ಒಳ್ಳೆಯ ಜೀವನಾನುಭವವನ್ನು ಒದಗಿಸಿರುವುದು ಮತ್ತು ನಾ ಕಂಡ ಆ ಎಲ್ಲಾ ವರ್ಗದ ಜನರು ಇನ್ನೂ ಹಾಗೆಯೇ ಇರುವುದೂ ಕಾರಣವೆಂದುಕೊಳ್ಳುತ್ತೇನೆ!

ಊರ ಹೊರಗೆ ಬಡಾವಣೆಗಳಾಗುವುದು, ಹಳೆ ಮನೆಗಳನ್ನು ಕೆಡವಿ ಹೊಸದನ್ನು ಕಟ್ಟುವುದು, ಮೂಲಂಗಿ ಪ್ಯಾಂಟ್ ಹೋಗಿ ಬೆಲ್ ಬಾಟಮ್ ಪ್ಯಾಂಟ್ ಬಂದು ನಂತರ ಬ್ಯಾಗಿ ಆಗುವುದು, ಈ ಎಲ್ಲ ಬದಲಾವಣೆಗಳು ನಿರಂತರ. ಕಾಲಚಕ್ರ ಉರುಳಿದಂತೆ ಈ ಎಲ್ಲ ಬದಲಾವಣೆಗಳಾಗುವುದು ಸರ್ವೇಸಾಮಾನ್ಯ. ಇದರಲ್ಲಿ ಹೊಸತೆನ್ನಿಸಿಕೊಳ್ಳುವಂತಹುದೇನೂ ಇಲ್ಲವೆಂದೇ ನನ್ನ ಅನಿಸಿಕೆ. ಆದರೆ ಇದೇ ಬದಲಾವಣೆಯನ್ನೇ ಭಾರತದ ಉನ್ನತಿಯೆಂಬಂತೆ ತೋರುವುದನ್ನು ನಾನು ಒಪ್ಪುವುದಿಲ್ಲ. ಭಾರತದ ಜನಸಂಖ್ಯೆಯ ಶೇಕಡಾ ೦.೬% ಇರುವು ಐ.ಟಿ ಉದ್ಯೋಗಿಗಳ ಉನ್ನತಿಯನ್ನೇ ಭಾರತದ ಉನ್ನತಿಯೆಂದು ಅದು ಹೇಗೆ ಹೇಳಲಾಗುತ್ತಿದೆಯೋ ನಾನರಿಯೆ.

ಬೆಂಗಳೂರಿನ ಫ್ಲೈಓವರ್ ಗಳು, ಮಾಲುಗಳು, ಬಡಾವಣೆಗಳನ್ನು ಉದಾಹರಿಸಿ ಬೆಂಗಳೂರು ಅಮೇರಿಕಾ ಎನಿಸಿತೆಂದು ಬರೆಯುವವರಿಗೆ ಆ ಫ್ಲೈಓವರ್ ಕೆಳಗೆ ಕಣ್ಣಿಗೆ ರಾಚುವಂತೆ ಕಾಣುವ ನಿರ್ಗತಿಕರಾಗಲಿ, ದೇಹದ ಬಜಾರಾಗಲಿ; ಮಾಲುಗಳ ಹೊರಗೆ ಭಿಕ್ಷುಕ ಮಕ್ಕಳು ಮೈಮುಟ್ಟಿ, ಕಾಲು ಹಿಡಿದು ಭಿಕ್ಷೆ ಬೇಡುವುದಾಗಲಿ; ಈ ಬಡಾವಣೆಗಳಲ್ಲಿ ವಿಕೃತವಾಗಿ ಕತ್ತು ಕುಯ್ದು ದರೋಡೆಗಳಾಗುತ್ತಿರುವುದಾಗಲಿ ಕಾಣುವುದೇ ಇಲ್ಲ. ಈ ಐ.ಟಿ/ಬಿ.ಟಿ. ಉದ್ಯೋಗಿಗಳ ಸಂಬಳವೇ ಬೆಂಗಳೂರಿಗರೆಲ್ಲರ ಸಂಬಳವೆಂದು ಬಗೆದು ಸಾಮಾನ್ಯ ದರ್ಶಿನಿ ಹೋಟೇಲುಗಳು ತಮ್ಮ ತಿಂಡಿಗಳ ಬೆಲೆಯನ್ನು ನಿಗದಿ ಪಡಿಸಿರುವುದು, ಅಲ್ಲಿನ ಬಿಗ್ ಬಜಾರೊ ಫೋರ್ಂ ವೊ, ಅಥವ ಇನ್ಯಾವುದೋ ಅಂಗಡಿಗಳಲ್ಲಿ ಪೇರಿಸಿಟ್ಟಿರುವ ತರಕಾರಿಗಳನ್ನು ಹೊಗಳುವ ಈ ಮಂದಿಗೆ ನಿತ್ಯ ನಮ್ಮ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಗೊತ್ತೇ ಇಲ್ಲದಂತಿರುವುದು, ಕಾಫಿ ಡೇ ನಲ್ಲಿ ಐವತ್ತು ರೂಪಾಯಿ ತೆತ್ತು ಕಾಫಿ ಕುಡಿದು ಒಳಗೇ ನೊಂದುಕೊಂಡರೂ ’ವ್ಹಾ, ಅಮೇರಿಕಾ ತರಹವಿದೆ’ ಎಂದು ಸೋಗಲಾಡಿಗಳಾಗುವುದು. ಯಾವೊತ್ತೋ ಸತ್ತಿರುವ ಮೌಲ್ಯಗಳು, ಲಂಚವನ್ನು ಒಪ್ಪಿಕೊಂಡಿರುವ ಸಮಾಜ, ’ಬಾಯಲ್ಲಿ ಗುಟ್ಕಾ, ಕೈಯಲ್ಲಿ ಜಟ್ಕಾ’ ಎಂದು ಶಕ್ತಿಗುಂದಿದ ಯುವಜನತೆ, ಇದೆಲ್ಲವನ್ನು ಕಂಡೂ ಕಾಣದಂತಿರಲು ನನಗೆ ಸಾಧ್ಯವೇ ಆಗುವುದಿಲ್ಲ. ಭಾರತ ಒಂದು ಹೆಜ್ಜೆ ಮುಂದೆ ಹೋದರೆ ಅದನ್ನು ನೂರು ಹೆಜ್ಜೆ ಹಿಂದಿಕ್ಕುವಷ್ಟು ಈ ವೈಪರೀತ್ಯಗಳು ಬೆಳೆಯುತ್ತಿರುವ ಬದಲಾವಣೆಯನ್ನೇ ಉನ್ನತಿಯೆಂದುಕೊಳ್ಳಲು ಅದು ಹೇಗೆ ಸಾಧ್ಯವೋ ನಾ ಕಾಣೆ!

ಈಗಂತೂ ನನ್ನ ಆ ಪರಿಸರದ ಜನಜೀವನ ಇನ್ನಷ್ಟೂ ದುಸ್ತರವಾಗಿದೆ. ಖರೀದಿದಾರರು ನೇರ ರೈತರೊಂದಿಗೆ ಸಂಪರ್ಕ ಹೊಂದಿ ತಮ್ಮ ಖರೀದಿ ವಹಿವಾಟು ನಡೆಸುತ್ತಿರುವುದರಿಂದ, ಕೊಬ್ಬಿದ ಗೂಳಿಯಂತಿರುತ್ತಿದ್ದ ದಲಾಲಿ ಮಂಡಿ ಸಾಹುಕಾರರುಗಳು ನಿರ್ಗತಿಕರಾಗಿದ್ದಾರೆ. ಈ ದಲಾಲಿ ಮಂಡಿಗಳನ್ನು ನೆಚ್ಚಿಕೊಂಡಿದ್ದ ಹಮಾಲರು, ಜಿನ್ನಿಂಗ್ ಫ್ಯಾಕ್ಟರಿಗಳು ಮುಚ್ಚಿ, ಅಲ್ಲಿನ ಕಾರ್ಮಿಕರು ನೆಲೆ ಕಳೆದುಕೊಂಡು ದಿಕ್ಕೆಟ್ಟು ಹೋಗಿದ್ದಾರೆ. ಅದೇ ರೀತಿ ಒಂದೊಮ್ಮೆ ಕೈತುಂಬ ದುಡಿಯುತ್ತಿದ್ದ ಟೈಲರ್ ಗಳು ರೆಡಿಮೇಡ್ ಬಟ್ಟೆಗಳ ಭರಾಟೆಯಲ್ಲಿ ಬೇರೆ ಕೆಲಸ ಅರಿಯದೆ ಖಿನ್ನಮನಸ್ಕರಾಗಿದ್ದಾರೆ. ಅದೇ ರೀತಿ, ಬಟ್ಟೆ ವ್ಯಾಪಾರಸ್ತರು, ಮಾರ್ವಾಡಿಗಳು, ಗಿರ್ವಿ ಅಂಗಡಿಕಾರರು, ದಿನಸಿ ಅಂಗಡಿಕಾರರು, ಗೂಡಂಗಡಿಯವರು, ರೈತರು, ಚೀಲ ಹೊಲಿಯುವವರು ಮುಂತಪ್ಪು ಉದ್ಯೋಗ ವ್ಯವಹಾರಗಳಲ್ಲಿದ್ದ ಜನ ದಿಕ್ಕೇ ತೋಚದೆ ನಡೆಸಿದಂತೆ ನಡೆಯುತ್ತಿದ್ದಾರೆ. ಭಾರತದ ಬಹುಪಾಲು ಜನಸಂಖ್ಯೆ ಈ ವರ್ಗದ ಜನರಾಗಿರುವಾಗ, ಮತ್ತವರ ಜೀವನ ಇನ್ನಷ್ಟೂ ದುಸ್ತರವಾಗಿರುವಾಗ ಅದು ಹೇಗೆ ಭಾರತ ಉನ್ನತಿಯ ಶಿಖರದಲ್ಲಿದೆಯೋ? ಭಾರತದ ಸ್ಟಾಕ್ ಮಾರ್ಕೆಟ್ ನ ಸೂಚಕಕ್ಕೂ ಈ ಜನಸಾಮಾನ್ಯರ ಜೀವನಕ್ಕೂ ಯಾವುದೇ ತಾಳೆಯಿಲ್ಲದೆ ಇರುವಾಗ ಅದು ಹೇಗೆ ಭಾರತದ ಉನ್ನತಿಯ ಮಾಪಕವಾಗಿದೆಯೋ ಅರ್ಥಶಾಸ್ತ್ರಜ್ಞರೇ ಹೇಳಬೇಕು!

ಆದರೆ ನಮ್ಮೂರಲ್ಲಿ ಇದೇ ರೀತಿಯ ಶ್ರೀಸಾಮಾನ್ಯನೊಬ್ಬ ರಾಜಕೀಯಕ್ಕಿಳಿದು, ಹಸ್ತದ ಪಕ್ಷದ ರಾಜ್ಯ ಯುವ ಸಮಿತಿಯ ಮಸ್ತಕನಾಗಿ, ಮುಂದೇ ಕೊರಮಸಾಗರದ ಎಂ.ಎಲ್.ಎ ಕೂಡಾ ಆಗಿ, ಕೋಟಿ, ಕೋಟಿಗಳ ಆಸ್ತಿ ಮಾಡಿದ್ದಾನೆ. ನಾ ಕಂಡ ಹಾಗೆಯೇ ರೂಂ ಬಾಯ್ ಆಗಿದ್ದ ಈ ಜನನಾಯಕರು ಇಂದು ಕೋಟ್ಯಾಧೀಶರಾಗಿದ್ದಾರೆ. ಈ ರೀತಿಯ ಉನ್ನತಿಗಳನ್ನೇ ನಾನು ಕಾಣುತ್ತಿರುವುದು.

ನಾನು ಒಮ್ಮೊಮ್ಮೆ ಯೋಚಿಸುತ್ತೇನೆ ಏಕೆ ನಾನೂ ಕೂಡ ಕೆಲ ಎನ್ನಾರೈಗಳಂತೆ ’ಕನ್ನಡ ಕೂಟದಲ್ಲಿ ವನಭೋಜನ’, ’ಬೆಂಗಳೂರು ಬದಲಾಗಿದೆ’, ’ನಮ್ಮೂರಲ್ಲಿ ಸಖತ್ ಮುಂಗಾರುಮಳೆ’, ಚಿತ್ರಾನ್ನ ಘಮಗುಟ್ಟಿಸುವುದು ಹೇಗೆ, ಉಪ್ಪಿಟ್ಟು ಕೆಡಿಸುವುದು ಹೇಗೆ ಎಂದು ’ಅದಪ್ಪಾ ಕನ್ನಡ’ದಲ್ಲಿ ಬರುವ ಲೇಖನಗಳಂತೆ ಬರೆಯಬಾರದೆಂದು; ಹಾಗೆ ಬರೆದ ಲೇಖನಗಳನ್ನೇ ಒಟ್ಟುಗೂಡಿಸಿ ಒಂದು ಚೆಂದದ ಪುಸ್ತಕವನ್ನಾಗಿ ಪ್ರಕಟಿಸಿ ನನ್ನ ಮನೆಗೆ ಬಂದು ಹೋಗುವ ಗೆಳೆಯರಿಗೆಲ್ಲ ನನ್ನ ಒಂದೊಂದು ಪುಸ್ತಕವನ್ನು ಕೊಟ್ಟು ನಾನು ಕೂಡ ಕನ್ನಡ ಸಾಹಿತಿಯಾದೆನೆಂದು ಬೀಗಿ ಧನ್ಯನಾಗಬಾರದೆಂದು; ಅವರೆಲ್ಲರಿಗಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವುದಾದರೂ ಪ್ರಶಸ್ತಿಗೆ ಎನ್ನಾರೈ ಕೋಟಾದಲ್ಲಿ ಅರ್ಜಿ ಗುಜರಾಯಿಸಿ, ಇಲ್ಲಿನ ಕನ್ನಡ ಸಮ್ಮೇಳನಗಳಿಗೆ ಬರುವ ಸಾಹಿತಿಗಳನ್ನು, ರಾಜಕಾರಣಿಗಳನ್ನು ಇಲ್ಲಿನ ದೇವತಾ ಪ್ಲಾಜಾ (ಇಲ್ಲಿನ ’ಸ್ಟ್ರಿಪ್ ಕ್ಲಬ್’ಗಳಿಗೆ ನನ್ನ ಸ್ನೇಹಿತರಾದ ಮಂಜು ಕರೆಯುವಂತೆ)ಗಳಿಗೆ ಕರೆದೊಯ್ದು, ಸರ್ವ ವರ್ಣೀಯರ ಅಂಗರಚನೆಯ ಮಾನ(ವ)ಶಾಸ್ತ್ರದಲ್ಲಿ ತೀವ್ರ ಕುತೂಹಲಿಗಳಾಗಿರುವ ಈ ಕಥಾನಾಯಕರು, ಜನನಾಯಕರುಗಳಿಗೆ ಅದರ ಮರ್ಮವನ್ನು ಪ್ರತ್ಯಕ್ಷವಾಗಿ ತೋರಿ ಅವರನ್ನು ನನ್ನ ಮರ್ಜಿಗೆ ಹಿಡಿದು ಪ್ರಶಸ್ತಿ ಗಿಟ್ಟಿಸಬೇಕೆಂದು.

ಬಹುಶಃ ೨೦೦೮ರಿಂದ ಹಾಗೆ ಬರೆಯಲು ಪ್ರಯತ್ನಿಸುತ್ತೇನೆ!

ಹಾಂ ಮರೆತಿದ್ದೆ, ಇನ್ನೊಂದು ಸಂಗತಿ, ನಾನು ಇನ್ನು ಒಂದು ತಿಂಗಳ ಕಾಲ ರಜೆಯ ಮೇಲೆ ವನಭೋಜನ ಮಾಡುತ್ತ, ಹಿಂಗಾರುಮಳೆಯಲ್ಲಿ ನೆನೆಯುತ್ತ, ಚಿತ್ರಾನ್ನ / ಉಪ್ಪಿಟ್ಟುಗಳ ಮೇಯುತ್ತ ಸೆಲ್ ಫೋನ್, ಇಂಟರ್ ನೆಟ್ ಇರದ ಕಗ್ಗಾಡುಗಳಲ್ಲಿ ತಿರುಗುತ್ತಿರುತ್ತೇನೆ. ಜನೆವರಿ ೧೫ ರ ನಂತರ ಮತ್ತೆ ಈ ಎಲ್ಲ ರಂಗಿನನುಭವಗಳೊಂದಿಗೆ ಮರಳಿ ಬರೆಯುತ್ತೇನೆ. ಹೊಸ ವರ್ಷ ನಿಮಗೆಲ್ಲರಿಗೂ ಶುಭವನ್ನು ತರಲೆಂದು ಕೋರುತ್ತಾ... ಧನ್ಯವಾದ.

ಅಣಕ

ಹಿಂದೊಮ್ಮೆ ಒಬ್ಬ ರಾಜಕಾರಣಿಯೋರ್ವರ ಸಂಪರ್ಕದಲ್ಲಿದ್ದೆ. ಆಗ ’ತರಂಗ’ ಪತ್ರಿಕೆಯಲ್ಲಿ ಏಪ್ರಿಲ್ ಫೂಲ್ ಅಂಗವಾಗಿ ’ಕಪ್ಪುಹಣವನ್ನೆಲ್ಲ ಬಿಳಿಯಾಗಿ ಪರಿವರ್ತನೆ’ ಎಂಬ ಕುಹಕ ಲೇಖನವೊಂದು ಬಂದಿತ್ತು. ಲೇಖಕರು ಅದನ್ನು ಅಂದಿನ ಹಣಕಾಸು ಸಚಿವರು ಕಪ್ಪುಹಣವನ್ನೆಲ್ಲಾ ಬಿಳಿಯಾಗಿ ಪರಿವರ್ತಿಸಿ ಕಪ್ಪುಹಣದ ಪೆಡಂಭೂತವನ್ನು ನಿವಾರಿಸಲು ಎಲ್ಲ ಸಿದ್ಧತೆಗಳಾಗಿದ್ದು, ಮುಂದಿನ ಎರಡು ತಿಂಗಳಲ್ಲೇ ಅದನ್ನು ಜಾರಿಗೊಳಿಸುವುದಾಗಿ ಹೇಳಿದಂತೆ ಬರೆದಿದ್ದರು. ಓದಿದವರಿಗೆ ಅದು ಕುಹಕವೆಂದು ತಿಳಿಯದಂತೆ ಎಚ್ಚರದಿಂದ ಬರೆದಿದ್ದ ಆ ಲೇಖನವನ್ನು ಓದಿ ಖುಷಿಗೊಂಡ ನನ್ನ ರಾಜಕಾರಣಿ ಗುರುಗಳು ಅಂದಿನ ಒಂದು ಸಾರ್ವಜನಿಕ ಸಭೆಯಲ್ಲಿ ಅದನ್ನು ತಮ್ಮ ಪಕ್ಷದ ಸಾಧನೆಯೆಂದು, ಕಪ್ಪುಹಣವೆಲ್ಲ ಬಿಳಿಯಾಗಿ ಅದು ಅನೇಕ ಉದ್ಯಮಗಳಲ್ಲಿ ಹರಿದು, ಭಾರೀ ಉದ್ಯೋಗಗಳನ್ನು ಸೃಷ್ಟಿಸುತ್ತದೆಯೆಂದು ಭಾಷಣವನ್ನು ಮಾಡಿಯೇಬಿಟ್ಟರು!

ನಾನು ಅವರ ಭಾಷಣದ ನಂತರ ನಿಜ ವಿಚಾರವನ್ನು ಹೇಳಿದಾಗ ಕೊಂಚ ವಿಚಲಿತಗೊಂಡರೂ, ’ಅದೇನು ಆಗಲ್ಲ ಬಿಡು. ನೀನಿನ್ನು ಪಿ.ಯು.ಸಿ. ಹುಡುಗ, ನಿನಗಿದೆಲ್ಲ ಗೊತ್ತಾಗಲ್ಲ’ ಎಂದು ಬುದ್ಧಿ ಹೇಳಿದರು!

1 comment:

samanvitha said...

I am ROFLMAO-ing here..at your comments about "idaa Kannada"..my thoughts precisely..
it's indeed an irony that your blog is featured in a website which is rightly following the footsteps of that doomed tabloid