ಜಾತ್ಯಾತೀತತೆಯಲ್ಲಿ ಜಾತಿಪೀಠಗಳು!

ಮತ್ತೊಂದು ಜಾತಿ ಪೀಠ ಅಸ್ತಿತ್ವಕ್ಕೆ ಬರುತ್ತಿದೆ! ಇರುವ ಐದು ವೀರಶೈವ ಪೀಠಗಳನ್ನು ಧಿಕ್ಕರಿಸಿ, ಮತ್ತೊಂದು ಪೀಠ ಬೇಕೆಂದು ವೀರಶೈವ ಪಂಚಮಸಾಲಿ ಜನಾಂಗವು ಆರನೇ ಪೀಠವನ್ನು ಸ್ಥಾಪಿಸುತ್ತಿದೆ. ಕೇವಲ ಧಾರ್ಮಿಕತೆಗಾಗಿ ಶತಮಾನಗಳ ಹಿಂದೆ ಸ್ಥಾಪಿತಗೊಂಡಿದ್ದ ಈ ಪಂಚಪೀಠಗಳು ಇಂದು ಅವಶ್ಯಕವಾಗಿರುವ ರಾಜಕೀಯ ’ಪವರ್ ಹೌಸ್’ ಆಗದೇ ಇರುವುದೇ ಈ ಆರನೇ ಪೀಠವನ್ನು ಅಸ್ತಿತ್ವಕ್ಕೆ ತರುತ್ತಿದೆ. ಪ್ರಸ್ತುತ ವಿದ್ಯಾಮಾನದಲ್ಲಿ ಈ ಪೀಠಗಳ ಗುರುಗಳು ಕೇವಲ ಧರ್ಮ, ಧರ್ಮಾಚರಣೆಗಳನ್ನು ಭೋಧಿಸುವುದನ್ನು ಒಪ್ಪದ ಶಿಷ್ಯರು, ತಮ್ಮ ಗುರುಗಳು ಲಾಬಿಯಿಸ್ಟ್ ಗಳಾಗಬೇಕೆಂದು ಆದೇಶಿಸುತ್ತಿದ್ದಾರೆ! ಒಪ್ಪದಿದ್ದರೆ ಅವರನ್ನೇ ಧಿಕ್ಕರಿಸಿ ಮತ್ತೊಂದು ಪೀಠವನ್ನು ಸ್ಥಾಪಿಸಿ ತಮ್ಮ ತಾಳಕ್ಕೆ ಕುಣಿಯುವ ಗುರುವನ್ನು ಪ್ರತಿಷ್ಟಾಪಿಸುತ್ತಿದ್ದಾರೆ.

ಇತ್ತೀಚಿನವರೆಗೆ ಸಕ್ರಿಯ ರಾಜಕಾರಣದಲ್ಲಿ ಯಾವತ್ತೂ ಪಾಲ್ಗೊಳ್ಳದೆ ತಮ್ಮ ತಮ್ಮ ಧಾರ್ಮಿಕ ವಿಧಿ, ಆಚರಣೆಗಳೊಂದಿಗೆ ಸಾರ್ವಜನಿಕ ಶಿಕ್ಷಣ ಸೇವೆಯನ್ನು ಮಾಡುತ್ತ ತಟಸ್ಥವಾಗಿದ್ದ ವೀರಶೈವ ಮತ್ತು ಬ್ರಾಹ್ಮಣ ಮಠಗಳು ಅಸ್ಥಿತ್ವಕ್ಕೆ ಬಂದಿದ್ದುದೇ ತಮ್ಮ ತಮ್ಮ ಧರ್ಮಗಳ ವಿಧಿವಿಧಾನಗಳನ್ನು ತಮ್ಮ ಜನಾಂಗಕ್ಕೆ ಭೋಧಿಸಲು. ಆದರೆ ಅದ್ಯಾವ ಮಹಾನುಭಾವೀ ಪವಾಡಪುರುಷ ಸಾಮಾಜಿಕ, ರಾಜಕೀಯ, ಜನಾಂದೋಲನಕ್ಕೆ ಜಾತಿ ಪೀಠಗಳು ಅವಶ್ಯಕವೆಂದು ಕಂಡುಕೊಂಡನೋ ಗೊತ್ತಿಲ್ಲ! ಪ್ರತಿಯೊಂದು ಜಾತಿಗಳಿಗೂ ಪೀಠಗಳಾಗಿ ಇಂದು ಉಪಜಾತಿಗಳೂ ಪೀಠಗಳನ್ನು ಸ್ಥಾಪಿಸುತ್ತಿವೆ. ಹಿಂದೆಂದೂ ಕೇಳರಿಯದಿದ್ದ ಜಾತಿಗಳು ಇಂದು ಜನರ ನಾಲಿಗೆ ಮೇಲೆ ನಲಿದಾಡುತ್ತಿವೆ. ಹಿಂದೆಲ್ಲ ಕೇವಲ ಲಿಂಗಾಯಿತ, ಒಕ್ಕಲಿಗ, ದಲಿತ, ಮುಸ್ಲಿಂ ಎಂದು ಕೇಳುತ್ತಿದ್ದ ನಾವುಗಳು ಇಂದು ಅವುಗಳ ಉಪಜಾತಿಗಳ ಪೂರ್ಣ ಪರಿಚಯವಿದ್ದಂತೆ ಮಾತನಾಡುತ್ತಿದ್ದೇವೆ. ಒಕ್ಕಲಿಗರಲ್ಲಿ ಮುಳ್ಳು ಒಕ್ಕಲಿಗ, ಗಂಗಡಿಕಾರ ಒಕ್ಕಲಿಗ ಎಂದು, ವೀರಶೈವರಲ್ಲಿ ಜಂಗಮ, ಪಂಚಮ, ಸಾಧು, ಬಣಜಿಗ, ನೊಣಬ (ಇದರಲ್ಲಿ ಮೂರು ದಿನದವರು ಮತ್ತು ಏಳು ದಿನದವರು ಎಂದು ಪುನರ್ವಿಂಗಡನೆಯಿದೆ)...ಎಂದೂ, ದಲಿತರಲ್ಲಿ ಎಡಗೈ, ಬಲಗೈ ಎಂದೂ, ಮುಸ್ಲಿಮರಲ್ಲಿ ಷಿಯಾ, ಸುನ್ನಿಯೊಂದಿಗೆ ಕರ್ನಾಟಕದ ನವಾಯಿತ, ಪಿಂಜಾರ,ಖಾಂದಾನಿ...ಇನ್ನು ಏನೇನೋ ಜಾತಿಗಳು ಮುಖ್ಯವಾಹಿನಿಯಲ್ಲಿ ಕೇಳಿಬರುತ್ತಿವೆ.

ಚಿತ್ರದುರ್ಗದ ಸ್ವಾಮಿಯೋರ್ವರು ತಮ್ಮನ್ನು ಬಸವಣ್ಣನ ಅಪರಾವತಾರವೆಂದೇ ಬಗೆದು ಇಂದು ಈ ಜಾತಿಗಳಿಗೆಲ್ಲ ಒಂದೊಂದು ಪೀಠಗಳನ್ನು ಸ್ಥಾಪಿಸಿಕೊಡುತ್ತಿದ್ದಾರೆ. ಈ ಪೀಠಗಳ ಕೆಲ ಸ್ಯಾಂಪಲ್ ಗಳು ಹೀಗಿವೆ.. ಛಲವಾದಿ ಪೀಠ, ಮಾದಾರ ಚೆನ್ನಯ್ಯ ಪೀಠ, ಭೋವಿ ಪೀಠ, ಬಂಜಾರ ಪೀಠ, ಉಪ್ಪಾರ ಪೀಠ, ಪಿಂಜಾರ ಪೀಠ, ಸವಿತಾ ಪೀಠ, ಬೇಡರ ಪೀಠ, ಬೇಕಾದವರ ಪೀಠ!

ಈ ಪೀಠಗಳ ಘನ ಉದ್ದೇಶವೇನು ಬಲ್ಲಿರಾ? ತಮ್ಮ ತಮ್ಮ ಜನಾಂಗದವರಿಗೆ ಆಗುತ್ತಿರುವ ಸಾಮಾಜಿಕ, ರಾಜಕೀಯ ಅನ್ಯಾಯವನ್ನು ಸರಿಪಡಿಸುವುದು. ಸರಿಪಡಿಸುವುದೆಂದರೆ ಹೇಗೆ ಗೊತ್ತೆ? ಪೀಠಸ್ಥಾಪನೆಗೆ ಮುನ್ನ ಸರ್ಕಾರದಿಂದ ಪೀಠಕ್ಕೆ ಬೇಕಾದ ಸ್ಥಳಕ್ಕಾಗಿ ನೂರಾರು ಎಕರೆ ಜಮೀನು ಪಡೆದುಕೊಳ್ಳುವುದು; ಪೀಠಸ್ಥಾಪನೆಯಾದ ಕೂಡಲೇ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಪೀಠಕ್ಕೊಂದು ಆದಾಯದ ಮೂಲವನ್ನು ಮಾಡಿಕೊಳ್ಳುವುದು; ನಂತರ ಪಟ್ಟಕ್ಕೇರಿದ ಪೀಠಿಗಳು ತಮ್ಮ ಸ್ವಜಾತೀ ಖದೀಮರಿಗೆ ಅವಶ್ಯಕವಾದ ರಾಜಕೀಯ ಪಕ್ಷಗಳ ಟಿಕೆಟ್ ಲಾಬಿ, ಟ್ರಾನ್ಸಫರ್ ಲಾಬಿ, ಅವಾರ್ಡ್ ಲಾಬಿ ಇನ್ನು ಮುಂತಾದ ಲಾಬಿಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದು; ತಮ್ಮ ಜನಾಂಗದಲ್ಲಿರುವ ರಾಜಕೀಯ ನಾಯಕರುಗಳ, ಅಧಿಕಾರಿಗಳ ಭ್ರಷ್ಟಚಾರದ ಹಣಕ್ಕೆ ’ಸೇಫ್ ಡಿಪಾಸಿಟ್ ಲಾಕರ್’ ಆಗಿ ಮಠವನ್ನು ತೆರೆದಿಡುವುದು; ಮತ್ತವರ ಮಂತ್ರಿಗಿರಿ, ಪ್ರಮೋಷನ್ ಗಳಿಗೆ ’ಪವರ್ ಬ್ರೋಕರ್’ ಗಳಾಗಿ ಈ ಪೀಠಾಧೀಶ್ವರರು ಸಂಪೂರ್ಣ ಒನ್-ಸ್ಟಾಪ್ ಶಾಪ್ ಆಗಿ ಸೇವಾ ಕೈಂಕರ್ಯದಲ್ಲಿ ತೊಡಗಿಕೊಳ್ಳುವರು! ಒಂದು ವಿಧದಲ್ಲಿ ಮೆಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿ ಅಥವಾ ವಿಧಾನಸೌಧದ ಆಜುಬಾಜಿನಲ್ಲಿ ತಲೆಹಿಡಿಯುತ್ತಾರಲ್ಲ ಅವರಂತೆಯೇ, ಆದರೆ ಸ್ವಲ್ಪ ಹೈಟೆಕ್ ಮಾದರಿಯಲ್ಲಿ, ಜಾತಿ ಕವಚದ ಶ್ರೀರಕ್ಷೆಯಲ್ಲಿ!

ಬರೀ ಇದನ್ನೇ ಮಾಡಿದರೆ ಹೇಗೆ? ಸಾರ್ವಜನಿಕವಾಗಿಯೂ ಸ್ವಲ್ಪ ಹೆಸರು ಮಾಡಬೇಡವೇ? ಅದಕ್ಕಾಗಿಯೇ ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅವ್ಯಾವುವೆಂದರೆ ಗೋಶಾಲೆಗಳ ನಿರ್ಮಾಣ, ಔಷಧೀಯ ಸಸ್ಯಗಳ ವನ ನಿರ್ಮಾಣ, ಕನ್ನಡ ಹೋರ್‍ಆಟ, ವಿಧವಾ ವಿವಾಹ, ಸಾಮೂಹಿಕ ವಿವಾಹ, ಪ್ರೇಮಿಗಳನ್ನು ಒಗ್ಗೂಡಿಸುವುದು...ಇನ್ನು ಮುಂತಾದ ಕಾರ್ಯಗಳಿಂದ ಆಗಾಗ್ಗೆ ಪತ್ರಿಕೆಗಳಲ್ಲಿ ಅನಾವರಣಗೊಂಡು ಭಕ್ತ ಮಂಡಳಿಯನ್ನು ಸಂತೃಪ್ತಿಗೊಳಿಸುವುದು.

ಸುಮ್ಮನೇ ಗಮನಿಸಿ ನೋಡಿ! ಯಾವ ರಾಜಕೀಯ ಧುರೀಣನಿಗೂ ಕಡಿಮೆ ಇಲ್ಲದಂತೆ ಈ ಜಾತಿ ಪೀಠಿಗಳ ಹೋರ್ಡಿಂಗ್ ಗಳು, ಪೋಸ್ಟರ್ ಗಳು ಆಗಾಗ್ಗೆ ನಿಮ್ಮ ಕಣ್ಣಿಗೆ ರಾಚುವಂತೆ ಕರ್ನಾಟಕದ ಉದ್ದಗಲಕ್ಕೆ ರಾರಾಜಿಸುತ್ತವೆ! ಅಷ್ಟೇ ಅಲ್ಲ, ಇತ್ತೀಚೆಗೆ ನಡೆಯುವ ಯಾವುದೇ ಸಾಮಾಜಿಕ, ರಾಜಕೀಯ, ಸಿನಿಮಾ, ಸಾಹಿತ್ಯ, ಜನಾಂದೋಲನ ಸಾರ್ವಜನಿಕ ಸಭೆಗಳಿರಲಿ, ಈ ಪೀಠಾಧಿಪತಿಗಳು/ಮಠಪತಿಗಳು ವಿಶೇಷ ಅತಿಥಿಗಳಾಗಿ ಆಹ್ವಾನಿತರಾಗಿರುತ್ತಾರೆ! ಯಾವುದೇ ಸಾರ್ವಜನಿಕ ಸಭೆಗೆ ಯಾವುದಾದರೂ ಪೀಠಾಧಿಪತಿಗಳೋ / ಮಠಾಧೀಶರೋ ಅನಿವಾರ್ಯವೆಂದೇ ಜನತೆ ತಿಳಿಯುವಷ್ಟು ಈ ಪದ್ದತಿ ಬೆಳೆದು ಬಿಟ್ಟಿದೆ!

ಒಟ್ಟಾರೆ ಜಾತಿ/ಉಪಜಾತಿಗೊಂದು ಪೀಠಗಳಾಗಿ, ಅವು ಭ್ರ್‍ಅಷ್ಟಾಚಾರವನ್ನು ಪೋಷಿಸುವ ಕೇಂದ್ರಗಳಾಗಿ ಜನಸಾಮಾನ್ಯನಿಗೆ, ಸಮಾಜಕ್ಕೆ ಶಾಪಗಳಾಗಿ ಉದ್ಭವಿಸುತ್ತಿವೆ.

ಹರಿದು ಹಂಚಿಹೋಗಿದ್ದ ಭಾರತವನ್ನು ವಿದೇಶೀ ಬ್ರಿಟಿಷರು ಒಂದುಗೂಡಿಸಿ ಭಾರತಕ್ಕೆ ಒಂದು ಸುಸ್ವರೂಪವನ್ನು ಕೊಟ್ಟರೆ, ಅವರನ್ನು ಓಡಿಸಿದ ಜಿನ್ನಾ / ನೆಹರೂ ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸಿದರು. ಈಗ ನಾವುಗಳು ಅವರನ್ನು ಹಿಂದಿಕ್ಕಿ ಜಾತಿ ಉಪಜಾತಿಗಳ ಹೆಸರಿನಲ್ಲಿ ಅಖಂಡ ಭಾರತವನ್ನು ವಿಕಲಾಂಗಗೊಳಿಸುತ್ತಿದ್ದೇವೆ. ’ಮನುಜ ಮತ ವಿಶ್ವಪಥ’ವೆಂದು ಓದಿದ ನಾವುಗಳೂ ಅರಿತೋ ಅರಿಯದೆಲೆಯೋ ಯಾವುದಾದರೊಂದು ಪೀಠದ ಪರಿಮಿತಿಗೆ ಒಳಪಟ್ಟಿರುತ್ತೇವೆ!

ಜಾತ್ಯಾತೀತತೆ, ಸೆಕ್ಯುಲರ್ ಎಂದೆಲ್ಲಾ ಬೊಗಳೆ ಬಿಡುವ ಜನನಾಯಕರುಗಳು ಈ ಪೀಠಗಳ ಪೀಠಿಗಳು ಕರೆದಾಗಲೆಲ್ಲ ಅವರುಗಳ ಸಭೆಗೆ ದೌಡಾಯಿಸಿ ಸನ್ಮಾನ ಪಡೆದು ಆಯಾ ಪೀಠಗಳಿಗೆ ಬೇಕಾದ ಮಾನ್ಯತೆ ಕೊಡುತ್ತಾರೆ. ಹಾಗೆಯೇ ನಮ್ಮ ಬುದ್ಧಿಜೀವೀ ಲೇಖಕರುಗಳು ಕೂಡ ಈ ಪೀಠಿಗಳು ಕೊಡಮಾಡುವ ಬಿರುದು ಬಿನ್ನಾಣಗಳನ್ನು ಪಡೆಯಲು ತಮ್ಮೆಲ್ಲ ತತ್ವಗಳನ್ನು ಗಂಟುಕಟ್ಟಿ ಮೂಲೆಯಲ್ಲಿಟ್ಟು ಪೀಠಿಗಳನ್ನು ಕ್ರಾಂತಿಕಾರಿಗಳೆನ್ನುತ್ತ ಅವರಿಗೆ ಮುಗಿಬೀಳುತ್ತಾರೆ. ಈ ಎಲ್ಲ ಭೀಕರ ಬೆಳವಣಿಗೆಯನ್ನು ಗಮನಿಸಿದರೆ ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೆಂಬುದೇ ತಿಳಿಯುವುದಿಲ್ಲ. ಈ ಎಲ್ಲ ವಿಲಕ್ಷಣಗಳನ್ನು ಭಾರತೀಯ ಶ್ರೀಸಾಮಾನ್ಯರಾದ ನಾವು ಅದು ಹೇಗೆ ಸರಿಪಡಿಸಿ ಸರಿದಾರಿಯಲ್ಲಿ ನಡೆಯುವೆವೋ?

ಅಣಕ:

ಆಧುನಿಕ ಬಸವಣ್ಣನೆಂದೆನಿಸಿದ, ಶತಪೀಠಸ್ಥಾಪೀ ಶ್ರೀಗಳು ತಮ್ಮ ಶಿಷ್ಯಮಂಡಳಿಯೊಂದಿಗೆ ಆಪ್ತಸಮಾಲೋಚನೆಯಲ್ಲಿ ಮುಳುಗಿದ್ದರು. ಶ್ರೀಗಳು ಮ್ಲಾನವದನರಾಗಿ "ಎಲ್ಲಾ ಜಾತಿಗಳಿಗೂ ಒಂದೊಂದು ಪೀಠವನ್ನು ಮಾಡಿಕೊಟ್ಟಾಯಿತು. ಮುಂದೆ ಇನ್ಯಾವ ಪೀಠಸ್ಥಾಪನೆ ಮಾಡಬೇಕೋ ತಿಳಿಯುತ್ತಿಲ್ಲ" ಎಂದು ಸೊರಗಿದ ದನಿಯಲ್ಲಿ ತಮ್ಮ ಕಳವಳವನ್ನು ಅರುಹಿದರು.

ಆಗ ಕೂಡಲೇ ಶ್ರೀಗಳ ಮೆಚ್ಚಿನ ಶಿಷ್ಯ ಜೈಮೃತ್ಯುಂಜಯ್ "ಗುರುಗಳೇ, ಅದೇಕೆ ಅಷ್ಟೊಂದು ಚಿಂತಾಕ್ರಾಂತರಾಗಿದ್ದೀರಿ? ಅದೊಂದು ತಲೆ ಕೆಡಿಸಿಕೊಳ್ಳಬೇಕಾದ ವಿಷಯವೇ ಅಲ್ಲ! ನಮ್ಮ ದೇಶದಲ್ಲಿ ಜಾತಿಗಳಿಗೆ ಕೊರತೆಯಿಲ್ಲ. ಒಂದು ವೇಳೆ ಅದು ಕೊರತೆಯೆನಿಸಿದರೂ ಇನ್ನೂ ಅನೇಕ ವಿಧದ ಜನಶಕ್ತಿಯಿದೆ. ಶೋಷಿತ ಮಹಿಳೆಯರಾದ ವೇಶ್ಯೆಯರಿಗಾಗಿ ’ವೇಶ್ಯಮಾತೇಶ್ವರೀ ಶಕ್ತಿಪೀಠ’ವನ್ನು ಸ್ಥಾಪಿಸಿ, ಒಬ್ಬ ಅತೀ ಅನುಭವಸ್ಥ ದೇವಿಯೋರ್ವರನ್ನು ಮಹಾಮಾತೆಯಾಗಿ ಪೀಠಕ್ಕೆ ಪಟ್ಟ ಕಟ್ಟೋಣ. ಆ ಪೀಠಕ್ಕೆ ವಿಶೇಷವಾಗಿ ಡರ್ಮಟಾಲಜಿ, ಸೆಕ್ಸಾಲಜಿ, ವುಮೆನ್ ಸೈನ್ಸ್ ಇನ್ನು ಮುಂತಾದ ವಿಲಕ್ಷಣ ಕಾಲೇಜುಗಳನ್ನು ತೆರೆದು ವಿಶ್ವದಲ್ಲೇ ಪ್ರಥಮವೆನ್ನಿಸುವಂತಹ ಪ್ರಮಥರಾಗೋಣ. ಅದಾದ ನಂತರ ಹಿಜಿಡಾ ಜನಾಂಗಕ್ಕಾಗಿ ಹಿಜಿಡಾ ಪೀಠ, ಪ್ರೇಮಿಗಳಿಗಾಗಿ ಪ್ರೇಮಪೀಠ, ವಿಧವೆಯರಿಗೆ ವಿಧವಾ ಪೀಠ, ವಿದುರ ಪೀಠ, ಖೈದಿ ಪೀಠ, ಪೊಲೀಸ್ ಪೀಠ, ಕಾರ್ಮಿಕ ಪೀಠ, ವರ್ತಕ ಪೀಠ...ಮನಸ್ಸಿದ್ದರೆ ಮಾರ್ಗವುಂಟು ಮಹಾಸ್ವಾಮಿ!" ಎಂದನು.

ಇದರಿಂದ ಸಂತ್ರಪ್ತಗೊಂಡು ಪ್ರಸನ್ನವದನರಾಗಿ ಶ್ರೀಗಳು "ಅಹುದಹುದು, ಮನಸ್ಸಿದ್ದರೆ ಮಾರ್ಗವುಂಟು. ಸರ್ವೇಜನೌ ಸುಖಿನೋ ಭವಂತು!" ಎಂದು ನೆರೆದ ಶಿಷ್ಯ ಮಂಡಳಿಗೆ ಆಶೀರ್ವಚನ ನೀಡುತ್ತ ತಾವು ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆಯೆಂದು ಎಚ್ಚರಿಕೆಯನ್ನೂ ಕೊಟ್ಟರು.

No comments: