ಮುಳುಗಲಿದೆ ಪ್ರಪಂಚ! ಆದರೂ ಇಡಿ ವಿಶ್ವಾಸ.

ಇಂಥದೊಂದು ದಿನ ವಿಶ್ವ ಮುಳುಗಲಿದೆ ಎಂದು ನಾಸ್ಟರ್ ಡಾಮಸ್ ಹೇಳಿರುವನೆಂದೋ; ವಿಜ್ಞಾನಿಗಳು ಮುಂದಿನ ಇಷ್ಟು ವರ್ಷಗಳಲ್ಲಿ ಮೀಟಿವೋರ್ ಒಂದು ಭೂಮಿಯನ್ನು ಅಪ್ಪಳಿಸಿ ವಿಶ್ವನಾಶವಾಗುತ್ತದೆಂದೋ ಆಗಾಗ್ಗೆ ಸುದ್ದಿಮಾಧ್ಯಮಗಳಲ್ಲಿ ಕೇಳಿಯೋ ಇಲ್ಲಾ ಓದಿಯೋ ಇದ್ದೀರಷ್ಟೆ.

ಹೆಚ್ಚಾಗುತ್ತಿರುವ ಮಾನವ ನಿರ್ಮಿತ ಆತಂಕವಾದದ ನ್ಯೂಕ್ಲಿಯರ್ ಬಾಂಬ್ ದಾಳಿಯಿಂದಾಗಲಿ, ಯುದ್ಧಗಳಿಂದಾಗಲಿ, ಹವಾಮಾನ ವೈಪರೀತ್ಯಗಳಿಂದಾಗಲಿ, ನೈಸರ್ಗಿಕ ವಿಕೋಪದಿಂದಾಗಲಿ, ಇಂತಹ ಒಂದು ವಿಶ್ವನಾಶದ ದಿನ ಘಟಿಸಿದರೆ, ಅನಾದಿ ಕಾಲದಿಂದಲೂ ಬೆಳೆದುಬಂದಿರುವ ನಾಗರೀಕತೆಯ ಪರಂಪರೆಯನ್ನು ಹೇಗೆ ಕಾಪಾಡಿ ಇಡುವುದು?

ಭಾರೀ ಮಳೆಯಾಗಿ ಇಡೀ ಭೂಮಂಡಲ ನೀರಿನಿಂದಾವೃತಗೊಳ್ಳುವುದೆಂಬ ಭವಿಷ್ಯನುಡಿಯನ್ನು ನಂಬಿ, ಆ ಮಳೆಯಿಂದ ಬಚಾವಾಗಲು ಒಂದು ಅದ್ಭುತ ಕಮಾನು ದೋಣಿಯನ್ನು ಕಟ್ಟಿ, ಸಕಲ ಜೀವಜಂತುಗಳ ತಳಿಗಳನ್ನು ತನ್ನ ಕಮಾನು ದೋಣಿಯಲ್ಲಿ ನೆಲೆಗೊಳಿಸಿ ಪ್ರಪಂಚದ ಜೀವಜಂತುಗಳನ್ನು ಆ ಮಹಾಮಳೆಯಿಂದ ಕಾಪಾಡಿದ ನೋಹನೆಂಬುವವನ ಕಾಲ್ಪನಿಕ ಕತೆಯಂತೆ ಇತ್ತೀಚೆಗೆ ಒಂದು ನೂತನ ನೋಹನ ಕಮಾನು ದೋಣಿ ಸಿದ್ಧಗೊಂಡಿದೆ. ಆದರೆ ಅದರಲ್ಲಿ ಸಕಲ ಜೀವ ಜಂತುಗಳಿಗೆ ಜಾಗವಿಲ್ಲ. ಇದು ಕೇವಲ ಕೃಷಿಸಂಬಂಧೀ ಆಹಾರ ಬೆಳೆಗಳ ತಳಿಗಳನ್ನು ಶೇಖರಿಸಿಡಸಲು, ಆ ಒಂದು ದುರಂತದಿನದಿಂದ ಆಹಾರ ಬೆಳೆಯ ಬೀಜಗಳನ್ನು ಸಂರಕ್ಷಿಸಲು ಸೃಷ್ಟಿಯಾದ ವಿಶ್ವದ ಬಹುದೊಡ್ಡ ಬೀಜದ ಬ್ಯಾಂಕ್!

ಪ್ರಪಂಚದಾದ್ಯಂತ ನಿತ್ಯವೂ ಅದೆಷ್ಟೋ ಪಾರಂಪಾರಿಕ ಬೆಳೆಗಳು ಕಣ್ಮರೆಯಾಗುತ್ತಿವೆ. ಎಪ್ಪತ್ತರ ದಶಕದಲ್ಲಿ ಅಮೇರಿಕವೊಂದರಲ್ಲೇ ಸುಮಾರು ಏಳು ಸಾವಿರಕ್ಕೂ ಹೆಚ್ಚಿನ ಸೇಬಿನ ತಳಿಗಳಿದ್ದುದು ಇಂದು ಕೇವಲ ಒಂದೂವರೆ ಸಾವಿರಕ್ಕೆ ಕುಸಿದಿದೆ. ಇದೊಂದು ಹಣ್ಣಿನ ತಳಿಗಳಲ್ಲೇ ಇಷ್ಟೊಂದು ಬಗೆಗಳು ಕಣ್ಮರೆಯಾಗಿರುವವೆಂದರೆ ಇನ್ನಿತರೆ ಬೆಳೆಗಳ ಕಣ್ಮರೆಯಾದ ತಳಿಗಳ ಸಂಖ್ಯೆಯನ್ನು ನೀವೇ ಊಹಿಸಿಕೊಳ್ಳಿ.

ಈ ಅಮೂಲ್ಯ ಬೇಸಾಯ ಬೆಳೆಗಳ ತಳಿಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ಬೀಜ ನಿಗಮವು (ಗ್ಲೋಬಲ್ ಕ್ರಾಪ್ ಡೈವರ್ಸಿಟಿ ಟ್ರಸ್ಟ್) ಒಂದು ವಿಸ್ತಾರವಾದ, ಶಕ್ತಿಶಾಲಿಯಾದ, ಯಾವುದೇ ಶಕ್ತಿಗಳೂ ಅಲ್ಲಾಡಿಸದಂತಹ ಒಂದು ಸುಭದ್ರ ಬೀಜಗಳ ಕೋಠಿಯನ್ನು ಕಟ್ಟುವ ಕನಸು ಕಂಡಿತು. ಆ ಕನಸಿಗೆ ಪೂರಕವಾಗಿ ನಾರ್ವೆ ಸರ್ಕಾರ ಮುಂದಾಗಿ ತನ್ನ ಅತ್ಯಂತ ಕಠಿಣವಾದ ದುರ್ಗಮ ಹಿಮಚ್ಚಾದಿತ ಆರ್ಕ್ಟಿಕ್ ಪರ್ವತ ಪ್ರದೇಶದ ಸ್ವಲ್ಬಾರ್ಡ್ ನಲ್ಲೊಂದು ಬೃಹತ್ ಕೋಠಿಯೊಂದನ್ನು ಕಟ್ಟಿಸಿಕೊಡಲು ಮುಂದಾದರೆ, ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ ಈ ಕಟ್ಟಡದ ಎಲ್ಲಾ ಸರಕು ಸಾಗಣೆ ವೆಚ್ಚವನ್ನು ವಹಿಸಿಕೊಂಡರು.

ಬೆಟ್ಟದ ಗರ್ಭದಲ್ಲಿರುವ ಉಗ್ರಾಣದ ಒಟ್ಟು ನಕ್ಷೆ.

ಈ ಎಲ್ಲರ ಪರಿಶ್ರಮದ ಫಲವಾಗಿ ಈ ಅತ್ಯದ್ಭುತ ಬೀಜದ ಬ್ಯಾಂಕ್ ಕಳೆದ ಫೆಬ್ರುವರಿ ೨೬ ರಂದು ಸದ್ದಿಲ್ಲದೆ ಕಾರ್ಯಾರಂಭಗೊಳಿಸಿತು. ಈಗಾಗಲೇ ಅಮೇರಿಕಾದ ಎಲ್ಲಾ ಸೇಬಿನ ತಳಿಗಳ ಬೀಜಗಳಿಂದ ಚೀನಾದ ಬಹುತೇಕ ಭತ್ತದ ತಳಿಗಳವರೆಗೆ ಆಹಾರ ಬೆಳೆಯ ತಳಿಗಳ ಬೀಜಗಳನ್ನು ಶೇಖರಿಸಿರುವ ಈ ಸಂಸ್ಥೆ, ಮಿಲಿಯನ್ನುಗಟ್ಟಲೆಯ ವಿವಿಧ ತಳಿಗಳನ್ನು ಶೇಖರಿಸಿ ಸಂರಕ್ಷಿಸಿಡುವ ಗುರಿಯನ್ನು ಹೊಂದಿದೆ. ಮುಂದೊಂದು ದಿನ ಅಂತಹ ಅವಗಢದ ದಿನವೊಂದು ಬಂದರೆ ಕನಿಷ್ಟ ಮುಂದಿನ ಪೀಳಿಗೆಗೆ ಆಹಾರ ಬೆಳೆಗಳ ಬೀಜ ಭಾಗ್ಯವನ್ನಾದರೂ ಉಳಿಸಿ ಹೋಗೋಣ ಎಂಬುದು ಈ ಸಂಸ್ಥೆಯ ಆಶಯ. ನೀವುಗಳು ಈ ಬೀಜಸಂಸ್ಥೆಯ ಉದ್ದೇಶಕ್ಕೆ ಕೈಜೋಡಿಸುವ ಆಸ್ಥೆಯಿದ್ದರೆ ನಿಮ್ಮಲ್ಲಿರುವ ಆಹಾರ ಬೆಳೆಯ ಬೀಜಗಳನ್ನು ನಿಮ್ಮ ಸ್ಥಳೀಯ ಬೀಜಬ್ಯಾಂಕ್ ಮುಖಾಂತರ ಈ ಸುಭದ್ರ ಕೋಠಿಗೆ ಕಳುಹಿಸಬೇಕು. ನೀವು ಕಳಿಸುವ ಬೀಜಗಳನ್ನು ನಿಮ್ಮ ಸಂಸ್ಥೆಗಾಗಿ ಪುಕ್ಕಟೆಯಾಗಿ ಈ ಸಂಸ್ಥೆಯು ಸಂರಕ್ಷಿಸಿಡುತ್ತದೆ.

ನಾರ್ಥ್ ಪೋಲ್ ನಿಂದ ಕೇವಲ ಒಂದು ಸಾವಿರ ಕಿಲೋಮೀಟರ್ ದೂರದಲ್ಲಿರುವ, ಹಿಮಕರಡಿಗಳು ಕಾವಲು ಕಾಯುವ, ಯಾವುದೇ ರಸ್ತೆಗಳಿಲ್ಲದೆ ಕೇವಲ ಸ್ನೊಮೊಬೈಲ್ ನಲ್ಲಿ ಅಲ್ಲಿಗೆ ಸೇರಬೇಕಾದ್ದರಿಂದ ಇದೊಂದು ಸುಭದ್ರ ಸ್ಥಾನವಾಗಿದೆ. ಗ್ಲೋಬಲ್ ವಾರ್ಮಿಂಗ್ ಪರಿಣಾಮದಿಂದ ಮುಂದೆದಾದರೂ ಹಿಮವೆಲ್ಲಾ ಕರಗಿ ಸಾಗರವಾದರೂ ಈ ಕೋಠಿಯನ್ನು ಮುಳುಗಿಸಲಾಗದಂತೆ ಇದನ್ನು ಕಟ್ಟಲಾಗಿದೆ!

ಉಗ್ರಾಣದ ದ್ವಾರ.

ಇದೊಂದು ಪರಿಸರ ಕುರಿತಾದ, ನಮ್ಮ ನಿಜ ಮಣ್ಣಿನ ಮಕ್ಕಳ ಕುರಿತಾದ ವಿಷಯವಾದ್ದರಿಂದ ಇದರ ಕುರಿತು ಮಾಹಿತಿ ಬರಹ ಬರೆಯಬೇಕೆನಿಸಿತು, ಬರೆದಿರುವೆ.

ಇರಲಿ, ನಮ್ಮಲ್ಲೂ ಸಾಕಷ್ಟು ರೈತರುಗಳು, ಸಂಘ/ಸಂಸ್ಥೆಗಳು ಆಹಾರ ಬೆಳೆಗಳ ಬೀಜಗಳನ್ನು ಸಂರಕ್ಷಿಸುತ್ತ, ಅವುಗಳನ್ನು ಹಂಚಿಕೊಳ್ಳುತ್ತ ಕೊಂಚವಾದರೂ ಆ ನಿಟ್ಟಿನಲ್ಲಿ ನಡೆಯುತ್ತಿದ್ದಾರೆ. ಆದರೆ ಅವರಿಗೆಲ್ಲಾ ನಮ್ಮ ಬಡವರ ತಾಯಿ, ಮಣ್ಣಿನ ಮಗ ಇನ್ನು ಏನೇನೋ ಬಿರುದು ಹೊತ್ತು ಬಿನ್ನಾಣ ಮೆರೆದ ನಾಯಕ/ನಾಯಕಿಯರುಗಳ ಘನ ಸರ್ಕಾರದಿಂದ ಯಾವ ಪ್ರೋತ್ಸಾಹ ಸಿಕ್ಕಿದೆಯೋ ಗೊತ್ತಿಲ್ಲ. ಸಿಕ್ಕಿದ್ದರೆ ನಮ್ಮಲ್ಲಿ ಈ ಪಾಟಿ ರೈತರುಗಳು ಪರಿಹಾರದಾಸೆಗೆ ನೇಣು ಹಾಕಿಕೊಳ್ಳುತ್ತಿರುವ ಪರಿಸ್ಥಿತಿ ಬರುತ್ತಿರಲಿಲ್ಲವೆಂದೇ ಅಂದುಕೊಳ್ಳುತ್ತೇನೆ. ಇನ್ನು ಅಳಿದುಳಿದ ರೈತರುಗಳು ಮಣ್ಣಿನ ಮೊಮ್ಮಗ, ಮರಿಮಗ, ಬಡವರ ತಾಯಿಯ ಬೆರೆಕೆ ಮೊಮ್ಮಕ್ಕಳ ಅಧಿಕಾರದಲ್ಲಿ ನೇಣು ಹಾಕಿಕೊಳ್ಳುವ ಮುನ್ನ ತಮ್ಮಲ್ಲಿರುವ ಅಸಲಿ ಬೀಜಸಿರಿಯನ್ನು ಈ ಕೋಠಿಗೆ ಕಳುಹಿಸಿ, ಆ ’ಅವಗಢದ ದಿನ’ ದ ನಂತರದಲ್ಲಿ ಬರುವ ನೂತನ ಪೀಳಿಗೆ, ಈ ಯಾವ ಹೊಲಸು ನಾಯಕರುಗಳಿಲ್ಲದ ಸ್ವಚ್ಚ ವಾತಾವರಣದಲ್ಲಿ ಸುಭೀಕ್ಷ ಜೀವನವನ್ನು ಕಂಡು ಕೊಳ್ಳಲು ಸಹಕರಿಸಬೇಕೇನೋ!

ಅಂದ ಹಾಗೆ ಈ ಬೀಜದ ಕೋಠಿ ವಂಶವಾಹೀ ಬದಲಿಸಿದ ಬೀಜಗಳನ್ನು ಶೇಖರಿಸಿಡುವುದಿಲ್ಲ. ನಿಮ್ಮಲ್ಲಿರುವ ಅಸಲೀ ತಳಿಗಳ ಬೀಜಗಳನ್ನು ಮಾತ್ರ ಕಳುಹಿಸಬೇಕು!

ಒಂದೆಡೆ ಸಾಂಪ್ರದಾಯಿಕ ರೈತರೆಲ್ಲಾ ರೈತಾಪಿತನದಿಂದ ಹೊರಹೋಗುವ ಮಾರ್ಗಗಳನ್ನು ಹುಡುಕುತ್ತಿದ್ದರೆ, ಇನ್ನೊಂದು ವರ್ಗದ ಜನತೆ ರೈತಾಪಿಗಳಾಗುವತ್ತ ಹಪಹಪಿಸುತ್ತಿದ್ದಾರೆ. ಅದೇಕೋ ಈ ಕೈ ಕೆಸರಾಗುವ, ಎಷ್ಟೇ ಸುರಿದರೂ ಇನ್ನಾವ ಉದ್ಯಮಗಳಷ್ಟು ಲಾಭವಿರದ, ಹಾಕಿದಷ್ಟೂ ಶ್ರಮವನ್ನು ಬೇಡುತ್ತಲೇ ಇರುವ ಈ ಬೇಸಾಯದ ಬೇನೆ ಬಹು ಜನಗಳಿಗೆ ತಗುಲಿದೆ, ತಗಲುತ್ತಿದೆ!

ಅದೇನು ಈ ಮಣ್ಣಿನ ಸೆಳೆತವೋ ನಾ ಕಾಣೆ! ರಾಷ್ಟ್ರಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ಕಾಡು ಸೇರಿ ಕೃಷಿಕರಾಗಿದ್ದು; ಅಬ್ದುಲ್ ಕಲಾಂ ಅವರು ಎರಡನೇ ಹಸಿರು ಕ್ರಾಂತಿಯೇ ಭಾರತಕ್ಕೆ ಅನಿವಾರ್ಯವೆಂಬುದು; ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಷ್ ಕೂಡ ರ್‍ಯಾಂಚ್ (ಜಮೀನು, ಮನೆ, ಕೊಟ್ಟಿಗೆ ಎಲ್ಲಾ ಒಂದೆಡೆಯಿರುವುದು) ಹೊಂದಿರುವುದು; ದಾನವಾಗಿ ಕೊಟ್ಟಿದ್ದ ಜಮೀನನ್ನು, ನಾನು ಬಹುವಾಗಿ ಮೆಚ್ಚುವ ಸೂಪರ್ ಸ್ಟಾರ್ ಅಮಿತಾಭ್ ರವರೂ ವಾಪಸ್ ಕೇಳಿದ್ದುದು (ಬಹುಶಃ ಕೆಲ ಪುಂಡ ಮರಾಠಿಗರ ಕಿರುಕುಳದಿಂದ ಬೇಸತ್ತಿರಬೇಕು!); ಚರಂಡಿ ಕಾಂಟ್ರಾಕ್ಟರ್ ಹರದನಹಳ್ಳಿ ಗೌಡರು ’ಮಣ್ಣಿನ ಮಗ’ ಎನಿಸಿಕೊಳ್ಳಲು ಹಪಹಪಿಸುವುದು; ಇದೆಲ್ಲವನ್ನು ನೋಡಿದರೆ ಇದೊಂದು ತೀವ್ರವಾದ ಸೆಳೆತವೇ ಇರಬೇಕೆನ್ನಿಸುತ್ತದೆ. ಯಾಕೆಂದರೆ ಈ ಬೇನೆ ನನಗೂ ಇದೆ.

ನನ್ನೆಲ್ಲಾ ಸ್ನೇಹಿತರು ಹತ್ತಾರು ವರ್ಷಗಳ ಹಿಂದೆ ಬೆಂಗಳೂರಿನ ಆಸುಪಾಸಿನಲ್ಲಿ ಸಾಕಷ್ಟು ಲಕ್ಷಗಳನ್ನು ಹೂಡಿ ಇಂದು ಕೋಟಿ ಕೋಟಿ ಬಾಚಿಕೊಳ್ಳುತ್ತಿದ್ದರೆ, ನಾನು ಕೂಡ ಅವರಂತೆಯೇ ಹತ್ತಾರು ವರ್ಷಗಳ ಹಿಂದೆ ಲಕ್ಷ ಲಕ್ಷ ಹೂಡಿ ಅವರಂತೆ ಕೋಟಿಗಳನ್ನು ಬಾಚಿಕೊಳ್ಳದೆ ಇನ್ನೂ ಲಕ್ಷಗಳನ್ನು ಸುರಿಯುತ್ತಿದ್ದೇನೆ! ಅವರೆಲ್ಲ ಬೆಂಗಳೂರಿನ ಆಸುಪಾಸು ತುಂಡು ಜಮೀನುಗಳನ್ನು ಕೊಂಡರೆ ನಾನು ಯಾರು ಹೊಕ್ಕಲಾರದ ದೂರದ ಮೂಲೆಯೊಂದರಲ್ಲಿ ನಲವತ್ತಾರು ಎಕರೆಗಳಷ್ಟು ಕೃಷಿ ಜಮೀನನ್ನು ಕೊಂಡು ಜಮೀನುದಾರನಾಗಿದ್ದೇನೆ. ಅದರಲ್ಲಿನ್ನೇನು ತೆವಲೋ ನಾನಂತೂ ಅರಿಯೆ. ಆದರೂ ನನಗೀ ತೆವಲಿದೆ. ನಾನು ಹಾಕಿಸಿದ ತೆಂಗಿನ ಗಿಡಗಳಲ್ಲಿ ಗರಿಯೊಡೆದರೆ ಅದೇ ನನಗೆ ಕೋಟಿಯಾದಂತೆ ಖುಷಿಯಾಗಿ ನನ್ನ ವೈನ್ ಸೆಲ್ಲಾರಿನಿಂದ ಒಂದು ಇಟಾಲಿಯನ್ ವೈನ್ ಬಾಟಲಿಯನ್ನು ಹೊರ ತೆಗೆಯುತ್ತೇನೆ. ಒಂದು ವೇಳೆ ಅವು ಬಾಡಿವೆಯೆಂದರೆ ಸ್ಕಾಚಿಗೆ ಮೊರೆ ಹೋಗುತ್ತೇನೆ. ಒಟ್ಟಿನಲ್ಲಿ ನಾನೂ ಆಗಾಗ್ಗೆ ರೈತಾಪಿ ಕಟ್ಟೆ ಪುರಾಣಗಳನ್ನು ನಡೆಸುತ್ತೇನೆ, ಆದರವುಗಳು ಕನ್ನಡದಲ್ಲಿರುವುದಿಲ್ಲವೆಂಬುದೇ ಬೇಸರದ ಸಂಗತಿ. ಏಕೆಂದರೆ ನಾನಿರುವ ಊರಿನಲ್ಲಿ ಸಾಕಷ್ಟು ಕನ್ನಡಿಗರಿದ್ದರೂ, ಈ ರೀತಿಯ ಕಟ್ಟೆ ಪುರಾಣಗಳಿಗೆ ಅಗತ್ಯವಾದ ಮಣ್ಣಿನ ವಾಸನೆಯ ಕನ್ನಡಿಗರು ಸಿಕ್ಕುವುದು ಅಪರೂಪ. ಆದ್ದರಿಂದ ಮಣ್ಣಿನ ವಾಸನೆಯಿರುವ, ಕರ್ನಾಟಕದ ಜಮೀನುಗಳನ್ನು ಗುತ್ತಿಗೆ ಹಿಡಿದಿರುವ ತೆಲುಗು ಬಿಡ್ಡರ ನಡುವೆ ನಡೆಯುತ್ತದೆ ನನ್ನ ರೈತಾಪಿ ಕಟ್ಟೆ ಪುರಾಣ. ಇವರಾರೂ ಸಿಕ್ಕದಿದ್ದರೆ ನನ್ನ ಬೆಂಗಳೂರು ಹೆಂಡತಿಗೆ ಧಾರವಾಡ ಶೈಲಿ ಕನ್ನಡದಲ್ಲಿ ಛೇಡಿಸುತ್ತ ಮತ್ತು ನನ್ನ ಅಮೇರಿಕನ್ ಮಗನಿಗೆ ಹಳ್ಳಿ ಮೈಸೂರು ಶೈಲಿ ಕನ್ನಡದಲ್ಲಿ ಬೈಯುತ್ತ ನನ್ನ ಪುರಾಣ ಸಾಗುತ್ತಿರುತ್ತದೆ. ಈ ಎರಡೂ ಶೈಲಿಗಳೂ ಅರ್ಥವಾಗದ ಅವರಿಬ್ಬರೂ ಸುಮ್ಮನೆ ಗುಯ್ ಗುಡುತ್ತಾರೆ!

ಹಳ್ಳಿ ಹಿನ್ನೆಲೆಯಿಂದ ಬಂದವನಲ್ಲದ, ಜಾಗತಿಕ ಜಗತ್ತಿನ ಮೇರುಪಟ್ಟಣವಾದ ಶಿಕಾಗೋ ಮಹಾನಗರದಲ್ಲಿ ಮನೆಮಾಡಿಕೊಂಡಿರುವ, ಬಿಸಿನೆಸ್ ಪ್ಲಾನ್ಸ್, ಫಿನ್ಯಾನ್ಸಿಯಲ್ ಮಾಡೆಲ್ಲು, ಬಡ್ಜೆಟ್ಟು, ಪ್ರಪೋಸಲ್ಲು, ಪ್ರಾಸೆಸ್ ಇಂಪ್ರೂವ್ ಮೆಂಟ್, ಪ್ರೊಡಕ್ಟವಿಟಿ, ಸೊಲ್ಯೂಷನ್ ಬ್ಲೂಪ್ರಿಂಟ್, ಬಿಸಿನೆಸ್ ರೋಡ್ ಮ್ಯಾಪ್ ಎಂದೆಲ್ಲಾ ಉದ್ಯೋಗದಲ್ಲಿ ಬಡಬಡಿಸುವ ನಾನು, ವೈಯುಕ್ತಿಕವಾಗಿ "ನಮ್ಮ ಹಳ್ಳೀ ಊರ ನಮಗ ಪಾಡಾ ಯಾತಕ್ಕವ್ವ ಹುಬ್ಬಳ್ಳಿ ಧಾರವಾಡಾ" ಎನ್ನುತ್ತೇನೆ. ಇದು ಬೇನೆಯಲ್ಲದೇ ಮತ್ತಿನ್ನೇನೊ?

ನನ್ನ ಪುರಾಣವೇನೇ ಇರಲಿ, ಈ ಬೇನೆಗೆ ಬಿದ್ದ ಕೆಲವರು ನನ್ನ ಹಾಗೆ ನೇರ ಕೃಷಿಗೆ ಧುಮುಕಿದರೆ, ಇನ್ನು ಕೆಲವರು ಪರಿಸರಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪರೋಕ್ಷವಾಗಿ ಈ ಬೇನೆಗೆ ಸಿಲುಕುತ್ತಾರೆ. ಹಾಗೆ ಸಿಲುಕಿದ ಈ ಬೀಜದ ಸಂಸ್ಥೆ, ಬಿಲ್ ಗೇಟ್ಸ್, ನಾರ್ವೆ ಸರ್ಕಾರ ಅಲ್ ಗೋರ್ ರಂತೆಯೇ ನೊಬೆಲ್ ಪ್ರಶಸ್ತಿಗೆ ಅರ್ಹರೇನೋ! ಈ ಎಲ್ಲ ಕಾರ್ಪೋರೇಟ್ ವೀರರು ಮಣ್ಣಿಗೆ, ಪರಿಸರಕ್ಕೆ ಪ್ರಾಮಾಣಿಕವಾಗಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರೆ, ನಮ್ಮ ಭಾರತೀಯ ಇಂಪೋರ್ಟೆಡ್ ಬಡವರ ತಾಯಿಯಿಂದ ಹಿಡಿದು ಮರಿ/ಪುಡಿ ಪುಢಾರಿಗಳೆಲ್ಲರೂ ರೈತನೇ ನಮ್ಮ ದೇಶದ ಬೆನ್ನೆಲುಬೆಂದು ರೈತನ ಮೇಲೆ ಸವಾರಿ ಮಾಡಿ ರೈತನ ಪಕ್ಕೆಲುಬುಗಳನ್ನು ಮುರಿಯುತ್ತಿದ್ದಾರೆ. ನಮ್ಮ ರೈತರು ಇದನ್ನರಿಯಬೇಕಷ್ಟೆ!

ಇರಲಿ, ಒಟ್ಟಾರೆ ಕೃಷಿಯಿಂದ ಹೊರ್‍ಅ ಹೋಗುತ್ತಿರುವ ಕೃಷಿಕರಿಗೆ ವರ್ಕಿಂಗ್ ಕ್ಯಾಪಿಟಲ್, ಬಹುಮಹಡೀ ಕೃಷಿಪದ್ಧತಿ, ಸಮರ್ಥ ನೀರಿನ ನಿರ್ವಹಣೆ, ಮತ್ತು ಸರಳ ಮಾರುಕಟ್ಟೆಯ ಸೌಲಭ್ಯಗಳು ದೊರೆತರೆ ಕೃಷಿಯೇ ಉತ್ತಮ ಉದ್ಯಮವಾಗಬಲ್ಲುದೆಂಬುದು ನನ್ನ ಅನಿಸಿಕೆ.

ಅಣಕ:

ಶೇರುಪೇಟೆಯಲ್ಲಿ ಒಂದಕ್ಕೆ ಎರಡು ಅಥವಾ ಮೂರರಂತೆ ಸ್ಟಾಕ್ ಸ್ಪ್ಲಿಟ್ ಆಗುವಂತೆ, ಜಗತ್ತಿನ ಅತ್ಯಂತ ಹೆಚ್ಚಾಗಿ ತ್ವರಿತವಾಗಿ ಸ್ಪ್ಲಿಟ್ ಆಗುವ ಶೇರುಗಳು ಯಾವುವು ಗೊತ್ತೆ?

ಇದಕ್ಕೆಲ್ಲ ಷೇರುದರ್ಬಾರು, ಮಾರ್ಕೆಟ್ ವಾಚ್ ಪ್ರೋಗ್ರಾಮು, ಎಕನಾಮಿಕ್ಸ್ ಟೈಮ್ಸ್ ಓದಬೇಕಾಗಿಲ್ಲ ಕಣ್ರೀ. ಇದು ತೀರ ಸಿಂಪಲ್! ಮೇಲ್ಕಾಣಿಸಿದ ಒಂದು ಬೀಜ ಎಸೀರಿ, ಆರು ತಿಂಗಳಾದ ಮೇಲೆ ಅದು ನೂರು ಇನ್ನೂರು ಆಗದಿದ್ದರೆ ನೋಡಿ. ಹಿಡಿ ಬಿತ್ತಿ ಚೀಲದಲ್ಲಿ ತುಂಬಿಕೊಂಡು ಬರಬಹುದು!

ಕುಮಾರಸ್ವಾಮಿ ಬಾಡೂಟ, ರಾಹುಲ್ ನ ಹೋಂಸ್ಟೇ!

ಕಳೆದ ವಾರದ ಅಂಕಣದಲ್ಲಿ "ಎ ಥಿಂಗ್ ಆಫ್ ಬ್ಯೂಟಿ ಈಸ್ ಜಾಯ್ ಫಾರ್ ಎವರ್" ಎಂಬುದನ್ನು ಯಾವ ಎಗ್ಗಿಲ್ಲದೇ, ಎಲ್ಲೆಲ್ಲಿ ಸೌಂದರ್ಯ ಅಡಗಿರುತ್ತದೆ ಎಂಬುದನ್ನು ಶೋಧಿಸಿ ಕಣ್ತುಂಬಿಕೊಳ್ಳುತ್ತಿದ್ದ ನಮ್ಮ ಕ್ರಿಕೆಟ್ ಪಟುಗಳ ಫೋಟೋವನ್ನು ಮೆಚ್ಚಿ ಬಹಳ ಜನ ಓದುಗ ಸೌಂದರ್ಯೋಪಾಸಕರು ಮೆಚ್ಚಿ ಈಮೇಲ್ ಕಳುಹಿಸಿದ್ದರು. ಅವರುಗಳ ಸೌಂದರ್ಯಾರಾಧನೆಯನ್ನು ತಣಿಸಿದ್ದಕ್ಕೆ ನನಗೆ ನಾನೇ ಬೆನ್ನು ಚಪ್ಪರಿಸಿಕೊಳ್ಳುತ್ತಾ ಆಗಾಗ್ಗೆ ಚಿತ್ರಸಮೇತ ಅಣಕಗಳನ್ನು ಕೊಡುತ್ತೇನೆ.

ಇರಲಿ, ಈ ಅಂಕಣದಲ್ಲಿ ಹದಿಹರೆಯದ ಹುಡುಗರಿಂದ ಪ್ರಬುದ್ಧರಾದ ಯುವಕರುಗಳ ಕುರಿತು ವಿಶ್ಲೇಷಿಸೋಣ.

ಈಗ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯವರ "ಡಿಸ್ಕವರಿ ಆಫ್ ಇಂಡಿಯಾ" ಯಾತ್ರೆಯ ಸುದ್ದಿಯನ್ನು ಕಾಂಗ್ರೆಸ್ ಮಾಡಿಸುತ್ತಿದೆಯಷ್ಟೆ. ಭಾರತವನ್ನು ಸಮಗ್ರವಾಗಿ ತಿಳಿದುಕೊಳ್ಳಲು ರಾಹುಲ್, ಭಾರತದ ಹಳ್ಳಿ ಹಳ್ಳಿಗಳನ್ನು ಸುತ್ತಿ, ಶ್ರೀಸಾಮಾನ್ಯನ ಮನೆಯಲ್ಲಿ ಉಳಿದು, ಭಾರತೀಯರ ನಾಡಿ ಪರೀಕ್ಷಿಸುತ್ತಾರಂತೆ. ಎಷ್ಟೇ ಆಗಲಿ ಇದು ಇಂಡೋ-ಇಟಾಲಿಯನ್ ಚಾಕೋಲೇಟ್ ಬೇಬಿಯಲ್ಲವೇ? ನೆಹರೂ ಅವರ "ಡಿಸ್ಕವರಿ ಆಫ್ ಇಂಡಿಯಾ"ದ ಹೆಸರಿನೊಂದಿಗೆ ಕ್ರಿಸ್ಟೋಫರ್ ಕೊಲಂಬಸ್ ನಂತಹ ಇಟಾಲಿಯನ್ನರ ಅನ್ವೇಷಣಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಡಿಸ್ಕವರಿಸಲು ಹೊರಟಿರಬೇಕು!

ಗಮನಿಸಿ ನೋಡಿ, ಇಂದಿನ ಭಾರತೀಯ ಯುವ ಪೀಳಿಗೆ ರಾಹುಲನಂತಹ ಡಿ.ಎನ್.ಎ ಹೊಂದಿರದಿದ್ದರೂ ಅವನೊಂದಿಗೆ ಅತ್ಯಂತ ಸಾಮ್ಯತೆಯನ್ನಂತೂ ಹೊಂದಿದೆ.

ದುಡಿಯಲು ಕಾಲ್ ಸೆಂಟರ್/ಐ.ಟಿ/ಬಿ.ಟಿ/ಬಿ.ಪಿ.ಒಗಳನ್ನು ನಂಬಿರುವ ಒಂದು ವರ್ಗದ ಯುವಜನತೆ, ಮೋಜಿಗೆ ಲೆಕ್ಕವಿಲ್ಲದಷ್ಟು ಪಬ್ಬುಗಳು, ಬಾರುಗಳು, ರೆಸ್ಟುರಾಗಳು, ಕಾಫಿ ಡೇಗಳಿಗೆ ನುಗ್ಗುತ್ತ, ಈ ಪೀಳಿಗೆ ಗರ್ಲ್/ಬಾಯ್ ಫ್ರೆಂಡ್ ಗಳೊಂದಿಗೆ ನೈಟ್ ಲೈಫ್ ಗಾಗಿ ತವಕಿಸುತ್ತಿರುತ್ತಾರೆ. ರಾಹುಲ್ ನಂತೆಯೇ ತಮ್ಮ ತಮ್ಮ ಸಂಗಾತಿಗಳೊಂದಿಗೆ ವಾಸಿಸುತ್ತಿರುತ್ತಾರೆ ಇಲ್ಲವೇ ಆ ಹಾದಿಯಲ್ಲಿರುತ್ತಾರೆ (ಹಾಗೆ ವಾಸಿಸುವ ಒಂದು ಪ್ರಬುದ್ಧ ಬುದ್ದಿಮಟ್ಟ ಅವರಲ್ಲಿರುತ್ತದೋ ಇಲ್ಲವೋ ಅದು ಬೇರೆಯ ವಿಷಯ). ಪಟ್ಟಣದ ಏಕತಾನತೆ ಬೋರಾದರೆ ಕೊಡಗಿನ ಹೋಂಸ್ಟೇಗಳಿಗೆ ಪ್ರವಾಸ ಹೊರಟು ಕಾಫೀ ಎಲ್ಲಿಂದ ಬರುತ್ತದೆಂದೋ, ಕಾಫಿಗೆ ಬೆರೆಸುವ ಹಾಲನ್ನು ಹಿಂಡಿ ಹಸುವಿಗೆ ಥೇಟ್ ಮುಂಗಾರುಮಳೆ ಗಣೇಶನ ಮಾದರಿಯಲ್ಲಿ "ನೋವಾಯ್ತಾ, ಸಾರಿ" ಎನ್ನುತ್ತಾರೆ. ಬಹುಶಃ ಕೊಡಗಿನ ಹಸುಗಳಿಗೂ ಇದು ಹೋಂಸ್ಟೇ ಗಿರಾಕಿ ಎಂದು ತಿಳಿದಿರುತ್ತದೇನೋ ಅವುಗಳು ಕೂಡ "ಯು ಆರ್ ವೆಲ್ ಕಂ" ಎನ್ನುವಂತೆ ’ಅಂಬಾ’ ಅಲ್ಲಲ್ಲ ’ಮೂ’ ಎನ್ನುತ್ತವೆ. ಹಾಲನ್ನು ಹಿಂಡಿ ಹಸುವಿಗೆ ನೋವಾಯಿತೆಂದುಕೊಳ್ಳುವ ಯುವ ಲಲನೆಯರು ಯಾವ ಎಗ್ಗಿಲ್ಲದೆ ಕೋಳಿಯನ್ನು ಜಗಿಯುತ್ತಾರೆ. ಬಹುಶಃ ಕೋಳಿಯನ್ನು ತರಕಾರಿ ಎಂದುಕೊಂಡಿರಬೇಕು. ರವಿಚಂದ್ರನ್ ನ ಯಾವುದೋ ಹಳೆಯ ಸಿನಿಮಾವೊಂದರಲ್ಲಿ ಭತ್ತ ಮರದ ಮೇಲೆಯೂ ತೆಂಗಿನಕಾಯಿ ಬಳ್ಳಿಯಿಂದಲೂ ಬರುತ್ತದೆಂದು ಹೇಳುವ ಅತಿಶಯೋಕ್ತೀ ಪಾತ್ರದ ನಿಜವ್ಯಕ್ತಿಗಳೇ ಇವರಾಗಿದ್ದಾರೆ. ಆಷ್ಟೇ ಅಲ್ಲ ಕೊಡಗಿನ ಕಾಫೀ ತೋಟದಮನೆಗಳಲ್ಲಿ "ಹೋಂಸ್ಟೇ"ಗೆ ಬರುವ ರಾಹುಲ್ ಮಾದರಿಯ ಯುವಪೀಳಿಗೆ ಈ ವಾಸ್ತವ್ಯಕ್ಕೆ ಪಂಚತಾರಾ ಹೋಟೇಲಿನ ದರ ಕಕ್ಕಲು ತಯ್ಯಾರಿರುತ್ತಾರೆ.

ನನ್ನ ಹಿರಿಯ ಮಿತ್ರರೋರ್ವರು "ಈ ತೋಟದ ಮನೆಗಳಲ್ಲಿ ಒಬ್ಬಂಟಿಗರಾಗಿ ಇದ್ದೂ ಇದ್ದೂ ಬೇಜಾರಾಗಿ ಹೋಗಿದೆ. ಮಾತನಾಡೋಣ ಎಂದರೂ ಯಾರೂ ಸಿಗಲ್ಲ. ಅದಕ್ಕೆ ದಿನಾಲೂ ಪೆಟ್ರೋಲ್ ಸುಟ್ಟುಕೊಂಡು ಪೇಟೆಗೆ ಹೋಗಿ, ಕ್ಲಬ್ಬಿನಲ್ಲಿ ಒಂದಷ್ಟು ಹೊತ್ತು ಇಸ್ಪೀಟಾಡಿ ಬೇಜಾರು ಕಳೆದುಕೊಳ್ಳಬೇಕು" ಎಂದು ಅಲವತ್ತುಕೊಂಡಾಗ ನಾನು ಅವರಿಗೆ "ಸುಮ್ಮನೆ ನಿಮ್ಮ ತೋಟವನ್ನು ಹೋಂಸ್ಟೇ ಎಂದು ಮಾಡಿ, ಒಂದು ಚಂದದ ಅಂತರ್ಜಾಲ ತಾಣವನ್ನು ಸೃಷ್ಟಿಸಿಬಿಡಿ. ಜನ ನಿಮ್ಮಲ್ಲಿಗೇ ಬಂದು, ನಿಮ್ಮೊಡನೆ ಮಾತನಾಡಿ, ನಿಮ್ಮ ಬೇಸರ ಕಳೆದು ದುಡ್ಡನ್ನೂ ಕೊಟ್ಟು ಹೋಗುತ್ತಾರೆ" ಎಂದೆನು. ನನ್ನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಅವರು ಕೆಲವೇ ತಿಂಗಳುಗಳಲ್ಲಿ ಅದನ್ನು ಕಾರ್ಯಗತಗೊಳಿಸಿದರು. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈಗ ಅವರಿಗೆ ನಾನು ಫೋನ್ ಮಾಡಿದರೂ ಮಾತನಾಡಲು ಪುರುಸೊತ್ತಿರುವುದಿಲ್ಲ. ಮೊದಲಾದರೆ ಕರೆದವರೆಲ್ಲರ ಮದುವೆ, ನಿಶ್ಚಿತಾರ್ಥಗಳಂತಹ ಕಾರ್ಯಕ್ರಮಗಳನ್ನು ಒಂಟಿತನದ ಬೇಸರವನ್ನು ನಿವಾರಿಸಿಕೊಳ್ಳುವ ಒಯಸಿಸ್ ಎಂದು ಪರಿಗಣಿಸಿದ್ದ ಇವರಿಗೆ ಈಗ ಆ ರೀತಿಯ ಯಾವ ಕಾರ್ಯಕ್ರಮಗಳಿಗೂ ಸಮಯವಿಲ್ಲ. ಒಮ್ಮೆ ನೀವೂ ಕೂಡ ಭೇಟಿ ಕೊಟ್ಟು ನೋಡಿ ನನ್ನ ಸ್ನೇಹಿತರ ಹೋಂಸ್ಟೇ ಅನ್ನು, http://www.makkithitta.com/

ಇರಲಿ ಈ ರೀತಿ ಯುವಪೀಳಿಗೆಯ ರಾಹುಲ್, ತನ್ನ ಡಿಸ್ಕವರಿಯಿಂದ ಲ್ಯಾಂಡ್ ಆದ ಬಳಿಕ ಭಾರತದ ನಾಡಿಯನ್ನು ಚೆನ್ನಾಗಿ ಅರಿತು ಅದಕ್ಕೆ ತಕ್ಕ ಚಿಕಿತ್ಸೆಯನ್ನು ಕೊಡುತ್ತಾನೇನೋ ನೋಡೋಣ!

ಇರಲಿ ಅದೊಂದು ಬಗೆಯ ಯುವಜನತೆಯಾದರೆ ಇನ್ನೊಂದು ಬಗೆಯ ಯುವಜನತೆ ಇದೆ. ಅದು ನಮ್ಮ ಮಣ್ಣಿನ ಮೊಮ್ಮಗ ಕುಮ್ಮಿ ಮಾದರಿಯದು. ಇವರು ನಮ್ಮ ಎಸ್.ಎಸ್.ಎಲ್.ಸಿ/ಪಿ.ಯು.ಸಿ. ಫೇಲಾಗಿ ರಿಯಲ್ ಎಸ್ಟೇಟು, ಟ್ರಾನ್ಸ್ ಪೋರ್ಟ್, ಮೀಟರ್ ಬಡ್ಡಿ, ದಲಾಲಿ, ಹಮಾಲಿ, ಸಿನಿಮಾ, ದಾದಾಗಿರಿ, ರಾಜಕೀಯಗಳಂಥಹ ಅಪ್ಪಟ ಮಣ್ಣಿನ ವಾಸನೆಯ ಉದ್ಯೋಗ/ವ್ಯವಹಾರಗಳಲ್ಲಿ ತೊಡಗಿಕೊಳ್ಳುವ ನಾಟಿ ಯುವತಳಿಯನ್ನು ಪ್ರತಿನಿಧಿಸುತ್ತಾರೆ. ಇನ್ನು ಈ ಕನ್ನಡದ ಕಂದ ಕುಮಾರಸ್ವಾಮಿ ಮಾಡಿದ್ದಾದರೂ ಏನು? ನಮ್ಮ ಹಳ್ಳಿ ಕಡೆಯ ಸೋಮಾರಿಗಳು ಆಗಾಗ್ಗೆ ನೆಂಟರ ಮನೆಗೆ ಹೋಗಿ ಕಾಲಕ್ಷೇಪ ಹಾಕುವಂತೆಯೇ ಅವರು ಗ್ರಾಮವಾಸ್ತವ್ಯ ಹಾಕಿದ್ದು. ಆಯಾ ಊರಿನ ತಮ್ಮ ತಮ್ಮ ಪಕ್ಷದ ಸ್ಥಿತಿವಂತರುಗಳ ಮನೆಗಳಲ್ಲಿ ಗಡದ್ದಾಗಿ ಬಾಡೂಟ ಉಂಡು, ವೇಳೆ ಮೀರಿದ ಸಮಯಕ್ಕೆ ವಾಸ್ತವ್ಯದ ಮನೆಗಳಿಗೆ ತೆರಳಿ ಇನ್ನೊಮ್ಮೆ ಉಂಡ ಶಾಸ್ತ್ರ ಮಾಡಿ ಮಲಗುತ್ತಿದ್ದುದೇ ಅವರ ಗ್ರಾಮವಾಸ್ತವ್ಯವಾಗಿತ್ತು. ವ್ಯತ್ಯಾಸವೆಂದರೆ ಸಿನಿಮಾ ನಿರ್ಮಾಪಕರಾದ ಇವರು ಮುದಿ ರಾಜಕಾರಣಿಗಳು ಮಾಡುತ್ತಿದ್ದುದ್ದನ್ನೇ ಕಾಪಿ ಮಾಡಿ, ಅದಕ್ಕೊಂದು "ಗ್ರಾಮವಾಸ್ತವ್ಯ" ಎಂಬ ಟೈಟಲ್ ಕೊಟ್ಟು, ಅಗತ್ಯ ಕನ್ನಡ ಸಿನಿಮಾ ಫಾರ್ಮುಲಾಗಳನ್ನೆಲ್ಲಾ ಸೇರಿಸಿ ಬಾಕ್ಸಾಫೀಸಿನಲ್ಲಿ ದಾಖಲಾಗುವಂತೆ ಮಾಡಿದ್ದು ಬಿಟ್ಟರೆ ಈ "ಗ್ರಾಮವಾಸ್ತವ್ಯ" ಬಡ ಬೋರೇಗೌಡನ ನಾಲ್ಕಾಣೆ ಕನಸುಗಳನ್ನೂ ವಾಸ್ತವವಾಗಿಸಿಲ್ಲ!

ರಾಹುಲ್ ಗಾಂಧಿ, ಸಿಗರೇಟ್ ಭಾರತೀಯ ಯುವಪೀಳಿಗೆಯನ್ನು ಪ್ರತಿನಿಧಿಸಿದರೆ, ಕುಮಾರಸ್ವಾಮಿ ಬೀಡಿ ಯುವಪೀಳಿಗೆಯನ್ನು ಪ್ರತಿನಿಧಿಸುತ್ತಾರೆ. ಒಟ್ಟಾರೆ ಜನತೆಗೆ ದಟ್ಟ ಹೊಗೆ!

ಇರಲಿ, ಈ ಗ್ರಾಮವಾಸ್ತವ್ಯ, ಹೋಂಸ್ಟೇಗಳಲ್ಲಿ ಯಾವುದೇ ಹೊಸತಿಲ್ಲ. ಹಿಂದಿನ ರಾಜಕಾರಣಿಗಳು ದೇಶದ ಉದ್ದಗಲಕ್ಕೆ ಸಂಚರಿಸಿದಾಗೆಲ್ಲ ಆಯಾ ಊರಿನ ತಮ್ಮ ತಮ್ಮ ಪಕ್ಷಗಳ ಸ್ಥಿತಿವಂತ ಕಾರ್ಯಕರ್ತರುಗಳ ಮನೆಯಲ್ಲಿ ತಂಗುತ್ತಿದ್ದರು. ಅದನ್ನೇ ಈ ಯುವನಾಯಕರುಗಳು ಹೊಸ ಹೆಸರಿನೊಂದಿಗೆ ಯಾವುದೋ ಕ್ರಾಂತಿಯನ್ನು ಮಾಡುತ್ತಿರುವಂತೆ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಹಳೆಯ ನಾಯಕರು ರೋಚಕ ರಾತ್ರಿಗಳಿಗೆ ಐ.ಬಿ/ತೋಟದಮನೆಗಳನ್ನು ನೆಚ್ಚಿಕೊಳ್ಳುತ್ತಿದ್ದರೆ, ಈ ಯುವನಾಯಕರುಗಳು ರಿಸಾರ್ಟುಗಳಿಗೆ ಮುಗಿಬಿದ್ದಿದ್ದಾರೆ. ಅದನ್ನೇ ನಮ್ಮ ಗೆದ್ದಲು ಹಿಡಿದಿರುವ ಭಾರತೀಯ ಮಾಧ್ಯಮಗಳು ಈ ನಾಯಕರುಗಳು ತಿಂದೆಸೆಯುವ ಮೂಳೆಗಾಗಿ ಇವರುಗಳಿಗೆ ಭರ್ಜರಿ ಪ್ರಚಾರವನ್ನು ಕೊಡುತ್ತಿವೆ.

ಇದಕ್ಕೆ ಪೂರಕವಾಗಿ ಒಂದು ಸಂಗತಿಯನ್ನು ಹೇಳುತ್ತೇನೆ. ನಾನು ಹೈಸ್ಕೂಲಿನಲ್ಲಿದ್ದಾಗ ನನ್ನ ಅತ್ತೆ ಮಗಳ ಮದುವೆ ಆಗಷ್ಟೇ ಆಗಿತ್ತು. ನನ್ನನ್ನು ಅವಳೊಂದಿಗೆ ನಮ್ಮತ್ತೆಯ ಆಳಿಯ ಕೆನರಾ ಬ್ಯಾಂಕ್ ಉದ್ಯೋಗದಲ್ಲಿದ್ದ ಪಂಚನಹಳ್ಳಿ (ಹೊಸದುರ್ಗ ತಾಲ್ಲೂಕು)ಗೆ ಕಳುಹಿಸಿದ್ದರು. ಅವರ ಮನೆಯಲ್ಲಿ ನನ್ನದೇ ಓರಿಗೆಯ ಹುಡುಗನೊಬ್ಬನಿದ್ದ. ನಾನು ಅವನೊಂದಿಗೆ ಮಾತನಾಡುತ್ತ ಅವರ ಮನೆಯಲ್ಲಿ ಪಾಯಿಖಾನೆ ಎಲ್ಲಿದೆಯೆಂದು ಕೇಳಿದೆನು. ಅದಕ್ಕವನು ಇಡೀ ಪಂಚನಹಳ್ಳಿಯಲ್ಲಿ ಕೇವಲ ಒಂದೇ ಒಂದು "ಕಕ್ಕಸ್ಸು" ಇರುವ ಮನೆ ಇರುವುದೆಂದೂ ಅದಲ್ಲದೆ ಮತ್ತಿನ್ಯಾವ ಮನೆಯಲ್ಲಿಯೂ ಅದು ಇಲ್ಲವೆಂದು ಹೇಳಿ ಕೆರೆಯ ಕಡೆ ಕರೆದೊಯ್ದನು.

ಹಾಗೆಯೇ ಅವನೊಂದಿಗೆ ಮಾತನಾಡುತ್ತ ತಿಳಿದುಕೊಂಡುದುದೇನೆಂದರೆ - ಒಮ್ಮೆ ದಿವಂಗತ ಇಂದಿರಾಗಾಂಧಿಯವರು ಪಂಚನಹಳ್ಳಿಗೆ ಭೇಟಿ ಕೊಡುವ ಕಾರ್ಯಕ್ರಮ ನಿಗದಿಯಾಗಿತ್ತಂತೆ. ಪಂಚನಹಳ್ಳಿಯ ಆ ಕಾರ್ಯಕ್ರಮವು ಇಂದಿರಾಗಾಂಧಿಯವರ ಆ ದಿನದ ಕೊನೆಯ ಕಾರ್ಯಕ್ರಮವಾಗಿ, ಅವರು ಆ ರಾತ್ರಿ ಪಂಚನಹಳ್ಳಿಯಲ್ಲಿ ಉಳಿದುಕೊಳ್ಳುವುದೆಂದೂ ತೀರ್ಮಾನಿಸಿದ್ದರಂತೆ. ಆದರೆ ಮರುದಿನ ಬೆಳಗಿನ ನಿತ್ಯಕರ್ಮಗಳಿಗೆ ಇಂದಿರಾಗಾಂಧಿಯವರನ್ನು ಕೆರೆಯ ಕಡೆಗೆ ಕರೆದುಕೊಂಡು ಹೋಗಲಾಗುವುದೇ? ಆದುದರಿಂದ ಅವರ ವಸತಿಗಾಗಿ ನಿಗದಿಯಾಗಿದ್ದ ಆ ಊರಿನ ಸ್ಥಿತಿವಂತ ಕಾರ್ಯಕರ್ತನ ಮನೆಯ ಹೊರಗೆ ಒಂದು ಪಾಯಿಖಾನೆಯನ್ನು ಕಟ್ಟಿದರಂತೆ. ಆದರೆ ದುರದೃಷ್ಟವಶಾತ್, ಇಂದಿರಾಗಾಂಧಿಯವರು ಪಂಚನಹಳ್ಳಿಯಲ್ಲಿ ಭಾಷಣ ಮುಗಿಸಿ ಚಿಕ್ಕಮಗಳೂರಿಗೆ ಆ ರಾತ್ರಿಯೇ ದೌಡಾಯಿಸಿದ ಪ್ರಯುಕ್ತ ಈ "ಇಂದಿರಾಗಾಂಧಿಯವರ ಕಕ್ಕಸ್ಸು ಕೋಣೆ" ಅವರ ಅಮೃತಹಸ್ತ(?)ದಿಂದ ಉದ್ಘಾಟಿತವಾಗದೆ ಹಾಗೆಯೇ ಉಳಿದುಕೊಂಡಿದೆ ಎನ್ನುತ್ತ ಬೀಗ ಹಾಕಿದ್ದ ಆ ಘನ ಕಟ್ಟಡವನ್ನು ತೋರಿದನು! ಸಾಮಾನ್ಯವಾಗಿ ಎಲ್ಲಾ ಉದ್ಘಾಟನೆಗಳನ್ನು ಅಮೃತಹಸ್ತದಿಂದ ಉದ್ಘಾಟಿಸುತ್ತಿದ್ದ ದಿವಂಗತ ಪ್ರಧಾನಿಗಳು ಈ ಕಟ್ಟಡವನ್ನು ಅವರ ಶಿಷ್ಯ ಗುಂಡೂರಾವ್ ಅವರ ಮಾದರಿಯಲ್ಲಿ ಉದ್ಘಾಟಿಸಬೇಕಾದ ಅನಿವಾರ್ಯತೆಯನ್ನು ಮನಗಂಡು ಚಿಕ್ಕಮಗಳೂರಿಗೆ ದೌಡಾಯಿಸಿದರೇನೋ? ಬೀಗ ಜಡಿದಿದ್ದ ಆ ಕಟ್ಟಡವನ್ನು ಬಹುಶಃ ಇಂದಿರಾಗಾಂಧಿಯವರು ಮತ್ತಿನ್ಯಾವಗಲಾದರೂ ಬರುತ್ತಾರೆಂದು ಅದರ ಮಾಲೀಕ ಅದನ್ನು ಬಳಸದೇ ಹಾಗೆಯೇ ಜೋಪಾನ ಮಾಡುತ್ತಿದ್ದನೇನೋ? ಈಗೇನಾಗಿದೆಯೋ ಆ ಘನ ಕಟ್ಟಡಕ್ಕೆ ತಿಳಿಯದು!

ಅಣಕ:

ಕುಮಾರಸ್ವಾಮಿಯವರ "ಗ್ರಾಮ ವಾಸ್ತವ್ಯ" ಮತ್ತು ರಾಹುಲ್ ಗಾಂಧಿಯವರ "ಡಿಸ್ಕವರಿ ಆಫ್ ಇಂಡಿಯಾ" ಈ ಎರಡೂ ಕಾರ್ಯಕ್ರಮಗಳ ಆಂತರ್ಯ ಮತ್ತು ಬಾಹ್ಯ ಹೇಗಿವೆಯೆಂದರೆ ಕೆಳಗಿನ ಚಿತ್ರದ ಹೋರ್ಡಿಂಗ್ ನಲ್ಲಿರುವ "ಪ್ರಾಮಾಣಿಸಿದ ನೀರು" ಅವರುಗಳ ಬಾಹ್ಯ ಪ್ರಚಾರವನ್ನೂ, ಅದರ ಕೆಳಗಿನ ವ್ಯಕ್ತಿಯ ಕ್ರಿಯೆ ಇವರುಗಳ ಆಂತರ್ಯವನ್ನು ಸಾರುತ್ತಿರುವಂತಿದೆ.

ಹರೇ ಹರೇ ಕೃಷ್ಣ ಕೃಷ್ಣ! ಅಲ್ ಲಾಹ್ ಹು ಅಕ್ಬರ್!

ಸುಮಾರು ಹದಿನೈದು ವರ್ಷಗಳ ಹಿಂದೆ ತಂತ್ರಜ್ಞರ ಉದ್ಯೋಗ ನಗರಿಯಾದ ಬೆಂಗಳೂರಿಗೆ ನಾನು ಆಗಷ್ಟೇ ಬಂದು ಸೇರಿದ್ದೆ. ನನ್ನ ರೂಮಿನ ಪಕ್ಕದ ಕಟ್ಟಡದ ಮಾಲೀಕರ ಮಗ ಆಗಷ್ಟೇ ಪಿ.ಯು.ಸಿ.ಗೆ ಸೇರಿದ್ದ. ಅವನು ಅವನ ಸ್ನೇಹಿತನಾದ ದರ್ಶನ್ ಎಂಬುವನೂ ನನ್ನನ್ನು ಒಂದು ರೀತಿಯಲ್ಲಿ ಹಿರಿಯ ಸ್ನೇಹಿತನಂತೆ ಕಾಣುತ್ತಿದ್ದರು. ಆಗಷ್ಟೇ ಬಾಲ್ಯದ ಪೊರೆ ಕಳಚಿ ಹದಿಹರೆಯಕ್ಕೆ ಕಾಲಿಡುತ್ತಿದ್ದ ಆ ಹುಡುಗರು ಮುಕ್ತವಾಗಿ ಹರ್‍ಅಟಲು, ಸಲಹೆ ಪಡೆಯಲು ನನ್ನನ್ನು ನಂಬಿದ್ದರು. ಸಾಧಾರಣವಾಗಿ ಇತರೆ ಹದಿಹರೆಯದ ಹುಡುಗರಂತೆಯೇ ಇದ್ದ ಈ ಹುಡುಗರು ಎರಡನೇ ಪಿ.ಯು.ಸಿಗೆ ಬರುವಲ್ಲಿಗೆ ಆಧ್ಯಾತ್ಮ, ದೇವರು, ತತ್ವಚಿಂತನೆಯಂತಹ ವಿಷಯಗಳನ್ನೆತ್ತಿ ನನ್ನೊಂದಿಗೆ ಸಂವಾದದಲ್ಲಿ ತೊಡಗುತ್ತ ನನ್ನನ್ನು ಇಸ್ಕಾನ್ ಗೆ ಬನ್ನಿ ಎನ್ನಲಾರಂಭಿಸಿದರು. ಸಾಮಾನ್ಯವಾಗಿ ಕದ್ದು ಬಿಯರ್ ಹೀರುವ, ಸಿಗರೇಟ್ ಸೇದುವ ಅಥವಾ ಆ ಹುಡುಗಿ ಈ ಹುಡುಗಿ, ಲವ್ವು ಎಂದು ಇತರೆ ಹದಿಹರೆಯದವರಂತೆ ಹರಟಬೇಕಿದ್ದ ಆ ಹುಡುಗರು ಈ ರೀತಿ ಆಧ್ಯಾತ್ಮಿಕ ವಿಷಯಗಳನ್ನೆತ್ತಿ ಸಂವಾದದಲ್ಲಿ ತೊಡಗುವುದು ಕೊಂಚ ಅಭಾಸವೆನಿಸಿತು. ಆದರೆ ಅವರ ಪೋಷಕರು ನಮ್ಮ ಹುಡುಗರು ಇತರೆಯವರಂತೆ ಕಾಲೇಜು ಕನ್ಯೆಯರಲ್ಲಿ ಅನುರಕ್ತರಾಗದೆ ದೇವರಲ್ಲಿ ಅನುರಕ್ತರಾಗಿರುವುದು ತಮ್ಮ ಪೂರ್ವಜನ್ಮದ ಪುಣ್ಯವೇ ಎಂದು ನನ್ನೊಂದಿಗೆ ಕೊಚ್ಚಿಕೊಳ್ಳತೊಡಗಿದರು.

ಈ ಹುಡುಗರೊಂದಿಗೆ ತರ್ಕಿಸುತ್ತ ನನಗೆ ಅವರುಗಳಿಗೆ ವ್ಯವಸ್ಥಿತವಾಗಿ "ಬ್ರೇನ್ ವಾಷ್" ಆಗುತ್ತಿರುವುದು ಮನದಟ್ಟಾಯಿತು. ಇವರನ್ನು ಕೊಂಚ ಪ್ರಾಕ್ಟಿಕಲ್ ದಾರಿಗೆ ತರೋಣವೆಂದು ನಾನೂ ಕೂಡ ಈ ಹುಡುಗರ ವಾದವನ್ನು ಕೊಂಚ ಆಸಕ್ತಿಯಿಂದ ಆಲಿಸತೊಡಗಿದೆನು. ಹಾಗೆಯೇ ಅವರ ಇಸ್ಕಾನ್ ಗುರುಗಳ ಭೋಧನೆಯ ಕೆಲ ಹುಳುಕುಗಳನ್ನೆತ್ತಿ ಪ್ರಶ್ನಿಸಿದಾಗ ಅವಾಕ್ಕಾಗುತ್ತಿದ್ದ ಆ ಹುಡುಗರು ಮಾರನೇ ದಿನ, ಬಹುಶಃ ಅವರ ಗುರೂಜಿಗೆ ನಾನು ಹಾಕಿದ ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆದುಕೊಂಡು ಬಂದು ಮತ್ತ ನನ್ನೊಂದಿಗೆ ವಾದದಲ್ಲಿ ತೊಡಗುತ್ತಿದ್ದರು. ಒಟ್ಟಾರೆ ಅವರ ತತ್ವಗಳು ಬದುಕು ನಶ್ವರ; ಜಗದೆಲ್ಲಾ ನೋವುಗಳಿಗೆ ಲೌಕಿಕ ಆಸೆಗಳೇ ಮೂಲ; ಮುಕ್ತಿಗೆ ಕೃಷ್ಣನೇ ದಾರಿ ಎಂದೆಲ್ಲಾ ಆಗಿರುತ್ತಿದ್ದವು. ನಾನು ಅವರ ತತ್ವಗಳನ್ನು ಒಂದೆಡೆ ಒಪ್ಪಿಕೊಳ್ಳುತ್ತ ಮತ್ತೊಂದೆಡೆ ಕೃಷ್ಣ ಸಾವಿರ ಗೋಪಿಕಾ ಸ್ತ್ರೀಯರನ್ನು ತಾನಿಟ್ಟುಕೊಂಡು ಅವನ ಭಕ್ತರಿಗೆ ಕೇವಲ ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ ಕಾಮಿಸಿ ಅನ್ಯ ಕಾಲದಲ್ಲಿ ವರ್ಜಿಸಿ ಎನ್ನುವುದು ಹೇಗೆ ನ್ಯಾಯವೆಂದೋ ಅಥವಾ ಅವರ ಗುರುಗಳು ಹೇಳುವ "ಬುದ್ಧಿವಂತ ಮಾನವ ಪ್ರಾಣಿಗಳಂತೆ ಬದುಕದೆ ನಿಯಮಬದ್ಧವಾಗಿ ಬದುಕಬೇಕು" ಎಂಬುದನ್ನೇ ಪ್ರಾಣಿಗಳು ಸಂತಾನೋತ್ಪತ್ತಿಗಾಗಿ ಮಾತ್ರ ಕಾಮಕ್ರೀಡೆಯಲ್ಲಿ ತೊಡಗಿದರೆ ಬುದ್ದಿವಂತ ಮಾನವ ನಿತ್ಯವೂ ಆ ಕಾರ್ಯದಲ್ಲಿ ತೊಡಗುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ. ನಿಮ್ಮ ಗುರುಗಳು ಏನೆಲ್ಲಾ ಮಾಡಿ ಸಮಾಧಿ ಮುಕ್ತಿಯನ್ನು ಹೊಂದುತ್ತಾರೋ ಅದರ ಅನುಭವವನ್ನು ಜನಸಾಮಾನ್ಯ ಕಾಮಿಸಿ ಕ್ಷಣಿಕವಾದರೂ ನಿತ್ಯವೂ ಆ ಸಮಾಧಿಯ ಅನುಭವವನ್ನು ಅನುಭವಿಸುತ್ತಾನೆ ಎನ್ನುತ್ತ ಅವರ ಗುರುಗಳ ತತ್ವಗಳೇ ಒಂದಕ್ಕೊಂದು ಅಭಾಸವಾಗಿವೆ ಎಂದು ಅವರ ಅಂದಿನ ಇಸ್ಕಾನ್ ’ಬ್ರೇನ್ ವಾಷ್’ ಅನ್ನು ಅಳಿಸಿಬಿಡುತ್ತಿದ್ದೆ. ಮಗದೊಮ್ಮೆ "ಈರುಳ್ಳಿ / ಬೆಳ್ಳುಳ್ಳಿಯಂತೆ ಕಟು ವಾಸನೆಯಿರುವ ಎಲ್ಲಾ ತರಕಾರಿ ಆಹಾರ ಪದಾರ್ಥಗಳನ್ನು ತಿಂದರೆ ನಮ್ಮಲ್ಲಿ ಆ ಕಟು ವಾಸನೆಯ ಗುಣಗಳು ಸೇರುತ್ತವೆ. ಆವುಗಳನ್ನು ವರ್ಜಿಸಿ" ಎಂಬ ಇಸ್ಕಾನಿನ ಪಥ್ಯವನ್ನು ನಾನು ಆ ಆಹಾರ ಸಾಮಗ್ರಿಗಳು ಮನುಷ್ಯನನ್ನು ಎಲ್ಲಾ ಸಂಕಷ್ಟಗಳನ್ನೂ ದೈಹಿಕವಾಗಿ, ಮಾನಸಿಕವಾಗಿ ಸಹಿಸುವಷ್ಟು ಕಟುವಾಗಿ ಮಾಡುತ್ತವೆ ಎಂದೇಕೆ ಹೇಳಬಾರದು ಎಂದು ಕಾಲೆಳೆದು ದಿಕ್ಕೆಡಿಸಿ ಈರುಳ್ಳಿ ಬೋಂಡ ತಿನ್ನಿಸುತ್ತಿದ್ದೆನು. ಹೀಗೆಯೇ ಸುಮಾರು ತಿಂಗಳುಗಳು ಕಳೆದವು. ನಾನು ನನ್ನ ಕೆಲಸ, ಸ್ನೇಹಿತರು ಮತ್ತಿತರೆ ಸಾಮಾಜಿಕ ಲೋಕದಲ್ಲಿ ಕಳೆದು ಹೋಗಿ, ಹಲವಾರು ತಿಂಗಳುಗಳವರೆಗೆ ಈ ಹುಡುಗರೊಂದಿಗೆ ಸಂವಾದದಲ್ಲಿ ತೊಡಗಲು ಸಾಧ್ಯವಾಗಿರಲಿಲ್ಲ.

ಒಮ್ಮೆ ಸಾಯಂಕಾಲ ನಾನು ಆಫೀಸಿನಿಂದ ಬಂದು ನನ್ನ ಹೀರೋ ಪುಕ್ ನಿಲ್ಲಿಸಿದೊಡನೆ ನನ್ನ ರೂಮಿನ ಪಕ್ಕದ ಮಾಲೀಕರು ನನ್ನಲ್ಲಿಗೆ ಬಂದು ತಮ್ಮ ಮಗನೂ ಮತ್ತವನ ಸ್ನೇಹಿತ ದರ್ಶನನೂ ಇಸ್ಕಾನಿನ ಫುಲ್ ಟೈಮ್ ಸನ್ಯಾಸಿಗಳಾಗುತ್ತೇವೆಂದು ಹೋಗಿದ್ದಾರೆಂದೂ ಅವರಿಗೆ ಹೇಗಾದರೂ ಕನ್ವಿನ್ಸ್ ಮಾಡಿ ಕರೆತನ್ನಿರೆಂದೂ ಅಳುತ್ತ ಗೋಗರೆದರು. ನಾನು ಅವರನ್ನು ಸಮಾಧಾನಿಸಿ ’ನಡೀರಿ ಹೋಗಿ ಕರೆದುಕೊಂಡು ಬರೋಣ’ ಎಂದು ಅವರನ್ನು ಕರೆದುಕೊಂಡು ರಾಜಾಜಿ ನಗರದಲ್ಲಿ ಆಗಷ್ಟೆ ಚಿಕ್ಕದಾಗಿ ತಲೆಯೆತ್ತಿದ್ದ ಇಸ್ಕಾನ್ ಸಂಸ್ಥೆಗೆ ಹೋದೆನು. ಅಲ್ಲಿ ಈ ಹುಡುಗರಂತೆಯೇ ಹದಿಹರೆಯದಲ್ಲಿ "ಬ್ರೇನ್ ವಾಷ್"ಗೊಳಪಟ್ಟು ಸನ್ಯಾಸಿಗಳಾದ ಓರ್ವ ಗುರುವಿನೊಂದಿಗೆ ವಾದಿಸಿ, ಕೊನೆಗೆ ಕಾನೂನು ಸಮರ ಇಲ್ಲವೇ ದಾದಾಗಿರಿಗಳನ್ನು ಬಳಸಲು ಕೂಡ ನಾನು ಹೇಸುವುದಿಲ್ಲವೆಂದು ಬೆದರಿಸಿದ ಮೇಲೆ ಅವರ ಮಗನನ್ನು ನಮ್ಮೊಂದಿಗೆ ಕಳುಹಿಸಿದರು. ಆದರೆ ಎರಡು ದಿನಗಳ ಹಿಂದಷ್ಟೇ ಹದಿನೆಂಟು ದಾಟಿ ವಯಸ್ಕನಾಗಿದ್ದ ದರ್ಶನ್, ಅಲ್ಲಿಯೇ ಉಳಿದುಕೊಂಡ. ಅದಾದ ಕೆಲವೆರಡು ತಿಂಗಳುಗಳ ನಂತರ ಮೆಜೆಸ್ಟಿಕ್ಕಿನ ಜನತಾ ಬಜಾರ್ ಮುಂದೆ ಬೋಳಿಸಿದ ತಲೆಯ, ಕಾವಿ ಪಂಚೆ ಜುಬ್ಬಾ ತೊಟ್ಟ, ಹಣೆ ಕಣ್ಣುಗಳ ಆಜೂಬಾಜು ಗಂಧಮುದ್ರೆಗಳನ್ನೊತ್ತಿಕೊಂಡ ಯುವ ಸನ್ಯಾಸಿ ದರ್ಶನ್ ಇಸ್ಕಾನ್ ಪ್ರಭುಪಾದರ ಪುಸ್ತಕಗಳನ್ನು ಮಾರುತ್ತಿದ್ದುದನ್ನು ನೋಡಿದೆ. ಅದೇ ಕೊನೇ ಮತ್ತೆ ದರ್ಶನನ ದರ್ಶನ ನಾನಗಾಗಿಲ್ಲ. ಬಹುಶಃ ಇಸ್ಕಾನಿನ ಅಡುಗೆ ಕೋಣೆಯಲ್ಲಿ ’ಸರ್ಕಾರಿ ಶಾಲಾಮಕ್ಕಳ ಬಿಸಿಯೂಟ’ದ ಉಸ್ತುವಾರಿ ನೋಡಿಕೊಳ್ಳುತ್ತ, ಕೃಷ್ಣಜಪದಲ್ಲಿ ತೊಡಗಿರಬಹುದು! ಇಲ್ಲಾ ಬೆಂಗಳೂರಿನ ಯಾವುದಾದರೂ ಜನನಿಬಿಡ ಜಾಗದಲ್ಲಿ ಇಸ್ಕಾನ್ ಪುಸ್ತಕಗಳನ್ನು ಮಾರುತ್ತಿರಬಹುದು.

ಇತ್ತೀಚೆಗೆ ನೀವೆಲ್ಲರೂ ಹೊನ್ನಾಳಿ, ಹುಬ್ಬಳ್ಳಿಯ ಹದಿಹರೆಯದ ಸಿಮಿ ಕಾರ್ಯಕರ್ತರು / ಉಗ್ರಗಾಮಿಗಳ ಬಗ್ಗೆ ಓದಿದ್ದೀರಷ್ಟೆ! ಈಗಷ್ಟೇ ಬಾಲ್ಯದಿಂದ ಹದಿಹರೆಯಕ್ಕೆ ಕಾಲಿಡುತ್ತಿದ್ದ ಈ ಹುಡುಗರು ಕೂಡಾ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ದರ್ಶನನಂತೆಯೇ "ಬ್ರೇನ್ ವಾಷ್"ಗೆ ಒಳಪಟ್ಟಿದ್ದಾರೆ. ಇಸ್ಕಾನ್ ಗುರು "ಲೌಕಿಕ ವಾಂಛೆಯೇ ಜಗದ ಕಷ್ಟಗಳಿಗೆ ಮೂಲ. ಇದೆಲ್ಲವನ್ನು ತೊರೆದು ಅಲೌಕಿಕದೆಡೆಗೆ ನಡೆಯಲು ಕೃಷ್ಣಜಪ ಮಾಡಿ"ರೆಂದು ಜಗದ ಅನುಭವವೇ ಇಲ್ಲದ ಅಮಾಯಕರುಗಳನ್ನು ಕಷ್ಟಾನುಕಷ್ಟಗಳನ್ನನುಭವಿಸಿದ ಸಂಸಾರಿಕರನ್ನೂ ಮೀರಿಸಿ ಸನ್ಯಾಸತ್ವ ತೊಡಿಸಿ ಆಧ್ಯಾತ್ಮದೆಡೆಗೆ ಕಳುಹಿಸಿದ್ದರೆ, ಸಿಮಿಯ ಮೌಲ್ವಿ "ಹೂಸುವ, ಉಚ್ಚೆ ಹುಯ್ಯುವ ಲೌಕಿಕ ಕನ್ಯೆಯರೇಕೆ? ಅಲೌಕಿಕದಲ್ಲಿ ದೇವರು ನಿಮಗಾಗಿ ಒಂದಲ್ಲ ಎರಡಲ್ಲ ಎಪ್ಪತ್ತೆರಡು ಹೂಸದ, ಬೆವರದ, ಸುವಾಸಿತ ಸದಾ ಅಕ್ಷತಕನ್ಯೆಯರಾದ ಹೂರಿಯಹ್ ಕನ್ಯೆಯರನ್ನು ಇಟ್ಟಿದ್ದಾರೆ. ಅವರತ್ತ ಮುಖ ಮಾಡಿ" ಎಂದು ಅಲೌಕಿಕತೆಯಲ್ಲಿ ಲೌಕಿಕ ರಸಗಳು ಇನ್ನೂ ಅದ್ಭುತವಾಗಿವೆ ಎಂದು ತೋರಿಸುತ್ತಾರೆ. ಬಹುಶಃ ಪಾರಮಾರ್ಥಿಕ ಸುಖವನ್ನು ಕಲ್ಪಿಸಿಕೊಳ್ಳದ ಯುವಕರಿಗೆ ಲೌಕಿಕತೆಯ ಈ ರೂಪದಲ್ಲಿ ಅಲೌಕಿಕತೆಯನ್ನು ಪರಿಚಯಿಸುವ ಪರಿ ಇದಾಗಿದೆಯೇನೋ?

ಏನಾದರೂ ಸಾಧನೆಯನ್ನೋ, ಕ್ರಾಂತಿಯನ್ನೋ ತೀವ್ರವಾಗಿ ಮಾಡಿಬಿಡಬೇಕೆನ್ನುವ ಹದಿಹರೆಯದ ಹುಮ್ಮಸ್ಸಿನಲ್ಲಿ ಕೆಲವರು ಪ್ರೇಮಿಸುವುದು, ಕದ್ದು ಕುಡಿಯುವುದು ಇವುಗಳನ್ನೇ ಕ್ರಾಂತಿಯೆಂದುಕೊಂಡರೆ ಕೆಲವರಿಗೆ ಈ ಪಂಥೀಯರುಗಳ ಭೋಧನೆ ಅಪ್ಯಾಯಮಾನವೆನಿಸಿಬಿಡುತ್ತದೆ. ಹಾಗಾಗಿಯೇ ನಮ್ಮಲ್ಲಿ ಸಾವಿರಾರು ಸಿನಿಮಾಗಳು ಪ್ರೇಮ, ಇಲ್ಲಾ ರೌಡಿಯಿಸಂ ಈ ಎರಡನ್ನೇ ಪ್ರಮುಖವಾಗಿ ಮಾಡಿಕೊಂಡು ಅಥವಾ ಎರಡನ್ನೂ ಕಲಸಿಕೊಂಡು ತಯಾರಾಗುತ್ತಿರುವುದು ಮತ್ತು ಸೂಪರ್ ಹಿಟ್ ಆಗುತ್ತಿರುವುದು!

ಇರಲಿ, ಒಟ್ಟಾರೆ ಈ ಪಂಥೀಯವಾದಿಗಳು ಆಗಷ್ಟೆ ಪೊರೆ ಕಳಚಿ ತರುಣಾವಸ್ಥೆಗೆ ಕಾಲಿಡುತ್ತಿರುವ ಅಮಾಯಕ ಮಿಕಗಳನ್ನು ಸರಳವಾಗಿ ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ತಮ್ಮ ತಮ್ಮ ನಂಬಿಕೆ, ಉದ್ದೇಶಗಳನ್ನು ಈ ಯುವ ಪೀಳಿಗೆಯ ಮೇಲೆ ಹೇರಿ, ಬೆಳೆದು ಬಾಳು ಬೆಳಗಿಸಿಕೊಳ್ಳಬೇಕಾದ ಈ ಯುವ ದೀವಿಗೆಗಳನ್ನು ಉರಿಯುವ ಮೊದಲೇ ನಂದಿಸುತ್ತಿದ್ದಾರೆ. ಇದಕ್ಕೆ ಯಾವುದೇ ಪಂಥೀಯ ಸಂಘಟನೆಗಳು ಹೊರತಾಗಿಲ್ಲ. ಅದು ಅಲ್ ಖೈದಾ, ಸಿಮಿ, ಲಷ್ಕರ್-ಇ-ತೌಯಿಬಾ, ಇಸ್ಕಾನ್, ಬ್ಲ್ಯಾಕ್ ಟ್ರೆಂಚ್ ಕೋಟ್, ಹಿಪ್ಪಿ, ನಕ್ಸಲ್, ಎಡಪಂಥೀಯ, ಬಲಪಂಥೀಯ ಅಥವಾ ಇನ್ನಾವುದೇ "ಕಲ್ಟ್" ಮಾದರಿಯ ಪಂಥೀಯರಾಗಿರಬಹುದು. ಯಾವುದೋ ಕಾಲದ ತತ್ವಕ್ಕೆ ಜೋತುಬಿದ್ದು, ಆ ತತ್ವಗಳು ವರ್ತಮಾನ ಕಾಲಘಟ್ಟದಲ್ಲಿ ಅಸಹಜ ಅಭಾಸವಾಗಿ ಅಪ್ರಸ್ತುತವಾಗಿದ್ದರೂ ಅದರ ಪರಿವೆಯಿಲ್ಲದೇ ಗತ ಲೋಕದ ಆ ಕಾಲದ ಭ್ರಮಾಲೋಕದಲ್ಲಿ ತೇಲುತ್ತಿರುವ ಈ ಹುಚ್ಚರ ಸಂಘಟನೆಗಳು ನಮ್ಮ ಇಂದಿನ ಯುವಶಕ್ತಿಯನ್ನು ಆಕರ್ಷಿಸುತ್ತಿರುವುದು ಸಾಮಾಜಿಕ ದುರಂತ!

ಈ ಅಮಾಯಕ ಯುವಕರ ತಲೆ ಸವರಿ ಇಸ್ಕಾನ್ ನಂತಹ ಸಂಘಗಳು ಮೆಜೆಸ್ಟಿಕ್ ನಲ್ಲಿ ಪುಸ್ತಕ ಮಾರಿಸುತ್ತ ಅವರನ್ನು ಸಮಾಜದೊಳಗಿದ್ದೂ ಖೈದಿಗಳಂತೆ ಬಾಳಿಸಬಹುದು; ಸಿಮಿಯಂತಹ ಸಂಘಗಳು ಆ ಯುವಕರಿಂದ ಮೆಜೆಸ್ಟಿಕ್ ನಂತಹ ಜನನಿಬಿಡ ಸ್ಥಳಗಳಲ್ಲಿ ಬಾಂಬ್ ಹಾಕಿಸಿ ಅವರನ್ನು ಹೂರಿ ಕನ್ಯೆಯರೊಂದಿಗೆ ವಿಹಾರಕ್ಕೋ ಅಥವಾ ಅವರು ಹೌಹಾರುವಂತಹ ಬಳ್ಳಾರಿ ಬಂದೀಖಾನೆಗೋ ಕಳುಹಿಸಬಹುದು; ಅಥವಾ ನಕ್ಸಲ್ ಸಂಘಟನೆಗಳಂಥಹ ಸಂಘಟನೆಗಳು ಈ ಯುವಕರುಗಳ "ಲಾಲ್ ಸಲಾಮ್" ಚರಮಗೀತೆ ಹಾಡಬಹುದು; ಒಟ್ಟಾರೆ ಹದಿಹರೆಯದ ಪ್ರಬಲ ಯುವಶಕ್ತಿಯನ್ನು ಈ ಸಂಘಟನೆಗಳು ನಾಶಮಾಡುತ್ತಿವೆ. ದೇವರ ಅನುಯಾಯಿಗಳಾಗಿಯೋ ಅಥವಾ ತತ್ವಸಿದ್ಧಾಂತವೇ ದೇವರೆನ್ನುವ ಪಂಥಿಗಳಾಗಿಯೋ ಈ ಎಲ್ಲಾ ಸಂಘಟನೆಗಳು ತಾವು ನಂಬಿದ ದೇವರುಗಳ ಸೃಷ್ಟಿಯನ್ನು ದೇವರುಗಳ ಹೆಸರಿನಲ್ಲಿಯೇ ನಾಶಮಾಡುತ್ತಿರುವುದು ಆ ದೇವರುಗಳ ವಿಪರ್ಯಾಸ!

ಕೆಲವು ಸಮಾಜದ ಕಾನೂನಿನ ದೃಷ್ಟಿಯಲ್ಲಿ ಸಮಾಜಘಾತುಕವೆನಿಸಿಕೊಳ್ಳಬಹುದು. ಇನ್ನು ಕೆಲವು ಕಾನೂನಿನ ಪರಿಧಿಯಲ್ಲಿಯೇ ಗೌರವಾನ್ವಿತವೆನಿಸಬಹುದು, ಅಷ್ಟೇ ವ್ಯತ್ಯಾಸ.

ಒಟ್ಟಾರೆ ದರ್ಶನ್ ಖಾವಿ ತೊಟ್ಟು ಹಾದಿ ಬದಿಯಲ್ಲಿ ಪುಸ್ತಕ ಮಾರಿದರೆ, ಕಫೀಲ ಕಾಣದ ಲೋಕದಲ್ಲಿ ಎಪ್ಪತ್ತೆರಡು ಹೂರಿ ಕನ್ಯೆಯರೊಂದಿಗೆ ವಿಹರಿಸುತ್ತಿದ್ದಾನೆ! ದರ್ಶನ್, ಕಫೀಲ್ ರಂತಹ ಅದೆಷ್ಟೋ ಮಕ್ಕಳನ್ನು ಕಳೆದುಕೊಂಡ ಭಾರತಮಾತೆಯ ಕಣ್ಣೊರೆಸಬೇಕಾದ ನಾಯಕರುಗಳಿಂದು ಅವಳ ಮೇಲಿನ ಅಧಿಕಾರದ ಹಂಚಿಕೆಯ ಹೊಂಚು ಹಾಕುತ್ತಿದ್ದಾರೆ.

ಅಣಕ:

ಈ ಸಾರಿಯ ಲೇಖನ ಯುವಕರಿಗೆ ಸಂಬಂಧಿಸಿದ ಲೇಖನವಾದುದರಿಂದ ಮತ್ತು ಅನೇಕರು ನನ್ನನ್ನು ಯಾಕೆ ತಂಪು ಕನ್ನಡಕವನ್ನು ಆದಷ್ಟೂ ಧರಿಸಿರುತ್ತೀಯಾ? ಎಂದು ಕೇಳುವುದಕ್ಕೆ ತುಂಟ ಉತ್ತರವಾಗಿ ಈ ಅಣಕವನ್ನು ಸ್ವಲ್ಪ ಚಿತ್ರಮಯವಾಗಿ ಕೊಟ್ಟಿದ್ದೇನೆ. ದಯಮಾಡಿ ಕೆಳಗಿನ ಚಿತ್ರವನ್ನು ಪರಾಂಭರಿಸಿ ನನ್ನ ಕನ್ನಡಕದ ಹಿಂದಿನ ಕಣ್ಣುಗಳು, ಆರೋಗ್ಯವಂತ ಯುವಕರಂತೆ ಏನು ಮಾಡುತ್ತಿರುತ್ತವೆ ಎಂಬುದನ್ನು ಕಂಡುಕೊಳ್ಳಿ.

ಹಾಂ! ಹೀಗೆ ಕನ್ನಡಕ ಧರಿಸುವುದು ನಾನೊಬ್ಬನೇ ಅಲ್ಲ ಸ್ವಾಮೀ, ಹಾಲಿವುಡ್ ನಟರುಗಳಿಂದ ಹಿಡಿದು, ದಿವಂಗತರಾಗಿರುವ ಎಂಜಿಆರ್‍, ಗುಂಡೂರಾವ್ ಅಲ್ಲದೆ ಇನ್ನೂ ಚಿರಂಜೀವಿಗಳಾಗಿರುವ ಕರುಣಾನಿಧಿ, ಬಾಲಿವುಡ್ ನಟರಾದಿಯಾಗಿ ಅನೇಕರು ಸಾರ್ವತ್ರಿಕವಾಗಿರುವಾಗಿ ತಂಪು ಕನ್ನಡಕ ಧರಿಸುತ್ತಾರೆ.

ಗಂಡಸರು ಯಾಕೆ ಹೀಗೆ ಸನ್ ಗ್ಲಾಸ್ ಹಾಕಿಕೊಳ್ಳುತ್ತಾರೆ ಎಂಬುದಕ್ಕೆ ಚಿತ್ರ ಮುಖೇನ ಉತ್ತರಿಸಿದ್ದೇನೆ. ಹೆಂಗಸರು ಯಾಕೆ ಸನ್ ಗ್ಲಾಸ್ ಧರಿಸುತ್ತಾರೆಂಬುದುರ ಬಗ್ಗೆ ನೀವು ಹೇಳಬೇಕು!

ಭಾರತದ ರಿಯಲ್ ಎಸ್ಟೇಟೂ, ಅಮೇರಿಕಾದ ರಿಸೆಷನ್ನೂ!

ಕಳೆದ ವಾರದ ಲಾಲೂ ಲೇಖನವನ್ನು ಮೆಚ್ಚಿ ಹಲವಾರು ಓದುಗರು ಮೆಚ್ಚುಗೆ ಸೂಚಿಸಿ ಇಮೇಲ್ ಸಿದ್ದರು. ಹಾಗೆಯೇ ಬಾರ್ಸಿಲೋನಾದಿಂದ ರಂಗಸ್ವಾಮಿಯವರು ಲೇಖನವನ್ನು ಮೆಚ್ಚುತ್ತ ಹಿಂದಿಯು ನಮ್ಮ ರಾಷ್ಟ್ರಭಾಷೆಯಲ್ಲವೆಂದೂ, ಹಿಂದಿಯು ಕೂಡ ಭಾರತ ಸರ್ಕಾರವು ನಿಗದಿ ಪಡಿಸಿರುವ ಆಡಳಿತ ಭಾಷೆಗಳಲ್ಲಿಯೊಂದೆಂದು ತಿಳಿಸಿದರು. ಅದ್ಯಾವ ಕಾರಣದಿಂದ ನನ್ನ ಹೈಸ್ಕೂಲು ಮೇಷ್ಟ್ರುಗಳು ಹಿಂದಿಯನ್ನು ನಮ್ಮ ರಾಷ್ಟ್ರಭಾಷೆಯೆಂದು ನಮಗೆ ಭೋಧಿಸಿದ್ದರೋ ಗೊತ್ತಿಲ್ಲ. ಭಾರತಕ್ಕೆ ಯಾವುದೇ ರಾಷ್ಟ್ರಭಾಷೆಯಿಲ್ಲದೇ ಕೇವಲ ಆಡಳಿತ ಭಾಷೆಗಳಿವೆ ಎಂಬುದು ಸತ್ಯ ಸಂಗತಿ. ಹಿಂದಿಯನ್ನು ರಾಷ್ಟ್ರಭಾಷೆಯೆಂದುಕೊಂಡಿದ್ದ ನನ್ನ ಮೌಢ್ಯಕ್ಕೆ ಕ್ಷಮೆಯಿರಲಿ.

ಮೊನ್ನೆ ನನ್ನ ಸ್ನೇಹಿತನೊಬ್ಬ ಚೆನ್ನೈನಲ್ಲಿ ಡಿ.ಎಲ್.ಎಫ್. ಕಂಪೆನಿಯವರು ೨೭೦೦ ರೂಪಾಯಿಗೆ ಚದರಡಿಯಂತೆ ಅಪಾರ್ಟಮೆಂಟುಗಳನ್ನು ಬುಕ್ಕಿಸಿಕೊಳ್ಳುತ್ತಿರುವರೆಂದೂ, ಇದು ಕೇವಲ ’ಆರಂಭ ಮುನ್ನಾ’ದ ಬೆಲೆಯಾಗಿದ್ದು ಅದು ವಾರದೊಳಗೆ ’ಆರಂಭ ನಂತರ’ದ ಬೆಲೆಗೇರುವುದೆಂದೂ, ತಾನು ತುರ್ತಾಗಿ ಬ್ಯಾಂಕಿಗೆ ಹೋಗಿಬರುವ ಕಾರಣ ಒಂದು ಘಂಟೆ ಇರುವುದಿಲ್ಲವೆಂದು ಹೇಳಿ ಹೋದನು. "ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ"ನಾಗ ಬಯಸುತ್ತಿರುವ ಅವನನ್ನು ಕಂಡು ಖುಷಿಯಾಯಿತು. ಕೆಲಸದ ಒತ್ತಡದಲ್ಲಿ ನಂತರ ಆ ವಿಷಯವನ್ನು ನಾನು ಮರೆತುಹೋದೆನು. ಕೆಲವು ವಾರಗಳ ನಂತರ ನನ್ನಲ್ಲಿಗೆ ಬಂದ ನನ್ನ ಆ ಸ್ನೇಹಿತನನ್ನು ಕಂಡು ಅವನ ಚೆನ್ನೈ ವಿಷಯ ನೆನಪಾಗಿ ವಿಚಾರಿಸಿದೆನು. ಅದಕ್ಕವನು ಆ ಕಂಪೆನಿ ಬುಕ್ಕಿಂಗ್ ತೆರೆದ ದಿನ ಜನರು ರಜನೀಕಾಂತ್ ಸಿನೆಮಾ ಕ್ಯೂ ಮಾದರಿಯಲ್ಲಿ ಕ್ಯೂ ನಿಂತು ಕೊಂಡುದುದರ ಪರಿಣಾಮವಾಗಿ ಕೇವಲ ನಾಲ್ಕು ಘಂಟೆಗಳಲ್ಲಿಯೇ ಎಲ್ಲಾ ೭೦೦ ಯುನಿಟ್ ಗಳೂ ಮಾರಾಟವಾಗಿಹೋದವೆಂದೂ, ಮತ್ತು ಅವನಿಗೆ ಅದು ಸಿಕ್ಕಲಿಲ್ಲವಾದರೂ ಮುಂದಿನ ಎರಡನೇ ಪೇಃಸ್ ನಲ್ಲಿ ಐದು ಲಕ್ಷ ಮುಂಗಡ ಕೊಟ್ಟು ಬುಕ್ಕಿಸಿದ್ದಾಗಿ ಹೇಳಿದನು. ಬರುತ್ತಿರುವ ಆ ಅಪಾರ್ಟಮೆಂಟ್ ಕಟ್ಟಡವು ಅಕ್ಸೆಂಚರ್, ಹೆಚ್.ಪಿ., ಇನ್ನು ಮುಂತಾದ ಬಹುರಾಷ್ಟ್ರ್‍ಈಯ ಕಂಪೆನಿಗಳ ಹತ್ತಿರದಲ್ಲಿದೆಯೆಂದೂ, ಆ ಏರಿಯಾದಲ್ಲಿ ಕಡಿಮೆಯೆಂದರೂ ೪೦೦೦ ರೂಪಾಯಿಗೆ ಚದರಡಿ ನಡೆಯುತ್ತಿದೆಯೆಂದನು.

ಅಲ್ಲಾ, ಅತ್ಯಂತ ಮುಂದುವರಿದ ರಾಷ್ಟ್ರ, ಎಲ್ಲಾ ದೇಶಗಳ ಹಿರಿಯಣ್ಣ(?)ನೆನ್ನುವ ಅಮೇರಿಕಾವು ತನ್ನಲ್ಲಿ ಅಂಕೆಯಿಲ್ಲದ ಗೃಹಸಾಲಗಳ ಮತ್ತು ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಕಾರಣವಾಗಿ ಇಲ್ಲಿನ ಮನೆಗಳ ಬೆಲೆಗಳು ಇಳಿಮುಖವಾಗಿವೆ ಎಂದು ಅದನ್ನು ತಡೆಯಲು ಯೋಜನೆಗಳನ್ನು ಹಾಕಿಕೊಳ್ಳುತ್ತಿರುವಾಗ, ಭಾರತದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಇದೇ ಅಮೇರಿಕಾದ ಕಂಪೆನಿಗಳಲ್ಲಿನ ಉದ್ಯೋಗಗಳ ಮೇಲೆ ಆಧಾರಗೊಂಡು ರಿಯಲ್ ಎಸ್ಟೇಟ್ ಬೆಲೆ ವಿಪರೀತವಾಗಿ ಏರಿದೆ, ಏರುತ್ತಿದೆ. ಆದರೆ ಇದು ನಿಜಕ್ಕೂ ಭಾರತದ ಸ್ವಾವಲಂಬಿತ ಆರ್ಥಿಕತೆಯ ಕಾರಣವೇ? ಅಲ್ಲವೇ ಅಲ್ಲವೆನ್ನಬಹುದು. ಯಾಕೆಂದರೆ ಈ ಎಲ್ಲಾ ಬೆಳವಣಿಗೆ ಪರಾವಲಂಬೀ ಆರ್ಥಿಕತೆಯ ಪರಿಣಾಮ! ಹಾಗಾಗಿಯೇ ಆ ಬಿಲ್ಡರ್ ಗಳು ಬರೀ ಸಾಫ್ಟ್ ವೇರ್ ಕಂಪೆನಿಗಳ ಹೆಸರುಗಳನ್ನೆತ್ತಿ ರೂಪಾಯಿಗಳ ಭಾರತದಲ್ಲಿ ಅಮೇರಿಕಾದ ಡಾಲರ್ ನಲ್ಲಿಯೇ ಬೆಲೆ ನಿಗದಿಪಡಿಸುತ್ತಿದ್ದಾರೆ. ’ಎಂಪ್ಲಾಯಮೆಂಟ್ ಅಟ್ ವಿಲ್’ ಎಂಬ ತತ್ವದ ಮೇಲೆ, ಅಲ್ಪಖರ್ಚಿನ ಇಂಗ್ಲಿಷ್ ಮಾತನಾಡಬಲ್ಲ ಭಾರತದ ಮಾನವ ಶಕ್ತಿಯ ಒಂದೇ ಕಾರಣಕ್ಕಾಗಿ ಭಾರತಕ್ಕೆ ಬಂದಿರುವ ಈ ಕಂಪೆನಿಗಳ ಈ ’ಟೆಂಪರರಿ’ ಆರ್ಥಿಕತೆಯನ್ನು ನಂಬಿ ಶಾಶ್ವತ ಪಂಗನಾಮ ಹಾಕಿಸಿಕೊಳ್ಳುತ್ತಿರುವ ಭಾರತೀಯ ಅದ್ಯಾವ ಪರಿ ರೂಪಾಯಿ ಲೋಕದಲ್ಲಿ ಡಾಲರ್ ಬೆಲೆಗೆ ಈ ಮನೆಗಳನ್ನು ಕೊಳ್ಳುತ್ತಿರುವನೋ?

ಇದಕ್ಕೆಲ್ಲಾ ಭಾರತದ ಬೆಳೆಯುತ್ತಿರುವ ಪ್ರಬಲ ಸ್ವಾವಲಂಬೀ ಆರ್ಥಿಕತೆ ಕಾರ್‍ಅಣವೆಂದು ನಂಬಲು ನನಗಾಗುವುದಿಲ್ಲ. ಪ್ರಬಲ ಲ್ಯಾಂಡ್ ಮಾಫಿಯಾ, ದುರುಳ ರಾಜಕಾರಣಿಗಳು ಅಮೇರಿಕಾದ ಈ ಕಂಪೆನಿಗಳ ನೆಪವೊಡ್ಡಿ ಭಾರತೀಯರೇ ಭಾರತೀಯರನ್ನು ಮೋಸಗೊಳಿಸುತ್ತಿರುವ ಕಹಿಸತ್ಯವೇ ಎಂದು ನನಗನಿಸುತ್ತದೆ. ಆದರೂ ಇದು ಎಷ್ಟು ಹಾಸ್ಯಾಸ್ಪದವೆಂದರೆ ಬೆಂಗಳೂರಿನ ಕೆಲ ಹೋಟೇಲುಗಳಲ್ಲಿ ಇಂಗ್ಲಿಷ್ ಹೆಸರಿಡುವ ಹುರುಪಿನಲ್ಲಿ ಹುರಿದ ಕೋಳಿ ಕಾಲಿಗೆ "ಚಿಕನ್ ಲಾಲಿಪಾಪ್" ಎನ್ನುವಂತೆ! ಲಾಲಿಪಾಪ್ ಎಂದೊಡನೆ ಕೋಳಿ ನೆಕ್ಕಿದೊಡನೆ ಸಿಹಿಯಾಗಿ ಬಾಯಲ್ಲಿ ಕರಗುವುದೇ ಇಲ್ಲಾ ವಿದೇಶೀ ಡಾಲರ್ ಬೆಲೆಗೆ ಈ ಮನೆಗಳನ್ನು ಕೊಂಡೊಡನೆ ಭಾರತ ಅಮೇರಿಕಾವಾಗಿಬಿಟ್ಟೀತೇ?

ಯೋಚಿಸಿ ನೋಡಿ, ಬೆಂಗಳೂರಿನ ಹೊರವಲಯದಲ್ಲಿ ಒಂದು ೬೦:೪೦ ರ ಸೈಟಿಗೆ ಒಂದು ಕೋಟಿಯೆಂದರೆ ಸರಾಸರಿ ಎರಡೂವರೆ ಲಕ್ಷ ಡಾಲರ್. ಮನೆ ಕಟ್ಟಲು ಮತ್ತೊಂದು ಅರ್ಧ ಕೋಟಿ ರೂಪಾಯಿಯೆಂದುಕೊಂಡರೂ ಒಟ್ಟು ಮೂರೂಮುಕ್ಕಾಲು ಲಕ್ಷ ಡಾಲರ್. ಆ ಬೆಲೆಗೆ ನಾನಿರುವ ಶಿಕಾಗೋದ ಹೊರವಲಯದಲ್ಲಿ ೧೦೦:೧೮೦ ಜಾಗೆಯಲ್ಲಿ ಕಟ್ಟಿರುವ ೨೮೦೦ ಚದರಡಿಯ, ಶುದ್ಧ ಗಾಳಿ / ಬೆಳಕಿನ ಎರಡಂತಸ್ತಿನ ಮನೆ ಬರುತ್ತದೆ. ವಿಷಯ ಹೀಗಿರುವಾಗ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಶಿಕಾಗೋಗಿಂತ ಆರ್ಥಿಕ ಉನ್ನತಿಯಲ್ಲಿದೆಯೇ ಅಥವಾ ಕನಿಷ್ಟ ಅಲ್ಲಿಯಷ್ಟು ಶುದ್ಧ ಗಾಳಿ ಬೆಳಕಿನಿಂದೊಡಗೂಡಿದೆಯೆ? ಬೆಂಗಳೂರು ಅತೀ ದುಬಾರಿಯಾಯಿತೆಂದುಕೊಂಡು ಈ ಕಂಪೆನಿಗಳು ಜೆಕ್ ರಿಪಬ್ಲಿಕ್ಕಿಗೋ, ಹಂಗರಿಗೋ ಅಥವಾ ಕಜಕಿಸ್ತಾನಕ್ಕೋ ಹೋದರೆ, ಸಾಲದ ಮೇಲೆ ಈ ಮನೆಗಳನ್ನು ತೆಗೆದುಕೊಂಡಿರುವವರು ಏನು ಮಾಡುತ್ತಾರೆಯೋ? ಯಾಕೆಂದರೆ ಇಲ್ಲಿನ ಕಂಪೆನಿಗಳು ಆ ದೇಶಗಳತ್ತ ಆಗಲೇ ಮುಖ ಮಾಡಿವೆ. ನಾನೇ ಖುದ್ದಾಗಿ ಈ ಉದ್ದೇಶವಾಗಿ ನನ್ನ ಕಂಪೆನಿಯಿಂದ ಹಂಗರಿಗೆ ಹೋಗಿ ಬಂದಿದ್ದೇನೆ!

ವಿಷಯ ಹೀಗಿರುವಾಗಿ ಅದು ಯಾರು ಹೇಗೆ ಈ ಬೆಲೆಗೆ ಕೊಳ್ಳುತ್ತಿರುವವರು? ಇದಕ್ಕೆಲ್ಲ ಕಾರಣ, ಭಾರತದಲ್ಲಿ ಇತ್ತೀಚೆಗೆ ಅತೀ ಸುಲಭವಾಗಿ ಸಿಗುತ್ತಿರುವ ಸಾಲಗಳು! ಈ ಅತೀ ಸುಲಭ ಸಾಲ ಸಿಗುವಂತಾಗಿದ್ದುದಕ್ಕೆ ಪ್ರಮುಖ ಕಾರ್‍ಅಣ, ಕೊಟ್ಟ ಚೆಕ್ಕುಗಳು ಬೌನ್ಸ್ ಆದರೆ ಅದು ಕ್ರಿಮಿನಲ್ ಅಪರಾಧವೆಂದು ಕಾನೂನು ಮಾಡಿದ್ದುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು ಅಲ್ಲವೇ?

"ಕೊಟ್ಟವನು ಕೋಡಂಗಿ, ಇಸ್ಕೊಂಡವನು ಈರಭದ್ರ" ಎಂಬುದನ್ನು ಹತೋಟಿಗೆ ತರಲು ಈ ಕಾಯ್ದೆಯನ್ನು ನಮ್ಮ ನಾಯಕರುಗಳು ಜಾರಿಗೊಳಿಸಿದರೆ, ಬ್ಯಾಂಕುಗಳು ಇದನ್ನು ಚಾಣಾಕ್ಷವಾಗಿ "ಸಾಲವನು ಕೊಂಬಾಗ ಹಾಲೋಗರವನುಂಡಂತೆ, ಸಾಲಿಗನು ಬಂದು ಎಳೆದಾಗ ಕಿಬ್ಬದಿಯ ಕೀಲು ಮುರಿದಂತೆ" ಎಂದು ಗ್ರಾಹಕರಿಗೆ ಅರ್ಥೈಸಲು ಅನುಕೂಲವಾಗಿ ಬಳಸಿಕೊಳ್ಳುತ್ತಿವೆ. ಅದಕ್ಕೇ ನಾನು ಸದಾ ಒತ್ತಿ ಹೇಳುವುದು ನಮ್ಮ ನಾಯಕರುಗಳಿಗೆ ಧೀರ್ಘಾಲೋಚನೆಗಳು ಇಲ್ಲವೆಂದು! ಈ ಕಾನೂನಿನ ಪರಿಣಾಮದಿಂದ ಇಂದು ಬ್ಯಾಂಕುಗಳು ತಮ್ಮೆಲ್ಲಾ ನಿಯಮಗಳನ್ನು ಸಡಿಲಿಸಿಕೊಂಡು ಸಾಲದ ಪೂರ್ಣಾವಧಿಯ ಎಲ್ಲಾ ಕಂತುಗಳ ಪ್ರತಿ ಕಂತಿನ ಮೊತ್ತದ ’ಪೋಸ್ಟ್ ಡೇಟೆಡ್ ಚೆಕ್’ಗಳನ್ನು ತೆಗೆದುಕೊಂಡು ಸುಲಭವಾಗಿ ಸಾಲವನ್ನು ನೀಡುತ್ತವೆ. ಹಾಗೆಯೇ ಯಾವುದಾದರೂ ಕಂತಿನ ಚೆಕ್ಕು ಬೌನ್ಸ್ ಆದರೆ ಆ ವ್ಯಕ್ತಿಯ ವಿರುದ್ಧ ದಾವೆ ಹೂಡುತ್ತವೆ. ಇಂದು ಈ ಕಾನೂನಿನ ದೆಸೆಯಿಂದ ಕೋರ್ಟುಗಳಲ್ಲಿ ಈ ರೀತಿಯ ದಾವೆಗಳು ಅತ್ಯಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಅದೆಷ್ಟು ಕೇಸುಗಳೆಂದರೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ’ಕೋರ್ಟುಗಳು ಸಾಲ ವಸೂಲಿ ಮಾಡಿಕೊಡುವ ಸಂಸ್ಥೆಗಳಲ್ಲ’ವೆಂದು ಈ ಬಗೆಯ ದಾವೆಗಳನ್ನು ತಿರಸ್ಕರಿಸುವತ್ತ ಮುಖ ಮಾಡಿದೆ. ಕೋರ್ಟಿಗೆ ಇದು ತಲೆನೋವಿನ ಸಂಗತಿಯಾದರೂ ಅದು ಆ ಕಾನೂನಿಗೆ ತಿದ್ದುಪಡಿಯನ್ನು ತರಬೇಕೇ ಹೊರತು ಈ ರೀತಿ ಕೇಸುಗಳನ್ನು ತಿರಸ್ಕರಿಸುವುದು ಸರಿಯಲ್ಲವೆನಿಸುತ್ತದೆ.

ಇರಲಿ, ಒಟ್ಟಾರೆ ದೂರಗಾಮಿತ್ವವಿಲ್ಲದ ನಾಯಕತೆ, ದಿಢೀರ್‍ ಶ್ರೀಮಂತರಾಗಬೇಕೆಂಬ ದುರಾಸೆ, ಭದ್ರ ಬುನಾದಿಯಿಲ್ಲದ ಆರ್ಥಿಕ ಬೆಳವಣಿಗೆ ಇದೆಲ್ಲವೂ ಅತಿಯಾಗಿ ತಿಂದು ಅಸಿಡಿಟಿಯಾದವರ ಹೊಟ್ಟೆಯ ಮಾದರಿಯಲ್ಲಿ ಈ ನಗರಗಳ ರಿಯಲ್ ಎಸ್ಟೇಟ್ ಬೆಲೆ ಊದಿಕೊಂಡಿದೆ. ಅದಕ್ಕೆ ಸರಿಯಾಗಿ ಅಮೇರಿಕಾದ ’ಗ್ಯಾಸ್ ಎಕ್ಸ್’ ಇಲ್ಲ ಬಡ ಭಾರತದ ’ನಿಂಬು ಸೋಡಾ’ ಕೊಡುವಂತಹ ಕನಸುಗಾರ ಚಿಕಿತ್ಸಕ ನಾಯಕರ ಬರುವಿಕೆಗಾಗಿ ಭಾರತ ಬಹುಕಾಲದಿಂದ ಕಾಯುತ್ತಿದೆಯೇನೋ? (ರಾಮನಿಗಾಗಿ ಕಾಯುತ್ತಿದ್ದ ಶಬರಿಯ ಮಾದರಿ).

ಹಾಂ, ಇನ್ನೊಂದು ಸಂಗತಿ ಕಳೆದೆರಡು ವಾರಗಳ ಹಿಂದೆ ’ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ’ಯ ಕುರಿತಾಗಿಯೂ, ಈ ಬಾರಿ ’ಚೆಕ್ಕುಗಳು ಬೌನ್ಸ್’ ಕುರಿತಾಗಿಯೂ ಅಕ್ಷೇಪಿಸಿರುವ ಸುಪ್ರೀಂ ಕೋರ್ಟ್, ಹೆಚ್.ಪಿ. ಕಾಲ್ ಸೆಂಟರ್ ಉದ್ಯೋಗಿಯ ಅತ್ಯಾಚಾರ/ಕೊಲೆ ಕೇಸಿನಲ್ಲಿ ತನ್ನ ಉದ್ಯೋಗಿಗಳಿಗೆ ಸರಿಯಾಗಿ ರಕ್ಷಣೆ ಕೊಡದ ಹೆಚ್.ಪಿ. ಅಧಿಕಾರಿ ಸೋಮ್ ಮಿತ್ತಲ್ ರನ್ನೂ ಅಪರಾಧಿಯಾಗಿಸಿ ಎಂದು ಆದೇಶಿಸಿದೆ. ತನ್ನ ಸಂಸ್ಥೆಯಲ್ಲಿ ಉದ್ಯೋಗದಲ್ಲಿಲ್ಲದ ಡ್ರೈವರ್ ಒಬ್ಬ ಮೋಸದಿಂದ ಆ ಉದ್ಯೋಗಿಯನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಕ್ಕೆ ಈ ಸಂಸ್ಥೆಯ ಅಧಿಕಾರಿಗಳು ಅದು ಹೇಗೆ ಜವಾಬ್ದಾರಿಯಾಗುತ್ತಾರೋ? ಭಾರತದಲ್ಲಿ ನಡೆಯುವ ಕೊಲೆ, ಸುಲಿಗೆ, ಅತ್ಯಾಚಾರಗಳಿಗೆಲ್ಲಾ ಪೊಲೀಸ್ ಅಧಿಕಾರಿಗಳನ್ನೂ, ಗೃಹಸಚಿವರುಗಳನ್ನೂ, ಮುಖ್ಯಮಂತ್ರಿಗಳನ್ನೂ ಮತ್ತು ರಾಷ್ಟ್ರಪತಿಗಳನ್ನೂ ಜವಾಬ್ದಾರಿ ಮಾಡಿ, ತಮ್ಮ ದೇಶದ ನಾಗರೀಕರಿಗೆ ರಕ್ಷಣೆ ಕೊಡುವುದು ಇವರೆಲ್ಲರ ಆದ್ಯ ಕರ್ತವ್ಯವಾಗಿದೆಯೆಂದು ಅವರುಗಳನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸಬಹುದೇನೋ?


ಅಣಕ:

ಬೆಂಗಳೂರಿನ ಬೆಳವಣಿಗೆ, ಇಷ್ಟೆಲ್ಲಾ ಅಮೇರಿಕಾದ ಕಂಪೆನಿಗಳ ಮೇಲೆ ಆಧಾರಗೊಂಡಿದ್ದರೂ ಅಮೇರಿಕಾದ ರಿಸೆಷನ್ನೂ, ಇನ್ಫ್ಲೇಷನ್ನೂ ಬೆಂಗಳೂರನ್ನು ಅಭಾದಿತವಾಗಿಟ್ಟಿರುವುದು ಯಾಕೆ ಗೊತ್ತೆ?

ಬೆಂಗಳೂರಿನ ಎ೧ ಮುಖ್ಯಮಂತ್ರಿಗಳಿಂದ ಹಿಡಿದು ದರಿದ್ರ ನಾರಾಯಣನವರೆಗೂ ಎಲ್ಲರೂ "ವಾಸ್ತು", "ಫೆಂಗ್ ಶ್ವೇ"ಗಳಿಗನುಸಾರವಾಗಿ ತಮ್ಮ ತಮ್ಮ ವಸತಿ, ವ್ಯವಹಾರಗೃಹಗಳನ್ನು ನಿರ್ಮಿಸಿಕೊಂಡಿರುವುದು ಅಥವಾ ಮಾರ್ಪಾಡಿಸಿಕೊಂಡಿರುವುದು! ಇಂದು ಬೆಂಗಳೂರಿನ ಚರಂಡಿಗಳೂ ವಾಸ್ತು ಪ್ರಕಾರವಾಗಿವೆ.

ವಿಷಯ ಹೀಗಿರುವಾಗ "ಬ್ಲಡೀ ಅಮೇರಿಕಾದ ರಿಸೆಷನ್ನೂ" ನಮಗ್ಯಾವ ಲೆಕ್ಕ?

ಹಾಗೇನಾದರೂ ಒಂದು ವೇಳೆ ಹೆಚ್ಚು ಕಮ್ಮಿಯಾದರೇ "ಎಡೆಯೂರಪ್ಪ" "ಎಡ್ಡ್ಯೂರಪ್ಪ" ಆದಂಗೆ ಹೆಸರು ಬದಲಾಯಿಸ್ಕಂಡರಾಯ್ತು!