ಅಕ್ಕ, ಯಾಕೆ ಎಲ್ಲರಿಗೂ ಬೇಕು ನಿನ್ನ ಪಕ್ಕ?

ಅಮೇರಿಕಾ ಕನ್ನಡ ಕೂಟಗಳ ಆಗರವೆಂಬ ಹೆಸರಿನ ಈ ಸಂಸ್ಥೆ, ಅಮೇರಿಕಾದಲ್ಲಿರುವ ಎಲ್ಲಾ ಕನ್ನಡ ಕೂಟಗಳನ್ನು ಒಂದೇ ಸೂರಿನಡಿ ತಂದು ಎರಡು ವರ್ಷಗಳಿಗೊಮ್ಮೆ ೨೦೦೦ದೀಚೆಗೆ ಕನ್ನಡ ಸಮ್ಮೇಳನವನ್ನು ಏರ್ಪಡಿಸುತ್ತಿದೆ. ಅಮೇರಿಕಾದಲ್ಲಿ ಸಹಸ್ರಾರು ಕನ್ನಡಿಗರಿದ್ದರೂ ಈ ಸಮ್ಮೇಳನ/ಕನ್ನಡ ಕೂಟಗಳಿಗೆ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಕನ್ನಡಿಗರು ಮಾತ್ರ. ಇದಕ್ಕೆ ಕಾರಣಗಳು ಭಾರತದ ಕೂಟ/ಸಮ್ಮೇಳನಗಳಲ್ಲಿ ನಡೆಯುವ ಅಂತರಿಕ ವಿಚಾರಗಳಂತೆಯೇ ಈ ಕೂಟ/ಸಮ್ಮೇಳನಗಳೇನೂ ಹೊರತಾಗಿಲ್ಲದಿರುವುದು. ಇಲ್ಲಿನ ಬಹುತೇಕ ಕನ್ನಡಿಗರು ತಮ್ಮ ಮೂರು ದಿನಗಳ ಲಾಂಗ್ ವೀಕೆಂಡ್ ಅನ್ನು ಸ್ಕೂಲುಗಳು ಶುರುವಾಗುವ ಮುಂಚಿನ ಕೊನೆಯ ಪ್ರವಾಸ/ಪಾರ್ಟಿಗಳಿಗೆ ಮೀಸಲಿಟ್ಟಿರುತ್ತಾರೆ. ಅದೇ ರೀತಿ ಏರ್ಪಡುವ ಅನೇಕ ಪಾರ್ಟಿಗಳಂತೆಯೇ ಈ "ಅಕ್ಕ" ಸಮ್ಮೇಳನ ಕೂಡ. ಅವರವರ ಭಾವಕ್ಕೆ, ಅವರವರ ತಾಳಕ್ಕೆ ಹೊಂದುವಂತಹ ಪಾರ್ಟಿಗಳಿಗೆ ನಾವು ನೀವುಗಳು ಹೋಗುವಂತೆಯೇ ಕೆಲವರ್ಗದ ಜನ ಈ "ಅಕ್ಕ" ಪಾರ್ಟಿಗೆ ಹೋಗುತ್ತಾರೆ. ಇದರಲ್ಲಿ ಇಲ್ಲಿನ ಬಹುತೇಕ ಕನ್ನಡಿಗರು ವಿಶೇಷವನ್ನೇನು ಕಾಣುವುದಿಲ್ಲ!

ನಿಮಗೆ ಆಶ್ಚರ್ಯವಾಯಿತೇ, ಇದರಲ್ಲಿ ವಿಶೇಷವೇನೂ ಇಲ್ಲವೆಂಬುದನ್ನು ಕೇಳಿ. ನಿಮಗೆ ಹೇಗೆ ಆಶ್ಚರ್ಯವಾಗುತ್ತಿದೆಯೋ ಹಾಗೆಯೇ ನನಗೂ ಕೂಡಾ ಸಖೇದಾಶ್ಚರ್ಯವಾಗುತ್ತಿದೆ, "ಅಕ್ಕ"ನ ಬಗ್ಗೆ ಕರ್ನಾಟಕದಲ್ಲಿ, ಅಲ್ಲಿನ ಸುದ್ದಿಪತ್ರಿಕೆಗಳಲ್ಲಿ, ವಿಧಾನಸೌಧದಲ್ಲಿ ಆಗುತ್ತಿರುವ ಸುದ್ದಿಯನ್ನು ನೋಡಿ!

ಇಂದಿನ ಮಾಹಿತಿ ಯುಗದಲ್ಲಿಯೂ ಕೂಡಾ ನಮ್ಮ ಸುದ್ದಿ ಮಾಧ್ಯಮಗಳು ವಿಚಾರಗಳನ್ನು ತಿಳಿದು, ಅಳೆದು ಬರೆಯದೇ ಹುಚ್ಚುಚ್ಚಾಗಿ "ಕೇವಲ ಮೂರು ಸಾವಿರ ಜನ ಸೇರುವ ಒಂದು ಸಮ್ಮೇಳನ, ಅದೂ ತಲೆಗೆ ಇನ್ನೂರು ಡಾಲರ್ ತೆತ್ತು" ಕುರಿತು ಇದೊಂದು ಅದ್ಭುತ ಸಮ್ಮೇಳನದಂತೆ, ಈ ಸಮ್ಮೇಳನದಿಂದ ಕನ್ನಡದ ಬಾವುಟ ಶ್ವೇತಭವನದ ಮೇಲೆ ಹಾರಾಡಿತೆಂಬುವಂತೆ, ವಿದೇಶೀ ಬಂಡವಾಳ ಬೆಂಗಳೂರಿಗೆ ಹುಚ್ಚೆದ್ದು ಹರಿಯುತ್ತದಂತೆಂಬುವಂತೆ ನಿತ್ಯವೂ "ಕೌಂಟ್ ಡೌನ್" ಮಾದರಿಯಲ್ಲಿ ಭಿತ್ತಿಸುತ್ತಿರುವುದನ್ನು ನೋಡಿ, ಇದು ನಮ್ಮ ಸುದ್ದಿಮಾಧ್ಯಮಗಳು ಮಾಹಿತಿಯನ್ನು ಬಳಸುವ ಉನ್ನತಿಯೋ, ಅಧಃಪತನವೋ ಎಂದು ದ್ವಂದ್ವಕ್ಕೊಳಗಾಗಿದ್ದೇನೆ.

ಇನ್ನು ಅಕ್ಕನ ಹಿಂದಿನ ಸಮ್ಮೇಳನಗಳಿಗೆ ಬಂದಂತಹ ಮಂತ್ರಿಮಹೋದಯರು ಅದೆಷ್ಟು ವಿದೇಶೀ ಬಂಡವಾಳವನ್ನು ಬೆಂಗಳೂರಿಗೆ ಹರಿಸಿದ್ದಾರೋ ಲೆಕ್ಕವಿಟ್ಟಿರುವರ್‍ಯಾರು? ಇಂತಹ ಸಮ್ಮೇಳನದಿಂದ ಬಂಡವಾಳ ಹರಿಯುತ್ತದೆಂದು ಹೇಳಿಕೊಳ್ಳುವ ಇಂದಿನ ಮುಖ್ಯಮಂತ್ರಿ, ಹಾಗೆಯೇ ಹೇಳಿಕೊಂಡ ಮಾಜೀ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಎಸ್.ಎಮ್.ಕ್ರಿಸ್ (ಕೃಷ್ಣ) ಎಂತಹ "ಬಂಡವಾಳ" ಮೇಧಾವಿಗಳೆಂದು ನೀವೇ ಆಲೋಚಿಸಿ. ಬಂಡವಾಳ ಹರಿಸುವ/ಬೆಳೆಸುವ ಉದ್ದೇಶವಿದ್ದವರೂ ಅಂತರರಾಷ್ಟ್ರೀಯ ವಾಣಿಜ್ಯ ಸಮ್ಮೇಳನಗಳಿಗೋ, ರಾಷ್ಟ್ರನಾಯಕರುಗಳ ಸಮ್ಮೇಳನಗಳಿಗೋ ಹೋಗುತ್ತಾರೆಯೇ ವಿನಃ ಮಧ್ಯಮ ವರ್ಗದ ಸಾಂಸ್ಕೃತಿಕ ಸಮ್ಮೇಳನಕ್ಕೆ ಖಂಡಿತಾ ಹೋಗುವುದಿಲ್ಲ. ಇಲ್ಲಿ ಬಂಡವಾಳ ಹರಿಯುವುದೇನಿದ್ದರೂ ಬೆಂಗಳೂರಿನಲ್ಲಿ ಸೈಟು/ಮನೆ ಕೊಂಡುಕೊಳ್ಳಲು ಮಾತ್ರ! ಅದೂ ಬೆಂಗಳೂರಿನ ಇಂದಿನ ಬೆಲೆಗೆ ಯಾವುದಾದರೂ ಕೆಂಟುಕಿಯ ಕಮಂಗಿವಿಲ್ ನಲ್ಲಿರುವ ಮಿಕ ಮನಸ್ಸು ಮಾಡಿದರೆ.

ಇನ್ನು ಇಲ್ಲಿನ ಭಾರತೀಯರುಗಳ ಸಂಸ್ಕೃತಿಗಳ ವಿಚಾರವಾಗಿ ಈ ಹಿಂದೆಯೇ ನನ್ನ "ಜಾತ್ಯಾತೀತ ಅಮೇರಿಕೆಯಲ್ಲಿ ಜಾತೀಯತೆ" ಮತ್ತು "ಎರಡನೇ ತಲೆಮಾರಿನ ಅಮೇರಿಕನ್ನರು" ಲೇಖನಗಳಲ್ಲಿ ಸವಿವರವಾಗಿ ಬರೆದಿದ್ದೇನೆ, ನೀವೇ ಓದಿಕೊಳ್ಳಿ.

ಇನ್ನು ಈ ಸಮ್ಮೇಳನದಲ್ಲಿ ಸೇರುವವರು ನಿಮ್ಮನ್ಯಾರು ’ಕ್ಯಾರೇ’ ಎನ್ನರು. ಅವರೆಲ್ಲ ತಮ್ಮ ತಮ್ಮ ಪರಿಚಿತ ಬಂಧು-ಮಿತ್ರರೊಟ್ಟಿಗೆ ಸೇರಿ ಉಭಯಕುಶಲೋಪರಿಯಲ್ಲಿ ತೊಡಗಿರುತ್ತಾರೆ. ಅಕಸ್ಮಾತ್, ನಿಮ್ಮನ್ಯಾರಾದರೂ ಮಾತನಾಡಿಸಿದರೋ ಎಂದರೆ ಅವರು ರಿಯಲ್-ಎಸ್ಟೇಟ್ ಏಜೆಂಟರೋ, ಇನ್ಸೂರೆನ್ಸ್ ಏಜೆಂಟರೋ ಅಥವಾ ಬೆಳೆದು ನಿಂತ ಮಗಳ ತಂದೆಯೋ ಆಗಿರುತ್ತಾರೆ. ಇದು ನನ್ನ ಅನುಭವದ ಮಾತು.

ಹತ್ತು ವರ್ಷಗಳ ಹಿಂದೆ ನಾನು ಒಮ್ಮೆ ನನ್ನ ಸ್ನೇಹಿತನ ಒತ್ತಾಯಕ್ಕೆ ಮಣಿದು ಅವನೊಂದಿಗೆ ಒಂದು ಕನ್ನಡ ಕೂಟಕ್ಕೆ ಹೋಗಿದ್ದೆ. ಹೊಸಬರಾದ ನನ್ನನ್ನೂ ನನ್ನ ಸ್ನೇಹಿತನನ್ನೂ ಅಲ್ಲಿ ಕೇಳುವವರೇ ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ಗುಂಪುಗಳೊಂದಿಗೆ ಬಿಜಿ. ಹೀಗಿದ್ದಾಗ ಒಬ್ಬ ಸಭ್ಯ ವ್ಯಕ್ತಿಯೋರ್ವರು ನನ್ನ ಪಕ್ಕಕ್ಕೆ ಬಂದು ಉಭಯಕುಶಲೋಪರಿಯಲ್ಲಿ ತೊಡಗಿದರು. ಮಾತನಾಡಿಸುವವರು ಒಬ್ಬರು ಸಿಕ್ಕರೆಂದು ನಾನು ಕೂಡ ಅವರೊಂದಿಗೆ ಮಾತಿನಲ್ಲಿ ತೊಡಗಿದೆನು. ನನ್ನ ಚಹರೆಯಿಂದ ನನ್ನನ್ನು ಒಬ್ಬ "ಯೋಗ್ಯ ವರ"ನೆಂದುಕೊಂಡ ಅವರು "ಏಕೆ, ಅಪಾರ್ಟ್ಮೆಂಟಿನಲ್ಲಿ ಒಬ್ಬರೇ ಇದ್ದೀರಿ. ಮದುವೆಯಾಗಬಹುದಲ್ಲವೇ" ಎನ್ನುತ್ತಾ ಅವರ ಮಗಳನ್ನು ಪರಿಚಯಿಸಿದರು! ಅವರಲ್ಲದೇ ಅಲ್ಲಿ ನನ್ನನ್ನು ಮಾತನಾಡಿಸಿದ ಇನ್ನೋರ್ವರೆಂದರೆ, ಒರ್ವ ರಿಯಲ್-ಎಸ್ಟೇಟ್ ಕಂ ಇನ್ಸೂರೆನ್ಸ್ ಏಜೆಂಟ್ "ಕನ್ನಡಿಗ"ರು. ಆ ತೊಂಬತ್ತರ ದಶಕದಲ್ಲಿ ಇಮಿಗ್ರೇಷನ್ ಲಾಯರ್ರುಗಳು ಭಾರೀ ಬಿಜಿಯಾಗಿದ್ದರು, ಈಗ ಅವರುಗಳೂ "ಅಕ್ಕ"ದಲ್ಲಿದ್ದಾರೆಂದು ಬಲ್ಲವರು ಹೇಳುತ್ತಾರೆ!

ಪ್ರಚಾರಪ್ರಿಯತೆ ಆಧುನಿಕ ಪ್ರಪಂಚದಲ್ಲಿ ಮಾನವನಿಗೆ ತಟ್ಟಿರುವ ಬಹುದೊಡ್ಡ ರೋಗ. ಈ ರೋಗದ ಕಾರಣವಾಗಿಯೇ ಈ ಸಮ್ಮೇಳನಗಳು ಏರ್ಪಡುವುದು. ಇಲ್ಲಿನ ಸಾಕಷ್ಟು ಅಮೇರಿಕನ್ನಡಿಗರಿಗೆ "ರಾಜ್ಯಪ್ರಶಸ್ತಿ"ಯ ರೋಗ ತಟ್ಟಿಕೊಂಡಿದೆ. ಕ್ಯಾಪಿಟಲಿಸ್ಟ್ ಅಮೇರಿಕಾದಲ್ಲಿ ಯಾವುದೇ ಕಾರ್ಯಕ್ಕೂ "೧-೮೦೦-ಸಹಾಯ" ಎಂಬ ಟೋಲ್ ಫ್ರೀ ನಂಬರಿನ ಸೇವೆಗಳಿದ್ದಾವೆ. ನಿಮ್ಮ ಮನೆ ಗುಡಿಸಬೇಕೆ, ’೧-೮೦೦-ಗುಡಿಸು’ ಫೋನಾಯಿಸಿ. ಡಾಕ್ಟರ್ ಬೇಕೆ, ’೧-೮೦೦-ಡಾಕ್ಟರ್’ ಫೋನಾಯಿಸಿ. ಹುಡುಗಿ ಬೇಕೆ, ೧-೮೦೦-ಹುಡುಗಿ. ಹುಡುಗ ಬೇಕೆ, ೧-೮೦೦-ಹುಡುಗ! ದುಡ್ಡಿದ್ದರೆ ನಿಮಗೆ ಸೇವೆ. ಈ ರೀತಿಯ ಸೇವೆ ಭಾರತದಲ್ಲಿ ಎಷ್ಟೇ ದುಡ್ಡು ಸುರಿದರೂ ಸಿಕ್ಕದು. ಇಲ್ಲಿನ ಸಂಸ್ಥೆಗಳು ಗ್ರಾಹಕ ಸಂತೃಪ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತವೆ. ಇದರ ಬಗ್ಗೆ ಇನ್ನೊಂದು ಮಾತಿಲ್ಲ.

ಇರಲಿ, ವಿಷಯ ಹೀಗಿರುವಾಗ ತಲೆಗೆ ಇನ್ನೂರು ಡಾಲರ್ ತೆಗೆದುಕೊಂಡು, ಎಲ್ಲಾ ೧-೮೦೦-ನಂಬರಿನಲ್ಲಿ ಪಾರ್ಟಿ ಅರೇಂಜ್ ಮಾಡುವುದು ಅಂತಹ ಸಂಕಷ್ಟಕರ ಸಂಗತಿಯೆಂದು ನನಗಂತೂ ಅನಿಸದು. ಇಂತಹ ಮಾಹಿತಿಯನ್ನು ತಿಳಿದೂ ಸಹ ನಮ್ಮ ಸುದ್ದಿ ಮಾಧ್ಯಮಗಳು ರಾಜಕಾರಣಿಗಳಿಗೆ ನಾವೇನೂ ಕಮ್ಮಿ ಎಂಬಂತೆ "ಅಕ್ಕ" ಸಮ್ಮೇಳನವನ್ನು ಅದ್ಭುತವೆಂಬಂತೆ ಚಿತ್ರಿಸಿ ಕರ್ನಾಟಕದ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿದುದನ್ನು ನೋಡಲಾರದೆ ಈ ಕುರಿತಾಗಿ ನನ್ನ ಅನಿಸಿಕೆಗಳನ್ನು ಬರೆದಿದ್ದೇನೆ, ಚಿಂತಿಸಿ ಮಂಥಿಸಿ.

ಅಣಕ:

ಈ ಬಾರಿಯ ’ಅಕ್ಕ’ ಸಮ್ಮೇಳನಕ್ಕೆ ನನ್ನ ಫೇವರೈಟ್ ರಾಜಕಾರಣಿ ರೇಣುಕಾಚಾರ್ಯ ಬರುತ್ತಿದ್ದಾರೆ, "ಬಿ ವೇರ್ ಅಮೇರಿಕನ್ನಡತಿಯರೆ!"

"ಡೋಂಟ್ ವರ್ರಿ, ಅಮೇರಿಕನ್ನಡತಿಯರೇ ಅವರೊಂದಿಗೆ ನಾನೂ ಇದ್ದೇನೆ" ಎನ್ನುತ್ತಿದ್ದಾರೆ ಮಿಸೆಸ್.ರೇಣುಕಾಚಾರ್ಯರು, ಕೈಯಲ್ಲಿ ಟೇಸರ್ ಹಿಡಿದು!

ದೇವರಿಂದಲೂ ದೇಶವನ್ನು ಕಾಪಾಡಲಾಗದು!

ಹೀಗೆಂದು ನಮ್ಮ ಸುಪ್ರೀಂ ಕೋರ್ಟ್ ಹೇಳಿದೆ. ಕೊನೆಗೂ ಭಾರತದ ಸರ್ವೋಚ್ಚ ನ್ಯಾಯಾಲಯ ಕಠೋರ ಸತ್ಯವನ್ನು ನಿಷ್ಟುರವಾಗಿ, ಅಸಹಾಯಕವಾಗಿ ಹೇಳಿದೆ.

ಹಿಂದಿನ ಲೇಖನದಲ್ಲಿ ಭಾರತ ಸ್ವಾತಂತ್ರ್ಯಗೊಂಡ ದಿನದಿಂದ ಹೇಗೆ ನಮ್ಮನ್ನಾಳಿದ ನಾಯಕರುಗಳು ಸೆಕ್ಯುಲರಿಸಂ ಅನ್ನು ಓಲೈಕೆಗೆ ತಿರುಚಿ ಯಶಸ್ವಿಯಾಗಿ ಪೋಷಿಸಿಕೊಂಡು ಬರುತ್ತಿದ್ದಾರೆಂದು ನನ್ನ ಅನಿಸಿಕೆಗಳನ್ನು ಬರೆದಿದ್ದೆ. ಅದಕ್ಕೆ ಪೂರಕವೆಂಬುವಂತೆ ಕಾಕತಾಳೀಯವಾಗಿ ಈ ವಾರ ನಮ್ಮ ಸುಪ್ರೀಂ ಕೋರ್ಟ್ ನಮ್ಮ ವಾದವನ್ನು ಒಪ್ಪಿ, ಆ ದೇವರಿಂದಲೂ ಈ ದೇಶವನ್ನು ಕಾಪಾಡುವುದು ಸಾಧ್ಯವಿಲ್ಲವೆಂದು ತೀರ್ಪಿತ್ತಿದೆಯೇನೋ!

ಇರಲಿ, ಈ ದೇಶವನ್ನು ಆ ದೇವರಿಂದಲೂ ಕಾಪಾಡುವುದು ಏಕೆ ಸಾಧ್ಯವಿಲ್ಲವೆಂಬುದನ್ನು ಮೊದಲು ನೋಡೋಣ. ನಾನು ಈ ಹಿಂದೆ ಬರೆದಂತೆ ನಮಗೆ ಸ್ವಾತಂತ್ರ್ಯವಲ್ಲ ಸಿಕ್ಕಿದ್ದು, ಸ್ವೇಚ್ಛಾಚಾರ. ಅಷ್ಟೇ ಅಲ್ಲ ಅದಕ್ಕೆ ಬೋನಸ್ ಆಗಿ "ಸೆಕ್ಯುಲರಿಸಂ", ಮತ್ತು ಬೈಪ್ರಾಡಕ್ಟ್ಸ್ ಆಗಿ ಚಳುವಳಿ, ಬಂದ್,.....ಮುಂತಾದವು.

ಕಳೆದ ವಾರದ ಲೇಖನದಲ್ಲಿ "ಭಾರತೀಯ ಸೆಕ್ಯುಲರಿಸಂ" ನ ಅಧ್ವಾನಗಳನ್ನು, ಅದಕ್ಕೆ ಪೂರಕವಾಗಿರುವ ಕಾನೂನುಗಳನ್ನು ಉಲ್ಲೇಖಿಸಿ, ಬುದ್ದಿಜೀವಿಗಳ ಬಗೆಯನ್ನು ಬಿಡಿಸಿ ಹೇಳಿದ್ದನ್ನು ಓದಿದ್ದೀರಷ್ಟೇ. ಇನ್ನು ಬೇರೆ ’ಸೆಕ್ಯುಲರ್’ ರಾಷ್ಟ್ರ್‍ಅಗಳಲ್ಲಿ ಸೆಕ್ಯುಲರಿಸಂ ಹೇಗಿರುತ್ತದೆ ಎಂಬುದನ್ನು ನೋಡೋಣ. ಅಮೇರಿಕಾ ಕೂಡಾ ಸೆಕ್ಯುಲರ್ ರಾಷ್ಟ್ರ್‍ಅ. ಇಲ್ಲಿ ಎಲ್ಲಾ ಧರ್ಮೀಯರೂ ತಮ್ಮಿಷ್ಟದ ಧರ್ಮವನ್ನು ವೈಯುಕ್ತಿಕವಾಗಿ, ಸಂಘಗಳಲ್ಲಿ ಪಾಲಿಸಿಕೊಳ್ಳಬಹುದು. ಆದರೆ ಈ ಎಲ್ಲಾ ಆಚರಣೆಗಳೂ ವೈಯುಕ್ತಿಕ. ಯಾವುದೂ ಇಲ್ಲಿನ ಕಾನೂನಿನಲ್ಲಿ ಸ್ಥಾನವನ್ನು ಪಡೆದಿಲ್ಲ. ಅಷ್ಟೇ ಏಕೆ ಕ್ರಿಸ್ಮಸ್ ಒಂದೇ ಧಾರ್ಮಿಕ ರಜೆಯಿರುವುದು ಇಲ್ಲಿ! ಅದೂ ಬಹು ಹಿಂದಿನಿಂದಲೂ ಇರುವುದರಿಂದ ಆ ರಜೆಯಿದೆ. ಆದರೆ ಈಗದನ್ನು ’ಕ್ರಿಸ್ಮಸ್’ ಎನ್ನದೇ "ಹಾಲಿಡೇ ಸೀಸನ್’ ಎಂದು ಸೂಚ್ಯವಾಗಿ ಕರೆಯಲಾರಂಭಿಸಿದ್ದಾರೆ. ಇತರೆ ಧರ್ಮದವರಿಗೆ ಕಿರಿಕಿರಿಯಾಗಬಾರದೆಂದು! ಇನ್ನೆಲ್ಲಾ ರಜೆಗಳೂ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತವೆ, ’ಥ್ಯಾಂಕ್ಸ್ ಗಿವಿಂಗ್ ಡೇ’, ’ಮೆಮೋರಿಯಲ್ ಡೇ’, ’ಇಂಡಿಪೆಂಡೆನ್ಸ್ ಡೇ’.....ಮಂತಾದವುಗಳಂತೆ. ಈ ಉದಾಹರಣೆಯನ್ನು ಕೇವಲ ಒಂದು ಸೆಕ್ಯುಲರ್ ರಾಷ್ಟ್ರ್‍ಅ ಹೇಗಿರಬೇಕೆಂದು ಹೇಳುತ್ತಿದ್ದೇನೆಯೇ ಹೊರತು, ಅಮೇರಿಕಾವನ್ನು ಮೆರೆಸಲು ಖಂಡಿತಾ ಅಲ್ಲ!

ಇನ್ನು ಮಹಾತ್ಮರು ಹುಟ್ಟು ಹಾಕಿದ ’ಬಂದ್’, ಮುಷ್ಕರಗಳ ಬಗ್ಗೆ ಬರೆಯದಿರುವುದೇ ವಾಸಿ. ಏಕೆಂದರೆ ಇವುಗಳ ಅನುಭವ ನಿಮಗೆಲ್ಲಾ ಚೆನ್ನಾಗಿಯೇ ಇದೆ. ಬಂದ್/ಮುಷ್ಕರಗಳ ಪ್ರಗತಿ ಎಲ್ಲಿಯವರೆಗೆ ಬಂದಿದೆಯೆಂದರೆ, ಪ್ರೇಮಿ ಕೈಕೊಟ್ಟನೆ? ಅವನ ಮನೆ ಮುಂದೆ ಮುಷ್ಕರ ಹೂಡು, ಸಿನಿಮಾ ನಟಿಯ ಲಂಗ ಚಿಕ್ಕದಾಯಿತೇ? ಮುಷ್ಕರ ಹೂಡು, ರಾಜಕಾರಣಿಗೆ ಅಮೇರಿಕಾ ವೀಸಾ ಸಿಕ್ಕಲಿಲ್ಲವೇ? ಅದಕ್ಕೂ ಮುಷ್ಕರ ಹೂಡು ಎನ್ನುವುದರವರೆಗೂ ಬೆಳೆದಿದೆ. ಈಗಾಗಲೇ ಕಣ್ಣು ತೆರೆಯುವ ಬಾಬಾ, ಹಾಲು ಕುಡಿಯುವ ಗಣಪತಿ, ಅಳುವ ಮೇರಿ ಮುಂತಾದ ಪವಾಡಗಳನ್ನು ನೋಡಿರುವ ಜನ, ಯಾರಾದರೂ ಸತ್ತರೆ ಅವರನ್ನು ಬದುಕಿಸು ಎಂದು ಈ ದೇವರುಗಳ ಮುಂದೆ ಮುಷ್ಕರ ಹೂಡುವುದೊಂದೇ ಬಾಕಿಯಿರುವುದು ಎನಿಸುತ್ತದೆ. ಅಲ್ಲದೇ, ಮುಷ್ಕರಗಳಲ್ಲಿ ಕ್ರಿಯೇಟಿವಿಟಿಯೂ ಸೇರಿದೆ. ಕಪ್ಪುಪಟ್ಟಿ ಧರಿಸಿ, ತಲೆ ಬೋಳಿಸಿ, ಅರೆನಗ್ನರಾಗಿ, ಕಂಬ ಹತ್ತಿ, ಕತ್ತೆ ಸಿಂಗರಿಸಿ..............

ಇನ್ನು ಅಧಿಕಾರಿಗಳು, ಸರ್ಕಾರೀ ನೌಕರರ ಲಂಚದ ಕತೆಗಳನ್ನು ನಮ್ಮ ಮಾಧ್ಯಮಗಳು ಲೋಕಾಯುಕ್ತರೊಡಗೂಡಿ ರೋಚಕವಾಗಿ ಆಗಾಗ್ಗೆ ಪ್ರಕಟಿಸುತ್ತಿರುತ್ತವೆ. ಆದರೆ ಆ ನಂತರ ಆ ಕತೆಗಳ ಅಂತ್ಯ ಹೇಗಾಯಿತೆಂಬುದು ಮಾತ್ರ ಚಿದಂಬರ ರಹಸ್ಯ!

ಅದೇ ರೀತಿ ಕಾನೂನು ಚಾಲನೆಯೂ ತುಂಬಾ ಸೆಕ್ಯುಲರ್ ಆಗಿದೆ. ಯಾವುದೇ ಅಪರಾಧಕ್ಕೆ ಗೊತ್ತಿದ್ದೋ/ಗೊತ್ತಿಲ್ಲದೆಯೋ ಪರೋಕ್ಷವಾಗಿ ಸಹಾಯವೆಸಗಿದ್ದರೆ ಅಂತವರನ್ನು ಬಂಧಿಸಿ ವಿಚಾರಿಸಿ ಶಿಕ್ಷೆಗೆ ಒಳಪಡಿಸುವುದು ನಮ್ಮ ಒಂದು ಕಾನೂನು. ಆದರೆ ಅದರ ಅನುಷ್ಟಾನ ಮಾತ್ರ ಅಜಗಜಾಂತರ. ಉದಾಹರಣೆಗೆ ಕಳೆದ ವರ್ಷ ಗ್ಲಾಸ್ಗೋ ವಿಮಾನನಿಲ್ದಾಣಕ್ಕೆ ಬಾಂಬುಗಳು ತುಂಬಿದ್ದ ಜೀಪನ್ನೋಡಿಸಿದ ಕಫೀಲ, ತನ್ನ ಕಾರ್ಯದ ಮುನ್ನ ಅವನ ತಾಯಿಗೆ ಫೋನಾಯಿಸಿ ’ಇಂದಿನ ದಿನವೇ ಆದಿನ’ ಎಂದು ತಿಳಿಸಿದನೆಂದು ಸುದ್ದಿಗಳಲ್ಲಿ ಓದಿದ್ದೀರಿ ತಾನೆ. ಹಾಗೆ ತನ್ನ ಘನಕಾರ್ಯವನ್ನು ಸ್ವತಃ ತಿಳಿಸಿದರೂ, ಅದನ್ನು ಪೊಲೀಸರಿಗೆ ತಿಳಿಸದ ಆ ತಾಯಿಯನ್ನು ನಮ್ಮ ಪೊಲೀಸರು "ಅಪರಾಧ ಮುಚ್ಚಿಟ್ಟ" ಅಪರಾಧದ ಮೇಲೆ ಕೇಸನ್ನು ಹಾಕಿ ಕೋರ್ಟಿನಲ್ಲಿ ವಿಚಾರಣೆಯಾಯಿತೇ? ವೀರಪ್ಪನ್ ನಿಗೆ ಭಯದಿಂದ ಊಟ ಕೊಟ್ಟವರು, ನೀರು ಕೊಟ್ಟವರು, ಕೇವಲ ಅವನ ಊರಿನವರು ಎಂದೆಲ್ಲಾ ಆ ಹಳ್ಳಿಗರನ್ನು ಹಿಡಿದು ವಿಚಾರಣೆ ಮಾಡಿರುವಾಗ, ದಾಖಲೆ/ಸಾಕ್ಷಿಗಳಿದ್ದರೂ ಕಲೀಫನ ತಾಯಿಯನ್ನು ನಮ್ಮ ಪೊಲೀಸರು ಯಾಕೆ ಬಂಧಿಸಲಿಲ್ಲವೆಂಬುದೂ ನಮ್ಮ ’ಸೆಕ್ಯುಲರಿಸಂ’ ನ ಪರಿಣಾಮ! ಅಷ್ಟೇ ಅಲ್ಲ, ಒಬ್ಬ ಅನಿವಾಸೀ ಭಾರತೀಯ ಸಂಶಿತ ಅಪರಾಧಿ (ಉಗ್ರವಾದ), ಜಾಮೀನು ಪಡೆದು ಭಾರತಕ್ಕೆ ಹಿಂದಿರುಗಿದೊಡನೆ ’ಸೆಕ್ಯುಲರ್’ ಮುಖ್ಯಮಂತ್ರಿ ಖುದ್ದಾಗಿ ಭೇಟಿ ಮಾಡಿ, ಸರ್ಕಾರೀ ಉದ್ಯೋಗದ ಬಹುಮಾನವನ್ನು ಕೊಡುವುದರ ಮಟ್ಟಿಗೆ ನಮ್ಮ ಸೆಕ್ಯುಲರಿಸಂ ಬೆಳೆದಿದೆ. ಆದರೆ ನ್ಯೂಯಾರ್ಕ್ ನ ೯೧೧ ಭಯೋತ್ಪಾದಕರ ದಾಳಿಯಲ್ಲಿ ’ಮಡಿದ’ ಕರ್ನಾಟಕ ಮೂಲದ ಸಾಫ್ಟ್ವೇರ್ ಎಂಜಿನಿಯರರುಗಳಿಗೆ ಏನಾದರೂ ಗೌರವ ಸೂಚಿಸಿತೇ ನಮ್ಮ ಅಂದಿನ "ಸೆಕ್ಯುಲರ್" ಸರಕಾರ?

ಇರಲಿ, ಇದಕ್ಕೆಲ್ಲಾ ಪರಿಹಾರವಿರುವುದು ನಮ್ಮ ನ್ಯಾಯಾಂಗದಲ್ಲಿ ಮಾತ್ರ. ನಮ್ಮ ಸುಪ್ರೀಂ ಕೋರ್ಟ್ ನ್ಯಾಯಾಂಗವನ್ನು ಸರಿಯಾಗಿ ಅನುಷ್ಟಾನಗೊಳಿಸುವಲ್ಲಿ ಚಿತ್ತ ಹರಿಸಿ ರಾಷ್ಟ್ರ್‍ಅವನ್ನು ಸರಿದಾರಿಯಲ್ಲಿ ನಡೆಸುತ್ತದೆಂದು ಆಶಿಸುತ್ತಿರುವಾಗಿ, "ಈ ದೇಶವನ್ನು ಆ ದೇವರಿಂದಲೂ ಕಾಪಾಡಲಾಗದು" ಎಂಬ ಹೇಳಿಕೆ ನಮ್ಮ ನ್ಯಾಯಾಂಗದ ಹತಾಶತೆಯ ಪರಮಾವಧಿಯೆನಿಸುತ್ತದೆ.

ಯಾರಿಗೆ ಗೊತ್ತು? ನ್ಯಾಯಾಂಗವು ಕೂಡ ನಮ್ಮ ಶಾಸಕಾಂಗದ ರೀತಿ "ಪತ್ರಿಕಾ ಪ್ರಚಾರ"ದ ಹಪಹಪಿಗಾಗಿ ಪರಿತಪಿಸುತ್ತ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದೆಯೇನೋ!

ಸ್ವಾತಂತ್ರ್ಯೋತ್ಸವದ ಶುಭಾಶಯಗಳು!

ಅಣಕ:

ಸ್ವಾತಂತ್ರ್ಯ ಹೋರಾಟದ ಸಿಪಾಯಿದಂಗೆ ಬಗ್ಗೆ ಓದಿದ್ದೀರಿ ತಾನೆ! ಇದರ ಬಗ್ಗೆ ನನ್ನ ಅಮೇರಿಕನ್ ಮಿತ್ರನೊಬ್ಬ ಹೇಳಿದ್ದೇನೆಂದರೆ, ಭಾರತೀಯರು ಈಗಿನಿಂದಷ್ಟೇ ಅಲ್ಲದೆ ಬಹು ಹಿಂದಿನಿಂದಲೂ ಗಾಳಿಸುದ್ದಿ ಪ್ರಿಯರಂತೆ. ಅದಕ್ಕೆ ಸಾಕ್ಷ್ಯವಾಗಿ ನಮ್ಮ ಸಿಪಾಯಿದಂಗೆ ಕುರಿತು ಈ ರೀತಿಯಾಗಿ ಹೇಳಿದನು - ಬಂದೂಕನ್ನು ಪಾಲೀಷ್ ಮಾಡಲು ಅಂದು ಯುರೋಪಿನಾದ್ಯಂತ ಪ್ರಾಣಿಜನ್ಯ ಕೊಬ್ಬನ್ನು ಉಪಯೋಗಿಸುತ್ತಿದ್ದರು. ಸಹಜವಾಗಿ ಈ ಕೊಬ್ಬು, ಕೊಬ್ಬುಭರಿತ ದನ/ಹಂದಿಗಳ ಕೊಬ್ಬಿನಿಂದ ಮಾಡಿದ್ದುದು. ಸರಿ, ಇದನ್ನು ತಿಳಿದುಕೊಂಡ ಒಬ್ಬ ಸಿಪಾಯಿ ’ಮಹಾತ್ಮ’ ನಾವುಗಳು ಇಂದು ಇತಿಹಾಸದಲ್ಲಿ ಓದುವಂತೆ "ಹಿಂದೂಗಳಿಗೆ ಹಸುವಿನ ಕೊಬ್ಬನ್ನೂ, ಮುಸ್ಲಿಮರಿಗೆ ಹಂದಿ ಕೊಬ್ಬನ್ನು ಕೊಟ್ಟು ಜಾತಿ ಕೆಡಿಸುತ್ತಿದ್ದಾರೆ" ಎಂಬ ಗಾಳಿಸುದ್ದಿಯನ್ನು ಹಬ್ಬಿಸಿದನಂತೆ! ಆ ಗಾಳಿಸುದ್ದಿಯೇ ಕೂಸೇ ನಮ್ಮ ಸಿಪಾಯಿದಂಗೆ ಎಂದನು!

ಯಾಕೋ ನನ್ನ ಅಮೇರಿಕನ್ ಮಿತ್ರನು ಹೇಳಿದ್ದುದು ನಿಜವೇನೋ ಎನಿಸುತ್ತದೆ!

ಬೆಂಗಳೂರ ಬಾಂಬು ಮತ್ತು ಭಾರತೀಯ ಸೆಕ್ಯುಲರಿಸಮ್ಮೂ!

ಅಂತೂ ಕೊನೆಗೆ ಬೆಂಗಳೂರಿನಲ್ಲಿಯೂ ಬಾಂಬುಗಳು ಸಿಡಿದಿವೆ. ಇದು ಅಸಲೀ ಭಯೋತ್ಪಾದಕರ ಬಾಂಬುಗಳೋ, ಅಥವಾ ರಿಯಲ್ ಎಸ್ಟೇಟಿಗರು ’ಮಾಮೂಲಿ’ ಕೊಡಲಿಲ್ಲವೆಂದು ರೌಡಿ ಪಡೆಗಳು ಬಾಂಬಿಸಿದರೋ ಅಥವಾ ಬಿಜೆಪಿಗಳು ಹೇಳಿಕೊಳ್ಳುವಂತೆ ಅವರ ವಿರೋಧಿಗಳು ಸಿಡಿಸಿದರೋ ಎಂಬ ಜಿಜ್ಞಾಸೆಗಳು ಜನರಲ್ಲಿ ಮೂಡಿವೆಯೋ ಅಥವಾ ಮೂಡಿಸಿದ್ದಾರೋ! ಒಟ್ಟಾರೆ ಬೆಂಗಳೂರಿನಲ್ಲಿ ಬಾಂಬುಗಳು ಸಿಡಿದಿವೆ. ನನ್ನ ಬರಹಗಳನ್ನು ಓದಿ, ಆಗಾಗ್ಗೆ ಪ್ರತಿಕ್ರಿಯಿಸುವ ಓದುಗ ಮಿತ್ರ ನಂದಕುಮಾರ್, ಈ ವಿಷಯವಾಗಿ ಈವಾರ ಬರೆಯಿರೆಂದು ಸಲಹೆ ಕೂಡಾ ಕೊಟ್ಟಿದ್ದರು.

ಹೀಗೊಮ್ಮೆ ಯೋಚಿಸಿ ನೋಡಿ, ಈ ಭಯೋತ್ಪಾದನೆಗೆ (ವಿಶ್ವದ್ದಲ್ಲ, ಭಾರತದ ಭಯೋತ್ಪಾದನೆ) ಮೂಲ ಕಾರಣಗಳೇನು ಎಂದು!

ಯಾವುದೇ ದೇಶದ ಜನನಾಯಕರು ದೂರದೃಷ್ಟಿಯಿಲ್ಲದೇ ಹೋರಾಟ/ಕ್ರಾಂತಿಗಳನ್ನು ಭಾವುಕರಾಗಿ ಕ್ರಾಂತಿಸಿದರೆ ಆ ದೇಶದಲ್ಲಿ ಏನಾಗಬಹುದು ಎಂಬುದಕ್ಕೆ ನಮ್ಮ ಭಾರತ ಒಂದು ಉತ್ತಮ ಉದಾಹರ್‍ಅಣೆ. ನಾನು ಆಗಷ್ಟೇ ’ಕಾರ್ಪೋರೇಟ್’ ಪ್ರಪಂಚಕ್ಕೆ ಸೇರಿದ್ದೆ. ಆಗ ನನ್ನ ಬಾಸ್ ನನಗೆ ’ನೀನು ಯಾವತ್ತೂ ವ್ಯವಹಾರದಲ್ಲಿ, ಉದ್ಯೋಗದಲ್ಲಿ ಹೃದಯವನ್ನು ಇಡಬೇಡ. ಕಂಪೆನಿ ಸಂಬಳ ಕೊಡುವುದು ನಿನ್ನ ತಲೆಗೆ ಮಾತ್ರ. ಹಾಗಾಗಿ ನಿನ್ನ ಕೆಲಸದಲ್ಲಿ ಯಾವುದೇ ಭಾವನೆಗಳಿಗೂ ಅವಕಾಶ ಕೊಡದೆ ನಿಷ್ಟುರವಾಗಿ ಕೆಲಸದ/ಕಂಪೆನಿಯ ಒಳಿತಿಗೆ ನಿನ್ನ ತಲೆಯನ್ನು ಮಾತ್ರ ಉಪಯೋಗಿಸು. ನಿನ್ನ ಹೃದಯವನ್ನು ನಿನ್ನ ಕುಟುಂಬಕ್ಕೂ, ಕತೆ/ಕವನಗಳಿಗೂ ಉಪಯೋಗಿಸು’ ಎಂದು ಉಪದೇಶಿಸಿದ್ದ. ಅದು ನಮ್ಮ ರಾಷ್ಟ್ರ್‍ಅ ನಾಯಕರುಗಳಿಗೂ ಎಷ್ಟೊಂದು ಚೆನ್ನಾಗಿ ಅನ್ವಯವಾಗುತ್ತದಲ್ಲವೇ ಎಂದೆನಿಸುತ್ತದೆ. ಎಲ್ಲಿ ನಿಷ್ಟುರ, ಧೃಢನಿರ್ಧಾರಗಳನ್ನು ತೆಗೆದುಕೊಳ್ಳಬೇಕಿತ್ತೋ ಅಲ್ಲಿ ಹೃದಯವನ್ನಿಟ್ಟು ದೇಶಕ್ಕೆ ಎಷ್ಟೋ ಹಾನಿ ಮಾಡಿದ್ದಾರೆನಿಸುತ್ತದೆ!

ಇರಲಿ, ಈ ಭಯೋತ್ಪಾದನೆಯ ಮೂಲ ಪಾಕಿಸ್ತಾನವೆ? ಒಸಾಮಾ ನೆ? ಮುಸ್ಲಿಮರೇ? ಖಂಡಿತವಾಗಿಯೂ ಅಲ್ಲ. ಇದರ ಮೂಲ ಕಾರಣ ಇಂದಿನ ಮನಮೋಹನ್ ಸಿಂಗ್ ರಿಂದ ಹಿಡಿದು ಅಂದಿನ ಮೋಹನ್ ಗಾಂಧಿವರೆಗೆ ಭಾರತದ ಭೂತ/ವರ್ತಮಾನದ ಜನನಾಯಕರುಗಳು. ಎಲ್ಲಿ ಜನನಾಯಕರುಗಳು ದೂರದೃಷ್ಟಿಯಿಲ್ಲದೇ ಹೋರಾಟಗಳನ್ನೂ, ಕ್ರಾಂತಿಗಳನ್ನು ಕೇವಲ ಭಾವನೆಗಳ ಬಂಡವಾಳದ ಮೇಲೆ ನಿರೂಪಿಸುತ್ತಾರೋ, ಆ ರಾಷ್ಟ್ರಗಳು ಎಲ್ಲಾ ತರಹದ ದುರ್ಬಲತೆಗಳಿಗೆ ತೆರೆದುಕೊಂಡಿರುತ್ತದೆ ಎಂದೆನಿಸುತ್ತದೆ. ಇದು ಭಾರತವಾಗಬಹುದು, ಪಾಕಿಸ್ತಾನವಾಗಬಹುದು, ಬಾಂಗ್ಲಾ ಆಗಬಹುದು, ರಷ್ಯಾ, ಅಮೇರಿಕಾ, ಕೊರಿಯಾ, ಅಫ್ಘಾನಿಸ್ತಾನ...ಯಾವುದಾದರೂ ದೇಶವಾಗಬಹುದು.

ಅಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕೇವಲ ಸ್ವಾತಂತ್ರ್ಯ ಪಡೆಯುವುದೊಂದೇ ಉದ್ದೇಶವನ್ನು ಹೊಂದಿ, ಸ್ವಾತಂತ್ರ್ಯ ಚಳುವಳಿಯನ್ನು ರೂಪಿಸಿದರೇ ಹೊರತು, ಸ್ವಾತಂತ್ರ್ಯಾನಂತರದ ಭಾರತವನ್ನು ಅವರು ಯೋಚಿಸಲೇ ಇಲ್ಲ. ಅವರಲ್ಲಿ ವಿದೇಶೀ ಗುಲಾಮಗಿರಿಯಿಂದ ಹೊರಬರಬೇಕೆಂಬ ತುಡಿತವಿತ್ತೇ ವಿನಹ ಮುಂದೇನು? ಎಂಬ ದೂರದೃಷ್ಟಿತ್ವವಿರಲಿಲ್ಲ. ’ಸ್ವಾತಂತ್ರ್ಯ ಸಿಕ್ಕಲಿ, ಆಮೇಲೆ ನೋಡಿಕೊಳ್ಳೋಣ. ಬ್ರಿಟಿಷರಿಗಿಂತ ನಾವು ಉತ್ತಮವಲ್ಲವೇ!’ ಎಂಬ ಸ್ವಪ್ರತಿಷ್ಟೆ ಕಾರಣವಾಗಿತ್ತೋ ಅಥವಾ ಆತ್ಮವಿಶ್ವಾಸ ತುಳುಕುತ್ತಿತ್ತೋ ನಾನರಿಯೇ. ಒಟ್ಟಾರೆ ಭರಪೂರ ಭಾವನೆಗಳ ಪ್ರವಾಹವಂತೂ ಅದಾಗಿತ್ತು.

ಸರಿ, ಆ ಹೋರಾಟದ ಫ಼ಲವಾಗಿ ಸ್ವಾತಂತ್ರ್ಯ ಪಡೆಯಲು ಧರ್ಮದ ಮೇಲೆ ದೇಶವನ್ನು ವಿಭಜಿಸುವ ಒಪ್ಪಂದವನ್ನು ಒಪ್ಪಿ, ಆ ಒಪ್ಪಂದವನ್ನು ಧೃಢವಾಗಿ, ನಿಷ್ಟುರವಾಗಿ ಅನುಷ್ಟಾನಗೊಳಿಸದೆ ಮತ್ತೆ ಭಾವನೆಗಳ ಪ್ರವಾಹವನ್ನು ತೆರೆದು "ಭಾರತದಲ್ಲಿನ ಭಯೋತ್ಪಾದನೆ"ಗೆ ಬೀಜ ನೆಟ್ಟಿದ್ದು ಇನ್ನೊಂದು ತಪ್ಪು. ಆ ತಪ್ಪನ್ನು ಮರೆಮಾಚಲು ಮತ್ತೆ ಭಾವುಕರಾಗಿ ಭಾರತ ಸೆಕ್ಯುಲರ್ ದೇಶ, ನಮ್ಮದು ಧರ್ಮಾಧರಿತ ರಾಷ್ಟ್ರವಲ್ಲ ಎಂದದ್ದು ಅತ್ಯುತ್ತಮವಾದ, ಉನ್ನತವಾದ ಉದ್ದೇಶವೇ ಆದರೂ ಅದರ ಅನುಷ್ಟಾನ ಹೇಗಾಯಿತು ಎಂಬುದನ್ನು ಕೊಂಚ ನಾವುಗಳು ಅವಲೋಕಿಸಬೇಕು.

ನಂತರದ ಸ್ವತಂತ್ರ ಸೆಕ್ಯುಲರ್ ಭಾರತದಲ್ಲಿ ಸಾಕಷ್ಟು ಕಾನೂನುಗಳು ಧರ್ಮಾಧರಿತವಾಗಿ ರೂಪುಗೊಂಡವು. ಉದಾ: ಹಿಂದೂ ಮ್ಯಾರೇಜ್ ಆಕ್ಟ್, ಮುಸ್ಲಿಂ ಮ್ಯಾರೇಜ್ ಆಕ್ಟ್, ಕ್ರಿಶ್ಚಿಯನ್ ಮ್ಯಾರೇಜ್ ಆಕ್ಟ್...ಇತ್ಯಾದಿ. ಪ್ರಪಂಚದ ಇನ್ಯಾವುದೇ ಸೆಕ್ಯುಲರ್ ದೇಶದಲ್ಲಿ ಧರ್ಮಾಧರಿತವಾದ ಕಾನೂನುಗಳಿಲ್ಲ! ಧರ್ಮಾಧರಿತವಾದ ಕಾನೂನುಗಳಿರುವ ದೇಶಗಳು "ಸೆಕ್ಯುಲರ್" ಅಲ್ಲವೆಂಬುದು ನಮಗೆ ಎಂದು ಅರಿವಾಗುವುದೋ!

ಸೆಕ್ಯುಲರ್ ಪದದ ಅರ್ಥವನ್ನು ಭಾರತ ’ಓಲೈಕೆ’ಗೆ ಅರ್ಥೈಸಿರುವುದು ಇಂದು ನೆನ್ನೆಯಲ್ಲ, ತನ್ನ ಸ್ವಾತಂತ್ರ್ಯ ಸಿಕ್ಕ ಘಳಿಗೆಯಲ್ಲೇ ಹಾಗೆ ವ್ಯಾಖ್ಯಾನಿಸಿದೆ. ಆ ಸೆಕ್ಯುಲರಿಸಂ, ಭಾರತದ ಮುಂದಿನ ಪೀಳಿಗೆಯ ಜನನಾಯಕರುಗಳ ಪೋಷಣೆಯಲ್ಲಿ ಹೆಮ್ಮರವಾಗಿ ಬೆಳೆಯುತ್ತಾ ಧರ್ಮಗಳಿಂದ, ಜಾತಿಗಳಿಗೆ, ಉಪಜಾತಿಗಳಿಗೆ, ಭಾಷೆಗಳಿಗೆ ಹಬ್ಬುತ್ತಾ, ಎಲ್ಲೆಲ್ಲಿ ಭಾರತೀಯ ಅರ್ಥದ ಸೆಕ್ಯುಲರಿಸಂ ಸಾಧ್ಯವೋ ಅಲ್ಲೆಲ್ಲಾ ಹಬ್ಬುತ್ತಿದೆ.

ಅಸ್ಪರ್ಶತೆಯನ್ನು ಹೋಗಲಾಡಿಸಲು, ಅಸ್ಪರ್ಶತೆ ’ರಾಷ್ಟ್ರೀಯ ಅಪರಾಧ’ವೆಂದು ಘೋಷಿಸಿ, ದೇಶದ ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸ ಕಡ್ಡಾಯವಾಗಿಸಿ, ಈ ಮಕ್ಕಳಿಗೆ ಯಾವುದೇ ಭೇಧವನ್ನು ತೋರುವವರನ್ನು ಉಗ್ರಶಿಕ್ಷೆಗೆ ಗುರಿಪಡಿಸುವ ಕಾನೂನುಗಳನ್ನು ಮಾಡದೆ, ಮೇಲ್ಜಾತಿ, ಕೆಳಜಾತಿ ಎರಡೂ ವರ್ಗಗಳನ್ನು ಓಲೈಸುವ ಕಾನೂನುಗಳನ್ನು ಮಾಡಿದ್ದುದು, ನಂತರ ದಲಿತರನ್ನು ಇನ್ನೂ ಹೆಚ್ಚಾಗಿ ಪೈಪೋಟಿಯಲ್ಲಿ ಓಲೈಸಲು ಹುಚ್ಚುಚ್ಚಾಗಿ ಕಾನೂನುಗಳನ್ನು ಮಾಡಿದ್ದುದು. ಉದಾಹರಣೆಗೆ ಜಾತಿನಿಂದನೆ ಕಾನೂನನ್ನೇ ತೆಗೆದುಕೊಳ್ಳಿ. ಇದರ ಉದ್ದೇಶ ಘನವಾದುದೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕಾನೂನಿನ ಅನುಷ್ಟಾನ ಮಾತ್ರ ’ಸೆಕ್ಯುಲರ್’ ಆಗಿದೆ. ಯಾವುದೇ ಜಾತಿನಿಂದನೆಯನ್ನು ಅಪರಾಧವಾಗಿಸಬೇಕಾದ ನಮ್ಮ ಕಾನೂನು, ಕೇವಲ ದಲಿತರ ಜಾತಿನಿಂದನೆ ಮಾತ್ರ ಅಪರಾಧವೆಂದು ಪರಿಗಣಿಸುತ್ತದೆ. ಇಂದು ನೀವು ಮೇಲ್ಜಾತಿಯ ಬ್ರಾಹ್ಮಣರನ್ನು ’ಪುಳ್ಚಾರಿ’, ’ಅಯ್ಯಂಗಾರೀ’, ’ಜುಟ್ಟು’, ’ಥ್ರೆಡ್’, ಇನ್ನೂ ಏನೇನೋ ವಿಧವಾಗಿ ನಿಂದಿಸಬಹುದು. ಆದರೆ ದಲಿತರನ್ನು ಮಾತ್ರ ಜಾತಿನಿಂದನೆ ಮಾಡುವಂತಿಲ್ಲ. ಈ ಬ್ರಾಹ್ಮಣ ನಿಂದನೆ ತಮಿಳು ಸಿನಿಮಾಗಳ ಕಾಮೆಡಿ ಸೀನುಗಳಲ್ಲಿ ಭಾರೀ ಅತಿರೇಕಕ್ಕೆ ಹೋಗಿರುತ್ತದೆ. ನಮ್ಮ ಕಾನೂನುಗಳೇ ನಮ್ಮನ್ನು ಜಾತಿ/ಧರ್ಮಗಳ ಕೂಪಕ್ಕೆ ತಳ್ಳುತ್ತಿರುವಾಗ ಅದ್ಯಾವ ಪ್ರಜೆಗೆ "ರಾಷ್ಟ್ರ್‍ಈಯತೆ"ಯ ಅರಿವು ಮೂಡಲು ಸಾಧ್ಯ?

ಈ ಓಲೈಕೆಯ ದೆಸೆಯಿಂದಾಗಿ ಇಂದು ಉತ್ತರ ಭಾರತದಲ್ಲಿ ಜಾಟ್, ಬ್ರಾಹ್ಮಣ್, ಬನಿಯಾ ಎಂದೂ ದಕ್ಷಿಣದಲ್ಲಿ ವಣ್ಣಿಯಾರ್, ಚೆಟ್ಟಿಯಾರ್, ರೆಡ್ಡಿ, ಕಮ್ಮ, ಕಾಪು ಎಂದೂ, ಇನ್ನೂ ಕಂಡು ಕೇಳರಿಯದ ಜಾತಿಗಳೂ ರಾಜಕೀಯ ಪ್ರಾಧಾನ್ಯತೆಗಾಗಿ, ಓಲೈಕೆಗಾಗಿ ಬಡಿದಾಡುತ್ತಿವೆ. ಹಾಗೆಯೇ ನಮ್ಮಲ್ಲೂ ವೀರಶೈವ, ಒಕ್ಕಲಿಗ, ಕುರುಬ....ಇನ್ನೂ ಏನೇನೋ ಜಾತಿಗಳು ಪೈಪೋಟಿ ನಡೆಸುತ್ತಿವೆ. ಓಲೈಕೆಗೂ, ಭಯೋತ್ಪಾದನೆಗೂ ಏನಪ್ಪಾ ಸಂಬಂಧವೆನ್ನುವಿರಾ?

ಇನ್ನು ನೇರ ಆ ವಿಷಯಕ್ಕೆ ಬರೋಣ. ಧರ್ಮದ ಭಾವುಕ ಭಾವನೆ ಮತ್ತು ಜಗದ ಜಂಜಾಟಗಳಲ್ಲಿ ತೊಳಲುತ್ತಿದ್ದ ಕೆಲವು ಮುಸ್ಲಿಂ ಯುವಕರಿಗೆ ಹಣಕಾಸು ನೆರವು ನೀಡಿ, ಅವರುಗಳ ಧಾರ್ಮಿಕ ಭಾವನೆಗಳ ಯಶಸ್ವೀ ಶೋಷಣೆಯಾಗಿ, ಅವರನ್ನು ಭಯೋತ್ಪಾದಕರನ್ನಾಗಿಸಿರುವುದು ಕೆಲವು ವಿದೇಶೀ ಶಕ್ತಿಗಳು. ಈ ವಿದೇಶೀ ಶಕ್ತಿಗಳಿಗೂ ಮತ್ತು ಭಯೋತ್ಪಾದಕರಾಗಿರುವ ನಮ್ಮ ಭಾರತೀಯರಿಗೂ ಇರುವ ಸಾಮ್ಯತೆ ಧರ್ಮವೊಂದೇ. ಆ ಒಂದು ಸಾಮ್ಯತೆ ಹಲವಾರು ಭಾವುಕರನ್ನು ದುರ್ಬಲಗೊಳಿಸಿಬಿಡುತ್ತದೆ. ಇದು ಕೇವಲ ಧರ್ಮವಾಗಿರಬೇಕಿಲ್ಲ, ಭಾಷೆಯೂ ಆಗಬಹುದು. ಅಥವಾ ಹದಿಹರೆಯದ ಬಿಸಿರಕ್ತದ, ಏನನ್ನಾದರೂ ಡಿಫರೆಂಟಾಗಿ ಮಾಡಬೇಕೆನ್ನುವ ಯುವಕರ ದುರ್ಬಳಕೆಯೂ ಇದಾಗಬಹುದು. ಈ ಕುರಿತಾಗಿ ನನ್ನ "ಅಲ್ ಲಾಹ್ ಹು ಅಕ್ಬರ್, ಕೃಷ್ಣ ಕೃಷ್ಣ ಹರೇ ಹರೇ" ಎಂಬ ಲೇಖನವನ್ನೊಮ್ಮೆ ಓದಿ ನೋಡಿ. ಭಾಷಾ ಸಾಮ್ಯತೆಯಿರುವ ಎಲ್.ಟಿ.ಟಿ.ಇ. ಉಗ್ರರ ಕುರಿತು ಹಲವಾರು ತಮಿಳರು ಮೃದು ಧೋರಣೆಯನ್ನು ಹೊಂದಿರುತ್ತಾರೆ!

ನಿಮ್ಮನ್ನು ನೀವೇ ಪರೀಕ್ಷಿಸಿಕೊಂಡು ನೋಡಿ. ನೀವು ಮೆಚ್ಚುವ ನಟನೋ, ನಟಿಯೋ, ರಾಜಕಾರಣಿಯೋ, ಸಾಹಿತಿಯೋ, ಆಟಗಾರನೋ, ನೆರೆಮನೆಯವನೋ ನಿಮ್ಮ ಜಾತಿಯವನೆಂದು ತಿಳಿದಾಕ್ಷಣ ’ಇವ ನಮ್ಮವ’ನೆಂಬ ಸುಪ್ತ ನವಿರಾದ ಹೆಮ್ಮೆ ನಿಮ್ಮಲ್ಲುಂಟಾಗುತ್ತದೆ. ಇದು ನಮ್ಮ-ನಿಮ್ಮ ತಪ್ಪಲ್ಲ. ಇದು ನಮ್ಮ ಸ್ವತಂತ್ರ್ಯ ಭಾರತದ ಆಡಳಿತಾತ್ಮಕ/ಸಾಮಾಜಿಕ/ರಾಜಕೀಯ ವ್ಯವಸ್ಥೆ ನಮ್ಮನ್ನು ಆಧುನಿಕ ಪ್ರಪಂಚಕ್ಕೆ ಅಣಿಗೊಳಿಸಿರುವ ರೀತಿ.

ಇದು ನಮ್ಮ ರಾಜಕೀಯ/ಸಾಮಾಜಿಕ/ಆಡಳಿತಾತ್ಮಕ "ಸೆಕ್ಯುಲರಿಸಂ" ಆದರೆ, ನಮ್ಮ ವಿಚಾರವಾದಿ ಬುದ್ಧಿಜೀವಿಗಳು ಕೂಡ ಅದನ್ನು ಹೀಗೆಯೇ ವಿಶ್ಲೇಷಿಸಿಕೊಂಡಿದ್ದಾರೆ. ನೀವುಗಳು ಗಮನಿಸಿ ನೋಡಿ, ನಮ್ಮ ಬಹುಸಂಖ್ಯಾತ ಧರ್ಮದ ಒಬ್ಬ ಬುದ್ಧಿಜೀವಿ ತನ್ನ ಧರ್ಮದ ಆಚಾರ/ವಿಚಾರಗಳನ್ನು ಧಿಕ್ಕರಿಸಿ ಅವುಗಳನ್ನು ಅನಾಚಾರ/ವಿಕಾರಗಳಂತೆ ಚಿತ್ರಿಸಿ ತಮ್ಮ ನವೀನ ಚಿಂತನೆಗಳನ್ನು ಹರಿಬಿಟ್ಟಾಗ, ಆ ಚಿಂತನೆಯನ್ನು ಇತರೆ ಬುದ್ದಿಜೀವಿಗಳು ಶ್ಲಾಘಿಸಿ "ಬಂಡಾಯ ಸಾಹಿತ್ಯ"ವೆಂದು ವಿಂಗಡಿಸಿ ಕೊಂಡಾಡುತ್ತಾರೆ. ಹಾಗೆಯೇ ಅಲ್ಪಸಂಖ್ಯಾತ ಧರ್ಮದ ಬುದ್ದಿಜೀವಿಗಳು ತಮ್ಮ ಧರ್ಮದ ಅಂಧತೆಗಳನ್ನು ಉಲ್ಲೇಖಿಸಿ ಬರೆದು, ತಮ್ಮ ಧರ್ಮಾಂಧರ ಕೋಪಕ್ಕೆ ಗುರಿಯಾದಾಗ, ಬಹುಸಂಖ್ಯಾತ ಬುದ್ದಿಜೀವಿಗಳು ಅಷ್ಟಾಗಿ ಅವರ ಸಹಾಯಕ್ಕಾಗಿಯಾಗಲೀ, ಅವರ ಬೆಂಬಲಕ್ಕಾಗಿಯಾಗಲೀ ನಿಲ್ಲುವುದಿಲ್ಲ. ಉದಾಹರಣೆಗೆ, ತಸ್ಲೀಮಾ ನಸ್ರೀನ್ ಳ ಮೇಲೆ ಧರ್ಮಾಂಧರು ಆಕ್ರಮಣ ನಡೆಸಿದಾಗ ನಮ್ಮೆಲ್ಲಾ ಬುದ್ದಿಜೀವಿಗಳು ಅವಳ ಬೆಂಬಲಕ್ಕೆ ಎಷ್ಟರಮಟ್ಟಿಗೆ ನಿಂತರೆಂದು ನೀವುಗಳೇ ಮಾಧ್ಯಮಗಳ ವರದಿಯಲ್ಲಿ ನೋಡಿದ್ದೀರಿ. ಆದರೆ ಅದೇ ಬುದ್ದಿಜೀವಿ ಅಲ್ಪಸಂಖ್ಯಾತ ಕಲಾಕಾರನೊಬ್ಬ ಬಹುಸಂಖ್ಯಾತ ದೇವತೆಗಳ ಅಂಗಾಂಗಗಳ ಚಿತ್ರಿಸಿದ್ದನ್ನು ಬಹುಸಂಖ್ಯಾತರು ವಿರೋಧಿಸಿದಾಗ, ನಮ್ಮೆಲ್ಲಾ ಬುದ್ದಿಜೀವಿಗಳು ಆ ಕಲಾಕಾರನ ಬೆಂಬಲಕ್ಕೆ ನಿಂತು ಒಕ್ಕೊರಲಿನಿಂದ ಪ್ರತಿಭಟಿಸಿದರು. ಒಂದು ಧರ್ಮವನ್ನು ಖಂಡಿಸಿ ಬರೆದದ್ದು "ಬಂಡಾಯ ಸಾಹಿತ್ಯ"ವಾಗುವುದಾದರೆ, ಅದೇ ಇನ್ನೊಂದು ಧರ್ಮವನ್ನು ಖಂಡಿಸಿ ಬರೆದಿದ್ದು ಏಕೆ "ಬಂಡಾಯ"ವೆನಿಸದು? ಒಂದು ಧರ್ಮದ ಅವಹೇಳನದ ಸಾಹಿತ್ಯ "ಕ್ರಾಂತಿ"ಯೆನಿಸುವುದಾದರೆ, ಇನ್ನೊಂದು ಧರ್ಮದ ಅವಹೇಳನವೇಕೆ "ಸಮಾಜಘಾತುಕ"ವೆನಿಸಬೇಕು? ಇದು ನಮ್ಮ ಬೌದ್ಧಿಕ ವಿಕಾಸವೋ ವಿನಾಶವೋ ನಾನರಿಯೆ! ಒಟ್ಟಾರೆ ಇದು ಕೂಡ "ಭಾರತೀಯ ಸೆಕ್ಯುಲರಿಸಂ" ಎಂದು ಹೇಳಬಹುದು.

ವಿಚಾರ ಎಲ್ಲಿಂದೆಲ್ಲಿಗೋ ಹೋಗುತ್ತಿದೆ. ಇರಲಿ, ಮತ್ತೆ ಜಾತಿ/ಭಯೋತ್ಪಾದನೆಗೆ ಬರೋಣ. ಒಂದು ವೇಳೆ, ನಮ್ಮ ವೀರಶೈವ, ಒಕ್ಕಲಿಗ, ದಲಿತ, ಕುರುಬ ಅಥವಾ ಇನ್ಯಾವುದೇ ಜಾತಿಗಳಿಗೂ ಈ ರೀತಿ ತಮ್ಮ ತಮ್ಮ ಜಾತಿಯ ಬಹುಸಂಖ್ಯಾತರ ವಿದೇಶೀ ರಾಷ್ಟ್ರಗಳು ಇದ್ದು, ಪಾಕಿಸ್ತಾನದ ಮಾದರಿಯಲ್ಲೇ ಸಹಾಯಹಸ್ತ ಚಾಚಿ ಉಗ್ರರಾಗಿಸುವತ್ತ ಚಿತ್ತ ಹರಿಸಿದ್ದರೆ, ಇಂದು ಭಾರತದಲ್ಲಿ ಈ ಜಾತಿಯ ಉಗ್ರರುಗಳೂ ಇರುತ್ತಿದ್ದರೆಂದೇ ಅನಿಸುತ್ತದೆ. ಹಿಂದೊಮ್ಮೆ ಕೆಲವು ಸಿಖ್ಖರು ಉಗ್ರಗಾಮಿಗಳಾಗಿದ್ದಂತೆ! ಇಂದು ಭಾರತದ ಎಲ್ಲಾ ಜಾತಿಗಳೂ ತಮ್ಮ ತಮ್ಮ ಶಕ್ತಿಯ ಅನುಗುಣವಾಗಿ ಸಂವಿಧಾನಿಕ ಉಗ್ರವಾದವನ್ನು ರಾಜಾರೋಷವಾಗಿ ನಡೆಸುತ್ತಿವೆ. ಇದೊಂದು ರೀತಿ ’ಸಿವಿಲ್’ ಉಗ್ರವಾದವಾದರೆ, ಭಯೋತ್ಪಾದಕರದು ’ಕ್ರಿಮಿನಲ್’ ಉಗ್ರವಾದ! ಈ ಜಾತೀವಾದದ ಉಗ್ರರು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದರೆ, ಭಯೋತ್ಪಾದಕ ಉಗ್ರರು ಜನರನ್ನು ಕೊಲ್ಲುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಒಟ್ಟಾರೆ ಎರಡು ವಿಧಗಳೂ ದೇಶವನ್ನು ಅಧೋಗತಿಗೆ ಸೇರಿಸುತ್ತಿವೆ.

ಇನ್ನೂ ಬೆಂಗಳೂರಿನಲ್ಲಿ ಪ್ರಪ್ರಥಮವಾಗಿ ಬಾಂಬ್ ಸಿಡಿದಿದೆ ಎನ್ನುವಿರಾ? ಈ ಬಾಂಬ್ ನಮ್ಮ ಭರತನಹಳ್ಳಿಯಲ್ಲಿ ಎಂದೋ ಸಿಡಿದಿದೆ. ವಿಪರ್ಯಾಸವೆಂದರೆ, ಈ ಬಾಂಬನ್ನು ಸಿಡಿಸಿದವರೆಲ್ಲರನ್ನೂ ನಾವುಗಳು "ಮಹಾತ್ಮ"ರೆಂದು ಪೂಜಿಸುತ್ತಿದ್ದೇವೆ.

ಅಣಕ:

ಒಮ್ಮೆ ನನ್ನ ಬಂಧುವೊಬ್ಬರ ಹಳ್ಳಿಯ ಕ್ಷೌರಿಕ ತನ್ನ ಮಂಗಳವಾರದ ರಜಾ ಮೇಲಿದ್ದ. ಆದಿನ ಆ ಹಳ್ಳಿಯ ದಲಿತ ಪುಢಾರಿಯೊಬ್ಬ ಯಾವುದೋ ರಾಜಕೀಯ ಸಭೆಗೆ ಪಟ್ಟಣಕ್ಕೆ ಹೋಗಬೇಕಿದ್ದಿತು. ಸರಿ, ರಜಾ ಮಾಡಿದ್ದ ಕ್ಷೌರಿಕನ ಮನೆಗೆ ನೇರ ನಡೆದ. ತನಗೆ ಕ್ಷೌರ ಮಾಡೆಂದು ಪುಢಾರಿಯೂ, ನಾನು ರಜಾ ಎಂದು ಕ್ಷೌರಿಕನೂ ವಾಗ್ವಾದಿಸಿ, ಸುತ್ತಲೂ ಜನ ನೆರೆದರು. ಸರಿ, ದಲಿತ ಪುಢಾರಿ ಕ್ಷೌರಿಕನನ್ನು ’ಹಜಾಮ’ನೆಂದು ಮೂದಲಿಸಿ, ನಿನಗೆ ಪಾಠ ಕಲಿಸುತ್ತೇನೆಂದು ನಡೆದ. ಆ ದಿನ ಸಂಜೆಯ ವೇಳೆಗೆ ಪೊಲೀಸರು ಬಂದು ಕ್ಷೌರಿಕನನ್ನು ಜಾತಿನಿಂದನೆಯ ಮೇಲೆ ಬಂಧಿಸಿ, ಪಂಚಾಯಿತಿ ರಾಜೀ ನಡೆದು, ಕೊನೆಯಲ್ಲಿ ಆ ಕ್ಷೌರಿಕನು ತನ್ನ ಕ್ಷೌರವೃತ್ತಿಯನ್ನು ಸಂಪೂರ್ಣ ಖೈದು ಮಾಡಿ, ಬೇರೆ ಉದ್ಯೋಗವನ್ನು ಹುಡುಕಿಕೊಳ್ಳುವಲ್ಲಿ ಪರ್‍ಯವಸಾನಗೊಂಡಿತು.

ಇದು ನಮ್ಮ ಸೆಕ್ಯುಲರಿಸಂ ನ ಒಂದು ಸ್ಯಾಂಪಲ್ ಘಟನೆ!

ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?