ಫೇಸ್ಬುಕ್ ವಿಮರ್ಶಕರು ಸಂಶೋಧನ ಕೃತಿಗಳ ವಿಮರ್ಶೆಯನ್ನು ಹೇಗೆ ಬರೆಯಬೇಕು?
ಕನ್ನಡದ ಎಲ್ಲ ದಡ್ಡ-ದಡ್ಡಿಯರ ಬುದ್ಧಿಗೆ ಗ್ರಾಸವಾಗುವಂತಹ ಕರಿಬೇವಿನ ಕಹಿ ಮೇವು (Kannada Thoughts from Lincoln's Land!)
ಸಂಶೋಧನ ಕೃತಿಗಳ ವಿಮರ್ಶೆ
ಸತ್ಯಕಾರಣ, ಬಸವರಾಜಕಾರಣ!
ನಮಸ್ತೆ Mahadevi K P ಮಹಾದೇವಿಯವರೆ, ತಮ್ಮ ವಿಸ್ತೃತ ಓದು ಮತ್ತು ಅಭಿಪ್ರಾಯಕ್ಕೆ ಶರಣು. ತಮ್ಮ ಅಭಿಪ್ರಾಯವನ್ನು ಯಥಾವತ್ತಾಗಿಟ್ಟುಕೊಂಡು ನನ್ನ ಸ್ಪಷ್ಟೀಕರಣವನ್ನು "$$$ ಮತ್ತು ---" ನಡುವೆ ಅನ್ವಯಾತ್ಮಕವಾಗಿ ಕೊಟ್ಟಿದ್ದೇನೆ, ಗಮನಿಸಿ. ಇಂತಹ ತಾರ್ಕಿಕ ಚರ್ಚೆಗಳು ಸಂಶೋಧನೆಗೆ ಅತ್ಯಾವಶ್ಯಕ. ದಯಮಾಡಿ ಬರೆಯುತ್ತಿರಿ. ಉಳಿದಂತೆ ಅರಸೀಕೆರೆಗೆ ಬಂದಾಗ ಚರ್ಚಿಸೋಣ.
"ಬಸವರಾಜ ಕಾರಣ ಎಂಬ ರಾಜಕಾರಣ"
ಅನಿವಾಸಿ ಭಾರತೀಯರಾದ ಶ್ರೀ 'ರವಿ ಹಂಜ್' ಸರ್ ರವರ ಕೃತಿ "ಬಸವರಾಜಕಾರಣ" ವನ್ನು ಓದಿದೆ. ಕೃತಿಯ ಮೊದಲಿಗೆ ಪ್ರಾರಂಭವಾಗುವ ವಿಷಯ ಮತ್ತು ಅದನ್ನು ಮಂಡಿಸಲು ಅವರು ಉಲ್ಲೇಖಿಸುವ ಆಕರ ಗ್ರಂಥಗಳು ಮತ್ತು ಅವುಗಳ ಕರ್ತೃಗಳ ಹೆಸರುಗಳು, ಲೇಖಕರ ಅಪಾರ ಅಧ್ಯಯನಶೀಲತೆಯನ್ನೂ ಹಾಗೂ ಬುದ್ಧಿಮತ್ತೆಯನ್ನು ತೋರಿಸುತ್ತದೆ.
ಆದರೆ, "ಸೂತ್ರ ಮತ್ತು ಶಾಸ್ತ್ರಗಳು" ಎಂಬ ಅಧ್ಯಾಯದಲ್ಲಿ, ರಾಮಾಯಣ ಮತ್ತು ಮಹಾಭಾರತಗಳ ಕಾಲವನ್ನು ಆಯಾಯ ಗ್ರಂಥಗಳಿಂದಲೇ ವಿವರವಾಗಿ ಅರಿಯೋಣ ಎನ್ನುತ್ತಾ ಬಾಲಕಾಂಡದ ಶ್ಲೋಕವೊಂದನ್ನು ಉಲ್ಲೇಖಿಸಿ, ಈ ಶ್ಲೋಕದಲ್ಲಿ ರಾಮನು ಬುದ್ಧನನ್ನು ಕಳ್ಳ ನಾಸ್ತಿಕ ಎಂದಿದ್ದಾನೆ ಎಂದು ಸೂಚಿಸುತ್ತಾರೆ. ಮತ್ತು ರಾಮಾಯಣದ ಪ್ರಕಾರ ರಾಮನು ಬುದ್ದನ ನಂತರ ಅಥವಾ ಸಮಕಾಲೀನನಿರಬೇಕು ಬುದ್ದನಿಗಿಂತ ಮೊದಲೇ ರಾಮನಿದ್ದಾನೆನ್ನುವುದು ಅತಾರ್ಕಿಕವಾಗುತ್ತದೆ ಎನ್ನುತ್ತಾರೆ.
ಆದರೆ ಇವರು ಯಾವ ಬುದ್ಧನ ಬಗ್ಗೆ ಅಂದರೆ ೯ ನೇ ಅವತಾರದ ಬುದ್ಧನ ಬಗ್ಗೆ ಹೇಳುತ್ತಿದ್ದಾರೋ ಅಥವಾ ಗೌತಮ ಬುದ್ಧನ ಬಗ್ಗೆ ಹೇಳುತ್ತಿದ್ದಾರೋ ತಿಳಿಯುವುದಿಲ್ಲ. ಯಾವ ಬುದ್ದನೇ ಆದರೂ ಇಲ್ಲಿ ಹೊಂದಾಣಿಕೆ ಆಗುವುದಿಲ್ಲ. ಹಾಗಾದರೆ ಆ ಶ್ಲೋಕ ಹೇಗೆ ಅಲ್ಲಿದೆ..! ಅಥವಾ ಈ ಶ್ಲೋಕ ನಂತರದಲ್ಲಿ ಸೇರಿಸಸಲ್ಪಟ್ಟಿರಬಹುದೆ...? ಎಂಬುದನ್ನು ಲೇಖಕರು ಗಮನಿಸಬಹುದು.
$$$
ಇದು ಗೌತಮ ಬುದ್ಧ. ರಾಮನ ಮಂದಿರಗಳು ಗೌತಮ ಬುದ್ಧನಿಗಿಂತ ಮೊದಲು ಭಾರತದಲ್ಲೆಲ್ಲೂ ಅಸ್ತಿತ್ವದಲ್ಲಿಲ್ಲ. ಬುದ್ಧನ ನಂತರದ ಕೆಲವು ಶತಮಾನಗಳ ಕಾಲದಲ್ಲೂ ರಾಮನ ಮಂದಿರಗಳು ಇಲ್ಲ. ಹಾಗಾಗಿ ಬುದ್ಧನ ನಂತರವೇ ರಾಮಾಯಣ ಸೃಷ್ಟಿಯಾಗಿದೆ ಎಂದೆನಿಸಿ ಈ ಶ್ಲೋಕ ಸರಿಯೆನಿಸುತ್ತದೆ. ತಮ್ಮ ಅಭಿಪ್ರಾಯದಂತೆ ಇದು ನಂತರ ಸೇರಿರುವ ಸಾಧ್ಯತೆಯೂ ಇದೆ. ಏಕೆಂದರೆ ಮೂಲಕೃತಿಗಳನ್ನು ಕಾಲಕ್ಕನುಗುಣವಾಗಿ ಭಾರತೀಯರು ತಿದ್ದುವ ರೂಢಿಯನ್ನು ಅಲ್ ಬರುನಿ ಗುರುತಿಸಿರುವ ಬಗ್ಗೆ ನನ್ನ ಕೃತಿಯಲ್ಲಿ ಓದಿರುತ್ತೀರಿ. ಪುಟ ೪೬, ೪೭. ದಯಮಾಡಿ ಇನ್ನೊಮ್ಮೆ ಗಮನಿಸಿ.
---
ನಿರ್ಧಾರಕ್ಕೆ ತೊಡಕಾಗುವಂತಹ ಅನೇಕ ಇಂಥವೇ ವಿಷಯಗಳು ಈ ಪುಸ್ತಕದಲ್ಲಿ ಇವೆ.
ಆದರೂ ಲೇಖಕರು, ಈ ಕೃತಿಯನ್ನು ಕಟ್ಟುನಿಟ್ಟಾದ ಸಂಶೋಧನಾತ್ಮಕವಾದದ್ದು ಎಂದು ನೂರಾರು ಪುರಾವೆಗಳನ್ನು ಕೊಡುತ್ತಾರೆ. ಅದೇನೆ ಇರಲಿ.
$$$
ಸಂಶೋಧನ ಪುರಾವೆಗಳನ್ನು "ಅದೇನೇ ಇರಲಿ" ಎಂಬುದು "ತಳ್ಳುವಾದ"ವಾಗಿ ನಮ್ಮ ವಾದವನ್ನು ಜೊಳ್ಳಾಗಿಸಿಬಿಡುತ್ತದೆ. ಹಾಗಾಗಿ ಆ ಪುರಾವೆಗಳನ್ನು ದಯಮಾಡಿ ಗಮನಿಸಿ. ಆ ಪುರಾವೆಗಳಿಲ್ಲದಿದ್ದರೆ ನನಗೆ ಈ ಕೃತಿ ಬರೆಯುವ ಪ್ರಮೇಯವಿರದೆ "ಓಂ ಗುರುಬಸವಲಿಂಗಾಯ ನಮಃ" ಎಂದು ತಣ್ಣಗೆ ಇದ್ದುಬಿಡುತ್ತಿದ್ದೆ.
---
ಕೃತಿಯ ಸುಮಾರು ೩೫ ಭಾಗದಷ್ಟರ ನಂತರ ಪ್ರಾಂರಭಿಸುವ "ವೀರಶೈವರಾಂಭ" ಎನ್ನುವ ಅಧ್ಯಾಯದಲ್ಲಿ ತಮ್ಮ ಈ ರೀತಿಯ ಸಂಶೋಧನಾತ್ಮಕ ವಿಶ್ಲೇಷಣೆಯು, ದೇಶದಲ್ಲಿನ
''ವೀರಶೈವ-ಲಿಂಗಾಯತ" ಪಂಥದ ಇಲ್ಲಿಯವರೆಗಿನ ಸಂಶೋಧನೆಗಳನ್ನು ಬುಡಮೇಲು ಮಾಡುವಂತಹ, ಸತ್ಯದ ಅತ್ಯಂತ ಸಮೀಪಕ್ಕೆ ಓದುಗರನ್ನು ತಲುಪಿಸಬಲ್ಲುದು ಎಂಬುದನ್ನು ನಿಶ್ಚಿತವಾಗಿ ಹೇಳುವೆ ಎನ್ನುತ್ತಾ.... ರವಿ ಹಂಜ್ ಸರ್ ರವರು ಹೇಳುವ ವಿಷಯ ಕುತೂಹಲ ಹುಟ್ಟಿಸುತ್ತದೆ.
ಆದರೆ, ಇಲ್ಲಿಂದಲೇ ಶುರುವಾಗುತ್ತವೆ ಲೇಖಕರ ತಪ್ಪುಗಳು.
೧) ಪಾಶುಪತರು, ಕಾಳಾಮುಖರು, ಲಾಕುಲೀಶರು ಎಲ್ಲರೂ ವೀರಶೈವ ಧರ್ಮ ಮಾರ್ಗಿಗಳೆ ಎಂದು ಪುರಾವೆಗಳ ಮೂಲಕ ಹೇಳುತ್ತಾ, "ಕೊಲ್ಲಿಪಾಕಿ" ಕ್ರಾಂತಿಯೇ ವೀರಶೈವ ಧರ್ಮ ಜಾಗ್ರತೆಯ ಮೊದಲ ಕ್ರಾಂತಿ, ಅದರ ರೂವಾರಿ "ರೇಣುಕ" ರೇ ವೀರಶೈವ ಧರ್ಮದ ಮೂಲ ಪುರುಷ ಎನ್ನುತ್ತಾರೆ.
ಮತ್ತು ಇದನ್ನು ಕೇವಲ ಮೌಖಿಕ ಕತೆಗಳನ್ನು ಪುರಾವೆಗಳಾಗಿ ತೋರಿಸುತ್ತಾ ಓದುಗರಿಗೆ ಒಪ್ಪಿತಗೊಳಿಸಲು ಪ್ರಯತ್ನಿಸುತ್ತಾರೆ.
ಆದರೆ 'ರೇಣುಕರ' ತತ್ವ ಸಿದ್ದಾಂತಗಳ ಒಂದೇ ಒಂದು ಲಿಖಿತ ರಚನೆಯನ್ನೂ ಇಲ್ಲಿ ನೀಡುವುದಿಲ್ಲ...!!
ಜೊತೆಗೆ ಲೇಖಕರು ಬಸವಣ್ಣನು ವೀರಶೈವ ಧರ್ಮದ ಪರಿಚಾರಕನೇ ಹೊರತು, ವೀರಶೈವ ಧರ್ಮ ಸಂಸ್ಥಾಪಕನಲ್ಲ ಎನ್ನುತ್ತಾರೆ. ಲಿಂಗಪೂಜೆಯೂ ಕೂಡ ಬಸವಪೂರ್ವದಿಂದಲೂ ಇದೆ ಎನ್ನುತ್ತಾ, ಸಾಬೀತುಗೊಳಿಸುವ ಸಲುವಾಗಿ, ಕಾನಿಷ್ಕನ ಕಾಲದ ಕರಂಡಕವನ್ನು ಸಚಿತ್ರ ಸಮೇತ ದಾಖಲೆ ನೀಡುತ್ತಾರೆ. ಆದರೆ ಅದು ನಿಜವಾಗಿಯೂ ಪೂಜಾಲಿಂಗುವನ್ನು ಇಟ್ಟುಕೊಳ್ಳುವ ಕರಂಡಕವೇ ಆಗಿತ್ತಾ....? ಗೊತ್ತಿಲ್ಲ.
ಅಕಸ್ಮಾತ್ ಅದೇ ಆಗಿದ್ದರೂ ಅದು "ಇಷ್ಟಲಿಂಗ" ವೇ ಆಗಿತ್ತಾ....? ಸಾಧ್ಯವಿಲ್ಲ.
$$$
ಲಿಂಗಗಳನ್ನು ತೋಳಿಗೆ ಕೊರಳಿಗೆ ಕಟ್ಟಿಕೊಳ್ಳುವ ಪದ್ಧತಿ ಹರಪ್ಪಾ-ಮೊಹೆಂಜೋದಾರೋ ಕಾಲದಿಂದಲೂ ಜಾರಿಯಲ್ಲಿತ್ತು. ಇದು ನನ್ನ ಸೃಜನಶೀಲ ಅಭಿಪ್ರಾಯವಲ್ಲ! ಹರಪ್ಪಾ ಉತ್ಖನನ ನಡೆಸಿದ್ದ ಜಾನ್ ಮಾರ್ಷಲ್ ಅವರ ಉತ್ಖನನದ ಪುರಾವೆಯನ್ನು ಆಧರಿಸಿದ್ದು. ಅದನ್ನು ಸಂಶೋಧಕ ಆರ್.ಸಿ. ಹಿರೇಮಠ ಸಹ ಅನುಮೋದಿಸಿದ್ದಾರೆ. ಬೌದ್ಧರು ಕರಂಡಕದಲ್ಲಿ ಮಹಿಮರ ಮೂಳೆ, ಕೂದಲು ಮುಂತಾದ ಜೈವಿಕ ಪಳೆಯುಳಿಕೆಗಳನ್ನು ತೆಗೆದುಕೊಂಡು ಪೂಜಿಸುತ್ತಿದ್ದರು. ಇದರಿಂದ ಪ್ರಭಾವಿತರಾಗಿ ಶೈವರು ಕೈ ಕೊರಳಿಗೆ ಕಟ್ಟಿಕೊಳ್ಳುತ್ತಿದ್ದ ಲಿಂಗಗಳನ್ನು ಕರಂಡಕದಲ್ಲಿಟ್ಟು ಕಟ್ಟಿಕೊಳ್ಳುವ ಪರಿಪಾಠ ಆರಂಭಿಸಿರಬಹುದು. ಅಥವಾ vice versa. ಎಂದು ಸವಿವರವಾಗಿ ಬರೆದಿದ್ದೇನೆ. ಹಾಗಾಗಿ ಪುಟ ೫೮, ೫೯, ೬೦ ಗಳನ್ನು ದಯಮಾಡಿ ಗಮನಿಸಿ. ಸಂಶೋಧನೆಗಳು "ಸಾಧ್ಯ" "ಸಾಧ್ಯವಿಲ್ಲ" ಎಂಬುದಕ್ಕೆ ಪುರಾವೆಗಳನ್ನು ಬಯಸುತ್ತದಲ್ಲವೆ!
ಪಾಶುಪತವು ಹೇಗೆ ಕಾಳಾಮುಖವಾಗಿ ವೀರಶೈವವಾಗಿ ಲಿಂಗಾಯತವಾಗಿ ರೂಪಾಂತರಗೊಂಡಿತು ಎಂಬುದಕ್ಕೆ ಬಸವರಾಜಕಾರಣದ ಎಲ್ಲಾ ಅಧ್ಯಾಯಗಳಲ್ಲಿ ಪುರಾವೆಗಳಿವೆ, ದಯಮಾಡಿ ಗಮನಿಸಿ. ಸಾಧ್ಯವಾದರೆ ಆ ಪುರಾವೆಗಳ ಮೂಲಸ್ವರೂಪವನ್ನು ಸಹ ಗಮನಿಸಿ ನಿರ್ಧಾರಕ್ಕೆ ಬನ್ನಿ. ಪುರಾವೆಗಳ ಸಮೇತ ಮಾತನಾಡುವ ತಾರ್ಕಿಕ ಚರ್ಚೆಗಳೇ ನಮ್ಮ ಸಂಶೋಧನೆಗೆ ಮೂಲದ್ರವ್ಯ. ಹಾಗಾಗಿ ದಯಮಾಡಿ ಪುರಾವೆಗಳನ್ನು ಉಪೇಕ್ಷಿಸಬೇಡಿ. ಅದೇ ರೀತಿ ಪಾಶುಪತದ ಪಶು-ಪತಿ ಎಂಬುದು ಹೇಗೆ ಶರಣಸತಿ-ಲಿಂಗಪತಿ ಎಂಬ ಉಲ್ಲೇಖವಿದೆ ಗಮನಿಸಿ.
ನೀವು ಟ್ಯಾಗ್ ಮಾಡಿರುವ ನಮ್ಮೀರ್ವರ ಆತ್ಮೀಯ ಸ್ನೇಹಿತರಾದ ದಿಲೀಪ್ ಕುಮಾರ್ ದಿಲೀಪ್ ಕುಮಾರ್ ಅವರ ಬಳಿ ನಾನು ಕೊಟ್ಟಿರುವ ಸಾಕಷ್ಟು ಆಕರಗಳು, ಮತ್ತು ಪುರಾವೆಗಳ ಮಾಹಿತಿ ಇರುವವು. ಅವರೊಟ್ಟಿಗೆ ಒಮ್ಮೆ ಆ ಸಾಕ್ಷಿ ಪುರಾವೆಗಳನ್ನು ದಯಮಾಡಿ ಪರಾಂಭರಿಸಿಬಿಡಿ.
ಸೃಜನಶೀಲ ಸಾಹಿತ್ಯದ ವಿಮರ್ಶೆಯ ಆಯಾಮವೇ ಬೇರೆ ಮತ್ತು ಸಂಶೋಧನೆಗಳ ಆಯಾಮವೇ ಬೇರೆ. ಇಂತಹ ಕೃತಿಯನ್ನು ಕೊಟ್ಟಿರುವ ಪುರಾವೆ ಮತ್ತು ಪ್ರತಿ ಪುರಾವೆಗಳನ್ನು ಆಧಾರವಾಗಿಟ್ಟುಕೊಂಡು ವಿಮರ್ಶಿಸಬೇಕಾಗುತ್ತದೆ. ಅಂತಹ ಒಂದು ವಿಮರ್ಶೆಯ ಉದಾಹರಣೆಯನ್ನು ಈ ಕೃತಿಯ "ರಾಜಕಾರಣಪ್ರೀತ ವೀರಶೈವ-ಲಿಂಗಾಯತ" ಅಧ್ಯಾಯದ ಪುಟ ೨೧೨ ರಿಂದ ೨೨೩ ರವರಿಗೆ ಕಾಣಬಹುದು. ಈ ಕಾರಣವಾಗಿಯೇ ಸ್ನೇಹಿತ ದಿಲೀಪ್ ಅವರು "ಇವರ ಅಭಿಪ್ರಾಯಗಳನ್ನು ಖಂಡಿಸುವಾಗಲೂ ಅಷ್ಟೇ ಪ್ರಮಾಣದಲ್ಲಿ ಸಾಕ್ಷಿ ಕೊಟ್ಟು, ಅವರು ಓದುಗರಿಗಾಗಿ ಖಾಲಿ ಬಿಟ್ಟಿರುವ ವಚನಗಳ ವಿಶ್ಲೇಷಣೆ, ನಿರ್ವಚನದ ಹಾದಿಯನ್ನು ಹಿಡಿದಷ್ಟು ಮಾಯಾಮೃಗವನ್ನು ಹಿಡಿದು ಕಟ್ಟಿಬಿಡಬಹುದು ಅನಿಸಿದೆ. ನೇರವಾಗಿ ಪುಸ್ತಕ ಸರಿಯಿಲ್ಲ, ವ್ಯವಸ್ಥಿತವಲ್ಲ ಎಂದು ಒಂದೇ ಮಾತಿನಲ್ಲಿ ಹೇಳಿಬಿಡಬಹುದು. ಆದರೆ ಅವರಷ್ಟೇ ಸಾಕ್ಷಿ ಕೊಟ್ಟು ಹೇಳಬೇಕಾದುದು ಓದುಗರಾದ ನಮ್ಮ ಕರ್ತವ್ಯ ಮತ್ತು ಕನ್ನಡ ವಿಮರ್ಶಾ ಪರಂಪರೆ ಮತ್ತು ಸಂಶೋಧನಾ ಪರಂಪರೆ ನಮಗೆ ಕೊಟ್ಟಿರುವ ಜವಾಬ್ದಾರಿ ಅನಿಸಿದೆ" ಎಂದು ಬಸವರಾಜಕಾರಣ ಕುರಿತಾದ ತಮ್ಮ ಒಂದು ಪೋಸ್ಟಿನಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ನಾನು ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ ತಮಗೆ ಬಂದ ಕೆಲವು ಕಾಮೆಂಟುಗಳು ಈ ವಿವರಗಳು ಕೃತಿಯಲ್ಲಿ ಇಲ್ಲವೇ ಇಲ್ಲವೇನೋ ಎಂಬಂತಿವೆ ಮತ್ತು ಕೆಲವರಲ್ಲಿ ಅಸೂಯೆಯ ಪರಮಾವಧಿ ಸೂಸುತ್ತಿವೆ. ಹಾಗಾಗಿ ನಿಮ್ಮ ಪೋಸ್ಟಿನ ಓದುಗ ಮಿತ್ರರಿಗಾಗಿ ಆ ಎಲ್ಲಾ ವಿವರಗಳಿವೆ ಓದಿ ಎನ್ನಲು ಮಾತ್ರ ಹೇಳುತ್ತಿದ್ದೇನೆ. ಹಾಗೆಯೇ ವಚನಗಳ ವಿಶ್ಲೇಷಣೆ ಮತ್ತು ನಿರ್ವಚನವನ್ನು ಹೇಗೆ ಬೇಕಿದ್ದರೂ ಹಿಂಜಬಹುದು. ಆದರೆ ಆ ಹಿಂಜುವಿಕೆಗೆ ಆಯಾಯ ಕಾಲಘಟ್ಟದ ತಕ್ಕ ತಾರ್ಕಿಕ ಐತಿಹಾಸಿಕ, ಸಾಮಾಜಿಕ, ರಾಜಕೀಯಾತ್ಮಕ ಸಾಕ್ಷಿಯನ್ನು ಒದಗಿಸಬೇಕು. ಅಂತಹ ಸಾಕ್ಷ್ಯವನ್ನು ನಾನು ಕೊಟ್ಟಿದ್ದೇನೆ. ಅದೇ ರೀತಿಯ ಸಾಕ್ಷಾತ್ಮಕ ನಿರ್ವಚನವು ಸಂಶೋಧನೆಯಲ್ಲಿ ಅತ್ಯಂತ ಅಗತ್ಯ. ಇಲ್ಲದಿದ್ದರೆ ಅದು ಭಾವನಾತ್ಮಕ ನಿರ್ವಚನವಾಗಿಬಿಡುತ್ತದೆ.
---
ಏಕೆಂದರೆ, ಬಸವ ಪೂರ್ವದಲ್ಲಿ ಇಷ್ಟಲಿಂಗ ಇದ್ದದ್ದೇ ಆದರೆ "ಬಳ್ಳೇಶ ಮಲ್ಲಾರ್ಯ" ಮುಂತಾದ ಶಿವಭಕ್ತರು, ತಮ್ಮ ದೈನಂದಿನ ವ್ಯವಹಾರಗಳಿಗಾಗಿ ಊರಿಂದ ಊರಿಗೆ ಹೋಗುವಾಗ ಸ್ಥಾವರ ಲಿಂಗಗಳನ್ನು ಹೊತ್ತೊಯ್ಯುವ ಪ್ರಮೇಯ ಏಕೆ ಬರುತಿತ್ತು..?
ಇದೇ ಬಳ್ಳೇಶ ಮಲ್ಲಾರ್ಯನು ನಂತರದ ದಿನಗಳಲ್ಲಿ ಬಸವಣ್ಣನಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆಯುತ್ತಾನೆ ಎನ್ನುವುದು ಕೂಡ ಶಿವಶರಣರ ಕೃತಿಗಳಲ್ಲಿ ಇದೆ.
ಆದ್ದರಿಂದ, ಬಸವಪೂರ್ವದಲ್ಲಿ ಲಿಂಗಪೂಜೆ ಇತ್ತೇ ಹೊರತು " ಚದುರಸದಿಂದ ಮಾಡಲ್ಪಟ್ಟ ಇಷ್ಟಲಿಂಗ " ಇರಲಿಲ್ಲ. ಪ್ರತಿಯೊಬ್ಬ ಭಕ್ತನು, ನಿಯಮಾವಳಿಗಳ ಪ್ರಕಾರ ದೀಕ್ಷೆಯನ್ನು ಪಡೆದು ಅವನದೇ ಆದ ಇಷ್ಟಲಿಂಗವನ್ನು ಧರಿಸುವ ಕ್ರಿಯೆಯನ್ನು ಪ್ರಾರಭಿಸಿದ್ದು ಬಸವಣ್ಣ ಮಾತ್ರ".
ಇದನ್ನು ಹೇಳುವಾಗ, ನಮ್ಮ ದೇಶದ ಒಂದು ಮುಖ್ಯ ಸನ್ನಿವೇಶವನ್ನು ಹೇಳಬೇಕೆನಿಸುತ್ತದೆ.
ಗಾಂಧೀಜಿಯವರು, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವ ಮೊದಲಿನ ಸ್ವಾತಂತ್ರ್ಯ ಚಳುವಳಿಗೂ ಗಾಂಧೀಜಿಯವರು ಭಾರತಕ್ಕೆ ಬಂದ ಮೇಲಿನ ಸ್ವಾತಂತ್ರ್ಯ ಚಳುವಳಿಗೂ ಇರುವಷ್ಟೇ ವ್ಯತ್ಯಾಸ, ಬಸವಣ್ಣ ಕಲ್ಯಾಣ ಕ್ರಾಂತಿಯದೂ ಆಗಿದೆ.
$$$
ಅರಿವಿಲ್ಲದವನಿಗೆ ತಿಳಿಹೇಳಿದಾಗ ಆತ "ಆಹಾ ಮಹಾಮಹಿಮ ನೀನೇ ಇದರ ಮೂಲಪುರುಷ" ಎನ್ನುವ ಬಳ್ಳೇಶ ಭಕ್ತಿ ಮಾರ್ಗ ನನ್ನದಲ್ಲ. ಪುರಾವೆಗಳು ಬಹು ಮುಖ್ಯ.
---
ನಂತರ ಲೇಖಕರು ಅನೇಕ ವಚನಗಳನ್ನು, ಅವುಗಳ ಸಾಂದರ್ಭಿಕತೆ ಮತ್ತು ಅರ್ಥವನ್ನು ತಪ್ಪಾಗಿ ಗ್ರಹಿಸುವುದರ ಮೂಲಕ ಉಲ್ಲೇಖಿಸುತ್ತಾ ಹೋಗುತ್ತಾರೆ.
೨) ಯಾವುದೇ ದಾಖಲೆಗಳನ್ನೂ ನೀಡದೆ, ಬಸವಪೂರ್ವದಲ್ಲೂ ವಚನ-ಪ್ರಣೀತ-ಶೈವ ಪಂಥವಿತ್ತೆಂದು ಲೇಖಕರು ಹೇಳುತ್ತಾ ಬಸವಣ್ಣನು ತಕ್ಕ ವಯಸ್ಸಿನಲ್ಲಿ ಲಿಂಗ ದೀಕ್ಷೆ ಪಡೆದು ತಾನು ಹೇಗೆ ದಿವ್ಯವೂ ಧನ್ಯನೂ ಆದೆನೆಂದು ಹೇಳಿದ್ದಾನೆ ಎಂದು ಒಂದು ವಚನವನ್ನು ಉಲ್ಲೇಖಿಸುತ್ತಾರೆ.
ಇಲ್ಲಿ ಬಸವಣ್ಣ ಏಕೆ ಲಿಂಗದೀಕ್ಷಿತನಾದ.? ಯಾರಿಂದ? ಯಾವಾಗ? ಹೇಗೆ ?ಯಾವುದನ್ನೂ ಹೇಳದೆ ನೇರವಾಗಿ ಮತ್ತು ಆತುರವಾಗಿ "ಬಸವರಾಜಕಾರಣ" ಕ್ಕೆ ಧುಮುಕುತ್ತಾರೆ.
$$$
ದಯಮಾಡಿ ಬಸವಪೂರ್ವ ಕಾಲದಲ್ಲಿ ಮಾದಾರ ಚೆನ್ನಯ್ಯನಂತಹ ವಚನಕಾರರ ದಂಡೇ ಇದೆ ಗಮನಿಸಿ. ದಾಖಲೆಗಳನ್ನು ಇದೇ ಅಧ್ಯಾಯದಲ್ಲಿ ಕೊಟ್ಟಿದ್ದೇನೆ ಗಮನಿಸಿ.
ಇನ್ನು ವೀರಶೈವರಲ್ಲಿ ಒಂದು ವಯಸ್ಸಿಗೆ ಬಂದಾಗ ಲಿಂಗ ದೀಕ್ಷೆಯಾಗುತ್ತದೆ, ಈಗಲೂ ಸಹ. ಅದೇ ರೀತಿಯಲ್ಲಿ ಬಸವಣ್ಣ ಜಾತವೇದ ಮುನಿ ಸಾರಂಗಮಠ ಇವರಿಂದ ದೀಕ್ಷೆ ಪಡೆದಿರುವ ವಿಷಯವು ಅತ್ಯಂತ ಜನಜನಿತವಾಗಿರುವುದರಿಂದ ಅದನ್ನು ಬರೆದಿಲ್ಲ. ಕ್ಷಮಿಸಿ.
ಹಾಂ, ಇಂದಿನ ನಿಡುಮಾಮಿಡಿ ಜಗದ್ಗುರುಗಳು ಪೂರ್ವಾಶ್ರಮದಲ್ಲಿ ಜಾತವೇದ ಮುನಿ ಸಂಜಾತ ವಂಶವಾದ ಸಾರಂಗಮಠದವರೇ.
---
ಆ ವಚನ ಹೀಗಿದೆ.
ಎನ್ನ ಬಂಧ ಭವಂಗಳನು ಪರಿಹರಿಸಿ, ಎನಗೆ ಭಕ್ತಿ ಘನವನೆತ್ತಿ ತೋರಿ,
ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು,
ವೀರಶೈವಾಚಾರವನರುಹಿ ತೋರಿ,
ಎನ್ನ ಕರಸ್ಥಲದ ಸಂಗಮನಾಥನಲ್ಲಿ ಮಾಡುವ
ಜಪ, ಧ್ಯಾನ, ಅರ್ಚನೆ, ಉಪಚರಿಯ ಅರ್ಪಿತ
ಪ್ರಸಾದಭೋಗಂಗಳಲ್ಲಿಸಂದಿಸಿದ
ಶೈವಕರ್ಮವ ಕಳೆದು,
ಭವಮಾಲೆಯ ಹರಿದು ಭಕ್ತಿಮಾಲೆಯನಿತ್ತು
ಭವಜ್ಞಾನವ ಕೆಡೆಮೆಟ್ಟಿ, ಭಕ್ತಿಜ್ಞಾನವ ಗಟ್ಟಿಗೊಳಿಸಿ,
ಭವಮಾಟಕೂಟವ ಬಿಡಿಸಿ, ಭಕ್ತಿ ಮಾಟಕೂಟವ ಹಿಡಿಸಿ,
ಭವಶೇಷವನುತ್ತರಿಸಿ, ಭಕ್ತಿಶೇಷವನಿತ್ತು,
ಎನಗೆ, ಎನ್ನ ಬಳಿವಿಡಿದು ಬಂದ ಶರಣಗಣಂಗಳೆಲ್ಲರಿಗೆ
ಶಿವಸದಾಚಾರದ ಘನವನರುಹಿ ತೋರಿ,
ಮರ್ತ್ಯಲೋಕದಲ್ಲಿ ಸತ್ಯಸದಾಚಾರವನು ಹರಿಸಿ,
ಶಿವಭಕ್ತಿಯನುದ್ಧರಿಸಿ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣ ಎನ್ನನಾಗುಮಾಡಿ ಉಳುಹಿದನಾಗಿ ಇನ್ನೆನಗೆ ಭವವಿಲ್ಲದೆ, ಬಂಧವಿಲ್ಲದೆ,
ಭಕ್ತಿಮಾಟಕೂಟದ ಗೊತ್ತಿನಲ್ಲಿರ್ದು
ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕುವೆನು.
ಈ ವಚನವನ್ನು ಉಲ್ಲೇಖಿಸುತ್ತಾ ಲೇಖಕರು, ಬಸವಣ್ಣನು ವೀರಶೈವ ದೀಕ್ಷೆಯನ್ನು ಪಡೆದ ತಕ್ಷಣಕ್ಕೆ ಬರೆದಿರಬಹುದು ಎನಿಸುತ್ತದೆ ಎಂದಿದ್ದಾರೆ. ಅದಕ್ಕಾಗಿ ಅವರು ಕೊಡುವ ಕಾರಣ, ಹೊಸದಾಗಿ ಮದುವೆಯಾದ ಹೆಣ್ಣೊಬ್ಬಳು ತನ್ನ ಗಂಡನ ಹೆಸರನ್ನು ಒಡಪು ಕಟ್ಟಿ ಹೇಳುವ ತೆರನದಿ ಈ ವಚನ ಅನಾವರಣಗೊಳ್ಳುತ್ತದೆ. ಹೊಸ ಅಗಸ ಬಟ್ಟೆಯನ್ನು ಎತ್ತಿ ಎತ್ತಿ ಒಗೆಯುವ ತೆರದಿ ಬಸವಣ್ಣ ಹುರುಪಿನಿಂದ "ವೀರಶೈವ ಆಚಾರ" ವನ್ನು ಹೊಗಳಿದ್ದಾನೆ ಎನ್ನುತ್ತಾರೆ. ಇದನ್ನು ಓದುವಾಗ ಲೇಖಕರು ಯಾವ ಎತ್ತರದಲ್ಲಿ ನಿಂತು ಮತ್ತು ಎಂಥಾ ಹೋಲಿಕೆಗಳನ್ನು ಬಳಸಿ ಬಸವಣ್ಣನವರ ವಿಚಾರವಾಗಿ ಬಳಸಿ "ಸತ್ಯವನ್ನು ಹುಡುಕಲು" ಹೊರಟಿದ್ದಾರೆ ಎಂಬುದು ತಿಳಿಯುತ್ತದೆ.
ಮೊಟ್ಟ ಮೊದಲಿಗೆ, ತನಗಿಂತ ಹತ್ತಾರು ವರ್ಷಗಳು ಚಿಕ್ಕವರಾದ, ಬಸವಣ್ಣನವರಿಂದಲೇ ದೀಕ್ಷೆ ಪಡೆದು ಅಪ್ರತಿಮ ಆಚಾರವಂತನಾಗಿಯೂ, ಅನುಭಾವಿಯಾಗಿಯೂ "ಷಟಸ್ಥಲ ಚಕ್ರವರ್ತಿ" ಎಂಬ ಹೆಗ್ಗಳಿಕೆಯನ್ನು ಪಡೆದು ಇಡೀ ಕಲ್ಯಾಣದ ಶರಣರೆಲ್ಲರ ಕಣ್ಮಣಿಯಾದ, ಅಕ್ಕನಾಗಮ್ಮನವರ ಮಗನಾದ ಚೆನ್ನಬಸವಣ್ಣನವರನ್ನು ಕುರಿತು, ಕಲ್ಯಾಣದ ಸರ್ವ ಜವಾಬ್ದಾರಿಯನ್ನು ಹೊತ್ತು ಬಸವಣ್ಣನವರನ್ನು ಅವರ ಅಂತರಂಗದ ಅನುಭಾವಕ್ಕೆ ಆಗುಮಾಡಿಕೊಟ್ಟ ಸಂದರ್ಭದಲ್ಲಿ ರಚಿಸಿರುವ ವಚನವಿದು. ಇಷ್ಟು ಸ್ಪಷ್ಟವಾದ ಅರ್ಥವಿದ್ದಾಗಲೂ ಕೂಡ ಈ ವಚನವನ್ನು ಅನರ್ಥಗೊಳಿಸಿದ್ದು ಆಶ್ಚರ್ಯವೆನಿಸುತ್ತದೆ. ಈ ಪುಸ್ತಕದಲ್ಲಿ ಉಲ್ಲೇಖಿಸಿರುವ ಹೆಚ್ಚು ಕಡಿಮೆ ಎಲ್ಲಾ ವಚನಗಳೂ ಕೂಡ ಹೀಗೇ ಆಗಿವೆ. ಚೆನ್ನಬಸವಣ್ಣನ ಕಾರ್ಯಕ್ಷಮತೆಯನ್ನು ಮೆಚ್ಚಿ ಎಲ್ಲಾ ವಚನಕಾರರೂ ಕೂಡ ಇಂಥವೇ ವಚನಗಳನ್ನು ರಚಿಸಿದ್ದಾರೆ ಎಂಬುದು ವಚನಗಳ ಅಧ್ಯಯನ ಮಾಡಿದವರಿಗೆ ಖಂಡಿತವಾಗಿ ತಿಳಿಯುತ್ತದೆ.
೩) "ಕಲ್ಯಾಣದ ಕ್ರಾಂತಿ" ಎಂಬ ಅಧ್ಯಾಯದಲ್ಲೂ ಕೂಡ
"ಕೋಣನ ಕೊಂಬಿನ ತುದಿಯಲ್ಲಿ, ಏಳುನೂರೆಪ್ಪತ್ತು ಸೇದೆಯ ಬಾವಿ.
ಬಾವಿಯೊಳಗೊಂದು ಬಗರಿಗೆ, ಬಗರಿಯೊಳಗೊಬ್ಬ ಸೂಳೆ ನೋಡಯ್ಯಾ.
ಆ ಸೂಳೆಯ ಕೊರಳಲ್ಲಿ ಏಳುನೂರೆಪ್ಪತ್ತಾನೆ ನೇರಿತ್ತ ಕಂಡೆ ಗುಹೇಶ್ವರಾ."
ಎಂಬ 'ಅಲ್ಲಮಪ್ರಭು' ಗಳ ವಚನವನ್ನು ಉಲ್ಲೇಖಿಸಿ, ಈ ವಚನದಲ್ಲಿ ಕೋಣನ ಕೊಂಬು ಎಂದರೆ ಬಸವಣ್ಣನ ಮಹತ್ವಾಕಾಂಕ್ಷೆ; ಆ ಆಕಾಂಕ್ಷೆಯ ಕಿಂದರಿಜೋಗಿ ನಿನಾದಕ್ಕೆ ಏಳುನೂರೆಪ್ಪತ್ತು ಗಣಂಗಳು ಕಲ್ಯಾಣ ಕ್ರಾಂತಿ ಎಂಬ ಬಾವಿಗೆ ಬಿದ್ದರು; ಆದರೆ ನೀರಿಲ್ಲದ ಆ ಬಾವಿಯಲ್ಲಿ ನೀರಿಗಾಗಿ ಬಗರಿಗೆ ತೋಡಿ ಕೂತಿದ್ದ ಸೂಳೆಯ (ಆದ್ಯರ) ಕೊರಳಿಗೆ ಏಳುನೂರೆಪ್ಪತ್ತು ಗಣಂಗಳು ಬಸವಣ್ಣನ ಮತ್ತು ಕ್ರಾಂತಿಯ ಬಗ್ಗೆ ಭ್ರಮನಿರಸನಗೊಂಡು ಜೋತುಬಿದ್ದು ಎಲ್ಲಾ ಶರಣರು ಜೊತೆಗೆ ಬಸವಣ್ಣನೂ ಸೇರಿ ಆತ್ಮಾಹುತಿಗೊಂಡರು; ಮಿತ್ರನೊಬ್ಬನ ಮಹತ್ವಾಕಾಂಕ್ಷೆ ಈಡೇರದೆ ಅಲ್ಲಮನೂ ಕೂಡ ಬಯಲಾದ ಎಂಬುದನ್ನು ಸೂಚಿಸುತ್ತದೆ ಎಂದು ಬರೆಯುತ್ತಾರೆ...!!
ಲೇಖಕರು ಈ ವಚನವನ್ನು ಈ ರೀತಿ ಅರ್ಥೈಸುವುದು ಅವರ ಪೂರ್ವಾಗ್ರಹವೋ ಅಥವಾ ಪಂಥೋದ್ದೇಶವೋ ತಿಳಿಯುವುದಿಲ್ಲ.
ಶರಣರ ವಚನಗಳು ಅದರಲ್ಲೂ ಅಲ್ಲಮರ ವಚನಗಳು ಇಷ್ಟು ಸುಲಭಕ್ಕೆ ಹೀಗೇ ಮನಬಂದಂತೆ ಅರ್ಥೈಸುವಿಕೆಗೆ ದಕ್ಕುವಂತಿದ್ದರೆ ವಿಶ್ವಮಾನ್ಯವಾದ ವಚನ ಸಂಪತ್ತು ಇಲ್ಲಿಯವರೆಗೆ ಉಳಿಯುತಿತ್ತೆ ಮತ್ತು ವಿಚಾರವಂತರೆಲ್ಲರ ಮಂಥನಕ್ಕೆ ಇಂಬಾಗುತ್ತಿದ್ದವೆ...?
ಅಥವಾ ಅಲ್ಲಮನ ವಚನ ಇಷ್ಟು ಸಸಾರವೇ..!?
ಇಲ್ಲಿ ಕೋಣನ ಕೊಂಬು ಎಂದರೆ, ಬಸವಣ್ಣನವರ ಮಹತ್ವಾಕಾಂಕ್ಷೆ ಎಂದಿದ್ದಾರೆ ಲೇಖಕರು...!? ಜೊತೆಗೆ ಜರ್ಮನಿಯ ಹಿಟ್ಲರ್ ನನ್ನೂ ಸೇರಿ ಜಗತ್ತಿನ ಮಹತ್ವಾಕಾಂಕ್ಷಿಗಳ ಉದ್ದ ಪಟ್ಟಿಯನ್ನು ಕೊಟ್ಟು ಅವರೆಲ್ಲರೂ ಮಹತ್ವಾಕಾಂಕ್ಷೆ ಈಡೇರದೆ ಆತ್ಮಹತ್ಯೆ ಮಾಡಿಕೊಂಡವರೆಂದೂ ಅವರೊಟ್ಟಿಗೆ ಬಸವಣ್ಣನವರನ್ನೂ ಸೇರಿಸುತ್ತಾರೆ.
ಜೊತೆಗೆ "ಶರಣರ ಸಾವನ್ನು ಮರಣದಲ್ಲಿ ಕಾಣು" ಎಂಬ ಉಕ್ತಿಯನ್ನೂ ಸೇರಿಸುತ್ತಾರೆ. ಇದೆಂತಹ ವೈರುದ್ಧ್ಯ..? ಮಹತ್ವಾಕಾಂಕ್ಷೆ ಎಂಬ ಪದ ಕೇವಲ ವೈಯಕ್ತಿಕ ಸಾಧನೆಯನ್ನು ಅರ್ಥೈಸುವ ಪದವಾಗಿದ್ದು, ತನ್ನ ಸುತ್ತಲಿನ ಸಮಾಜದ ಸರ್ವತೋಮುಖ ಔನ್ನತ್ಯವನ್ನು ಬಯಸಿ ಅದಕ್ಕಾಗಿ ತನ್ನನ್ನು ಅರ್ಪಿಸಿಕೊಂಡ ಬಸವಣ್ಣನಿಗೆ ಈ ಮಾತನ್ನು ಹೇಳಬಹುದೆ..? ಹಾಗಾದರೆ, ಬಸವಣ್ಣನವರ ಅಥವಾ ಬೇರೆ ಯಾವ ಶರಣರ ವಚನಗಳಲ್ಲಿ ಮಹತ್ವಾಕಾಂಕ್ಷೆಯನ್ನು ಕಂಡಿದ್ದಾರೆ...? ಸ್ವಾರ್ಥದ ಲಾಲಸೆಗಳಿಗಾಗಿ ಮನುಕುಲವನ್ನು ಹುಳಗಳಂತೆ ಕೊಲ್ಲಿಸಿದ ಮನುಷ್ಯತ್ವವೇ ಇಲ್ಲದ ದುರಾಸೆಯವರೊಂದಿಗೆ ಬಸವಣ್ಣನವರನ್ನು ಹೋಲಿಸಬಹುದಾ...!?
ಅಲ್ಲಮರು ಬಸವಣ್ಣನ ಬಗ್ಗೆ ಹೀಗೆ ಭ್ರಮನಿರಸನಗೊಳ್ಳುವಂತ ಸಂಬಂಧ ಅವರಿಬ್ಬರದ್ದಾಗಿದ್ದರೆ.....
"ಭೂಮಿಯಲ್ಲಿ ಹುಟ್ಟಿ ಅಂತರಂಗದಲ್ಲಿ ಬೆಳೆದ ಫಲವೃಕ್ಷದಂತೆ
ಸರ್ವರಿಗೆ ಭೂತಹಿತವಾಗಿ ಫಲರಸವನೀವಂತೆ
ನೀ ಭೂಮಿಯಾಗಿ ನಾ ಸಸಿಯಾಗಿ ಬೆಳೆದ ಬೆಂಬಳಿಯಲ್ಲಿ
ಗುಹೇಶ್ವರಲಿಂಗವೆಂಬುದು ಫಲವಾಯಿತ್ತು
ಅರಿದ ಅರಿಕೆ ರಸವಾಯಿತ್ತು
ಸಂಗನ ಬಸವಣ್ಣನಿಂದ ಎನ್ನಂಗ ಬಯಲಾಯಿತ್ತು.
ಎಂಬ ವಚನವನ್ನು ಅಲ್ಲಮರು ಏಕೆ ಬರೆಯುತ್ತಿದ್ದರು...?
ಏಳುನೂರೆಪ್ಪತ್ತು ಎಂಬ ಪದವನ್ನಿಡಿದು, ಅದು ಕಲ್ಯಾಣದ ಅಮರಗಣಂಗಳ ಸೂಚಕ ಎನ್ನುವುದಾದರೆ, ಆ "ಏಳುನೂರೆಪ್ಪತ್ತು" ಎಂಬ ಪದವನ್ನು ಅಕ್ಕನೂ, ಚೆನ್ನಬಸವಣ್ಣನೂ, ಮತ್ತಿತರೆ ಶರಣರೂ ತಮ್ಮ ವಚನಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬಳಸಿದ್ದಾರೆ. ಬಸವಣ್ಣನವರೂ ಕೂಡ ತಮ್ಮ ಒಂದು ವಚನದಲ್ಲಿ "ಕಲ್ಯಾಣ"ದ ಅಳತೆಯನ್ನು ತಿಳಿಸುವಾಗಲೂ ಇದೇ ಪದವನ್ನು ಬಳಸಿದ್ದಾರೆ.
"ಅಂಗುಲ ಹನ್ನೆರಡು ಕೂಡಲು ಒಂದು ಗೇಣು,
ಗೇಣು ಎರಡು ಕೂಡಲು ಒಂದು ಮೊಳ,
ಮೊಳವೆರಡು ಕೂಡಲು ಒಂದು ಹಸ್ತ,
ಹಸ್ತವೆರಡು ಕೂಡಲು ಒಂದು ಮಾರು,
ಮಾರೆರಡು ಕೂಡಲು ಒಂದು ಜಂಘೆ,
ಜಂಘೆ "ಏಳುನೂರೆಪ್ಪತ್ತು" ಕೂಡಲು ಒಂದು ಪಾದಚ್ಚಯ,
ಪಾದಚ್ಚಯವೆರಡು ಸಾವಿರದೆಂಟುನೂರು ಕೂಡಲು ಒಂದು ಕೂಗಳತೆ,
ಕೂಗಳತೆ ನಾಲ್ಕು ಕೂಡಲು ಒಂದು ಹರದಾರಿ,
ಹರದಾರಿ ನಾಲ್ಕು ಕೂಡಲು ಒಂದು ಯೋಜನ,
ಅಂಥ ಯೋಜನ ನಾಲ್ಕು ಚೌಕಕ್ಕೂ ಹನ್ನೆರಡು ಹನ್ನೆರಡು ಕೂಡಲು,
ಬಳಸಿ ನಾಲ್ವತ್ತೆಂಟು ಯೋಜನ ಪ್ರಮಾಣಿನ ಕಟ್ಟಳೆಯಾಯಿತ್ತು.
ಇಂತಪ್ಪ ಕಟ್ಟಳೆಯಾಗಿದ್ದ ಕಲ್ಯಾಣದೊಳಗಿರುವ ಗಣಂಗಳೆಲ್ಲರನೂ ಕೂಡಲಸಂಗಯ್ಯಾ
ನಿಮ್ಮೊಳು ಕಂಡು ಸುಖಿಯಾಗಿರ್ದೆನು.
ಎನ್ನುತ್ತಾರೆ.
ಇಲ್ಲಿ ಗಮನಿಸಬೇಕು "ಕಲ್ಯಾಣದೊಳಗಿರುವ ಗಣಂಗಳೆಲ್ಲರೂ" ಅನ್ನುತ್ತಾರೆ ಹೊರತು ಸಂಖ್ಯೆಯನ್ನು ಉಲ್ಲೇಖಿಸುವುದಿಲ್ಲ.
ಹಾಗಾಗಿ "ಏಳುನೂರೆಪ್ಪತ್ತು" ಎಂಬ ಸಂಖ್ಯೆಯ ಬಳಕೆಯನ್ನು ನಾವು ಹೀಗೆ ಅರ್ಥೈಸಲಾಗುವುದಿಲ್ಲ.
"ಕೋಣನ ಕೊಂಬು"ವಚನದ ಅರ್ಥವನ್ನು ಸಿದ್ದೇಶ್ವರ ಸ್ವಾಮೀಜಿಯವರು ಮತ್ತು ವೀಣಾ ಬನ್ನಂಜೆಯವರು ಸರಿಯಾಗಿ ಬಿಡಿಸಿದ್ದಾರೆ ಆಸಕ್ತರು ಗಮನಿಸಬಹುದು.
$$$
ಸೃಜನಶೀಲ ಸಾಹಿತ್ಯ ನನ್ನದಲ್ಲ. ಈ interpretation ಸೃಜನಶೀಲ ಹೇಗೋ ಹಾಗೆಯೇ ವಚನಗಳಲ್ಲಿ ಸತ್ಯವನ್ನು ಹುಡುಕುವುದು ನನ್ನ ಕೆಲಸ ಎಂದಷ್ಟೇ ಹೇಳುವೆ. ಈ ಮೊದಲೇ ಹೇಳಿದಂತೆ ವಚನಗಳ ವಿಶ್ಲೇಷಣೆ ಮತ್ತು ನಿರ್ವಚನವನ್ನು ಹೇಗೆ ಬೇಕಿದ್ದರೂ ಹಿಂಜಬಹುದು. ಆದರೆ ಆ ಹಿಂಜುವಿಕೆಗೆ ತಕ್ಕ ತಾರ್ಕಿಕ ಐತಿಹಾಸಿಕ, ಸಾಮಾಜಿಕ, ರಾಜಕೀಯಾತ್ಮಕ ಸಾಕ್ಷಿಯನ್ನು ಒದಗಿಸಬೇಕು. ಅಂತಹ ಸಾಕ್ಷ್ಯವನ್ನು ನಾನು ಕೊಟ್ಟಿದ್ದೇನೆ.
---
೪)ವೀರಶೈವ ಲಿಂಗಾಯತ ಪಂಥದಲ್ಲಿ ಮಹಿಳೆ ಎಂಬ ಅಧ್ಯಾಯವನ್ನು ಬರೆಯುತ್ತಾ, ಶಿವಶರಣೆಯರ ಒಟ್ಟು ೧೩೫೧ ವಚನಗಳಿದ್ದು,
ಬಸವಣ್ಣನವರ ಪತ್ನಿ ನೀಲಾಂಬಿಕೆಯವೇ ಒಟ್ಟು ೨೮೮ ವಚನಗಳಿವೆ.
ಆದರೆ ಅದೇಕೋ ಲೇಖಕರು ನೀಲಮ್ಮನ ಮೂರ್ನಾಲ್ಕು ವಚನಗಳನ್ನು ಹಿಡಿದು ಬಸವಣ್ಣನವರ ವೈಯಕ್ತಿಕ ವಿಷಯಗಳನ್ನು ಒರೆಹಚ್ಚಲು ಹೋದಂತೆ ಈ ವಚನವನ್ನು ಉಲ್ಲೇಖಿಸುತ್ತಾರೆ.
ಕಾಮದ ಹಂಗಿಗನಲ್ಲ ಶರಣ
ಮೋಹದ ಇಚ್ಚೆಯವನಲ್ಲ ಶರಣ
ಉಭಯದ ಸಂಗದವನಲ್ಲ ಶರಣ
ಪ್ರಾಣದ ಕುರುಹಿಲ್ಲದ ಶರಣಂಗೆ ಪ್ರಸಾದದ ನೆಲೆಯಿಲ್ಲವಯ್ಯಾ
ಎನಗೇನೂ ತಲೆದೋರದೆ ಮುಸುಕಿಟ್ಟು ಬಸವಳಿದೆನಯ್ಯಾ ಸಂಗಯ್ಯಾ ನಿಮ್ಮಲ್ಲಿ.
ಈ ವಚನದಲ್ಲಿ ಪತಿಯ ಮಿಲನಕ್ಕೆ ಕಾದು ಕಂಗೆಟ್ಟ
ಪತ್ನಿಯ ವಿರಹವನ್ನು ಮತ್ತು ತನ್ನಿಚ್ಚೆಗೆ ಸ್ಪಂದಿಸದ ಪತಿಯನ್ನು ಪ್ರಾಣದ ಕುರಹಿಲ್ಲದವ ಎನ್ನುತ್ತಾ ತಾನು ಮುಸುಕಿಟ್ಟು ಬಸವಳಿದೆ ಎನ್ನುತ್ತಾಳೆ ಎಂದಿದ್ದಾರೆ.
ಮತ್ತು ಇಂಥವೇ ವಚನಗಳನ್ನು ಆಯ್ದು ಉಲ್ಲೇಖಿಸುವ ಔಚಿತ್ಯ ಏನಿತ್ತೋ ತಿಳಿಯುವುದಿಲ್ಲ.
ಆದರೆ
ಇಬ್ಬರು ನಾವು ಒಂದೆಡೆಯನುಂಡೆವು.
ಉಂಬ ಊಟದಲಿ ತೃಪ್ತಿಯ ತಳದು
ತನು ಸೋಜಿಗವಾಯಿತ್ತಯ್ಯಾ.
ಮನ ಮಗ್ನವನೈದಿ ಮಹಾಲಿಂಗದತ್ತ
ಶುದ್ಧಿ ನಿಃಶುದ್ಧಿಯಾಯಿತ್ತಯ್ಯ.
ಅಡಗಿದೆನಡಗಿದೆನತ್ತತ್ತಲೆ ನಾನು
ಉಡುಗಿದೆನೀ ಕಾಯವ.
ಉಭಯದ ಸಂಗವ ಹರಿದು
ಉಲುಹಡಗಿದ ವೃಕ್ಷವಾದೆನಯ್ಯ ಸಂಗಯ್ಯ.
ಇರುವ ಇಂತಹ ನೂರು ವಚನಗಳನ್ನು ಏಕೆ ಇಲ್ಲಿ ಹೆಸರಿಸುವುದಿಲ್ಲ...!?
ಹೀಗೆಯೇ ಬಸವಣ್ಣನವರ ಮತ್ತೊಬ್ಬ ಸತಿ ಗಂಗಾಂಬಿಕೆಯ ಎರಡು ವಚನಗಳನ್ನು, ಹಾಗೂ ಅಕ್ಕ ಮಹಾದೇವಿ, ಸತ್ಯಕ್ಕ, ಗೊಗ್ಗವ್ವೆ, ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವೆಯರ ಒಂದೊಂದು ವಚನಗಳನ್ನು ಆಯ್ಕೆ ಮಾಡಿಕೊಂಡರೂ ಬರೀ ಹೆಣ್ಣು ಗಂಡಿನ ಸಂಬಂಧಗಳ ಅರ್ಥವನ್ನು ತೋರಿಸುವಂಥವೇ ಹೊರತು ಸಾಮಾಜಿಕವಾಗಿ ಅವರ ಸ್ವತಂತ್ರ ಮನೋಭಾವವನ್ನೂ, ಕಲ್ಯಾಣದಲ್ಲಿ ತಾವುಗಳು ಕಂಡುಂಡ ಸ್ವಾನುಭವದ ಅಪೂರ್ವತೆಯನ್ನು ಬಿಂಬಿಸುವ ಮತ್ತು ಇಂದಿಗೂ ಯಾವ ವಿಶ್ವವಿದ್ಯಾಲಯದಲ್ಲೂ ಸಾಧ್ಯವಿಲ್ಲದ ಆದರೆ ಬಸವಣ್ಣ ಆ ಕಾಲದಲ್ಲಿಯೇ ಸಾಧಿಸಿದ ನೂರಾರು ಜನ ಸ್ತ್ರೀಯರಿಗೆ, ತಮ್ಮ ಅನುಭಾವಗಳನ್ನು ಯಾವ ಸಂಕೋಚ ಸಂದಿಗ್ಧ ಇಲ್ಲದಂತೆ ವಚನಗಳ ಮೂಲಕ ಅಭಿವ್ಯಕ್ತಿಸಲು ನೀಡಿದ್ದ ಸಾಮರ್ಥ್ಯವನ್ನೂ ಅವಕಾಶವನ್ನೂ ಬಳಸಿಕೊಂಡು ಆ ನಿಟ್ಟಿನಲ್ಲಿ ರಚನೆಯಾದ ಯಾವ ಒಂದು ವಚನವನ್ನೂ ಇಲ್ಲಿ ಲೇಖಕರು ಉಲ್ಲೇಖಿಸದೆಯೇ ಅಧ್ಯಾಯವನ್ನು ಮುಗಿಸುತ್ತಾರೆ. ಅದೇಕೆಂದು ಲೇಖಕರೇ ಹೇಳಬೇಕು.
$$$
ಉಳಿದೆಲ್ಲಾ ವಚನಗಳು ಸಾಮಾನ್ಯವಾಗಿದ್ದು, ನನ್ನ ಸಂಶೋಧನೆಗೆ ಅಗತ್ಯವಿರುವ ಶರಣರ ವೈಯಕ್ತಿಕ ನೆಲೆಯನ್ನು ತೋರುವ ವಚನಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಉಳಿದ ಸಾಮಾಜಿಕ ವಚನಗಳ ಕುರಿತಾದ ಪುಸ್ತಕ ಬಸವರಾಜಕಾರಣವಲ್ಲ. ಅದಕ್ಕೆ ವಚನಾಮೃತ, ವಚನಾಭಕ್ತಿಸಾರ, ಇತ್ಯಾದಿ ಸಾಕಷ್ಟು ಕೃತಿಗಳಿವೆ.
---
೫) ಬಸವಣ್ಣನವರ,
"ಅಂತರಂಗ ಬಹಿರಂಗ" ಶುದ್ದಿಯ ಪ್ರಸಿದ್ಧ ವಚನವನ್ನು ಉಲ್ಲೇಖಿಸುತ್ತಾರೆ. ಆದರೆ ಬಸವಣ್ಣ ತನ್ನ ವಚನದಲ್ಲಿ ತಾನೇ ಹೇಳಿದಂತೆ ತಾನೇ ನಡೆದುಕೊಳ್ಳಲಿಲ್ಲ ಎಂದು ಆರೋಪಿಸುತ್ತಾ, ಮುನಿಯುವುದು ಸ್ವಪಂಥ ಬಣ್ಣನೆ, ಪರಪಂಥ ಅವಹೇಳನಗಳನ್ನು ತನ್ನ ವಚನಗಳಲ್ಲೇ ಹಾಡಿ ತಾನು ಕೇವಲ ಮತ್ತು ಕೇವಲ ಸಹಜ ಮನುಷ್ಯ ಎಂದು ತನ್ನಂತರಂಗವನ್ನು ಬಹಿರಂಗಗೊಳಿಸಿದ್ದಾನೆ ಎಂದು ಹೇಳುತ್ತಾರೆ.
ಒಂದು "ಸಾರ್ವತ್ರಿಕವಾದ ಸಾಮಾಜಿಕ ಸಂಘಟನೆಯ ಕಾರ್ಯ" ಎಂದರೆ ಏನು ಮತ್ತು "ತನ್ನ" ಎಂಬ "ವೈಯಕ್ತಿಕ ನಡೆವಳಿಕೆ" ಎಂದರೆ ಏನು ಎಂಬುದರ ಸಾಮಾನ್ಯ ತಿಳುವಳಿಕೆಯ ಬಗ್ಗೆ ಲೇಖಕರು ಯೋಚಿಸುವುದೇ ಇಲ್ಲವೇನೋ ಎನಿಸುತ್ತದೆ.
ಈ ರೀತಿಯ ಸೂಕ್ಷ್ಮ ಮತ್ತು ವಾಸ್ತವದ ಸತ್ಯವನ್ನು ಅರಿಯುವಲ್ಲಿ ಇಂದಿನ ಮಹಾಶಿಕ್ಷಿತ ವರ್ಗದವರೆಲ್ಲರೂ ತೋರುತ್ತಿರುವುದು ಅಸಡ್ಡೆಯ ಪರಮಾವದಿಯಾಗಿದ್ದು, ಹನ್ನೆರಡನೇ ಶತಮಾನದ ಬಸವಣ್ಣನನ್ನು ಅರಿಯುವುದಿರಲಿ, ಈ ಶತಮಾನದ "ಮಹಾತ್ಮ ಗಾಂಧಿಯವರ" ಬಗ್ಗೆಯೇ ನಾವು ಇರುವ ಸತ್ಯವನ್ನು ನಂಬಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಅದು ಅಷ್ಟು ಸುಲಭದ ನಡೆಯಲ್ಲ.
ಆಲಸ್ಯದ, ಲಾಲಸೆಯ, ಕ್ಷಣಿಕದ ಮೋಜಿನ ಬದುಕಿಗೆ ದಾಸರಾದ ನಮ್ಮಂಥವರು ಗಾಂಧಿಯವರ ಹಾಗೂ ಬಸವಣ್ಣನವರ ಬದುಕನ್ನು ಬರೀ ಊಹೆ ಮಾಡಿಕೊಳ್ಳಲು ಸಹ ಸೋಲುತ್ತಿದ್ದೇವೆ. ಹಾಗಾಗಿಯೇ ಬಸವಣ್ಣ ಹನ್ನೆರಡನೇ ಶತಮಾನದಿಂದಲೂ ಇದ್ದಾರೆ. ಮತ್ತು ಗಾಂಧಿಯವರು ಈ ಭೂಮಿಯಲ್ಲಿ ತಾಯಿತನ ಇರುವವರೆಗೂ ಇರುತ್ತಾರೆ. ನಮ್ಮಂಥವರು ಮಾತ್ರ ಅವರೂ ಕೂಡ ನಮ್ಮಂತೆಯೇ ಸಾಮಾನ್ಯರೆಂದು ಕೋಟಿ ಕೋಟಿ ಜನ ಹ(ಅ)ಳಿಯುತ್ತೇವೆ ಅಷ್ಟೇ.
ಈ ಮಾತನ್ನು ಇಲ್ಲಿ ಹೇಳುವ ಪ್ರಮೇಯಕ್ಕೆ ಕೂಡ ಈ ಲೇಖಕರೇ ಕಾರಣ.
ಲೇಖಕರು ಅದೇಕೋ ಅನೇಕ ಕಡೆಗಳಲ್ಲಿ ಬಸವಣ್ಣನನ್ನು ಅಪವಾದಗಳಿಗೆ ಸಿಲುಕಿಸುವ ಬರದಲ್ಲಿ ಪುರಾಣದ ಕತೆಗಳನ್ನೇ ಮತ್ತೆ ಮತ್ತೆ ಹೇಳಿ ಹಗುರಾಗುತ್ತಾರೆ.
ಉದಾಹರಣೆಗೆ, ಬಸವ ಪುರಾಣ, ಚೆನ್ನಬಸವ ಪುರಾಣ, ಬಿಜ್ಜಳರಾಯಚರಿತಗಳಲ್ಲಿ ಬಸವಣ್ಣನು, ಮತಪ್ರಚಾರಕ್ಕಾಗಿ ಜಂಗಮರಿಗೆ ಸಾಕಷ್ಟು ಹಣವನ್ನು ಚೆಲ್ಲಿ ಕೋಶವನ್ನು ಖಾಲಿ ಮಾಡಿದ್ದನು ಎಂದಿದೆ ಎಂದು ಹೇಳುತ್ತಾರೆ. ಮತ್ತು ಈ ಹಿನ್ನೆಲೆಯಲ್ಲಿ "ಮತಪ್ರಚಾರಕ್ಕಾಗಿ ಕೋಶ" ಎಂಬ ಇಂದಿನ ಪ್ರಜಾಪ್ರಭುತ್ವದ ಬುನಾದಿಯ ಅಳವಡಿಕೆಯು ಸಹ ಪ್ರಪಂಚದ ಪ್ರಥಮ ಸಂಸತ್ತಿನಲ್ಲೇ ಕಂಡುಕೊಂಡ ನಿಯಮವಿರಬಹುದೇ ಎಂಬ ಕುಚೋದ್ಯದ ಸುಳಿವು ಮನದಲ್ಲಿ ಸುಳಿದರೆ ತಪ್ಪಲ್ಲ ಎನ್ನುತ್ತಾರೆ;
ಇದು ಕುಚೋದ್ಯದ ಸುಳಿವಲ್ಲ. ನಿಜವಾಗಿಯೂ ಲೇಖಕರ ಕುಚೋದ್ಯವೇ ಹೌದು.
ಸತ್ಯವನ್ನು ತೋರಿಸಲು ಸಂಶೋಧನಾತ್ಮಕವಾಗಿ ಈ ಲೇಖಕರು ಕರೆದುಕೊಂಡು ಹೋಗುವ ಪರಿ ಇದು...!!
$$$
ಇದು ತಮ್ಮ ಅಭಿಪ್ರಾಯ. ಈ ಅಧ್ಯಾಯದಲ್ಲಿ ಉಲ್ಲೇಖಿಸಿರುವ ವಚನಗಳು ನೇರವಾಗಿ ಪಂಥ ದ್ವೇಷವನ್ನು ಕಾರಿವೆ. ಇತಿಹಾಸ ಇದಕ್ಕೆ ಸಾಕ್ಷಿ ಪುರಾವೆ ನೀಡಿದೆ. ಈ ಪುರಾವೆಗಳನ್ನು ಮೀರಿ ವ್ಯಕ್ತಿಯನ್ನು ದೇವನಾಗಿಸುವುದು ನನ್ನ ಸಂಶೋಧನೆಯಲ್ಲ.
ಧನ್ಯವಾದಗಳು.
---
ಪ್ರತ್ಯಕ್ಷವಾಗಿ ಸಾವಿರಾರು ಸಂಖ್ಯೆಯಲ್ಲಿ ಇರುವ ವಚನಗಳನ್ನೇ ಇನ್ನೂ ನಮಗೆ ಅರ್ಥ ಮಾಡಿಕೊಳ್ಳಲು ಆಗಿಲ್ಲ. ಹೀಗಿರುವಾಗ ಸತ್ಯದ ಅರಿವಾಗುವುದು ಹೇಗೆ..?
ಅದಕ್ಕೆ ಮಹಾದೇವಿಯಕ್ಕ ಒಂದು ವಚನದಲ್ಲಿ,
"ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು ?
ಹೊಗಬಾರದು, ಅಸಾಧ್ಯವಯ್ಯಾ.
ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು.
ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು.
ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು.
ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ
ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನ್ನುತ್ತಿರ್ದೆನು.
ಎಂದು ವಿರಾಗಿಣಿ ಅಕ್ಕ ಸುಮ್ಮನೇ ಹೇಳುತ್ತಾಳಾ...?
$$$
ಈ ವಚನದಲ್ಲಿ ಯಾವ ಗೂಢಾರ್ಥವಿದೆಯೋ ಗೊತ್ತಿಲ್ಲ. ಕಲ್ಯಾಣ ಒಂದು ಸಾಮ್ರಾಜ್ಯ, ಅದರ ಇತಿಹಾಸದ ಹೊಳಹು ಮಾತ್ರ ನನಗೆ ಈ ವಚನದಲ್ಲಿ ಕಾಣುತ್ತಿದೆ. ಕಲ್ಯಾಣವೆಂಬುದು ಕಲ್ಪಿತ ಕೈಲಾಸವಾಗಿ ಬಸವ ಭಕ್ತಿಲೋಲುಪ್ತತೆ ಸಹ ಇಲ್ಲಿ ಕಾಣುತ್ತದೆ. ಅವರವರ ಭಾವಕ್ಕೆ ಭಕುತಿಗೆ.
------
ವೈಯಕ್ತಿಕವಾಗಿ ರವಿ ಹಂಜ್ ಸರ್ ರವರ, ಅಪಾರ ಅಧ್ಯಯನದ ಬಗ್ಗೆ ಗೌರವವಿದೆ.
ನೂರಾರು ದಾಖಲೆಗಳಿಂದ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಸಾಧಿಸುವ ಪ್ರಯತ್ನದ ಬಗ್ಗೆ ಆಸ್ಥೆಯಿದೆ. ಇಂತಹ ವಿಷಯಗಳನ್ನೇ ರಾಜಕೀಯ ದಾಳವಾಗಿಸಿಕೊಳ್ಳುವ ಹೀನರನ್ನು ಖಂಡತುಂಡವಾಗಿ ಖಂಡಿಸಿದ್ದಾರೆ ಎಂಬುದು ತುಂಬಾ ಸಂತೋಷ.
ಹಾಗೆಯೇ ಈ ಕೃತಿಯ ಮೊದಲು ಮತ್ತು ಕೊನೆಯ ಅಧ್ಯಾಯಗಳಲ್ಲಿ ಎತ್ತಿರುವ ಐತಿಹಾಸಿಕ ಸಂಶೋಧನಾತ್ಮಕ ವಿಚಾರಗಳ ಬಗ್ಗೆ ಕುತೂಹಲವೂ ಮತ್ತು ಗೌರವವೂ ಇದೆ.
$$$
ತಮ್ಮ ಗೌರವದ ಅಭಿಪ್ರಾಯಕ್ಕೆ ಧನ್ಯವಾದಗಳು.
---
ಕೊನೆಯದಾಗಿ...
ನಮ್ಮ ಓದು, ಚಿಂತನೆಗಳು, ಸಂಶೋಧನೆಗಳು, ಬರೆಹಗಳನ್ನು ಹೇಳುವಾಗ ಬಹಳ ಎಚ್ಚರಿಕೆಯ ಅಗತ್ಯವಿದೆ. ಮುಂದಿನ ಪೀಳಿಗೆಯವರಿಗೆ, ಘನ ವ್ಯಕ್ತಿತ್ವಗಳ ಬಗ್ಗೆ ಹಗೂರತೆಯನ್ನು ನಾವೇ ಸೃಷ್ಟಿಸಿಕೊಟ್ಟಂತಾಗುತ್ತದೆ ಎಂಬ ಅರಿವನ್ನು ನಮ್ಮ ಓದು ಚಿಂತನೆಗಳು ನಮಗೆ ತಿಳಿಸದಿದ್ದರೆ ಈ ಅಧ್ಯಯನ, ಸಂಶೋಧನೆಗಳ ಔಚಿತ್ಯವಾದರೂ ಏನು..? ಎಂಬುದು ನನ್ನ ಪ್ರಶ್ನೆಯಾಗಿದೆ. ಆ ನಿಟ್ಟಿನಲ್ಲಿ ಇಷ್ಟು ಬರೆಯಬೇಕೆನಿಸಿತು.
$$$
Let's separate the hype from reality ಎಂಬ ಸದುದ್ದೇಶದಿಂದಲೇ ಪ್ರತಿಯೊಂದಕ್ಕೂ ದಾಖಲೆ ಕೊಟ್ಟು ಬರೆದಿದ್ದೇನೆ, ಮುಂದಿನ ಪೀಳಿಗೆಗಾಗಿ!
ಇನ್ನು ನಾನೊಬ್ಬ ಕೇವಲ ಕುತೂಹಲಿ ಮಾತ್ರ. ಸಾಕ್ಷಿ ಪುರಾವೆಗಳು ಕೊಟ್ಟರೆ, ಸಿಕ್ಕರೆ ಸಂಶೋಧನೆಗಳು ನವೀಕೃತಗೊಳ್ಳುತ್ತ ಸಂಕಥನಗಳನ್ನು ಗಟ್ಟಿಗೊಳಿಸುತ್ತವೆ. ಅಂತಹ ಗಟ್ಟಿಗೊಳಿಸುವ ಪ್ರಕ್ರಿಯೆಯೇ ಬಸವರಾಜಕಾರಣ, ರಾಜಕಾರಣವಲ್ಲ.
ಸತ್ಯಮೇವ ಜಯತೆ.
---
ಓದಿ ಓದಿ ವೇದ ವಾದಕ್ಕಿಕ್ಕಿತ್ತು.
ಕೇಳಿ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು.
ಅರಿದಿಹೆ ಅರಿದಿಹೆನೆಂದು ಆಗಮ ಅರೆಯಾಗಿ ಹೋಯಿತ್ತು.
ಪೂರೈಸಿಹೆ ಪೂರೈಸಿಹೆನೆಂದು
ಪುರಾಣ ಪೂರ್ವದ ಬಟ್ಟೆಗೆ ಹೋಯಿತ್ತು.
ನಾನೆತ್ತ ತಾನೆತ್ತ ?
ಬೊಮ್ಮ ಬಟ್ಟಬಯಲು ಚೆನ್ನಮಲ್ಲಿಕಾರ್ಜುನ.
$$$
ಸತ್ಯವಾಗಿಯೂ ಒಪ್ಪುವ ಮಾತು.
ಇಲ್ಲಿರುವ ಪುರಾವೆಗಳಿಗೆ ಪ್ರತಿಪುರಾವೆಗಳು ಸಿಕ್ಕಿ ಬಸವ ಸಂಕಥನ ಗಟ್ಟಿಗೊಳ್ಳುತ್ತ ಮುಂದಿನ ಪೀಳಿಗೆ ಗಟ್ಟಿನೆಲೆಯ ಇತಿಹಾಸದ ಮೇಲೆ ಭವಿಷ್ಯವನ್ನು ಕಟ್ಟಿಕೊಳ್ಳಲಿ ಎಂದು ಹಾರೈಸುವ ಸತ್ಯಕಾರಣ, ಬಸವರಾಜಕಾರಣ!
---
ಬಸವರಾಜಕಾರಣ - ಅರವಿಂದ ಚೊಕ್ಕಾಡಿ ಅಭಿಪ್ರಾಯ
ನಾಡಿನ ಖ್ಯಾತ ಚಿಂತಕರಾದ ಅರವಿಂದ ಚೊಕ್ಕಾಡಿಯವರು ನನ್ನ ಬಸವರಾಜಕಾರಣ ಕುರಿತು ಹೀಗೆ ಹೇಳುತ್ತಾರೆ:
ರವಿ ಹಂಜ್ ಅವರ ' ಬಸವ ರಾಜಕಾರಣ' ಕೃತಿಯ ಅಗಾಧವಾದ ವಿವರ ಮತ್ತು ಜಿಜ್ಞಾಸೆಗಳ ಭಾಗಕ್ಕೆ ನಾನು ಹೋಗುವುದಿಲ್ಲ. ಅದಕ್ಕೆ ಪುಸ್ತಕವನ್ನೆ ಓದುವುದು ಸೂಕ್ತ. ಆದರೆ ವರ್ತಮಾನದಲ್ಲಿ ಈ ಕೃತಿಗೆ ಇರುವ ಮಹತ್ವವನ್ನು ಇಲ್ಲಿ ಹೇಳಲು ಬಯಸುತ್ತೇನೆ. ಬಹುಶಃ ಇದು ಹೊಸ ತಲೆಮಾರಿನ ಲೇಖಕರು ನ್ಯಾಯ ಪಕ್ಷಪಾತಿಯಾದ ನಿಲುವನ್ನು ಮುಂಬರುವ ದಿನಗಳಲ್ಲಿ ತೆಗೆದುಕೊಳ್ಳಲು ಪ್ರೇರಕವಾಗುವ ಕೃತಿಯೂ ಆಗಿದೆ.
ಭಾರತದ ಸಂಶೋಧನಾ ಪದ್ಧತಿಯ ಮುಖ್ಯವಾಹಿನಿ ಇಂದಿಗೂ ವಸಾಹತುಶಾಹಿ ಸಂಕಥನವನ್ನು ಆಧರಿಸಿದೆ. ಇಲ್ಲಿ ಬರುವ ತೌಲನಿಕ ಅಧ್ಯಯನಗಳ ಹಿಂದೆ 'ಭಂಜನೆ' ಯ ಗುಣವಿದೆ. ವಚನ ಸಾಹಿತ್ಯದ ಕುರಿತ ಅಧ್ಯಯನವಾದಾಗ ಹಿಂದೂ ಧರ್ಮ ಯಾಕೆ ಕೆಟ್ಟದು ಎಂದು ಹೇಳುವುದು ಸಂಶೋಧನೆಯ ಉದ್ದೇಶವಾಗಿರುತ್ತದೆ. ಗಾಂಧಿ-ಅಂಬೇಡ್ಕರ್ ತೌಲನಿಕ ಅಧ್ಯಯನವಾದಾಗ ಗಾಂಧಿ ಯಾಕೆ ಅಮುಖ್ಯ ಎಂದು ಹೇಳುವುದು ಉದ್ದೇಶವಾಗಿರುತ್ತದೆ. ಯಾವುದೆ ಸಾಂಸ್ಕೃತಿಕ ಅಧ್ಯಯನವೂ ಕೂಡ ಹಿಂದೂ ಧರ್ಮವನ್ನು ವಿಲನ್ ಆಗಿ ನಿಲ್ಲಿಸಿಕೊಂಡು ತುಲನೆಗೊಳಗಾಗುವ ಇನ್ನೊಂದನ್ನು ಹೀರೋ ಆಗಿ ರೂಪಿಸುತ್ತಾ ಹೋಗುವುದು ಭಾರತದ ಸಂಶೋಧನೆಗಳ ಸಹಜ ವಿನ್ಯಾಸವಾಗಿದೆ. ಈ ವಿನ್ಯಾಸವನ್ನು ರೂಪಿಸಿದ್ದು ವಸಾಹತುಶಾಹಿ ಆಡಳಿತವಾಗಿದೆ.
ರವಿ ಹಂಜ್ ಈ ಸಂಶೋಧನಾ ವಿನ್ಯಾಸವನ್ನು ಒಡೆಯುತ್ತಾರೆ. ಸಂಶೋಧನೆಯನ್ನು ತೆರೆದ ಮನಸ್ಸಿನಿಂದ ಇಟ್ಟಿದ್ದಾರೆ. ಒಮ್ಮೆ ಅದ್ವೈತವನ್ನು ಪುರಸ್ಕರಿಸುವ, ಮತ್ತೊಮ್ಮೆ ತಿರಸ್ಕರಿಸುವ, ಒಮ್ಮೆ ಮಾಂಸಾಹಾರವನ್ನು ತಿರಸ್ಕರಿಸುವ, ಮತ್ತೊಮ್ಮೆ ಮಾಂಸಾಹಾರಿಗಳನ್ನೂ ಒಳಗೊಳ್ಳುವ ವಚನ ಸಾಹಿತ್ಯದ ದ್ವಂದ್ವಗಳನ್ನೂ ಚರ್ಚೆಗೆ ಒಳಪಡಿಸಿದ್ದಾರೆ. " ವಚನ ಚಳವಳಿಯ ಪ್ರತಿಯೊಂದು ಹಂತದಲ್ಲೂ ಸನಾತನ ಕಾಳಾಮುಖ ಸಂಸ್ಕೃತಿ ಗಾಢವಾಗಿ ಆವರಿಸಿಕೊಂಡಿದೆ. ಕಾಳಾಮುಖಿಗಳ ಪಂಥ ಶ್ರೇಷ್ಠತೆ, ಸವಾಲುವಾದ, ಪಂಥ ವಿಸ್ತರಣೆ, ಪಂಥ ಹೇರಿಕೆ, ಸವಾಲಿನಲ್ಲಿ ಸೋತರೆ ಆತ್ಮಾಹುತಿಯಾಗುವ ಸಂಸ್ಕೃತಿಗೆ ಭಿನ್ನವಾಗಿ ಶರಣರು ಏನೂ ಮಾಡಿಲ್ಲ. ತಮ್ಮ ಪಂಥ ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಪರ ಪಂಥ ಅವಹೇಳನವನ್ನು ಮಾಡಿದ್ದಾರೆ. ಸವಾಲುಗಳನ್ನು ಹಾಕಿದ್ದಾರೆ. ಕಡೆಗೆ ತಮ್ಮ ಸವಾಲಿನಲ್ಲಿ ಸೋತು ಕಲ್ಯಾಣ ಕ್ರಾಂತಿಯಲ್ಲಿ ವೀರರಂತೆ ಆತ್ಮಾಹುತಿಗೊಂಡಿದ್ದಾರೆ(ಪು. ೧೪೧)" ಎನ್ನುವಲ್ಲಿ ಸಾಕಷ್ಟು ತೀಕ್ಷ್ಣವಾದ ವಿಮರ್ಶೆಯೇ ಇದೆ. ಶರಣ ಚಳವಳಿಯ ಮಹತ್ತನ್ನು ಗೌರವಿಸಿಯೂ ಈ ಮಾತನ್ನಾಡುವುದಕ್ಕೆ ಅಪಾರವಾದ ನೈತಿಕ ಸ್ಥೈರ್ಯ ಬೇಕಾಗುತ್ತದೆ.
ಬೌದ್ಧ ಧರ್ಮದ ನಾಶಕ್ಕೆ ಮುಸ್ಲಿಂ ಬಂಡುಕೋರರ ದಾಳಿಯ ಕಾರಣವನ್ನು ಅಂಬೇಡ್ಕರ್ ಹೇಳಿರುವುದನ್ನು ಪ್ರಸ್ತಾಪಿಸಿರುವ ರವಿ ಹಂಜ್, ಮಹತ್ತರವಾದ ಅಬ್ಸರ್ವೇಷನ್ ಕೊಟ್ಟಿದ್ದಾರೆ. ಯಾವುದೆ ಧಾರ್ಮಿಕ ಸಮುದಾಯದ ಸಂಘಟನೆಗೆ ಪುರೋಹಿತ ವರ್ಗ ಅವಶ್ಯಕ. ಬೌದ್ಧ ಬಿಕ್ಕುಗಳಿಗೆ ಪ್ರತಿಯಾಗಿ ಹಿಂದೂ ಧರ್ಮದಲ್ಲಿರುವ ಬ್ರಾಹ್ಮಣರು ಸಂಸಾರಿಗಳಾಗಿದ್ದುದು ಕೂಡ ಹಿಂದೂ ಧರ್ಮ ಉಳಿದುಕೊಳ್ಳಲು ಒಂದು ಕಾರಣ ಎನ್ನುವುದು ಒಳ್ಳೆಯ ಅಬ್ಸರ್ವೇಷನ್.
ಫಾಹಿಯಾನ್‌ನ ದಾಖಲೆಗಳ ಆಧಾರದಲ್ಲಿ ಚಂಡಾಲರು ಮಾಂಸೋದ್ಯಮಿಗಳು, ಅವರೂ ಬ್ರಾಹ್ಮಣರಾಗಿ ಬದಲಾಗಲು ಅವಕಾಶವಿತ್ತು ಎಂಬುದನ್ನು ನಿರೂಪಿಸಿರುವ ರವಿ ಹಂಜ್ ಜಾತಿ ವ್ಯವಸ್ಥೆಯನ್ನು ಮುಸ್ಲಿಂ ದಾಳಿಯ ನಙತರದ ವಿದ್ಯಮಾನವಾಗಿ ಗುರುತಿಸುತ್ತಾರೆ. ಇದು ಸ್ವಲ್ಪ ಜಾಸ್ತಿ ಚರ್ಚೆಯನ್ನು ಬಯಸುವ ವಿಷಯ. ನನ್ನ ಮಟ್ಟಿಗೆ ಜಾತಿಯ ರಚನೆ ಮುಸ್ಲಿಂ ಪೂರ್ವ ಕಾಲದ್ದೆಂಬ ಅಂಬೇಡ್ಕರ್ ಅವರ ಅವಲೋಕನವೇ ಸರಿ ಇದೆ. ಆಲೂರು ವೆಂಕಟ್ರಾಯರು ಹರ್ಡೇಕರ್ ಮಂಜಪ್ಪ ಅವರೊಂದಿಗೆ ನಡೆಸಿದ ಸಂವಾದದಲ್ಲಿ ವರ್ಣ ಮತ್ತು ಜಾತಿಗಳೆರಡೂ ಜೊತೆಜೊತೆಯಾಗಿ ಅಸ್ತಿತ್ವದಲ್ಲಿದ್ದುದನ್ನು ಹೇಳಿದ್ದಾರೆ. ಅಲ್ಲದೆ ಹಿಂದೂ ಧರ್ಮದ ಬಳಿ ನಾಥ ಪಂಥದ ಪ್ರಧಾನ ಬೇಡಿಕೆ ಹಳೆಯ ವರ್ಣ ಪದ್ಧತಿಯನ್ನೆ ಮತ್ತೆ ಜಾರಿಗೆ ತರಬೇಕು ಎಂಬುದೇ ಆಗಿತ್ತು. ಹಾಗಿರುವಾಗ ಮುಸ್ಲಿಂ ಆಡಳಿತದಲ್ಲಿ ಜಾತಿಗಳು ಬಿಗಿಯಾದವು ಎನ್ನಬಹುದೆ ಹೊರತು ಆ ನಂತರವೇ ಜಾತಿ ಸ್ಥಿರೀಕರಣಗೊಂಡಿತು ಎನ್ನುವುದು ಕಷ್ಟ. ಜಾತಿ ಕಾನೂನಾತ್ಮಕ ಸ್ಥಿರೀಕರಣವಾದದ್ದು ಬ್ರಿಟಿಷ್ ಆಡಳಿತದಲ್ಲೆ. ಅಲ್ಲಿಯ ವರೆಗೂ ಒಂದು ಜಾತಿಯಿಂದ ಮತ್ತೊಂದು ಜಾತಿಗೆ ವರ್ಗಾವಣೆಯಾಗಬಹುದಾಗಿತ್ತು.
ಭಾರತದ ಗಣಿತ, ವಿಜ್ಞಾನ, ಶಾಸ್ತ್ರಗಳ ಆವಿಷ್ಕಾರಗಳನ್ನು ಮೊಘಲ್ ಪೂರ್ವ ಕಾಲದ್ದಾಗಿ ರವಿ ಹಂಜ್ ಸಮರ್ಪಕವಾಗಿಯೆ ಗುರುತಿಸಿದ್ದಾರೆ. ಈ ಅಂಶವನ್ನು ಜವಾಹರ ಲಾಲ್ ನೆಹರೂ ಅವರೂ ಗುರುತಿಸಿದ್ದು," ಇಸ್ಲಾಂ ಭಾರತಕ್ಕೆ ಯಾವುದೆ ವೈಜ್ಞಾನಿಕ ಅಥವಾ ರಾಜಕೀಯ ಕೊಡುಗೆಗಳನ್ನು ತಂದಿಲ್ಲ" ಎಂದು ಹೇಳಿದ್ದಾರೆ. ಆದರೆ ಮೊಘಲರದ್ದೂ ಭಾರತೀಯ ಆವಿಷ್ಕಾರವನ್ನು ನಾಶ ಪಡಿಸುವ ಉದ್ದೇಶ ಪೂರ್ವಕ ಯೋಜನೆಯಾಗಿರಲಿಲ್ಲ ಎನ್ನುವಲ್ಲಿ ಎಡಬಲ ಪಂಥಗಳನ್ನು ಮೀರಿದ ಸತ್ಯ ಶೋಧಕನ ಜಾಗದಲ್ಲಿ ರವಿ ಹಂಜ್ ನಿಲ್ಲುತ್ತಾರೆ.
ಹುಟ್ಟಿನಿಂದ ಬರುವ ಜಾತಿ ವ್ಯವಸ್ಥೆಯ ಅಧಿಕೃತತೆ ಆವಿಷ್ಕಾರ ಪ್ರವೃತ್ತಿಯ ಹಿನ್ನಡೆಗೆ ಕಾರಣವಾಗಿರುವುದನ್ನು ಗುರುತಿಸಿರುವ ರವಿ ಹಂಜ್ ಆಧುನಿಕ ಗಣಕ ಯಂತ್ರಗಳಲ್ಲಿಯೂ ಬಳಕೆಯಾಗಿರುವ ಭಾರತದ ಪುರಾತನ ಆವಿಷ್ಕಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಕನಿಷ್ಕನ ಕರಂಡಕ ಮತ್ತು ವೀರಶೈವ ಕರಡಿಗೆಗಳ ಹೋಲಿಕೆಯ ಮೂಲಕ ಹಿಂದೂ, ಬೌದ್ಧ, ಜೈನ, ಪಾಶುಪತಗಳು ಹೇಗೆ ಒಂದೇ ಸಂಸ್ಕೃತಿಯ ಕವಲುಗಳಾಗಿವೆ ಎಂಬುದನ್ನು ಹೇಳಿದ್ದಾರೆ.
ರವಿ ಹಂಜ್ ಅವರ ಅಧ್ಯಯನ ಮತ್ತು ಸೂಕ್ಷ್ಮತೆಗಳ ಆಧಾರದಲ್ಲಿ ಈ ಕೃತಿಯನ್ನು ವರ್ತಮಾನದ ಸಮಾಜವನ್ನು ವಿಭಜಿಸುವ ಪ್ರವೃತ್ತಿಯ; ಆದರೆ ಅನುಯಾಯಿಗಳನ್ನು ಸೃಷ್ಟಿಸಿಕೊಂಡು "ಜೈ" ಕಾರ ಹಾಕಿಸಿಕೊಳ್ಳಬಹುದಾದ ಬಲಪಂಥಕ್ಕೂ ಕೊಂಡೊಯ್ಯಬಹುದಿತ್ತು. ಎಡಪಂಥಕ್ಕೂ ಕೊಂಡೊಯ್ಯಬಹುದಿತ್ತು. ಆದರೆ ಅವರೆಡನ್ನೂ ಮಾಡದೆ ಕೃತಿಯನ್ನು ತೆರೆದ ಮನಸ್ಸಿನ ಕೃತಿಯಾಗಿ ಇಟ್ಟಿದ್ದಾರೆ. ಬಹುಶಃ ಈ ವಿಧಾನದಲ್ಲೆ ಒಂದು ಹಿಸ ಸ್ಕೂಲ್ ಆಫ್ ಥಾಟ್ ಬೆಳೆಯಲಿದೆ. ಒಂದು ಮೆಥಡಾಲಜಿಯಾಗಿ ಈ ಕೃತಿಗೆ ಅಪಾರ ಮಹತ್ವವಿದೆ. ಆದ್ದರಿಂದಲೇ ಈ ಕೃತಿ ಹೆಚ್ಚು ಜನರನ್ನು ತಲುಪಬೇಕಾದ ಅಗತ್ಯವಿದೆ. ಈ ಮೆಥಡಾಲಜಿಗಾಗಿ ರವಿಯವರನ್ನು ಅಭಿನಂದಿಸುತ್ತೇನೆ.
ಬಸವರಾಜಕಾರಣ ಬಿಡುಗಡೆ ಮಾತು
ನಮಸ್ತೆ,
"ನಿಮಗೆ ಸ್ವಯಾರ್ಜಿತ ಅರಿವು ಬೇಕೆ? ಹಾಗಿದ್ದರೆ ಅಮೆರಿಕೆಗೆ ಬನ್ನಿ. ಹೇಗೆ ಮಹಾತ್ಮ ಗಾಂಧಿಯವರು ಜೈಲಿಗೆ ತೆರಳಿ ತಮ್ಮ ಆತ್ಮಚರಿತ್ರೆಯನ್ನು ಬರೆದರೋ, ಅಥವಾ ನೆಹರೂ ಹೇಗೆ ಇಂಗ್ಲೆಂಡಿಗೆ ತೆರಳಿ Discovery of India ಬರೆದರೋ ಹಾಗೆ. ದೂರಳತೆಯಿಂದ ವಸ್ತುಗಳು ಸ್ಪಷ್ಟವಾಗಿ ಕಂಡು ಅಂತಹ ಒಂದು ಅನುಭೂತಿ ಮೂಡುವುದು!"
– “Annayya’s Anthropology” by A.K. Ramanujan.
ರಾಮಾನುಜನ್ ಅವರ ನುಡಿಯಂತೆ ಅನುಭವದಂತೆ ನನಗೂ ನನ್ನದೇ ಆದ ಕುತೂಹಲವು ಸ್ವಯಂಭು ಜ್ಞಾನದ ಹೊಳಹನ್ನು ತೋರುತ್ತ ಮಾತೃದೇಶದ ಆಗುಹೋಗುಗಳಿಗೆ ನನ್ನದೇ ಆದ ಭಿನ್ನ ದೃಷ್ಟಿಕೋನವನ್ನು ಕಟ್ಟಿಕೊಡತೊಡಗಿತು. ಇದೇ ದೃಷ್ಟಿಕೋನವು ನನ್ನ ಎಲ್ಲಾ ಕೃತಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆಂದು ಸಾಕಷ್ಟು ಓದುಗರು ಸಹ ತಿಳಿಸಿದ್ದಾರೆ. ಇದು ಏಕೆ ಸಾಧ್ಯವೆಂದರೆ from a distance whole world looks clear. ಒಂದು ಸಮಗ್ರ ಚಿತ್ರಣ ಸಿಗುತ್ತದೆ. ಹಾಗಾಗಿಯೇ ಹಿಂದೆಲ್ಲ ಋಷಿ ಮುನಿಗಳು ತಪಸ್ಸಿಗೆ ಕಾಡಿಗೆ ಹೋಗುತ್ತಿದ್ದರು, ಬುದ್ಧನು ಸಹ ಹಾಗೆಯೇ ಸಮಾಜದಿಂದ ಹೊರನಡೆದು ಮುಕ್ತಿ ಪಡೆದದ್ದು. ಒಟ್ಟಾರೆ ಈ ರೀತಿಯ ಒಂದು isolation ಸ್ವಯಾರ್ಜಿತ ಜ್ಞಾನವನ್ನೋ ಅರಿವನ್ನೋ ಅನುಭೂತಿಯನ್ನೋ ನೀಡುತ್ತದೆ. ಕೇವಲ ಏಕಲವ್ಯ ಇಂತಹ ಸ್ವಯಂ ಬಿಲ್ವಿದ್ಯೆ ಕಲಿಯಲಿಲ್ಲ, ಕಾಡಿಗೆ ಹೋಗಿ ತಪಂಗೈದ ಎಲ್ಲಾ ಋಷಿಮುನಿಗಳೂ ಅವರವರ ಕ್ಷೇತ್ರದಲ್ಲಿ ಏಕಲವ್ಯರೆ ಆಗಿರುವರು! ಆದರೆ ನಾವೆಲ್ಲಾ ಏಕಲವ್ಯನನ್ನು ಮಾತ್ರ ಇಂತಹ ಸಾಧನೆ ಮಾಡಿದ್ದನು ಎಂದುಕೊಂಡಿದ್ದೇವೆ. That's the difference from seeing things from a distance!
ಇರಲಿ, Solitary confinement ಎಂಬುದು ನಿಜಕ್ಕೂ ಒಂದು ಅರಿವಿನ ವೈಧಾನಿಕತೆ!
ಆದರೆ ಅದಕ್ಕೆ ಮೂಲತಃ ಮಾನವ ಸಹಜ ಕುತೂಹಲವಿರಬೇಕು. ಅಂತಹ ಕುತೂಹಲ ನನಗೆ ಕಲ್ಯಾಣ ಕ್ರಾಂತಿಯ ಬಗ್ಗೆಯೂ ಇತ್ತು. ಆದರೆ ಆ ಕುರಿತು ಈವರೆಗಿನ ಎಲ್ಲಾ ಸಿದ್ಧಾಂತಗಳು, ಸಂಶೋಧನೆಗಳು ಒಂದು ರೀತಿಯ ಪೂರ್ವಾಗ್ರಹಗಳಿಂದ ಕೂಡಿವೆ ಎಂಬ ಅಭಿಪ್ರಾಯ ಕಾಡತೊಡಗಿತ್ತು. ಈ ಅಭಿಪ್ರಾಯ ಬಹುಶಃ ರಾಮಾನುಜನ್ ಹೇಳಿರುವಂತಹ ಅನಿವಾಸಿ ಆನುಷಂಗಿಕ ಗುಣದ ಪ್ರಭಾವವಾಗಿದೆಯೇನೋ ಗೊತ್ತಿಲ್ಲ. ಆದರೆ ಆ ಅನಿವಾಸಿತನ ನನ್ನಿಂದ ನನ್ನೆಲ್ಲಾ ಕೃತಿಗಳನ್ನು ಬರೆಸಿದೆ.
ಇನ್ನು ಬಸವರಾಜಕಾರಣ ಕುರಿತಂತೆ ಹೇಳಬೇಕೆಂದರೆ, ಸಹಜವಾಗಿ ಕಾಣುವ ಸತ್ಯವನ್ನು ತರ್ಕದ ಒರೆಗೆ ಹಚ್ಚಿ ಅಂದರೆ ನನ್ನ ವೃತ್ತಿಪರ ವಿಶ್ಲೇಷಣಾ ತಂತ್ರವನ್ನು ಬಳಸಿ ಈ ಕೃತಿಯನ್ನು ರಚಿಸಿದ್ದೇನೆ. ಭಾರತದ ಭವ್ಯವಾದ ಆವಿಷ್ಕಾರಗಳಲ್ಲಿ ಒಂದಾದ ತರ್ಕಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ನೋಡಿದಾಗ ಅದು ಇಂದಿನ ಮೊಬೈಲ್ ತಂತ್ರಜ್ಞಾನದಂತಹ ತಂತ್ರಕ್ಕೆ ಬುನಾದಿಯಾಗಿದೆ ಎಂದರೆ ನಿಮಗೆಲ್ಲಾ ಆಶ್ಚರ್ಯವಾಗಬಹುದು. ಚಾರ್ಲ್ಸ್ ಬ್ಯಾಬೇಜ್, ಜಾರ್ಜ್ ಬೂಲಿಯನ್, ಮೇರಿ ಬೂಲಿಯನ್ ಅವರ ಗಣಿತ ಸೂತ್ರಗಳ ಬುನಾದಿಯಾದ ತರ್ಕ ಇಂದಿನ ಮೊಬೈಲ್ ಅವಿಷ್ಕಾರಕ್ಕೆ ನಾಂದಿಯಾಗಿದೆ. ಆ ಲೆಕ್ಕದಲ್ಲಿ ಭಾರತ ವಿಶ್ವಗುರು ಆಗಿದೆ. ಆದರೆ ಇಂದು ಭಾರತ ಅದೆಷ್ಟೇ ಉನ್ನತವಾಗಿದೆ ಎಂದುಕೊಂಡರೂ ನೈತಿಕತೆಯಲ್ಲಿ ಅಷ್ಟೇ ಅಧಃಪತನಕ್ಕೊಳಗಾಗಿರುವುದು ನಗ್ನ ಸತ್ಯ. ಇಂತಹ ಸಂದಿಗ್ಧ ಕಾಲದಲ್ಲಿ ಇದೇ ಭಾರತೀಯ ತರ್ಕದ ಬುನಾದಿಯ ಮೇಲೆ ರಚಿಸಿದ "ಬಸವರಾಜಕಾರಣ*ದಂತಹ ನಿಷ್ಠುರವಾದ ಕೃತಿಯನ್ನು ಪ್ರಕಟ ಮಾಡುವಂತಹ ಧೈರ್ಯವನ್ನು ಅಷ್ಟೇ ಸಾತ್ವಿಕರಾದ ಲೋಕಪ್ಪನವರು ಮಾಡಿದ್ದಾರೆ. ನಾನು ಅವರನ್ನು ಒತ್ತಿ ಒತ್ತಿ ಕೇಳಿದಾಗ ಅವರು "ಇಂಥ ಸಂಶೋಧನಾತ್ಮಕ ಕೃತಿಗಳು ಸಾರ್ವಕಾಲಿಕವಾಗಿ ಜನರನ್ನು ತಲುಪಬೇಕು ಎಂದರು. ಅವರ ಸೋದರಾರಾದ ಚಂದ್ರಪ್ಪನವರು ಕರಡನ್ನು ಓದಿ ಅಪಾರವಾಗಿ ಮೆಚ್ಚಿಕೊಂಡರು. ಇವರ ಈ ನಡೆ ನನಗೆ ಸಖೇದಾಶ್ಚರ್ಯವನ್ನು ಉಂಟುಮಾಡಿದ್ದಲ್ಲದೆ ನೈತಿಕತೆಯ ಆಶಾಕಿರಣ ಕಂಡಿತು.
ಅಂದ ಹಾಗೆ 'ಸಾವಿರ ಪುಸ್ತಕಗಳ ಸರದಾರ' ಎಂದೇ ಖ್ಯಾತವಾಗಿರುವ ಲೋಕಪ್ಪನವರ ಪ್ರಕಾಶನಗಳಲ್ಲಿ ಸಂಶೋಧನ ಕೃತಿಗಳದೆ ಸಿಂಹಪಾಲು.
ಅದಕ್ಕಿಂತಲೂ ಆಶ್ಚರ್ಯಕರವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಲೆಯೂರು ಗುರುಸ್ವಾಮಿಯವರು ಕೃತಿಯನ್ನು ಬಿಡುಗಡೆ ಮಾಡಲು ಒಪ್ಪಿದ್ದು, ಹಾಗೆಯೇ ಶ್ರೀ ಕಾಳೇಗೌಡರು ಅಧ್ಯಕ್ಷತೆ ವಹಿಸಿದ್ದು ಮತ್ತು ಎಲ್ಲದ್ದಕ್ಕೂ ಹೆಚ್ಚಾಗಿ ಪೂಜ್ಯ ಗುರುಗಳು ಈ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡಿದ್ದು ಎಲ್ಲವೂ ಒಂದು ಕನಸಂತಿದ್ದರೂ ಇಂದು ಅಸಹಿಷ್ಣುತೆ, ಪ್ರಾಬಲ್ಯ ಅಧಿನಾಯಕತ್ವ ತುಂಬಿ ತುಳಕುತ್ತಿದೆ ಎನ್ನುವ ಸನ್ನಿವೇಶದ ನಡುವೆ ಸಹಿಷ್ಣುತೆ, ಸಹಬಾಳ್ವೆ, ಮತ್ತು ತಾರ್ಕಿಕ ಸಂಶೋಧನೆಗಳನ್ನು ಬೆಂಬಲಿಸುವ ಆಶಾಕಿರಣ ಈ ಸಮಾರಂಭವಾಗಿದೆ. ಈ ಅಂಶವನ್ನು ಇಂದು ಇಲ್ಲಿರುವ ಮಾಧ್ಯಮ ಮಿತ್ರರು ಎತ್ತಿಹಿಡಿಯಬೇಕೆಂದು ಕೇಳಿಕೊಳ್ಳುವೆ.
ಇನು ಈ ಕೃತಿಯಲ್ಲಿನ ಸುದೀರ್ಘ ವಿಶ್ಲೇಷಣೆಯಾದ್ಯಂತ ತಾರ್ಕಿಕ ಸಂಶೋಧನೆಗಳು ಸನಾತನ ಭಾರತದಲ್ಲಿ ಹೇಗೆ ಶಾಸ್ತ್ರ, ಸೂತ್ರಗಳಾಗಿ ವಿಕಸಿಸಿ ನಂತರ ನಶಿಸುತ್ತ ಹೋದವೆಂಬುದರ ಒಂದು ಸ್ತಬ್ಧಚಿತ್ರ ನಮೂನೆ (pattern) ಕಾಣುತ್ತದೆ. ಆ ಸೃಜನೇತರ ವೈಜ್ಞಾನಿಕ ಶಾಸ್ತ್ರಗಳ ಪರೋಕ್ಷ ವಿನಾಶಕ್ಕೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಸೃಜನಶೀಲ ಭಾವೋತ್ಕರ್ಷಗಳ ನಮೂನೆಯು ಹೇಗೆ ಪ್ರಭಾವಿಸಿತು, ನಂತರದ ಇಸ್ಲಾಮಿ ದಾಳಿಕೋರರ ಅಧಿನಾಯಕತ್ವವು ಹೇಗೆ ಆ ಶಾಸ್ತ್ರಗಳಿಗೆ ಭಾವೋತ್ಕರ್ಷದ ಮರ್ಮಾಘಾತವನ್ನು ತಂದೊಡ್ಡಿತು, ಆ ಪಲ್ಲಟದಿಂದಾದ ಭಾವೋತ್ಕರ್ಷದ ಸೃಜನಶೀಲ ಕಥನಗಳು, ಭಕ್ತಿಪಂಥದ ರೂಪು ತಳೆದು ಹೇಗೆ ಭಾರತವನ್ನು ಮತ್ತಷ್ಟು ಭಾವೋತ್ಕರ್ಷಕ್ಕೆ ತಳ್ಳಿದವು, ನಂತರದ ಬ್ರಿಟಿಷ್ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲೂ ಭಾವೋತ್ಕರ್ಷದ ಸಿಪಾಯಿದಂಗೆಯಂತಹ ಸುದ್ದಿಗಳು
ಹೇಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದವು ಎಂಬುದರೊಂದಿಗೆ ಭಾರತದಲ್ಲೇಕೆ ಎಲ್ಲಾ ವೈಜ್ಞಾನಿಕ ಸಂಶೋಧನೆಗಳು ಹೇಗೆ ಸೃಜನಶೀಲ ಕಥನಗಳಾಗುತ್ತ ಸಾಗಿದವು ಎಂಬುದನ್ನು ತೋರುತ್ತ ಈಗಲೂ ಗಾಳಿಸುದ್ದಿಗಳೇ ಹೆಚ್ಚು ಪ್ರಭಾವಶಾಲಿ ಎಂಬ ಯಕ್ಷಪ್ರಶ್ನೆಗೆ ಈ ಐತಿಹಾಸಿಕ "ಐತಿಹಾಸಿಕ-ನಮೂನೆ" ಉತ್ತರ ಕೊಡುತ್ತದೆ. ಸಮಾಜಮುಖಿ-ಭಾರತ ಹೇಗೆ ಸೋಪಾನಪಾತವಾಗಿ ಪತನಮುಖಿ- ಭಾರತವಾಯಿತು ಎಂದೂ ಕಾಣಿಸುತ್ತದೆ.
ಮಹಾಕಾವ್ಯಗಳಂತೆಯೇ ಇಂದಿನ ಸಾಕಷ್ಟು ಸಾಹಿತಿಗಳು ಸಂಶೋಧನೆಗಳನ್ನು ಕಾದಂಬರಿ ರೂಪದಲ್ಲಿ ಕಟ್ಟಿಕೊಟ್ಟು anticipatory bail ಪಡೆದುಕೊಂಡಿರುತ್ತಾರೆ. ಇದೇ ಬಸವಣ್ಣ, ಅಲ್ಲಮ, ಅಕ್ಕರಲ್ಲದೆ ಶರಣ ಚಳುವಳಿಯ ಕುರಿತಾಗಿ ರಚಿತಗೊಂಡಿರುವ ಸಾಕಷ್ಟು ಅಂತಹ ಪೂರ್ವಭಾವಿ ಜಾಮೀನಿನ ಕಾದಂಬರಿ, ನಾಟಕಗಳ ಉದಾಹರಣೆಗಳು ನಮ್ಮ ಮುಂದಿವೆ. ಅಲ್ಲಿಗೆ ಅವರ ಸಂಶೋಧನೆಯ ಬಗ್ಗೆ ಅವರಿಗೇ ನಂಬಿಕೆಯಿಲ್ಲ ಎಂದಲ್ಲವೇ!
Anyways, ಇಂತಹ ಒಂದು ಕ್ರಮಬದ್ಧ ಸ್ಥಿತ್ಯಂತರ ಬೇರಾವ ದೇಶದ ಇತಿಹಾಸದಲ್ಲೂ ಕಾಣುವುದಿಲ್ಲ. ಇತಿಹಾಸ ಮರುಕಳಿಸುತ್ತದೆ ಎಂಬಂತೆ ನಿಯಮಿತವಾಗಿ ಒಂದು ಸ್ಥಿತ್ಯಂತರದ ಋತುಚಕ್ರದನುಕ್ರಮವಾಗಿ ಭಾರತ ಸಾಗಿಬರುತ್ತಿದೆ. ಆ ಚಕ್ರದ ಜಾಡನ್ನು ಒಂದು ಅಂತರರಾಷ್ಟ್ರೀಯ ಮತ್ತು ಅಂತರಶಿಸ್ತೀಯ ವೈಧಾನಿಕತೆಗೆ ಬದ್ಧವಾಗಿಸಿ ನೋಡಿದಾಗ ಭಾರತದ ಪಥ ಸುಸ್ಪಷ್ಟವಾಗಿ ಗೋಚರಿಸುತ್ತದೆ!
ಅದು ಪ್ರಗತಿಯೋ ಪರಗತಿಯೋ ಎಂದು ಕೋಡಿ ಮಠದ ಹೊತ್ತಿಗೆಗಳು ಅಗಸ್ತ್ಯ ಮುನಿಯ ನಾಡಿ ಶಾಸ್ತ್ರವೂ ಮತ್ತು ನಾಸ್ಟರ್ಡಾಮಸ್ ನ ಪುಸ್ತಿಕೆಯೂ ಜಂಟಿಯಾಗಿ ತಿಳಿಸಬಹುದೇನೋ ಗೊತ್ತಿಲ್ಲ. ಆದರೆ ಈ ವಿಡಂಬನೆಯಾಚೆ ನೋಡಿದಾಗ ನಮ್ಮ ಸಂಶೋಧನೆಗಳು ಹೇಗೆ ವಿವಿಧ Hegemonyಗಳಿಗೊಳಗಾಗಿ ಭಾರತದ ಪ್ರಸ್ತುತ ವರ್ತಮಾನಕ್ಕೆ ಕೊಡುಗೆ ನೀಡಿವೆ ಎಂಬುದರ ಬಗ್ಗೆ ಸಹ ಒಂದು ಅನಿವಾಸಿ ಹೊಳಹನ್ನು ಈ ಕೃತಿಯಲ್ಲಿ ಕೊಟ್ಟಿದ್ದೇನೆ. ಈ ಹೊಳಹನ್ನು ವಿಸ್ತೃತಗೊಳಿಸುತ್ತ ಸಾಗುವ ದೃಷ್ಟಿಕೋನ ಎಲ್ಲರದೂ ಆಗಲಿ.
ಧನ್ಯವಾದಗಳು!