ಗ್ರಾಮ ವಾಸ್ತವ್ಯದ ಗ್ರಾಮಸಿಂಹ!

ಅಂತೂ ಅಧಿಕಾರ ಹಸ್ತಾಂತರದ ಪ್ರಹಸನ ಮುಕ್ತಾಯಗೊಂಡಿದೆ. ಜೆಡಿಎಸ್ ನ ಎಲ್ಲಾ ಪಾತ್ರಧಾರಿಗಳೂ ಭರ್ಜರಿಯಾಗಿ ತಮ್ಮ ತಮ್ಮ ಪಾತ್ರಗಳನ್ನು ನೆರವೇರಿಸಿದ್ದಾರೆ.

ಯಾವುದೇ ಪೂರ್ವಾಗ್ರಹವಿಲ್ಲದೆ, ವಿಧಾನಸಭೆಯ ಚುನಾವಣೆಯ ನಂತರ ನಡೆದ ಘಟನೆಗಳನ್ನು, ಸರ್ಕಾರದ ಸಾಧನೆಗಳನ್ನು ಸಮಗ್ರವಾಗಿ ಅವಲೋಕಿಸಿದಾಗ ಕಣ್ಣಿಗೆ ಕಾಣುವುದು ಇಷ್ಟು.

ಧರಮ್ ಸಿಂಗ್ ಮುಖ್ಯಮಂತ್ರಿಯಾಗಿ ಸಾಮಾನ್ಯ ಜನತೆಗೆ ಸುಲಭವಾಗಿ ಸಿಗುವಂತಹ ಮುಖ್ಯಮಂತ್ರಿಯೆನಿಸಿಕೊಳ್ಳಬೇಕೆಂಬ ಹಂಬಲದಲ್ಲಿ ಕರೆದವರ ಮದುವೆ, ತಿಥಿ, ಸಿನಿಮಾ ಮಹೂರ್ತಗಳಿಗೆಲ್ಲ ಹೋಗಿದ್ದು ಮತ್ತು ಅಕ್ಷರಶ: ದೇವೇಗೌಡರ ದಲ್ಲಾಳಿಯಂತೆ ವರ್ತಿಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಹಂಬಲದಲ್ಲಿ ಜನತೆ ಅಷ್ಟೇನೂ ಕೇಳರಿಯದಿದ್ದ ’ಅಹಿಂದ’ ದ ಹಿಂದೆ ಬಿದ್ದು, ಕುಂಟು ನೆಪಕ್ಕೆ ಕಾಯುತ್ತಿದ್ದ ದೇವೇಗೌಡರಿಗೊಂದು ನೆಪ ಕೊಟ್ಟು ತಲೆ ಬೋಳಿಸಿಕೊಂಡು ತಮ್ಮೆಲ್ಲ ಆದರ್ಶಗಳೂ ಒಮ್ಮೆ ಮುಖ್ಯಮಂತ್ರಿಯಾಗುವುದೇ ಆಗಿದೆಯೆಂದು ಕಾಂಗ್ರೆಸ್ ಸೇರಿದ್ದು, ಧರಮ್ ಮಾದರಿಯಲ್ಲಿಯೇ ಕುಮಾರಸ್ವಾಮಿ ಕೂಡ ಜನರಿಗೆ ಸುಲಭವಾಗಿ ಸಿಕ್ಕುವ ಮುಖ್ಯಮಂತ್ರಿಯೆನಿಸಿಕೊಳ್ಳಬೇಕೆಂಬ ಪ್ರಚಾರಪ್ರಿಯತೆಗಾಗಿ ಗ್ರಾಮ ವಾಸ್ತವ್ಯ, ಶನಿ-ದರ್ಶನ (ಶನಿವಾರದ ದರ್ಶನ), ರಂಗಿನುಡುಪುಗಳಿಂದ ಆ ದಿಸೆಯಲ್ಲಿ ಕೊಂಚ ಯಶಸ್ವಿಯಾಗಿ ಕೊನೆಗೆ ಉತ್ತರಕುಮಾರನಂತೆ ’ಅಪ್ಪಯ್ಯಾ, ಎಡೆಯೂರಪ್ಪ ಕುರ್ಚಿ ಕೇಳ್ತನೆ ನೋಡು!’ ಎನ್ನುತ್ತ ಗ್ರಾಮಸಿಂಹವಾದದ್ದು, ಮುಂದಿನ ದೀಪಾವಳಿ ’ಅನುಗ್ರಹ’ ದಲ್ಲೇ ಎಂದು ಎಡೆಯೂರಪ್ಪನವರು ಡಂಗುರ ಸಾರಿದ್ದು, ಬಳ್ಳಾರಿಯ ಬಿಜೆಪಿ ಶಾಸಕರುಗಳು ಕುಮಾರಸ್ವಾಮಿ ಪಟಾಲಂ ನ ನೀರಿಳಿಸಿದ್ದು, ಇದಲ್ಲದೆ ಜೆಡಿಎಸ್ ನ ಬಿಸಿಲ್ಗುದುರೆ (ಮಿರಾಜ್), ಜಯಕುಮಾರ್, ಅನ್ಸಾರಿ ಮತ್ತಿತರು ನೀರಿಗೆ ಕಾದಾಡುವ ಬೀದಿ ಮಹಿಳೆಯರನ್ನೂ ಮೀರಿಸಿ ಎಡೆಯೂರಪ್ಪನವರನ್ನು ಜರೆದಿದ್ದು ಮತ್ತು ಅಕ್ಷರಶಃ ದೇವೇಗೌಡ ಕುಟುಂಬದ ಗುಲಾಮಗಿರಿಯನ್ನು ಮೆರೆಸಿದ್ದು, ಮತ್ತು ಹೊನ್ನಾಳಿ ಶಾಸಕ ರೇಣುಕಾಚಾರ್ಯರ ವೈಯುಕ್ತಿಕ ವಿಷಯ ಸಾರ್ವತ್ರಿಕವಾದದ್ದು.

ಮೊದಲರ್ಧದ ಕಾಂಗ್ರೆಸ್ಸಿನೊಂದಿಗಿನ ದೋಸ್ತಿಯಲ್ಲಿ ಸರ್ಕಾರವನ್ನು ರಚಿಸಿದ್ದು ಮತ್ತು ದೇವೇಗೌಡ/ಜನಾರ್ಧನ ಪೂಜಾರಿಯವರ ಪರಸ್ಪರ ಕೆಸರೆರೆಚಿದ್ದು ಸಾಧನೆಯಾದರೆ, ದ್ವಿತೀಯಾರ್ಧದಲ್ಲಿ ಬಿಜೆಪಿಯೊಂದಿಗೆ ಸೇರಿ ಜೆಡಿಎಸ್ ಸಂಪೂರ್ಣವಾಗಿ ಗಾಳಿಸುದ್ದಿಗಳನ್ನು ಹಬ್ಬಿಸುತ್ತ, ಎಡಿಯೂರಪ್ಪನವರನ್ನು ತುಛ್ಛೀಕರಿಸುವುದರಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡದ್ದೇ ಸಾಧನೆ.

ಗ್ರಾಮ ವಾಸ್ತವ್ಯದ ಸುದ್ದಿಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಅಲ್ಲಿಗೆ ಸೇರುತ್ತಿದ್ದುದೇ ರಾತ್ರಿ ಹನ್ನೆರಡು ಹೊಡೆದ ಮೇಲೆ! ನಂತರ ಉಂಡ ಶಾಸ್ತ್ರ ಮಾಡಿ ಇನ್ನೊಂದೆರಡು ಗಂಟೆಗಳ ಕಾಲಹರಣ ಮಾಡಿ, ಮತ್ತೊಂದು ತಾಸು ಮಲಗೆದ್ದು, ಐದು ಗಂಟೆಗೆ ಹೆಲಿಕಾಪ್ಟರ್ ಏರುವುದೇ ಇರುತ್ತಿತ್ತು. ಆದರೂ ಜೆಡಿಎಸ್ ಪಕ್ಷದ ಏಜೆಂಟ್ ರಂತೆ ದಿನಪತ್ರಿಕೆಗಳು ಈ ಸುದ್ದಿಯನ್ನು ಹಿರಿದು ಮಾಡಿ ಪ್ರಕಟಿಸಿ ಕುಮಾರಸ್ವಾಮಿಯವರನ್ನು ಮೆರೆಸಿದ್ದು ನಿಜ.

ಸೆಕ್ಯುಲರ್ ಅಂದರೆ ಏನೆಂದು ಕೇಳುತ್ತ ಮುಖ್ಯಮಂತ್ರಿಯಾಗಿ ನಂತರ ವಚನಭ್ರಷ್ಟನಾದರೂ ಚಿಂತೆಯಿಲ್ಲ ಸೆಕ್ಯುಲರ್ ಅಲ್ಲದ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವುದಿಲ್ಲವೆಂದದ್ದು ನೋಡಿದರೆ ’ಸೆಕ್ಯುಲರ್’ ಪದದ ಅರ್ಥ ಕಂಡುಕೊಳ್ಳಲು ಈ ವ್ಯಕ್ತಿ ಮುಖ್ಯಮಂತ್ರಿಯಾದನೇ? ಎಂದು ಜನ ಬೆರಗಾಗುವರೂ ಅಥವಾ ಎಂತಹ ಮೂರ್ಖನೆಂದು ಮರುಕ ಪಡುವರ್‍ಓ ಗೊತ್ತಿಲ್ಲ. ಒಟ್ಟಲ್ಲಿ ನಂಬಿಸಿ ಕೈ ಕೊಡುವ ವಿಷಯದಲ್ಲಿ ’ತಂದೆಯಂತೆ ಮಗ, ನೂಲಿನಂತೆ ಸೀರೆ’ ಎಂಬುದನ್ನು ತಮ್ಮ ಮೊದಲ ಇನ್ನಿಂಗ್ಸ್ ನಲ್ಲಿಯೇ ಅಮೋಘವಾಗಿ ಪ್ರದರ್ಶಿಸಿದ್ದಾರೆ!

ಸರ್ಕಾರ ಬಿದ್ದ ಅ ನಂತರದ ಪ್ರತಿಯೊಂದು ಹಂತದಲ್ಲಿಯೂ ಅತ್ಯಂತ ಕೀಳೆನ್ನಿಸಬಹುದಾದಂತಹ, ಚೆನ್ನಮ್ಮನವರು ಮಾಂಗಲ್ಯ ಉಳಿಸಿರೆಂದು ಅತ್ತಿದ್ದು, ದೇವೇಗೌಡರು ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದು, ರೇವಣ್ಣ ಗಳಗಳನೆ ಅತ್ತಿದ್ದು, ಇವರೆಲ್ಲರ ಗೋಳಾಟವನ್ನು ನೋಡಿ ಅಷ್ಟರಲ್ಲಾಗಲೇ ಮಾಜಿಯಾಗಿದ್ದ ಕುಮಾರಸ್ವಾಮಿ ಕೂಡ ಅತ್ತ ವರದಿಗಳನ್ನೆಲ್ಲ ನೋಡಿದರೆ, ತನ್ನ ಸ್ವಂತ ಸಹೋದರರ ಮನಸ್ಸನ್ನೇ ಗೆಲ್ಲದ (ದೇವೇಗೌಡ ಸೋದರರ ಪುತ್ರರೊಬ್ಬರು ಇವರ ಕಿರುಕುಳದಿಂದ ಬೇಸತ್ತು ಚೆನ್ನಮ್ಮನವರ ಮೇಲೆ ಆಸಿಡ್ ದಾಳಿ ಮಾಡಿ ಜೈಲು ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು) ಶೂನ್ಯ ಹೃದಯ ವೈಶಾಲ್ಯದ ದೇವೇಗೌಡ ಪ್ರಧಾನಮಂತ್ರಿಯಾಗಿದ್ದು ಹೃದಯ ವೈಶಾಲ್ಯವನ್ನು ಮೆರೆವ ಕನ್ನಡಿಗರ ಹೆಮ್ಮೆಯ ಸಂಗತಿಯೋ ಅಥವಾ ಇಂತಹ ಕ್ಷುಲ್ಲಕ ವ್ಯಕ್ತಿ ಕನ್ನಡಿಗನೆಂದು ಕನ್ನಡಿಗರು ತಲೆ ತಗ್ಗಿಸಬೇಕೊ ಎಂದು ಕನ್ನಡಿಗರೇ ಮುಂದಿನ ಚುನಾವಣೆಯಲ್ಲಿ ಹೇಳಬೇಕು!

ಹಾಗೆ ನೋಡಿದರೆ ಸಾರಾಯಿ ನಿಷೇಧ, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆಗಳಂತಹ ಮಹತ್ವದ ಯೋಜನೆಗಳ ಅನುಷ್ಟಾನಗಳು ಮತ್ತಿತರೆ ಅಭಿವೃದ್ದಿಗಳು ನಡೆದದ್ದು ಬಿಜೆಪಿಯೊಂದಿಗಿನ ದೋಸ್ತಿಯಲ್ಲಿ ಎಂಬುದು ಗಮನಾರ್ಹ ಆಶ್ಚರ್ಯವಾಗಿದೆ.

ಒಟ್ಟಾರೆ ಜೆಡಿಎಸ್ ನ ಎಲ್ಲಾ ಕಾಲೆಳೆತ ಕಿರುಕುಳಗಳ ನಡುವೆಯೂ ಕೂಡ ಕೆಲವು ಉತ್ತಮವಾದಂತಹ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು ಸಮ್ಮಿಶ್ರ ಸರ್ಕಾರದ ಸಾಧನೆಯೆನ್ನದೇ ಬಿಜೆಪಿಯದೇ ಸಾಧನೆ ಎನ್ನಬಹುದಾಗಿದೆ. ಬಹುಶಃ ಬಿಜೆಪಿ ರಾಜ್ಯಕ್ಕೆ ಉತ್ತಮ ಅಭಿವೃದ್ದಿಯನ್ನು ಕೊಡಬೇಕೆಂಬ ವಸ್ತುನಿಷ್ಠ ಉದ್ದೇಶವನ್ನು ಹೊಂದಿದ್ದರೆ, ಈಗ ಅಧಿಕಾರ ಕಳೆದುಕೊಂಡ ಮೇಲೆ ತಮ್ಮ ಅಭಿವೃದ್ದಿ, ತಾಳ್ಮೆಗಳ ಶಕ್ತಿಯನ್ನು ಜನಗಳಿಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೇ ಅನವಶ್ಯಕವಾಗಿ ಓಟಿನ ರಾಜಕಾರಣದ ದತ್ತ ಪೀಠದಂತಹ ವಿಚಾರಗಳನ್ನೆತ್ತಿ ಅನಗತ್ಯವಾಗಿ ತಮಗೆ ದೊರಕಿರುವ ’ವಚನಭ್ರಷ್ಟತೆ’ಯ ಪ್ರಚಾರವನ್ನು ಕಳೆದುಕೊಳ್ಳುತ್ತಿರುವರೇನೋ?

ಈ ಜನ ನಾಯಕರುಗಳು ಅಸಹ್ಯವೆನ್ನಿಸುವುದಕ್ಕಿಂತಲೂ ಕೀಳಾಗಿ, ಯಾವುದೇ ಮೌಲ್ಯವಾಗಲೀ, ಜನಹಿತ ಕಾಳಜಿಯಾಗಲೀ ಸಿದ್ಧಾಂತಗಳಾಗಲೀ ಇಲ್ಲದೆ ವ್ಯಕ್ತಿಪೂಜೆಯೇ ದೇವಪೂಜೆಯೆಂಬಂತೆ ತಮ್ಮ ಹಿರಿಯ ನಾಯಕರೊಂದಿಗೆ ವರ್ತಿಸುತ್ತ, ತಮ್ಮ ಕೈಕೆಳಗಿರುವವರಿಂದ ತಮ್ಮ ಪೂಜೆಯನ್ನು ಬಯಸುತ್ತ, ನೂರಾರು ಕೋಟಿಗಳ ಹಗರಣಗಳಲ್ಲಿ ತೊಡಗಿರುವುದೇ ಪ್ರತಿಷ್ಟೆ ಎಂಬಂತೆ ಗರ್ವದಿಂದ ಬೀಗುವುದನ್ನು ನೋಡಿದರೆ ’ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ’ ಎಂದು ಬಡವರ ತಾಯಿ, ಬಂಧು ಇನ್ನು ಏನೇನೋ ಆಗಿದ್ದ ಮಹಾಮಾತೆಯೊಬ್ಬರ ಚುನಾವಣಾ ಉದ್ಘೋಷ ಬೇಡವೆಂದರೂ ಯಾಕೋ ನೆನಪಾಗುತ್ತಿದೆ.

ಒಟ್ಟಾರೆ ರಾಜಕೀಯದಲ್ಲಷ್ಟೇ ಇದ್ದ ನೈತಿಕ ಅಧ:ಪತನ, ಇಂದು ಚೆಲುವ, ಚೆನ್ನಿಗ, ರೆಡ್ಡಿ ಇನ್ನೂ ಹತ್ತು ಹಲವಾರು ಇಂತಹ ನಿಕೃಷ್ಟರನ್ನೇ ಆರಿಸಿ ಕಳುಹಿಸುತ್ತಿರುವ ಜನಸಾಮಾನ್ಯರಲ್ಲೂ ಗಾಢವಾಗಿ ಭಾರತದಾದ್ಯಂತ ಸುಪ್ತಗಾಮಿನಿಯಾಗಿ ಪಸರಿಸಿದೆಯೇನೋ ಅನಿಸುತ್ತಿದೆ!


ವಿನೋದ:

ಈ ವಾರದ ವಿನೋದವನ್ನು ದೇವೇಗೌಡ ಮತ್ತು ಕುಟುಂಬ ಕಸಿದುಕೊಂಡಿದೆ! :)

No comments:

Post a Comment