ನಿಮ್ಮೂರಿನ ವೈದ್ಯರು ಮತ್ತು ಏಡ್ಸ್

ಇತ್ತೀಚೆಗೆ ನನ್ನ ಗುರುತಿನ ಹಲವಾರು ವ್ಯಕ್ತಿಗಳು ಹೃದಯಾಘಾತಕ್ಕೊ, ರಕ್ತದೊತ್ತಡ ಅಗತ್ಯಕ್ಕಿಂತ ಹೆಚ್ಚು ಕಡಿಮೆಯಾಗಿಯೋ ಕಿರಿಯ ವಯಸ್ಸೆನ್ನಬಹುದಾದಂತಹ ನಲವತ್ತು, ನಲವತ್ತೈದರ ಆಸುಪಾಸಿನಲ್ಲಿ ದಿಢೀರನೆ ಮೃತರಾಗುತ್ತಿರುವ ಸುದ್ದಿಗಳನ್ನು ಅಗಾಗ್ಗೆ ಕೇಳುತ್ತಿದ್ದೇನೆ. ಬಹುಶಃ, ನಿಮಗೆ ತಿಳಿದವರು ಕೆಲವರು ಕೂಡ ಈ ರೀತಿ ಮೃತರಾದ ಸುದ್ದಿಗಳನ್ನು ಕೇಳಿಯೇ ಇರುತ್ತೀರಿ. ಹಾಗೆಯೇ ಯೋಚಿಸಿದಾಗ ಈ ರೀತಿ ಮೃತರಾದವರ ಸುದ್ದಿಗಳನ್ನು ಈ ಮೊದಲೆಲ್ಲಾ ಕೇಳಿದ್ದರೂ ಆ ವ್ಯಕ್ತಿಗಳೆಲ್ಲ ಎಪ್ಪತ್ತು, ಎಂಬತ್ತು ವರ್ಷದ ವ್ಯಕ್ತಿಗಳಾಗಿರುತ್ತಿದ್ದು, ಆಗೊಮ್ಮೆ, ಈಗೊಮ್ಮೆ ಅರವತ್ತರ ಆಸುಪಾಸಿನ ವ್ಯಕ್ತಿಗಳು ತೀರಿಕೊಂಡಿರುತ್ತಿದ್ದರು. ಆದರೆ ಈ ರೀತಿ ಇನ್ನೂ ಯುವಕರೇ ಅನ್ನಬಹುದಾದಂತಹ ವಯೋಮಾನದವರು ಸಾಮಾನ್ಯವಾಗಿ ಅಪಘಾತಗಳಲ್ಲಿ ಸಾಯುತ್ತಿದ್ದವರು, ಈ ರೀತಿ ಎದೆಯೊಡೆದೋ, ಬಿಪಿ ಹೆಚ್ಚು ಕಡಿಮೆಯಾಗಿಯೋ ಸಾಯುತ್ತಿರುವುದನ್ನು ನೋಡಿ ದುಃಖವಾದರೂ ಆಶ್ಚರ್ಯವಾಗುತ್ತಿದೆ.

ಏನಿದು ನಮ್ಮ ಮಧ್ಯವಯಸ್ಕ ಯುವಕರ ಆರೋಗ್ಯ ಈ ರೀತಿ ಅವರನ್ನು ಕೊನೆಗಾಣಿಸುತ್ತಿದೆ?

ಅವರ ಜೀವನ ಶೈಲಿ ಇದಕ್ಕೆ ಕಾರಣವೆಂದುಕೊಂಡರೆ, ನನ್ನ ಕಣ್ಣೆದುರಿಗೇ ನಮ್ಮ ಅಜ್ಜ ದಿನಾಲೂ ಸಿಗರೇಟಿನ ಮೇಲೆ ಸಿಗರೇಟು ಸುಟ್ಟು ಎಪ್ಪತೈದರ ಆಸುಪಾಸಿನಲ್ಲಿ ಗಂಟಲು ಕ್ಯಾನ್ಸರ್ ತಗುಲಿಸಿಕೊಂಡು, ಗುಣಪಡಿಸಿಕೊಂಡು ನಂತರ ಇನ್ನೂ ಐದಾರು ವರ್ಷ ಸುಖವಾಗಿ ಬದುಕಿ ನಂತರ ಸತ್ತ ನಿದರ್ಶನವಿದೆ. ಅಷ್ಟೇ ಅಲ್ಲದೆ ಈ ರೀತಿಯ ಅನೇಕ ಜನರು ಬಹುಕಾಲ ಬದುಕಿ ಬಾಳಿದ್ದನ್ನು ನಾನು ನೋಡಿದ್ದೇನೆ.

ಸರಿ, ಕುಡಿತವೇನಾದರೂ ಈ ರೀತಿ ಮಾಡಿಸುತ್ತದೆಯೇ ಎಂದರೆ ಸಾಮಾನ್ಯ ಕುಡಿತದ ಕುಡುಕರು ಕೂಡ ಬಹುಕಾಲ ಜೀವಿಸಿದ್ದನ್ನು ಕೂಡ ನಾನು ನೋಡಿದ್ದೇನೆ. ಅದರಲ್ಲೂ ನಾನು ಚಿಕ್ಕವನಿದ್ದಾಗ ನಮ್ಮ ಮನೆಯ ಬಳಿ ಚಪ್ಪಲಿ ಹೊಲೆಯುತ್ತಿದ್ದವನೊಬ್ಬ ದಿನಾಲೂ ಕಂಠ ಮಟ್ಟ ಕುಡಿದು ’ಅಪ್ಪನು ನಮ್ಮ ಮಾದರ ಚೆನ್ನಯ್ಯಾ’ ಎಂದೋ, ’ಸೆಟ್ಟಿಯೆಂಬೆನೆ ಸಿರಿಯಾಳನಾ, ಡೋಹರನೆಂಬೆನೆ ಕಕ್ಕಯ್ಯನಾ, ನಾನು ಹಾರುವನೆಂದೆಡೆ ನಗುವನಯ್ಯಾ ಕೂಡಲಸಂಗಯ್ಯ’ ಎಂದೋ ಬಸವಣ್ಣನ ವಚನಗಳನ್ನು ಹಾಡುತ್ತ ಒಮ್ಮೊಮ್ಮೆ ತನ್ನ ಮೂಡ್ ಬದಲಾದಾಗ ಅಥವಾ ಆ ದಿನ ಒಳ್ಳೆ ವ್ಯಾಪಾರವಾಗದೆಲೆನೋ ಏನೋ ’ಬರಿಗಾಲಲಿ ನಡೆವವನ ಕರೆದು ಕೆರದಲಿ ಹೊಡೆ’ ಎಂದು ಸರ್ವಜ್ಞನಾಗಿ ಬಿಡುತ್ತಿದ್ದ. ನನ್ನ ಶಾಲಾ ದಿನಗಳ ಆ ಕಾಲದಲ್ಲಿ ನಾನು ಮತ್ತು ನನ್ನ ತಮ್ಮನೂ ಚಿಕ್ಕ ಚಿಕ್ಕ ಪದ್ಯಗಳನ್ನೇ ನೆನಪಿಟ್ಟುಕೊಳ್ಳಲು ಹೆಣಗುತ್ತಿದ್ದರೆ ಇವನ ಈ ತಪ್ಪಿಲ್ಲದ ವಚನ ಗಾಯನವು ನಮ್ಮಲ್ಲಿ ಅವನ ಬಗ್ಗೆ ಅತ್ಯಂತ ಗೌರವ ಭಾವನೆಯನ್ನು ಮೂಡಿಸಿದ್ದಿತು. ಬಸವಣ್ಣ, ಸರ್ವಜ್ಞರ ಕಾಲವನ್ನು ಕಂಡಿರದ ನಮಗೆ ಇವನೇ ಅವರಿಂದ ಪ್ರಭಾವಿತರಾಗಿ ಅಂದಿನ ಜನಸಾಮಾನ್ಯರು ಹೇಗೆ ಬಾಳುತ್ತಿದ್ದರೆಂಬುದರ ಜ್ವಲಂತ ನಿದರ್ಶನವಾಗಿ ಅಂದು ಕಾಣುತ್ತಿದ್ದನು. ಕ್ರಮೇಣ ನಮ್ಮ ಬುದ್ಧಿ ಬೆಳೆದಂತೆ ನಾವು ತಿಳಿದುಕೊಂಡ ಸಂಗತಿಯೇನೆಂದರೆ ಇವನು ತಾನು ಚಪ್ಪಲಿ ಹೊಲೆಯುತ್ತಿದ್ದ ಸ್ಥಳದ ಆಚೆ ಬದಿಯ ಮಠದಲ್ಲಿ ವಾಸವಿದ್ದ, ಅತ್ಯಂತ ಮಡಿವಂತಿಕೆಯನ್ನು ತೋರುತ್ತಿದ್ದ ನಮ್ಮೂರ ಶಾಸ್ತ್ರಿಗಳನ್ನು ಛೇಡಿಸಲು ಆ ಎಲ್ಲಾ ವಚನಗಳನ್ನು ಕಲಿತು ಹಾಡುತ್ತಿದ್ದನೆಂಬುದು! ಡಾ: ಬಂಜಗೆರೆ ಜಯಪ್ರಕಾಶರು ಇತ್ತೀಚೆಗೆ ಮಾಡಿದ ’ಪಂಡಿತ ಕೀಟಲೆ’ಯನ್ನು, ಈ ಪಾಮರ ಅಂದೇ ಪ್ರಯೋಗಿಸಿದ್ದ! ಅವನು ಇನ್ನೂ ಅದೇ ರೀತಿ ಹೊಟ್ಟೆ ತುಂಬ ಕುಡಿಯುತ್ತ ಇತ್ತೀಚಿನವರೆಗೆ ಸುಮಾರು ಅವನ ಎಪ್ಪತ್ತೈದರ ವಯಸ್ಸಿನವರೆಗೆ ಬದುಕಿದ್ದುದನ್ನು ನೋಡಿದ್ದೇನೆ.

ಒಟ್ಟಾರೆ ಮೂಗಿನಿಂದಲೂ ಬಾಯಿಯಿಂದಲೂ ಕುಡಿಯುವ ಚಟಗಳು (ಧೂಮಪಾನ, ಮದ್ಯಪಾನ) ಅಷ್ಟಾಗಿ ಜನರನ್ನು ಚಿಕ್ಕ ವಯಸ್ಸಿನಲ್ಲಿಯೇ ಸಾಯಿಸುವುದಿಲ್ಲವೆಂಬುದು ಗಮನಾರ್ಹ. ಆದರೆ ಇತ್ತೀಚೆಗೆ ಸತ್ತವರಲ್ಲಿ ಅನೇಕರು ಅಷ್ಟೆಲ್ಲಾ ಚಟಗಳಿಲ್ಲದವರೂ ಇದ್ದಾರೆ.

ನನ್ನ ಪ್ರಕಾರ ಭಾರತದ ಜನಸಾಮಾನ್ಯರ ಈ ರೀತಿಯ ದಿಢೀರ್ ಸಾವುಗಳಿಗೆ ಒಂದು ಪ್ರಬಲ ಕಾರಣವಿದೆ!

ನೀವುಗಳು ಗಮನಿಸಿದ್ದೀರೋ ಇಲ್ಲವೋ ಭಾರತದಲ್ಲಿನ ಅನೇಕ ವೈದ್ಯರುಗಳು ಕ್ಷಿಪ್ರ ಹೆಸರುವಾಸಿಯಾಗಲೋ ಅಥವಾ ತಾವು ವೈದ್ಯರಾಗಲು ತೊಡಗಿಸಿದ ಡೊನೇಷನ್ ಬಂಡವಾಳವನ್ನು ತ್ವರಿತವಾಗಿ ಹಿಂದಕ್ಕೆ ಪಡೆಯಲೋ ಒಂದು ಕೆಟ್ಟ ವೈದ್ಯಕೀಯ ಸಂಪ್ರದಾಯವನ್ನು ನೆಟ್ಟು ಹೆಮ್ಮರವಾಗಿ ಬೆಳೆಸಿದ್ದಾರೆ. ಇನ್ಫೆಕ್ಷನ್ / ವೈರಲ್ ಇರಲಿ, ಇಲ್ಲದಿರಲಿ ಸಾಮಾನ್ಯ ಜ್ವರ, ನೆಗಡಿಗಳಿಗೂ ಆಂಟಿಬಯಾಟಿಕ್ ಗಳನ್ನು ಕೊಡುತ್ತಾರೆ. ಇದನ್ನು ಪ್ರಶ್ನಿಸಿದಾಗ ನನ್ನ ವೈದ್ಯ ಮಿತ್ರರೋರ್ವರು ’ಗೆಳೆಯ, ಇಲ್ಲಿ ಬರುವವರಿಗೆ ಜ್ವರ ಈ ಕೂಡಲೇ ವಾಸಿಯಾಗಿಬಿಡಬೇಕು. ನಾನು ಇವರಿಗೆ ಸಾಮಾನ್ಯ ಜ್ವರದ ಮಾತ್ರೆಗಳನ್ನು ಕೊಟ್ಟು, ಅವರ ಜ್ವರ ಮೂರು ದಿನದ ನಂತರ ವಾಸಿಯಾದರೆ, ಈ ರೋಗಿ ಮತ್ತೆಂದೂ ನನ್ನ ಬಳಿಗೆ ಬರಲಾರ. ಹತ್ತಿರದಲ್ಲೇ ಇರುವ ಇನ್ನೊಬ್ಬ ಡಾಕ್ಟರನ ಬಳಿ ಹೋಗಿ ಅವನು ಕೊಡುವ ಆಂಟಿಬಯಾಟಿಕ್ ನುಂಗಿ ಮರುದಿನವೇ ಗುಣವಾಗಿಬಿಡುತ್ತಾನೆ. ಅದಲ್ಲದೇ ನನ್ನ ಬಳಿ ಹೋದರೆ ಮೂರು ದಿನವಾದರೂ ಸುಖವಿಲ್ಲವೆಂದು ಅಪಪ್ರಚಾರ ಮಾಡುತ್ತಾನೆ. ಅವನಿಗೆ ಆಂಟಿಬಯಾಟಿಕ್ ಬಗ್ಗೆ ನಾನು ಗಂಟೆಗಟ್ಟಲೆ ಕೊರೆದರೂ ಅದನ್ನು ಅವನು ಪರಿಗಣಿಸುವುದಿಲ್ಲ. ಏಕೆಂದರೆ ಅವನು ಮರುದಿನ ತನ್ನ ಕೆಲಸವನ್ನೋ, ವ್ಯಾಪಾರವನ್ನೋ ತತ್ಕಾಲವಾಗಿ ನಿಲ್ಲಿಸಲು ಸಿದ್ಧನಿರುವುದಿಲ್ಲ. ಒಟ್ಟಿನಲ್ಲಿ ಅವನಿಗೆ ಬೇಕಾದದ್ದು ತನ್ನ ಜ್ವರ ಮರುದಿನ ವಾಸಿಯಾಗುವುದೋ ಇಲ್ಲವೋ, ಅಷ್ಟೆ" ಎಂದರು. ಅದಲ್ಲದೇ, "ಇಲ್ಲಿ ನಾವು ಕೇವಲ ವೈದ್ಯರಾಗಿ ಕೆಲಸ ಮಾಡದೆ ನಮ್ಮ ರೋಗಿಗಳ ಕಷ್ಟ, ಸುಖ, ಅವರಿರುವ ಪರಿಸ್ಥಿತಿ, ಅನಿವಾರ್ಯತೆ, ಆರ್ಥಿಕ ಮಟ್ಟ ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಅವರ ಕೌನ್ಸೆಲರ್ ಆಗಿ ವರ್ತಿಸುತ್ತೇವೆ. ಒಮ್ಮೊಮ್ಮೆ ನಮ್ಮ ರೋಗಿಯೋರ್ವಳ ಮಗು ಹಟ ಬಿದ್ದು ಅಳುತ್ತಿದ್ದರೆ ಅದಕ್ಕೆ ಸೂಜಿ ತೋರಿಸಿ ಹೆದರಿಸುವ ಬೆದರುಬೊಂಬೆಗಳಾಗಿಯೂ ಕೆಲಸ ಮಾಡಬೇಕಾಗುತ್ತದೆ" ಎಂದು ನಕ್ಕರು.

ಅಷ್ಟೇ ಅಲ್ಲದೆ ತಾವು ಮೆಡಿಕಲ್ ಓದಲು ಪಟ್ಟ ಕಷ್ಟ, ಖರ್ಚು-ವೆಚ್ಚ, ಅದಲ್ಲದೇ ಪ್ರತಿಯೊಂದು ಗಲ್ಲಿಗಲ್ಲಿಗಳಲ್ಲಿಯೂ ನಾಯಿಕೊಡೆಯಂತಿರುವ ಕ್ಲಿನಿಕ್ಕುಗಳು, ವೈದ್ಯರುಗಳಲ್ಲಿನ ಪೈಪೋಟಿ, ಇತ್ತ ಜನಸಾಮಾನ್ಯರ ಕಷ್ಟ, ದುಸ್ತರ ಜೀವನ ಕತೆಗಳನ್ನೆಲ್ಲ ನನ್ನ ಮುಂದೆ ತೋಡಿಕೊಂಡು ಭಾರತದಂತಹ ಬಡದೇಶದ ನಿತ್ಯ ಹೋರ್‍ಆಟದ ಜನಜೀವನದಲ್ಲಿ ಆ ಕ್ಷಣಕ್ಕೆ ಜನಸಾಮಾನ್ಯರ ಕಾಯಿಲೆಯನ್ನು ಗುಣಪಡಿಸಿ ಆ ರೋಗಿಗಳ ಸಂಸಾರ ರಥ ಸಾಂಗವಾಗಿ ಸಾಗಲು ಈ ಆಂಟಿಬಯಾಟಿಕ್ ಥೆರಪಿಯ ಕೀಲೆಣ್ಣೆ ಅನಿವಾರ್ಯವೆಂದು ಫಿಲಾಸಾಫಿಕಲ್ ಆಗಿ ನನ್ನನ್ನೂ ಕೂಡ ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳುವಂತೆ ಮಾಡಿದರು. ಅದಲ್ಲದೇ ಈ ರೀತಿಯ ಜನಸಾಮಾನ್ಯನು ನಲ್ವತ್ತಕ್ಕೆ ಸತ್ತರೇನು, ಎಂಬತ್ತಕ್ಕೆ ಸತ್ತರೇನು? ಹೋರಾಡಿದಷ್ಟೂ ಸೋಲುತ್ತಿರುವ ಮತ್ತು ಸೋಲಲೇಬೇಕಾದ ಅನಿವಾರ್ಯತೆಯಿರುವ ಸಾಮಾನ್ಯ ಭಾರತೀಯನ ಜೀವನ ಸಂಘರ್ಷದಲ್ಲಿ, ದುರಂತಗಳ ಸರಮಾಲೆಗಳೇ ಅವನನ್ನು ಕಾಯುತ್ತಿರುವಾಗ, ಒಂದು ರೀತಿಯಲ್ಲಿ ಅವರನ್ನು ಹೆಚ್ಚಿಗೆ ಕಾಯಿಸದೇ ನಲ್ವತ್ತಕ್ಕೆ ಈ ದುರಂತಗಳಿಂದ ಮುಕ್ತಿ ಕೊಡುತ್ತಿರುವ ಈ ಪದ್ದತಿ ಪ್ರಸ್ತುತ ಭಾರತಕ್ಕೆ ಅತೀ ಅನಿವಾರ್ಯವೆಂದರು. ಅವರ ಪ್ರಕಾರ ಈ ಎಲ್ಲ ಪಿಡುಗಿಗೆ ಭಾರತದ ಭ್ರಷ್ಟ ವ್ಯವಸ್ಥೆ, ಪೊಳ್ಳು ಪ್ರಜಾಪ್ರಭುತ್ವ, ಅತೀವ ಸ್ವಾತಂತ್ರ್ಯ ಇವುಗಳೇ ಇದೆಲ್ಲದರ ಮೂಲವೆಂದೂ ’ಆಲ್ ರೋಡ್ಸ್ ಲೀಡ್ ಟು ರೋಮ್’ ಎಂದರು.

ಇನ್ನು ಕೆಲವು ವಿದ್ಯಾವಂತರು ಸ್ವಲ್ಪದರಲ್ಲೇ ತಾವು ಡಾಕ್ಟರರಾಗುವುದು ತಪ್ಪಿತೆಂದೋ ಅಥವಾ ’ಅವನೇನು ಹೇಳುವುದು ಇದು ನನ್ನ ದೇಹ’ವೆಂದೋ ತಾವೇ ಡಾಕ್ಟರರಾಗಿಬಿಡುತ್ತಾರೆ. ತಮಗೆ ಜ್ವರವೋ, ಕೆಮ್ಮೋ ಬರುವ ಅನಿಸಿಕೆಯಿದ್ದರೂ ಸಾಕು, ನೇರ ಔಷಧಿ ಅಂಗಡಿಗೆ ಲಗ್ಗೆ ಇಟ್ಟು ’ಟೆಟ್ರಾಸೈಕ್ಲಿನ್’, ’ಅಮಾಕ್ಸಿಸಿಲಿನ್’, ’ಆಂಪಿಸಿಲಿನ್’ ಬೇಕೆನ್ನುತ್ತಾರೆ. ಆ ಅಂಗಡಿಯವನು ಕೂಡ ’ಆ ಔಷಧಿಯಿಲ್ಲ, ಅದೇ ತರಹದ ಇನ್ನೊಂದಿದೆ’ ಎಂದು ಇನ್ನೆಂತದೋ ’ಲಿನ್’ ಎಂದು ಕೊನೆಗೊಳ್ಳುವ ಔಷಧಿ ಕೊಟ್ಟು ಕಳುಹಿಸುತ್ತಾನೆ. ಅಥವಾ ಆ ಆಂಟಿಬಯಾಟಿಕ್ ಅಷ್ಟೊಂದು ಪರಿಣಾಮಕಾರಿಯಲ್ಲ, ನೀವು ಈ ’ಸಲ್ಫಾ ಡ್ರಗ್’ ಎಂಬ ’ಸಿನ್’ ಎಂದು ಕೊನೆಗೊಳ್ಳುವ ಹೆಸರಿನ ಇನ್ನೊಂದು ಬಗೆಯ ಆಂಟಿಬಯಾಟಿಕ್ ತೆಗೆದುಕೊಳ್ಳಿರೆಂದು ತನ್ನ ಬುದ್ದಿಮತ್ತೆಯನ್ನು ಪ್ರದರ್ಶಿಸುತ್ತಾನೆ. ಇಷ್ಟೊಂದು ಸುಲಭವಾಗಿ ಸ್ವರ್ಗಕ್ಕೆ ವೀಸಾ ಸಿಕ್ಕುತ್ತಿರುವಾಗ ಯಾರಪ್ಪಣೆ ಬೇಕು ಇಮಾನವೇರಲು?

ಕೂಲಂಕುಷವಾಗಿ ನೋಡಿದರೆ, ಆಂಟಿಬಯಾಟಿಕ್ ಗಳು ವೈದ್ಯಪ್ರಪಂಚದ ಅದ್ಭುತವೆಂದಾದರೂ ಅದರ ಅತೀ ಬಳಕೆ ಆರೋಗ್ಯಕ್ಕೆ ಹಾನಿಕರ. ಅದಲ್ಲದೆ ಇವುಗಳು ಉತ್ತಮ ಬ್ಯಾಕ್ಟಿರಿಯಾಗಳು, ಕೆಟ್ಟ ಬ್ಯಾಕ್ಟಿರಿಯಾಗಳೆಂದು ಭಿನ್ನವಿಲ್ಲದೇ ಎಲ್ಲಾ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತವೆ. ಇದರಿಂದ ಉತ್ತಮ ಬ್ಯಾಕ್ಟಿರಿಯಾಗಳು ನಾಶವಾಗಿ ದೇಹದ ಸಹಜ ರೋಗನಿರೋಧಕ ಶಕ್ತಿ ಕುಗ್ಗುತ್ತ ಇಲ್ಲವಾಗಿಬಿಡುತ್ತದೆ. ಇತ್ತೀಚಿನ ಇಪ್ಪತೈದು ಮೂವತ್ತು ವರ್ಷಗಳಿಂದ ಈ ಪದ್ದತಿ ಬೆಳೆದು ಬಂದಿದ್ದು ಅದರ ಕಾರಣವಾಗಿಯೇ ಈ ರೀತಿಯ ಅಸಹಜ ವಯಸ್ಸಿನಲ್ಲಿ ಜನರು ಸಾಯುತ್ತಿದ್ದಾರೆಂದು ನನ್ನ ಬಲವಾದ ಅನಿಸಿಕೆ.

ಈ ಅನಿಸಿಕೆಯನ್ನು ಪರಿಶೀಲಿಸುತ್ತ ಇವುಗಳ ಪರಿಣಾಮದ ಮಾಹಿತಿಯನ್ನು ಶೋಧಿಸಿದಾಗ ಅಘಾತಕಾರೀ ಸಂಶೋಧನಾ ಪ್ರಬಂಧವೊಂದನ್ನು ಓದಿದೆನು. ಆ ಪ್ರಬಂಧದ ಪ್ರಕಾರ, ಅತಿ ಹೆಚ್ಚು ಆಂಟಿಬಯಾಟಿಕ್ ಸೇವಿಸುವ ಅಭ್ಯಾಸವಿರುವವರು ಏಡ್ಸ್ ಪರೀಕ್ಷೆಗೊಳಗಾದಾಗ ಏಡ್ಸ್ ಪಾಸಿಟಿವ್ ಆಗಿರುತ್ತಾರೆಂದೂ ಹೆಚ್.ಐ.ವಿ. ಇಲ್ಲದೆಲೆಯೂ ಏಡ್ಸ್ ಇರುತ್ತದೆಂಬುದೇ ಆ ಪ್ರಬಂಧದ ಸಾರಾಂಶವಾಗಿತ್ತು!

ಒಟ್ಟಾರೆ ಏಡ್ಸ್ (ಅಕ್ವೈರಡ್ ಇಮ್ಮ್ಯೂನ್ ಡಿಫಿಷಿಯನ್ಸಿ ಸಿಂಡ್ರೋಮ್) ನ ಅರ್ಥ (ಎಲ್ಲಾ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡು ದೇಹವು ಸರ್ವ ರೋಗಗಳಿಗೆ ’ತೆರೆದಿದೆ ಮನೆ ಓ ಬಾ ಅತಿಥಿ’ ಎಂದು ಆಹ್ವಾನವೀಯುವುದು) ಮತ್ತು ಆಂಟಿಬಯಾಟಿಕ್ ಅತಿ ಸೇವನೆಯ ದುಷ್ಪರಿಣಾಮಗಳು ತಾಳೆಯಾಗುವುದರಿಂದ ನನಗೆ ಈ ಭಾರತದ ವೈದ್ಯರುಗಳು ಪ್ರತಿಯೊಂದು ಕಾಯಿಲೆಗಳಿಗೂ ಆಂಟಿಬಯಾಟಿಕ್ ಕೊಡುವ ಪದ್ದತಿ / ಅನಿವಾರ್ಯತೆ, ಭಾರತದ ಏಡ್ಸ್ ರೋಗಿಗಳ ಒಟ್ಟು ಸಂಖ್ಯೆಗೆ ಕೆಲವಾರು ಸಂಖ್ಯೆಗಳನ್ನಾದರೂ ಸೇರಿಸಿದೆಯೇನೋ ಎನ್ನುವ ಹೊಸ ಗುಮಾನಿ ಶುರುವಾಗಿದೆ!

ಪರಿಸ್ಥಿತಿ ಹೀಗಿರುವಾಗ ಭಾರತದ ಕೆಲವು ಪ್ರಚಾರಪ್ರಿಯ ವೈದ್ಯರುಗಳು ತಮ್ಮದೇ ವೃತ್ತಿಯ ಈ ಪಿಡುಗಿನ ವಿರುದ್ಧ ದಿವ್ಯ ಮೌನವನ್ನು ತಾಳಿ, ಮತ್ತೊಂದೆಡೆ ಬೀದಿ ಮಕ್ಕಳ ಕಣ್ಣು ಪರೀಕ್ಷೆ, ಪಾಕಿಸ್ತಾನದ ಬಾಲೆಯ ಹೃದಯ ಶಸ್ತ್ರಚಿಕಿತ್ಸೆ ಎಂದೆಲ್ಲ ಪ್ರಚಾರಿಸಿಕೊಂಡು ದಿನಪತ್ರಿಕೆಗಳಲ್ಲಿ ಫೋಟೋ ಛಾಪಿಸಿಕೊಳ್ಳುತ್ತಾರೆ. ಇತ್ತೀಚೆಗಂತೂ ಚತುರ್ಭುಜ ಬಾಲೆಯ ಅಧಿಕ ಕೈಗಳನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆಗೆ ದೊರಕಿದ ಭಾರೀ ಪಬ್ಲಿಸಿಟಿಯನ್ನು ಗಮನಿಸಿದರೆ, ಇವರುಗಳು ಈ ರೀತಿಯ ಪ್ರಚಾರಕ್ಕೆ ಬೇಕಾದ ರೋಗಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೇನೋ ಎನ್ನಿಸುತ್ತದೆ! ಸಾರ್ವಜನಿಕ ಸೇವೆಯ ತೀವ್ರ ತೀಟೆಯಿದ್ದರೆ ಯಾವುದೇ ಪ್ರಚಾರ ಬಯಸದೆ ಬಿಳಿಗಿರಿ ರಂಗನ ಬೆಟ್ಟದ ಸೋಲಿಗರ ಸೇವೆ ಮಾಡುತ್ತಿರುವ ಡಾ: ಸುದರ್ಶನ್ ರಂತೆ ತಣ್ಣಗೆ ಸೇವೆ ಮಾಡಬೇಕಲ್ಲವೆ?

ಇದೆಲ್ಲವನ್ನು ನೋಡಿ ಈ ಸಂದರ್ಭಕ್ಕೆ ಅನ್ವಯವಾಗುವಂತೆ ನಾನು ಬಹುವಾಗಿ ಮೆಚ್ಚುವ ಅಲ್ಲಮನ ವಚನವೊಂದು ಜ್ಞಾಪಕವಾಗುತ್ತಿದೆ, ’ಅರುಹ ಪೂಜಿಸಲೆಂದು ಕುರುಹು ಕೊಟ್ಟೆಡೆ, ಅರುಹ ಮರೆತು ಕುರುಹ ಪೂಜಿಸುವ ಹೆಡ್ಡರಾ ನೋಡಾ ಗುಹೇಶ್ವರಾ!’

ಅಣಕ:

ನನ್ನ ಕಾಲೇಜಿನ ದಿನಗಳಲ್ಲಿ ನನ್ನ ಆತ್ಮೀಯ ಮಿತ್ರನೋರ್ವನು ಮುಸ್ಲಿಂ ಹಾಸ್ಟೆಲ್ಲಿನಲ್ಲಿದ್ದನು. ತಾನು ತಮ್ಮ ಹಾಸ್ಟೆಲ್ಲಿಗೆ ಬರುವ ಜೂನಿಯರ್ ವಿದ್ಯಾರ್ಥಿಗಳಿಗೆ ಸ್ನೇಹಮಯ, ಕ್ರಿಯಾಶೀಲ, ತಮಾಷೆಯೂ ಆಗಿರುವ ರೀತಿಯಲ್ಲಿ ರ್‍ಯಾಗಿಂಗ್ ಮಾಡುವ ವಿಧವೇನಾದರೂ ಇದೆಯೇ ಎಂದು ಕೇಳಿದ್ದನು. ಅದಕ್ಕೆ ನಾನು ಎಲ್ಲರಿಗೂ ಒಂದೊಂದು ’ನಿರ್‍ಓಧ್’ ಪ್ಯಾಕ್ ಕೊಟ್ಟು ಅದರ ಮೇಲೆ ಅವರವರ ಭಾವಚಿತ್ರ ಲಗತ್ತಿಸಿ, ’ಐಡೆಂಟಿಟಿ ಕಾರ್ಡ್’ ಮಾದರಿಯಲ್ಲಿ ತಮ್ಮ ಜೇಬಿನಲ್ಲಿ ಸದಾ ಇಟ್ಟುಕೊಂಡು, ಕೇಳಿದಾಗ ತೋರುವಂತೆ ಹೇಳೆಂದೆನು. ಇದರಿಂದ ಉತ್ಸಾಹಿತಗೊಂಡು ಅವನು, ಅದನ್ನು ತಮ್ಮ ಹಾಸ್ಟೆಲ್ಲಿನಲ್ಲಿ ಅಳವಡಿಸಿದಾಗ ಎಲ್ಲರೂ ಅದನ್ನು ಮೆಚ್ಚಿ ಖುಷಿಯಿಂದ ಪಾಲ್ಗೊಂಡರೂ ಓರ್ವನು ಹಾಸ್ಟೆಲ್ ವಾರ್ಡನ್ ರಿಗೆ ಕಂಪ್ಲೇಂಟ್ ಕೊಟ್ಟನು. ಸರಿ, ವಾರ್ಡನ್ ಇವನನ್ನು ಕರೆದು, ಆ ಐಡೆಂಟಿಟಿ ಕಾರ್ಡ್ ’ನಿರೋಧ್’ ಅನ್ನು ಯಾವುದೋ ಅಸಹ್ಯ ವಸ್ತುವೆಂಬಂತೆ ಎತ್ತಿ ಹಿಡಿದು, ಆದರೂ ನಿಲ್ಲದ ಸಹಜ ಕುತೂಹಲದಿಂದ ಅದನ್ನು ತೆರೆದು ಪರಿಶೀಲಿಸುತ್ತ ’ಇದೇ ಫಸ್ಟ್ ಟೈಮ್ ನಾನು ಕಾಂಡೋಂ ನೋಡುತ್ತಿರುವುದು! ಅರವತ್ತರ ಆಸುಪಾಸಿನಲ್ಲಿರುವ ನಾನೇ ಇದುವರೆಗೂ ಇಂತಹದ್ದನ್ನೂ ನೋಡಿಲ್ಲ. ನಿಮಗ್ಯಾಕೆ ಈ ರೀತಿಯ ಹುಡುಗಾಟ?’ ವೆಂದಾಗ, ಅವರ ಮಾತುಗಳಿಂದ ಉಕ್ಕಿ ಬರುತ್ತಿದ್ದ ನಗುವನ್ನು ತಡೆದು ಗಂಭೀರವದನನಾಗಿ ನನ್ನ ಸ್ನೇಹಿತ ’ಈ ಕಾಲದಲ್ಲಿ ಯಾವುದಕ್ಕೂ ಇದರ ಬಗ್ಗೆ ತಿಳಿದುಕೊಂಡಿದ್ದರೆ ಉತ್ತಮವೆಂದೂ, ಕೆಲವೊಂದು ಪರಿಸ್ಥಿತಿಗಳಲ್ಲಿ ಇದು ಇರದಿದ್ದರೆ ’ಏಡ್ಸ್’ ನಂತಹ ಭೀಕರ ರೋಗ ಬರುತ್ತದೆಂದೂ, ’ಏಡ್ಸ್’ ಬಗ್ಗೆ ಒಂದು ಭಾಷಣವನ್ನು ಬಿಗಿದು, ಈ ರೀತಿಯ ವಿಷಯವನ್ನು ನಾವಲ್ಲದೇ ಪೋಷಕರು ಹೇಳಲಾರರೆಂದೂ, ಯಾವುದಕ್ಕೂ ಈ ರೀತಿಯ ಶಿಕ್ಷಣವಿರಲೆಂದು ತಾನು ಆ ಪದ್ದತಿಯನ್ನು ಅಳವಡಿಸಿದೆನೆಂದು ಸಮರ್ಥಿಸಿಕೊಂಡು ಬಚಾವಾದನು. ಅದಾಗಲೇ ನಮ್ಮ ಕ್ಲಾಸ್ ಮೇಟ್ ಕೂಡ ಆಗಿದ್ದ ಅವರ ಮಗಳಿಂದ ನಮ್ಮ ಸ್ನೇಹಿತನ ಬಗ್ಗೆ ತಿಳಿದುಕೊಂಡಿದ್ದ ವಾರ್ಡನ್ನರು ಅತ್ಯಂತ ಮೃದು ಸ್ವಭಾವದ, ಉತ್ತಮ ಸಚ್ಚಾರಿತ್ರ್ಯದ ವಿದ್ಯಾರ್ಥಿಯೆಂದು ಹೆಸರು ಗಳಿಸಿದ್ದ ನನ್ನ ಸ್ನೇಹಿತನ ಮಾತನ್ನು ನಂಬಿ, ’ಬೇಕಿರಬಹುದೇನೋ ಈ ರೀತಿಯ ನವಯುವಕರ ಶಿಕ್ಷಣ’ ವೆಂದು ವಿಷಯವನ್ನು ಅಲ್ಲಿಗೇ ಬಿಟ್ಟರು.

2 comments:

  1. >>>>ಈ ಅನಿಸಿಕೆಯನ್ನು ಪರಿಶೀಲಿಸುತ್ತ ಇವುಗಳ ಪರಿಣಾಮದ ಮಾಹಿತಿಯನ್ನು ಶೋಧಿಸಿದಾಗ ಅಘಾತಕಾರೀ ಸಂಶೋಧನಾ ಪ್ರಬಂಧವೊಂದನ್ನು ಓದಿದೆನು. ಆ ಪ್ರಬಂಧದ ಪ್ರಕಾರ, ಅತಿ ಹೆಚ್ಚು ಆಂಟಿಬಯಾಟಿಕ್ ಸೇವಿಸುವ ಅಭ್ಯಾಸವಿರುವವರು ಏಡ್ಸ್ ಪರೀಕ್ಷೆಗೊಳಗಾದಾಗ ಏಡ್ಸ್ ಪಾಸಿಟಿವ್ ಆಗಿರುತ್ತಾರೆಂದೂ ಹೆಚ್.ಐ.ವಿ. ಇಲ್ಲದೆಲೆಯೂ ಏಡ್ಸ್ ಇರುತ್ತದೆಂಬುದೇ ಆ ಪ್ರಬಂಧದ ಸಾರಾಂಶವಾಗಿತ್ತು!>>>>>

    ಆ ಸಂಶೋಧನಾ ಪ್ರಬಂಧದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಿರಾ?
    ನನ್ನ ಮೇಲ್ ಐ.ಡಿ : supreeth.student@gmail.com

    ReplyDelete
  2. Dear Sir

    I loved your latest post on Matadipathigalu.

    This is in response to your lekhana ‘ nimmoorina vaidyaru matthu AIDS’.

    Twenty years back I read or heard this, while traveling around the world with a bicycle. This could be in library of Environment Liaison Centre, Nairobi in Kenya.

    Constant bombarding the tissues with radiation creates a symptoms similar to AIDS. This could the outcome of Nuclear Research.

    You know those Pacific Islanders story.

    Please let me know your opinion on this.

    I am a farmer near Mangalore.

    Regards


    Govind

    Bhat59@gmail.com

    ReplyDelete