ಕನ್ನಡದ ಎಲ್ಲ ದಡ್ಡ-ದಡ್ಡಿಯರ ಬುದ್ಧಿಗೆ ಗ್ರಾಸವಾಗುವಂತಹ ಕರಿಬೇವಿನ ಕಹಿ ಮೇವು (Kannada Thoughts from Lincoln's Land!)
ತೇಜಸ್ವಿ ಮತ್ತವರ ಇನ್ಫ್ಲೂಯೆನ್ಸೂ!
ನಾನು ಈ ಹಿಂದೆ ತಿಳಿಸಿದಂತೆ ತೇಜಸ್ವಿಯವರ ಪರಿಸರದ ಕತೆ ಮತ್ತಿತರೆ ಕಥೆಗಳ ಇಂಗ್ಲಿಷ್ ಅನುವಾದ ಈಗಷ್ಟೇ ಅಮೇಜಾನ್.ಕಾಮ್ ನಲ್ಲಿ "By the Corner of Indian Western Ghats" ಆಗಿ ಪ್ರಕಟಗೊಂಡಿದೆ.
ನಿಮ್ಮೆಲ್ಲರಂತೆಯೇ ನಾನು ಕೂಡಾ ಕೇವಲ ಒಬ್ಬ ಓದುಗನಾಗಿ ಕನ್ನಡ ಸಾಹಿತ್ಯಾಸಕ್ತನಾಗಿದ್ದೆನು. ನಮ್ಮ ಕನ್ನಡದ ಇತ್ತೀಚಿನ ಅಂಕಣಕಾರರ/ ಪತ್ರಕರ್ತರ ಸೋಗು, ಲಂಪಟತನಗಳ ಬರವಣಿಗೆಯಿಂದ ಬೇಸತ್ತು ನಾನೆ ಏಕೆ ಬರೆಯಬಾರದೆಂದು ಆಲೋಚಿಸಿ ಆರಂಭಿಸಿದ್ದುದು ಈ ಲೇಖನಮಾಲೆಯು. ಹಾಗೆಯೇ ಸದಾ ಕನ್ನಡ ಸಾಹಿತ್ಯದ ಮೇರುತನವನ್ನ ವಿಶ್ವಾದ್ಯಂತವಾಗಿ ಬಿಡಿ, ಭಾರತದಾದ್ಯಂತವೂ ಕೂಡ ಪಸರಿಸಲು ಸಾಧ್ಯವಾಗುವಂತಹ ಸಮರ್ಥ ಅನುವಾದಗಳ ಕೊರತೆ ಇದೆಯೇನೋ ಎನ್ನುವ ಸಂಶಯ ನನ್ನನ್ನು ಕಾಡುತ್ತಿತ್ತು. ಏಕೆಂದರೆ ಅಷ್ಟೊಂದು ಜ್ಞಾನಪೀಠ ಪ್ರಶಸ್ತಿಗಳನ್ನು ನಾವು ಗುಡ್ಡೆ ಹಾಕಿದ್ದರೂ ಕೂಡ ಇಂದು ಕನ್ನಡಕ್ಕಾಗಿ ಹೋರಾಡಬೇಕಾದಂತಹ ಪರಿಸ್ಥಿತಿ ನಮ್ಮ ರಾಜ್ಯದಲ್ಲಿಯೇ ಸೃಷ್ಟಿಯಾಗಿದೆ. ನಾನೊಬ್ಬ ಇಂಗ್ಲಿಷ್ ಪಂಡಿತನಾಗಲೀ, ಕನ್ನಡ ಪಂಡಿತನಾಗಲೀ ಅಲ್ಲದಿದ್ದರೂ, ಕನ್ನಡ ಕೃತಿಗಳ ಇಂಗ್ಲಿಷ್ ಅನುವಾದಗಳನ್ನು ಓದಿದಾಗ ನನಗೆ, ಕನ್ನಡ ಆಡುಭಾಷೆಯಲ್ಲಿರುತ್ತಿದ್ದ ನಮ್ಮ ಅನೇಕ ಕಾದಂಬರಿಗಳನ್ನು ಬಹುಪಾಲು ಅನುವಾದಕರು ಇಂಗ್ಲಿಷ್ ಗೆ ಅನುವಾದಿಸುವಾಗ ಗ್ರಾಂಥಿಕವಾಗಿಸಿದ್ದಾರೆನಿಸುತ್ತಿತ್ತು. ಭಾಷಾಂತರಿಸುವಾಗ ಮೂಲಬರಹಗಾರರ ಅನಿಸಿಕೆ, ಉದ್ದೇಶ, ಭಾವನೆಗಳನ್ನು ಯಥಾವತ್ತಾಗಿ ಸೃಷ್ಟಿಸಬೇಕಾದರೆ ನಮಗೆ ಇಂಗ್ಲಿಷ್ ಅನ್ನೂ ಕೂಡಾ ಒಂದು ಆಡುಭಾಷೆಯಾಗಿ ಬಳಸಿದ ಗಾಢ ಅನುಭವ ಬಹುಮುಖ್ಯವೆಂಬುದನ್ನು ಕಂಡುಕೊಂಡೆನು. ಇಂಗ್ಲಿಷ್ ಅನ್ನು ಒಂದು ಆಡುಭಾಷೆಯಾಗಿ ಸುಲಲಿತವಾಗಿ ಬಳಸಿರದ, ಆದರೆ ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆಯನ್ನು ಹೊಂದಿದ ಈ ಭಾಷಾಂತರಕಾರರ ಸೃಷ್ಟಿ ಮೂಲಕೃತಿಯಷ್ಟು ಆನಂದವನ್ನು, ಭಾವನೆಯನ್ನು ಮೂಡಿಸಲು ವಿಫಲವಾಗಿವೆಯೆನಿಸುತ್ತಿತ್ತು.
ಹೀಗೆಯೇ ಒಮ್ಮೆ ನನ್ನ ಬರಹಗಾರ ಸ್ನೇಹಿತೆ ಫೀಬೀಯೊಂದಿಗೆ ಹರಟುತ್ತಿರುವಾಗ ಅವಳು ನೀನೇಕೆ ಒಂದು ಕನ್ನಡ ಕೃತಿಯನ್ನು ಅನುವಾದಿಸಬಾರದೆಂದು ಪ್ರಶ್ನಿಸಿ ನಂತರ ನನಗೆ ಸಿಕ್ಕಾಗಲೆಲ್ಲಾ ಆ ವಿಚಾರವಾಗಿ ಕೇಳಲಾರಂಭಿಸಿದಳು. ಹೀಗಿದ್ದಾಗ ಹಠಾತ್ತಾಗಿ ತೇಜಸ್ವಿಯವರ ನಿರ್ಗಮನದ ಸುದ್ದಿಯನ್ನು ಕೇಳಿ ಮ್ಲಾನವದನನಾಗಿ ಫೀಬಿಯ ಸಲಹೆಯನ್ನು ಗಂಭೀರವಾಗಿ ಆಲೋಚಿಸಿದೆನು.
ಆ ಆಲೋಚನೆಯ ಫಲವೇ ಇಂದು ನನ್ನನ್ನು ಒಬ್ಬ ಅನುವಾದಕನನ್ನಾಗಿಸಿದೆ. ಈ ಕೃತಿಯಲ್ಲಿ ತೇಜಸ್ವಿಯವರ ಸರಳ ಆಡುಭಾಷೆಯ ಮೂಲ ಮಾತುಗಳಿಗೆ ಚ್ಯುತಿ ಬಾರದಂತೆ ಯಥಾವತ್ತಾಗಿ ಇಂಗ್ಲಿಷ್ ಆಡುಭಾಷೆಗೆ ಅನುವಾದಿಸಿದ್ದೇನೆ. ಕೆಲವೊಂದು ವಾಕ್ಯಪ್ರಯೋಗಗಳು ಇಂಗ್ಲಿಷ್ ಪಂಡಿತರಿಗೆ ವಿಚಿತ್ರವೆನಿಸಿದರೂ ಅವುಗಳನ್ನು ಇಲ್ಲಿನ ಇಂಗ್ಲಿಷ್ ಆಡುಭಾಷಿಗರು ಆ ರೀತಿಯಾಗಿಯೇ ಪ್ರಯೋಗಿಸುವುದನ್ನು ಮನದಟ್ಟು ಮಾಡಿಕೊಂಡೇ ಬರೆದಿದ್ದೇನೆ.
ನನ್ನ ಈ ಹುಂಬ ಉತ್ಸಾಹಕ್ಕೆ, ಪ್ರೌಢಿಮೆಯ ಪ್ರೊ. ಬಿ.ಎನ್. ಶ್ರೀರಾಮ್ ಅವರು ಪ್ರೋತ್ಸಾಹಿಸುತ್ತ ಈ ಕೃತಿಯನ್ನು ನಾನು ಅಮೇಜಾನ್.ಕಾಮ್ ನವರು ಪ್ರಕಟಿಸುವಲ್ಲಿಯವರೆಗೆ ಬೆನ್ನು ತಟ್ಟುತ್ತಾ ಮುಂದಕ್ಕೆ ತಳ್ಳಿದ್ದಾರೆಂದೇ ಹೇಳಬೇಕು. ಬಹುಶಃ, ಹಲವಾರು ವರ್ಷಗಳ ಹಿಂದೆ ತಾವು ತೇಜಸ್ವಿಯವರು ಹೊಡೆದುರುಳಿಸಿದ ಹಂದಿಯನ್ನು ಪಾಲಾಗಿಸಿಕೊಳ್ಳುವುದರಿಂದ ಉಳಿಸಲು ತಾವೇ ಹೊತ್ತು ಓಡಿದ ಸ್ಫೂರ್ತಿಯನ್ನು ನನಗೆ ಧಾರೆಯೆರೆದಿದ್ದಾರೆನಿಸುತ್ತದೆ :)) ಅದೇ ರೀತಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರೂ ಕೂಡ ನನ್ನನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಹಿರಿಯರಿಗೆ ನಾನು ಚಿರರುಣಿ.
ಇರಲಿ, ಈ ನನ್ನ ಮೊದಲ ಪ್ರಯತ್ನವಾದ "By the Corner of Indian Western Ghats" ಕೃತಿಗೆ ಓದುಗ ಮಿತ್ರರಾದ ನೀವು ಬೆಂಬಲಿಸಿ, ನಾನು ಇನ್ನೂ ಹೆಚ್ಚು ಕನ್ನಡ ಕೃತಿಗಳನ್ನು ಗ್ಲೋಬಲ್ ಲೋಕಕ್ಕೆ ಪರಿಚಯಿಸುವುದಕ್ಕೆ ಪ್ರೋತ್ಸಾಹಿಸುವಿರೆಂದು ಆಶಿಸುತ್ತೇನೆ.
ಅಮೇಜಾನ್.ಕಾಮ್ ನ ನನ್ನ ಪುಸ್ತಕದ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ.
ರವಿ ಹಂಜ್.
No comments:
Post a Comment