"ಪರ"ಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ?

ಪರಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ?

ಸಂವೇದನಾಶೀಲ, ಪ್ರತಿಭಾವಂತ ನಟ ಪ್ರಕಾಶ್ ರಾಜ್ ಇನ್ನು ಜನಪರ ಹೋರಾಟಗಳಿಗೆ ಶಕ್ತಿ ತುಂಬಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಬಲ್ಲಿರಷ್ಟೇ. ಇದು ಈ ಹೊತ್ತಿನ ತುರ್ತು ಕೂಡ. ಇಂತಹ ಹೆಚ್ಚು ಹೆಚ್ಚು ಪ್ರತಿಭಾವಂತರು ಸಮಾಜ ಕಟ್ಟಲು ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಕನ್ನಡಕ್ಕಿಂತ ಹೆಚ್ಚಾಗಿ ತಮಿಳು, ತೆಲುಗು, ಹಿಂದಿ ಮತ್ತಿತರೆ ಭಾಷೆಗಳಲ್ಲಿ ಹೆಚ್ಚಾಗಿ ನಟಿಸಿರುವ ಇವರನ್ನು ರಾಷ್ಟ್ರೀಯ ಮಟ್ಟದ ನಟರೆನ್ನಬಹುದು. ಹಾಗಾಗಿ ರಾಷ್ಟ್ರಮಟ್ಟದ ನಾಯಕರ ವಿರೋಧವನ್ನೇ ಇವರು ತಮ್ಮ ಹೋರಾಟಕ್ಕೆ ಆಯ್ದುಕೊಂಡಿದ್ದಾರೆ. ಆದರೆ ಕ್ಷೇತ್ರವಾಗಿ ತಾವು ಹೆಚ್ಚು ಪರಿಚಿತವಿರುವ ತಮಿಳುನಾಡಾಗಲಿ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಇತರೆ ಕಾರ್ಯಕ್ಷೇತ್ರವನ್ನು ಆಯ್ದುಕೊಳ್ಳದೆ ತಮ್ಮ ಮಣ್ಣಿಗೆ ನಿಷ್ಠರಾಗಿ ಕರ್ನಾಟಕವನ್ನು ಆಯ್ದುಕೊಂಡಿದ್ದಾರೆ. ಮಣ್ಣು, ರಕ್ತದ ಸೆಳೆತ ಅಪಾರವಲ್ಲವೇ! ಅದೂ ವಿರೋಧಿ ಬಣದ ಧುರೀಣ ಅನಂತಕುಮಾರ್ ಹೆಗಡೆ ರಕ್ತ, ಮಣ್ಣು ಪೂಜ್ಯವೆಂದು ಮನವರಿಕೆ ಮಾಡಿಕೊಟ್ಟ ಮೇಲೆ.

ಈ ಹೋರಾಟವನ್ನು ರಾಜರು ತಮ್ಮ ಹೋರಾಟಗಾರ್ತಿ ಮಿತ್ರೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸುವಲ್ಲಿಂದ ಉದ್ಘಾಟಿಸಿದರು. ಇವರ ಜನಪರ ಹೋರಾಟದ ಶುರುವಿನಿಂದ ಇವರು ಪರಕಾಶ ರಾಜರಾಗಿದ್ದಾರೆಯೇ ಹೊರತು ಪ್ರಕಾಶರಾಗಿ ಅಲ್ಲ. ಸದಾ ಎಡರಂಗದ ಬ್ರೈಟ್ ಲೈಟ್ ಬಾಯ್ಸ್ಗಳೊಂದಿಗೆ ಕಾಣಿಸಿಕೊಳ್ಳುವ ಇವರು ಸ್ವಯಂ ಪ್ರಕಾಶಕ್ಕಿಂತ "ಪರ"ಕಾಶರೆನಿಸುತ್ತಾರೆ. ಇವರ ಸುತ್ತಲಿರುವವರು ಸಮಾಜವಾದಿ ಎಡರಂಗದ ಸೋಗಿನಲ್ಲಿರುವ ಎಡಬಿಡಂಗಿಗಳು, ಅದರಲ್ಲೂ ಕೆಲವರು ಸರ್ಕಾರಿ ಸಂಬಳ ಸವಲತ್ತುಗಳ ಪಡೆದುಕೊಳ್ಳುವ ಪ್ರೊಫೆಸರ್ಗಳು, ಮುಖ್ಯಮಂತ್ರಿಗಳ ಸುದ್ದಿಪರಿಚಾರಕರು, ಮತ್ತು ಕೆಲ ಸ್ವಯಂ ತುರ್ತುಪರಿಸ್ಥಿತಿ ಘೋಷಿಸಿಕೊಂಡಿರುವ ಕೈಕೆಲಸದಲ್ಲಿ ಕವಿ/ಕವಿಯಿತ್ರಿಯರು. ಅಂದಹಾಗೆ ಗೌರಿ ಲಂಕೇಶ್ ಸಮಾಜವಾದಿ, ಲಿಬರಲ್ ಅಂದೆಲ್ಲ ನೀವು ಅಂದುಕೊಂಡಿದ್ದರೆ ತಪ್ಪು. ಆಕೆ ಒಬ್ಬ ಮೂಲಭೂತವಾದಿ ಮತ್ತು ಸರ್ವಾಧಿಕಾರಿ. ಆಕೆಯ ಮೋದಿ ಮುಂಚಿನ ಸಂಚಿಕೆಗಳನ್ನು ಓದಿ ನೋಡಿ. ಹಲವಾರು ಬಾರಿ ಕೆದಕಿ ಕೆದಕಿ ಐ.ಟಿ. ಕ್ಷೇತ್ರದ ಉದ್ಯೋಗಿಗಳ ಮುಕ್ತ ಕಾಮ, ಲಿವಿಂಗ್ ಟುಗೆದರ್ ಸಂಬಂಧಗಳನ್ನು ಅವಹೇಳನ ಮಾಡಿ, ಅಮೇರಿಕಾದ ಗುಲಾಮರೆಂದು ಹೀಗಳೆದಿದ್ದಳು. ಯುಪಿಎ ಸರ್ಕಾರವಿದ್ದಾಗ ತನ್ನ ಪತ್ರಿಕೆಯಲ್ಲಿ ಸಂಸ್ಕೃತಿ ಪಾಠ ಮಾಡುತ್ತಿದ್ದ ಈಕೆ, ಮೋದಿ ಸರ್ಕಾರ ಬಂದೊಡನೆ ಮುಕ್ತತೆಯ ಪಾಠ ಶುರುವಿಟ್ಟುಕೊಂಡರು. ವಿಪರ್ಯಾಸವೆಂದರೆ ಯಾವ ಲಿವ್ ಇನ್ ಸಂಬಂಧಗಳನ್ನು ಮೂದಲಿಸಿದ್ದಳೋ ಅದೇ ಆಕೆಯ ಸ್ವಂತ ಸಹೋದರಿಯಿಂದ ಹಿಡಿದು ಆಕೆಯ ವೃತ್ತಿ ಬಂಧು ಶೋಭಾ ಡೇ, ಈಗ ಚಳುವಳಿಗೆ ಧುಮುಕಿರುವ ರಾಜರು ಕೂಡ ಲಿವ್ ಇನ್ ಸಂಬಂಧವನ್ನು ಹೊಂದಿದ್ದರು. ಬಹುಶ ಪತ್ರಿಕಾರಂಗ, ಮತ್ತು ಚಿತ್ರರಂಗಗಳು ಯಕ್ಷಲೋಕಗಳೆಂದು ಪರಿಗಣಿಸಿ ಈ ಕ್ಷೇತ್ರಗಳ ಲಿವ್ ಇನ್ ಸಂಬಂಧಗಳಿಗೆ ವಿನಾಯಿತಿ ಕೊಟ್ಟಿದ್ದರೆನೋ. ಯಾವ ಅಮೆರಿಕವನ್ನು ಬಂಡವಾಳಶಾಹಿ ಸರ್ವಾಧಿಕಾರಿ ಧೋರಣೆಯ ದೇಶವೆಂದಿದ್ದಾರೋ ಅದೇ ದೇಶಕ್ಕೆ ಈಕೆಯ ಮಾಜಿಪತಿ ವಲಸೆಗೊಂಡು ನೆಲೆಸಿದ್ದಾರೆನ್ನುವುದು ಇನ್ನೊಂದು ವಿಪರ್ಯಾಸ!

ಇನ್ನು"ನಾನು ಗೌರಿ" ಎಂದು ಪರಕಾಶ ರಾಜರ ಸುತ್ತಲಿರುವ ವಂದಿಮಾಗಧರಲ್ಲನೇಕರು ಗೌರಿಯ ಪತ್ರಿಕೆಯಲ್ಲಿ ಹಿಗ್ಗಾಮುಗ್ಗಾ ವಾಚಾಮಗೋಚರವಾಗಿ ಹಿಂದೆ ಮೂದಲಿಕೆಗೆ ಒಳಗಾಗಿದ್ದಾರೆ. ಉದಾಹರಣೆಗೆ, ಮಲೆನಾಡು ಮೂಲದ ಕವಿಯಿತ್ರಿಯೋರ್ವರನ್ನು, ಮತ್ತು ಅವರ ಗುರುವಿನಂತಿದ್ದ ಕನ್ನಡದ ಭರವಸೆಯ ಕವಿಯೋರ್ವರನ್ನು ಅತ್ಯಂತ ಕೀಳು ಭಾಷೆಯಲ್ಲಿ ತನ್ನ ಪತ್ರಿಕೆಯಲ್ಲಿ ವಿಷ ಕಾರಿಕೊಂಡಿದ್ದಳು ಈಕೆ. ಈಗ ಪರಕಾಶರ ಸುತ್ತಲಿರುವ ಅನೇಕರು, ಆಗ ಈ ಕವಿ/ಯಿತ್ರಿಯವರೊಂದಿಗೆ ಯಾವುದೊ ವೃತ್ತದಲ್ಲಿ ಪ್ರತಿಭಟನೆ ಮಾಡಿ ಗೌರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸೋಷಿಯಲ್ ಮೀಡಿಯಾ ತುಂಬಾ ಹೇಳಿಕೊಂಡಿದ್ದರು. ಇನ್ನು ಕೆಲವರು ತಾವು ಗೌರಿಯ ಅಭಿಪ್ರಾಯ ಕೋರಿ ಕೊಟ್ಟ ತಮ್ಮ ಬರಹವನ್ನು ಆಕೆ ಲಪಟಾಯಿಸಿದ್ದಾಳೆಂದೂ, ತಮ್ಮನ್ನು ಬಳಸಿಕೊಂಡು ಬಿಸಾಡಿದಳೆಂದೂ ಗೋಳಾಡಿದ್ದರು. ಈಗವರೆಲ್ಲ "ನಾನು ಗೌರಿ" ಎಂದು ಸೋಗು ಹಾಕುತ್ತಿರುವುದರ ಉದ್ದೇಶ?! ಒಟ್ಟಾರೆ ಪರಕಾಶರ ಬೆಂಬಲಿಗರ ಅಭಿಪ್ರಾಯದಲ್ಲಿ ಹತ್ಯಾಪೂರ್ವ ಗೌರಿ ಒಬ್ಬ ವಿಕ್ಷಿಪ್ತ ವ್ಯಕ್ತಿತ್ವದ ಹಠಮಾರಿಯಂತೆ ಕಂಡಿದ್ದರು. ಇರಲಿ, ಒಬ್ಬ ವ್ಯಕ್ತಿಯ ಎಲ್ಲ ಅವಗುಣಗಳನ್ನು ಆತ ತೀರಿಹೋದ ಕೂಡಲೇ ಸುಗುಣಗಳೆಂದು ಪುರಸ್ಕರಿಸಿ ಆ ವ್ಯಕ್ತಿಯನ್ನು ವಿಜೃಂಭಿಸುವುದು ಮಾನವೀಯ ಸಂಗತಿ! ಒಂದು ವರ್ಗದ ಜನ ಗೌರಿಯ ಸಾವನ್ನು ಸಂಭ್ರಮಿಸಿದ್ದು, ಮತ್ತೊಂದು ವರ್ಗದ ಜನ ಆಕೆಯ ಸಾವನ್ನು ವಿಜೃಂಭಿಸಿದ್ದು ಆಕೆಯ ವ್ಯಕ್ತಿತ್ವದಷ್ಟೇ ವಿಕ್ಷಿಪ್ತ! ಇನ್ನು ಗೌರಿ ಕೊಲೆ ನಡೆದಿರುವುದು ಕರ್ನಾಟಕದಲ್ಲಿ ಮತ್ತು ತನಿಖೆ ಮಾಡುತ್ತಿರುವುದು ಕರ್ನಾಟಕ ಗೃಹ ಇಲಾಖೆ. ಇದು ಸಿಬಿಐಗೆ ವಹಿಸಿದ್ದರೆ, ಮೋದಿಯನ್ನು ಈ ಕುರಿತಾಗಿ ವಿಚಾರಿಸುವುದು ಉಚಿತವೆನಿಸುತ್ತದೆ ಎನ್ನುವುದು ಸಾಮಾನ್ಯಜೀವಿಗಳ ಅಭಿಪ್ರಾಯ.

ಇನ್ನು ಪರಕಾಶರಾಜರ ಹೋರಾಟ ಕರ್ನಾಟಕದ ಆಚೆ ಕಾಣುತ್ತಿಲ್ಲ. ಹಾಗಾಗಿ ಇವರ ಹೋರಾಟವನ್ನು ರಾಜ್ಯಮಟ್ಟಕ್ಕೆ ಸೀಮಿತಗೊಳಿಸಿಕೊಂಡು, ಕರ್ನಾಟಕದ ಸಮಸ್ಯೆಗಳ ಪರಿಚಯ, ಮತ್ತದರ ಹೊಣೆಯನ್ನು ಸ್ವಲ್ಪ ವಿಶ್ಲೇಷಿಸೋಣ. ನನ್ನೂರು ದಾವಣಗೆರೆ. ಇಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗಿನಿಂದ ಇಂದಿನ ಮೋದಿ ಸರ್ಕಾರದಲ್ಲೂ ನೀರಿನ ಸಮಸ್ಯೆ, ದೂಳಿನ ಸಮಸ್ಯೆ, ಮತ್ತು ಹಂದಿಗಳ ಸಮಸ್ಯೆ. ಸದ್ಯಕ್ಕೆ ಹಂದಿ, ದೂಳಿನ ಸಮಸ್ಯೆಯನ್ನು ಬದಿಗಿರಿಸಿ ಮನುಷ್ಯನಿಗೆ ಮೂಲಭೂತವಾಗಿ ಬೇಕಾದ ನೀರಿನ ಕಡೆ ಗಮನ ಹರಿಸೋಣ. ಈಗಲೂ ಇಲ್ಲಿ ವರ್ಷದ ಸಾಕಷ್ಟು ತಿ0ಗಳುಗಳಲ್ಲಿ ನಲ್ಲಿ ನೀರು ಸರಬರಾಜಾಗುವುದು ಇಪ್ಪತ್ತು ದಿನಗಳಿಗೆ ಒಮ್ಮೆ. ಈ ನೀರಿನ ಸಮಸ್ಯೆ ಕರ್ನಾಟಕ ನಗರಾಭಿವೃದ್ಧಿ, ಜಲಮಂಡಳಿ ಇಲಾಖೆಗೆ ಬರುತ್ತದೆ. ಇನ್ನು ನನ್ನ ಜಮೀನಿರುವುದು ಹೊಸದುರ್ಗ ತಾಲ್ಲೂಕಿನಲ್ಲಿ. ಇಲ್ಲಿಯೂ ನೀರಿನ ಸಮಸ್ಯೆ. ಇಲ್ಲಿಯ ವೇದಾವತಿ ನದಿ ಹರಿಯುವುದನ್ನು ನಿಲ್ಲಿಸಿ ದಶಕಗಳೇ ಆಗಿವೆ. ಈ ನೀರಿನ ಸಮಸ್ಯೆ ನಿವಾರಣೆ ಕರ್ನಾಟಕ ನೀರಾವರಿ ಇಲಾಖೆಯ ಜವಾಬ್ದಾರಿ. ನನ್ನಲ್ಲಿ ಬೋರ್ವೆಲ್ಗಳಿವೆ, ಆದರೆ ಇದಕ್ಕೆ ಮೂರು ಫೇಸ್ ವಿದ್ಯುತ್ತಿನ ಸಮಸ್ಯೆ. ಇದು ಕರ್ನಾಟಕ ರಾಜ್ಯ ವಿದ್ಯುತ್ ಇಲಾಖೆಯ ಹೊಣೆ. ಇನ್ನು ರೈತರ ಆತ್ಮಹತ್ಯೆ, ಬೆಳೆನಾಶ, ಇತ್ಯಾದಿಗಳ ಜವಾಬ್ದಾರಿ ಕರ್ನಾಟಕ ಕೃಷಿ ಇಲಾಖೆಯದು. ಅದೇ ರೀತಿ ರಸ್ತೆಗಳಿಗೆ ಕರ್ನಾಟಕ ರಾಜ್ಯ ಹೆದ್ದಾರಿ ನಿಗಮ....!

ಇನ್ನು ರಾಜ್ಯದ ಹೆಮ್ಮೆ ಬೆಂಗಳೂರಿನ ಸಂಕೀರ್ಣ ಸಮಸ್ಯೆ! ಯಾವುದೇ ಉದ್ಯಮವಿದ್ದರೂ ಅದು ಬೆಂಗಳೂರಿಗೇ ಬೇಕೆಂದು ಬಯಸುವುದು ಕರ್ನಾಟಕ ಸರ್ಕಾರ. ಕರ್ನಾಟಕವನ್ನಾಳಿದ ಎಲ್ಲಾ ಸರ್ಕಾರಗಳೂ ಈ ಎಲ್ಲ ಉದ್ಯಮಗಳನ್ನು ಸಮಾನವಾಗಿ ಕರ್ನಾಟಕದಾದ್ಯಂತ ಹಂಚಿದ್ದರೆ, ಜನ ಬೆಂಗಳೂರಿಗೆ ವಲಸೆ ಹೋಗುತ್ತಿರಲಿಲ್ಲ ಮತ್ತು ಕರ್ನಾಟಕದೆಲ್ಲೆಡೆ ಪ್ರಗತಿ ಸಮಾನತೆಯನ್ನು ಸಾಧಿಸುತ್ತಿತ್ತು. ಇದಕ್ಕೆ ಇಲ್ಲಿಯವರೆಗೂ ಆಗಿ ಹೋದ ಎಲ್ಲಾ ಸರ್ಕಾರಗಳು ಹೊಣೆ. ಅದರಲ್ಲೂ ಬೆಂಗಳೂರೇ ಕರ್ನಾಟಕವೆಂದು ಬಗೆದು, ಸಿಂಗಾಪುರ ಮಾಡುತ್ತೇನೆಂದು ಮಂಗಾಪುರ ಮಾಡಿಟ್ಟ ಎಸ್ ಎಂ ಕೃಷ್ಣ ಅವರು! ಈಗ ಹೇಳಿ ಈ ಎಲ್ಲ ಸಮಸ್ಯೆಗಳಿಗೆ ನಾವು ಪ್ರಧಾನಿಯನ್ನು ಹೊಣೆ ಮಾಡಬೇಕೆ? ಹೌದೆಂದರೆ ಆಗಿ ಹೋದ ಎಲ್ಲ ಪ್ರಧಾನಿಗಳೂ ಈ ಸಮಸ್ಯೆಗಳಿಗೆ ಜವಾಬ್ದಾರರಲ್ಲವೇ? ಬಹುಶಃ ಪರಕಾಶರಾಜರ ಈ ವಿತಂಡ ಆಲೋಚನೆಯ ವಾಸನೆ ಹಿಡಿದೇ ಮೋದಿ ಮೊನ್ನೆ ಸಂಸತ್ತಿನಲ್ಲಿ ಛಾಚಾ ನೆಹರೂರನ್ನು ಜಾಡಿಸಿರಬೇಕು! ಇರಲಿ, ಸಾಮಾನ್ಯರಾದ ನಮಗೆ ಈ ಎಲ್ಲ ಸಮಸ್ಯೆಗಳಿಗೂ ನಮ್ಮ ಎಂಎಲ್ಎ ಗಳು ಕಾರಣವೆನಿಸುತ್ತದೆ ಮತ್ತು ಆಗಿಹೋದ ರಾಜ್ಯ ಸರ್ಕಾರಗಳು ಹೊಣೆಯಾಗುತ್ತವೆ. ಆದ್ದರಿಂದ ಪರಕಾಶರೇ, ನಿಮ್ಮ ಹೋರಾಟವನ್ನು ರಾಜ್ಯಕ್ಕೆ ಸೀಮಿತಗೊಳಿಸಿ. ಏಕೆಂದರೆ ಮನೆ ಗೆದ್ದು ಮಾರು ಗೆಲ್ಲು ಎನ್ನುತ್ತದೆ ಸಮಾಜ.

ನಿಮಗೆ ಮೋದಿಯನ್ನು ಪ್ರಶ್ನಿಸಲೇಬೇಕಿದ್ದರೆ ಆತ ಜವಾಬ್ದಾರಿಯಾದ ಹತ್ತು ಹಲವು ವಿಷಯಗಳಿವೆ. ಆ ವಿಷಯಗಳ ಬಗ್ಗೆ ಕಿಂಚಿತ್ತು ಪ್ರಶ್ನಿಸಿ.

ನೋಟ್ ಬ್ಯಾನ್ ನಂತರ ಜಮೆಯಾದ ಎಲ್ಲ ಹಣದ ಮೂಲಗಳ ಲೆಕ್ಕಪರಿಶೋಧನೆಯ ಪ್ರಗತಿಯೇನೆಂದು ಕೇಳಿ. ಆ ಕುರಿತು ಶ್ವೇತಪತ್ರ ಹೊರಡಿಸೆಂದು ಕೇಳಿ, ಜನತೆ ಬೆಂಬಲಿಸುತ್ತದೆ. ಆದರೆ ಈಗ ನಿಮ್ಮೊಟ್ಟಿಗೆ ಕೈಕೆಲಸದಲ್ಲಿ ತೊಡಗಿರುವವರು ಯಾರೂ ಇದನ್ನು ಬೆಂಬಲಿಸುವುದಿಲ್ಲ. ಏಕೆಂದರೆ ಅವರಿಗೂ ಈ ಪರಿಶೋಧನೆ ಬೇಕಿಲ್ಲ, ಅವರೆಲ್ಲ ಯಾರನ್ನೋ ಕಾಪಾಡಲು ನಿಮ್ಮ ಬೆನ್ನಿಗಿದ್ದಾರೆ ಅಷ್ಟೇ.

ಜಿಎಸ್ಟಿ ತೆರಿಗೆಯ ನ್ಯೂನತೆಗಳ ಪಟ್ಟಿ ಮಾಡಿ, ಅವು ಯಾವ ರೀತಿ ಸಮಾಜಕ್ಕೆ ಮಾರಕ ಎಂದು ಅರ್ಥ ಮಾಡಿಸಿ, ಪರಿಹಾರವಾಗಿ ಏನು ಮಾಡಬೇಕೆಂದು ಮೋದಿಗೆ ಒಂದು ಕರಡು ಯೋಜನೆ ಸಲ್ಲಿಸಿ. ಇದಕ್ಕೆ ನಿಮ್ಮೊಂದಿಗಿರುವ ಬುದ್ದಿಜೀವಿಗಳ ಸಹಾಯ ಪಡೆದುಕೊಳ್ಳಿ. ಜನ ಬೆಂಬಲಿಸುತ್ತಾರೆ.

ಟ್ರಿಪಲ್ ತಲಾಖ್ ನ್ಯೂನತೆಗಳಿದ್ದರೆ, ನಿಮ್ಮಲ್ಲಿರುವ ಪರಿಣಿತ ಬುದ್ಧಿಜೀವಿಗಳಿಂದ ಸರಿಪಡಿಸುವ ವಿಧಾನಗಳ ಪಟ್ಟಿ ಮಾಡಿ, ಸರಿಪಡಿಸಲು ಕೇಳಿ. ಜನ ಬೆಂಬಲಿಸುತ್ತಾರೆ.

ಹೊಸದಾಗಿ ಸೃಷ್ಟಿಯಾದ ರಾಜ್ಯ ಆಂಧ್ರ ಪ್ರದೇಶಕ್ಕೆ ಏಕೆ ಬಜೆಟ್ನಲ್ಲಿ ಹಣಕಾಸು ತೆಗೆದಿರಿಸಿಲ್ಲವೆಂದು ಕೇಳಿ, ಆಂಧ್ರದ ಜನ ನಿಮ್ಮನ್ನು ಬೆಂಬಲಿಸುತ್ತಾರೆ. ನಿಮ್ಮ ಮೇಲೆ ಆಂಧ್ರದ ಋಣ ಕರ್ನಾಟಕಕ್ಕಿಂತ ಹೆಚ್ಚಿದೆ.

ಮೋದಿಯ ಹೆಂಡತಿಯ ವಿಷಯ ಬಿಡಿ, ನಮ್ಮ ಕುಮಾರಸ್ವಾಮಿ, ವಿಶ್ವನಾಥ್, ಇಕ್ಬಾಲ್ ಅನ್ಸಾರಿ ಅಸಂವಿಧಾನಿಕ ದ್ವಿಪತ್ನಿತ್ವವನ್ನು ಹೊಂದಿ ಸಂವಿಧಾನವನ್ನು ಧಿಕ್ಕರಿಸಿದ್ದಾರೆ. ಹಾಗಾಗಿ ಇಂತಹ ಜನ ಹೇಗೆ ಸಂವಿಧಾನವನ್ನು ಪ್ರತಿನಿಧಿಸಬಲ್ಲರೆಂದು ಕೇಳಿ. ಜನ ಬೆಂಬಲಿಸುತ್ತಾರೆ.

ನದಿಜೋಡಣೆಯ ಪ್ರಗತಿಯ ಕುರಿತು ಪ್ರಶ್ನಿಸಿ, ಜನ ಬೆಂಬಲಿಸುತ್ತಾರೆ. ಕೇಳಬೇಕಾದ ಪ್ರಧಾನ ಪ್ರಶ್ನೆಗಳನ್ನು ಕೇಳಿ. ಸದ್ಯಕ್ಕೆ ನೀವು ಕೇಳುತ್ತಿರುವ ಎಲ್ಲ ಮುಖ್ಯ ಪ್ರಶ್ನೆಗಳೂ ಕರ್ನಾಟಕದ ಮುಖ್ಯಮಂತ್ರಿಗೆ ಅನ್ವಯಿಸುತ್ತವೆ . ಅಂದ ಹಾಗೆ ಮೋದಿ ಕರ್ನಾಟಕದ ಮುಖ್ಯಮಂತ್ರಿಯಲ್ಲ.

ಇನ್ನು ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಮೋದಿ ಗೆದ್ದದ್ದು. ಕಾಂಗ್ರೆಸ್ ಆಡಳಿತದಿಂದ ಜನ ರೋಸಿಹೋಗಿದ್ದರು. ಈಗ ಮೋದಿಗೆ ಪರ್ಯಾಯವಾಗಿ ಮತ್ತೆ ಕಾಂಗ್ರೆಸ್ ಬೇಕಿಲ್ಲ, ಬೇಕಿರುವುದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬಲ್ಲ ಸರ್ಕಾರ. ನಿಮ್ಮ ಹೋರಾಟ ಜನಪರ, ಸಮಾಜವಾದ, ಮೌಲ್ಯಾಧಾರಿತವಾಗಿದ್ದರೆ, ನೀವು ನಿಜ ಸಮಾಜವಾದಿಗಳ ನಡೆಯನ್ನು ಅನುಕರಿಸಿ. ನಿಮ್ಮ ಹಿಂದಿರುವ ಕೈಕೆಲಸದವರನ್ನಲ್ಲ. ಸದ್ಯಕ್ಕೆ ನೀವು ಯಾವುದನ್ನು ಸಮಾಜವಾದ ಎಂದುಕೊಂಡಿರುವಿರೋ ಅದು ಸಮಾಜವಾದವಲ್ಲ, ಮತ್ತು ಯಾವ ಜನ ನಿಮ್ಮ ಸುತ್ತಿರುವರೋ ಅವರ್ಯಾರು ಸಮಾಜವಾದಿಗಳಲ್ಲ. ಆ ಭಟ್ಟಂಗಿಗಳ ಕಮ್ಯುನಿಸ್ಟ್ ಸಿದ್ದಾಂತ ಹಳತಾಗಿದೆ. ಕಮ್ಯುನಿಸ್ಟ್ ಕ್ಯೂಬಾದ ಜನತೆ ನಿತ್ಯ ಸಮುದ್ರ ಹಾರಿ, ಹೇಗಾದರೂ ಮಾಡಿ ಬಂಡವಾಳಶಾಹಿ ಅಮೆರಿಕ ಸೇರಬೇಕೆಂದು ಸಾಯುತ್ತಿದ್ದಾರೆ. ಕಮ್ಯುನಿಸ್ಟ್ ರಷ್ಯಾದ ಬಹುತೇಕ ಹೈಸ್ಕೂಲ್ ಹುಡುಗಿಯರು ಕಡೆಯ ಪಕ್ಷ ವೇಶ್ಯೆಯರಾಗಿಯಾದರೂ ದೇಶದ ಹೊರಹೋಗಬಯಸುತ್ತಿದ್ದಾರೆ.

ಈ ಎಲ್ಲ ತಿಕ್ಕಲುತನಗಳ ಸ್ಪಷ್ಟ ಅರಿವಿದ್ದ ನಿಜ ಸಮಾಜವಾದಿ ಲಂಕೇಶರು ಹಾಗಾಗಿಯೇ ನಮ್ಮದೇ ನಾಡಿಗನುಗುಣವಾಗಿ ಕ್ರಾಂತಿರಂಗವನ್ನು ಸಂಘಟಿಸಿದ್ದರು. ತೇಜಸ್ವಿ, ನಂಜುಂಡಸ್ವಾಮಿಗಳು ರೈತಸಂಘವನ್ನು ಸಂಘಟಿಸಿದರು. ಆ ಚಿಂತಕರು ಲೋಹಿಯಾ ಚಿಂತನೆಯ ಕಿಡಿಯನ್ನು ರಾಜ್ಯಾದ್ಯಂತ ಹೊತ್ತಿಸಿದ್ದರು. ಅದು ನಿಮ್ಮ ಆದರ್ಶವಾಗಬೇಕು. ಅಂತಹ ಪ್ರಾಮಾಣಿಕ, ನೈಜ ಕಳಕಳಿಯ ಒಬ್ಬನೇ ಒಬ್ಬ ಬುದ್ದಿಜೀವಿ ನಿಮ್ಮ ಸಂಘದಲ್ಲಿ ಇದ್ದಾನೆಯೇ? ಈಗ ನಮಗೆ ಬೇಕಿರುವುದು ಎಲ್ಲಿಯದೋ ಅಲುಪೇಶ, ಜಿಗಣೇಶ, ಹರದಿಕ್ಕು ಎಂಬ ಐಲುಪೈಲುಗಳಂತೂ ಅಲ್ಲ. ನಿಮ್ಮ ಹೋರಾಟದ ಉದ್ದೇಶ ನೈಜವೂ, ಸತ್ಯವೂ ಆಗಿದ್ದರೆ ನಮ್ಮಲ್ಲೇ ದಶಕಗಳಿಂದ ಏಕಾಂಗಿಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಜನ ಸಂಗ್ರಾಮ ಪರಿಷತ್ತಿನ ಹಿರೇಮಠರಿದ್ದಾರೆ. ಕಳೆದ ದಶಕದಿಂದ ಮೌಲಾಧಾರಿತ ರಾಜಕಾರಣ/ಚುನಾವಣೆಗಳಿಗೆ ಹೋರಾಡುತ್ತಿರುವ ಶಾಂತಲಾ ದಾಮ್ಲೆ, ರವಿಕೃಷ್ಣಾರೆಡ್ಡಿ ಇದ್ದಾರೆ. ಅಂದ ಹಾಗೆ ಈ ಮೂವರೂ ವಿದೇಶದಲ್ಲಿ ಅತುತ್ತಮ ಉದ್ಯೋಗ, ಉದ್ದಿಮೆಗಳನ್ನು ತೊರೆದು ತಮ್ಮ ರಕ್ತ, ಮಣ್ಣಿಗೆ ಮರಳಿದ್ದಾರೆ. ಇಲ್ಲಿ ರಕ್ತ ಐಡೆಂಟಿಟಿ ಎಂದು, ಮಣ್ಣು ನೇಟಿವಿಟಿ ಎಂದು ನಿಮ್ಮಂಥ ಸೃಜನಾತ್ಮಕ ಕಲಾವಿದರಿಗೆ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲವೆಂದುಕೊಂಡಿದ್ದೇನೆ. ಇದನ್ನೇ ನಿಮ್ಮ ಸಿನಿಮಾ ಭಾಷೆಯಲ್ಲಿ ಕರುಳಿನ ಕರೆ, ಮಣ್ಣಿನ ಋಣ ಎಂದೆಲ್ಲ ಕರೆಯುತ್ತಾರೆ. ಆದರೆ ಇವರಿಗೆ ನಿಮ್ಮ ಸಮಾನತೆಯ ಪ್ರತಿಪಾದಕರು ಅವಶ್ಯವೆಂದುಕೊಂಡಿರುವ ಅಲ್ಪಸಂಖ್ಯಾತ, ದಲಿತ, ದಮನಿತ ಎನ್ನುವ ಕ್ವಾಲಿಫಿಕೇಷನ್ ಇಲ್ಲ. ಆದರೆ ಸಮಾನತೆಯ ಸಮಾಜಕ್ಕೆ ಮನುಷ್ಯತ್ವವಿದ್ದರೆ ಸಾಕಲ್ಲವೇ?

ಕೇವಲ ಶತ್ರುವಿನ ಶತ್ರು ಮಿತ್ರನೆಂದು ನಿಮ್ಮ ಮಿತ್ರೆ ಅಲುಪೇಶ, ಜಿಗಣೇಶರನ್ನು ಮೆರೆಸಿದ್ದರೇ ಹೊರತು ತನ್ನದೇ ರಾಜ್ಯದ, ಭಾಷೆಯ, ಅಪಾರ ಪ್ರತಿಭಾನ್ವಿತರಾದ ರವಿ, ಶಾಂತಲಾರನ್ನು ಪರಿಗಣಿಸಿಯೇ ಇರಲಿಲ್ಲ. ಹಾಗೆಯೇ ಈ ಮೂವರ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ನಿಮ್ಮ ಮಿತ್ರ ನಿಜ ಸಮಾಜವಾದಿ ಚಂದ್ರಕಾಂತ ವಡ್ಡು ಇದ್ದಾರೆ. ಇಂತಹವರು ನಿಮ್ಮೊಟ್ಟಿಗಿರಲಿ.

ಕರ್ನಾಟಕದಲ್ಲಿ ಪ್ರೊ. ಕಲ್ಬುರ್ಗಿಯವರಿಂದ ಹಿಡಿದು, ಗೌರಿಯಾದಿಯಾಗಿ ಅನೇಕ ಕೊಲೆಗಳು ನಡೆದಿವೆ. ಆ ಎಲ್ಲ ಕೊಲೆಗಳು, ದುರ್ಬಲ ರಾಜ್ಯ ಗೃಹ ಇಲಾಖೆಯ ಕಾರಣವೇ ಹೊರತು ಮೋದಿಯಲ್ಲ. ಈ ವಿಷಯಗಳ ಕುರಿತೂ ಮಾತನಾಡಿ. ನೀವೇ ತುಂಬಿದ ಸಭೆಯಲ್ಲಿ "ಬೆಳೆಸಿದರೆ ಈ ರೀತಿ ಮಗುವನ್ನು ಬೆಳೆಸಬೇಕು" ಎಂದು NA ಹ್ಯಾರಿಸ್ ಪುತ್ರನನ್ನ ಕೊಂಡಾಡಿದ ಕೆಲವೇ ದಿನಗಳಲ್ಲಿ ಆತನೇನು ಎಂದು ರಾಜ್ಯ ಕಂಡಿದೆ. ಯೋಚಿಸಿ, ದೇವನೂರರ ಸರ್ವೋದಯ ಪಕ್ಷವನ್ನೋ, ರೈತಸಂಘವನ್ನೋ ಬೆಂಬಲಿಸಿ ಎಂದರೆ ಜನ ಒಪ್ಪಿಯಾರು. ಆದರೆ ರಾಜ್ಯಸರ್ಕಾರದ ವಿಫಲತೆಗಳ ಮರೆಮಾಚಲು ಜನತೆಯ ಗಮನವನ್ನು ಎತ್ತಲೋ ಹರಿಸಲು ನೀವೊಂದು ದಾಳವಾಗಬೇಡಿ. ತಮ್ಮ ಬ್ರೈಟ್ ಲೈಟ್ ಬಾಯ್ಸ್ ಪ್ರಕಾಶದಲ್ಲಿರುವ ಪರಕಾಶ ರಾಜ, ಪ್ರಕಾಶ್ ರೈ ಆಗಲಿ ಎಂದು ಜನ ಬಯಸುತ್ತಾರೆ. ತೇಜಸ್ವಿಯವರ ಜುಗಾರಿಕ್ರಾಸ್ನಲ್ಲಿ ಬರುವ ಪ್ರೊ. ಗಂಗೂಲಿ ಥರದ ಜನರ ಮಾತು ಕೇಳಿ ಸುಖಾಸುಮ್ಮನೆ ಕಲ್ವರ್ಟ್ ಒಡೆದು ಮೈ ಎಲ್ಲ ಮಲ ಸಿಡಿಸಿಕೋಬೇಡಿ. ನಿಮ್ಮ ಪಟಾಲಂ ಮಾತು ಕೇಳಿ ಜನ ಬಾಣಲೆಯಿಂದ ಬೆಂಕಿಗೆ ಹಾರಲು ತಯಾರಿಲ್ಲ.

No comments:

Post a Comment