ಅಸಹಿಷ್ಣ ಭಾರತ

“ತಮ್ಮದೇ ಸರಿ ಅಂದುಕೊಳ್ಳುವ 'ಬಲಪಂಥೀಯರಿಗೆ', ಹಿಂದುಗಳಾಗಲಿ ಮುಸಲ್ಮಾನರಾಗಲಿ, ಸಾಮಾಜಿಕ ಕಟ್ಟುಪಾಡುಗಳು ಸ್ವಲ್ಪ ಸಡಿಲವಾದರೂ ಭಯವಾಗುತ್ತದೆ. ಯಾಕೆಂದರೆ ಇದರಿಂದ ಯಾವುದೇ ಸಾಂಪ್ರದಾಯಿಕ ಧರ್ಮಗಳ ಶ್ರೇಷ್ಠತೆಯ ಮುದ್ರೆಗಳಾದ ಪುರಾತನ ಪಿತೃಪ್ರಾಧಾನ್ಯ ಮತ್ತು ಮೇಲ್ಗಾರಿಕೆಗಳು ಅಲ್ಲಾಡತೊಡಗುತ್ತವೆ.

ಮಹಿಳೆಯರು ತಮ್ಮ ಆಯ್ಕೆಗಳನ್ನ ತಾವೇ ಮಾಡಿಕೊಳ್ಳುತ್ತಾರೆ ಅಥವಾ ಹಾಗೆ ಮಾಡುವ ಸ್ವಾತಂತ್ರವನ್ನು ಕೇಳುತ್ತಾರೆ ಅಂದಾಗ ಪ್ರತಿಯೊಂದು ಧರ್ಮದ ಮೂಲಗಳಾದ ಪಿತೃಪ್ರಧಾನತ್ವ ಮತ್ತು ಸ್ತ್ರೀ ವಿರುದ್ಧದ ಪೂರ್ವಗ್ರಹಗಳಿಗೆ ಸವಾಲು ಹಾಕಿದಂತಾಗುತ್ತದೆ.”

ಇದು ಚಿದಾನಂದ ರಾಜಘಟ್ಟ ಗೌರಿ ಲಂಕೇಶ್ ಕುರಿತು ಬರೆದಿರುವ "ಇಲ್ಲಿಬರಲ್ ಇಂಡಿಯಾ" ಪುಸ್ತಕದಿಂದ.

ಪ್ರಸ್ತುತ ಭಾರತದಲ್ಲಿ ವೈಚಾರಿಕತೆ ಹೇಗೆ ಎಡ, ಬಲ ಎಂಬ ಸಿದ್ಧಾಂತಗಳಿಗೆ ಕಟ್ಟುಬಿದ್ದು ನರಳುತ್ತಿದೆ ಎಂಬುದನ್ನು ಈ ಪುಸ್ತಕದಿಂದ ಅವಲೋಕಿಸೋಣ. ಬಲಪಂಥವನ್ನು ಮೋದಿ ಭಕ್ತರೆಂದು ಬ್ರ್ಯಾಂಡು ಮಾಡಿರುವ ಎಡಪಂಥೀಯರು ಈ ಭಕ್ತಿಯಿಂದ ವಿಮುಕ್ತಿ ಹೊಂದಿದ್ದಾರೆಯೇ? ಈ ಪಂಥಗಳು ಪರಸ್ಪರ ದ್ವಂದನಿಲುವಿನಲ್ಲಿ ತಮ್ಮನ್ನು ತಾವೇ ಬಿಚ್ಚಿಕೊಳ್ಳುತ್ತಿದ್ದಾರೆ. ಬಲಪಂಥೀಯರು ಮುಗ್ಧಭಕ್ತರೆಂದು ಮನ್ನಿಸೋಣ, ಏಕೆಂದರೆ ಅವರನ್ನು ಮುಗ್ದಭಕ್ತರೆಂದು ಎಡಪಂಥವೇ ಸಾರಿ ಹೇಳುತ್ತಿದೆ. ಆದರೆ ಬುದ್ಧಿಜೀವಿಗಳೆಂಬ ಎಡಪಂಥೀಯರು!

ಈ ಪುಸ್ತಕದಲ್ಲಿ ಆದಿಯಿಂದ ಅಂತ್ಯದವರೆಗೆ ಒಂದು ಗುಂಪನ್ನು ಮೆಚ್ಚಿಸಲು ಬರೆದಂತಿದೆ. ಪುಸ್ತಕದ ಮೇಲಿನ ಪ್ಯಾರಾದಲ್ಲಿ "ಬಲಪಂಥೀಯ" ಪದವನ್ನು ಬಿಟ್ಟು ಓದಿ ನೋಡಿದರೆ ತೂಕವೆನಿಸುವ  ಪ್ಯಾರಾ, ಆ ಪದದಿಂದ ತೂಕ ಕಳೆದುಕೊಂಡು ಬಿಡುತ್ತದೆ. ಅನವಶ್ಯಕವಾಗಿ ಯಾರನ್ನೋ ಮೆಚ್ಚಿಸಲು "ಬಲಪಂಥೀಯ" ಪದವನ್ನು ತುರುಕಿದಂತಿದೆ. ಏಕೆಂದರೆ ಬಲಪಂಥೀಯರು ಈ ಪುಸ್ತಕವನ್ನು ಮೂಸಿಯು ನೋಡಲಾರರೆಂದು ಪೂರ್ವಾಲೋಚಿಸಿ, ಎಡಪಂಥೀಯರ ಮಾರುಕಟ್ಟೆಗೆ ತಕ್ಕಂತೆ ಬರೆಯಲಾಗಿದೆ. ಈ ರೀತಿಯ ಸಾಕಷ್ಟು "ಮೆಚ್ಚಿಸುವ" ಅಂಶಗಳೇ ಈ ಪುಸ್ತಕದಲ್ಲಿ ತುಂಬಿದೆ. ಅದೇ ರೀತಿ "ಪಿತೃಪ್ರಧಾನ". ಭಾರತದಲ್ಲಿ ಹಿರಿಯ ಗಂಡುಮಗನಿಗೆ ಪಿತ್ರಾರ್ಜಿತ ಆಸ್ತಿ ಎಂದು ಆರಂಭಗೊಂಡ ವ್ಯವಸ್ಥೆ, ಮಂಗಮಾನವ ಮರದಿಂದ ಇಳಿದು ಕೃಷಿಯಲ್ಲಿ ತೊಡಗಿನಂದಿನಿಂದ ವಿಕಾಸಗೊಂಡ ವ್ಯವಸ್ಥೆ. ಅದು ನಂತರ ಎಲ್ಲಾ ಗಂಡುಮಕ್ಕಳಿಗೆ ಎಂದಾಗಿ, ಕಳೆದ ಇಪ್ಪತ್ತನೇ ಶತಮಾನದಲ್ಲಿ ಅಂದರೆ ನಲವತ್ತೈದು ವರ್ಷಗಳ ಹಿಂದೆ ಹೆಣ್ಣು ಮತ್ತು ಗಂಡುಮಕ್ಕಳಿಗೆ ಸಮಾನ ಹಕ್ಕಿದೆ ಎಂದಾಗಿದೆ. ಹೀಗಿದ್ದಾಗ ಪಿತೃಪ್ರಧಾನ ವ್ಯವಸ್ಥೆ ಕಾನೂನಿನ ಪ್ರಕಾರ ಇಲ್ಲವಾಗಿದೆ. ಆದರೆ "ಪಿತೃಪ್ರಧಾನ" ಪದ ಎಡಪಂಥೀಯರ ಕಿವಿಗೆ ಮಧುರ ಸಂಗೀತ! ಹಾಗಾಗಿ ಆ ಗುಂಪು ತಲೆದೂಗುವ ಅಂಶಗಳು ಸಾಕಷ್ಟಿವೆ.

ಇನ್ನು ಕೇವಲ ಗೌರಿಯ ಓದುಗರಾಗಿ ಆಕೆಯ ಬಗ್ಗೆ ತಿಳಿದುಕೊಂಡಿರುವವರಿಗೆ ಅಥವಾ ಆಕೆಯ ಆಸ್ಥಾನದಲ್ಲಿದ್ದು ಹೊರಬಂದೋ ಯಾ ನೂಕಿಸಿಕೊಂಡಿದ್ದ ಬರಹಗಾರರು ಆಕೆಯ ಕುರಿತು ಬರೆದ ಬರಹಗಳಿಂದ ಆಕೆಯ ವ್ಯಕ್ತಿತ್ವದ ಅರಿವು ಸಾಕಷ್ಟು ಜನರಿಗೆ ತಿಳಿದಿದೆ.

ಅವುಗಳಲ್ಲಿ ಪ್ರಮುಖವಾಗಿ ತಾನು ಬರೆದದ್ದೇ ಸರಿ, ಅದನ್ನು ಪ್ರಶ್ನಿಸುವವರ ವಿರುದ್ಧ ದ್ವೇಷ ಕಾರುವುದು. ತನ್ನ ಬಳಗದ ಲೇಖಕರು ಯಾರಾದರೂ ಆಕೆಗಿಂತ ಚಂದ ಬರೆದರೆ ಅಂತವರ ವಿರುದ್ಧ ತನ್ನ ಭಯಾನಕ ಟ್ಯಾಬ್ಲಾಯ್ಡ್ ಲೇಖನಿಯಿಂದ ಬಾಯಿ ಮುಚ್ಚಿಸುತ್ತಿದ್ದುದು, #JustAsking ನ ಗೆಳೆಯರಷ್ಟೇ ಅಲ್ಲದೆ ಇಡೀ ನಾಡಿಗೇ ತಿಳಿದಿತ್ತು.  ಇಂತಹ ಸಾಮಾನ್ಯ ವಿಷಯಗಳ ಕುರಿತು ತಮ್ಮ ಮಾಜಿ ಶ್ರೀಮತಿಯ ಬಗ್ಗೆ ದೂರದಲ್ಲಿದ್ದ ಲೇಖಕರಿಗೆ ಗೊತ್ತಿರಲಿಲ್ಲವೆನಿಸುತ್ತದೆ! ಹಾಗಾಗಿ ಆ ಕುರಿತು ಏನೂ ಬರೆದಿಲ್ಲವೆಂದುಕೊಳ್ಳಬಹುದಿತ್ತು. ಅದಲ್ಲದೆ ಲೇಖಕರು ಬೇರೆ ಯಾವುದೋ ರಂಗದಲ್ಲಿದ್ದಿದ್ದರೆ ಕೂಡಾ ಈ ವಿಷಯಗಳ ಅರಿವಿಲ್ಲವೆಂದುಕೊಳ್ಳಬಹುದಿತ್ತು. ಆದರೆ ಲೇಖಕರು ಪತ್ರಿಕಾರಂಗದಲ್ಲಿ ದೇಶಾದ್ಯಂತ ಖ್ಯಾತರಿದ್ದಾರೆ! ತಾವು ಗೌರಿಯಿಂದ ಬೇರೆಯಾದರೂ, ಒಳ್ಳೆಯ ಸ್ನೇಹಿತರಂತೆ ಪರಸ್ಪರ ಸಂಪರ್ಕದಲ್ಲಿದ್ದೆವೆಂದು ಅವರೇ ಹೇಳಿಕೊಂಡಿದ್ದಾರೆ.

ವಿಷಯಗಳ ಆಳ ಹರಿವು, ವಿಶ್ಲೇಷಣಾ ತಂತ್ರಗಳ ಅರಿವಿಲ್ಲದೆ, ಧೀರ್ಘಾಲೋಚನೆಯ ದೃಷ್ಟಿಕೋನವಿರದೆ, ಲಂಕೇಶರು ಎಂತಹವರನ್ನು ಕೊಂಚ ದೂರದಲ್ಲಿಟ್ಟಿದ್ದರೋ ಆ ಎಲ್ಲರನ್ನೂ ಗೌರಿ ತಲೆಯ ಮೇಲೆ ಕೂರಿಸಿಕೊಂಡಿದ್ದರು. ಭಟ್ಟಂಗಿಗಳ ಕೋಡಂಗಿತನಕ್ಕೆ ಬಲಿಯಾಗುತ್ತ ಗೌರಿ ಹಂತ ಹಂತವಾಗಿ ಕುಗ್ಗುತ್ತ, ತಾನು ಕುಗ್ಗುತ್ತಿಲ್ಲವೆಂದು ಸಾರಲು ಪ್ರಚಾರದ ಹಪಾಹಪಿಯಲ್ಲಿ ವೈರತ್ವದ ಸುಂಟರಗಾಳಿಯನ್ನು ಎಬ್ಬಿಸುತ್ತ, ತೊಡೆತಟ್ಟಿ ಸಂಪ್ರದಾಯವಾದಿಗಳನ್ನು ರೊಚ್ಚಿಗೆಬ್ಬಿಸಿ ಕಡೆಗೆ ಅದಕ್ಕೇ ಬಲಿಯಾದ "ಪರಿ"ಯ, ಉದಾರವಾದದ ಮುಕ್ತ ಅಂಶಗಳಿರುವ, ತಮ್ಮಿಬ್ಬರ ಪ್ರೇಮ, ಪ್ರಣಯ, ಜಗಳ, ಜಿಪುಣತನ, ಧಾರಾಳತನಗಳನ್ನೊಳಗೊಂಡ Tell All ಪುಸ್ತಕ ಇದಾಗಿರಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆ. 

ಆದರೆ ಆಕೆಯ ಆ ಎಲ್ಲಾ ವಿಕ್ಷಿಪ್ತ ವ್ಯಕ್ತಿತ್ವದ ಒಳನೋಟಗಳನ್ನು ಕೈಬಿಟ್ಟು ದಿವಂಗತರಾದವರೆಲ್ಲ ದೇವರೆಂಬಂತೆ ಸ್ತುತಿಸುವ ಗೌರಿಪಾರಾಯಣ ಗ್ರಂಥ ಇದಾಗಿಬಿಟ್ಟಿದೆ. ದೇವಿಯೊಬ್ಬಳು ಬಲಪಂಥೀಯ, ಪಿತೃಪ್ರಧಾನ, ಅಧ್ಯಾತ್ಮವೆಂಬ ರಾಕ್ಷಸರುಗಳನ್ನು ಹೇಗೆ ಕಮ್ಯುನಿಸಂ, ಲಿಬರಲಿಸಂ ಶಸ್ತ್ರಗಳ ನಂಬಿ ಹೋರಾಡಿದಳೆಂಬ ಅಂಶಗಳ ವೈಭವವಿದೆ.

ದೇಶ ಸುತ್ತಿ ಕೋಶ ಓದಿ ವೈಚಾರಿಕ ಜಾಗತೀಕರಣದ ಬಗ್ಗೆ ಬರೆಯುವ ಉದ್ಯೋಗದಲ್ಲಿರುವವರಿಗೆ, ಗೌರಿ ಪ್ರತಿಪಾದಿಸುತ್ತಿದ್ದ ನಕ್ಸಲಿಸಮ್, ಕಮ್ಯುನಿಸಂಗಳು  ಜಾಗತಿಕವಾಗಿ ಏನಾಗಿವೆಯೆಂದು ತಿಳಿಯದೆ? ಪಿತೃಪ್ರಧಾನ ವ್ಯವಸ್ಥೆ ಭಾರತೀಯ ಕಾನೂನಿನಲ್ಲಿ ನಲವತ್ತೈದು ವರ್ಷಗಳ ಹಿಂದೆಯೇ ಇತಿಹಾಸವಾಗಿದೆ ಎಂಬುದು ಅರಿಯದೆ? ಒಬ್ಬ ಗಾಢ ಅನುಭವ, ವಿಶ್ಲೇಷಣ ಪ್ರತಿಭೆ, ಪಂಥೀಯ ಜ್ಞಾನ, ಜಾಗತಿಕ ವಿದ್ಯಾಮಾನಗಳ ಅರಿವಿರುವ ವಿಚಾರವಂತನೆಂದು ಬಿಂಬಿಸಿಕೊಂಡಿರುವ ಲೇಖಕ, ಭಾವನೆಗಳ ಬೆನ್ನತ್ತಿಯೋ ಅಥವಾ ಇನ್ಯಾವುದೋ ಪ್ರಭಾವಕ್ಕೊಳಗಾದರೆ ಏನಾಗಬಹುದೋ ಅದಾಗಿ ಈ ಪುಸ್ತಕ ಏಕಪಕ್ಷೀಯವೆನಿಸುತ್ತದೆ.

ಯಾರು ಕಾರಣರೋ ಅವರನ್ನು ಕೇಳದ ಜಸ್ಟ್ ಅಸ್ಕಿಂಗ್ ಎಂಬ ಜಾಣಮರೆವಿನ ಬಡಬಡಿಕೆಯನ್ನು ಚಳುವಳಿ ಎನ್ನುವ, "ಬಂಡವಾಳಶಾಹಿ" ದೇಶದಲ್ಲಿದ್ದು ಗೌರಿಯ ಸಾವಿನ ಅನುಕಂಪವನ್ನು ಬಂಡವಾಳ ಮಾಡಿಕೊಂಡು,  ಬಿಸಿ ಆರುವ ಮುನ್ನ ತಮ್ಮ ರೊಟ್ಟಿ ಬೇಯಿಸಿಕೊಳ್ಳುವ ಯಾದಿಯಲ್ಲಿ, ಗೌರೀವೃತ ಕೈಗೊಂಡಿರುವವರ ಭಕ್ತಿಯನ್ನು ನಗದಾಗಿಸಿಕೊಳ್ಳಲು ಪುಸ್ತಕ ಮಾರಿಕೊಳ್ಳುತ್ತಿದ್ದಾರೆಂಬ ಅಪವಾದವನ್ನು ಅದೇ ಗೌರೀವೃತನಿರತರ ಪಡೆ ಗುಸುಗುಸು ಹಬ್ಬಿಸಿದೆ.

ಈ ಗುಸುಗುಸುವಿನ ಹಿನ್ನೆಲೆ, ಮತ್ತು ಚಿಂತಕ ಭಗವಾನರನ್ನು ಒಟ್ಟಾಗಿ ದೂಷಿಸಲು ಶುರುಹಚ್ಚಿಕೊಂಡ ಬುದ್ಧಿಜೀವಿಗಳ ತಲೆಯಲ್ಲಿ ಅದ್ಯಾವ ನವ್ಯ ಚಿಂತನೆ ಮೂಡುತ್ತಿದೆಯೋ! ಬಹುಶಃ ಮೃದುಹಿಂದುತ್ವವನ್ನು ಅಪ್ಪಿಕೊಳ್ಳಿರೆಂದು ಹೈಕಮಾಂಡ್ ವಿಶ್ವವಿದ್ಯಾಲಯದ ಆಜ್ಞೆ ಇರಬಹುದು. ಏಕೆಂದರೆ ಭಗವಾನರ ಈ ಕುಚೋದ್ಯದ ಪುಸ್ತಕ ಹೊಸದಲ್ಲ! ಇದು ಅವರೇ ತಿಳಿಸಿದಂತೆ ಹಳೆಯ ಪುಸ್ತಕದ ಎರಡನೇ ಮುದ್ರಣ. ಮೊದಲ ಮುದ್ರಣದಲ್ಲಿ ಜೊತೆಯಿದ್ದ ಬುದ್ಧಿಜೀವಿಗಳೆಲ್ಲ ಎರಡನೇ ಮುದ್ರಣದ ಹೊತ್ತಿಗೆ ಅವರನ್ನು ಕೈಬಿಟ್ಟಿದ್ದಾರೆ. ಏಕೆ!?!
–----

 ಭಗ"ವಾನರ"ರಿಗೆ ರಾಮ ಚಾತುರ್ವರ್ಣ ಪಾಲಕ ಯಾ ರಕ್ಷಕನಾಗಿದ್ದ ಎಂದರೆ ಸರ್ವೇಜನೌ ಸುಖೀನೌಭವಂತು ಎಂದು ಅರಿಯುವಷ್ಟು ತಿಳುವಳಿಕೆಯಿಲ್ಲವೇ? ಏಕೆಂದರೆ ಆ ಕಾಲದಲ್ಲಿದ್ದುದು ಎಲ್ಲಾ ಜನಗಳನ್ನೊಳಗೊಂಡ ನಾಲ್ಕೇ ನಾಲ್ಕು ವರ್ಣಗಳು! ಮತ್ತು ಆ ವರ್ಣಗಳು ಹುಟ್ಟಿನಿಂದ ನಿರ್ಧಾರವಾಗುತ್ತಿರಲಿಲ್ಲ. ಅಂದರೆ ರಾಮ ಎಲ್ಲಾ ಜನಗಳ ಪಾಲಕ ಯಾ ರಕ್ಷಕ ಎಂದರ್ಥ. ಕಾಲಕ್ಕೂ, ಕಲರ್ರಿಗೂ (ವರ್ಣ), ವ್ಯತ್ಯಾಸವರಿಯದ ಈ ಸುಬುದ್ಧಿ ಕರ್ನಾಟಕದ ಅಪ್ರತಿಮ ಬುದ್ದಿ! ಕಾಲದ ಜೊತೆಗೆ ಅವರ ಜೊತೆಗಾರರು ಕಲರ್ ಬದಲಾಯಿಸಿದ್ದು ಅವರ ದುರದೃಷ್ಟ. ಅವರ ಸಂಶೋಧನೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಅವರದನ್ನು ತಳುಕು ಹಾಕಿ ಮಂಡಿಸುವ ಕುಚೋದ್ಯ, ಪ್ರಚಾರಪ್ರಿಯತೆಯ ಹಸಿವು ಪ್ರಶ್ನಾರ್ಹ. ರಾಮನನ್ನು ಮತ್ತು ರಾಮಭಕ್ತ ಗಾಂಧಿಯನ್ನು ವಿರೋಧಿಸುವ ಭಗವಾನರು, ರಾಮಾಯಣದರ್ಶನಂ ಬರೆದು ಜ್ಞಾನಪೀಠ ಪಡೆದ ಕುವೆಂಪುರನ್ನು ಮಾತ್ರ ತಮ್ಮ ಅದರ್ಶವೆನ್ನುತ್ತಾರೆ, ಏಕೆ?!?! 

ಇರಲಿ, ಒಟ್ಟಾರೆ ತಲೆ ಗಟ್ಟಿಯಿದೆಯೆಂದು ಬಂಡೆಗೆ ಚಚ್ಚಿಕೊಳ್ಳಲು ಉತ್ತೇಜಿಸಿದ ಗೌರಿಯ just asking ಮಿತ್ರರೆಲ್ಲರೂ ಆಕೆಯ ಕೊಲೆಗೆ ಕಾರಣರು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸದೇ ವೈಚಾರಿಕತೆಯ ಮಂಡನೆ ಸಾಧ್ಯವೇ ಇಲ್ಲವೆಂಬಂತೆ ಬಲಪಂಥೀಯರ ಮೇಲೆ ಯುದ್ಧ ಸಾರಲು ಗೌರಿಯನ್ನು ದಾಳವಾಗಿ ಬಳಸಿಕೊಂಡ ಈ ಎಲ್ಲಾ ಬುದ್ದಿಜೀವಿಗಳು, ಅಂದಿನ ರಾಜ್ಯಸರ್ಕಾರ, ರಾಜಕಾರಣಿಗಳು, ಮಾಧ್ಯಮಗಳೆಲ್ಲವೂ ಆಕೆಯ ಹತ್ಯೆಗೆ ಕಾರಣೀಭೂತರು.  ಡಚ್ ಪತ್ರಿಕೆ ಜಿಲ್ಲೆನ್ಡ್ ಪೋಸ್ಟನ್ ಪ್ರವಾದಿಯ ಚಿತ್ರವನ್ನು ಪ್ರಕಟಿಸಿದ್ದುದು ಹಿಂಸೆಗೆ ಪ್ರಚೋದನೆಯೋ, ಹಾಗೆಯೇ ಹಿಂದೂ ಧರ್ಮದ ಅಪ್ಪ ಅಮ್ಮ ಎಂದೆಲ್ಲಾ ಹೀಯಾಳಿಸಿದ್ದು ಕೂಡಾ ಪ್ರಚೋದನಕಾರಿಯೇ ಎಂದು ಎಡಪಂಥೀಯರಿಗೆ ಅನ್ನಿಸಲಿಲ್ಲವೇ!

ಸಮಾಜ, ಸಂಘಟನೆ, ಸಮೂಹವೆಂದು ಹೋರಾಡುವ ಈ ಬುದ್ಧಿಜೀವಿಗಳಿಗೆ ಆರ್ಯ/ಅನಾರ್ಯರ ಬಹುಸಮಾಜ ಸಂಘಟಿತವಾಗಿ ವಿಕಸಿಸಿದ ಸಂಸ್ಕೃತಿಯ ರೂಪವೇ ಹಿಂದೂಧರ್ಮ ಎನಿಸದಿದ್ದುದು ಅವರ ಬೌದ್ಧಿಕ ವಿಕಾಸವನ್ನೇ ಪ್ರಶ್ನಿಸುತ್ತದೆ.

ಇನ್ನು ಈ ಸೆಲೆಬ್ರಿಟಿಗಳಿಗೇ ಭದ್ರತೆಯಿಲ್ಲ, ದೇಶ ಬಿಟ್ಟು ಹೋಗಬೇಕೆಂದೆನಿಸಿದರೆ ನಮ್ಮ ನಿಮ್ಮಂಥ ಶ್ರೀಸಾಮಾನ್ಯರು ಬಾಡಿಗಾರ್ಡುಗಳನ್ನಿಟ್ಟುಕೊಂಡು ಆಫೀಸು, ಶಾಪಿಂಗು, ಹೋಟೆಲು, ಸಿನಿಮಾಗಳಿಗೆ ಹೋಗುವಂತಹ ಪರಿಸ್ಥಿತಿ ಇರಬೇಕಿತ್ತು. ಹಾಗಿದೆಯೇ? ನಿಮ್ಮ ಬೀದಿಗಳಲ್ಲಿ ಕರ್ಫ್ಯೂ ಇದೆಯೇ? ನಿಮ್ಮ ನಿಮ್ಮ ಬೀದಿಗಳಲ್ಲಿ ಕೊನೆಯ ಬಾರಿಗೆ ಕರ್ಫ್ಯೂ ಎಂದಿತ್ತು? ಚಿಂತಕರಿಗೆ ತಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳುವ ಸ್ವಾತಂತ್ರ್ಯವಿದ್ದೇ ಇದೆ. ಆದರೆ ಅದನ್ನು ನಿಮ್ಮ ಧರ್ಮಕ್ಕೆ ಅಪ್ಪ ಇಲ್ಲ ಅಮ್ಮ ಇಲ್ಲ ಎಂಬುವಂತಹ ಕೊಳಕು ಭಾಷೆಯಲ್ಲಿ ಪ್ರಚೋದಿಸಿದರೆ  ಪರಿಣಾಮ ಕೂಡಾ ಕೊಳಕಾಗಿಯೇ ಇರತ್ತದಲ್ಲವೇ. ಇಂತಹ ಕೊಳಕು ಜಗಳಗಳನ್ನು ಸಾಕಷ್ಟು ಬೀದಿಗಳಲ್ಲಿ ನಿಮ್ಮ ದಿನನಿತ್ಯ ಜೀವನದಲ್ಲಿ ಕಂಡಿರುತ್ತೀರಿ. ಅಭಿಪ್ರಾಯಗಳ ಮಂಡನೆಯ ರೀತಿ, ಅಂಶ, ಸ್ಪಷ್ಟತೆ ಮುಖ್ಯವಾಗಬೇಕೇ ಹೊರತು ಪ್ರಚೋದನೆಯಲ್ಲ. "ಭಾರತವೆಂಬೋ ಹುಚ್ಚಾಸ್ಪತ್ರೆಯಲ್ಲಿ", ಮತ್ತು "ಕರ್ನಾಟಕವೆಂಬೋ ಕಮಂಗಿಪುರದಲ್ಲಿ" ಎಂಬ ಹ್ಯಾಷ್ಟ್ಯಾಗ್ ಬಳಸುವ ನನಗೆ ಇದುವರೆಗೆ ಯಾವುದೇ ಬೆದರಿಕೆಗಳು ಬಂದಿಲ್ಲ. ನನ್ನೆಲ್ಲ ಅನಿಸಿಕೆಗಳನ್ನು ನಿರ್ಭಿಡೆಯಿಂದ ಬರೆದಿದ್ದೇನೆ.  ಆದರೆ ಇದುವರೆಗೆ ನನಗ್ಯಾವ ಬೆದರಿಕೆಗಳು ಬಂದಿಲ್ಲವೆಂದರೆ ನೀವು ನಿಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳಬಹುದಾದ ವಾತಾವರಣವಿದೆಯೆಂದಲ್ಲವೇ!

ಭಾರತದ ಎಡಪಂಥೀಯರು, ಸಮಾಜವಾದ, ಕಮ್ಯುನಿಸಂ, ನಕ್ಸಲಿಸಮ್ ಭಜನೆಗಳನ್ನು ಮಾಡುತ್ತಾ ಹಣಕಾಸಿನ ಐಶ್ವರ್ಯ, ಅಂತಸ್ತುಗಳ ಆರಮನೆಯ ಬಂಡವಾಳಶಾಹಿತ್ವವನ್ನು ಅಪ್ಪಿಕೊಂಡಿದ್ದಾರೆ. ಅಂದ ಹಾಗೆ ಈ ವಿಚಾರವಂತರ ಕೈಯಲ್ಲಿರುವ ಐಫೋನು ಬಂಡವಾಳಶಾಹಿ ಅಮೆರಿಕಾದ್ದು! ಇವರ ಟೀಶರ್ಟುಗಳ ಮೇಲೆ ರಾರಾಜಿಸುವ ಚೆ ಗುವೇರಾ ನ ಕ್ಯೂಬಾದಲ್ಲಿ ಸೆಲ್ ಫೋನು ಬಿಡಿ, ಟಿವಿ ಕೂಡಾ ಮೊನ್ನೆಯವರೆಗೆ ಇರಲಿಲ್ಲ.

ಇನ್ನು ಭಾರತದ ಎಡಪಂಥೀಯರ ಆರಾಧ್ಯದೈವ ಕೇರಳದ ಮುಖ್ಯಮಂತ್ರಿ ಪಿಣರಾಯಿ ಕೂಡಾ ತಾನು ಕಮ್ಯುನಿಸ್ಟನೆಂದು ಕಮ್ಯುನಿಸ್ಟ್ ಚೈನಾ/ರಷ್ಯಾ/ಕ್ಯೂಬಾಕ್ಕೊ ತಮ್ಮ ಚಿಕಿತ್ಸೆಗೆ ತೆರಳದೆ ಬಂಡವಾಳಶಾಹಿ ಅಮೆರಿಕಾಕ್ಕೆ "ತಾನು ಕಮ್ಯುನಿಸ್ಟನಲ್ಲ"ವೆಂದೇ ಅರ್ಜಿ ಹಾಕಿ ಚಿಕಿತ್ಸೆಗೆ ಬರಲಿದ್ದಾರೆ. ಅಮೆರಿಕೆಗೆ ಬರುವ ಎಲ್ಲರೂ ತಾವು ಕಮ್ಯುನಿಸ್ಟರಲ್ಲವೆಂದೇ ಅರ್ಜಿ ಹಾಕಿ ಬರಬೇಕು. ನಮ್ಮ ಕಮ್ಯುನಿಸ್ಟ್ ನಾಯಕರು ಅಮೆರಿಕಾಕ್ಕೆ ಭೇಟಿ ಕೊಟ್ಟಿದ್ದಾರೆಂದರೆ ಅವರೆಲ್ಲಾ ಸುಳ್ಳರೆಂದೇ ಪ್ರಮಾಣಿಸಿದಂತೆಯೇ!

ಇತ್ತ ಬಂಡವಾಳಶಾಹಿ ಬಲಪಂಥೀಯರು ಧರ್ಮ, ಜಾತಿ ಜನಾಂಗೀಯ ಸಮಾನತೆ, ಮಂದಿರ ನಿರ್ಮಾಣದಂತಹ ಬಂಡವಾಳ ನಷ್ಟದ ಸಮಾನ ಕಾನೂನುಗಳಿಗೆ ಹೋರಾಡುತ್ತಿದ್ದಾರೆ. ಬಲಪಂಥೀಯರ ಬಗ್ಗೆ ಎಡಪಂಥೀಯರೇ ಸಾಕಷ್ಟು ದಿನನಿತ್ಯ ತುತ್ತೂರಿ ಊದುತ್ತಿರುವುದರಿಂದ ಹೆಚ್ಚಿಗೆ ಹೇಳಬೇಕಾದ್ದಿಲ್ಲ. ಒಟ್ಟಾರೆ ಭಾರತದ ವೈಚಾರಿಕತೆಯ ಬಲಪಂಥೀಯರು ಮತ್ತು ಎಡಪಂಥೀಯರು ಹೇಗೆ ತಮ್ಮ ತಮ್ಮ ಸಿದ್ಧಾಂತಗಳಿಗೆ ಬದ್ಧತೆ ತೋರುತ್ತ, ಆದರೆ ಆ ಸಿದ್ಧಾಂತಗಳ ವೈರುಧ್ಯತೆಯಲ್ಲಿ ಬಾಳುತ್ತಿರುವರೆಂದು ಗಮನಿಸಿ. ಸಿದ್ಧಾಂತಗಳನ್ನು ಮೀರಿ ಬೆಳೆಯದ ವೈಚಾರಿಕತೆ, ಧರ್ಮವಾಗಿಬಿಡುತ್ತದೆ. ಆ ನಿಟ್ಟಿನಲ್ಲಿ ಬಹುಧರ್ಮಗಳ ಭಾರತದಲ್ಲಿ ಎಡ ಮತ್ತು ಬಲ ಸಿದ್ದಾಂತಗಳು ಮತ್ತೆರಡು ಧರ್ಮವಾಗಿಬಿಟ್ಟಿವೆ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment