ಪುಲ್ವಾಮಾ ಭಯೋತ್ಪಾದಕ ಕೃತ್ಯ


ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಹಿಂದಿನ ಆತ್ಮಹತ್ಯಾ ಬಾಂಬರನಿಗೆ ಭಾರತೀಯ ಸೇನೆ ಒಂದೊಮ್ಮೆ ಅನವಶ್ಯಕವಾಗಿ ತೊಂದರೆ ಉಂಟುಮಾಡಿದ್ದರಿಂದ ಆತ ಭಯೋತ್ಪಾದಕನಾಗಿ ಇಂತಹ ಕುಕೃತ್ಯಕ್ಕೆ ಕೈ ಹಾಕಿದನೆಂಬ ಕಕ್ಕುಲಾತಿಯ ಕಳಕಳಿಯ ವಿಚಾರ ಈಗ ಅಲ್ಲಲ್ಲಿ ತೇಲಿಬರುತ್ತಿದೆ. 

ಇದು ಬೆಳೆಯುತ್ತಿರುವ ಯುವ ಮನಸ್ಸುಗಳ ಸಂಕೀರ್ಣತೆ ಎನ್ನಬಹುದು. ಇದಕ್ಕೆ ಮಾನಸಿಕ ತಜ್ಞರ ಚಿಕಿತ್ಸೆ ದೊರಕದೇ ಮೂಲಭೂತವಾದಿ  ಧಾರ್ಮಿಕ ಮುಖಂಡರು  ಗಳ ಚಿಕಿತ್ಸೆ ಸಿಕ್ಕಿದ್ದು ಈ ದುರಂತಕ್ಕೆ ಕಾರಣ ಎನ್ನುವ ಚಿಂತಕರು ಆ ಯುವಕನ ಮನೆ, ಪರಿಸರದಲ್ಲಿ ಮಾನಸಿಕ ತಜ್ಞರಿಗಿಂತ ಮೂಲಭೂತವಾದಿ ಧಾರ್ಮಿಕ ಮುಖಂಡರುಗಳೇ ಹೆಚ್ಚು ಅಪ್ಯಾಯಮಾನವಾಗಲು ಕಾರಣಗಳೇನು ಎಂಬ ವಿಚಾರವನ್ನು ಅಪ್ಪಿತಪ್ಪಿಯೂ ಮಂಡಿಸುವುದಿಲ್ಲ. ಕೇವಲ ಭಾವನಾತ್ಮಕವಾಗಿ ಆತನಿಗೆ ಸೈನ್ಯ ಹಿಂದೊಮ್ಮೆ ಕೊಟ್ಟಿದ್ದ ತೊಂದರೆಯೇ ಈ ಕೃತ್ಯಕ್ಕೆ ಕಾರಣ ಎಂಬ ಉದಾರ ಚಿಂತನೆಯನ್ನು ಪ್ರಮುಖವಾಗಿಸುತ್ತಾರೆಯೇ ಹೊರತು ಅಲ್ಲಿನ ಮೂಲಭೂತವಾದಿ ಪರಿಸರವನ್ನು ನಗಣ್ಯ ಎನಿಸಿಬಿಡುತ್ತಾರೆ. ಅರಾಜಕತೆಯ ಸಮಾಜದಲ್ಲಿ ಕೇವಲ ಶೋಷಣೆಯಷ್ಟೇ ಇರುವುದಿಲ್ಲ, ಅಲ್ಲಿ ಮಾನವೀಯತೆಯ ಮುಖವೂ ಇರುತ್ತದೆ. ಆದರೆ ಇವೆಲ್ಲವೂ ಅರಾಜಕತೆಯ ಸಮಾಜದ ಉತ್ಪನ್ನಗಳು. ಇಲ್ಲಿ ಒಂದನ್ನು ಎತ್ತಿ ಇನ್ನೊಂದನ್ನು ಮುಚ್ಚಿಡುವುದಕ್ಕಿಂತ ಆ ಎಲ್ಲಾ ಆಯಾಮಗಳನ್ನು ಸಮಗ್ರವಾಗಿ ನೋಡಬೇಕು. 

ಈ ಯುವ ಮನಸ್ಸಿನ ಸಂಕೀರ್ಣತೆಯ ವಿಚಾರ ಅಂತಹ ಗಹನವಾದ ಸಂಕೀರ್ಣ ವಿಚಾರವೆನಿಸುವುದು ಅಲ್ಲಿನ ಸಮಾಜ ಕೂಡ ಇಂತಹ ಸಂಕೀರ್ಣ ವ್ಯವಸ್ಥೆಯನ್ನು ಹೊಂದಿದ್ದರೆ ಮಾತ್ರ. ಹಾಗೊಮ್ಮೆ ಈ ಸಂಕೀರ್ಣತೆಯನ್ನು ಒಪ್ಪುವುದಾದರೆ ಕಾಶ್ಮೀರದ ಪಂಡಿತರೂ ಸೇರಿದಂತೆ  ಬಹುಪಾಲು ಎಲ್ಲಾ ಕಾಶ್ಮೀರಿಗಳೂ ಭಯೋತ್ಪಾದಕರಾಗಿರಬೇಕಿತ್ತು.  

ಇಲ್ಲಿ ಸೈನ್ಯವು ಒಂದೊಮ್ಮೆ ಆ ಆತ್ಮಹತ್ಯಾ ಬಾಂಬರನಿಗೆ ತೊಂದರೆ ಕೊಟ್ಟಿತ್ತೆನ್ನಲಾದ ಸಂಗತಿಯನ್ನೂ ಸೇರಿಸಿಕೊಂಡು ಮುಂದುವರಿದ ಸಂಕೀರ್ಣ ಸಮಾಜಗಳು ಬುಲ್ಲಿಯಿಂಗ್ ಎನ್ನುತ್ತವೆ. ಈ ರೀತಿಯ ಬುಲ್ಲಿಯಿಂಗ್ ಕೇವಲ ಸೈನ್ಯವಷ್ಟೇ ಅಲ್ಲದೆ ಇಂದಿನ ಸಾಮಾಜಿಕ ಜೀವನದಲ್ಲಿ ಸಾಕಷ್ಟಿದೆ. ಅದಲ್ಲದೆ ಈ ಬುಲ್ಲಿಯಿಂಗ್ ಸಾಕಷ್ಟು ಮುಂದುವರಿದ ಸಂಕೀರ್ಣ ಸಮಾಜಗಳನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆ ಕೂಡ. ಅಂತಹ ಬುಲ್ಲಿಯಿಂಗ್ ಕಾಶ್ಮೀರವೂ ಸೇರಿದಂತೆ ಭಾರತದಲ್ಲಿ ಇದೆಯೇ?

ನನ್ನದೇ ಸ್ಕೂಲಿನಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಂಗತಿಗಳಾಗಿದ್ದ, ಸ್ವಲ್ಪ ದಪ್ಪಗಿದ್ದ ನನ್ನ ಸಹಪಾಠಿ ರಾಜನಿಗೆ "ಆನೆ", "ಗೌರ್ನಮೆಂಟ್ ಹೈಸ್ಕೂಲ್ ಗೂಳಿ" ಎಂಬ  ಛೇಡನೆ, "ಅರ್ಧ ಕಟ್" ಎನ್ನಿಸಿಕೊಳ್ಳುತ್ತಿದ್ದ ರಶೀದ್, "ಅಯ್ಯ ಮಠದಯ್ಯ, ಕುಂಡೆ ಕಟದಯ್ಯ ...." ಎಂದು ಗೋಳು ಹುಯ್ಯಿಸಿಕೊಳ್ಳುತ್ತಿದ್ದ ಯೋಗಿ, "ಹರಕು ಚಡ್ಡಿ, ಮೂಲಂಗಿ ಪ್ಯಾಂಟ್, ಕನ್ನಡಕದ ಪರಮೇಶಿಗೆ ನಾಲ್ಕು ಕಣ್ಣು, ಮೆಳ್ಳೆಗಣ್ಣಿನ ಮಂಜನಿಗೆ ಡಿಮ್ ಅಂಡ್ ಡಿಪ್, ದಪ್ಪಕುಂಡಿಯ ರಾಬರ್ಟನಿಗೆ ಹಂಡೆಕುಂಡಿ ರಾಬರ್ಟ್", ಇತ್ಯಾದಿ, ಇತ್ಯಾದಿಗಳ ಮೂದಲಿಕೆಗಳೆಲ್ಲವೂ ಭಾರತದ ಶಾಲಾ ಚಟುವಟಿಕೆಗಳ ಭಾಗವಾಗಿತ್ತು ಮತ್ತು ಈಗಲೂ ಇರುವುದು. ಈ ಕಾರಣವಾಗಿ ಯಾರೂ ನೇಣು ಹಾಕಿಕೊಂಡಿಲ್ಲ, ಠಾಣೆ ಮೆಟ್ಟಿಲೇರಿಲ್ಲ, ಕೊಲೆಗಳು ನಡೆದಿಲ್ಲ, ಮತ್ತು ಭಯೋತ್ಪಾದಕರಾಗಿಲ್ಲ! ಪರಸ್ಪರ ಬಡಿದಾಡಿಕೊಂಡಿರಬಹುದು, ಆದರೆ ಅದೆಲ್ಲವೂ ಶಾಲಾ ಚಟುವಟಿಕೆಯ ಭಾಗವಾಗಿತ್ತೇ ಹೊರತು ಚಿಂತಕರು ಬಿಂಬಿಸುವ ಸಂಕೀರ್ಣ ಸಮಸ್ಯೆಯಾಗಿ ಅಲ್ಲ.  ಈ ರೀತಿಯ ಬುಲ್ಲಿಯಿಂಗ್ ಸೈನ್ಯದ ಉಪಸ್ಥಿತಿ ಇರುವ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯ. ಆ ಬುಲ್ಲಿಯಿಂಗ್ ಪರಿಧಿಯನ್ನು ದಾಟಿ ನಡೆವುದು ರ್ಯಾಗಿಂಗ್, ನಂತರ ಹಿಂಸೆ. 

ಆದರೆ ಈ ಎಲ್ಲಾ ಮೂದಲಿಕೆಗಳೂ ಅಮೆರಿಕಾದಲ್ಲಿ ಬುಲ್ಲಿಯಿಂಗ್ ಅನಿಸಿಕೊಳ್ಳುತ್ತವೆ. ಶಾಲೆಯಿಂದ ಮನೆಗೆ ಬಂದು ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪಿನಲ್ಲೋ ಮುಂದುವರಿಸಿದರೆ ಅದೇ ಸೈಬರ್ ಬುಲ್ಲಿಯಿಂಗ್! ಇದರ ಕಾರಣವಾಗಿ ಸಾಕಷ್ಟು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮಾನಸಿಕ ರೋಗಕ್ಕೆ ಗುರಿಯಾಗಿದ್ದಾರೆ, ಭಯೋತ್ಪಾದಕರೂ ಆಗಿದ್ದಾರೆ. ಇದಕ್ಕೆ ಕಾರಣ ಅಮೆರಿಕಾದ ಸಾಮಾಜಿಕ ಪರಿಸರ, ಹಿನ್ನೆಲೆ, ಸೂಕ್ಷ್ಮಮತಿ ಮನಸ್ಸು ಇತ್ಯಾದಿ, ಇತ್ಯಾದಿ. ಭಾರತದ ಪರಿಸರಕ್ಕೂ ಅಮೆರಿಕಾದ ಪರಿಸರಕ್ಕೂ ಇರುವ ವ್ಯತ್ಯಾಸ ಅಜಗಜಾಂತರ. ಭಾರತ ಎಡಭಾಗಕ್ಕೆ ಚಲಿಸಿದರೆ, ಅಮೇರಿಕ ಬಲಭಾಗಕ್ಕೆ ಚಲಿಸುವಷ್ಟು ವ್ಯತ್ಯಾಸ.  ಇಂತಹ ಸೂಕ್ಷ್ಮ ವಾತಾವರಣ ಕಾಶ್ಮೀರದಲ್ಲಿಯೂ ಇರಲಾರದು. ಸೈನ್ಯದ ಇರುವಿಕೆ, ಸೈನ್ಯದ ಕಾರ್ಯಾಚರಣೆ ಇವೆಲ್ಲ ಕಾಶ್ಮೀರಕ್ಕೆ ಹೊಸತಲ್ಲ. ಹಾಗೆಯೇ ಸೈನ್ಯದ ಬುಲ್ಲಿಯಿಂಗ್ ಮತ್ತು ರ್ಯಾಗಿಂಗ್ ಅಥವಾ ಹಿಂಸೆ ಕೂಡ. ಅದು ಅಲ್ಲಿನ ಜನಜೀವನದ ರೀತಿಯೇ ಆಗಿಹೋಗಿದೆ. ಹಾಗಾಗಿ ಅದೊಂದು ಹೊಸತನದ ಸಂಕೀರ್ಣತೆಯನ್ನು ಹುಟ್ಟುಹಾಕಿದೆ ಎಂಬುದು ಅಷ್ಟೊಂದು ಸಮಂಜಸವಲ್ಲವೆನಿಸುತ್ತದೆ. ಪ್ರಕ್ಷುಬ್ಧ ವಾತಾವರಣದಲ್ಲಿ ಪ್ರಕ್ಷುಬ್ಧತೆ ಇರಬಾರದೆಂಬುದು ಕರ್ಫ್ಯೂನಲ್ಲಿ ಸಿನೆಮಾ ನೋಡಬಯಸಿದಂತೆ.

ಹಾಗಾಗಿ ಇದನ್ನು ಬೇರೆ ಬೇರೆಯಾಗಿ ನೋಡಬೇಕೇ ಹೊರತು ಸಾಮಾನ್ಯ ತುಲನೆ ಸಮಂಜಸವೆನಿಸುವುದಿಲ್ಲ! ಸದ್ಯಕ್ಕೆ ತತ್ ಕ್ಷಣದ ಪ್ರತಿಕ್ರಿಯೆಯಾಗಿ ಜನ ತಮ್ಮ ತಮ್ಮ ಸಿದ್ದ ಸಿದ್ಧಾಂತಕ್ಕೆ ತಕ್ಕನಾಗಿ ಯುದ್ಧಕುಶಲಿಗಳಾಗಿ, ರಾಜತಂತ್ರಜ್ಞರಾಗಿ, ಮಾನಸಿಕ ತಜ್ಞರಾಗಿ, ಬಲಿಯಾದ ಸೈನಿಕರಲ್ಲಿ "ದಲಿತರೆಷ್ಟು", "ಮುಸ್ಲಿಮರೆಷ್ಟು", "ಬ್ರಾಹ್ಮಣರೆಷ್ಟು" ಎಂಬ ಸಂಖ್ಯಾಶಾಸ್ತ್ರಜ್ಞರಾಗಿಯೂ ಮತ್ತು "ಮಾನವಶಾಸ್ತ್ರಜ್ಞ"ರಾಗಿಯೂ ಅಭಿಪ್ರಾಯಗಳನ್ನು ಹರಿಯಬಿಡುತ್ತಿದ್ದಾರೆ. ಇದೆಲ್ಲವೂ ಉರಿಯುತ್ತಿರುವ ಮನೆಯಲ್ಲಿ ಗಳ ಹಿರಿಯುವ ಪ್ರಕ್ರಿಯೆಯೇ ಹೊರತು ಕಕ್ಕುಲಾತಿ, ರಾಷ್ಟ್ರಭಕ್ತಿಯಲ್ಲ!

ಭಾರತದ ಸಮಸ್ಯೆ ಹೊರಗಿನ ಶತ್ರುಗಿಂತ, ಆ ಶತ್ರುವಿಗೆ ನೆಲೆಯಿತ್ತು ಸಹಕರಿಸುತ್ತ ಸಹಾಯಹಸ್ತ ಚಾಚುವ ಒಳ ಶತ್ರುಗಳು. ಈ ಒಳಶತ್ರುಗಳನ್ನು ನಿಗ್ರಹಿಸುವುದಕ್ಕೆ ಭಾರತದಲ್ಲಿ ಟಾಡಾ ಪೋಟಾ ಕಾನೂನುಗಳಿದ್ದರೂ ಅವು ಅಷ್ಟೊಂದು ಪರಿಣಾಮಕಾರಿಯಾಗಿಲ್ಲವೆಂದು ಪದೇ ಪದೇ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳೇ ಹೇಳುತ್ತವೆ. ಅದಲ್ಲದೇ ಆ ಕಾನೂನಿಗೆ ಒಳಪಡಿಸಿದ ಆರೋಪಿಗಳನ್ನು  ಕಾನೂನಾತ್ಮಕವಾಗಿ ಬೆಂಬಲಿಸುವುದಕ್ಕಿಂತ ಹೆಚ್ಚಾಗಿ ಮುಷ್ಕರಗಳಿಂದ ಅವರನ್ನು ಬಿಟ್ಟುಬಿಡಿ ಎಂಬ  ಸ್ವೇಚ್ಚಾಚಾರಿ  ನಿಲುವಿನ ಹೋರಾಟಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ರೂಪುಗೊಳಿಸಲಾಗುತ್ತದೆ. ಮುಂದುವರಿದ ಯಾವುದೇ ದೇಶದಲ್ಲಿ ಹೀಗೆ ಅವರನ್ನು ಬಿಟ್ಟುಬಿಡಿ ಎಂದು ಮುಷ್ಕರಗಳಾಗುವುದಿಲ್ಲ. ಅಲ್ಲಿನ ವಿಚಾರವಾದಿಗಳು ಆ ಆರೋಪಿಗಳಿಗೆ ಕಾನೂನು ನೆರವು ನೀಡಿ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡುತ್ತಾರೆಯೇ ಹೊರತು ಈ ರೀತಿಯ ಸ್ವೇಚ್ಚಾಚಾರದ ಮುಷ್ಕರಗಳಿಂದಲ್ಲ. ಈ ರೀತಿಯ ಮುಷ್ಕರ, ಹೋರಾಟಗಳು ನೆಲದ ಕಾನೂನನ್ನು, ಸಂವಿಧಾನವನ್ನು ಧಿಕ್ಕರಿಸುವ ಪ್ರಕ್ರಿಯೆಗಳೇ ಹೊರತು ಉಳಿಸುವವಲ್ಲ! ಈ ಹೋರಾಟ ಸೂಕ್ಷ್ಮತೆಯನ್ನು ಸಂವಿಧಾನ ಅಸ್ಮಿತೆಯ ಸಂವಿಧಾನದ ಸೆರಗು ಹಿಡಿದೇ ಹೋರಾಡುವ ಹೋರಾಟಗಾರರು ಅರಿತುಕೊಳ್ಳಬೇಕು.

ಮುಂದುವರಿದ ರಾಷ್ಟ್ರಗಳಲ್ಲಿ ಇದನ್ನು ನಿಗ್ರಹಿಸಲು ರಾಷ್ಟ್ರದ್ರೋಹ ನಿಗ್ರಹ ಕಾನೂನಿದೆ.   ಅಮೆರಿಕಾ ಸಂವಿಧಾನದ ಆರ್ಟಿಕಲ್ ಮೂರು ಮತ್ತು ಸೆಕ್ಷನ್ ಮೂರರ ಪ್ರಕಾರ "ಯಾರು ದೇಶದ ವಿರುದ್ಧ ಯುದ್ಧ ಸಾರುವ, ಯುದ್ಧಕ್ಕೆ ಸಹಾಯ ಮಾಡುವ, ವೈರಿಗಳಿಗೆ ಸಹಾಯ ಹಸ್ತ, ನೆಲೆ ನೀಡುವರೋ, ಮತ್ತು ಅವರ ಆ ಕೃತ್ಯಕ್ಕೆ ಎರಡು ಸಾಕ್ಷಿಗಳಿದ್ದು ಅಥವಾ ಅಂತಹ ವ್ಯಕ್ತಿಗಳು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಳ್ಳುವರೊ ಆಗ ಅದನ್ನು ರಾಷ್ಟ್ರದ್ರೋಹವೆಂದು ಪರಿಗಣಿಸಬೇಕು" ಎನ್ನಲಾಗಿದೆ.  ಯುಕೆ, ಆಸ್ಟ್ರೇಲಿಯಾ ಮುಂತಾದ ಮುಂದುವರಿದ ರಾಷ್ಟ್ರಗಳು ಕೂಡ ಇದೇ ರೀತಿಯ "ಟ್ರೆಚರಿ ಆಕ್ಟ್" ಹೊಂದಿದೆ. ಹಾಗಾಗಿ ಅಲ್ಲಿ ಭಯೋತ್ಪಾದಕರಿಗೆ ನೆಲೆ ನೀಡುವ, ಯಾವುದೇ ಸಹಾಯಹಸ್ತ ಚಾಚುವ ಕರುಣಾಮಯಿಗಳಿಲ್ಲದೆ ಇಂತಹ ಕೃತ್ಯಗಳು ಅಷ್ಟಾಗಿ ನಡೆಯುವುದಿಲ್ಲ. 

ಆದರೆ ಭಾರತದಲ್ಲಿ ಈ ರೀತಿಯ ರಾಷ್ಟ್ರದ್ರೋಹ ನಿಗ್ರಹ ಕಾನೂನು ಇಲ್ಲ. ಭಾರತದಲ್ಲಿನ ಸೆಡೆಶನ್ ಕಾನೂನು ಕೆಲವು ರಾಷ್ಟ್ರದ್ರೋಹದ ಅಂಶಗಳನ್ನು ಹೊಂದಿದ್ದರೂ ಅದಕ್ಕೆ ಸಾಕಷ್ಟು ಶಕ್ತಿಯಿಲ್ಲ. ಹಾಗಾಗಿಯೇ ಅದು ಕೇವಲ ಬೆದರುಬೊಂಬೆಯ ಕಾನೂನಾಗಿ ಇತ್ತೀಚೆಗೆ ಸುದ್ದಿ ಮಾಡುತ್ತಿದೆ. ಬ್ರಿಟಿಷ್ ಸರ್ಕಾರದ ವಿರುದ್ದ ದಂಗೆದ್ದು ಸ್ವಾತಂತ್ರ್ಯ ಗಳಿಸಿದ್ದ ಅಂದಿನ ರಾಷ್ಟ್ರ ನಾಯಕರುಗಳಿಗೆ ತಾವು ಕೂಡಾ ಬ್ರಿಟಿಷ್ ರಾಷ್ಟ್ರದ ವಿರುದ್ಧ ರಾಷ್ಟ್ರದ್ರೋಹ ಮಾಡಿಯೇ ಸ್ವಾತಂತ್ರ್ಯ ಗಳಿಸಿಕೊಂಡಿದ್ದೇವೆ ಎಂಬ ಅಪರಾಧಿ ಭಾವನೆ ಇದ್ದಿತೋ ಏನೋ ಒಟ್ಟಿನಲ್ಲಿ ಅವರ್ಯಾರೂ ರಾಷ್ಟ್ರ ದ್ರೋಹ ನಿಗ್ರಹದ ಕಾನೂನು ರೂಪಿಸಲಿಲ್ಲ.  

ತತ್ ಕ್ಷಣದ ರಣೋತ್ಸಾಹ, ಪರಸ್ಪರ ಕೆಸರೆರಚುವಿಕೆ, ಭಯೋತ್ಪಾದಕನ ಕುಟುಂಬದ ಮೇಲಿನ ಕಕ್ಕುಲಾತಿ, ಒಂದೆರಡು ಪಾಲಿಸಿಗಳ ಬದಲಾವಣೆ ಇವುಗಳೆಲ್ಲವೂ ತಾತ್ಕಾಲಿಕ ಶಮನಗಳೇ ಹೊರತು ಕಾಯಂ ಪರಿಹಾರವಲ್ಲ. ಏಕೆಂದರೆ ಇದನ್ನೇ ಇಂದಿನ ಸರ್ಕಾರದಿಂದ ಹಿಂದಿನ ಸರ್ಕಾರಗಳೆಲ್ಲಾ ಪಾಲಿಸಿಕೊಂಡು ಬಂದಿರುವುದು. ಅದನ್ನೇ  ಮುಂಬರುವ  ಸರ್ಕಾರಗಳು ಮತ್ತೊಮ್ಮೆ ಕವಿಹೃದಯವನ್ನು ಮೆರೆಯುತ್ತ ಸಂಜೋತಾ ಬಸ್ಸು ರೈಲುಗಳನ್ನು ಬಿಡುವುದೋ, ಅಥವಾ ಮತ್ತೊಮ್ಮೆ ಇಂತಹ ಕೃತ್ಯಗಳು ನಡೆದರೆ ಕ್ರಿಕೆಟ್ ಪಂದ್ಯಗಳನ್ನು ಬಹಿಷ್ಕರಿಸುವುದೋ ಮಾಡುತ್ತವೆಯೇ ಹೊರತು ಶಾಶ್ವತ ಪರಿಹಾರೋಪಾಯವನ್ನಲ್ಲ.

ಭಾರತ ಈಗಲಾದರೂ ರಾಷ್ಟ್ರದ್ರೋಹ ನಿಗ್ರಹದಂತಹ ಕಾನೂನು ರಚಿಸಲು ಮನಸ್ಸು ಮಾಡಬೇಕು. 

ವಿಪರ್ಯಾಸವೆಂದರೆ ಬಹುಪಾಲು ಭಾರತೀಯರಿಗೆ ಅಪರಿಚಿತನಾಗಿರುವ ಆದರೆ ಭಾರತದ ಅಪ್ರತಿಮ ಸಾಹಸೀ ಸಾಮ್ರಾಟನಾಗಿದ್ದ, ಒಂದೊಮ್ಮೆಯೂ ಯಾವುದೇ ಯುದ್ಧಗಳಲ್ಲಿ ಸೋಲದ, ಇಡೀ ಭಾರತದೆಲ್ಲಾ ಸಾಮ್ರಾಜ್ಯಗಳನ್ನೂ ಗೆದ್ದಿದ್ದ ಕಾಶ್ಮೀರದ ಲಲಿತಾದಿತ್ಯನ ಸಾಹಸ, ಮತ್ತು ಕಾಶ್ಮೀರವನ್ನು ಗೆಲ್ಲಲೇಬೇಕೆಂಬ ಮಹಮ್ಮದ್ ಘಜನಿಯ ಮಹದಾಸೆಯನ್ನು ಆಸೆಯಾಗಿಯೇ ಉಳಿಸಿದ್ದ ಕಾಶ್ಮೀರಿ  ಜನತೆಯ ಕೆಚ್ಚು ಇಂದು ಲಲಿತಾದಿತ್ಯನಂತೆಯೇ ಅಜ್ಞಾತವಾಗಿ ಅಲ್ಲಿನ ಜನರ ಕೆಚ್ಚು ತಣ್ಣಗಾಗಿ ಕಾಶ್ಮೀರ ಘಜನಿಯ ಸಾಮ್ರಾಜ್ಯವಾಗಿಬಿಟ್ಟಿದೆ.

No comments:

Post a Comment