ಮೋದಿ ವಿರೋಧಿಗಳ ವೈಫಲ್ಯಕ್ಕೆ ಕಾರಣಗಳೇನು?

ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮೋದಿಯವರ ಕ್ರಿಯೆಗಳಿಂದಲೇ ತಾರ್ಕಿಕವಾಗಿ ಹೇಗೆ ಸಾಬೀತುಪಡಿಸಬಹುದಿದ್ದಿತು, ಆದರೆ ಆ ರೀತಿ ಇಲ್ಲಿಯವರೆಗೆ ಒಂದು ತಾರ್ಕಿಕ ವಾದವನ್ನು ವಿರೋಧಪಕ್ಷಗಳನ್ನು ಬಿಡಿ, ಪ್ರಜ್ಞಾವಂತರು ಕೂಡಾ ಎತ್ತದೆ ಕೇವಲ ಟ್ರೋಲಿಗೆ ಬಲಿಯಾಗಿಬಿಟ್ಟಿದ್ದಾರೆ. ಎಲ್ಲೆಡೆ ರೋಚಕ, ತಕ್ಷಣದ ಪ್ರತಿಕ್ರಿಯೆಯನ್ನೇ ಮೆರೆಸಿದ್ದಾರೆಯೇ ಹೊರತು ಹೂರಣವಿರುವ ಒಂದು ವಾದವನ್ನೋ, ಪ್ರತಿಭಟನೆಯನ್ನೋ ಮಾಡಿಲ್ಲ. ತಮಗೆ ತಾವೇ ಪರೋಕ್ಷವಾಗಿ ತಮ್ಮ ಟ್ರೋಲುಗಳಿಂದಲೇ ವ್ಯತಿರಿಕ್ತವಾಗಿ ಮೋದಿಯವರಿಗೆ ಒಳಿತಾಗುವಂತೆ ಮಾಡಿಬಿಟ್ಟಿದ್ದಾರೆ.
ಇರಲಿ, ಟ್ರೋಲಿಲ್ಲದೆ ತಾರ್ಕಿಕವಾಗಿ ವಾದಮಂಡನೆ ಅಂದರೆ ಹೇಗೆ?
ಸರಿ, ಅದಕ್ಕೆ ಉದಾಹರಣೆಯಾಗಿ ಮೋದಿಯವರ ಇತ್ತೀಚಿನ ಗುಹಾಂತರವನ್ನೇ ತೆಗೆದುಕೊಳ್ಳೋಣ. ಇದರಲ್ಲಿ ಎರಡು ಆಯಾಮಗಳಿವೆ:
1. ಮೋದಿ ಉಳಿದುಕೊಂಡ ಗುಹೆಯ ಬಾಡಿಗೆ ದಿನವೊಂದಕ್ಕೆ ರೂ.990 ಮತ್ತದನ್ನು ಭರಿಸಿದ್ದು ಮೋದಿ ತನ್ನ ಜೇಬಿನಿಂದ!
ಅದೇ ಮೊನ್ನೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕಳೆದ ವಾರ ಮಡಿಕೇರಿಯ ಇಬ್ಬನಿ ರಿಸಾರ್ಟಿನಲ್ಲಿದ್ದುದು ದಿನಕ್ಕೆ ರೂ.36000 ಬಾಡಿಗೆಯ ಕೋಣೆಯಲ್ಲಿ. ಆ ಖರ್ಚನ್ನು ಭರಿಸಿದ್ದು ರಾಜ್ಯ ಸರ್ಕಾರವೆಂದು ಪತ್ರಿಕಾ ವರದಿಗಳು ತಿಳಿಸಿವೆ.
ಈ ಮೊದಲನೇ ಆಯಾಮದಲ್ಲಿ ಮೇಲುನೋಟಕ್ಕೆ ಮೋದಿ ಅಪ್ರತಿಮ ಪ್ರಶ್ನಾತೀತ ಪ್ರಾಮಾಣಿಕ ವ್ಯಕ್ತಿಯೆನಿಸುತ್ತಾರೆ.
ಆದರೆ ಕೇವಲ ಪ್ರಾಮಾಣಿಕ, ಸತ್ಯಸಂಧರೆನ್ನುವ ಅರ್ಹತೆ ದೇಶವನ್ನು ಮುನ್ನಡೆಸಲು ಸಾಕೆ?
2. ಈ ಗುಹೆಗಳನ್ನು ನಿರ್ಮಿಸಿದ ಸಂಸ್ಥೆಯು ತಮಗೆ ಈ ಗುಹೆಗಳನ್ನು ನಿರ್ಮಿಸಿ ಆಧ್ಯಾತ್ಮಿಕ ಪ್ರವಾಸಿಗಳನ್ನು ಸೆಳೆಯುವ ಐಡಿಯಾ ಕೊಟ್ಟವರು ಮೋದಿಯವರೇ ಎಂದಿದೆ. ಈ ಐಡಿಯಾವನ್ನು ಅದ್ಭುತವೆಂದು ಪರಿಗಣಿಸಿ ಬಂಡವಾಳ ಹೂಡಿದ ಸಂಸ್ಥೆ ಈಗ ನಷ್ಟವನ್ನು ಅನುಭವಿಸುತ್ತಿದೆ. ಆದರಲ್ಲೂ ಮೋದಿಯವರು ಕೇದಾರಕ್ಕೆ ಪದೇ ಪದೇ ಸಂದರ್ಶಿಸಿ ರಸ್ತೆಗಳು ಪರೋಕ್ಷವಾಗಿ ಅಭಿವೃದ್ಧಿಯನ್ನು ಕಂಡಿದ್ದರೂ ಕೂಡ.
ದಿನಕ್ಕೆ ಮೂರು ಸಾವಿರ ಬಾಡಿಗೆಯಿದ್ದು ಕನಿಷ್ಟ ಮೂರುದಿನದ ಬುಕ್ಕಿಂಗ್ ಕಡ್ಡಾಯವೆಂದು ಆರಂಭಿಸಿದ ಈ ವ್ಯವಸ್ಥೆ ಪ್ರವಾಸಿಗರ ಕೊರತೆಯಿಂದ ಬಾಡಿಗೆಯನ್ನು ರೂ.990ಕ್ಕೆ ಇಳಿಸಿ ಕನಿಷ್ಟ ಮೂರು ದಿನದ ಬುಕ್ಕಿಂಗ್ ಸಡಿಲಿಸಿ ದಿನದ ದಿನದ ಬಾಡಿಗೆ ಲೆಕ್ಕದಲ್ಲಿ ಕೂಡಾ ಗಿರಾಕಿಗಳನ್ನು ಕಾಣುತ್ತಿಲ್ಲವೆಂದು ಆ ಸಂಸ್ಥೆಯೇ ಹೇಳಿಕೊಂಡಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಮೋದಿಯವರು ಕೊಟ್ಟ ಸಲಹೆ ವಿಫಲವಾಗಿದೆ.
ಈ ಗುಹಾಂತರದ ವಿಷಯದ ಮೇಲಿನ ಎರಡೂ ಆಯಾಮಗಳನ್ನು ಗಮನಿಸಿದಾಗ ಮೇಲುನೋಟಕ್ಕೆ ಕಾಣುವ ಮೊದಲನೇ ಆಯಾಮದ ಪ್ರಾಮಾಣಿಕತೆಯ ಸಂಗತಿಯನ್ನೇ ಪ್ರಮುಖವಾಗಿ ಪರಿಗಣಿಸಿ ಅವರ ಅಭಿಮಾನಿಗಳು ಆರಾಧಿಸುವುದು ಮತ್ತು ಅವರ ವಿರೋಧಿಗಳು ಟ್ರೋಲಿಸುವುದು ನಡೆದಿದೆಯೇ ಹೊರತು, ಎರಡನೇ ಆಯಾಮವನ್ನು ಯಾರೂ ನೋಡುತ್ತಿಲ್ಲ.
ಇಲ್ಲಿಯೇ ಪ್ರಜ್ಞಾವಂತರು ಸೋಲುತ್ತಿರುವುದು. ಕೇವಲ ಮೇಲ್ಮೆಯನ್ನು ಪರಿಗಣಿಸಿ ವಿಷಯಗಳ ಆಳಕ್ಕಿಳಿಯುವ ತಮ್ಮ ಪ್ರಜ್ಞೆಯನ್ನು ಮರೆತೇಬಿಟ್ಟಿದ್ದಾರೆ. ಮೋದಿ ಅಭಿಮಾನಿಗಳು ಜೈ ಎಂದರೆ ತಾವು ಧಿಕ್ಕಾರ ಕೂಗಲೇಬೇಕೆಂಬ ನಿಯಮವನ್ನು ಹಾಕಿಕೊಂಡುಬಿಟ್ಟಿದ್ದಾರೆ.
ಹಾಗೆ ನೋಡಿದರೆ ಆಧ್ಯಾತ್ಮ ಮೋದಿಯವರ ಆಳ ಅನುಭವವಿರುವ ವಿಷಯ. ದೇವೇಗೌಡರು ಗುಡಿ ಸುತ್ತುವುದು ಮೌಢ್ಯವಾದರೆ, ಮೋದಿಯವರದು ಆಧ್ಯಾತ್ಮ, ವಿಶ್ವಮಾನ್ಯ ಆಧ್ಯಾತ್ಮ! ಹೀಗಿದ್ದಾಗ ಅಧ್ಯಾತ್ಮದ ವಿಶ್ವಗುರು, ಯೋಗದ ಮಾಂತ್ರಿಕ, ಬ್ರಹ್ಮಚಾರಿ ಎಂದೆಲ್ಲಾ ಎನಿಸಿಕೊಂಡಿರುವ ಮತ್ತು ಇವುಗಳಲ್ಲಿ ಆಳ ಅನುಭವವಿರುವ ವಿಷಯದ ಹಿನ್ನೆಲೆಯ ಆಧ್ಯಾತ್ಮಿಕ ಪ್ರವಾಸದ ಅವರ ಸಲಹೆ ಮುಗ್ಗರಿಸಿ ಮಕಾಡೆ ಮಲಗಿದೆ ಎಂದು ಅವರ ಗುಹಾಂತರದ ಎರಡನೇ ಆಯಾಮ ತಿಳಿಸುತ್ತದೆ. ಹೀಗಿದ್ದಾಗ ಅವರ ಅದೆಂತು ಅಪರಿಮಿತ ಅನನುಭವೀ ಯೋಜನೆಗಳು ವಿಫಲವಾಗಬಹುದು? ಈ ನಿಟ್ಟಿನಲ್ಲಿ ಬುದ್ಧಿಜೀವಿಗಳು ಒಂದು ವಾಸ್ತವವಾದವನ್ನು ಇದುವರೆಗೂ ಮಂಡಿಸಿಲ್ಲ.
ನರ್ಮದಾ ತೀರದಲ್ಲಿ ನಿಲ್ಲಿಸಿದ ವಿಗ್ರಹದ ಬದಲು ನರ್ಮದೆಯನ್ನು ಇನ್ನೊಂದು ನದಿಯೊಂದಿಗೆ ಜೋಡಿಸಿ ಮೋದಿಯವರು ತಮ್ಮ ಪಕ್ಷದ ಪ್ರಣಾಳಿಕೆಯ ನದಿ ಜೋಡನೆಯ ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ತಮ್ಮ ಮೊದಲ ಅಧಿಕಾರಾವಧಿಯಲ್ಲಿ ನಿರೂಪಿಸಬಹುದಿತ್ತಲ್ಲವೇ ಎಂಬ ಒಂದು ಮೋದಿಯವರ ಪ್ರಣಾಳಿಕೆಗೆ ಬದ್ಧ ವಿಷಯಮಂಡನೆಯನ್ನು ಮಾಡದೆ ವಿಗ್ರಹದ ವ್ಯಕ್ತಿಯ ಚಾರಿತ್ರ್ಯಹೀನ ಮಾಡುವಲ್ಲಿ ಎಲ್ಲಾ ಪ್ರಜ್ಞಾವಂತರು ತಮ್ಮ ಪ್ರಜ್ಞೆಯನ್ನು ಮೀಸಲಿಟ್ಟರು. ಒಂದು ತಾರ್ಕಿಕ ಅರ್ಥಪೂರ್ಣ ವಾದವನ್ನು ಹುಟ್ಟು ಹಾಕಿದ್ದರೆ ಅವರ ಮೇಲಿನ ಭರವಸೆಗೆ ಇಂಬು ದೊರೆಯುತ್ತಿದ್ದಿತು.
ಇದು ಕೇವಲ ಒಂದು ಉದಾಹರಣೆ ಮಾತ್ರ. ಈ ರೀತಿಯ ಸಾಕಷ್ಟು ತಾರ್ಕಿಕ ವಿಚಾರಗಳನ್ನು ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ವಿಷಯಗಳಲ್ಲಿ ಮಂಡಿಸಬಹುದಿತ್ತು. ಆದರೆ ಜನತೆ, ವಿರೋಧಪಕ್ಷ, ಮತ್ತು ಪ್ರಜ್ಞಾವಂತರು ಟ್ರೋಲಿನ ರೋಚಕತೆಯಲ್ಲಿ ಕಳೆದುಹೋಗಿದ್ದರು. ನೋಟ್ ಬ್ಯಾನಿನ ನೋಟುಗಳು ಜಮೆಗೊಂಡ ಖಾತೆಗಳ ಜಾಡು ಹಿಡಿದು ಕಪ್ಪುಹಣವನ್ನು ದೇಶದೊಳಗಿನಿಂದಲೇ ಗುಡಿಸಿ ಹಾಕಬಹುದಿತ್ತು. ಹಾಗೆ ಗುಡಿಸಿ ಎಂದು ಯಾರೂ ಕೇಳಲಿಲ್ಲ. ಯಾರೂ ಕೇಳದಿದ್ದುದರಿಂದ ಅವರು ಗುಡಿಸಲಿಲ್ಲ. ಪರ್ಯಾಯವಾಗಿ ಇನ್ನೇನನ್ನೋ ಸ್ವಚ್ಛ ಭಾರತವೆಂದು ಗುಡಿಸಿದರು.
ಇಂತಹ ಅನೇಕ ತಾರ್ಕಿಕ ವಿಷಯಗಳ ಪಟ್ಟಿಯನ್ನೇ ನಾನು ಕೊಡಬಲ್ಲೆ. ಆದರೆ ನಾನೊಬ್ಬ ಅನಿವಾಸಿ ಸಾಗರೋತ್ತರ ನಾಗರೀಕ. ಈ ರೀತಿಯ ಚಿಂತನೆ ಹೊರಗಿನಿಂದ ಬರುವುದಕ್ಕಿಂತ ಒಳಗಿನಿಂದ ಬಂದರೆ ಉತ್ತಮ ಮತ್ತು ಪರಿಣಾಮಕಾರಿಯಲ್ಲವೇ.
ಮೋದಿಯವರು ಮತ್ತೊಮ್ಮೆ ಗೆಲ್ಲುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಒಂದು ಪಕ್ಷ ಆ ಸಮೀಕ್ಷೆಗಳು ನಿಜವಾದಲ್ಲಿ ಮುಂದಿನ ಐದು ವರ್ಷಗಳಾದರೂ ಟ್ರೋಲಿಲ್ಲದ ತಾರ್ಕಿಕ ವಾದಗಳನ್ನು ಮಂಡಿಸಿ ದೇಶ ಸರಿದಾರಿಯಲ್ಲಿ ಸಾಗುವುದನ್ನು ಕಾಣಬಹುದೇ?
ಅಂದ ಹಾಗೆ, ನಾನು ಎಡವೂ ಅಲ್ಲ, ಬಲವೂ ಅಲ್ಲ. ನಾನೊಬ್ಬ ನಾಸ್ತಿಕ ಉದಾರವಾದದ ವಾಸ್ತವವಾದಿ. ನಾನು ಬಾಲಕನಾಗಿದ್ದಾಗ, ಮತ್ತು ಅಂದು ಯುವಕನಾಗಿದ್ದ ಮತ್ತು ಇತ್ತೀಚಿನ ಕೆಲ ವರ್ಷಗಳ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರೊಟ್ಟಿಗೆ ಕೂಡಿ ಕಾಂಗ್ರೆಸ್ಸಿಗೆ ಬ್ಯಾನರ್ ಕಟ್ಟುತ್ತಿದ್ದೆನು. ಆ ನನ್ನ ಹಿನ್ನೆಲೆಯಲ್ಲಿ ಮತ್ತು ಮೋದಿ ಗೆಲ್ಲುತ್ತಾರೆಂದು ಸಮೀಕ್ಷೆಗಳು ಹೇಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಏಕೆ ಈ ಚುನಾವಣೆಯಲ್ಲಿ ವಿಫಲವಾಯಿತೆಂದು ಖಚಿತವಾಗಿ ಹೇಳಬಲ್ಲೆ.
1. ಮೋದಿಗೆ ಓಟು ಹಾಕಿದವರನ್ನೆಲ್ಲಾ ಭಕ್ತರೆಂದು ಕರೆದು ಹೀಗಳೆದಿದ್ದು. ಭಾರತವನ್ನು ವಿಭಜಿಸುವಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ಅದು ಬೆಂಬಲಿಸಿದ ಬುದ್ಧಿಜೀವಿಗಳ ಪಾಲು ಸಾಕಷ್ಟಿದೆ. ಕೂದಲೆಳೆಯಷ್ಟು ಮೋದಿ ಯೋಜನೆಯ ಪರ ಸಹಮತವನ್ನು ವ್ಯಕ್ತಪಡಿಸುವವರನ್ನು ಬೆನ್ನಟ್ಟಿ ಭಕ್ತ ಎಂದು ವಿಭಜನೆ ಮತ್ತು ಹೀಯಾಳಿಕೆಯನ್ನು ವಿಜೃಂಭಿಸಿದ್ದಾರೆ. ಕೋತಿ ಬೆಣ್ಣೆ ಮೆದ್ದು ಮೇಕೆಗೆ ಒರೆಸಿದಂತೆ ಆ ವಿಭಜನೆಯನ್ನು ಮೋದಿಯವರ ಮೂತಿಗೆ ಒರೆಸಲಾಗಿದೆ. ಜನರನ್ನು ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ಈ ಐದು ವರ್ಷಗಳಲ್ಲಿ ಮಾಡಲೇ ಇಲ್ಲ.
2. JNU ಮುಂತಾದ ವಿಶ್ವವಿದ್ಯಾಲಯದ ವಿವಾದ ಸೃಷ್ಟಿಕರ್ತರನ್ನು ಮೋದಿಯ ವಿರುದ್ಧ ಛೂ ಬಿಟ್ಟು ಕಮ್ಯುನಿಸ್ಟ್, ಎಡ, ನಕ್ಸಲ ಮತ್ತು ಭಯೋತ್ಪಾದಕರನ್ನು ಬೆಂಬಲಿಸಿದ್ದು, ಮತ್ತು ಅತಾರ್ಕಿಕವಾಗಿ 'ಒದರಿದ್ದು.'
3. ತಮ್ಮ ಪರವಾಗಿ ಪತ್ರಿಕಾರಂಗದ ಕಳ್ಳರನ್ನೆಲ್ಲಾ ಒಗ್ಗೂಡಿಸಿ ದುಡ್ಡು ಕೊಟ್ಟು ಮಾನ ಹರಾಜು ಹಾಕಿಸಿಕೊಂಡದ್ದು.
4. ಸಂಸತ್ತಿನಲ್ಲಿ ಬೇಕಾಬಿಟ್ಟಿ ಲಂಗುಲಗಾಮಿಲ್ಲದೆ ವಾದ ಮಂಡಿಸಿದ್ದು. ಅಲ್ಪಸಂಖ್ಯಾತರ ಓಲೈಕೆಯಲ್ಲಿ ಬಹುಸಂಖ್ಯಾತರನ್ನು ತಿರಸ್ಕರಿಸುವುದಿರಲಿ ಅವರನ್ನು ನಿಕೃಷ್ಟವಾಗಿ ಅವಹೇಳನ ಮಾಡಿದ್ದುದು.
5. ಅವಕಾಶವಾದಿಯಾದ ದೇವೇಗೌಡ, ಲಾಲೂ, ಮುಲಾಯಂ, ಸ್ಟ್ಯಾಲಿನ್, ಮಾಯಾವತಿ, ಮುಂತಾದವರೊಂದಿಗೆ 'ಹಸ್ತ' ಜೋಡಿಸಿದ್ದು. 3G ಕೇಸಿನಲ್ಲಿ ಕ್ಲೀನಾಗಿ ಬಂದವರು ಈ ಮೇಲಿನವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮತ್ತೆ ತಮಗೆ ತಾವೇ ಮಸಿ ಬಳಿದುಕೊಂಡರು.
...ಹೀಗೆ ನೂರೊಂದು ಕಾರಣಗಳನ್ನು ನೀಡಬಹುದು.
ಮೆಜೆಸ್ಟಿಕ್ಕಿನ ಒಂದು ಸ್ವೀಟ್ ಅಂಗಡಿಯಲ್ಲಿ ಲಾಡು ಕೊಂಡು ಹೋಗಿ ದೆಹಲಿಯ ಹೈಕಮ್ಯಾಂಡಿಗೆ ತಿರುಪತಿ ತಿಮ್ಮಪ್ಪನ ಪ್ರಸಾದವೆಂದು ಕೊಡುವ ಕಾಲ ಎಂದೋ ಮುಗಿದುಹೋಗಿದೆ ಎಂದು ಕಾಂಗ್ರೆಸ್ ಪಕ್ಷ ಈಗಲಾದರೂ ಅರಿಯುವುದು ಅತ್ಯಾವಶ್ಯಕ! ಹಾಗೆಯೇ ರಾಹುಲ್ ಆ ಲಾಡುವನ್ನು ತನ್ನ ಅಜ್ಜಿ, ಅಪ್ಪನಂತೆ ಮಹಾಪ್ರಸಾದವೆಂದು ಮೇಯುವುದು ಕೂಡಾ. ಇದು ಉತ್ಪ್ರೇಕ್ಷೆಯಲ್ಲ, ನೈಜ ಸಂಗತಿ!
ಆದರೆ ಈ ನೈಜ ಸಂಗತಿಗಳನ್ನು ಗಹನವಾಗಿ ಪರಿಗಣಿಸಿ ಆತ್ಮವಿಮರ್ಶೆಯನ್ನು ಮಾಡಿಕೊಳ್ಳುವ ತಾಳ್ಮೆ, ವೈಶಾಲ್ಯ, ಪ್ರೌಢಿಮೆಯನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿದೆಯೇ?
ಒಂದು ಉತ್ತಮ ವಿರೋಧ ಪಕ್ಷವೆನಿಸಿಕೊಳ್ಳುವುದು ಕೂಡ ಆಡಳಿತ ಹಿಡಿದಷ್ಟೇ ಅತ್ಯಾವಶ್ಯಕ. ಏಕೆಂದರೆ ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವಾತ ವೀರನೂ ಅಲ್ಲ ಶೂರನೂ ಅಲ್ಲ....ಗುಹೇಶ್ವರ!

No comments:

Post a Comment