ನವಸಮಾಜದ ಕನಸುಗಳು ಮತ್ತು ಜಂತು ನಿರ್ವಹಣೆ!

ಮಾನವ ಸಮಾಜ ಸೃಷ್ಟಿಯಾದಂದಿನಿಂದ ಆ ಕನಸುಗಳು ಹುಟ್ಟಿ ಕಾಲಕಾಲಕ್ಕೆ ನವೀಕರಣಗೊಳ್ಳುತ್ತಿವೆ. ಈಜಿಪ್ಟ್, ಮೆಸಪಟೋಮಿಯಾ, ಮತ್ತು ಸಿಂಧೂ ನದಿ ನಾಗರೀಕತೆಗಳಂತಹ ನಾಗರೀಕತೆಗಳು ಅಂತಹ ಕನಸುಗಳಿಂದಲೇ ಸೃಷ್ಟಿಯಾದದ್ದು. ಆ ನಂತರದ ಸಾಮ್ರಾಜ್ಯಗಳು, ಧಾರ್ಮಿಕ ಪಂಥಗಳು, ಭಿನ್ನಾಭಿಪ್ರಾಯ, ಕ್ರಾಂತಿಗಳೆಲ್ಲವೂ ಅಂತಹ ಕನಸುಗಳ ಫಲ.
ಭಾರತದ ಕಳೆದ ಐದು ಸಾವಿರ ವರ್ಷಗಳ ಇತಿಹಾಸವನ್ನು ಅವಲೋಕಿಸುತ್ತಾ, ವಿಶ್ಲೇಷಿಸುತ್ತ ನೋಡಿದಾಗ ಕಾಣುವುದು ಅನೇಕ ನವ ಸಮಾಜ ನಿರ್ಮಾಣದ ಕನಸುಗಳು ಮತ್ತವುಗಳನ್ನು ನನಸಾಗಿಸಲು ನಡೆಸಿದ ಪ್ರಯತ್ನಗಳು. ಆ ಪ್ರಯತ್ನಗಳಲ್ಲಿನ ಸಂಕಲ್ಪ, ವಿಕಲ್ಪ, ಸಾಕಾರ, ವಿಕಾರಗಳೆಲ್ಲದರ ನಡುವೆ ಸಮಾಜ, ವಿಕಸನದ ಸ್ಥಿತ್ಯಂತರವನ್ನು ಕಂಡರೂ ಸ್ಥಿತಪ್ರಜ್ಞತೆಯನ್ನು ಕಾಪಾಡಿಕೊಂಡು ಬಂದಿದೆ.
ಎಲ್ಲಾ ನವಸಮಾಜದ ಕನಸುಗಳು ಮೂಲತಃ ಭಾವನಾತ್ಮಕ ನೆಲೆಯಿಂದಲೇ ಆರಂಭವಾಗುವುದು. ಇದು ಚಂದ್ರಗುಪ್ತ ಮೌರ್ಯನ ರಾಷ್ಟ್ರೀಯತೆಯ ಕನಸಿರಬಹುದು, ಬ್ರಿಟಿಷರ ಸೂರ್ಯ ಮುಳುಗದ ಸಾಮ್ರಾಜ್ಯದ ಕನಸಿರಬಹುದು, ಅಮೆರಿಕನ್ನರ ಹಿರಿಯಣ್ಣನಾಗುವ ಕನಸಿರಬಹುದು, ಕುವೆಂಪುರವರ ವಿಶ್ವಮಾನವ ಸಂದೇಶ, ಜಾನ್ ಲೆನನ್ ನ ಡ್ರೀಮರ್ ಹಾಡು ಎಲ್ಲವೂ ಅತ್ಯುತ್ತಮ ಕನಸುಗಳೇ. ಈ ಕನಸುಗಳನ್ನು ಅನುಷ್ಠಾನಗೊಳಿಸಲು ವಾಸ್ತವಿಕ ನೆಲೆಗಟ್ಟಿನಲ್ಲಿ, ಒಂದು ಲಾಂಗ್ ಟರ್ಮ್ ನೀಲನಕಾಶೆಯನ್ನು ಸಿದ್ಧಪಡಿಸಿಟ್ಟುಕೊಂಡ ಕನಸುಗಳು ಸಾಕಾರಗೊಂಡಿವೆ. ಆದರೆ ಆ ನಿಶ್ಚಿತ ಮಾರ್ಗವರಿಯದ ಭಾವುಕ, ಭ್ರಾಮಕಗಳು ಉತ್ತಮ ಕತೆ, ಕವನ, ಮತ್ತು ಸಾಹಿತ್ಯವನ್ನು ಸೃಷ್ಟಿಸಿರುವವು.
ಇನ್ನು ನವ ಸಮಾಜದ ಕನಸುಗಳು ದೇಶಾತೀತವಾಗಿ ಎಲ್ಲೆಡೆ ಒಂದೇ ತೆರನಾಗಿ ಸಮಾಜಮುಖಿಯಾಗಿರುತ್ತವೆ. ಆದರೆ ಆ ಕನಸುಗಳಿಗೆ ಒಂದು ನಿರ್ದಿಷ್ಟ ರೂಪುರೇಷೆ, KPI, blueprint, ಇತ್ಯಾದಿ ಇತ್ಯಾದಿಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿನ ವ್ಯತ್ಯಾಸವೇ ಇಂದು ಭಾರತ ಮತ್ತು ಇತರೆ ಮುಂದುವರಿದ ದೇಶಗಳ ನಡುವಿನ ಬಹುದೊಡ್ಡ ವ್ಯತ್ಯಾಸ. ಆ ಗಮನಾರ್ಹ ವ್ಯತ್ಯಾಸ ನಮ್ಮಲ್ಲಿನ ಟೋಲ್ ರಸ್ತೆ, ಬಡಾವಣೆಗಳ ನಿರ್ಮಾಣ, ನಗರೀಕರಣ, ದೃಶ್ಯ ಮಾಧ್ಯಮ, ಪತ್ರಿಕೋದ್ಯಮ, ಮೆಟ್ರೋ, ಆರೋಗ್ಯವಿಮೆ, ಮಾಲ್ ಸಂಸ್ಕೃತಿ ಮುಂತಾದ ಪ್ರಗತಿಪಥವೆನ್ನಿಸುವ ಎಲ್ಲಾ ಬೆಳವಣಿಗೆಗಳ ಅನುಷ್ಠಾನದಲ್ಲಿ ಕಣ್ಣಿಗೆ ರಾಚುವಂತೆ ಕಾಣುತ್ತದೆ.
ಕೇವಲ ಐದಾರು ಪ್ರಮುಖ ಪಟ್ಟಣಗಳನ್ನು ತೋರಿ ಭಾರತ ಪ್ರಗತಿಯನ್ನು ಹೊಂದಿದೆ ಎನ್ನುವುದು ಎಷ್ಟು ಸರಿ!
ಇಂದು ಎಲ್ಲೆಡೆ ಜಂತುಹುಳು ನಿವಾರಣೆಯ ಅಭಿಯಾನ ನಡೆಯುತ್ತಿದೆ. ಈ ಜಂತುಹುಳುವಿನ ಸಮಸ್ಯೆ ಅಮೆರಿಕಾದಲ್ಲಿ ಹೇಗಿದೆ ಎಂದು ಕೆಲವರು ಕೇಳಿದ್ದರು. ಆ ಕುರಿತಾಗಿ ನನ್ನ ಅನುಭವ ಹೀಗಿದೆ.
ದಶಕದ ಹಿಂದೆ ನನ್ನ ಮಗನನ್ನು ಮಕ್ಕಳ ತಜ್ಞರಲ್ಲಿ ಕರೆದುಕೊಂಡು ಹೋಗಿ "ಇವನಿಗೆ ಈವರೆಗೆ ಜಂತಿನ ಔಷಧಿ ಕೊಟ್ಟಿಲ್ಲ ಕೊಡಿ" ಎಂದೆ. ಅರವತ್ತೈದರ ಆಸುಪಾಸಿನಲ್ಲಿದ್ದ ಆ ವೈದ್ಯರು ನನ್ನನ್ನು ಮೇಲಿನಿಂದ ಕೆಳಕ್ಕೆ ನೋಡಿ "ಹಾಗೆಂದರೇನು" ಎಂದು ಪ್ರಶ್ನಿಸಿದರು.
ನಾನು ರಿಬ್ಬನ್ ವರ್ಮ್, ಟೇಪ್ ವರ್ಮ್ ಎನ್ನುತ್ತಾರಲ್ಲ ಅದು ಎಂದೆ. ಆಗ ಆ ಡಾಕ್ಟರ್ ಏನನ್ನೋ ಜ್ಞಾಪಿಸಿಕೊಂಡಂತೆ "ಓಹ್, ನನ್ನ ಅಜ್ಜ ತಾನು ಚಿಕ್ಕವನಿದ್ದಾಗ ಈ ರೀತಿಯ ಸಮಸ್ಯೆ ಇತ್ತೆಂದೂ, ನಂತರ ಅದು ದೇಶಾದ್ಯಂತ ನಿವಾರಣೆಯಾಗಿದೆ ಎಂದು ನನಗೊಮ್ಮೆ ಹೇಳಿದ್ದರು. ಮೈ ಡಿಯರ್ ಯಂಗ್ ಮ್ಯಾನ್, ಈಗೇನಾದರೂ ನಿಮಗೆ ಆ ಸಮಸ್ಯೆ ಬಂದರೆ ಅಮೆರಿಕಾದ ಎಲ್ಲಾ ಆಹಾರ ಸಂಸ್ಥೆಗಳ ಮೇಲೆ ಕೇಸ್ ಹಾಕಿ ಕೋಟಿ ಕೋಟಿ ಪರಿಹಾರ ಗೆಲ್ಲಬಹುದು" ಎಂದು ನಸುನಕ್ಕರು.
ಈ ಜಂತು ಕ್ರಿಯೆ ಕೇವಲ ಅಂತಹ ನವ ಸಮಾಜದ ಕನಸನ್ನು ಸಾಕಾರಗೊಳಿಸಿಕೊಂಡ ಪ್ರಕ್ರಿಯೆಯ ಪರಿ ಎರಡು ದೇಶಗಳ ನಡುವೆ!

No comments:

Post a Comment