ಪ್ಲಾಸ್ಟಿಕ್ ಬ್ಯಾನು, ಶುಚಿತ್ವ ಮತ್ತು ಶೌಚ!


ದಾವಣಗೆರೆಯ ಕೆಫೆ ಕಾಫಿ ಡೇ ಗೆ ಬಂದೆ, ಒಂದು ಅಮೇರಿಕಾನೊ ಕಾಫಿ ಕುಡಿಯೋಣ ಎಂದು. ನನ್ನ ಬೆನ್ನಿಗೇ ಆರು ಜನ ಪುರುಷರು ಮತ್ತು ಮಹಿಳೆಯೋರ್ವರು ನುಗ್ಗಿಕೊಂಡು ಸೀದಾ ಕಿಚನ್ನಿಗೆ ನುಗ್ಗಿದರು. ಸ್ವಲ್ಪ ಗಮನಿಸಿದ ನಂತರ ಅವರೆಲ್ಲಾ ದಾವಣಗೆರೆ ಕಾರ್ಪೊರೇಷನ್ನಿನ ನೌಕರಶಾಹಿಗಳು ಬ್ಯಾನ್ ಆಗಿರುವ ಪ್ಲಾಸ್ಟಿಕ್ ಬಳಕೆಯನ್ನು ಹಿಡಿಯುವ ದಾಳಿಗೆ ಬಂದದ್ದೆಂದು ತಿಳಿಯಿತು.
ಎಲ್ಲಾ ಹುಡುಕಿದ ನಂತರ ಅಲ್ಲಿ ಅವರಿಗೆ ಆಹಾರ ಸಿದ್ದಪಡಿಸುವಾಗ ಹಾಕಿಕೊಳ್ಳುವ ಪ್ಲಾಸ್ಟಿಕ್ ಗ್ಲವುಸುಗಳ ಒಂದು ಬಂಡಲ್ ಸಿಕ್ಕಿತು. ಅದನ್ನು ವಶಪಡಿಸಿಕೊಂಡ ಅಧಿಕಾರಿಗಳು "ಗ್ಲವುಸು ಹಾಕಿಕೊಳ್ಳದೇ ಬರಿಗೈಯಿಂದ ಆಹಾರ ಸಿದ್ಧಪಡಿಸಿ" ಎಂದು ಫರ್ಮಾನು ಇತ್ತು, ಕಾಫಿ ಡೇ ನೌಕರರನ್ನು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು ವಶಪಡಿಸಿಕೊಂಡ ಬಂಡಲ್ ಮುಂದೆ, ಹುಲಿ ಶಿಕಾರಿ ಮಾಡಿದ ಗತ್ತಿನಲ್ಲಿ ಫೋಟೋ ತೆಗೆಸಿಕೊಂಡರು. ಎರಡು ಸಾವಿರ ಫೈನ್ ಕೂಡ ಜಡಿದರು.
ಶುಚಿತ್ವದ ಆದ್ಯತೆಯಾಗಿ ಗ್ಲವುಸು ಇಲ್ಲದೆ ಆಹಾರ ಸಿದ್ಧತೆ ಹೇಗೆ ಮಾಡಬೇಕೆಂದು ಪೆಚ್ಚಾಗಿದ್ದ CCD ಉದ್ಯೋಗಸ್ಥ ಮಹಿಳೆಗೆ ಬಟ್ಟೆ ಗ್ಲವುಸು ಉಪಯೋಗಿಸಬಹುದು ಎಂದು ಸಮಾಧಾನ ಕೂಡ ಹೇಳಿತು ದಾವಣಗೆರೆ ಮಹಾಪಾಲಿಕೆ ನೌಕರಶಾಹಿ!
ಬಯಲು ಶೌಚವನ್ನು ನಿಯಂತ್ರಿಸಲಾಗದೆ, ಶೌಚವನ್ನೇ ನಿಷೇಧಿಸುವಂತಹ ಒಂದು ತಾಜಾ ಕಮಂಗಿತನಕ್ಕೆ ಹೀಗೆ ಸಾಕ್ಷಿಯಾದೆನು. ನವಿಲು ಕುಣಿಯುತ್ತದೆ ಎಂದು ಕೆಂಭೂತ ಕುಣಿಯುವ ಪ್ರಗತಿಯ ಸಂಕೇತವೆನ್ನುವ ಇಂತಹ ವಿರೋಧಾಭಾಸಗಳು ಸಾವಿರಾರು! ಮೊಗೆದಷ್ಟೂ ಉಕ್ಕುವ ಅಗಣಿತ ಅಭಾಸಗಳ ಅಕ್ಷಯ ಗಣಿ.
ಸಿದ್ಧಾರ್ಥರು ಈ ದೃಶ್ಯವನ್ನು ತಮ್ಮ ಕೆಫೆ ಡೇಯಲ್ಲಿ ಕಂಡಿದ್ದರೆ ಬುದ್ಧರಾಗುತ್ತಿದ್ದರೇನೋ!?!
ಈಗ ಪ್ರಧಾನಿ ಮೋದಿಯವರು ಜನಸಂಖ್ಯೆ ನಿಯಂತ್ರಣ ಮತ್ತು ಪ್ಲಾಸ್ಟಿಕ್ ಹಾವಳಿ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಜನಸಂಖ್ಯೆ ನಿಯಂತ್ರಣದ ಬಹುಮುಖ್ಯ ಅಂಗವೆನಿಸುವ ಕಾಂಡೋಮ್ ಕೂಡಾ ಲೇಟೆಕ್ಸ್ ಅಲ್ಲದೆ ಪ್ಲಾಸ್ಟಿಕ್ನಿಂದ ಕೂಡಾ ಮಾಡಲಾಗುತ್ತದೆ. ಇಲ್ಲಿ ಪ್ಲಾಸ್ಟಿಕ್ ಬ್ಯಾನ್ ಹೇಗೆ ಅಳವಡಿಸುತ್ತಾರೋ ಈ ಅಧಿಕಾರಿಗಳು! ಲೇಟೆಕ್ಸ್ ಅಲರ್ಜಿ ಇರುವ ಕಾಂಗ್ರೆಸ್ಸಿಗರು "ಹಸ್ತ"ವನ್ನು, ಬಿಜೆಪಿಗರಿಗೆ ಕರಸೇವೆಯ ಸ್ವಯಂಸೇವಕರಾಗಿ ಎಂದು ಸಮನ್ವಯ ಸೂತ್ರವನ್ನು ಬೋಧಿಸುತ್ತಾರೆನೋ!

No comments:

Post a Comment