ಬುದ್ದಿ ಬಂಡವಾಳಶಾಹಿಗಳ ಸಂಶೋಧ(ಷ)ಣೆ!

ಬುದ್ದಿ ಬಂಡವಾಳಶಾಹಿಗಳ ಸಂಶೋಧ(ಷ)ಣೆ!
ಈ ಬರಹ ಯಾರನ್ನೂ ಅವಹೇಳನ ಮಾಡಲಲ್ಲ. ಈ ಲೇಖನದ ಲೇಖಕ ಮಿತ್ರರು ಇದೇ ರೀತಿ ಹಲವರನ್ನು ಹೆಸರಿಸಿ ಸಾಕಷ್ಟು ಆಕ್ಷೇಪಗಳನ್ನು ಸಾಮಾಜಿಕ ಜವಾಬ್ದಾರಿಯಿಂದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾನು ಕೂಡ ಇದು ವೈಯಕ್ತಿಕ ಅವಹೇಳನ ಮಾಡಲಲ್ಲದೇ ಸತ್ಯವನ್ನು ಎತ್ತಿಹಿಡಿಯುವ ಅವರದೇ ರೀತಿಯ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಬರೆಯುತ್ತಿದ್ದೇನೆ.
"ವಿಶ್ವಾಸಾರ್ಹ ಪ್ರಜಾವಾಣಿ"ಯಲ್ಲಿ ಬಂದ ಈ ಬರಹ ಕೆಲವು ವರ್ಷಗಳ ನಂತರ ನನ್ನ ಗಮನ ಸೆಳೆಯಿತು. ಕಾಲ ಹಳೆಯದಾದರೂ ಸತ್ಯವನ್ನು ಎತ್ತಿಹಿಡಿಯಬೇಕಾದುದು ಇಂದಿನ ಜರೂರಿ ಎಂದುಕೊಂಡಿದ್ದೇನೆ. ಏಕೆಂದರೆ ಇದು "ದುರಿತ ಕಾಲ!"
ಇಲ್ಲಿ ಲೇಖಕರು, ನೊಬೆಲ್ ವಿಜೇತ ಸಂಗೀತಗಾರ ಬಾಬ್ ಡಿಲಾನ್ ಜೂಯಿಷ್ ಎಂಬ ಸಣ್ಣ ಬುಡಕಟ್ಟು ಹಿನ್ನೆಲೆಯವನು ಎನ್ನುತ್ತಾರೆ. ನಂತರ ಆತನ ಪೂರ್ವಜರು ಟರ್ಕಿಯಿಂದ ಅಮೇರಿಕೆಗೆ ವಲಸೆ ಬಂದವರು ಎನ್ನುತ್ತಾರೆ. ವಾಸ್ತವದಲ್ಲಿ ಬಾಬ್ ಒಬ್ಬ ಜೂ/ಯಹೂದಿ. ಆತನ ಕುಟುಂಬ ಟರ್ಕಿಯಿಂದ ಬಂದದ್ದಲ್ಲ. ಲೇಖಕರು ಪ್ರತಿಪಾದಿಸುವ ಕಮ್ಯುನಿಸ್ಟ್ ಸರ್ಕಾರದ ದೇಶದಿಂದ ಬಾಬ್ ನ ಹಿರಿಯರು ಬಂಡವಾಳಶಾಹಿ ಅಮೇರಿಕೆಗೆ ಬೇಡಿಕೊಂಡು ಅರ್ಜಿ ಹಾಕಿ ವಲಸೆ ಬಂದವರು!
ಕಮ್ಯುನಿಸ್ಟ್ ಸರ್ಕಾರದ ಜನಾಂಗೀಯ ದಬ್ಬಾಳಿಕೆಯಲ್ಲಿ ನೊಂದು ನಿರಾಶ್ರಿತರಾಗಿ ಅಂದಿನ USSR ರಷ್ಯದಿಂದ ಅಂದರೆ ಇಂದಿನ ಉಕ್ರೇನಿನಿಂದ ಅಮೇರಿಕೆಗೆ ಆತನ ಹಿರಿಯರು ವಲಸೆ ಬಂದವರು.
ಇದು ಸ್ಮಾರ್ಟ್ ಫೋನ್ ಇರುವ ಯಾರಾದರೂ ಕಂಡುಕೊಳ್ಳಬಹುದಾದ ಸಾಮಾನ್ಯ ಸಂಗತಿ. ಆದರೆ ಹೆಸರಾಂತ ವಿಶ್ವವಿದ್ಯಾಲಯದ ಸಂಶೋಧಕರಾದ ಲೇಖಕರು ಬಾಬ್ ನ ಹಿನ್ನೆಲೆಯನ್ನು ಬೇರೊಂದು "ಸಂಶೋಧನಾ ನೆಲೆ"ಯಲ್ಲಿ ಕಂಡುಕೊಂಡಿರಬಹುದೆನಿಸುತ್ತದೆ.
ಏನದು ಆ "ಸಂಶೋಧನಾ ನೆಲೆ?"
ಇಂದಿನ "ಸಂಶೋಧನಾ ನೆಲೆ"ಯ ಪ್ರಮುಖ ಪದಗಳು "ಬುಡಕಟ್ಟು", "ಪರಿಶಿಷ್ಟ", "ಅಲ್ಪಸಂಖ್ಯಾತ", "ಅವೈದಿಕ", "ಬುದ್ಧ", "ದ್ರಾವಿಡ" ಇತ್ಯಾದಿ ಇತ್ಯಾದಿ. ಈ ಪದಗಳು ನಿಮ್ಮ ಸಂಶೋಧನೆಯಲ್ಲಿದ್ದರೆ ಮಾತ್ರ ಅದು ಸಂಶೋಧನೆ, ಇಲ್ಲದಿದ್ದರೆ ಅದು ಪೂರ್ವಾಗ್ರಹ, ಮತೀಯ, ಬ್ರಾಹ್ಮಣ್ಯ, ಹಿಂದೂ, ಜೀವಪರವಲ್ಲದ ಇತ್ಯಾದಿ ಇತ್ಯಾದಿ!
ಹಾಗಾಗಿ ನಮ್ಮ ಸಂಶೋಧಕರು ಬಾಬ್ ಅನ್ನು ಬುಡಕಟ್ಟು ಎಂದು, ಆತನ ಹಿರಿಯರು ಟರ್ಕಿಯಿಂದ ಬಂದವರೆಂದೂ ಸಂಶೋಧನಾತ್ಮಕವಾಗಿ ಹೇಳಿದ್ದಾರೆ. ಇದು ಏಕೆಂದರೆ ತಮ್ಮ ಲೇಖನ ಜೀವಪರವಾಗಿ ನಮ್ಮಲ್ಲಿನ ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಜನಾಂಗ ತಮ್ಮನ್ನು ಬಾಬ್ ಡಿಲಾನ್ ಒಟ್ಟಿಗೆ ಸಮೀಕರಿಸಿಕೊಂಡು ತಮ್ಮಂತೆಯೇ ಬಾಬ್ ಒಬ್ಬ ಬ್ರಾಹ್ಮಣ್ಯ/ಬಂಡವಾಳಶಾಹಿತನದ ವಿರುದ್ಧ ಸಿಡಿದೆದ್ದ ನಮ್ಮವನೇ ಆದ ಹೋರಾಟಗಾರ ಎಂದುಕೊಳ್ಳಲಿ ಎಂದು ಜೀವಪರ, ಸಿದ್ದಾಂತಪರ ಸ್ಪೂರ್ತಿಯನ್ನು ತುಂಬಿದ್ದಾರೆ, ಅಸಲಿಗೆ ಅದು ಹುಸಿಯಾದರೂ ಕೂಡ. ಸಾವಿರ ಸುಳ್ಳು ಹೇಳಿ ಒಂದು ಕಲ್ಯಾಣ ಮಾಡಿಸು ಎಂದು ನಾಣ್ನುಡಿಯೇ ಇದೆಯಲ್ಲವೇ!
ಆದರೆ ಹಕೀಕತ್ತಿನಲ್ಲಿ ಈ ಪ್ರಗತಿಪರರೆಲ್ಲಾ ವಿರೋಧಿಸುವ ಇಸ್ರೇಲ್ ದೇಶದ ಹೋರಾಟವನ್ನು ಬಾಬ್ ಎತ್ತಿ ಹಿಡಿದಿದ್ದಾನೆ. ಹಿಟ್ಲರನ ಅಟ್ಟಹಾಸ, ರಷ್ಯಾ ಕಮ್ಯುನಿಸ್ಟರ ಜನಾಂಗೀಯ ದ್ವೇಷವನ್ನು ಕಂಡಿರುವ ಯಹೂದಿಗಳು, ಈಗ ಇಸ್ರೇಲ್ ಮುಖಾಂತರ ಜಿಹಾದ್ ವಿರುದ್ಧ ಜಿಹಾದ್ ಘೋಷಿಸಿದ್ದಾರೆ. ಆ ಇಸ್ರೇಲಿ ಜಿಹಾದ್ ಅನ್ನು ಬಾಬ್ ಬೆಂಬಲಿಸಿದ್ದಾನೆ ಎಂಬುದು "ವಿಶ್ವಾಸಾರ್ಹ"ವಷ್ಟೇ ಅಲ್ಲದೆ ಸತ್ಯ ಕೂಡ!
ಇದು ಇಂದಿನ ಸಂಶೋಧನೆ, ಜೀವಪರ, ಪ್ರಗತಿಪರ, ಉದಾರವಾದ, ಸೈದ್ಧಾಂತಿಕ, ಇತ್ಯಾದಿ ಇತ್ಯಾದಿ ಎನ್ನುವವರ some/sum ಶೋಧನೆ! ಇಂತಹ ಸಂಶೋಧಕರ ತಂಡ ಬುದ್ಧತತ್ವದ "ತೇರಾ"ವಾದವನ್ನು "ಮೇರಾ"ವಾದವಾಗಿಸಿ, ವೀರಶೈವ ಲಿಂಗಾಯತ ಪಂಥವನ್ನು ಧರ್ಮವೆನಿಸಿ ಮತ್ತವುಗಳು ಬೇರೆ ಬೇರೆ ಎಂದು someಶೋಧಿಸಿದ್ದಾರೆ. ಇಂತಹ "ಬುದ್ದಿ ಬಂಡವಾಳಶಾಹಿ"ಗಳು ಭಾರತದ ಇತಿಹಾಸದಾದ್ಯಂತ ಹೇಗೆ ತಿರುಚಿ, ಮರೆಮಾಚಿ, ವೈಭವೀಕರಿಸಿ, ತುಚ್ಹೀಕರಿಸಿದ್ದಾರೆಂದು ಅರಿಯಲು ನನ್ನ "ಭಾರತ ಒಂದು ಮರುಶೋಧನೆ"ಯನ್ನು ಓದಬೇಕಾಗುತ್ತದೆ.
ಇರಲಿ, ಇಂತಹ ಅಸತ್ಯದ, ಅವಾಸ್ತವದ ಆದರೆ ಕರುಣಾಜನಕವಾದ ಭಾವನಾತ್ಮಕ ಸೃಜನಶೀಲತೆಯಿಂದ ಕೂಡಿದ ಕಥೆಗಳಿಗೆ ಕಣ್ಣೀರು ಹಾಕದೆ ನಿಮ್ಮ ಬೆರಳುಗಳಿಗೆ ಕೆಲಸ ಕೊಟ್ಟು ಅನಿಯಮಿತ ಅಂತರ್ಜಾಲವನ್ನು ಸತ್ಯಶೋಧನೆಗೆ ಬಳಸಿಕೊಳ್ಳಿ.
RCEPಯಿಂದ ಹಾಲು ಆಸ್ಟ್ರೇಲಿಯಾ/ನ್ಯೂಜಿಲ್ಯಾಂಡಿನಿಂದೆಲ್ಲಾ ಭಾರತಕ್ಕೆ ಬಂದು ಇಲ್ಲಿನ ಹಸು ಕಟ್ಟಿ ಜೀವನ ಮಾಡುವ ರೈತರು ಹಾಳಾಗುತ್ತಾರೆ ಎನ್ನುವ ಹಾಸ್ಯಾಸ್ಪದ ಕರುಣಾಜನಕವಾದ ಕತೆ ಈ ತಂಡದ ಹೊಸ ಶೋಧನೆ!
ಆಸ್ಟ್ರೇಲಿಯಾ/ನ್ಯೂಜಿಲ್ಯಾಂಡ್ ದೇಶಗಳಲ್ಲಿ ಒಂದು ಲೀಟರ್ ಹಾಲಿನ ಬೆಲೆ, ಭಾರತಕ್ಕೆ ಸಾಗಾಣಿಕೆ ವೆಚ್ಚ/ಸಮಯ (ಏರೋಪ್ಲೇನಿನಲ್ಲಿ ತಂದರೆ ಲಕ್ಷಾಂತರ ಏರೋಪ್ಲೇನುಗಳು ನಿತ್ಯ ಹಾಲು ಹೇರಿಕೊಂಡು ಬರಬೇಕಾಗುತ್ತದೆ. ಹಡಗಾದರೆ ತಿಂಗಳ ಮೇಲೆ ಸಮಯ ಬೇಕಾಗುತ್ತದೆ. ಹಾಲು ಪೆರಿಶಬಲ್ ವಸ್ತು)
ಇವುಗಳ ಒಂದು ವಾಸ್ತವದ ನೆಲೆಯಲ್ಲಿ ಆ ಹಳಸಲು ಹಾಲು ಐನೂರು ರೂಪಾಯಿಗೆ ಒಂದು ಲೀಟರ್ ಆಗುತ್ತದೆ. ಅದನ್ನು ಆ ಬೆಲೆಗೆ ಯಾರು ಕೊಳ್ಳುವರು? ಇನ್ನು ಹಾಲಿನ ಉತ್ಪನ್ನ ಚೀಸ್ (ಪನೀರ್ ಅಲ್ಲ), ಇದು ಭಾರತೀಯ ಅಡುಗೆಗಳಲ್ಲಿ ಬಳಸುವಂತಹದಲ್ಲ. RCEP ಒಳ್ಳೆಯದೋ ಕೆಟ್ಟುದೋ ಎನ್ನುವುದಕ್ಕಿಂತ, RCEP ವಿರೋಧಿಸುವವರು ಕೊಡುವ ಉತ್ಪನ್ನಗಳ ವಾಸ್ತವ ಹೀಗಿದ್ದು ಅವರೆಲ್ಲರ ವಾದ ಹಾಸ್ಯಾಸ್ಪದವಾಗಿದೆ. ಇನ್ನು ಚೀನಾದಲ್ಲಿರುವ ಡೈರಿಗಳು ಹಾಲಿಗೆ ಇರುವುದಲ್ಲ, ದನದ ಮಾಂಸಕ್ಕಾಗಿ ಇರುವವು.
ಇಂತಹ ಕರುಣಾಜನಕವಾದ ಕಣ್ಣೀರಿನ ಕಥೆ ಹೆಣೆಯುವವರ ದೊಡ್ಡ ತಂಡವೇ ಸಾಮಾಜಿಕ ತಾಣಗಳಲ್ಲಿ ದಂಡಿಯಾಗಿ ನಿಮ್ಮನ್ನು ನಿಮ್ಮ ಅರಿವಿಗೆ ಬಾರದಂತೆ ಕಣ್ಣೀರಿಡಿಸುತ್ತಿದೆ ಮತ್ತು ದಂಡಿಸುತ್ತಿದೆ. ಅದರಲ್ಲೂ ನೀವು ಪರಿಶಿಷ್ಟ, ಬುಡಕಟ್ಟು, ಬಡ ಆರ್ಥಿಕ ಹಿನ್ನೆಲೆ, ಕನ್ನಡ ಮಾಧ್ಯಮದ ಹಿನ್ನೆಲೆ, ಮತ್ತು ಭಾವಜೀವಿಗಳಾಗಿದ್ದರೆ ನೀವೇ ಇವರ ಪ್ರಮುಖ ಗುರಿ. ನಿಮ್ಮನ್ನು ಕಾವ್ಯ ಕಮ್ಮಟ, ಸಂವಾದ, ಸಾಹಿತ್ಯ ಚರ್ಚೆ ಎಂಬ ಕ್ಯಾಂಪುಗಳ ಮುಖಾಂತರ ಆಕರ್ಷಿಸಿ ವ್ಯವಸ್ಥಿತವಾಗಿ ನಿಮ್ಮ ಅಂತರಂಗದಲ್ಲಿ ಕೀಳರಿಮೆಯನ್ನು ತುಂಬಿ ಬಹಿರಂಗವಾಗಿ ಹೇಗೆ ಹೋರಾಟಗಳ ಮೂಲಕ ಮೇಲರಿಮೆಯನ್ನು ಪ್ರದರ್ಶಿಸಬೇಕು ಎಂದು ತಲೆ ತಿದ್ದುತ್ತಾರೆ.
ಹಾಗಾಗಿ ನಿಮ್ಮ ಹೃದಯ, ಭಾವುಕತೆಯನ್ನು ತೊಡಗಿಸುವಲ್ಲಿ ತೊಡಗಿಸಿ, ಇಲ್ಲದಿದ್ದರೆ ಕಿಂಡರ್ ಗಾರಟನ್ನಿನಿಂದಲೇ ಲಕ್ಷ, ಲಕ್ಷ ಸುರಿದು ಕಲಿತು ಕೂಡಾ ಗುಯ್ಗುಟ್ಟುವ ಗುಂಗಾಡಿಗಳು ನೀವಾಗುವುದು ಶತಸಿದ್ದ!

No comments:

Post a Comment