ಕೊರೋನಾ ವಿಶ್ಲೇಷಣೆ

ಇಂದಿನ ಉದಯಕಾಲದಲ್ಲಿ,

ನೀವು ಒಂದು ಬಸ್ಸಿಗೆ ಕಾಯುತ್ತಿರುವಿರಿ ಎಂದಿಟ್ಟುಕೊಳ್ಳಿ. ನಿಮ್ಮೊಟ್ಟಿಗೆ ಒಬ್ಬ ಮಹಿಳೆ, ವೃದ್ಧ, ಇಬ್ಬರು ವಿದ್ಯಾರ್ಥಿಗಳೂ ಬಸ್ಸಿಗೆ ಕಾಯುತ್ತಿರುತ್ತಾರೆ. ನೀವು ಹೋಗುತ್ತಿರುವ ಸ್ಥಳಕ್ಕೆ ಸಾಕಷ್ಟು ಬಸ್ಸುಗಳಿದ್ದು, ಆಗಷ್ಟೇ ಬಂದ ಬಸ್ಸು ತುಂಬಿದ್ದರೆ ಹೋಗುವವರು ಹೋಗಲಿ ಎಂದು ಇನ್ನೊಂದು ಬಸ್ಸಿಗೆ ಕಾಯುತ್ತೀರಿ. ಒಂದು ವೇಳೆ ಬಂದ ಬಸ್ಸು ಖಾಲಿಯಿದ್ದರೆ ನಿಮ್ಮೊಟ್ಟಿಗೆ ಕಾಯುವವರನ್ನು ಸೌಜನ್ಯದಿಂದ ಮೊದಲು ಹತ್ತಲು ಬಿಟ್ಟು ನಂತರ ನೀವು ಹತ್ತುತ್ತೀರಿ.  ಒಂದು ವೇಳೆ ಬಸ್ಸುಗಳು ವಿರಳವಾಗಿದ್ದು, ಬಂದ ಬಸ್ಸು ಖಾಲಿ ಇಲ್ಲದಿದ್ದರೆ ಯಾ ನಿಮ್ಮೊಟ್ಟಿಗೆ ಐವತ್ತು ಜನ ಕಾಯುತ್ತಿದ್ದು ಬಸ್ಸು ಖಾಲಿಯಿದ್ದರೂ ನೀವು ಲಗುಬಗೆಯಿಂದ ನುಗ್ಗಿ ಬಸ್ ಹತ್ತುತ್ತೀರಿ. ಇದು ಜನ ಸಾಂದ್ರತೆ, ಪ್ರಯಾಣಿಕ-ಸೌಲಭ್ಯಗಳ ಅನುಪಾತದ ಕೊರತೆಯಿಂದ ನಿಮ್ಮಲ್ಲುಂಟಾಗುವ ಸೌಜನ್ಯ ಯಾ (ಅ)ನಾಗರಿಕತೆಯ ಪಲ್ಲಟ.

ಹಾಗೆಯೇ ಯಾವ ದೇಶದಲ್ಲಿ ಆಧಿಕ ಸೌಲಭ್ಯಗಳು ತುಂಬಿದ್ದು ಸುಲಭಕ್ಕೆ ನಿಯಂತ್ರಿಸಬಲ್ಲ ಜನಸಾಂದ್ರತೆ ಮತ್ತು ಜನಸಂಖ್ಯೆ-ಸೌಲಭ್ಯಗಳ ಸಮತೋಲಿತ ಅನುಪಾತ ಇರುತ್ತದೋ ಅಲ್ಲಿ ಸೌಜನ್ಯ, ವ್ಯಕ್ತಿಗತ ಗೌರವ, ಸಹಾನುಭೂತಿ ಇತ್ಯಾದಿ ಇತ್ಯಾದಿ ನಾಗರಿಕ ವರ್ತನೆ ಕಾಣಸಿಕ್ಕು ಆಹಾ ಎಂತಹ ವಿಶಾಲ ನಾಗರಿಕ ಸಮಾಜ ಎನಿಸುತ್ತದೆ!

ಈ ಜನ ಸಾಂದ್ರತೆ vs ಸೌಲಭ್ಯಗಳ ಅನಾನುಪಾತದ ಕಾರಣದಿಂದಾಗುವ ಸೌಜನ್ಯ ಪಲ್ಲಟ ಯಾ (ಅ)ನಾಗರಿಕ ವರ್ತನೆಗಳು ಯಾವುದೇ ದೇಶ, ಕಾಲ, ಜನಾಂಗಕ್ಕೆ ಸೀಮಿತವಲ್ಲ. ಯುರೋಪಿರಲಿ ಅಮೆರಿಕ, ಚೈನಾವಿರಲಿ ಯಾವುದೋ ಕಾರಣಕ್ಕೆ ಬಸ್ಸುಗಳಿಲ್ಲದಿದ್ದರೆ ಎಲ್ಲರೂ ಬಂದ ಬಸ್ಸಿಗೆ ನುಗ್ಗುವವರೆ!

ಹಾಗಾಗಿಯೇ ಜನಸಾಂದ್ರ ಪ್ರದೇಶದಿಂದ ವಲಸೆ (ಪ್ರವಾಸಿಯಲ್ಲ) ಬಂದ ಭಾರತೀಯ ಯುರೋಪ್ ಅಮೆರಿಕದಲ್ಲಿ ಸೌಜನ್ಯತೆಯ ಸಾಕಾರ ಮೂರ್ತಿಯೆನಿಸುತ್ತಾನೆ. ಆದರೆ ಅದೇ ಸಾಕಾರಮೂರ್ತಿ ಭಾರತಕ್ಕೆ ಪ್ರವಾಸಕ್ಕೆ ಬಂದರೂ ಸ್ಥಳೀಯರಂತೆಯೇ (ಸೌಜನ್ಯವಲ್ಲವೆನಿಸುವಂತೆ) ವರ್ತಿಸುತ್ತಾನೆ. ಅದಕ್ಕೆ ಕಾರಣ ಸೌಲಭ್ಯಗಳ ಅಸಮತೋಲಿತ ಅನುಪಾತ. ಈ ವರ್ತನೆಗೆ ಯಾವೊಬ್ಬ ಮಾನವನೂ ಅತೀತನಲ್ಲ.

ಅಮೆರಿಕದ ಅಗಾಧತೆ, ಕಡಿಮೆ ಜನಸಂಖ್ಯೆ, ಸಮತೋಲಿತ ಸೌಲಭ್ಯಗಳು ಸಹಜವಾಗಿಯೇ ಅಲ್ಲಿಯ ಜನ ಪರಸ್ಪರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರುವಂತೆ ಮಾಡಿದೆ. ಹಾಗಾಗಿ ಅಮೆರಿಕನ್ನರು ಹುಟ್ಟು ಸಾಮಾಜಿಕ ಅಂತರಗಾರರು. ಇಂತಹ ಸಾಮಾಜಿಕ ಅರಿವುಳ್ಳ, ಸಾಮಾಜಿಕ ಅಂತರದ ಜನತೆ ಮತ್ತು ಸೌಲಭ್ಯಗಳ  ಆಗರಗಳ ನಡುವೆ ಕೊರೋನಾ ಹೇಗೆ ಕ್ಷಿಪ್ರವಾಗಿ ಹಬ್ಬಿತು?

ಅದಕ್ಕೆ ಅಮೆರಿಕನ್ನರ ಅತ್ಯಧಿಕ ವಿಮಾನಯಾನ, ac ಎಂದೆಲ್ಲಾ ಕಾರಣವೆಂದರೂ ಅಷ್ಟೆಲ್ಲಾ ಸಾಮಾಜಿಕ ಅಂತರ, ಲಾಕ್ ಡೌನ್, ಕ್ವಾರಾಂಟೈನ್ ಇತ್ಯಾದಿಗಳ ನಡುವೆ ಕೂಡ ಕೊರೋನಾ ಹಬ್ಬಲು ವೈರಸ್ಸಿನ ಪ್ರಬಲ ಶಕ್ತಿಯೇ ಕಾರಣ. ಹಾಗಾಗಿಯೇ ಅಮೆರಿಕಾ ಇಷ್ಟರೊಳಗೆ ತನ್ನಲ್ಲಿ ಇಪ್ಪತ್ತೆರಡು ಲಕ್ಷ ಕೊರೋನಾ ಸೋಂಕಿತರು ಮತ್ತು ಅಪಾರ ಸಾವುಗಳು ಸಂಭವಿಸಬಹುದೆಂದು ಅಂದಾಜಿಸಿತ್ತು. ಆದರೆ ಹಾಗಾಗದೆ ಕೇವಲ ಎರಡು ಸಾವಿರದ ಆಜುಬಾಜು ಸಾವುಗಳಾಗಿವೆ ಮತ್ತು ಒಂದು ಲಕ್ಷ ಸೋಂಕಿತರಿದ್ದಾರೆ.  ಅಮೆರಿಕ ಈವರೆಗೆ ಅಳವಡಿಸಿಕೊಂಡ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳದಿದ್ದರೆ ಇಷ್ಟರೊಳಗೆ ಇಪ್ಪತ್ತೆರಡು ಲಕ್ಷ ಅಮೆರಿಕನ್ನರು ಕೊರೊನದಿಂದ ನರಳುತ್ತಿದ್ದರು ಎಂದು ಅಮೆರಿಕೆಯ ಸರ್ಜನ್ ಜನರಲ್ ಮೊನ್ನೆ ಅಧಿಕೃತವಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಈವರೆಗೆ ಅಮೆರಿಕ 8,94,000 ಕೊರೋನಾ ಟೆಸ್ಟುಗಳನ್ನು ಮಾಡಿದೆ. ನಾವು ಹೆಚ್ಚು ಟೆಸ್ಟುಗಳನ್ನು ಮಾಡಿರುವುದರಿಂದ ನಮ್ಮಲ್ಲಿ ಹೆಚ್ಚಿನ ಸೋಂಕಿತರನ್ನು ಗುರುತಿಸಿದ್ದೇವೆ. ನಮ್ಮ ಅಂಕಿಗಳು, ಈ ಸೋಂಕನ್ನು ಎದುರಿಸಲು ಸಿದ್ಧಗೊಂಡ ನಮ್ಮ ತಯ್ಯಾರಿಯ ಪರಿಣಾಮ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

ಇದು ಒಂದು ಸಂತುಲಿತ, ವೈಜ್ಞಾನಿಕ ಅನುಪಾತಗಳನ್ವಯವಿರುವ ಒಂದು ಅಭಿವೃದ್ಧಿ ಹೊಂದಿರುವ ದೇಶದ ಕೊರೋನಾ ಕಥೆ.

ಇನ್ನು ಭಾರತದಲ್ಲಿ.....

ವಿದೇಶಗಳಿಂದ ವಾಪಸ್ಸಾದ ಪ್ರಜೆಗಳನ್ನು ನೇರ ಕ್ವಾರಾಂಟೈನ್ ಕ್ಯಾಂಪುಗಳಲ್ಲಿಡದೆ ಈಗವರನ್ನು ಅಪರಾಧಿಗಳಂತೆ ಬಿಂಬಿಸುತ್ತಿದ್ದಾರೆ.

ಇಟಲಿ ಪ್ರಧಾನಿ ಕರೆ ನೀಡಿದರೆಂದು ನಮ್ಮ ಪ್ರಧಾನಿಗಳು ನಮ್ಮ ಡಾಕ್ಟರರು, ಪೊಲೀಸರು ಇನ್ನೂ ಕಾರ್ಯಪ್ರವೃತ್ತರಾಗುವ ಮುನ್ನವೇ ಅವರಿಗೆ ಚಪ್ಪಾಳೆ ತಟ್ಟಿ ಎಂದದ್ದು ಮತ್ತು ಜನ ತಟ್ಟೆ ಬಡಿದು ಭಜನೆ ಮಾಡಿ ಸಾಮಾಜಿಕ ಅಂತರವನ್ನು ಧೂಳಿಪಟ ಮಾಡಿದ್ದಾರೆ.

ಕೊರೋನಾ ಒಂದು ಅತಿ ದೊಡ್ಡ ಜೋಕ್ ಎಂಬಂತೆ ಟ್ರೋಲು ಮಾಡಿ ಡೋಲು ಬಡಿದಿದ್ದಾರೆ, ಬಡಿಯುತ್ತಿದ್ದಾರೆ.

ಕರ್ಫ್ಯೂ ಇರುವುದೇ ಉಲ್ಲಂಘಿಸಲು ಎಂದು ಜನರೂ, ಉಲ್ಲಂಘಿಸಿದವರನ್ನು ಬಡಿಯುವುದೇ ನಮ್ಮ ಕೆಲಸ ಎಂದು ಪೊಲೀಸರು ಪೈಪೋಟಿಗೆ ಬಿದ್ದಿದ್ದಾರೆ.

ಗಂಜಿ ಕುಡಿದು ಎಪ್ಪತ್ತು ದಿನ ಬದುಕುವ ಶಕ್ತಿಯಿರುವವರು ಕೂಡ ಅಯ್ಯೋ ನಿತ್ಯ ಕೂಲಿ ಪಡೆದು ಬದುಕುವವರು ಏನು ಮಾಡಬೇಕು ಎಂದು ಕಕ್ಕುಲಾತಿ ಮೆರೆದು ನಮ್ಮದೆಲ್ಲಿಡೋಣ ಎಂದು ಸಮಾಜವಾದದ ಪಟ್ಟುಗಳನ್ನು ಹಾಕುತ್ತಾರೆ.

ದಿಲ್ಲಿ ವಲಸಿಗರ ತವರು ಪಯಣವನ್ನು ಬೆಂಬಲಿಸಿ ಮೋದಿ ಶಾ ತೆಗಳುತ್ತ ದಿಲ್ಲಿ ದೊರೆ ಕೇಜ್ರಿವಾಲರ ವಿಫಲತೆಯನ್ನು ಬುದ್ದಿವಂತ ಚಿಂತಕರು ಮರೆಮಾಚುತ್ತಿದ್ದಾರೆ.

ಥೇನಿಯಲ್ಲಿ ಓರ್ವ ವ್ಯಕ್ತಿ ಒಂದು ವಾರದ ಗೃಹ ಬಂಧನದ ಅವಧಿಯಲ್ಲೇ ಮಾನಸಿಕ ಸ್ಥಿಮಿತ ಕಳೆದುಕೊಂಡು ಓರ್ವ ವೃದ್ಧೆಯನ್ನು ಕಚ್ಚಿ ಕೊಂದಿದ್ದಾನೆ.

ಆಲ್ಕೋಹಾಲ್ ಸಿಕ್ಕದೆ ಜನ ಖಿನ್ನತೆಗೊಳಗಾಗಿ ಆತ್ಮಹತ್ಯೆಗೊಳಗಾಗುತ್ತಿದ್ದಾರೆ.

ಎಮ್ಮೆಲ್ಲೆಗಳು ಮೊಮ್ಮಕ್ಕಳನ್ನು ಹೈವೇಯಲ್ಲಿ ಆಟವಾಡಿಸಿದರೆ, ಕೆಲವರು ಊರು ತುಂಬಾ ಪಟಾಲಂ ಕಟ್ಟಿಕೊಂಡು ತಿರುಗುತ್ತಿದ್ದಾರೆ.

ಜನಾಂಗೀಯ ಅವಹೇಳನವೆನ್ನಿಸಬಲ್ಲ ಸಾಬಿ, ತುರುಕ ಪದಗಳು ಎಡ, ಬಲ ಎರಡೂ ಪಾಳೆಯಗಳು ಮುನ್ನೆಲೆಗೆ ತಂದು ಪೈಪೋಟಿಗಿಳಿದಿದ್ದಾರೆ.

ಆರ್ಥಿಕ ಪರಿಸ್ಥಿತಿ ಈಗಾಗಲೇ ಬಿದ್ದುಹೋಗಿದೆ. ಇದು ನಿಯಂತ್ರಿಸಲಾಗದ ಪರಿಸ್ಥಿತಿಯಾಗಿರುವುದರಿಂದ ಲಾಕ್ ಡೌನ್ ಇನ್ನಷ್ಟು ಆರ್ಥಿಕತೆಯನ್ನು ಕುಸಿಯುಸುತ್ತದೆ. ಹಾಗಾಗಿ ಆರ್ಥಿಕತೆಯನ್ನು ಎತ್ತಿ ಹಿಡಿಯಲು ಲಾಕ್ ಡೌನ್ ಬೇಡವಾಗಿತ್ತು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಸೋಪಿನೊಂದಿಗೆ ಬಿಸಿನೀರಿನಲ್ಲಿ ಸ್ನಾನ ಮಾಡಿಸಿ ಬಟ್ಟೆ ಒಗೆಸಿಕೊಟ್ಟಿದ್ದರೆ ಬಾಹ್ಯವಾಗಿ ಸೋಂಕು ಮುಕ್ತರಾಗುತ್ತಿದ್ದವರನ್ನು ಆಳಾಗಿ ನಿಲ್ಲಿಸಿ ಅಮಾನವೀಯವಾಗಿ ಏನನ್ನೋ ಸಿಂಪಡಿಸಿದ್ದಾರೆ.

ಇದೆಲ್ಲವೂ ಜನಸಾಂದ್ರತೆಯ mob mentality ಯ ಲಕ್ಷಣ. ಕಾಲಾಪಾನಿ, ನೇಣುಗಂಭ, ಜೀವಾವಧಿ ಶಿಕ್ಷೆಗಳನ್ನು ಅನುಭವಿಸಿ ಸ್ವಾತಂತ್ರ್ಯ ಗಳಿಸಿದ ರಾಷ್ಟ್ರದಲ್ಲಿ ಕೆಲವೇ ಕೆಲವು ದಿನಗಳ ಲಾಕ್ ಡೌನ್ (ಇದಿನ್ನೂ ಪ್ರಶ್ನಾರ್ಥಕ ರೀತಿಯಲ್ಲೇ ಜಾರಿಯಿದೆ) ಈ ರೀತಿಯ ಪರಿಣಾಮವನ್ನು ಸೃಷ್ಟಿಸಿದೆಯೆಂದರೆ ಭಾರತದ ಪ್ರಜಾಪ್ರಭುತ್ವ, ಮುಂಬರಬಹುದಾದ ಜೈವಿಕ ಯುದ್ಧಗಳಿಗೆ ರಾಷ್ಟ್ರವನ್ನು ಸಿದ್ಧಗೊಳಿಸಿದೆಯೇ? ಅತೀವ ಜನಸಂಖ್ಯೆಯ ರಾಷ್ಟ್ರಗಳಿಗೆ ಪ್ರಜಾಪ್ರಭುತ್ವ ಸಿಂಧುವೇ ಎಂಬ ತೀವ್ರ ಅನುಮಾನಗಳನ್ನು ಈ ದುರಿತ ಕಾಲ ಸೃಷ್ಟಿಸಿದೆ.  ಏಕೆಂದರೆ ಅಂತಹುದೇ ತೀವ್ರ ಜನಸಂಖ್ಯೆಯ ಚೀನಾ ಕೊರೋನವನ್ನು  ವುಹಾನ್ ಪ್ರದೇಶದಿಂದಾಚೆಯ ತನ್ನ ಪ್ರದೇಶಗಳಿಗೆ  ಗಮನಾರ್ಹವಾಗಿ ದಾಟಿಸಿಲ್ಲ.  ಈ ಪರಿಸ್ಥಿಯಲ್ಲಿ ಮೋದಿಯಲ್ಲ ಸಾಕ್ಷಾತ್ ಪರಶಿವನೇ ಪ್ರಧಾನಿಯಾಗಿದ್ದರೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರುತ್ತಿರಲಿಲ್ಲ. ಏಕೆಂದರೆ ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಗಿಂತ ಶ್ರೀಸಾಮಾನ್ಯನ ನಡೆ ಮುಖ್ಯ. ನಮ್ಮ ಶ್ರೀಸಾಮಾನ್ಯನ ನಡೆ ಸದ್ಯಕ್ಕೆ ಅತ್ಯಂತ ನಿರಾಶಾದಾಯಕ.

ಒಟ್ಟಿನಲ್ಲಿ ಸಾಂದ್ರತೆ, ಒತ್ತಡ, ತಾಳುವಿಕೆ ಒಂದಕ್ಕೊಂದು ಸಂಬಂಧಿತವೆಂಬ ಭೌತಶಾಸ್ತ್ರದ ಸಾಪೇಕ್ಷ ಸಿದ್ಧಾಂತ ರಾಜಕೀಯ ವ್ಯವಸ್ಥೆಗಳಿಗೂ ಅನ್ವಯವೆಂದು ಕೊರೋನಾ ಸಾಬೀತುಗೊಳಿಸುತ್ತಿದೆ. ಹಾಂ, ಸಾಪೇಕ್ಷ ಸಿದ್ದಾಂತ ರೇಣುಕರ ಸಿದ್ಧಾಂತ ಶಿಖಾಮಣಿಯಲ್ಲಿತ್ತು ಎಂದು ಒಂದು ವರ್ಗ, ಶಂಕರಾಚಾರ್ಯರು ಅದನ್ನು ಎಲ್ಲರಿಗಿಂತ ಮೊದಲು ಮಂಡಿಸಿದ್ದರು ಎಂದು ಇನ್ನೊಂದು ವರ್ಗ, ಇಲ್ಲ ಇವೆರೆಲ್ಲರಿಗಿಂತ ಬೌದ್ಧ ಧರ್ಮ ಈ ಸಿದ್ಧಾಂತದ ಮೂಲ, ಇದು ಪಶ್ಚಿಮದ ಪಿತೂರಿಯಿಂದ ಐನ್ಸ್ಟೀನ್ ಸಿದ್ದಾಂತವಾಗಿದೆ ಎನ್ನುವ ಪಿತೂರಿ (controversy) ಸಿದ್ಧಾಂತದಂತೆಯೇ ಕೊರೋನಾ ಇಂದು ವಿನೂತನ ಜೈವಿಕ ಯುದ್ಧದ ಪಿತೂರಿ ಸಿದ್ಧಾಂತವಾಗಿ ಸಾಗಿಬರುತ್ತಿದೆ.

No comments:

Post a Comment