ಅಮೆರಿಕಾ ಬರ್ನಿಂಗ್


ಅಮೆರಿಕಾ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಒಂದೆಡೆ ಕೊರೋನಾ ಮತ್ತದರಿಂದಾದ ಆರ್ಥಿಕ ಹಿಂಜರಿತ, ಈಗ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದ ಜಾರ್ಜ್ ಫ್ಲಾಯ್ಡ್  ಘಟನೆಯಿಂದ ಭುಗಿಲೆದ್ದ ಪ್ರತಿಭಟನೆ ಲೂಟಿಯ ರೂಪ ಪಡೆದುಕೊಂಡಿದೆ.

ಕಪ್ಪು ವರ್ಣದ ಆಫ್ರಿಕನ್ ಅಮೇರಿಕನ್ನನೊಬ್ಬ ಕಾರಿನಲ್ಲಿ ಕುಳಿತುಕೊಂಡು ಚೆಕ್ ಫೋರ್ಜರಿ ಮಾಡುವ ಪ್ರಯತ್ನದಲ್ಲಿದ್ದಾನೆ ಎಂಬ ಫೋನಿನಲ್ಲಿ ಬಂದ ದೂರಿನನ್ವಯ ವಿಚಾಸರಿಸಲು ತೆರಳಿದ ಮಿನಿಯಾಪೊಲೀಸ್ ಪೊಲೀಸರು ಒಬ್ಬನನ್ನು ಕಸ್ಟಡಿಗೆ ತೆಗೆದುಕೊಂಡು ಅನವಶ್ಯಕ ಶಕ್ತಿ ಬಳಸಿ ಆತನ ಸಾವಿಗೆ ಕಾರಣರಾಗಿದ್ದಾರೆ. ಇದು ಬಿಳಿಯ ಪೊಲೀಸ್ ಅಧಿಕಾರಿಗಳು, ಜಾರ್ಜ್ ಫ್ಲಾಯ್ಡ್ 
ಕಪ್ಪು ವರ್ಣದವನೆಂಬ ಹಿನ್ನೆಲೆಯಲ್ಲಿ ಹೆಚ್ಚಿನ ಶಕ್ತಿ ಬಳಸಿ ಕ್ರೌರ್ಯವನ್ನು ಮೆರೆದ ಜನಾಂಗೀಯ ದ್ವೇಷ ಎಂದು ಸುದ್ದಿಯಾಗಿದೆ.

ಇಲ್ಲಿ ಶಂಕಿತನನ್ನು ಬಂಧಿಸುವ ಪ್ರಕ್ರಿಯೆಯಲ್ಲಿ ಕೋಳ ಹಾಕಿದ್ದ ಮತ್ತು ಯಾವುದೇ ಅಸ್ತ್ರಗಳನ್ನು ಹೊಂದಿಲ್ಲದ ಫ್ಲಾಯ್ಡ್ ನ ಕುತ್ತಿಗೆಯ ಮೇಲೆ ಪೊಲೀಸ್ ಆಫೀಸರ್ ಡೆರಿಕ್ ಶೌವಿನ್ ಮಂಡಿಯೂರಿ ಎಂಟು ನಿಮಿಷ ನಲವತ್ತಾರು ಸೆಕೆಂಡುಗಳ ಕಾಲ ಅದುಮಿ ಹಿಡಿದದ್ದರಿಂದ ಉಸಿರು ಕಟ್ಟಿ ಜಾರ್ಜ್ ಫ್ಲಾಯ್ಡ್ ಸಾವಿಗೀಡಾಗಿದ್ದಾನೆ ಎಂದು ದೂರಲಾಗಿದೆ.

ಈ ರೀತಿಯ ಪೊಲೀಸ್ ಕ್ರೌರ್ಯ ಅದರಲ್ಲೂ ಕಪ್ಪು ಜನಾಂಗದವರ ವಿಚಾರಣೆಯಲ್ಲಿ ಆಗೊಮ್ಮೆ ಈಗೊಮ್ಮೆ ಘಟಿಸುತ್ತಲೇ ಇದೆ. ಅಂತಹ ಘಟನೆಗಳು ನಡೆದಾಗ ಅಮೆರಿಕಾದ ನ್ಯಾಯಾಂಗ ವ್ಯವಸ್ಥೆ ಕ್ಷಿಪ್ರವಾಗಿ ಸ್ವಯಂ ದೂರು ದಾಖಲಿಸಿಕೊಂಡು ಅಂತಹ ಅಧಿಕಾರಿಗಳ ಮತ್ತು ಸಂಬಂಧಿಸಿದ ಪೊಲೀಸ್ ಇಲಾಖೆಯ ವಿರುದ್ಧ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತದೆ. ಹಾಗಿದ್ದೂ ಇಂತಹ ಘಟನೆಗಳು ಒಮ್ಮೊಮ್ಮೆ ನಡೆಯುತ್ತಲೇ ಇರುತ್ತವೆ.

ದೇಶಾದ್ಯಂತ ಈ ರೀತಿಯ ಪ್ರತಿಭಟನೆ ಮತ್ತು ದೊಂಬಿ ನಾ ಕಂಡ ಕಳೆದ ಇಪ್ಪತೈದು ವರ್ಷಗಳಲ್ಲಿ ಇದೇ ಮೊದಲು! ಈ ಮೊದಲೆಲ್ಲಾ ಇಂತಹ ದೊಂಬಿಗಳು ಘಟನೆ ನಡೆದ ಪ್ರದೇಶಕ್ಕೆ ಸೀಮಿತವಾಗಿರುತ್ತಿದ್ದವೇ ಹೊರತು ದೇಶವ್ಯಾಪಿಯಾಗಿರಲಿಲ್ಲ. ಆದರೆ ಈ ಆಸ್ಫೋಟಕ್ಕೆ ಕೊರೋನಾ ಪಿಡುಗಿನಿಂದುಂಟಾಗಿದ್ದ ನಿರುದ್ಯೋಗ, ಮುಚ್ಚಿದ್ದ ಅಂಗಡಿಗಳು, ಲಾಕ್ಡೌನ್,  ಕುಸಿಯುತ್ತಿರುವ ಆರ್ಥಿಕತೆಗಳ ಜೊತೆಗೆ ಒಳಗೇ ಹೊಗೆಯಾಡುತ್ತಿದ್ದ ಆಕ್ರೋಶಕ್ಕೆ ಊದುಗೊಳವೆಯಾಗಿ ಬೆಂಕಿಯಾಗಿಸಿದ್ದು ಈ ಪೊಲೀಸ್ ಆಫೀಸರನ ವಿರುದ್ಧ ದೂರು ದಾಖಲಿಸಿಕೊಳ್ಳುವಲ್ಲಿ ಆದ ವಿಳಂಬ!

ಮಿನಿಯಾಪೊಲೀಸ್ನಲ್ಲಿ ಶಾಂತಿಯುತವಾಗಿ ಆರಂಭವಾದ ಈ ಪ್ರತಿಭಟನೆ ಲೂಟಿಗೆ ತಿರುಗಿದ್ದುದಕ್ಕೆ ಕಾರಣ ಪ್ರತಿಭಟನಾಕಾರರಲ್ಲ! ಸಾಕಷ್ಟು ಜನಾಂಗೀಯ ದ್ವೇಷದ ಹಿನ್ನೆಲೆಯವರು ಮಿನಿಯಾಪೊಲೀಸ್ ಹೊರಗಿನಿಂದ ಬಂದು ಪ್ರತಿಭಟನೆಯಲ್ಲಿ ನುಸುಳಿಕೊಂಡು ಪ್ರತಿಭಟನೆಗೆ ಕೆಟ್ಟ ಹೆಸರನ್ನು ತರಲೆಂದೇ ದೊಂಬಿ ಲೂಟಿಯನ್ನು ಆರಂಭಿಸಿದರು. ಆ ರೇಸಿಸ್ಟ್ ನುಸುಳುಕೋರರು ಹಚ್ಚಿದ ಕಿಡಿ, ಮಾಬ್ ಮೆಂಟಾಲಿಟಿಯಲ್ಲಿ ಭಗಭಗನೆ ಉರಿದು ದೇಶಾದ್ಯಂತ ಹಬ್ಬಿತು.

ಈ ಪೊಲೀಸ್ ಆಫೀಸರ್ ಡೆರಿಕ್ ಶೌವಿನ್ ಹಿಂದೆ ಕೂಡ ಅನವಶ್ಯಕವಾಗಿ ಶಂಕಿತ ಅಪರಾಧಿಗಳ ಮೇಲೆ ಗುಂಡು ಹಾರಿಸಿದ್ದು, ವಿಚಾರಣೆಯ ಸಮಯದಲ್ಲಿ ಬೇರೆ ಜನಾಂಗದ ಶಂಕಿತ ಅಪರಾಧಿಗಳ ಮೇಲೆ ಅವಶ್ಯಕ್ಕಿಂತ ಹೆಚ್ಚು ಬಲ ಪ್ರಯೋಗ ಮಾಡಿದ ಬಗ್ಗೆ ಗುರುತರ ದೂರುಗಳಿದ್ದವು. ಅಂತಹ ಅಧಿಕಾರಿಯನ್ನು ಉಳಿಸಿಕೊಂಡಿದ್ದರಿಂದ ಇಂದು ಇಡೀ ಮಿನಿಯಾಪೊಲೀಸ್ ಪೊಲೀಸ್ ಇಲಾಖೆ ಜನಾಂಗೀಯ ಭೇಧಕ್ಕೆ ಗುರಿಯಾಗಿದೆ. ಹಾಗಾಗಿ ಇವರ ವಿರುದ್ಧದ ಪ್ರತಿಭಟನೆಗೆ ಕೆಟ್ಟ ಹೆಸರು ತರಲೆಂದೇ ರೇಸಿಸ್ಟುಗಳೆಲ್ಲಾ ಹೊರಗಿನಿಂದ ಬಂದು ಪ್ರತಿಭಟನೆಯನ್ನು ದೊಂಬಿ ಮತ್ತು ಲೂಟಿಯಾಗಿಸಿದ್ದಾರೆ ಎನ್ನುವುದು ಸುದ್ದಿಯಾಗಿದೆ.

ಬಹುಪಾಲು ಅಮೆರಿಕಾದ ಪೊಲೀಸರು ಸ್ನೇಹಶೀಲ ವರ್ತನೆ ಮತ್ತು ವೃತ್ತಿಪರರಾಗಿರುತ್ತಾರೆ. ಆದರೆ ಅವರಲ್ಲಿಯೂ ಅಲ್ಲಲ್ಲಿ ಇಂತಹ ಜನಾಂಗೀಯ ದ್ವೇಷಿ ಅಧಿಕಾರಿಗಳು ಇದ್ದೇ ಇದ್ದಾರೆ.  ಏನೇ ಹಿರಿಯಣ್ಣನೆನಿಸಿದರೂ ಏನೂ ಇಲ್ಲದ ಸ್ವರ್ಗ ಸಮಾನ ದೇಶ ಅಮೆರಿಕಾ ಅಲ್ಲ. ಆ ರೀತಿಯ ದೇಶ ಈ ಭೂಮಿಯ ಮೇಲೆ ಎಲ್ಲೂ ಇಲ್ಲ.  ಆದರೆ  ಒಳಿತು ಕೆಡುಕಿನ ಅಂತರದಲ್ಲಿ ಸಾಕಷ್ಟು ವ್ಯತ್ಯಾಸ ಖಂಡಿತವಾಗಿ ಅಮೆರಿಕಾದಲ್ಲಿ ಇದೆ. ಹಾಗಾಗಿಯೇ ಇದನ್ನು ವಲಸಿಗರ ದೇಶ ಎನ್ನುವುದು.

ಈ ಮಿನಿಯಾಪೊಲೀಸ್ ಪೊಲೀಸರ ದೌರ್ಜನ್ಯವನ್ನು ನಾನೂ ಒಮ್ಮೆ ಕಂಡಿದ್ದೇನೆ. ಕಳೆದ ವರ್ಷ ಒಮ್ಮೆ ರೆಸ್ಟೋರೆಂಟ್ ಒಂದರಿಂದ ಊಟ ಮುಗಿಸಿ ನನ್ನ ಹೋಟೆಲ್ ರೂಮಿಗೆ ನಡೆದು ಹೋಗುತ್ತಿದ್ದೆ. ಹತ್ತಿರದಲ್ಲೇ ಇದ್ದುದರಿಂದ ಕಾರ್ ತೆಗೆದುಕೊಂಡು ಹೋಗಿರಲಿಲ್ಲ. ಚಳಿಗಾಲದ ಹಿಮವನ್ನು ಗುಡಿಸಿ ರಸ್ತೆಯ ಬದಿಯಲ್ಲಿ ಗುಡ್ಡೆ ಹಾಕಿದ್ದರು.  ಆಗಲೇ ಬ್ಯಾಟರಿ ಡೆಡ್ ಆದ ನನ್ನ ಫೋನನ್ನು ಜೇಬಿನಲ್ಲಿಟ್ಟುಕೊಳ್ಳುವಾಗ ಅದು ಕೈತಪ್ಪಿ ಹಿಮದ ಗುಡ್ಡೆಯಲ್ಲಿ ಬಿದ್ದುಹೋಯಿತು.

ಅದನ್ನು ಹುಡುಕುತ್ತಿದ್ದಾಗ ಪೊಲೀಸ್ ಕಾರೊಂದು ಬಂದು ಅಧಿಕಾರಿ ನನ್ನನ್ನು ಏನಾಯ್ತು, ಎಲ್ಲಿಂದ ಬರುತ್ತಿರುವುದು, ಎಲ್ಲಿಗೆ ಹೋಗುತ್ತಿರುವುದು ಇತ್ಯಾದಿ ವಿಚಾರಿಸಿದ. ಆಗ ನಾನು ವಿಷಯ ತಿಳಿಸಿದೆ.  ನನಗೆ ಅಬ್ಬಾ ಈ ಪೊಲೀಸ್ ನನ್ನ ಫೋನ್ ಹುಡುಕಿಕೊಡುತ್ತಾನೆಂಬ ಖುಷಿ. ಆದರೆ ಅವನಿಗೆ ಬೇರೆಯದೇ ಇರಾದೆಯಿತ್ತು.

ಡಿನ್ನರ್ ಸಮಯದಲ್ಲಿ ಏನಾದರೂ ಆಲ್ಕೋಹಾಲ್ ಕುಡಿದಿರೇ ಎಂದಾಗ ಹೌದು ಮಾಮೂಲಿಯಾಗಿ ಒಂದು ಗ್ಲಾಸ್ ವೈನಿನೊಂದಿಗೆ  ಊಟ ಮಾಡಿದ್ದು ಎಂದೆ. ಒಂದು ಗ್ಲಾಸ್ ವೈನ್ ಲೀಗಲ್ ಲಿಮಿಟ್ಟಿನೊಳಗಿರುತ್ತದೆ ಮೇಲಾಗಿ ನಾನೇನೂ ಕಾರ್ ಓಡಿಸುತ್ತಿಲ್ಲವಲ್ಲ!

ಆಗ ಆತ "ಸರ್, ನೀವು ಸ್ವಲ್ಪ ಡಿಸೋರಿಯೆಂಟೆಡ್ ಆಗಿದ್ದೀರಿ. ನಿಮ್ಮನ್ನು ಹೀಗೆಯೇ ನಡೆದುಕೊಂಡು ಹೋಗಲು ಬಿಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಆಗದು. ನಿಮ್ಮನ್ನು ಈ ರಾತ್ರಿ ಆಸ್ಪತ್ರೆಯಲ್ಲಿಸಿ ನಾಳೆ ನಿಮ್ಮ ಹೋಟೆಲ್ಲಿಗೆ ಹೋಗಲು ಬಿಡುತ್ತೇವೆ" ಎಂದನು!

ವ್ಹಾರೆವ್ಹಾ, ಏನೂ ಕಾರಣ ಸಿಗದಿದ್ದರೆ ಹೀಗೂ ಒಂದು ಕಾರಣ ಕೊಟ್ಟು ಇಲಾಖೆಗಲ್ಲದಿದ್ದರೆ ಆಸ್ಪತ್ರೆಗಾದರೂ ದಂಡ ಕಕ್ಕಿಸಬಹುದೆಂಬ ಬ್ರಹ್ಮಾಂಡ ಐಡಿಯಾ ಆತನದಾಗಿತ್ತು.

ಯಾವ ಅಪರಾಧದ ಹಿನ್ನೆಲೆಯಿಲ್ಲದ ಕಂದು ಬಣ್ಣದ ನನ್ನನ್ನು ಆತ ಏನೂ ಮಾಡದಾಗಿದ್ದರೂ ಈ ರೀತಿ ಕೂಡ ಮಸಲತ್ತು ಮಾಡಬಹುದೆಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ.  ಆಸ್ಪತ್ರೆಯಲ್ಲಿ ಡಾಕ್ಟರನೂ ನಸುನಗುತ್ತ ಕೆಲವು ಟೆಸ್ಟುಗಳನ್ನು ಮಾಡುವೆ. ಪೊಲೀಸರು ಹೇಳಿದಂತೆ ಈ ರಾತ್ರಿ ಇಲ್ಲಿದ್ದು ಬೆಳಿಗ್ಗೆ ಹೋಗಿರೆಂದನು. ಒಟ್ಟಿನಲ್ಲಿ ಪೊಲೀಸ್ ಇಲಾಖೆಗೆ ದಂಡ ಹಾಕಲಾಗದಿದ್ದರೂ ನನ್ನ ಆರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಂಡ ಕಟ್ಟಿಸಿದ್ದರು ಮಿನಿಯಾಪೊಲೀಸ್ ಪೊಲೀಸರು!

ಅಂತಹ ಒಂದು ಸಾಮಾನ್ಯ ಘಟನೆಯನ್ನು ಉಪಕಾರದ ರೂಪದಲ್ಲಿ ಸುಖಾಸುಮ್ಮನೆ ಆಸ್ಪತ್ರೆಯ ಬಿಲ್ (ದಂಡ) ಕಟ್ಟಿಸುವಷ್ಟು ಪರಿಣಿತ ಪೊಲೀಸರನ್ನು ನಾನೆಂದೂ ಕಂಡಿರಲಿಲ್ಲ. ಅದು ಮಿನಿಯಾಪೊಲೀಸ್ ಪೊಲೀಸರು! ನಾಜೂಕಿನ ನಾಗರೀಕ ಸಮಾಜದಲ್ಲಿ ಜನಾಂಗೀಯ ಶೋಷಣೆ ಹೀಗೂ ನಡೆಯುತ್ತದೆ. ಇದು ಮುಂದುವರಿದ ದೇಶಗಳ ಜನಾಂಗೀಯ ಭೇಧದ ಒಂದು ಸೂಕ್ಷ್ಮ ರೂಪ ಕೂಡ.

ಇರಲಿ, ಕೊರೋನಾ, ಟ್ರಂಪ್ ಟ್ವೀಟ್, ಚೈನಾ, ಹೈಡ್ರಾಕ್ಸಿಕ್ಲೋರೋಕ್ವಿನಿನಲ್ಲಿ ಮುಳುಗಿಹೋಗಿದ್ದ ವಿಶ್ವಕ್ಕೆ ಈ ರೀತಿಯ ಜನಾಂಗೀಯ ದ್ವೇಷ, ಅಮೆರಿಕಾದಲ್ಲಿ ಲೂಟಿ ಎಂದು ಮೂ(ಹೀ)ಗಳೆಯಲು ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರೇ ಕಾರಣ. ಎಲ್ಲವೂ ನನ್ನಿಂದಲೇ ಎನ್ನುವ ಟ್ರಂಪ್ ಅವರೇ ಈ ಜನಾಂಗೀಯ ಶೋಷಣೆಗೆ ಕೂಡ ಹೊಣೆಗಾರರು. ಏಕೆಂದರೆ ಅವರು ಅಧಿಕಾರಕ್ಕೆ ಬಂದ ನಂತರ ಈ ಜನಾಂಗಿಯ ಅವಹೇಳನ, ಶೋಷಣೆ ಹೆಚ್ಚಾಗಿದೆ. ಆ ಭಾವನೆಗಳನ್ನವರು ತಮ್ಮ ಟ್ವೀಟುಗಳ ಮೂಲಕ ಮೀಟುತ್ತಲೇ ಬಂದಿದ್ದಾರೆ. ಮೇಲಾಗಿ ಇಂತಹ ಘಟನೆಯನ್ನು ಸರಿಯಾಗಿ ನಿಭಾಯಿಸಲೂ ಆಗದಷ್ಟು ಅಶಕ್ತ ಟ್ರಂಪ್ ಎಂಬುದೇ ಜನರ ಆಕ್ರೋಶದ ಪ್ರತಿಭಟನೆಗೆ ಕಾರಣ. ಇಂತಹ ಅಶಕ್ತ, ಕ್ಷುಲ್ಲಕ, ಯಕಶ್ಚಿತನನ್ನು "ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ಎಂದು ಮೆರೆಸಿದ್ದು ಸಮರ್ಥ, ದೂರದರ್ಶಿ ಎಂದೆನಿಸಿದ ಮೋದಿಯವರು ತಾವೇ ತಾವಾಗಿ ಹಚ್ಚಿಕೊಂಡ ಬಹುದೊಡ್ಡ ಕಪ್ಪುಚುಕ್ಕೆ.

ಇನ್ನು ಭಾರತದ ಮಾಧ್ಯಮಗಳಿಂದ ಪ್ರಭಾವಿತರಾಗಿ ಬಲದ ಭಕ್ತರು ಅಮೆರಿಕಾದ ಪೊಲೀಸರ ಸ್ಟನ್ ಗನ್ ಅನ್ನು ಆರಿಂಚಿನ ಲಾಠಿ ಎಂದುಕೊಂಡು ನಮ್ಮ ಫೈಬರ್ ಲಾಠಿ ಮತ್ತು ಯೋಗಿ ಆದಿತ್ಯನಾಥರನ್ನು ಕಳಿಸಿದರೆ ಅಮೆರಿಕಾದ ಗಲಭೆಕೋರರ ಹುಟ್ಟಡಗಿಸುತ್ತಾರೆ ಎಂತಲೂ, ಇತ್ತ ಎಡ ವಿಭಕ್ತರು ವರ್ಣಭೇದ ಮತ್ತು ಸವರ್ಣೀಯ ಒಂದೇ ಮನಸ್ಥಿತಿಯ ಚಿಂತನೆ. ಹಾಗಾಗಿ ಟ್ರಂಪ್-ಮೋದಿ ಒಂದೇ ಎಂತಲೂ ವಿಷಯದ ಆಳಕ್ಕಿಳಿಯದೆ ಸಂತೆಗೆ ಮೂರು ಮೊಳ ಎಂಬಂತೆ
ತಮ್ಮ ತಮ್ಮ ಅನುಭೂತಿಗೆ ಸುದ್ದಿಯನ್ನು ದಕ್ಕಿಸಿಕೊಂಡು ನಮ್ಮಂತಹ ಸತ್ಯಪಂಥಿಗಳ ಎಳೆದೆಳೆದು ನಮ್ಮನ್ನು ಕೆಡವಿ ನಮ್ಮ ಮೇಲೆ ಅವರ ಬಾವುಟ ಹಾರಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಆ ಪ್ರಯತ್ನದಲ್ಲಿ ಕೆಳಗಿರುವ ನಮಗೆ ಅನತಿ ಎತ್ತರದಲ್ಲಿರುವ ಅವರ ಒಳಉಡುಪಿಲ್ಲದ ಬೆತ್ತಲೆತನ ಕಾಣುತ್ತಿದೆಯೆಂದು ಹೇಳುವುದಾದರೂ ಹೇಗೆ! ಹೇಳಿದರೂ ಬೆತ್ತಲೆರಾಜನ ದಿರಿಸು ತೊಟ್ಟವರು ಒಪ್ಪಬೇಕಲ್ಲವೇ? ಮುಂದುವರಿದ ದೇಶಗಳ ಜನಾಂಗೀಯ ಭೇಧದ ಸೂಕ್ಷ್ಮಗಳನ್ನು ಅವರಷ್ಟು ಯಕಶ್ಚಿತವಾಗಿ ಸಮೀಕರಿಸಿ ಹೇಳಲಾಗದು.

ಇನ್ನು ಮೊಮ್ಮಕ್ಕಳ ಹೆರಿಗೆ ಮಾಡಿಸಲೊ, ಪ್ರವಾಸಕ್ಕೆ ಬಂದವರೊ ತಕ್ಷಣಕ್ಕೆ ಷರಾ ಬರೆದಂತೆ ಅಮೆರಿಕಾದಲ್ಲೂ ಜಾತೀಯತೆ ಇದೆ, ಅಲ್ಲಿಯೂ ಕರಿ, ಬಿಳಿ, ಕಂದು ಎಂಬ ಭೇಧ ನಮ್ಮಲ್ಲಿನ ಜಾತೀಯತೆ, ಬಡತನ, ಇತ್ಯಾದಿ ದಾರಿದ್ರ್ಯತೆಯನ್ನು ಮೀರಿಸುವಂತಿದೆ ಎಂದು ಬರೆದೆಸೆಯುತ್ತಾರೆ. ಅವರುಗಳು ಫ್ಲಾಯ್ಡ್ ದುರ್ಘಟನೆಯ ಪ್ರತಿಭಟನೆಯಲ್ಲಿ ಬಿಳಿ, ಕರಿ, ಕಂದಲ್ಲದೆ ಇಡೀ ಅಮೆರಿಕಾ ತೊಡಗಿರುವುದನ್ನು ಕಾಣಲು ಸಾಧ್ಯವೇ ಇಲ್ಲ.  USA ಎಂಬುದರ ಮೊದಲ ಪದವೇ ಯುನೈಟೆಡ್! ಅಮೆರಿಕಾದ ಯಾವುದೇ ದುರ್ಘಟನೆಯ ನಂತರ ಆ ದೇಶ ಹೇಗೆ ಒಗ್ಗೂಡಿ ಕೆಲಸ ಮಾಡುತ್ತದೆ ಎಂಬ ನಿದರ್ಶನಕ್ಕೆ ಆ ದೇಶದ ಇತ್ತೀಚಿನ ಇತಿಹಾಸವನ್ನು ಕೊಂಚ ಅಗೆದು ನೋಡುವ ತಾಳ್ಮೆಯನ್ನು ಈ ಬರಹಗಾರರು ತೋರಬೇಕು.

ಜನಾಂಗೀಯ ಭೇಧದ ಇಂತಹ ದುರ್ಘಟನೆಗಳಲ್ಲಿ ಪಾಲ್ಗೊಂಡವರಿಗೆ ಆದ ಕಾನೂನು ಕ್ರಮ, ಶಿಕ್ಷೆಗಳ ಅರಿವೇ ಅವರಿಗಿರುವುದಿಲ್ಲ. ಚಳಿಗಾಲದ ಹಿಮ, ಅದನ್ನು ಕರಗಿಸಲು ಹಾಕುವ ಉಪ್ಪು ಎಂತಹ ರಸ್ತೆಯಲ್ಲೂ ಗುಂಡಿಗಳನ್ನು ಮಾಡುತ್ತದೆ. ಆ ಗುಂಡಿಗಳನ್ನು ಚಳಿಗಾಲ ಮುಗಿದೊಡನೆಯೇ ಮುಚ್ಚಲಾಗುತ್ತದೆ. ಹಾಗೆಯೇ ಆನ್ಇನ್ಕಾರ್ಪೊರೇಟೆಡ್ ಏರಿಯಾದಲ್ಲಿರುವ ರಸ್ತೆಗಳನ್ನು ತೆರಿಗೆ ಕಟ್ಟದ ಅಲ್ಲಿನ ನಿವಾಸಿಗಳೇ ಸರಿಪಡಿಸಿಕೊಳ್ಳಬೇಕಾಗುತ್ತದೆ. ಇಂತಹ ಆಳ ಅರಿಯದ ಚಳಿಗಾಲದಲ್ಲಿ ಬಂದ ಪ್ರವಾಸಿ ಅಂಕಣಕಾರರು ಅಮೆರಿಕಾದಲ್ಲೂ ನಮ್ಮಲ್ಲಿಯಂತೆಯೇ ರಸ್ತೆ ಗುಂಡಿಗಳಿವೆ ಎಂದು  ಷರಾ ಬರೆದುಹಾಕುತ್ತಾರೆ. ಒಂದು ಕಾಫಿಗೆ ಮೂರು ಡಾಲರ್ ಅಂದರೆ ಇನ್ನೂರು ರೂಪಾಯಿಗಳು ಎನ್ನುವ ಅವರು ಕೊಂಚ ಆಳಕ್ಕಿಳಿದು ಐದು ಸಾವಿರ ಡಾಲರ್ ಸಂಬಳ ಬರುವವನಿಗೆ ಮೂರು ಡಾಲರ್ ಕಾಫಿ ಕೊಳ್ಳುವುದು ಕಷ್ಟವೇ ಅಥವಾ ಐದು ಸಾವಿರ ರೂಪಾಯಿ ಸಂಬಳ ಬರುವವನಿಗೆ ಮೂರು ರೂಪಾಯಿಗೆ ಕಾಫಿ ಸಿಗುತ್ತದೆಯೇ ಎಂದು ವಾಸ್ತವದ ಹಿನ್ನೆಲೆಯಲ್ಲಿ ಎಂದೂ ಯೋಚಿಸುವುದಿಲ್ಲ. ಇಂತಹವರೊಂದಿಗೂ ಸತ್ಯಪಂಥಿಗಳು ಜಂಜಾಡಬೇಕಿದೆ.

ಮುಂದುವರಿದ ರಾಷ್ಟ್ರಗಳ ನಾಗರಿಕತೆ ಒಂದು ಸಂಕೀರ್ಣ ವ್ಯವಸ್ಥೆ. ಅದು ಹೀಗೆ ಎಂದು ಒಂದೆರಡು ಪ್ರವಾಸಗಳಲ್ಲಿ ಷರಾ ಬರೆಯಲಾಗದು.

ಇರಲಿ, ವಿದೇಶಿ ಆಕ್ರಮಣಕ್ಕೆ ಸದ್ದಾಂ ಹುಸೇನ್ ಬಿಲದಲ್ಲಿ ಅಡಗಿದ್ದರ ಅಣಕು ಪ್ರದರ್ಶನದಂತೆ ಟ್ರಂಪ್, ಶ್ವೇತ ಭವನಕ್ಕೆ ತಮ್ಮದೇ ಜನ ಲಗ್ಗೆಯಿಟ್ಟಾಗ ಬಂಕರ್ ಎಂಬೋ ಬಿಲದಲ್ಲಿ ಸುಭದ್ರವಾಗಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶ್ವೇತ ಭವನದ ಮೇಲೆ ಲಗ್ಗೆಯಿಟ್ಟ ಪ್ರತಿಭಟನಾಕಾರರ ಮೇಲೆ ಯಾವುದೇ ಶೂಟ್ ಔಟ್ ಯಾ ಗೋಲಿಬಾರ್ ಆಗಿಲ್ಲ. ಹಾಗೆಯೇ ಈ ಪ್ರತಿಭಟನೆಯಲ್ಲಾಗಲಿ ದೊಂಬಿಯಲ್ಲಾಗಲಿ ಯಾವುದೇ ಸಾವು ಸಂಭವಿಸಿಲ್ಲ. ಅಷ್ಟರಮಟ್ಟಿಗೆ ಅಮೆರಿಕಾ ಪ್ರಬುದ್ಧ ಪ್ರಜ್ಞೆಯನ್ನು ಹೊಂದಿದೆ.

ಒಟ್ಟಿನಲ್ಲಿ ಆಗಿದ್ದೇನೆಂದರೆ ಒಂದೆಡೆ ಶಾಂತಿಯಿಂದ ಪ್ರತಿಭಟನೆಯಲ್ಲಿ ತೊಡಗಿರುವ ಪ್ರತಿಭಟನೆಕಾರರು, ಅವರ ಹೆಸರಿನಲ್ಲಿ ಗಲಭೆಕೋರರ ಗುಂಪೊಂದು ಹಿಂಸಾತ್ಮಕ ಪ್ರತಿಭಟನೆಯ ಬತ್ತಿ ಇಟ್ಟು ಕಿಡಿ ಹಚ್ಚಿ Mob mentality ಅನ್ನು ಪ್ರಚೋದಿಸಿದರೆ ಮುಗಿಯಿತು! ಮುಂದಾಗುವುದೇ ಗಲಭೆ, ದೊಂಬಿ, ಲೂಟಿ.

ಅದರಲ್ಲೂ ಜನಾಂಗ, ಧರ್ಮದ ಲೇಪವಿದ್ದರೆ ಅದು ವಿಶ್ವವ್ಯಾಪಿ.

ಗುಂಪಿನಲ್ಲಿ ಗೋವಿಂದಕ್ಕೆ ಯಾವ ದೇಶಗಳೂ ಹೊರತಲ್ಲ.

ಹಾಂ, ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಇರುವುದಿಲ್ಲ! ಏಕೆಂದರೆ ಅವರ ಖ್ಯಾತ ಟಿವಿ ರಿಯಾಲಿಟಿ ಶೋ ಆಗಿದ್ದ "ಅಪ್ರೆಂಟಿಸ್" ಶೋದಲ್ಲಿ ಅವರು ಹೇಳುವ "ಯೂ ಆರ್ ಫೈಯರ್ಡ್" ಎಂಬ ಮಾತನ್ನು ಅವರಿಗೆ ಓಟು ಹಾಕುವವರು ಹೇಳಲಿದ್ದಾರೆ.

No comments:

Post a Comment