ಓದು, ಬರಹ ಮತ್ತು ಪ್ರಕಾಶನ

 ನಾನೊಬ್ಬ ಕೇವಲ ಓದುಗನಾಗಿದ್ದೆ. ಆದರೆ ಮಾಧ್ಯಮಗಳಲ್ಲಿನ ಅಂಕಣಗಳು ಕ್ರಿ. ಶ. 2000ದಿಂದೀಚೆಗೆ ಯಾವಾಗ ಹಾದಿ ತಪ್ಪಲಾರಂಭಿಸಿದವೋ ಆಗ ಆಗುಹೋಗುಗಳ ಕುರಿತು ನನ್ನ ಅನಿಸಿಕೆಗಳನ್ನು ಬರೆದು ಕನ್ನಡದ ಪ್ರಪ್ರಥಮ ಪೋರ್ಟಲ್ಲಿಗೆ ಕಳಿಸುತ್ತಿದ್ದೆ. ಅವರು ಅವುಗಳನ್ನು ಪ್ರಕಟಿಸುತ್ತಿದ್ದರು. ಕನ್ನಡದ ಯಾವುದೇ ಮುದ್ರಿತ ಪತ್ರಿಕೆಗಳಿಗೆ ಆಗೆಲ್ಲಾ ಈಮೇಲ್ ವಿಳಾಸವಿರದಿದ್ದ ಕಾರಣ ಪೋರ್ಟಲ್ ನನ್ನ ಸಹಜ ಆಯ್ಕೆಯಾಗಿತ್ತು. 

2004-05 ರಲ್ಲಿ ಕರ್ನಾಟಕದ ಪ್ರಚಲಿತ ವಿದ್ಯಮಾನಗಳಲ್ಲದೆ ನನ್ನ ಚೀನಾ ಪ್ರವಾಸ, ಹುಯೆನ್ ತ್ಸಾಂಗ್, ಅಗಣಿತ ಅಲೆಮಾರಿಯ ಕಥಾನಾಯಕ ಲೀ ಬಾಲ್ಯದ ಕತೆ, ಫ್ರ್ಯಾಂಕ್, ಲೀ, ಮತ್ತು ನಾನು ಸೇರಿ ಮಾಡಿದ ಭಾರತ ಪ್ರವಾಸ,  ಎಲ್ಲವೂ ಬಿಡಿ ಬಿಡಿ ಲೇಖನಗಳಾಗಿ ಪೋರ್ಟಲ್ಲಿನಲ್ಲಿ ಪ್ರಕಟಗೊಂಡಿದ್ದವು. ಅವುಗಳನ್ನು ಮುದ್ರಿಸಿ ಪ್ರಕಟಿಸಿ ಎಂದು ಕೆಲವರು ಸಲಹೆ ನೀಡಿದ್ದರೂ ನನಗೆ ಪುಸ್ತಕ, ಪ್ರಕಾಶನಗಳ ಎಳ್ಳಷ್ಟೂ ಪರಿಚಯವಿರದ ಕಾರಣ ಮತ್ತು ನನ್ನ ಬರಹಗಳು ಮುದ್ರಿಸಿ ಓದಿಸಬೇಕಾದಂತಹವು ಎಂದು ನನಗೆ ಅನ್ನಿಸದ ಕಾರಣ ಸುಮ್ಮನಿದ್ದೆ. 

ಮೇಲಾಗಿ ಮಾವೋ ಕಾಲದ ಎಲ್ಲಾ ಚೀನಿಯರ ಕತೆಗಳೂ ಲೀ ಕತೆಯ ತದ್ರೂಪುಗಳಾಗಿದ್ದವು. ಅವರೆಲ್ಲರ ಅಪ್ಪ, ಅಮ್ಮ, ಅಜ್ಜ, ಅಜ್ಜಿಯರನ್ನೆಲ್ಲ ಮಾವೋ ಆಡಳಿತ ಅಚ್ಚಿನಲ್ಲಿ ಹಾಕಿ ತದ್ರೂಪಿಗಳಾಗಿಸಿಬಿಟ್ಟಿತ್ತು. ಹಾಗಾಗಿ ನನ್ನೆಲ್ಲಾ ಓರಗೆಯ ಚೀನೀ ಮಿತ್ರರ ಬಾಲ್ಯ ಹದಿಹರೆಯದ ಜೀವನ ರಾಷ್ಟೀಕರಣಗೊಂಡು ಏಕರೂಪ ಪಡೆದಿದ್ದುದರಿಂದ ಅದು ಪ್ರಕಟಿಸಿ ಹೇಳುವಷ್ಟು ಪ್ರಮುಖವೆನಿಸಿರಲಿಲ್ಲ.

ಅದಲ್ಲದ ನನ್ನ ವೈಯಕ್ತಿಕ ಮಾನದಂಡದ ಪ್ರಕಾರ ನಾನೊಬ್ಬ ಬರಹಗಾರ ಎಂದು ನನಗೆ ಅಂದೂ ಅನ್ನಿಸಿರಲಿಲ್ಲ, ಈಗಲೂ ಎನಿಸಿಲ್ಲ.

ಹೀಗಿದ್ದಾಗ ನನ್ನ ಬರಹಗಳನ್ನು ಪ್ರಕಟಿಸುತ್ತಿದ್ದ ಪೋರ್ಟಲ್ ನಿಂತು ಹೋದ ಕಾರಣ ಅಳಿದುಳಿದ ನನ್ನ ಬರಹಗಳನ್ನು ನನ್ನದೇ ಒಂದು ಬ್ಲಾಗ್ ಮಾಡಿ ಅಲ್ಲಿ ಬಿದ್ದಿರಲಿ ಎಂದು ಹಾಕಿ ನಾನು ಕೂಡ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ.

ಹಲವಾರು ವರ್ಷಗಳ ಕಾಲ ಏನೂ ಬರೆಯದಿದ್ದ ನನಗೆ ಮುಂದೆ ಸಮಾಜಮುಖಿ ಮಾಸಿಕ ಆರಂಭಗೊಂಡು ಬರೆಯಲೊಂದು ಅವಕಾಶ ಸಿಕ್ಕು, ನನ್ನ ಆರ್ಕೈವಿನಲ್ಲಿದ್ದ ಹುಯೆನ್ ತ್ಸಾಂಗ್ ಮಹಾಪಯಣ ಪ್ರಕಟಗೊಂಡು ನನ್ನ ಬರವಣಿಗೆಗೆ ಮತ್ತೆ ಚಾಲನೆ ಸಿಕ್ಕಿತು. 

ಆ ಪ್ರಕಟಣೆ ಖುಷಿ ಕೊಟ್ಟು ನನ್ನ ಬರಹಗಳೂ ಪ್ರಕಟಯೋಗ್ಯವೇನೋ ಎನಿಸಿ ಮಹಾಪಯಣ ಬರೆಯುವ ಸಂದರ್ಭದಲ್ಲಿ ಭಾರತದ ಇತಿಹಾಸದ ಕುರಿತು ಸಂಶೋಧಿಸಿ ವಿಶ್ಲೇಷಿಸಿದ್ದ ನನ್ನ ನೋಟ್ಸುಗಳು ಪರಿಷ್ಕರಣೆಗೊಂಡು "ಭಾರತ ಒಂದು ಮರುಶೋಧನೆ"ಯಾಯಿತು.

ಹಾಗೆಯೇ ಬಿಡಿ ಬಿಡಿ ಲೇಖನಗಳಲ್ಲಿದ್ದ ಲೀ ಕತೆ ಮತ್ತು ನಾವು ಮೂರು ಜನ ಸ್ನೇಹಿತರು ಮಾಡಿದ್ದ ಚೀನಾ-ಭಾರತ ಪ್ರವಾಸದ ಕತೆಗಳು ಹದಿನೈದು ವರ್ಷಗಳ ನಂತರ ಕೊರೋನಾ ಕಾಲದಲ್ಲಿ ಪರಿಷ್ಕರಣೆಗೊಂಡು ಅಗಣಿತ ಅಲೆಮಾರಿಯಾಯಿತು.

ಇದೆಲ್ಲವೂ ನನಗೆ ವೈಯಕ್ತಿಕವಾಗಿ ಸಾಧ್ಯವಾದದ್ದು ಕುತೂಹಲ ಮತ್ತು ಕಂಪ್ಯೂಟರ್, ಬರಹ ಫಾಂಟ್, ಬ್ಲಾಗ್, ಈಮೇಲ್, ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್ ಮುಂತಾದ ತಂತ್ರಜ್ಞಾನದ ಸಹಾಯದಿಂದ ಮಾತ್ರ! ಈ ಕುತೂಹಲ ಮತ್ತು ತಂತ್ರಜ್ಞಾನದ ಸಹಾಯವಿರದಿದ್ದರೆ ಖಂಡಿತ ನಾನು ಅರಿತುಕೊಂಡ ವಿಷಯಗಳನ್ನು ಕೈಬರಹದಲ್ಲಿ ಬರೆಯುತ್ತಿರಲಿಲ್ಲ.

ಅದೇ ರೀತಿ ಕೊರೋನಾ ಕಾಲದಲ್ಲಿ ಗೂಗಲ್ ನೋಟ್ಸಿನಲ್ಲಿ ಬರೆದ ನನ್ನ ಗತ ನೆನಪುಗಳು ಸಹ ಪರಿಷ್ಕೃತಗೊಂಡು "ರ ಠ ಈ ಕ" ಆಗುತ್ತಿದೆ, ಮತ್ತದೇ ಸಂವಹನ ಪ್ರಕಾಶನದಿಂದ ಬರಲಿದೆ. 

ಒಟ್ಟಿನಲ್ಲಿ ತಂತ್ರಜ್ಞಾನ ನಾನು ಬರೆಯಲು ಹೀಗೆ ಸಹಕಾರಿಯಾಗಿದೆ. ನಿಮಗೆ?

No comments:

Post a Comment