ಮೆಸೆಂಜರ್ ಮೆನೇಸ್

 ಮೆಸೆಂಜರಿನಲ್ಲಿ ಚರ್ಚೆಗೆ ಬರುವ, ಚಂದಾ ಕೇಳುವ, ನನ್ನ ಬ್ಯಾಲೆನ್ಸ್ ಶೀಟ್ ಬಯಸುವ, ಪ್ರೇಮ ನಿವೇದಿಸುವ ಎಲ್ಲಾ ರೀತಿಯ ಉಮೇದುವಾರರಿಗೆ:


ನಾನು ನನ್ನ ಔದ್ಯೋಗಿಕ ಕಾರ್ಯಗಳಲ್ಲಿ ಮುಳುಗಿರುವುದರಿಂದ ಯಾವುದೇ ಫೇಸ್ಬುಕ್ ಕರೆ, ಮೆಸೇಜುಗಳಿಗೆ ಸ್ಪಂದಿಸುವುದಿಲ್ಲ. ಕಾಯಕವೇ ಕೈಲಾಸವೆಂಬಂತೆ ಕೆಲಸದಲ್ಲಿ ಮುಳುಗಿರುವ ನನಗೆ ನಿಮ್ಮ ಕರೆಗಳಷ್ಟೇ ಅಲ್ಲದೆ ನನ್ನ ಆತ್ಮದ ಕರೆಗಳೂ ಕೇಳವು! 


ಹಾಗೆಂದೊಡನೆ ನಾನೊಬ್ಬ ತತ್ವನಿಷ್ಠಿ, ಬದ್ಧಪುರುಷ, ಕಾಯಕಯೋಗಿ ಎಂದಲ್ಲ. ಅಂತಹ ಯಾವುದೇ ಗುಣವಿಶೇಷಣಗಳಾಗಲಿ, ಆದರ್ಶಗಳಾಗಲಿ ನನ್ನಲ್ಲಿ ಇಲ್ಲ.  ಆದರೆ ನನಗೆ ನನ್ನದೇ ಆದ ಆರ್ಥಿಕ ಜವಾಬ್ದಾರಿಗಳಿವೆ. ಹಾಗಾಗಿ ನಾನಷ್ಟು ಕಟ್ಟುನಿಟ್ಟಿನಿಂದ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆಯಿದೆ. ಉದ್ಯೋಗದ ಅವಲಂಬನೆಯಿಲ್ಲದೆ ಚರ್ಚೆ, ಸಾಹಿತ್ಯ, ಸಂಗೀತ, ಪ್ರೇಮ, ಕಾಮ ಇತ್ಯಾದಿ ಚರ್ಚೆಗಳಲ್ಲಿ ತೊಡಗಿಕೊಳ್ಳವಷ್ಟು ಮತ್ತು ಶುಭೋದಯ, ಶುಭರಾತ್ರಿ, ಊಟವಾಯಿತೇ ಇತ್ಯಾದಿ ನಜರು ಸ್ವೀಕರಿಸುವಷ್ಟು ರಾಜಪೋಷಣೆ ಯಾ ಸರ್ಕಾರಿ ಆದಾಯ, ಉಂಬಳಿ, ಪಿತ್ರಾರ್ಜಿತಗಳು ನನಗಿಲ್ಲ.


ಇಂತಹ ಆರ್ಥಿಕ ದಿಗ್ಬಂಧನದಲ್ಲಿರುವ ನನ್ನ ಸಂಕಷ್ಟವನ್ನು ಅರ್ಥ ಮಾಡಿಕೊಂಡು ನಿಮ್ಮ ಫೇಸ್ಬುಕ್ ಮೆಸೇಜ್, ಕರೆಗಳನ್ನು ಸ್ವೀಕರಿಸಲಾಗದ ಅನಿವಾರ್ಯತೆಯನ್ನು ಅರಿತುಕೊಂಡು ನನ್ನನ್ನು ಮನ್ನಿಸಿ. ಇದಕ್ಕೆ ಯಾವುದೇ ವಿಶೇಷಾರ್ಥವನ್ನು ನೀವು ಕಲ್ಪಿಸಿಕೊಂಡಲ್ಲಿ ಅಥವಾ ಹಾಗೆ ಕಲ್ಪಿಸಿಕೊಳ್ಳುವಂತೆ ನಾನು ಕಾರಣವಾಗಿದ್ದರೆ, ಕ್ಷಮೆ ಕೋರುವೆ.


ಇನ್ನು ನನಗೆ ಪ್ರೀತಿಪಾತ್ರರಾದ ಎಲ್ಲಾ ಪ್ರೇಮ ನಿವೇದಕಿ ಗೆಳತಿಯರಲ್ಲಿ ಒಬ್ಬರು ಹೆಚ್ಚು ಒಬ್ಬರು ಕಡಿಮೆ ಎನ್ನದೆ ಎಲ್ಲರನ್ನೂ ಅಷ್ಟೇ ಪ್ರೀತಿ ವಿಶ್ವಾಸ, ಹೃದಯಾಂತರಾಳದಿಂದ ನಿಷ್ಕಲ್ಮಶವಾಗಿ ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ. ಹಾಗೆ ಪ್ರೀತಿಸುವುದು ನನ್ನ ಅನುಷಂಗಿಕ ಚಿರಯೌವ್ವನಿಗ ಗುಣ. ಆ ಗುಣವನ್ನು ತಿದ್ದಿ ಒಬ್ಬರನ್ನು ಮಾತ್ರ ಪ್ರೀತಿಸುವೆ ಎಂದು ನಾನು ಯಾರಿಗೂ ಹೇಳುವುದಿಲ್ಲ. ಏಕೆಂದರೆ ನಾನು ಹುಟ್ಟು ಚಂಚಲಿ, ಜಂಗಮಚಿತ್ತ, ಉದಾರವಾದಿ! ಹಾಗೆಂದು ಆದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲವೇ?  ಆದರೆ ಸದ್ಯಕ್ಕೆ ನಿಮಗೂ ಉತ್ತರಿಸಲಾಗದು. 


ಹಾಗಾಗಿ ನನಗೆ ಯಾವುದಾದರೂ ರಾಜಪೋಷಣೆ ಯಾ ಸರ್ಕಾರಿ ಆದಾಯ, ಉಂಬಳಿ, ಪಿತ್ರಾರ್ಜಿತಗಳ ಬಳುವಳಿ ದಯಪಾಲಿಸಿ ದಯವಿಟ್ಟು ಮೆಸೆಂಜರಿನಲ್ಲಿ ಬನ್ನಿ, ಮಾತನಾಡೋಣ!


ವಿಶೇಷ ಸೂಚನೆ: ಭಾರತದ ಕಾಲಮಾನ ರಾತ್ರಿಯ ಹೊತ್ತು ಆನ್ಲೈನಿನಲ್ಲಿರುವವರೆಲ್ಲಾ ವಿರಹದ ಬೇಗೆಯಲ್ಲಿ ಬೇಯುತ್ತಿರುವ ಸಲಿಂಗಕಾಮಿಗಳೆಂದು ಬಗೆದು ನಮ್ಮಂತಹ ಬೇರೆ ದೇಶಗಳ ಕಾಲಮಾನಗಳಲ್ಲಿ ಎಚ್ಚರವಿರುವ ಮತ್ತು ಅನಿಯಮಿತ ಡೇಟಾ ಪ್ಲ್ಯಾನುಗಳ ಕಾರಣ 24/7 ಹಸಿರು ಚುಕ್ಕಿಯಿರುವವರನ್ನು ತಮ್ಮಂತೆಯೇ ಪರರು ಎಂದು ಪೀಡಿಸುವ ಸಲಿಂಗಕಾಮಿಗಳೇ, ನಿಮ್ಮವ ನಾನಲ್ಲ!

No comments:

Post a Comment