ಪಠ್ಯ ಪರಿಷ್ಕರಣೆ

 ಆಗಷ್ಟೇ ಬೆಂಗಳೂರಿನಲ್ಲಿ ನಾನು ಮತ್ತು ನನ್ನ ಸ್ನೇಹಿತ ಸೇರಿ ಕಂಪ್ಯೂಟರ್ ಬಿಡಿ ಭಾಗಗಳನ್ನು SJP ರಸ್ತೆಯ ಮತ್ತೊಬ್ಬ ಸ್ನೇಹಿತನಲ್ಲಿ ಖರೀದಿಸಿ ಜೋಡಿಸಿ ಕಂಪ್ಯೂಟರ್ ಆಗಿಸಿ ಮಾರುತ್ತಿದ್ದೆವು. ಕೆಲವು ಸಮಯದ ಹಿಂದೆಯಷ್ಟೇ ಕ್ಲಾಸಿಕ್ ಕಂಪ್ಯೂಟರ್ ಹಗರಣ ಮುಗಿದು ಅಂದಿನ ಮುಖ್ಯಮಂತ್ರಿ ರಾಜ್ಯದ ಪ್ರತಿಯೊಂದು ಊರಿನಲ್ಲೂ ಒಂದೊಂದು ಸಿನೆಮಾ ಮಂದಿರ ಖರೀದಿ ಮಾಡಿದ್ದಾರೆ ಎಂಬ ಸುದ್ದಿಯಾಗಿತ್ತು. ನಂತರ ಮುಖ್ಯಮಂತ್ರಿ ಬದಲಾಗಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದರು. ಅವರ ಗೃಹ ಕಚೇರಿಯಲ್ಲಿ ನನ್ನ ಮಿತ್ರನೊಬ್ಬ ಉದ್ಯೋಗಿಯಾಗಿದ್ದ. ನಾನವನಿಗೆ ಕಂಪ್ಯೂಟರ್ ಸರಬರಾಜು ಕಾಂಟ್ರಾಕ್ಟ್ ಆಗದಿದ್ದರೆ ಬೇಡ ಡೇಟಾ ಎಂಟ್ರಿ ಕಾಂಟ್ರಾಕ್ಟ್ಗಳನ್ನಾದರೂ ಕೊಡಿಸು ಎನ್ನುತ್ತಿದ್ದೆ. ಅದೇ ರೀತಿ ನನ್ನ ಆರ್ಕಿಟೆಕ್ಟ್ ಮಿತ್ರನು ಆ ಮುಮ ಕಾರ್ಯದರ್ಶಿಗೆ ಕಾಮಗಾರಿ, ಇಂಟೀರಿಯರ್ ಡಿಸೈನ್ ಕಾಂಟ್ರಾಕ್ಟ್ ಕೇಳುತ್ತಿದ್ದ. ಆದರೆ ಅವನಿಂದ ಒಂದೇ ಒಂದು ಉಪಯೋಗ ನಮಗಾಗಲಿಲ್ಲ. ಹಾಗೆಯೇ ಅವನೂ ಸಹ ತನ್ನ ಹಳೆಯ ಬೈಕ್ ಬಿಟ್ಟು ಕಾರ್ ಇರಲಿ ಇನ್ನೊಂದು ಬೈಕ್ ಸಹ ಕೊಳ್ಳ(ಲಾಗ)ಲಿಲ್ಲ.

ನಂತರ JH ಪಟೇಲ್ ಸರ್ಕಾರ ಬಂದಿತು. ಅಲ್ಲಿ ಮುಖ್ಯಮಂತ್ರಿಯವರ ಬಂಧುವೂ ಆಗಿದ್ದ ನನ್ನ ಸಹಪಾಠಿಯೊಬ್ಬ ಮುಖ್ಯಮಂತ್ರಿ ಕಚೇರಿಯಲ್ಲಿ ಸಿಬ್ಬಂದಿಯಾದ. ಮತ್ತದೇ ರಾಗ, ಮತ್ತದೇ ಹಾಡು! ಆದರೆ  ಇವನಿಂದ ಆದ ಒಂದೇ ಒಂದು ಉಪಯೋಗವೆಂದರೆ ಅಮಿತಾಭ್ ಬಚ್ಚನ್ ಅನ್ನು ಭೇಟಿಯಲ್ಲ, ನೋಡಿದ್ದು ಮಾತ್ರ! ಅಂದು ನನ್ನ ಮಿತ್ರನನ್ನು ಮಾತನಾಡಿಸಲು ವಿಧಾನಸೌಧಕ್ಕೆ ಹೋಗಿದ್ದೆ. ಅಂದು ಅಮಿತಾಭ್ ಬೆಂಗಳೂರಿನಲ್ಲಿ ನಡೆಯಲಿದ್ದ ವಿಶ್ವಸುಂದರಿ ಸ್ಪರ್ಧೆಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿದರು. ಆ ಗೋಷ್ಠಿಗೆ ಅವನು ನನ್ನನ್ನು ಕರೆದೊಯ್ದದ್ದು ಬಿಟ್ಟರೆ ಇನ್ಯಾವ ಉಪಯೋಗವೂ ಆಗಲಿಲ್ಲ. ಅವನೂ ಅಷ್ಟೇ ಪಟೇಲರ ಅಧಿಕಾರ ಮುಗಿದ ಮೇಲೆ ದಾವಣಗೆರೆಗೆ ಮರಳಿದ.

ಆ ನಂತರದ ಸರ್ಕಾರಗಳಿಂದ ಬೆಂಗಳೂರು ಸಿಂಗಾಪುರವಾಗಿ ಕರ್ನಾಟಕದಲ್ಲಿ ಸುವರ್ಣಯುಗ ಆರಂಭವಾಯಿತು!

ಸ್ವಿಸ್ ಬ್ಯಾಂಕ್ ಸೇರುತ್ತಿದ್ದ ಕಪ್ಪು ಹಣ ಮಾರ್ಗ ಬಂದ್ ಆದ ಕಾರಣ ರಿಯಲ್ ಎಸ್ಟೇಟಿಗೆ ಭೋರ್ಗರೆಯಲಾರಂಭಿಸಿತು. ಅದಕ್ಕೆ ತಕ್ಕಂತೆ ಸರ್ಕಾರದ ಆದಾಯ ಸಹ! ಅಲ್ಲಿಯವರೆಗೆ ತಮ್ಮ ಊರಿನಿಂದ ಬಸ್ಸಿನ ಮುಂದಿನ ರಿಸರ್ವ್ ಸೀಟಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಶಾಸಕರು ವೈಭವೋಪೇತ ಕಾರುಗಳಲ್ಲಿ ಬರುತ್ತಾ ತಮ್ಮ ಚೇಲಾಗಳು ಸಹ ಬಸ್ ಹತ್ತದಷ್ಟು ಸುವರ್ಣ ಕರ್ನಾಟಕ ನಿರ್ಮಿಸಿದರು. ಇದರ ಮುಂದಿನ ಹಂತವಾಗಿ ನಿಗಮ, ಮಂಡಲಿಗಳಿಂದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯತ್ವ, ಪರಿಷತ್ತು, ರೈಲ್ವೆ ಸಲಹಾ ಮಂಡಳಿ ಸದಸ್ಯತ್ವ, ಮಲೆನಾಡು ಅಭಿವೃದ್ದಿ, ಬಯಲು ಸೀಮೆ ನೀರಾವರಿ ಸಮಿತಿ, ಬಯಲು ಶೌಚಮುಕ್ತ ಸಮಿತಿ, ಮಾಧ್ಯಮ ಸಲಹೆಗಾರ ಸಮಿತಿ, ಪೇಜ್ ಪ್ರಮುಖ್ ಇನ್ನೂ ಅನೇಕಾನೇಕ ಕಂಡು ಕೇಳರಿಯದ ಸುವರ್ಣ ಅವಕಾಶಗಳನ್ನು ಸೃಷ್ಟಿಸಿ ರಾಜಕಾರಣಿಗಳು ತಮ್ಮ ತಮ್ಮ ಬೆಂಬಲಿಗರಿಗೆ ಪೊಡಮಟ್ಟರು. ನಂತರ ಎಲ್ಲಾ ಪಕ್ಷಗಳ ಒಬ್ಬೊಬ್ಬ ಶಾಸಕನ ವಾಹನ ಚಾಲಕ, ಗನ್ಮನ್, ಪಾತ್ರೆ ತೊಳೆಯುವ ಸಿಬ್ಬಂದಿ ಸಹ ಕೋಟ್ಯಾಧಿಪತಿಗಳಾದರು. ನಾನು ಕಂಡಂತೆ ಮಾಜಿ ಮುಖ್ಯಮಂತ್ರಿಗಳ ಮಗನ ಮನೆಯಲ್ಲಿ ಕರೆಂಟ್ ಬಿಲ್ಲು, ಫೋನ್ ಬಿಲ್ಲು ಕಟ್ಟಲು, ತರಕಾರಿ ತರಲು ಇದ್ದ ಈಗಲೂ ಅದೇ ಹುದ್ದೆಯಲ್ಲಿರುವ ಒಬ್ಬ ಸಹಾಯಕ ಇಂದು ಎಪ್ಪತ್ತು ಕೋಟಿಗೂ ಮೀರಿ ಆಸ್ತಿವಂತನಾಗಿದ್ದಾನೆ. ಅದೇ ರೀತಿ ಮಾಧ್ಯಮ ಸಲಹೆಗಾರರು ಕೋಟ್ಯಾಧಿಪತಿಯಾಗಿ ಸಾಮರಸ್ಯ, ಸಾಹಿತ್ಯ ಸಮ್ಮೇಳನಗಳ ಪ್ರಾಯೋಜಕರಾಗಿದ್ದಾರೆ ಎಂದು ನನ್ನ ಮಾಧ್ಯಮ ಮಿತ್ರರು ಹೇಳುತ್ತಾರೆ. ಕೆಲವರಿಗೆ ಹಣದ ವ್ಯಾಮೋಹ, ಇನ್ನೂ ಕೆಲವರಿಗೆ ಪ್ರಚಾರದ ತೀಟೆ. ಅವೆಲ್ಲವನ್ನೂ ಈ "ಗಿರಿ"ಗಳು ಒದಗಿಸುತ್ತವೆ.

ಇದಕ್ಕೆ ಪಠ್ಯ ಪರಿಷ್ಕೃತ ಸಮಿತಿಗಿರಿ ಸಹ ಬೆಂಬಲಿಗರಿಗೆ ಪೊಡಮಾಡುವ ಅಂತಹ ಒಂದು ಸುವರ್ಣ ಅವಕಾಶಗಿರಿ! 

ಈ ಹಿಂದೆ ಖ್ಯಾತ ಸಾಹಿತಿಗಳು ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿದ್ದಾಗ ಅವರಿಗೆ ಬೇಕಾದ ಅಜೆಂಡಾ ಸೇರಿಸಿದರು ಎಂದು ಇಂದಿನಂತೆಯೆ ಅಂದೂ ಹುಯಿಲೆಬ್ಬಿತ್ತು. ಆ ಸಮಿತಿಯ ಎಡ ತೊಡೆ ತಟ್ಟುವಿಕೆಯ ಸವಾಲಿಗೆ ಇಂದು ಈ ಹೊಸ ಸಮಿತಿ ಬಲ ತೊಡೆ ತಟ್ಟಿ ಉತ್ತರ ನೀಡಿದೆ. 

ಆದರೆ ಇಲ್ಲಿ ವಿರೋಧಕ್ಕೆ ಗುರಿಯಾಗಿರುವುದು ಪರಿಷ್ಕರಣೆ ಆಗಿರುವ ಕನ್ನಡ ಭಾಷಾ ಪಠ್ಯ ಎಂದು ಗಮನಿಸಿದ್ದೇನೆ! ಆದರೆ ಪಠ್ಯವೆಂದರೆ ಕೇವಲ ಕನ್ನಡ ಭಾಷಾ ವಿಷಯ ಮಾತ್ರವೇ? ಅದರಲ್ಲೂ ನನ್ನ ಹೈಸ್ಕೂಲ್ ದಿನಗಳಿಂದಲೂ ಕನ್ನಡಕ್ಕೆ ಪರ್ಯಾಯವಾಗಿ ಅಂಕ ಮಿತ್ರ ಸಂಸ್ಕೃತ, ಉರ್ದು ಆಯ್ಕೆ ಮಾಡಿಕೊಳ್ಳುವವರು ಹೆಚ್ಚಿದ್ದರು. ಅದು ಈಗಲೂ ಹಾಗೆಯೇ ಇದೆ. ಉಳಿದಂತೆ ಇಂಗ್ಲಿಷ್, ವಿಜ್ಞಾನ, ಗಣಿತ, ಇತಿಹಾಸ, ಗಣಕ ವಿಷಯಗಳ ಪರಿಷ್ಕರಣೆ ಹೇಗಿದೆ? ಒಂದು ವೇಳೆ ಆ ವಿಷಯಗಳು ಪರಿಷ್ಕರಣೆ ಆಗಿಲ್ಲದಿದ್ದರೆ, ಏಕಾಗಿಲ್ಲ? ಅವು ಬದಲಾಗದ static ಶಾಸ್ತ್ರಗಳೆಂದೆ? 

ಆಯಾಯ ಪಕ್ಷಗಳ ಬೆಂಬಲಿಗರ ಸಿಂಡಿಕೇಟ್ ಸದಸ್ಯರನ್ನು ಓಲೈಸಿ ಉದ್ಯೋಗ, ಬಡ್ತಿ, ಪದವಿ, ಪಿಹೆಚ್ಡಿ ಪಡೆದ, ಅದರಲ್ಲೂ ಕನ್ನಡ ಉಪನ್ಯಾಸಕ ಎಡಪಂಥೀಯ ಸಾಹಿತಿವರ್ಗ ತಾವು ಪಿಹೆಚ್ಡಿ ಪಡೆದದ್ದು ತಮ್ಮ ವಿರೋಧಿ ಬಣವನ್ನು ವಾಚಾಮಗೋಚರ ಬೈಯುವುದರಲ್ಲಿ ಎಂದು ಸಾಬೀತು ಮಾಡುತ್ತಿದ್ದಾರೆ. ಕೇವಲ ಕನ್ನಡವಲ್ಲದೆ ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಉನ್ನತ ಪದವಿ ಪಡೆದಿರುವಂತೆ ನಿರರ್ಗಳವಾಗಿ ಮಾತನಾಡುವ ಈ ಸುಜ್ಞಾನಿಗಳು ಇಂತಹ ಬಂದ-ಹೋದ ಸಮಿತಿಗಳನ್ನು ನಿಷೇಧಿಸಿ ಶಿಕ್ಷಣ ಇಲಾಖೆಯಲ್ಲಿಯೆ ಉದ್ಯೋಗದಲ್ಲಿರುವ ತಜ್ಞರಿಂದ ಪಠ್ಯ ರಚಿಸಿ ಎಂದೇಕೆ ಕಳೆದ ಬಾರಿ ಸಾಹಿತಿ ಅಧ್ಯಕ್ಷರ ವಿರುದ್ಧ ಹುಯಿಲೆದ್ದಾಗಲೇ ನೈತಿಕವಾಗಿ ಪ್ರಶ್ನಿಸಲಿಲ್ಲ! ಹೋಗಲಿ, ಈಗಲಾದರೂ ಏಕೆ ಅಂತಹ ದೂರಾಲೋಚನೆಯ ಕುರಿತು ಪ್ರಶ್ನಿಸುತ್ತಿಲ್ಲ?

ಕುಲುಮೆಗೆ ನಿಲುಮೆ, ಹಿಂದುತ್ವಕ್ಕೆ ಸಾಮರಸ್ಯ, ಲಿಂಗಕ್ಕೆ ಕಾರಂಜಿ, ಬರಗೂರಿಗೆ ಚಕ್ರತೀರ್ಥ, ಕಾಂಗ್ರೆಸ್ಸಿಗೆ ಬಿಜೆಪಿ...ಇದರಾಚೆಗೆ ಚಿಂತಿಸಲಾಗದ ಚಿಂತನೆಯನ್ನು ಸಪ್ತ ಸಾಗರದಾಚೆಯಿಂದಲೂ ನೋಡಲಾಗುತ್ತಿಲ್ಲ. 

ಒಟ್ಟಿನಲ್ಲಿ ಈ ಪಠ್ಯ ಪರಿಷ್ಕರಣೆ ನಿಜಕ್ಕೂ ಒಂದು ಅತ್ಯುತ್ತಮ ಬೆಳವಣಿಗೆ! ಏಕೆಂದರೆ ಈ ಮುಂಚೆ ಇಂತಹದ್ದನ್ನು ಗಮನಿಸುತ್ತಲೇ ಇರದಿದ್ದ ಪ್ರಜೆಗಳು ಈಗ ಈ ಬಗ್ಗೆಯೂ ಆಲೋಚಿಸಲಾರಂಭಿಸಿದ್ದಾರೆ.  ಈ ಆಲೋಚನೆ ಮುಂದೆ ಒಂದು ಶಾಶ್ವತ ಪರಿಹಾರಕ್ಕೆ ನಾಂದಿಯಾಗಬಹುದು! ಹಾಗೆಯೇ ಅಂಕದ ಕೋಳಿಗಳ ಮಂಕು ಕಳೆಯಬಹುದು.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment