ಪ್ರವಾದಿಗಳ ' ಶಿಶುಕಾಮಿ' ಅವಹೇಳನ ಸರಿಯೇ!

ಪ್ರವಾದಿಗಳ ' ಶಿಶುಕಾಮಿ' ಅವಹೇಳನ ಸರಿಯೇ!


ಪ್ರವಾದಿ ಮೊಹಮ್ಮದರನ್ನು 'ಶಿಶುಕಾಮಿ' ಎಂದು ಇಸ್ಲಾಮೋಫೋಬಿಯಾ ಹೀಯಾಳಿಸುವುದು ಇಂದು ನೆನ್ನೆಯದಲ್ಲ. ಹಲವಾರು ದಶಕಗಳಲ್ಲದೇ ಶತಮಾನಗಳ ಹಿಂದಿನಿಂದಲೂ ಇದೆ. ಪ್ರತಿಬಾರಿ ಹೀಗೆ ಯಾರಾದರೂ ಹೀಯಾಳಿಸಿದಾಗ ಅರಬ್, ಏಷ್ಯಾ ಅಲ್ಲದೇ ಬಹುಪಾಲು ದೇಶಗಳ ಮುಸ್ಲಿಂ ಜನಾಂಗವು ಉಗ್ರ ವಿರೋಧ ತೋರಿದೆ. ನೂರಾರು ಬಾರಿ ಈ ಕಾರಣಕ್ಕಾಗಿ ಪ್ರವಾದಿಗಳನ್ನು ಮತ್ತು ಇಸ್ಲಾಂ ಅನ್ನು ಅವಹೇಳಿಸುವ ಇಸ್ಲಾಮೋಫೋಬಿಯಾ ಮೂಲದ್ರವ್ಯವಾಗಿರುವ ಈ "ಆರನೇ ವಯಸ್ಸಿನ" ವಿಷಯ ಸತ್ಯವೇ?


ಈ ಇಸ್ಲಾಮೋಫೋಬಿಯಾದವರ ಪ್ರಕಾರ ಐವತ್ತರ ಹರೆಯದಲ್ಲಿದ್ದ ಮೊಹಮ್ಮದರೊಂದಿಗೆ ಆಯೇಷಾಳ ನಿಶ್ಚಿತಾರ್ಥವಾದಾಗ ಆಕೆಯ ವಯಸ್ಸು ಆರು ವರ್ಷವಾಗಿದ್ದು, ಮದುವೆಯು ಆಕೆಯ ಒಂಬತ್ತನೇ ವಯಸ್ಸಿನಲ್ಲಿ ನೆರವೇರಿತು ಎಂಬುದು. ಇದನ್ನು ಖುದ್ದು ಆಯೇಷಾ ಉಲ್ಲೇಖಿಸಿದ್ದಾಳೆನ್ನುವುದು (ಸಹೀಹ್ ಅಲ್ ಬುಖಾರಿ ಗ್ರಂಥದ ಪ್ರಕಾರ) ಮತ್ತು ಅನೇಕ ಮುಸ್ಲಿಮರು ಈ ವಯಸ್ಸಿನ ಅಂತರವನ್ನು ಸತ್ಯ ಎಂದು ಒಪ್ಪಿಕೊಂಡಿರುವ ಕಾರಣ ವಿರೋಧಿಗಳ ಕೂಗಿಗೆ ಮಹತ್ವ ಸಿಗುತ್ತಿರುವುದು. ಸಾಕಷ್ಟು ಮುಸ್ಲಿಮರು ಸಹ ಈ ವಯಸ್ಸಿನ ಅಂತರವನ್ನು ಅಲ್ಲಗಳೆಯದೆ ಕೇವಲ ತಮ್ಮ ಪ್ರವಾದಿಗಳ ಹೀಯಾಳಿಕೆ ವಿರುದ್ಧ ಮಾತ್ರ ಪ್ರತಿಭಟನೆ ತೋರುವುದೂ ಅಷ್ಟೇ ಗಮನಾರ್ಹ. 


ಹಾಗೆಂದು ಜಗತ್ತಿನ ಮುಸ್ಲಿಮರು ತಮ್ಮ ಮಕ್ಕಳನ್ನು ಒಂಬತ್ತನೇ ವಯಸ್ಸಿನಲ್ಲಿ ಮದುವೆ ಮಾಡಿ ಕಳಿಸುತ್ತಾರೆ ಎನ್ನುವುದು ಮೂರ್ಖತನ! ಹಾಗೊಂದು ವೇಳೆ ಮದುವೆ ಮಾಡಿದ್ದರೆ ಅದಕ್ಕೆ ಆರ್ಥಿಕ ಕಾರಣಗಳು ಇರುತ್ತವೆಯೆ ಹೊರತು ಧರ್ಮವಲ್ಲ.


ಕುರಾನ್ ಪ್ರಕಾರ ಮದುವೆಯು ಇಬ್ಬರು ವಯಸ್ಕರ ಮಧ್ಯೆ ನಡೆಯಬೇಕು. ಪೈಗಂಬರರು ಕುರಾನಿನ ಆದ್ಯ ಪ್ರತಿಪಾದಕರು. ಹೀಗಿರುವಾಗ ಆಯೇಷಾಳನ್ನು "ಶಿಶು" ಎನ್ನುವುದು ತಪ್ಪು.  ಆಯೇಷಾ ಮದುವೆಯ ಸಮಯದಲ್ಲಿ ವಯಸ್ಕಳಾಗಿಯೇ ಇರಬೇಕು ಎನ್ನುವುದು ಹೆಚ್ಚು ಸಮಂಜಸ. 


ಹಾಗಿದ್ದರೆ ಒಂಬತ್ತನೇ ವಯಸ್ಸಿನ ಹುಡುಗಿ ಹೇಗೆ ವಯಸ್ಕಳು?


ಏಳನೇ ಶತಮಾನವಲ್ಲದೆ ನಂತರದ ಹಲವಾರು ಶತಮಾನಗಳವರೆಗೆ ಅರಬ್, ಯುರೋಪ್ ಅಲ್ಲದೇ ಭವ್ಯ ಭಾರತವೂ ಸೇರಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಅಲ್ಲದೆ ಎಲ್ಲಾ ಧರ್ಮಗಳಲ್ಲೂ ಹುಡುಗಿಯು ಋತುಮತಿಯಾದರೆ ವಯಸ್ಕಳು ಎಂದು ಪರಿಗಣಿಸಲಾಗುತ್ತಿತ್ತು. ಅಲ್ಲದೆ ಮಕ್ಕಳು ಹುಟ್ಟಿದೊಡನೆಯೇ ಮದುವೆಗಳು ನಿಶ್ಚಯವಾಗುತ್ತಿದ್ದವು. ಅಲ್ಲದೆ ಮದುವೆಗಳು ರಾಜತಾಂತ್ರಿಕ ಮಾರ್ಗವೂ ಆಗಿದ್ದವು.  ಇದಕ್ಕೆ ಜಾಗತಿಕ ಇತಿಹಾಸದಲ್ಲಷ್ಟೇ ಅಲ್ಲದೆ ನಮ್ಮ ನಮ್ಮ ಕುಟುಂಬಗಳ ವೈಯಕ್ತಿಕ ಇತಿಹಾಸದಲ್ಲೇ ಸಾಕಷ್ಟು ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಹಾಗಾಗಿಯೇ ಆಯೇಷಾ ಮತ್ತು ಮೊಹಮ್ಮದರ ನಿಶ್ಚಿತಾರ್ಥ ಅವಳ ಆರನೇ ವಯಸ್ಸಿನಲ್ಲಿ ನಿಶ್ಚಯವಾಗಿ ಮೂರು ವರ್ಷಗಳ ನಂತರ ಆಕೆ ತನ್ನ ಒಂಬತ್ತನೇ ವಯಸ್ಸಿನಲ್ಲಿ ಋತುಮತಿಯಾದಾಗ ಮದುವೆ ನಡೆಯಿತು ಎನ್ನುವುದು ಸೂಕ್ತ.


ದೇವರ ನುಡಿಗಳ ದಾಖಲೆಯಾದ ಕುರಾನ್ ಎಂದೂ ಬದಲಾಗಿಲ್ಲ. ಆದರೆ ಮೊಹಮ್ಮದ್ ಪೈಗಂಬರರ ವಚನಗಳು/ನುಡಿಗಳಾದ ಹದೀತ್ ಸಾಹಿತ್ಯ ಕಾಲಾಂತರದಲ್ಲಿ ಆಗಾಗ್ಗೆ ಪರಿಷ್ಕರಣೆಗೊಳಗಾಗಿದೆ. ಆಯೇಷಾ ವಯಸ್ಸಿನ ವಿಷಯ ಸಹ ಹದೀತ್ ಆಧಾರವಾದುದರಿಂದ ಇದು ನಿಖರವಾಗಿ ಇಲ್ಲದಿರಬಹುದು ಎಂದು ಸಾಕಷ್ಟು ಇಸ್ಲಾಂ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇವೇ ಹದೀತ್ಗಳ ಪ್ರಕಾರ ತನ್ನ ಮದುವೆಯ ಕಾಲದಲ್ಲಿ ಆಯೇಷಾ ಸಾಕಷ್ಟು ಪ್ರೌಢಿಮೆಯನ್ನು ಮತ್ತು ಬುದ್ಧಿಮತ್ತೆಯನ್ನು ಹೊಂದಿದ್ದಳು ಎನ್ನಲಾಗಿದೆ. ಇಸ್ಲಾಂ ಪಂಡಿತರು ಆಕೆಯ ಬುದ್ಧಿಮತ್ತೆ ಮತ್ತು ಪ್ರೌಢಿಮೆಯ ಹಿನ್ನೆಲೆಯಲ್ಲಿ ಮದುವೆಯ ಸಮಯದಲ್ಲಿ ಆಕೆಯ ವಯಸ್ಸು ಹತ್ತೊಂಬತ್ತು ಎಂದಿದ್ದರೂ ಆಕೆಯ ವಯಸ್ಸು ಒಂಬತ್ತರಿಂದ ಹತ್ತೊಂಬತ್ತರವರ ನಡುವೆ ಹೊಯ್ದಾಡಿದರೂ ಆಕೆಯ ಮದುವೆಯ ಕಾಲಕ್ಕೆ ಆಕೆ ಅಂದಿನ ಕಾಲದ ನಿಯಮಗಳ ಪ್ರಕಾರ ವಯಸ್ಕಳಾಗಿದ್ದಳು, ಅಷ್ಟೇ. ಅಲ್ಲದೆ ಈಕೆ ಕೇವಲ ಯಾವುದೋ ಒಬ್ಬ ಹುಡುಗಿಯಾಗಿರದೆ ಒಂಟೆಯ ಮೇಲೆ ಕುಳಿತು ಯುದ್ಧಗಳಲ್ಲಿ ಪಾಲ್ಗೊಂಡಿದ್ದಾಳೆ, ಉನ್ನತ ರಾಜತಾಂತ್ರಿಕ ಬುದ್ಧಿವಂತಿಕೆಯಲ್ಲದೆ ಹಾಸ್ಯಪ್ರಜ್ಞೆಯನ್ನು ತೋರಿರುವುದಲ್ಲದೆ ಪೈಗಂಬರರು ತಮ್ಮ ಕಾಲಾನಂತರ ಆಯೇಷಾ ಮಾರ್ಗದರ್ಶನದಲ್ಲಿ ಮುಂದುವರಿಯಿರಿ ಎಂದು ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಆಯೇಷಾ ಪ್ರಮುಖವಾಗಿದ್ದಾಳೆ. 


ಇಸ್ಲಾಮೋಫೋಬಿಯಾವಾದಿಗಳು ಮರೆತಿರುವ ಅಥವಾ ಜಾಣಮರೆವು ತೋರುವ ಸಂಗತಿ ಏನೆಂದರೆ ಪೈಗಂಬರರು ಆಯೇಷಾಳಿಗಿಂತ ಮುಂಚೆ ತಮಗಿಂತ ಹದಿನೈದು ವರ್ಷ ಹಿರಿಯಳಾಗಿದ್ದ ಖತೀಜಾಳನ್ನು ಮದುವೆಯಾಗಿ ಇಪ್ಪತೈದು ವರ್ಷ ಸಂಸಾರ ಮಾಡಿದ್ದರು. ಖತೀಜಾಳ ಸಾವಿನ ನಂತರ ಅತ್ಯಂತ ದುಖಿತರಾಗಿದ್ದ ಇವರನ್ನು ಅವರ ಸ್ನೇಹಿತರು ಒತ್ತಾಯಪೂರ್ವಕವಾಗಿ ಆಯೇಷಾ ಜೊತೆ ಮದುವೆಗೆ ಒಪ್ಪಿಸಿದ್ದರು. ಅಲ್ಲದೆ ಆಯೇಷಾ ಮದುವೆ ಸಹ ಒಂದು ರಾಜತಾಂತ್ರಿಕ ಮದುವೆಯಾಗಿತ್ತು. ಇನ್ನು ಮೊಹಮ್ಮದರ ಬಹುಪತ್ನಿತ್ವದ ಬಗ್ಗೆ ಹೀಯಾಳಿಸುವ ವಿರೋಧಿಗಳು ಅವರು ವರಿಸಿದ್ದು ಸಾಕಷ್ಟು ವಿಧವೆಯರನ್ನು ಎಂಬುದನ್ನು ಗಮನಿಸುವುದಿಲ್ಲ. ಮಹಿಳೆಯರ ಬಗ್ಗೆ ಎಂತಹ ಮೇಲ್ಪಂಕ್ತಿಯ ಕಳಕಳಿಯನ್ನು ಪೈಗಂಬರರು ಹೊಂದಿದ್ದರು ಎಂಬುದಕ್ಕೆ ಅವರ ವೈಯಕ್ತಿಕ ಜೀವನವೇ ಸಾಕ್ಷಿಯಾಗಿದೆ.


ಅಂದು ಒಂದು ಉನ್ನತ ದೂರದೃಷ್ಟಿಯಿಂದ ಪೈಗಂಬರರು ಸ್ಥಾಪಿಸಿದ ಧರ್ಮ ಕ್ರಮೇಣ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣ ಇಂದಿನ ರೂಪಕ್ಕೆ ಬಂದು ನಿಂತಿರುವುದನ್ನು ಒಪ್ಪಿದರೂ ಇಸ್ಲಾಮೋಫೋಬಿಯಾವನ್ನು ಒಪ್ಪಲಾಗದು. ಅದು ಇತಿಹಾಸಕ್ಕೆ ಮಾಡುವ ಅಪಚಾರ.


ಇನ್ನು ಈ "ಶಿಶುಕಾಮಿ" ಅಪವಾದ ಇಂದು ನೆನ್ನೆಯದಲ್ಲ, ಇದರ ಇತಿಹಾಸ ಸಹ ಸಾಕಷ್ಟು ಹಿಂದಿನಿಂದಲೂ ಇದೆ. ಉಳಿದ ಧರ್ಮಗಳ ಅದರಲ್ಲೂ ಅರಬ್ ಪರಿಸರದ ಕ್ರೈಸ್ತಧರ್ಮದ "ಬ್ರಹ್ಮಚಾರಿ" ಯೇಸುಕ್ರಿಸ್ತನನ್ನು "ಮಾದರಿ" ಎಂದು ಪರಿಗಣಿಸಿರುವಾಗ ಅನ್ಯಧರ್ಮಸ್ಥಾಪಕ "ಬಹುಪತ್ನಿತ್ವ"ದ ಪೈಗಂಬರರನ್ನು ವ್ಯವಸ್ಥಿತವಾಗಿ ಲಾಲಸಿ, ಕಾಮಿ ಎಂಬ ಅವಹೇಳನಕ್ಕೆ ಗುರಿಪಡಿಸಲಾಯಿತು. ಈ "ಬ್ರಹ್ಮಚಾರಿ ಮಾದರಿ" ಇತರೆ ಧರ್ಮಗಳಲ್ಲಿಯೂ ಇದ್ದುದರಿಂದ ಈ ಅಪಪ್ರಚಾರ ವಿಶ್ವವ್ಯಾಪಿಯಾಯಿತು.  ಇಂತಹ ಎಲ್ಲಾ ಬಿಟ್ಟ ಬ್ರಹ್ಮಚಾರಿಗಳ ವಿಗ್ರಹಗಳು ಅಭಿಷೇಕಗಳ ಮೇಲೆ ಅಭಿಷೇಕ ಪುಷ್ಪಾರ್ಚನೆ, ಶಯನಮಹೋತ್ಸವ ಮಾಡಿಕೊಳ್ಳುತ್ತಿದ್ದರೆ, ಲಾಲಸಿ ಎಂದ ಪೈಗಂಬರರು ನನ್ನ ಯಾವುದೇ ವಿಗ್ರಹ, ಚಿತ್ರಗಳನ್ನು ರಚಿಸಬಾರದು ಎಂಬ ನಿರ್ವಾಣ ನಿರ್ಧಾರವನ್ನು ತಿಳಿಸಿಹೋಗಿದ್ದಾರೆ ಎಂಬುದು ಉಲ್ಲೇಖಾರ್ಹ. 


ಪೈಗಂಬರರ ಉನ್ನತ ಚಿಂತನೆಗಳನ್ನು ಇಂದಿನ ಸೌದಿಯೇತರ ದೇಶಗಳ ಮುಸ್ಲಿಮರು ಸರಿಯಾಗಿ ಅರ್ಥೈಸಿಕೊಳ್ಳುವುದು ಸಹ ಅತ್ಯಂತ ಅವಶ್ಯಕ. ಇಲ್ಲದಿದ್ದರೆ ಇಸ್ಲಾಮೋಫೋಬಿಯಾಕ್ಕೆ ಅವರೂ ಸಹ ಕೈಜೋಡಿಸಿದಂತೆಯೇ ಸರಿ.


ಈ ಅಪಪ್ರಚಾರ ಈಗ ಇಂತಹುದೇ ರಾಜತಾಂತ್ರಿಕ, ಬಹುಪತ್ನಿತ್ವದ, ಹುಟ್ಟಿನಲ್ಲೇ ನಿಶ್ಚಯವಾಗುತ್ತಿದ್ದ ಬಾಲ್ಯವಿವಾಹಗಳ ಇತಿಹಾಸದ ಆಗರವಾದ, ಸರ್ವೇಜನೌ ಸುಖೀನೌಭವಂತು ಎನ್ನುವ ವಿಶ್ವಗುರು ಭಾರತದಿಂದ ಮತ್ತೊಮ್ಮೆ ಭುಗಿಲೆದ್ದಿದೆ! 


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment