ಪುಸ್ತಕ ಲೋಕದ ಕೆಜಿಎಫ್

 ಪುಸ್ತಕ ಲೋಕದ ಕೆಜಿಎಫ್ ಎಂದೇ ಖ್ಯಾತವಾದ "ಅರ್ ಎಸ್ ಎಸ್: ಆಳ - ಅಗಲ" ಕೃತಿಯು ನನ್ನಂತಹ ಬೇವರ್ಸಿ ಬಿಕನಾಸಿ ಅನಿವಾಸಿಯನ್ನೂ ವಾಟ್ಸಾಪ್ ಮೂಲಕ ಪಿಡಿಎಫ್ ಆಗಿ ತಲುಪಿದೆ. ಇದು ಪೈರಸಿಯೋ ಅಥವಾ ಉದ್ದೇಶಪೂರ್ವಕವಾಗಿ ಹಂಚಿಕೆಯಾಗಿದೆಯೋ ಗೊತ್ತಿಲ್ಲ.

ಈ ಪಿಡಿಎಫ್ ಮುದ್ರಿತ ಪುಸ್ತಕವನ್ನು ಸ್ಕ್ಯಾನ್ ಮಾಡಿದ ರೀತಿಯದಲ್ಲ, ವೃತ್ತಿಪರ ಪಿಡಿಎಫ್ ಆಗಿರುವುದರಿಂದ ಇದು ಮೂಲ ಪ್ರಕಾಶಕರು ಅಥವಾ ಕೃತಿಕಾರರಿಂದಲೇ ಹಂಚಲ್ಪಟ್ಟಿರಬಹುದು. ಇದು ಪೈರಸಿ ಕಾಪಿ ಆಗಿದ್ದರೆ ಲೇಖಕರು ಮತ್ತು ಸಮೂಹ ಪ್ರಕಾಶಕರು ಕಾರ್ಯಪ್ರವೃತ್ತರಾಗಿ ಹಂಚಿದವರ ಮೇಲೆ ಕಾನೂನು ಕ್ರಮ ಜರುಗಿಸಿ ಸಂವಿಧಾನ, ಹಕ್ಕುಸ್ವಾಮ್ಯತೆ, ಮುಂತಾಗಿ ಇವರ ಹೋರಾಟದ ಅಂಶಗಳೇ ಆಗಿರುವ ಸಾಮಾಜಿಕ, ನೈತಿಕ, ಸಂವಿಧಾನಿಕ ಅಂಶಗಳನ್ನು ಎತ್ತಿ ಹಿಡಿಯಬೇಕು.
ಒಂದು ವೇಳೆ ಉದ್ದೇಶಪೂರ್ವಕವಾಗಿ ಲೇಖಕರು ಅಥವಾ ಅವರ ಸಮೂಹ ಪ್ರಕಾಶಕರುಗಳೇ ವಾಟ್ಸಾಪಿನಲ್ಲಿ ಹಂಚಿದ್ದರೆ ಅವರುಗಳಿಗೆ ಕಿಂಚಿತ್ ದೂರದೃಷ್ಟಿಯೂ ಇಲ್ಲದೆ ಅವರ ವಿರೋಧಿಗಳಂತೆ ಇವರೂ ಸಹ ವಾಟ್ಸಾಪ್ ವಿಶ್ವವಿದ್ಯಾಲಯಕ್ಕೆ ಶರಣಾಗಿರುವ ನೈತಿಕ ಕುಸಿತವನ್ನು ಅಧೋಗತಿಯನ್ನು ತೋರುತ್ತದೆ.
ದೂರದೃಷ್ಟಿ ಇದ್ದಿದ್ದರೆ:
ಕನ್ನಡ ಸಾಹಿತ್ಯವನ್ನು ಈಬುಕ್ ಆಗಿಸಿ ಜಾಗತಿಕವಾಗಿ ತಲುಪಿಸಲು ಹೆಣಗುತ್ತಿರುವ ಅಪ್ಪಟ ಕನ್ನಡ ಪ್ರೇಮಿ ನಿತೇಶ್ ಕುಂಟಾಡಿ ಅವರ ಋತುಮಾನ appನಲ್ಲಿ ಶೂನ್ಯ ಬೆಲೆಗೆ ಡೌನ್ಲೋಡ್ ಮಾಡಿಕೊಳ್ಳಲು ಏರ್ಪಾಡು ಮಾಡಬಹುದಿತ್ತು. ಆಗ ಕನ್ನಡದ ಋತುಮಾನ app ಸಾವಿರಾರು ಜನರ ಮೊಬೈಲಿನಲ್ಲಿರುತ್ತಿತ್ತು ಮತ್ತು ಆಸಕ್ತರು ಅಲ್ಲಿರುವ ಇತರೆ ಪುಸ್ತಕಗಳ ಮೇಲೆ ಕಣ್ಣಾಡಿಸಿಯಾದರೂ ಕುಂಟಾಡಿಯವರ ಪ್ರಯತ್ನವನ್ನು ಮತ್ತು ಕನ್ನಡದ e-booksಗಳನ್ನು ಗಮನಿಸುತ್ತಿದ್ದರು. ಎಲ್ಲಕ್ಕಿಂತ ಮೇಲಾಗಿ ಸಾಹಿತ್ಯ ಶ್ರೇಷ್ಠರು ಸಾಹಿತ್ಯದ ನೂತನ ಆಯಾಮವಾದ ಡಿಜಿಟಲೀಕರಣಕ್ಕೆ ಒಂದು ಪ್ರಚಾರವನ್ನು ಕೊಟ್ಟಂತಾಗುತ್ತಿತ್ತು.
ಇಲ್ಲದಿದ್ದರೆ ತಮ್ಮದೇ ಪಂಥನಿಷ್ಠ ಆನ್ಲೈನ್ ಪುಸ್ತಕ ಮಳಿಗೆಗಳಾದ ಜೀರುಂಡೆ, ಬೀರುಂಡೆ, ಕೈಮಾದುಂಡೆ ಇತ್ಯಾದಿ ಮಳಿಗೆಳಲ್ಲಿಯಾದರೂ ಶೂನ್ಯ ಬೆಲೆಗೆ ಓದುಗರು ಡೌನ್ಲೋಡ್ ಮಾಡಿಕೊಳ್ಳಲು ಬಿಟ್ಟಿದ್ದರೆ, ನಿಷ್ಠರಾದರೂ ಕೊಂಚ ಡಿಜಿಟಲ್ ಟ್ರಾಫಿಕ್ ನೋಡುತ್ತಿದ್ದರು.
ಇವರೆಲ್ಲಾ ಬೇಡ ಎಂದಿದ್ದರೆ ಗೂಗಲ್ ಬುಕ್ಸ್ ಸಹ ಇತ್ತು.
ಇದು ದೂರದೃಷ್ಟಿಯ ಒಂದು ಸಣ್ಣ ಉದಾಹರಣೆ ಅಷ್ಟೇ! ಇಂತಹ ಒಂದು ದೂರದೃಷ್ಟಿ ಇಲ್ಲದವರು ಒಂದು ರಾಷ್ಟ್ರವನ್ನು ರೂಪಿಸುವ, ಆಡಳಿತ, ಸಾಮಾಜಿಕ, ನ್ಯಾಯಾಂಗ, ಶಾಸಕಾಂಗ, ಇತ್ಯಾದಿ ಅಂಗಗಳ ಬಗ್ಗೆ ಅಧಿಕಾರಯುತವಾಗಿ ಒಂದು roadmap ಕೊಡಬಲ್ಲರೇ!
ಪ್ರೀತಿ, ಪ್ರೇಮ, ಕಕ್ಕುಲಾತಿ, ಕರುಣೆಯ ಕತೆಗಳು ಬಹು ಆಪ್ಯಾಯಮಾನ.
ಇಷ್ಟೇ ಇವರ ದೂರದೃಷ್ಟಿಯ ಆಳ - ಅಗಲ!!

No comments:

Post a Comment