ಸವಾಲೊಂದು ನಿನ್ನ ಮ್ಯಾಲ ಶಾಹೀರಕೆ...

 ಸವಾಲೊಂದು ನಿನ್ನ ಮ್ಯಾಲ ಶಾಹೀರಕೆ...

ಓರ್ವ ಅನಿವಾಸಿಯಾಗಿ ದೊಡ್ಡ ದೇಶದಲ್ಲಿ ಏಸಿಯಲ್ಲಿ ಕುಳಿತು ಏನು ಮಾಡ್ತೀ? ಬರಿಯೋದು ಅಲ್ಲ, ಬಾ ಇಲ್ಲಿ ನಮ್ಮೊಂದಿಗೆ ಹೋರಾಡಿ ತೋರ್ಸು.
ಆಯ್ತು ಹೋರಾಟಕ್ಕೆ ನಾನು ಸಿದ್ಧ. ಆದರೆ ನನಗೆ ಪರಿಹಾರ ಸಿಕ್ಕುವಂತಹ ಹೋರಾಟಗಳಲ್ಲಿ ಮಾತ್ರ ಆಸಕ್ತಿ. ನೀವು ಮಾಡುವ ಪ್ರಚಾರಪ್ರಿಯ, ಪರಿಹಾರ ಪಡೆಯಲೇಬೇಕೆಂಬ ದೃಢ ನಿರ್ಧಾರವಿರದ ಮತ್ತು ಅಲ್ಪದೃಷ್ಟಿಯ ಹೋರಾಟಗಳನ್ನು ನಾನು ನಿರಾಕರಿಸುವುದಲ್ಲದೆ ಖಂಡಿಸುತ್ತೇನೆ.
ನಮ್ಮ ಬುದ್ಧಿಜೀವಿಗಳು, ಚಿಂತಕರು, ಸಾಕ್ಷಿಪ್ರಜ್ಞೆಗಳು ಎನಿಸಿಕೊಂಡವರು ಹೇಳುವಂತೆ ನಮ್ಮ ಭಾರತದ ಪ್ರಜಾಪ್ರಭುತ್ವ ಇಡೀ ವಿಶ್ವದಲ್ಲೇ ಅತಿ ದೊಡ್ಡದು. ಇಲ್ಲಿನ ಸಂವಿಧಾನ ಸಹ ಅತ್ಯಂತ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ! ಹೌದು, ಅದರಲ್ಲಿ ಎರಡು ಮಾತಿಲ್ಲ.
ಇಂತಹ ದೊಡ್ಡ ಪ್ರಜಾಪ್ರಭುತ್ವ ಮತ್ತು ಶ್ರೇಷ್ಠ ಸಂವಿಧಾನದ ಅಡಿಯಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ RSS ಎಂಬುದು ಒಂದು ದಮನಕಾರಿ, ಕಟುಕ ಕ್ರೂರಿ, ದೇಶದ ಪ್ರಣವಸ್ವರೂಪಿ ವೈವಿಧ್ಯತೆಯನ್ನು ಹಾಳು ಮಾಡುತ್ತಿರುವ ವಿಷಕಾರಿ ಸಂಸ್ಥೆ. ಈ ಸಂಸ್ಥೆಯ ಮೇಲೆ ಐಪಿಸಿ ೧೨೪ ಅಂತಹ ಬ್ರಹ್ಮಾಸ್ತ್ರ ಅಲ್ಲದಿದ್ದರೂ ಸಮಾಜದ ಸ್ವಾಸ್ಥ್ಯ ಕೆಡಿಸುವ ೧೫೩(ಎ), ೨೯೫(ಎ)... ಕಡೇ ಪಕ್ಷ ಒಂದು ಸಣ್ಣ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿ ಪಾಠ ಕಲಿಸಲು ನಮಗೆ ಸಾಧ್ಯವಿಲ್ಲವೇ?! ಅದರಲ್ಲೂ ಯಕಶ್ಚಿತ್ ಒಂದು ಫೇಸ್ಬುಕ್ ಪೋಸ್ಟಿಗೆ FIR ಬಿದ್ದು ಕೇಸಾಗುತ್ತಿರುವ ನಮ್ಮ ಭವ್ಯ ಭಾರತದ ಸದೃಢ ಪ್ರಜಾಪ್ರಭುತ್ವದಲ್ಲಿ RSS ಅಂತಹ ಯಕಶ್ಚಿತ್ ೩% ಮೇಲೆ ೯೭% ಬಹುಮತದ ಕೇಸ್ ನಿಲ್ಲದೆ ಬಂಧುಗಳೇ?
ಪುಸ್ತಕ ಬರೆಯುವುದು, ಹೋರಾಟ ಮಾಡುವುದು ಪ್ರಚಾರ ನೀಡಬಲ್ಲುದೇ ಹೊರತು ಪರಿಹಾರವನ್ನಲ್ಲ. ಅಂತಹ ಯಕಶ್ಚಿತ್ ಕೆಲಸವನ್ನು ಕೈಲಾಗದ ನನ್ನಂತಹ ಅನಿವಾಸಿ "ಮತ ಹಾಕಲು ಹಕ್ಕಿಲ್ಲದ" ಅತಿ ದೊಡ್ಡ ಪ್ರಜಾಪ್ರಭುತ್ವದ ಸಾಗರೋತ್ತರ "ನಾಗರಿಕ" ಮಾಡಬೇಕೆ ಹೊರತು ಪ್ರಜಾಪ್ರಭುತ್ವದ "ಹಕ್ಕುದಾರ ಮತದಾರ" ನಾಗರಿಕನಲ್ಲ.
ಇಪ್ಪತ್ತೊಂದನೇ ಶತಮಾನದ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಈದಿ ಅಮೀನ್, ಮುಸಲೋನಿ, ಸ್ಟಾಲಿನ್, ಸದ್ದಾಂ, ಖೋಮೇನಿ, ಮಾವೋ ಮುಂತಾದ ಹತ್ತು ಹಲವು ದುಷ್ಟರು 'ಮೋಡಿ' ಎಂಬ ಏಕರೂಪವಾಗಿ ಹುಚ್ಚು 'ಖೋಡಿ'ಯಂತೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಮೇಲೆ ದಾಳಿ ಇಡುತ್ತಾನೆ ಎಂಬುದನ್ನು ವಿಶ್ವವೇ ನಂಬಲಸಾಧ್ಯ! ಹಾಗಾಗಿ ಈ ಸೂಕ್ತಪುರುಷನ ಸೋಲಿಸಲು ನಮ್ಮ ಹಕ್ಕಿನ ನ್ಯಾಯಾಂಗದ ಹೋರಾಟವೇ ಸೂಕ್ತಮಾರ್ಗ ಅಲ್ಲವೇ!
ಅವನನ್ನು ಇದೇ ಪ್ರಜಾಪ್ರಭುತ್ವದ ಮಹಾನ್ ಸಂವಿಧಾನದ ಪರಿಧಿಯೊಳಗೇ ಒಂದು ತಿರುಮಂತ್ರ ಹಾಕಿ ಸೋಲಿಸಲು ಉದಾತ್ತ ಮೇರು ಚಿಂತಕರು, ಸಾಕ್ಷಿಪ್ರಜ್ಞೆಗಳಿಗೆ ಸಾಧ್ಯವಿಲ್ಲವೇ? ಇದೆ, ಇದು ಕೇವಲ ಎಡಗೈಯಲ್ಲಿಯೇ ನಿವಾರಿಸಬಹುದು. ಅಮಿತಾಭ್ ಬಚ್ಚನ್ ಹೇಳುತ್ತಾನಲ್ಲ, "ಯೇ ತೋ ಮೇರಾ ಬಾಯೆ ಹಾಥ್ ಕಾ ಖೇಲ್ ಹೈ" ಹಾಗೆ!
ಹಾಗಾಗಿ ನಿವಾಸಿ ಚಿಂತಕರು ಏನಿದ್ದರೂ ಶಾಶ್ವತ ಪರಿಹಾರ ತರುವ ಇಂತಹ ದೂರದೃಷ್ಟಿಯ ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ಅಂತಹ ಶಾಶ್ವತ ಪರಿಹಾರ ಎಂದರೆ ಅದು ನ್ಯಾಯಾಂಗದ ಪರಿಹಾರ. ಇದು ಈಗಾಗಲೇ ಭಾರತದಲ್ಲಿ ಅಲ್ಲಲ್ಲಿ ಸಾಬೀತು ಸಹ ಆಗಿದೆ!
ಹಾಂ, ಇಂತಹ ಮೊಕದ್ದಮೆಯಿಂದ ಆಗುವ ಉಪಯೋಗವೆಂದರೆ ಶಾಶ್ವತ ಪರಿಹಾರ ಮತ್ತು ಸ್ವಸ್ಥ ಸದೃಢ ಸಮಾಜ ನಿರ್ಮಾಣ! ಮುಂದೆ ಭವಿಷ್ಯದ ಹೋರಾಟಗಳಿಗೆ ಇದೇ ಒಂದು ಮಾದರಿಯಾಗಿ ಮಾರ್ಗಸೂಚಿಯೂ ಆಗುತ್ತದೆ ಸಹ. ಸುಬ್ರಮಣಿಯನ್ ಸ್ವಾಮಿ ಗೊತ್ತಲ್ಲ!! ಆತನ ಹೋರಾಟ ಈಗಾಗಲೇ ಇಂತಹ ಫಲ ನೀಡಿದೆ, ಬಂಧುಗಳೇ! ಹಿಂಜರಿಯದಿರಿ. ಎದೆಯೂರಪ್ಪ ಜೈಲಿಗೆ ಹೋಗಿಬಂದದ್ದು ಸಹ ಇಂತಹ ನ್ಯಾಯಾಂಗ ಹೋರಾಟದಿಂದಲೇ ಎಂಬುದನ್ನು ನೆನಪಿಸಿಕೊಳ್ಳಿ.
ಮುಂದಿನ ಕಾರ್ಯಸೂಚಿಯಾಗಿ ಇಂತಹ ಶಾಶ್ವತ ಪರಿಹಾರ ಕೋರಿ ಎಲ್ಲಾ ಚಿಂತಕರು ತಕ್ಷಣಕ್ಕೆ ಒಡಗೂಡಿ ತಮ್ಮದೇ ಸಮಾನಮನಸ್ಕ ವಕೀಲರ ಸಹಾಯದಿಂದ ಒಂದು ಬಲಿಷ್ಠ ಮೊಕದ್ದಮೆಯನ್ನು RSS ವಿರುದ್ಧ ಏಕೆ ಹೂಡಬಾರದು? ಇಂತಹ ನ್ಯಾಯಾಂಗ ಹೋರಾಟಕ್ಕೆ ನಾನು ಚಿಕ್ಕ ವಂತಿಗೆಯಾಗಿ ಒಂದು ಲಕ್ಷ ರೂಪಾಯಿ ಕೊಡುತ್ತೇನೆ. ನನ್ನಂತೆಯೇ ಉದಾರವಾದವನ್ನೆ ಹಾಸಿ ಹೊದ್ದಿರುವ ನನ್ನ ಆತ್ಮೀಯ ಮಾರ್ಗದರ್ಶಕರು ಎಡ ಚಿಂತಕರೂ ಆದ ಮೇಷ್ಟ್ರ ಆಪ್ತರಾದ ರೆಡ್ಡಿ ಅಂತಹ ಅನೇಕ ಭಾರತಕ್ಕಾಗಿ ಮಿಡಿಯುವ ಅನಿವಾಸಿಗಳು ಸಹ ತಮ್ಮ ಕೈಲಾದ ವಂತಿಗೆ ಕೊಡಬಹುದು. ಸುಮ್ಮನೆ "RSS ಆಳ ಅಗಲ" ಎಂದು ಬರೆದರೆ ಅದು RSS ಅನ್ನು ಅಷ್ಟೇ ಆಳ ಅಗಲವಾಗಿ ಹೆಮ್ಮರವಾಗಿಸುತ್ತದೆ. ಈ ಪುಸ್ತಕ ದಾಖಲೆಯ ಮಾರಾಟವಾಗುವುದನ್ನು ಹಿಂದಿಕ್ಕಿ ಗೋಲ್ವಾಲ್ಕರ್ ಪುಸ್ತಕ "Bunch of Thoughts" ಡೌನ್ಲೋಡ್ ಆಗಿದೆ. ಇಂಗ್ಲಿಷ್ ಮಾಧ್ಯಮದಲ್ಲೇ ಓದಿರುವ ಕನ್ನಡದ ನಮ್ಮ ಇಂದಿನ ಯುವಜನಾಂಗ Bunch of Thoughts ಮೂಲವನ್ನು ಕೆದಕುತ್ತಿದ್ದಾರೆಯೇ ಹೊರತು ನಿಮ್ಮ ಆಳ ಅಗಲವನ್ನಲ್ಲ ಎಂದು ಈ ಡೌನ್ಲೋಡ್ ಅಂಕಿಅಂಶಗಳು ತೋರುತ್ತಿವೆ. ಇದರ ಪರಿಣಾಮ ಗೊತ್ತಲ್ಲ...! ಹಾಗಾಗಿ ಬಂಧುಗಳೇ, ಬನ್ನಿ 'ಬಾಯೇ ಹಾತ್ ಕ ಖೇಲ್' ತೋರಿಸೋಣ. ಎಲ್ಲಕ್ಕೂ ಮೇಲಾಗಿ ನಾನು, ನಾನು ರವಿ ಹಂಜ್ ಒಂದು ಲಕ್ಷ ರೂಪಾಯಿಯ ಚಿಕ್ಕ ಸಾಂಕೇತಿಕ ವಂತಿಗೆ ಕೊಡುತ್ತೇನೆ. ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೆ ವಿಶ್ರಮಿಸದಿರಿ.
ಬನ್ನಿ, ಚಡ್ಡಿ ಕಿತ್ತೆಸೆಯುವುದು ಸ್ವಾತಂತ್ರ್ಯದ ಪ್ರತೀಕ. ಹಾಗಾಗಿ ಚಡ್ಡಿ ಕಿತ್ತೆಸೆಯೋಣ. ಸ್ವಾತಂತ್ರ್ಯವನ್ನು ಎತ್ತಿ ಹಿಡಿಯೋಣ.
ನಿಮಗೆ ಜುಗಾರಿ ಕ್ರಾಸ್ ಪ್ರೊಫೆಸರ್ ಗಂಗೂಲಿ ನೆನಪಾದರೆ ಅದು ಸಹಜ.

No comments:

Post a Comment