ರಾಕೆಟ್ರಿ ಸಿನೆಮಾ ಅಭಿಪ್ರಾಯ

 ಕೇವಲ ರಾಕೆಟ್ರಿ ಸಿನೆಮಾ ನೋಡಿ ಮಾಡಿದ ಟಿಪ್ಪಣಿ ಇದಾಗಿದೆ. ಅದರಾಚೆಗೆ ಏನನ್ನೂ ತಿಳಿದು ವಿಶ್ಲೇಷಿಸಲು ಹೋಗಿಲ್ಲ. ಏಕೆಂದರೆ ಈ ಸಿನೆಮಾದಲ್ಲಿ ಅಸಲಿ ರಾಕೆಟ್ರಿ ನಾಯಕರು ಸಹ ಭಾಗವಹಿಸಿದ್ದರಿಂದ ಈ ಕತೆ ಸತ್ಯವೆಂದು ಅವರು ಅನುಮೋದಿಸಿದಂತಾಗಿರುವುದರಿಂದ ಬೇರೆಯದನ್ನು ಅರಿಯುವ ನೌಬತ್ತು ಬೇಕಿಲ್ಲ ಎಂದುಕೊಂಡಿದ್ದೇನೆ.


ಕಥಾನಾಯಕ ನಂಬಿಗೆ ಲಿಕ್ವಿಡ್ ತಂತ್ರಜ್ಞಾನ ಕಲಿಸಿದ್ದು ಅಮೆರಿಕಾದ ಪ್ರಿನ್ಸ್ಟನ್ (ಅದಕ್ಕಾಗಿ ಆತ ಪ್ರೊಫೆಸರ್ ಒಬ್ಬರ ಮನೆಯಲ್ಲಿ ಕಸ ಹೊಡೆದು ಪಾತ್ರೆ ತಿಕ್ಕಿ ಅಡುಗೆಯನ್ನೂ ಮಾಡುತ್ತಾನೆ. ನಮ್ಮ ದೇಶಭಕ್ತರ ಭಾಷೆಯಲ್ಲಿ ಇದನ್ನು ಬಕೆಟ್ ಹಿಡಿಯುವುದು ಎನ್ನುತ್ತಾರೆ ಎಂಬುದು ಉಲ್ಲೇಖಾರ್ಹ), ಪ್ರೋತ್ಸಾಹ ಕೊಟ್ಟಿದ್ದು ವಿದೇಶಿ ಸಂಸ್ಥೆ ನ್ಯಾಸಾ, ಪುಗುಸಟ್ಟೆ ಸಲಕರಣೆ ಕೊಟ್ಟದ್ದು ಓರ್ವ ಸ್ಕಾಟಿಷ್, ನಂಬಿಯ ಐವತ್ತೆರಡು ಬಂಟರಿಗೆ ಕೆಲಸ ಕೊಟ್ಟು ತಂತ್ರಜ್ಞಾನ ಕದಿಯಲು ಬಿಟ್ಟು ವಿಕಾಸಕ್ಕೆ ಎಡೆ ಮಾಡಿಕೊಟ್ಟದ್ದು ಫ್ರಾನ್ಸ್, ಕಡೆಗೆ ಹಣಕ್ಕೆ ತಂತ್ರಜ್ಞಾನ ಮಾರಿದ್ದು ರಷ್ಯಾ! ಸ್ವಂತದ್ದು ಏನು ಎಂಬುದನ್ನು ಸಿನೆಮಾ ತೋರಿಸಿಲ್ಲ!!!! ರಾಕೆಟ್ರಿಯಲ್ಲಿ ಕೇವಲ ರಾಕೆಟೀಯರಿಂಗ್ ಆಯಾಮವಿದೆಯೆ ಹೊರತು ಇಂಜಿನಿಯರಿಂಗ್ ಆಯಾಮ ಅಯೋಮಯವಾಗಿದೆ.


ವಿದೇಶಿಯರ ಇಷ್ಟೆಲ್ಲಾ ಉತ್ಕೃಷ್ಠ ತಂತ್ರಜ್ಞಾನ ಬಿಡಿ, ಸಹಕಾರ ಉದಾರತೆಯನ್ನು ಶೋಷಿಸಿದ ವ್ಯಕ್ತಿ ಇನ್ನೇನು ದ್ರೋಹ ಮಾಡಿರಬಲ್ಲ ಎಂಬ ಅನುಮಾನ "ಕಿಡಿಯಿಲ್ಲದೆ ಹೊಗೆ ಏಳುವುದಿಲ್ಲ" ಎಂಬಂತೆ ಸತ್ಯವೇ ಆಗಿರಬಾರದೇಕೆ?!? ಎಂಬ ಅನುಮಾನವನ್ನು ಇಟ್ಟುಕೊಂಡು 'ಸದಾ ಪಿತೂರಿಯ ದಂತಕತೆಗಳ ಇತಿಹಾಸವನ್ನೇ ಹೊಂದಿರುವ ಕಾಮ್ಯುನಿಸ್ಟ್' ಪ್ರಭಾವದ ಕೇರಳ ಕೆಲವು ಅತೃಪ್ತ ಇಸ್ರೋ ಆತ್ಮಗಳು ಮತ್ತು ಸ್ಥಳೀಯ ಪೊಲೀಸ್ ಸಹಕಾರದೊಂದಿಗೆ ಪಿತೂರಿ ಮಾಡಿ ನಂಬಿಯನ್ನು ಜೈಲಿಗೆ ಹಾಕಿ ಚಿತ್ರಹಿಂಸೆ ಕೊಡುವುದು ಅತ್ಯಂತ ನಾಟಕೀಯ ಎನಿಸುವುದಿಲ್ಲವೇ!


ಇನ್ನು ಇಂತಹ ಯಕಶ್ಚಿತ್ ಮೊಕದ್ದಮೆ ಸುಪ್ರೀಂ ಕೋರ್ಟಿಗೆ ಹೋಗಿ ಇಪ್ಪತ್ತು ವರ್ಷಕ್ಕೂ ಮಿಕ್ಕಿ ನ್ಯಾಯ ನಿರ್ಣಯಕ್ಕೆ ಸಮಯ ತೆಗೆದುಕೊಂಡಿರುವುದರ ಬಗ್ಗೆ ಕಿಂಚಿತ್ತೂ ಕಳವಳ ಪಡದೆ ದೇಶದ ಬಹುಪಾಲು ಜನ ಈ ಕರುಣಾಜನಕ ಕತೆ ಕೇಳಿ/ನೋಡಿ ದೇಶಭಕ್ತಿಯನ್ನು ತುಂಬಿಕೊಳ್ಳುತ್ತಿರುವುದನ್ನು ಬಹುಪರಾಕ್ ಹೇಳುತ್ತಿರುವುದನ್ನು ನೋಡಿದರೆ ಭಾವುಕ ಲೋಲುಪ್ತತೆಯ ಇತಿಹಾಸ ಅನಾವರಣಗೊಳ್ಳುತ್ತದೆ. ಸಿಪಾಯಿ ದಂಗೆ, ಬ್ರಿಟಿಷ್ - ಭಾರತೀಯ ಎಂಬ ಸ್ವಾತಂತ್ಯ ಚಳುವಳಿ, ನಂತರದ ಹಿಂದೂ - ಮುಸ್ಲಿಂ ವಿಭಜನೆ, ಮುಂದೆ ಸ್ಪೃಶ್ಯ - ಅಸ್ಪ್ರಶ್ಯ, ಮನುಸ್ಮೃತಿ, ಆರ್ಯ - ದ್ರಾವಿಡ, ಎಡ - ಬಲ ಮುಂತಾದ ಪಿತೂರಿಗಳ ಮೇಲೆ ಪಿತೂರಿಗಳ ಭಾವುಕ ಲೋಲುಪ್ತತೆಯಲ್ಲಿ ಇಂದಿನವರೆಗೂ ಮುಳುಗಿರುವ ಮತ್ತು ವಿಭಜನೆ ಆಗುತ್ತಲೇ ಇರುವ ದೇಶದ ಜನರನ್ನು ನಂಬಿಸಿ ಮೋಸ ಮಾಡುವ ಪರಿ ರಾಕೆಟ್ರಿ ನಂಬಿಯ ಇಡೀ ಕತೆಯಲ್ಲೇ ಇಂಜಿನಿಯರಿಂಗಿಗಿಂತ ಹೆಚ್ಚಾಗಿ ರಾಕೆಟೀಯರಿಂಗ್ ಆಗಿ ತೆರೆದುಕೊಂಡಿದೆ. ರಾಕೆಟೀಯರಿಂಗೇ ರಾಕೆಟ್ರಿ ಎನಿಸುವುದಲ್ಲದೆ ಪ್ರಚ್ಛನ್ನ ಪ್ರಾಮಾಣಿಕತೆಯ ದೇಶಭಕ್ತಿಯೂ ಎನಿಸಿ ಪರಮೋಚ್ಚ ಗೌರವವನ್ನು ಗಳಿಸಿದ್ದು ಸಹ ರಾಕೆಟೀಯರಿಂಗ್ ಎನಿಸಿಬಿಡುತ್ತದೆ.


ನಾನು ಖುದ್ದು ಕಂಡಂತೆ ಇಸ್ರೋ ಮತ್ತು DRDO ಸಂಸ್ಥೆಗಳಲ್ಲಿ ಸಾಕಷ್ಟು ದೇಶನಿಷ್ಠ ಪ್ರತಿಭಾವಂತ ಮತ್ತು ನಿರ್ಭೀತ ಇಂಜಿನಿಯರುಗಳಿದ್ದಾರೆ. ಅಂತಹ ಪ್ರತಿಭಾವಂತ ನಿರ್ಭೀತರು ಇಂತಹ ಅನ್ಯಾಯದ ವಿರುದ್ಧ ದನಿಯೆತ್ತದೆ ಇರುತ್ತಿದ್ದರೇ?!


 ಒಟ್ಟಿನಲ್ಲಿ ಈ ಎಲ್ಲಾ ರಾಕೆಟೀಯರಿಂಗ್ ಮೀರಿ ಸತ್ಯದ ಭಾರತ ದರ್ಶನವನ್ನು ಭಾರತ ಕಂಡುಕೊಳ್ಳುವುದು ಯಾವಾಗ ಎಂದು ನಿತ್ಯವೂ ಪರಿತಪಿಸುವ ನನ್ನಂತಹ ಅನಿವಾಸಿ ಸಾಗರೋತ್ತರ ಭಾರತೀಯನ ಅಳಲು ಮಾತ್ರ ರಾಕೆಟ್ಟಿನಂತೆ ಮುಗಿಲು ಮುಟ್ಟಿದೆ. ಒಂದೊಮ್ಮೆ ತರ್ಕದ ತವರೂರಾಗಿದ್ದ ಭಾರತ ತರ್ಕದ ಎಳೆಯನ್ನಾದರೂ ಗ್ರಹಿಸಲಿ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment