ಪೋಕ್ಸೋ ವಿಚ್ಛೇದ!

 NCRB ವರದಿಯ ಪ್ರಕಾರ ಪೋಕ್ಸೋ ಸೆಕ್ಷನ್ ೪ ಮತ್ತು ೬ (ಘಾತಕ ಶಿಶುಕಾಮ ಮತ್ತು ಅತ್ಯಾಚಾರ) ರ ಅಡಿಯಲ್ಲಿ ೨೦೧೬ ರಲ್ಲಿ ೨೦,೦೦೦ ಪ್ರಕರಣಗಳು ದಾಖಲಾಗಿದ್ದರೆ ೨೦೨೦ ರಲ್ಲಿ ೩೦,೦೦೦ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಪೂರಕವಾಗಿ ೨೦೨೦ ರಲ್ಲಿ ಪೊಲೀಸರು ೯೪.೭ ಪ್ರತಿಶತ ಚಾರ್ಜ್ ಶೀಟ್ ಪ್ರಗತಿಯನ್ನು ಸಾಧಿಸಿ ಬಾಕಿ ಉಳಿಸಿಕೊಂಡ ಪ್ರಕರಣಗಳ ಅಂಕಿಯನ್ನು ೨೮.೮ ಪ್ರತಿಶತ ಕಡಿಮೆ ಮಾಡಿಕೊಂಡಿದ್ದಾರೆ.

ಅದೇ ನ್ಯಾಯಾಲಯಗಳು ೨೦೨೦ ರಲ್ಲಿ ೩೯.೬ ಪ್ರತಿಶತ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದರೆ ೮೯ ಪ್ರತಿಶತ ಪ್ರಕರಣಗಳ ಬಾಕಿ ಉಳಿಸಿಕೊಂಡಿವೆ. ಪೊಲೀಸ್ ಚಾರ್ಜ್ ಶೀಟ್ ದರಕ್ಕೆ ತಕ್ಕಂತೆ ಕೆಲಸ ಮಾಡಲು ಪೋಕ್ಸೋ ಕೋರ್ಟುಗಳ ಸಂಖ್ಯೆಯ ಕೊರತೆ ಸಾಕಷ್ಟಿದೆ. ಕಳೆದ ಮಾರ್ಚ್ ೨೦೨೨ ರಲ್ಲಿ ಬಾಕಿ ಇರುವ ಪೋಕ್ಸೋ ಪ್ರಕರಣಗಳ ಒಟ್ಟು ಮೊತ್ತ ೨.೨೬ ಲಕ್ಷ ಪ್ರಕರಣಗಳು. ಸರ್ಕಾರವು ೧೦೨೩ ತ್ವರಿತಗತಿ ನ್ಯಾಯಾಲಯಗಳನ್ನು ತೆರೆಯಲು ತೀರ್ಮಾನಿಸಿದೆ ಎಂದರೂ ಏರುಗತಿಯ ಪೋಕ್ಸೋ ಪ್ರಕರಣಗಳನ್ನು ಚಾರ್ಜ್ ಶೀಟ್ ಪ್ರಗತಿಗೆ ತಕ್ಕಂತೆ ಸಮಗಟ್ಟಲು ಸಾಧ್ಯವಾಗದು.
ಆದರೆ ಇದೆಲ್ಲಕ್ಕಿಂತ ಬೆಚ್ಚಿ ಬೀಳಿಸುವ ಸಂಗತಿ ಎಂದರೆ ಈ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ಶಿಕ್ಷೆಯಾಗುತ್ತಿರುವುದು ಕೇವಲ ೧೬.೩೩ ಪ್ರತಿಶತ ಮಾತ್ರ. ಇದಕ್ಕೆ ಪ್ರಮುಖ ಕಾರಣ ಸಂತ್ರಸ್ತರು ಪ್ರತಿಕೂಲ ಸಾಕ್ಷಿಗಳಾಗಿ (Hostile) ಪರಿವರ್ತನೆಯಾಗುವುದು! ಅಂದರೆ CrPC ಸೆಕ್ಷನ್ ೧೬೪ ರಲ್ಲಿ ನೀಡಿದ ಹೇಳಿಕೆಗೆ ವ್ಯತಿರಿಕ್ತವಾಗಿ ನ್ಯಾಯಾಲಯದಲ್ಲಿ ಪ್ರಮಾಣ ಮಾಡಿ ಹೇಳಿಕೆ ನೀಡುವುದು. ಆದರೆ ಪೋಕ್ಸೋ ಕಾಯ್ದೆಯು ಅತ್ಯಂತ ಏಕಮುಖಿ ಸಂತ್ರಸ್ತಪರ ಕಾಯ್ದೆ ಎನ್ನುವಷ್ಟು ಸಂತ್ರಸ್ತರ ಪರವಿದೆ. ಇಲ್ಲಿ ಸಂತ್ರಸ್ತರ ಹೇಳಿಕೆಯೇ ಪ್ರಮುಖವಾಗಿ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ನಡೆಯುತ್ತದೆ ಎನ್ನುವಷ್ಟರ ಮಟ್ಟಿಗೆ ಅದು ಸಂತ್ರಸ್ತರ ಪರ. ಏಕೆಂದರೆ ಇಂತಹ ಕೇಸುಗಳಲ್ಲಿ ಸಾಕ್ಷ್ಯಾಧಾರಗಳು ದೊರಕುವುದು ಕಡಿಮೆ. ಹಾಗಾಗಿಯೇ ಪೊಲೀಸರು ಕ್ಷಿಪ್ರಗತಿಯಲ್ಲಿ ಚಾರ್ಜ್ ಶೀಟ್ ಪ್ರಗತಿ ಸಾಧಿಸಿರುವುದು.
ಇಂದು ಈ ಕಾನೂನು ಬಳಸಿ ಯಾರ ಮೇಲೆ ಬೇಕಾದರೂ ಬ್ರಹ್ಮಾಸ್ತ್ರ ಬಿಡಬಹುದು ಎಂದು ಸಾಕಷ್ಟು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಕಾರಣಕ್ಕಾಗಿಯೇ ಇಲ್ಲಿ Hostile ಪ್ರತಿಕೂಲ ಹೇಳಿಕೆಗೆ ಅಷ್ಟೊಂದು ಮಹತ್ವ! ಹಾಗಾಗಿ ಆರೋಪಿಗಳ ಪರ ವಕಾಲತ್ತಿನ ಏಕೈಕ ದಾಳ, ಈ ಪ್ರತಿಕೂಲ ಹೇಳಿಕೆ ಯಾನೆ Hostility!
ಇನ್ನು ಪ್ರಕರಣ ಸಂಭವಿಸಿದ ಕೂಡಲೇ ದೂರು ಕೊಟ್ಟು ತನಿಖೆ ನಡೆದಿದ್ದರೆ ಸಾಕ್ಷ್ಯಾಧಾರಗಳು ಪೂರಕವಾಗಿ ಸಿಗುವ ಅವಕಾಶಗಳು ಅಧಿಕ. ಉದಾಹರಣೆಗೆ ಅಸಾರಾಂ ಬಾಪು ಪ್ರಕರಣದಲ್ಲಿ ಅತ್ಯಾಚಾರದ ಘಟನೆ ೨೦೧೩ರ ಆಗಸ್ಟ್ ೧೫ ರಂದು ನಡೆದು ಆಗಸ್ಟ್ ೨೦ ರಂದು ದೂರು ದಾಖಲಾಗಿ, ಆಗಸ್ಟ್ ೩೧ ರಂದು ಪೊಲೀಸರು ಅಸರಾಂನನ್ನು ಬಂಧಿಸಿದ್ದರು. ನಂತರ ನವೆಂಬರ್ ೬ ರಂದು ಜೋಧ್ಪುರ ಪೊಲೀಸರು ಚಾರ್ಜ್ ಶೀಟ್ ಹಾಕುವುದರೊಂದಿಗೆ ವಿಚಾರಣೆ ಆರಂಭವಾಗಿ ೨೦೧೮ ರ ಏಪ್ರಿಲ್ ೨೫ಕ್ಕೆ ಇತ್ಯರ್ಥವಾಯಿತು.
ಆದರೆ ಕರ್ನಾಟಕದ ಇಂದಿನ ಮುರುಘಾಶರಣ ಪೋಕ್ಸೋ ಪ್ರಕರಣವು ಅಸಾರಾಂ ಪ್ರಕರಣದಷ್ಟು ಘಟನೆ ನಡೆದ ತ್ವರಿತ ಸಮಯದಲ್ಲಿ ದಾಖಲಾಗಿಲ್ಲ ದೂರಿನಲ್ಲಿರುವ ಪ್ರಕಾರ ಘಟನೆ ನಡೆದು ಸಾಕಷ್ಟು ಸಮಯವಾಗಿಹೋಗಿದೆ. ಪೋಕ್ಸೋ ಅಡಿಯಲ್ಲಿ ಖುಲಾಸೆಗೊಂಡ ಬಹುಪಾಲು ಪ್ರಕರಣಗಳು ಇದೇ ರೀತಿಯವು ಮತ್ತು ಶಿಕ್ಷೆಯಾದ ಪ್ರಕರಣಗಳು ಅಸಾರಾಂ ಪ್ರಕರಣದಂತಹವು ಎಂಬುದು ಗಮನಾರ್ಹ ಸಂಗತಿ.
ಇದಕ್ಕೆ ಪ್ರಮುಖ ಕಾರಣ ಸರಿಯಾದ ಸಾಕ್ಷ್ಯಾಧಾರಗಳ ಕೊರತೆ ಮತ್ತು ಪ್ರತಿಕೂಲ ಹೇಳಿಕೆಗಿಂತ ಬಹುಮುಖ್ಯವಾಗಿ ಖುದ್ದು ಇನ್ನೂ ಶೈಶವಾವಸ್ಥೆಯಲ್ಲಿರುವ ಪೋಕ್ಸೋ ಕಾಯ್ದೆ! ಕೇವಲ ಏಕಮುಖಿ ಎನ್ನಿಸುವಂತಹ ಕಾನೂನು ರೂಪಿಸಿಬಿಟ್ಟರೆ ಸಾಕೆ? ಅದರಲ್ಲಿ ನ್ಯಾಯವಿರಬೇಡವೆ? ಬಯಲು ಶೌಚಾಲಯವನ್ನು ನಿಯಂತ್ರಿಸಲಾಗದು ಎಂದು ಶೌಚವನ್ನೇ ಬ್ಯಾನ್ ಮಾಡಿದರೆ ಹೇಗೆ? "ಮೇಲ್ನೋಟಕ್ಕೆ ನಿಜವಿರಬಹುದು ಎಂಬ ಅನುಮಾನ ಹುಟ್ಟಿಸಿದರೆ ಸಾಕು, ಶತ್ರುವಿಗೆ ಜೀವಾವಧಿ ಶಿಕ್ಷೆ ಕೊಡಿಸಬಹುದು" ಎಂದು ಹಿರಿಯ ಸ್ನೇಹಿತರಾದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜೇಬರ್ ಈ ಕಾನೂನುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಆರೋಪಿಯ ಯಾವುದೇ ತಾರ್ಕಿಕ ಪ್ಲೀಡಿಂಗಿಗಿಂತ ದೂರುದಾರರ ಭಾವುಕ ಬ್ಲೀಡಿಂಗಿಗೆ ಹೆಚ್ಚು ಬೆಲೆ ಇರುವುದು.
ಹಾಗಿದ್ದರೆ ಇಷ್ಟೊಂದು ಏಕಮುಖ ಕಾನೂನು ಇದಾಗಿದ್ದರೂ ಈ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವುದು ಕೇವಲ ೧೬.೩೩ ಪ್ರತಿಶತ ಮಾತ್ರ ಏಕೆ ಎಂಬ ಪ್ರಶ್ನೆ ಸಹಜ!
ಈ ಪ್ರಶ್ನೆಗೆ ಉತ್ತರವೇ ಪ್ರತಿಕೂಲ ಹೇಳಿಕೆಯ ಅಂಶದಲ್ಲಿ ಖುಲಾಸೆ ಆಗುತ್ತಿರುವ ಪ್ರಕರಣಗಳ ಸಂಖ್ಯೆ!
ಇದಕ್ಕೆ ಮೊದಲ ಕಾರಣ ಬಹುಪಾಲು ಪ್ರಕರಣಗಳಲ್ಲಿ ಆರೋಪಿಯು ಸಂತ್ರಸ್ತರ ಕುಟುಂಬ ವರ್ಗದವನೇ ಆಗಿರುವುದು. ಅಂಕಿ ಅಂಶಗಳ ಪ್ರಕಾರ ಕೇವಲ ಭಾರತದಲ್ಲಷ್ಟೇ ಅಲ್ಲದೆ ಜಾಗತಿಕವಾಗಿ ಸಹ ಪ್ರತಿಶತ ಎಪ್ಪತ್ತರಷ್ಟು ಅತ್ಯಾಚಾರಗಳು ಪರಿಚಿತರಿಂದಲೇ ನಡೆದಿವೆ. ಅದರಲ್ಲೂ ಅಪ್ರಾಪ್ತ ವಯಸ್ಕರ ಲೈಂಗಿಕ ಶೋಷಣೆ ಮತ್ತು ಅತ್ಯಾಚಾರಗಳು ಆಪ್ತ ಕುಟುಂಬ ವರ್ಗದವರಿಂದಲೇ ಆಗಿವೆ. ಈ ಹಿನ್ನೆಲೆಯಲ್ಲಿ ದೂರು ಕೊಟ್ಟ ನಂತರ ನಡೆದ ಕೌಟುಂಬಿಕ ಸಂಧಾನ, ಒತ್ತಡಗಳು ಈ ರೀತಿಯ hostile ಸನ್ನಿವೇಶವನ್ನು ಸೃಷ್ಟಿಸಿ ಪ್ರತಿಕೂಲ ಹೇಳಿಕೆಗೆ ಕಾರಣವಾಗಿವೆ.
ಇನ್ನು ಎರಡನೇ ಕಾರಣ, ಸುಖಾಸುಮ್ಮನೆ ದೂರು ಕೊಟ್ಟು/ಕೊಡಿಸಿ ಹೇಳಿಕೆ ಬದಲಾಯಿಸಿಕೊಳ್ಳಲು ವ್ಯವಹಾರ ಕುದುರಿಸಿಕೊಂಡು ಈ ಕಾನೂನನ್ನು ಒಂದು ಗಣಿಯಾಗಿಸಿಕೊಂಡ ಪರಿ. ಆಗಾಗ ಸುದ್ದಿಯಲ್ಲಿ ಬರುವ "ಹನಿ ಟ್ರ್ಯಾಪ್", "ಮದುವೆಯಾಗುವುದಾಗಿ ನಂಬಿಸಿ" ಮತ್ತಿತರೆ ಆಮಿಷಗಳ ಮುಂದುವರಿದ ಭಾಗವಾಗಿ ಪೋಕ್ಸೋ ಕಾನೂನು ಶೋಷಣೆಗೆ ಒಳಗಾಗುತ್ತಿದೆ. ಏಕೆಂದರೆ ಕ್ರಿಮಿನಲ್ ಪ್ರೋಸಿಜರ್ ಕೋಡ್ CrPC ಸೆಕ್ಷನ್ 468 ಪ್ರಕಾರ ಗರಿಷ್ಠ ಮೂರು ವರ್ಷ ಶಿಕ್ಷೆಯಾಗುವಂತಹ ಅಪಾರಾಧದ ಲೈಂಗಿಕ ಶೋಷಣೆ ದೂರನ್ನು ಮೂರು ವರ್ಷಗಳೊಳಗೆ ದಾಖಲಿಸಬೇಕು. ಅದೇ ದಂಡ ಕಟ್ಟುವಂತಹ ಲೈಂಗಿಕ ಅಪರಾಧವಾಗಿದ್ದರೆ ಅದು ಆರು ತಿಂಗಳೊಳಗೆ ದಾಖಲಾಗಬೇಕು. ಅದಕ್ಕಿಂತ ಹೆಚ್ಚಿನ ಕಾಲವಾಗಿದ್ದರೆ ಅದು ಪೋಕ್ಸೋ POCSO ಕಾಯ್ದೆ ಅನ್ವಯ ದಾಖಲಾಗಬೇಕಾಗುತ್ತದೆ. ಹಾಗಾಗಿ ಆಗ ನಂಬಿದ್ದವರು ಕಾಲಾಂತರದಲ್ಲಿ ನಂಬಿಕೆ ಕಳೆದುಕೊಂಡಾಗ ಸಮಯ ಮೀರಿದ ಕಾರಣ ಪೋಕ್ಸೋ ಅಡಿಯಲ್ಲಿ ದೂರು ಕೊಡುತ್ತಾರೆ.
ಇಂತಹ ವಿಶ್ಲೇಷಣೆ ಕಟುವೆನಿಸಿದರೂ ಇದು ವಾಸ್ತವ. ಭಾವಾವೇಶಗಳ ಆಚೆಗೆ ತಟಸ್ಥ ಚಿತ್ತವಾಗಿ ಅಂಕಿ-ಅಂಶ, ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆಗೊಳಪಡಿಸಿದಾಗ ಇಂತಹ ತಾರ್ಕಿಕ ಸತ್ಯವನ್ನು ಕಂಡುಕೊಳ್ಳಲು ಸಾಧ್ಯವೇ ಹೊರತು ಭಾವುಕರಾಗಿ, ಕರುಣಾಮೂರ್ತಿಗಳಾಗಿ ನ್ಯಾಯ ನಿರ್ಣಯ ಮಾಡುವ ಪರಿಯಿಂದ ಸಾಧ್ಯವಾಗದು. ಇಂತಹ ಭಾವೋದ್ವೇಗದಿಂದಲೇ ಪೋಕ್ಸೋ ಕಾಯ್ದೆ ಏಕಮುಖಿ ಕಾನೂನಾಗಿ ರೂಪಿತಗೊಂಡಿದೆ.
ಯುರೋಪ್, ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಬಾಲ್ಯಾವಸ್ಥೆಯಲ್ಲಿ ನಡೆದ ಲೈಂಗಿಕ ಕಿರುಕುಳ ಅತ್ಯಾಚಾರವನ್ನು ಮೂವತ್ತು ನಲವತ್ತು ವರ್ಷಗಳ ನಂತರ ಕೋರ್ಟುಗಳಲ್ಲಿ ಮೊಕದ್ದಮೆ ಹೂಡಿ ನ್ಯಾಯ ದೊರಕಿಸಿಕೊಂಡ ಸಾಕಷ್ಟು ನಿದರ್ಶನಗಳಿವೆ. ಆದರೆ ಅಲ್ಲಿಯ ಕಾನೂನುಗಳು ನಮ್ಮ ಪೋಕ್ಸೋ ಅಷ್ಟು ಏಕಮುಖವಲ್ಲ! ಅಲ್ಲಿಯ ಪ್ರಕರಣಗಳಲ್ಲಿ "ನ್ಯಾಯ" ನ್ಯಾಯದ ಪರವಿದೆಯೆ ಹೊರತು ಏಕಮುಖವಾಗಿ ದೂರುದಾರರ ಪರವಿಲ್ಲ.
ಆದರೆ ಭಾರತದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಪೋಕ್ಸೋ ಕಾಯ್ದೆ "ನ್ಯಾಯ"ವಾಗಿ ನುಗ್ಗಿ ಬೆನ್ನಟ್ಟಿ ಹೆಡೆಮುರಿ ಕಟ್ಟಿ ನಿಜದ ಶಿಶುಕಾಮಿಗಳನ್ನು "ನ್ಯಾಯ"ದ ಸುಪರ್ದಿಗೆ ತರಬಲ್ಲುದೇ ಅಥವಾ ವ್ಯವಹಾರಕ್ಕೆ ಒಂದು ಟೂಲ್ ಆಗುವುದೇ? ಯಾವುದೇ ಸಾಕ್ಷ್ಯಧಾರಗಳಿಗಿಂತ ಸಂತ್ರಸ್ತರ ಹೇಳಿಕೆಯೇ ಪ್ರಮುಖ ಎನ್ನುವಂತಿರುವ ಪೋಕ್ಸೋ ಸಹ ಸದ್ಯಕ್ಕೆ ಅಂಕಿ-ಅಂಶಗಳ ಪ್ರಕಾರ ಟೂಲ್ ಎನಿಸಿಬಿಡುತ್ತದೆ. ವ್ಯವಸ್ಥೆ ಚಾಪೆ ಕೆಳಗೆ ನುಸುಳಿದರೆ ಜನ ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಒಟ್ಟಾರೆ ಈ ಆಟದಲ್ಲಿ ಶೋಷಿತರು ಮತ್ತಷ್ಟು ಶೋಷಣೆಗೊಳಗಾಗುತ್ತಿದ್ದಾರೆ. ಆ ಶೋಷಿತರು ಸಂತ್ರಸ್ತರೂ ಹೌದು ಕೆಲವು ಸನ್ನಿವೇಶಗಳಲ್ಲಿ ಆರೋಪಿಗಳೂ ಹೌದು.

No comments:

Post a Comment