ಜನಸಾಹಿತ್ಯ ಚಿಕನ್ ಕಬಾಬ್, ಮಲ್ಪೈ ಮೀನ್ಹುಳಿ!

 ತಮಿಳ್ನಾಡಿನ ರಾಜ್ಯ ಲಾಂಛನವು ಅಶೋಕ ಸ್ತಂಭ, ಶ್ರೀವಲ್ಲಿಪುತ್ತೂರು ದೇವಸ್ಥಾನದ ಗೋಪುರದ ಚಿತ್ರಗಳೊಡನೆ "ವಾಯ್ಮೆಯೇ ವೆಲ್ಲಂ" ಯಾನೆ ಸತ್ಯಕ್ಕೇ ಗೆಲುವು ಎಂಬ ವಾಕ್ಯವನ್ನು ಹೊಂದಿದೆ. ಇಲ್ಲಿ ಸ್ತಂಭ, ಗೋಪುರ ಎರಡೂ ಮೂರ್ತಿಪೂಜೆಯ ಹಿಂದೂ ಸಂಸ್ಕೃತಿಯ ಸಂಕೇತಗಳು. 


ಅದೇ ರೀತಿ ಕೇರಳ ರಾಜ್ಯ ಲಾಂಛನವು ಸೊಂಡಿಲೆತ್ತಿದ ಎರಡು ಆನೆಗಳ ನಡುವೆ ಅಶೋಕ ಸ್ತಂಭ ಮತ್ತು ಪದ್ಮನಾಭ ಸ್ವಾಮಿಯ ಶಂಖವನ್ನು ಲಾಂಛನವಾಗಿ ಸತ್ಯಮೇವ ಜಯತೆ ಎಂದು ಒಮ್ಮೊಮ್ಮೆ ತಮಸೋಮಾ ಜ್ಯೋತಿರ್ಗಮಯ ಎಂಬ ಹಿಂದೂ ಸಂಸ್ಕೃತಿಯ ಶ್ಲೋಕಗಳನ್ನು ಹೊಂದಿದೆ. ಇವೂ ಸಹ ಹಿಂದೂ ಸಂಸ್ಕೃತಿಯ ಸಂಕೇತಗಳು. 


ಆದರೆ ಹಿಂದೂ ಸಂಸ್ಕೃತಿಯ ಲಾಂಛನಗಳನ್ನು ಹೊಂದಿರುವ ಈ ರಾಜ್ಯಗಳಲ್ಲಿ ಮುಸ್ಲಿಮರು ಹೇರಿಕೆ ಎಂದಾಗಲೀ, ಹೊರಗಿಟ್ಟವರು ಎಂದಾಗಲೀ ಪರಿಗಣಿಸದೆ ತಾವಿರುವ ರಾಜ್ಯದ ಭಾಷೆ, ನಾಡನ್ನು ಅಪ್ಪಿಕೊಂಡು ಅಲ್ಲಿನ ಸಾಹಿತ್ಯ ಕ್ಷೇತ್ರದಲ್ಲಿ ಪ್ರಚಂಡ ಪ್ರಗತಿ ಸಾಧಿಸಿದ್ದಾರೆ. ಮೇಲಾಗಿ ಬಹುಪಾಲು ಅವರೆಲ್ಲರೂ ಮನೆಯಲ್ಲಿ ತಮಿಳು, ಮಲಯಾಳಿ ಭಾಷೆಯನ್ನೇ ಮಾತನಾಡುತ್ತಾರೆ. ಕೇವಲ ಸಾಹಿತ್ಯವಲ್ಲದೇ ಸಾಕಷ್ಟು ಸಾಂಸ್ಕೃತಿಕ ಲಲಿತಕಲೆಗಳಲ್ಲಿ ಪ್ರಗತಿ ಸಾಧಿಸಿದ್ದಾರೆ. ಮಲಯಾಳಂ ಭಾಷೆಯಲ್ಲದೆ ಭಾರತೀಯ ಚಿತ್ರರಂಗದಲ್ಲಿಯೇ ಮಮ್ಮೂಟಿ ಸೂಪರ್ ಸ್ಟಾರ್ ಆಗಿದ್ದಾರೆ. AR ರೆಹಮಾನ್ ತಮಿಳು ಚಿತ್ರರಂಗದಿಂದ ಹಾಲಿವುಡ್ ವರೆಗೆ ಬೆಳೆದಿದ್ದಾರೆ. ಅದೇ ರೀತಿ ಮುಸ್ಲಿಮರು ಮಲಯಾಳಂ ಭಾಷೆಯ ಸಾಹಿತ್ಯದ ಮೇರು ಶಿಖರವನ್ನೇರಿದ್ದಾರೆ ಎನ್ನುವುದು ಪದ್ಮನಾಭನ ಶಂಖದಿಂದ ಹೊರಡುವ ನಾದದಷ್ಟೆ ದೃಢವಾಗಿದೆ. 


ಕರ್ನಾಟಕದಲ್ಲಿ?!?


ಕರ್ನಾಟಕದ ರಾಜ್ಯ ಲಾಂಛನವು ಎರಡು ಗಜಕೇಸರಿಗಳು ಗಂಡಭೇರುಂಡದ ಫಲಕ ಮತ್ತು ಅಶೋಕಸ್ತಂಭವನ್ನು ಹಿಡಿದು ನಿಂತಿರುವ ಮತ್ತು ಸತ್ಯಮೇವ ಜಯತೇ ಎಂಬ ಉದ್ಘೋಷವನ್ನು ಹೊಂದಿದೆ. ಇದ್ದುದರಲ್ಲಿ ಈ ಲಾಂಛನವು ತಮಿಳುನಾಡು, ಕೇರಳಗಳಂತೆ ಮೂರ್ತಿಪೂಜೆಯ ಗೋಪುರವನ್ನಾಗಲಿ, ಶಂಖವನ್ನಾಗಲಿ ಹೊಂದಿಲ್ಲ.


ಆದರೆ ಅದನ್ನು ಸರಿತೂಗಿಸುವಂತೆ ಕರ್ನಾಟಕ ರಾಜ್ಯಕ್ಕೆ ಮೂರ್ತಿರೂಪ ನೀಡಿ ಭುವನೇಶ್ವರಿ ಎನ್ನಲಾಗುತ್ತದೆ.


ಈ ಮೂರೂ ರಾಜ್ಯಗಳಿಗೆ ಯಾವುದೇ ಅಧಿಕೃತ ಪ್ರತ್ಯೇಕ ಬಾವುಟಗಳಿಲ್ಲ. ಆದರೆ ಅನಧಿಕೃತವಾಗಿ ತಮಿಳುನಾಡಿನಲ್ಲಿ ಭಾರತ ರಾಷ್ಟ್ರಧ್ವಜ ಮತ್ತು ಶ್ರೀವಲ್ಲಿಪುತ್ತೂರು ಗೋಪುರವನ್ನೊಳಗೊಂಡಂತೆ ಬೂದು ಬಣ್ಣದ ಬಾವುಟವನ್ನು ಬಳಸುವಂತೆ ನಾಸ್ತಿಕ ಕರುಣಾನಿಧಿಯವರೇ ಸಲಹೆ ನೀಡಿದ್ದರು. ಅದೇ ರೀತಿ ಕೇರಳದ ಭಾಷಾಭಿಮಾನಿಗಳೂ ಸಹ ಪದ್ಮನಾಭನ ಶಂಖವುಳ್ಳ ಕೆಂಪು ಬಣ್ಣದ ಬಾವುಟವನ್ನು ಆಗಾಗ್ಗೆ ಪ್ರದರ್ಶಿಸುತ್ತಾರೆ. ಇನ್ನು ಕರ್ನಾಟಕದಲ್ಲಿ ಕೆಂಪು ಮತ್ತು ಹಳದಿಯ ಬಾವುಟವನ್ನು ನೀವೆಲ್ಲರೂ ನೋಡಿರುತ್ತೀರಿ.


ಈ ಮೂರೂ ರಾಜ್ಯಗಳಲ್ಲದೆ ಇಡೀ ಭಾರತದೇಶ ಮತ್ತದರ ರಾಜ್ಯಗಳೂ ಸೇರಿದಂತೆ ತಮ್ಮ ತಾಯ್ನಾಡನ್ನು ತಾಯಿ, ದೇವಿ ಎಂಬ ಮೂರ್ತರೂಪ ಕೊಟ್ಟು ಆರಾಧಿಸುವ ಸಂಸ್ಕೃತಿ ಎಂದಿನಿಂದಲೋ ಇದ್ದು ಇದಕ್ಕೆ ಯಾವುದೇ ಧರ್ಮದ ಲೇಪನವಿಲ್ಲದೆ ಕೇವಲ ಸಂಸ್ಕೃತಿಯ ಛಾಯೆ ಮಾತ್ರವಿದೆ. ಇದಕ್ಕೆ ಕುವೆಂಪು ಅವರ "ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ"ಯಿಂದ "ವಂದೇ ಮಾತರಂ"ವರೆಗೆ ಒಂದು ಪ್ರದೇಶದ ಮೂರ್ತರೂಪವನ್ನು ಆರಾಧಿಸುವ ಭಾವನಾತ್ಮಕ ಬೆಸುಗೆ ಇದೆ. ಇದು ಕೇವಲ ಭಾರತಕ್ಕಷ್ಟೇ ಸೀಮಿತವಲ್ಲದೆ ಜಾಗತಿಕವಾಗಿಯೂ ಜನಮಾನಸದಲ್ಲಿ ತಮ್ಮ ತಮ್ಮ ದೇಶವನ್ನು ಸ್ತ್ರೀರೂಪಿ (ತಾಯಿ) ಎಂದೇ ಪರಿಗಣಿಸಲಾಗಿದೆ.


ಹೀಗಿದ್ದಾಗ ಅಂತಹ ಸ್ತ್ರೀರೂಪಿಯೇ ಆದ ಚಿಂತಕಿ ಭಾನು ಮುಷ್ತಾಕ್ ಅವರು ಮೊನ್ನೆ ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡುತ್ತ, "ನಮ್ಮನ್ನು (ಮುಸ್ಲಿಮರನ್ನು) ಹೊರಗಿಡುತ್ತಿರುವುದು ಈಗಿನಿಂದಲ್ಲ, ಎಂದಿನಿಂದಲೋ ಹೊರಗಿಡಲಾಗಿದೆ. ಯಾವಾಗ ಕನ್ನಡದ ಬಾವುಟವನ್ನು ಕುಂಕುಮ, ಅರಿಷಿಣದ ಬಣ್ಣದಲ್ಲಿ ರಚಿಸಿ, ಕರ್ನಾಟಕವನ್ನು ಭುವನೇಶ್ವರಿ ಎಂಬ ಮೂರ್ತರೂಪ ಕೊಟ್ಟರೋ ಅಂದಿನಿಂದಲೇ ಹೊರಗಿಟ್ಟಿದ್ದಾರೆ" ಎಂದು ಕರೆ ಕೊಟ್ಟರು. ಅಂದರೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಮೂರ್ತಿಪೂಜೆ, ಕುಂಕುಮ ಅರಿಷಿಣ ಧರಿಸುವುದನ್ನು ಹೇರಿ ಮುಸ್ಲಿಮರನ್ನು ಕನ್ನಡದಿಂದ ಹೊರಗಿಡಲಾಯಿತು ಎಂದರ್ಥ.


ಅವರ ತಾರ್ಕಿಕ ಚಿಂತನೆಗೆ ಅನುಗುಣವಾಗಿ ಶೈವ ಪರಂಪರೆಯ ತಮಿಳುನಾಡು ವಿಭೂತಿಯ ಬೂದು ಬಣ್ಣ ಮತ್ತು ಮೂರ್ತಿಪೂಜೆಯ ಗುಡಿಗೋಪುರವನ್ನು, ಕೇರಳವು ಕುಂಕುಮದ ಕೆಂಪು ಬಣ್ಣ ಮತ್ತು ಮೂರ್ತಿಪೂಜೆಯ ಪದ್ಮನಾಭಮೂರ್ತಿಯ ಶಂಖವನ್ನು ಹೇರಿ ಅಲ್ಲಿನ ಮುಸ್ಲಿಮರನ್ನು ಹೊರಗಿಟ್ಟಿದ್ದವು ಎನ್ನಬಹುದು. ಹಾಗಿದ್ದಾಗ ಅಲ್ಲಿನ ಮುಸ್ಲಿಮರು ಅವರನ್ನು ಹೇಗೆಯೇ ಹೊರಗಿಟ್ಟರೂ ಸಾಹಿತ್ಯದಲ್ಲಿ ಎಷ್ಟೆಲ್ಲಾ ಸಾಧನೆಗೈದು ಹೇಗೆ ಹೆಸರು ಪಡೆದರು? ಕರ್ನಾಟಕದಲ್ಲಿ ಏಕೆ ಹೊರಗುಳಿದರು?


ಧರ್ಮದ ಆಧಾರದ ಮೇಲೆಯೇ ಸ್ವತಂತ್ರವಾಗಿ ರಚಿತವಾದ ಒಂದು ದೇಶವನ್ನು "ಸೆಕ್ಯುಲರ್" ಎಂದು ಎಲ್ಲಾ ಧರ್ಮದವರೂ ಇಲ್ಲಿನ ಸಂಸ್ಕೃತಿಯನ್ನು ಒಪ್ಪಿ ಈವರೆಗೆ ನಡೆದು ಬಂದಿರುವಾಗ ಓರ್ವ ಚಿಂತಕಿ, ಧರ್ಮಾತೀತ, ಪ್ರಗತಿಪರ ಎನ್ನುವ ಸಾಹಿತಿಯ ಮಾತುಗಳನ್ನು ಗಂಭೀರವಾಗಿಯೇ ಪರಿಗಣಿಸಿಬೇಕಲ್ಲವೇ? ಹಾಗಾಗಿ ಇದೇ ಜನಸಾಹಿತ್ಯ ಸಮ್ಮೇಳನದಲ್ಲಿ ಘೋಷಿತವಾದ ದ್ರಾವಿಡ ರಾಷ್ಟ್ರ ಎಂಬ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳಗಳನ್ನು ಪರಿಗಣಿಸಿ ನೋಡಿದಾಗ ಈ ಎರಡೂ ರಾಜ್ಯಗಳಲ್ಲಿ ಮುಸ್ಲಿಮರು ಧಾರ್ಮಿಕ ಹೇರಿಕೆಯ ಲಾಂಛನಗಳನ್ನು ಹೊಂದಿಯೂ ಪ್ರಗತಿ ಸಾಧಿಸಿದರೆ, ಕರ್ನಾಟಕದ ಮುಸ್ಲಿಮರು ಏಕೆ ತಮ್ಮನ್ನು ಹೊರಗಿಡಲಾಯಿತು ಎಂದು ಯೋಚಿಸಿದರು? 


ಅದರಲ್ಲೂ  ಇದೇ ಜನಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಚಿಂತಕರ ಚಾವಡಿ ಸದಸ್ಯರೆಂದೇ ಗುರುತಿಸಿಕೊಂಡಿರುವ ಬಹುತ್ವ ಚಿಂತಕ ಸಂಶೋಧಕ ಪ್ರೊ. ರಹಮತ್ ತರೀಕೆರೆಯವರು ಬಹುತ್ವದ ಬಗ್ಗೆ ಅನೇಕ ಪುರಾವೆಗಳನ್ನು ಕೊಟ್ಟು ಕರ್ನಾಟಕವು ಭಾರತದಲ್ಲೇ ಹೆಚ್ಚು ಕೋಮು ಸೌಹಾರ್ದತೆಗೆ ಆದರ್ಶವಾದ ಪುಣ್ಯಭೂಮಿ ಎಂದರು. ಅಂದರೆ ಅವರಿಗೆ ಕುಂಕುಮ ಅರಿಶಿಣದ ಬಾವುಟವಾಗಲಿ, ಭುವನೇಶ್ವರಿ ಮೂರ್ತಿಯಾಗಲಿ ಬಿಡಿ, ಇಲ್ಲಿನ ನೆಲಮೂಲದ ಚೌಡವ್ವ, ದಾನವ್ವ, ಮಾಸ್ತಮ್ಮ, ಶಿಶ್ನರೂಪಿ ಜೋಕುಮಾರಸ್ವಾಮಿ, ಫಲವಂತಿಕೆಯ ದೇವಿದೇವರುಗಳು ಎಂದೂ ಬಾಧಿಸದೆ, ಇದೆಲ್ಲವನ್ನೂ ಒಪ್ಪಿದ ರಹಮತರನ್ನು ನಮ್ಮ ಆಲಿದೇವರು ಸಹ ಧರ್ಮಬಾಹಿರ ಕಾಫಿರರೆನ್ನದೆ ಫಕೀರರೆಂದು ಅವರ ಸಂಶೋಧನೆಗೆ ಸಹಕಾರಿಯಾಗಿ ಉನ್ನತ ಸ್ಥಾನಮಾನಗಳನ್ನು ಗಳಿಸಿಕೊಟ್ಟನು.


ಸಂಕ್ಷಿಪ್ತವಾಗಿ, ಬಹುತ್ವವನ್ನು ಅಪ್ಪಿಕೊಂಡ ರಹಮತರಂತಹ ಸೆಕ್ಯುಲರ್ ಮುಸಲ್ಮಾನರು ಬೆಳೆದರು. ಧರ್ಮದ ಸಂಕೋಲೆಗೆ ಸಿಲುಕಿ ಕುಂಕುಮ, ಅರಿಷಿಣ, ಭುವನೇಶ್ವರಿ ಹರಾಮ್ ಎಂದು ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎನ್ನುವುದು ಇಸ್ಲಾಂ ವಿರೋಧಿ ಎಂಬ ಚಿಂತನೆ ಮುಸ್ಲಿಮರನ್ನು ಹೊರಗುಳಿಸಿತು ಎಂದಲ್ಲವೇ?!?! 


ಇದೆಲ್ಲಕ್ಕಿಂತ ಮೇಲಾಗಿ ಕುಂಕುಮ, ಅರಿಷಿಣ, ಭುವನೇಶ್ವರಿ, ಕರ್ನಾಟಕ ಮಾತೆ ಪರೋಕ್ಷವಾಗಿ ಹರಾಮ್ ಎಂದ ಭಾನು ಮುಷ್ತಾಕ್ ನಾನ್-ಸೆಕ್ಯುಲರ್ ಧಾರ್ಮಿಕ ವ್ಯಕ್ತಿ ಎಂದಲ್ಲವೇ?!?!


ಅಂದ ಹಾಗೆ ಸಾಹಿತಿ, ಚಿಂತಕಿ ಭಾನು ಮುಷ್ತಾಕ್ ಅವರು ವಕೀಲರು ಸಹ! ಹಾಗಾಗಿ ನನ್ನ ಚಿಂತನೆಯನ್ನು ಅವರದೇ ಆದ ವಕೀಲಿಕೆಯ ಧಾಟಿಯಲ್ಲಿ ಮಂಡಿಸಿದ್ದೇನೆ. ಇದಕ್ಕೆ ಮಾನ್ಯ ವಕೀಲೆಯ ಪ್ರತಿವಾದ ಏನೆನ್ನುವುದೋ?


ಈಗ ರಹಮತ್ ತರೀಕೆರೆ ಅವರ ವೈಯಕ್ತಿಕ ಪ್ರಗತಿಯ ನೆಲೆಗಟ್ಟಿನಲ್ಲಿಯೇ ಸಾಬೀತಾದ "ಒಳಗೊಂಡ ಮನಸ್ಸಿನ ಸೆಕ್ಯುಲರ್ ಮುಸ್ಲಿಮ"ನ ಪ್ರಾಮಾಣಿತ ಪ್ರಗತಿಯ ಪ್ರಾಮಾಣಿತ ಚಿಂತನೆಯನ್ನು ಮುಸ್ಲಿಂ ಚಿಂತಕರ ಚಾವಡಿ ಎಂಬ ಸಂಘಟನೆಯ ಸದಸ್ಯರಾದ ಇದೇ ಪ್ರೊ. ರಹಮತ್ ತರೀಕೆರೆ ಮತ್ತು ಭಾನು ಮುಷ್ತಾಕ್ ತಮ್ಮ ಧಾರ್ಮಿಕ ವೇದಿಕೆಗಳಲ್ಲಿ ಏಕೆ ತಿಳಿವಳಿಕೆ ನೀಡುತ್ತಿಲ್ಲ?! ಏಕೆಂದರೆ ಇಬ್ಬರ ಚಿಂತನೆಯೇ ಮೇಲಿನಂತೆ ವೈರುಧ್ಯ ದಿಕ್ಕಿನಲ್ಲಿದೆ!


ಆದರೂ ವೈಚಿತ್ರ್ಯವೆಂಬಂತೆ ಧರ್ಮನಿರಪೇಕ್ಷ ಬಹುತ್ವದ ಜನಸಾಹಿತ್ಯದ ಒಂದೇ ವೇದಿಕೆಯಲ್ಲಿ ತಮ್ಮತಮ್ಮಲ್ಲೇ ಸ್ಪಷ್ಟತೆಯಿರದ ಸೆಕ್ಯುಲರ್ ರಹಮತರು ಮತ್ತು ನಾನ್ ಸೆಕ್ಯುಲರ್/ಧಾರ್ಮಿಕ ಕಟ್ಟಾಳು ಭಾನು ಮುಷ್ತಾಕ್ ಅವರು ದ್ವಂದ್ವದ ಸಂದೇಶಗಳನ್ನು ಸಮಾಜಕ್ಕೆ ಕೊಟ್ಟರು. ಯಾವುದೋ ಹುಂಬರ ಸಭೆ ಇದಾಗಿದ್ದರೆ ಹುಲಿಗ್ಯೋ ಹುಲಿಗ್ಯೋ ಎನ್ನಬಹುದಿತ್ತು. ಆದರೆ ಇವರು ಕರೆ ಕೊಟ್ಟ ಸಭೆಯಲ್ಲಿ ನಾಡಿನ ಚಿಂತಕರು, ಧರ್ಮ ನಿರಪೇಕ್ಷಿಗಳು, ಪ್ರಗತಿಪರರು, ಕವಿ/ಕವಯತ್ರಿಯರು, ಸಂಶೋಧಕರು, ಆಹಾರ ತಜ್ಞರು, ಉದಾರವಾದಿಗಳು, ಸಮಸಮಾನತೆಯ ಹೋರಾಟಗಾರರು, ನವ ದ್ರಾವಿಡರಾಷ್ಟ್ರ ಸಂಸ್ಥಾಪಕರು, ಕಲಾವಿದರು, ಎಕ್ಸೆಟ್ರಾ, ಎಕ್ಸೆಟ್ರಾ, ಎಕ್ಸೆಟ್ರಾಗಳು ತುಂಬಿ ತುಳುಕುತ್ತಿದ್ದರು. ಆದರೆ ಈ ಇಬ್ಬರು ಮುಸ್ಲಿಂ ಚಿಂತಕರ ಚಾವಡಿಯ ದ್ವಂದ್ವಿಗಳ ಅತಿ ಸಾಮಾನ್ಯ ಮಾತನ್ನು ಈ ಇಲೈಟ್ ವರ್ಗ ಗ್ರಹಿಸದೆ ಇದ್ದದ್ದು ಏನನ್ನು ಹೇಳುತ್ತದೆ? ನನ್ನ ವಿಡಂಬನೆಯ ಹ್ಯಾಷ್ಟ್ಯಾಗುಗಳನ್ನು ನಿಜವಾಗಿಸಲೇಬೇಕೆಂದು ಈ ಮಹನೀಯರು ಪಣತೊಟ್ಟು ಹೋರಾಡುತ್ತಿರುವುದಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸೋಣ ಎಂದು ಆನಂದಭಾಷ್ಪ ತುಂಬಿಕೊಂಡಿದ್ದೆ. ಆದರೆ ಪಾಟಿ ಹಿಡಿದಿರುವ ನನ್ನ ನವ್ಯಶಿಷ್ಯ, "ಗುರುವರ್ಯ, ಅಲ್ಲಿ ಮುಗಲೈ ಚಿಕನ್ ಕಬಾಬ್, ಮಲ್ಪೈ ಮೀನ್ಹುಳಿ ಭೋಜನದ ಸುವಾಸನೆಯ ಪರಿಮಳವು ಘಮಘಮಿಸಿ ಅವರಿಗೆಲ್ಲಾ ಚಿತ್ತಚಾಂಚಲ್ಯವನ್ನುಂಟು ಮಾಡಿದ್ದುದು ಕಾರಣವೆ ಹೊರತು ಇನ್ಯಾವುದೂ ಇಲ್ಲೈ" ಎಂದ.


ಅಂದ ಹಾಗೆ ೨೦೦೧ ಮಿಲೇನಿಯಂ ಗಣತಿಯ ಪ್ರಕಾರ ತಮಿಳ್ನಾಡು, ಕೇರಳ, ಕರ್ನಾಟಕವಲ್ಲದೆ ಆಂಧ್ರ, ಗುಜರಾತ್, ಛತ್ತೀಸ್ ಗಡ, ಜಾರ್ಖಂಡ್, ಮಹಾರಾಷ್ಟ್ರ, ಒರಿಸ್ಸಾ, ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹಿಂದೂ ಮಹಿಳೆಯರಿಗಿಂತ ಮುಸ್ಲಿಂ ಮಹಿಳೆಯರು ಹೆಚ್ಚು ಸುಶಿಕ್ಷಿತರಿದ್ದಾರೆ. ಈ ರಾಜ್ಯಗಳಲ್ಲಿ ಮುಸ್ಲಿಂ ಪುರುಷರು ಸಹ ಹಿಂದೂ ಪುರುಷರ ಸಮಬಲದಷ್ಟು ಅಕ್ಷರಸ್ಥರಿದ್ದಾರೆ. ಈ ವರದಿ ತಯಾರಿಸಿದವರು JNU ಪ್ರೊಫೆಸರ್ ಮಹೇಂದ್ರ ಕೆ ಪ್ರೇಮಿ ಅವರು. 


ಕಂಡೆನೆಂಬುದು ಕಂಗಳ ಮರವೆ,

ಕಾಣೆನೆಂಬುದು ಮನದ ಮರವೆ,

ಕೂಡಿದೆನೆಂಬುದು ಅರುಹಿನ ಮರವೆ,

ಅಗಲಿದೆನೆಂಬುದು ಮರಹಿನ ಮರವೆ.

ಇಂತು ಕಂಡೆ_ಕಾಣೆ_ಕೂಡಿದೆ_ಅಗಲಿದೆ ಎಂಬ,

ಭ್ರಾಂತಿಸೂತಕವಳಿದು ನೋಡಲು

ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ, ಎಲೆ ತಾ(ಮಾ)ಯೆ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment