ಅನಿವಾಸಿ ಬೇವರ್ಸಿ

 ೨೦೨೧-೨೨ ರಲ್ಲಿ ಅನಿವಾಸಿ ಭಾರತೀಯರು ಒಟ್ಟು ೮೯ ಬಿಲಿಯನ್ ವಿದೇಶಿ ವಿನಿಮಯವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಈ ಎಲ್ಲಾ ವಿದೇಶಿ ವಿನಿಮಯವು ಅನಿವಾಸಿಯ ಕುಟುಂಬ ನಿರ್ವಹಣೆಯಲ್ಲದೆ ಹಲವಾರು ಭಾರತೀಯ ಉದ್ಯಮಗಳಿಗೆ ಗ್ರಾಹಕರಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿರುತ್ತದೆ. ಸಾಕಷ್ಟು ಕುಟುಂಬಸ್ಥರ ವ್ಯವಹಾರ ಉದ್ಯಮಗಳಿಗೆ ಮೂಲಧನವೂ ಆಗಿರುತ್ತದೆ. 


೩೫೦ ಲಕ್ಷ ಅನಿವಾಸಿಗಳು ತರುವ ಈ ವಿದೇಶಿ ವಿನಿಮಯವು ಭಾರತಕ್ಕೆ ಕೊಡುವ ನೇರ ನೆರವಾದರೆ, ಅವರು ಭಾರತವನ್ನು ತೊರೆದು ಅವರ ಸ್ಥಾನದಲ್ಲಿ ನಿವಾಸಿ-ಭಾರತೀಯರಿಗೆ ಸೃಷ್ಟಿಯಾದ ಉದ್ಯೋಗಗಳಿಂದ ಹಿಡಿದು ಅವರ ನಿರ್ಗಮನದ ಕಾರಣ ಕಡಿಮೆಯಾದ ಭಾರತದ ಜನಸಂಖ್ಯೆ, ಆರ್ಥಿಕ ಉನ್ನತಿ, ಕಾರ್ಬನ್ ಫುಟ್ ಪ್ರಿಂಟ್ ಇತ್ಯಾದಿಗಳ ನಡುವಿರುವ ಅನೇಕ ಆಯಾಮಗಳ ಪರೋಕ್ಷ ನೆರವನ್ನು ಇನ್ನೂ ಯಾವ ಸರ್ಕಾರಗಳಾಗಲಿ, ಆಯೋಗಗಳಾಗಲಿ ಲೆಕ್ಕ ಹಾಕಿಲ್ಲ!


ಇಂತಹ ಅನಿವಾಸಿಗಳಿಗೆ ಸರ್ಕಾರ ಕೊಟ್ಟಿರುವುದು ಕೇವಲ ಮರೀಚಿಕೆಯ ಭರವಸೆ. ಈ ಮರೀಚಿಕೆಯು ಅನಿವಾಸಿ ಭಾರತೀಯ ಎಂದು ಗುರುತಿಸಲ್ಪಡುವ ನಾಗರಿಕ ಯಾ ಸಾಗರೋತ್ತರ ಭಾರತೀಯ ಎಂದು ಗುರುತಿಸಲ್ಪಡುವ ನಾಗರಿಕ ಇಬ್ಬರಿಗೂ ಅನ್ವಯಿಸುತ್ತದೆ. ಇದರ ಬಗ್ಗೆ ನನ್ನ ಒಂದು ಹಳೆಯ ಲಿಂಕ್ ಕೆಳಗಿದೆ.


ಇನ್ನು ಇಂತಹ ಮರೀಚಿಕೆಯ ನಡುವೆಯೂ "ಸಾಗರೋತ್ತರ ಭಾರತೀಯ ನಾಗರಿಕ" ಚೇತನ್ ಅಹಿಂಸಾ ಹೋರಾಟ, ನೈಜ ಕಳಕಳಿಯು ಬದುಕಿರುವ ಯಾವುದೇ "ನಿವಾಸಿ ಭಾರತೀಯ ನಾಗರಿಕ" ಹೋರಾಟಗಾರರಿಗಿಂತ ಗುಲಗಂಜಿ ತೂಕ ಹೆಚ್ಚೇ ಇದೆ.  ಈ ದುರಿತ ಕಾಲದಲ್ಲಿ ಗುಂಪಿನಿಂದ ಎದ್ದು ಕಾಣುವ ಒಂಟಿ ಸಲಗದಂತೆ ಎದ್ದು ಕಾಣುವ ನಿಜ ದೇಶಭಕ್ತ ಎಂದರೆ ಅದು ಅಹಿಂಸಾ ಚೇತನ್.


ಆತ ತನ್ನ ಭಾಷಣದಲ್ಲಿ ಮಾತು ಮಾತಿಗೆ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಪೆರಿಯಾರ್, ಕುವೆಂಪು, ಫುಲೆ ಮುಂತಾದ ವ್ಯಕ್ತಿ ಭಜನೆ ಬಿಟ್ಟು ವೈಜ್ಞಾನಿಕವಾಗಿ ಅವನು ನಂಬಿದ ಸಿದ್ಧಾಂತ ಹೇಗೆ ಸಮಾನತೆಯನ್ನು ಸಾಧಿಸಬಹುದು ಎಂಬ ಒಂದು ಸೈದ್ಧಾಂತಿಕ ನೀಲನಕ್ಷೆಯನ್ನು ಮುಂದಿರಿಸಿ ಮಾತನಾಡುವ ಸ್ಪಷ್ಟತೆ ನಿಧಾನವಾಗಿಯಾದರೂ ಮುಂದೊಂದು ದಿನ ಮೂಡಿಯೇಮೂಡುತ್ತದೆ ಎನಿಸುತ್ತಿದೆ. ಎಂದೋ ಆಗಿಹೋದ ಇತಿಹಾಸದಲ್ಲಿ ನಡೆದ ಅಸಮಾನತೆಗೆ ತಮ್ಮ ಹುಟ್ಟಿನ ಜಾತಿಯ ಕಾರಣ ವರ್ತಮಾನದ ಪ್ರಜಾಪ್ರಭುತ್ವದ ಒಂದು ಜನಾಂಗಕ್ಕೆ ಉಡುಗೊರೆ ಇನ್ನೊಂದಕ್ಕೆ ಬರೆ ಎಳೆಯುವುದು ಎಷ್ಟು ಸಮರ್ಥನೀಯ ಎನ್ನುವುದನ್ನು, ಮತ್ತು ಮೀಸಲಾತಿಯನ್ನು ಹೇಗೆ ಜಾತ್ಯಾತೀತವಾಗಿ ಇಂದಿನ ಶತಮಾನಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಅಳವಡಿಸಬಹುದೆಂಬ ನೀತಿಯನ್ನು ಆತ ಅಮೇರಿಕೆಯಿಂದಲೇ ಸಾಕಷ್ಟು ಅರಿಯಬಹುದಾಗಿದೆ. 


ಆದರೆ ಇಲ್ಲಿ ಆತನ ಪೌರತ್ವವನ್ನು ಪದೇ ಪದೇ ಪ್ರಶ್ನಿಸುವ ನಿವಾಸಿ ಪೌರರು ಬಹುಮುಖ್ಯವಾಗಿ ಅರಿಯಬೇಕಾದ್ದು ಅವನು ಭಾರತ ದೇಶದ ಪೌರನೇ ಆಗಿದ್ದಾನೆ ಎನ್ನುವುದು. ಇದನ್ನು ಘನ ಭಾರತ ಸರ್ಕಾರವೇ ಒಪ್ಪಿ ಸಾಗರೋತ್ತರ ಭಾರತೀಯ/ಪೌರ ಎಂಬ ಕಾರ್ಡ್ ಕೊಟ್ಟಿದೆ. ಹಾಗಾಗಿ ನಿವಾಸಿ ನಾಗರಿಕರು ಅವನ ಹೋರಾಟವನ್ನು ಪ್ರಶ್ನಿಸುವ ನೆಪದಲ್ಲಿ ಅವನ ಪೌರತ್ವದ ಕುರಿತಾದ ಇಂತಹ ಅನಾಗರಿಕ ಪ್ರಶ್ನೆಯನ್ನು ಕೇಳುವುದು ಅಸಹ್ಯಕರ. ಮೇಲಾಗಿ ಘನ ಸರ್ಕಾರವೇ ತಾನು ಕೊಟ್ಟ ಸಾಗರೋತ್ತರ ನಾಗರಿಕರ ನಾಗರಿಕ ಹಕ್ಕುಗಳನ್ನು ಸಾಂವಿಧಾನಿಕವಾಗಿ ಉಲ್ಲಂಘಿಸಿದೆ. ಹೀಗಾಗಿ ಒಬ್ಬ ದಲಿತ ಸಾಗರೋತ್ತರ ನಾಗರಿಕ ಸಹ ತನ್ನ ಹಕ್ಕಿನ ಯಾವುದೇ ಮೀಸಲಾತಿಗೆ ಅನರ್ಹನಾಗಿದ್ದಾನೆ. ಕೇವಲ ಹುಟ್ಟಿನ ಕಾರಣ ಅವನು ಸಾಗರೋತ್ತರ ನಾಗರಿಕನಾಗಿ ಇಡೀ ಶಿಕ್ಷಣವನ್ನು ಭಾರತದಲ್ಲೇ ಪಡೆದಿದ್ದರೂ ಅವನ ಉನ್ನತ ಶಿಕ್ಷಣದ ಯಾವುದೇ ಸ್ಥಾನವನ್ನು ಅನಿವಾಸಿ ಕೋಟಾದಲ್ಲಿಯೇ ಪಡೆಯಬೇಕೇ ಹೊರತು ಹಕ್ಕಿನ ಮೀಸಲಾತಿಯಿಂದಲ್ಲ! ಅವನು ಸಾಮಾನ್ಯ ಕೋಟಾದಲ್ಲಿ ಸಹ ಅರ್ಜಿ ಹಾಕುವಂತಿಲ್ಲ. ಇಂತಹ ಹಕ್ಕುಚ್ಯುತಿಯನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಲಾಗಿದೆ ಎಂದರೆ ಅನಿವಾಸಿಗಳು ಎಂತಹ ನ್ಯಾಯಾಂಗ ಬದ್ಧರು, ಸಂವಿಧಾನಬದ್ಧರು ಎಂದು ನಿವಾಸಿ ಪೌರರು ಅರಿತು ಅವರನ್ನು ಒಳಗೊಳ್ಳಬೇಕು. ಈ ಬಗ್ಗೆ ಯಾವ ಮಾಧ್ಯಮ, ರಾಜಕಾರಣಿ ದನಿಯೆತ್ತಿರುವ ನಿದರ್ಶನವಿದೆ?


https://kannadathinktank.blogspot.com/2018/09/blog-post.html?m=0


No comments:

Post a Comment