ಕವಲೇದುರ್ಗ ನಾಯಿ ಪ್ರೀತಿ

 ಒಂಬತ್ತು ತಿಂಗಳ ಹಿಂದೆ ತೀರ್ಥಹಳ್ಳಿ ಸಮೀಪದ ಮುಡುಬದಲ್ಲಿರುವ ನೆಂಟರ ನೋಡಲು ಹೋಗಿದ್ದೆ. ನಾನು ಪ್ರತಿಸಲ ಹೋದಾಗಲೂ ಹೇಗೋ ಏನೋ ಅಲ್ಲಿಗೆ ಹತ್ತಿರದ ಪ್ರೇಕ್ಷಣೀಯ ಸ್ಥಳವಾದ ಕವಲೇದುರ್ಗವನ್ನು ನೋಡಲು ಆಗಿರಲಿಲ್ಲ. ಏನೇನೋ ಕಾಡುಮೇಡು ಅಲೆದಿದ್ದರೂ ಇದೊಂದು ತಪ್ಪಿಬಿಡುತ್ತಿತ್ತು. ನಾನೂ ನನ್ನ ತೀರ್ಥಹಳ್ಳಿ ಸ್ನೇಹಿ_ ಬೆಳಿಗ್ಗೆ ಹತ್ತೂವರೆಗೆಲ್ಲ ಬುಡ ತಲುಪಿ ಕಾರು ನಿಲ್ಲಿಸಿ ಬೆಟ್ಟ ಏರಲು ಶುರುವಿಟ್ಟುಕೊಂಡೆವು. 


ನಮ್ಮ ಬೆನ್ನ ಹಿಂದೆ ಎರಡು ನಾಯಿಗಳು ಬರತೊಡಗಿದವು. ಬಹುಶಃ ಕೋಟೆ ಏರುವ ಜನರು ಊಟೋಪಹಾರಗಳನ್ನು ಕಟ್ಟಿಕೊಂಡು ಮೇಲೆ ತೆರಳಿ ಉಂಡು ತಿಂದು ಉಳಿದದ್ದನ್ನು ನಾಯಿಗಳಿಗೆ ಹಾಕುವ ಪರಿಪಾಠ ಇತ್ತೆನಿಸುತ್ತದೆ. ಹಾಗಾಗಿ ಈ ನಾಯಿಗಳು ತಿಂಡಿಯ ಆಸೆಯಿಂದ ನಮ್ಮ ಹಿಂದೆ ಬರುತ್ತಿವೆ ಎಂದುಕೊಂಡೆವು. ಆದರೆ ನಮ್ಮದೇನೂ ಅಲ್ಲಿ ಉಂಡು ತಿಂದು ಹೊತ್ತು ಕಳೆದು ಬರುವ ಯೋಚನೆ ಇರದೆ ಕೇವಲ ಮೇಲೆ ಹತ್ತಿ ಕೋಟೆ ನೋಡಿಕೊಂಡು ಕೆಳಗಿಳಿದು ಊಟಕ್ಕೆ ಸ್ನೇಹಿ_ ಮನೆಗೆ ಹೋಗುವ ಇರಾದೆ ಇದ್ದುದರಿಂದ ನೀರನ್ನು ಬಿಟ್ಟು ಏನನ್ನೂ ತೆಗೆದುಕೊಂಡು ಹೋಗಿರಲಿಲ್ಲ. ನಮ್ಮನ್ನು ವಿನಮ್ರವಾಗಿ ಹಿಂಬಾಲಿಸುತ್ತಿದ್ದ ನಾಯಿಗಳನ್ನು ನೋಡಿ, "ಛೇ, ಅವುಗಳಿಗಾಗಿಯಾದರೂ ಒಂದು ಬಿಸ್ಕತ್ ಪೊಟ್ಟಣ ಇಟ್ಟುಕೊಳ್ಳಬೇಕಿತ್ತು" ಎನಿಸಿತು. 


ಕಡಿದಾದ ದಾರಿಯನ್ನು ಏರುತ್ತಾ ಮಧ್ಯದಲ್ಲಿ ಒಂದು ಕಡೆ ಕುಳಿತಾಗ ಆ ನಾಯಿಗಳು ಸಹ ವಿನಮ್ರವಾಗಿ ಕುಳಿತುಕೊಂಡೆವು. ಅವುಗಳ ವಿನೀತ ಭಾವ ಒಂದು ಬಿಸ್ಕತ್ತನ್ನೂ ತಾರದ ನಮ್ಮಲ್ಲಿ ಅಪರಾಧಿ ಪ್ರಜ್ಞೆಯನ್ನು ಮೂಡಿಸುತ್ತಿತ್ತು. ಅದಕ್ಕಾಗಿ ನಮ್ಮನ್ನು ನಾವು ಹಳಿದುಕೊಳ್ಳುತ್ತ ಕೋಟೆ ಏರತೊಡಗಿದೆವು. ನಾಯಿಗಳೂ ನಮ್ಮ ಹಿಂದೆ ಹಿಂದೆ ಬರುತ್ತಿದ್ದವು. ಅಂತೂ ಕಡಿದಾದ ಮಾರ್ಗದಲ್ಲಿ ಕೋಟೆಯನ್ನು ಏರಿ ಕಡೆಗೆ ಗಮ್ಯವನ್ನು ತಲುಪಿದೆವು. ನಾಯಿಗಳೂ ನಮ್ಮ ಹಿಂದೆಯೇ ಗಮ್ಯವನ್ನು ತಲುಪಿದವು.


ಗಮ್ಯವನ್ನು ತಲುಪಿದ ನಂತರ ನಾವು ಎಣಿಸಿದಂತೆ ತಿಂಡಿಯ ಆಸೆಗಾಗಿ ಅವು ನಮ್ಮನ್ನು ಹಿಂಬಾಲಿಸುತ್ತವೆ ಎಂಬ ನಮ್ಮ ನಿರೀಕ್ಷೆಗೆ ವ್ಯತಿರಿಕ್ತವಾಗಿ ನಮ್ಮನ್ನು ದಾಟಿ ಮುಂದೆ ಸಾಗಿ ನಮ್ಮನ್ನು ಕಿಂಕರ್ತವ್ಯಮೂಢರಾಗಿಸಿ ಅವು ಕರ್ತವ್ಯದಲ್ಲಿ ತೊಡಗಿದವು. ಶ್ವಾನಜನ್ಯ ವಂಶವಾಹಿ ಗುಣಗಳಾದ ಬೊಗಳುವಿಕೆ, ಕಿರುಚಾಟ, ಕಚ್ಚಾಟವಿಲ್ಲದೆ ಏಕಾಂತ ಬಯಸಿ ಅಲ್ಲಿಗೆ ಬರುವ ಅಮರ ಮಧುರ ಪ್ರೇಮಿಗಳಂತೆಯೇ ಆ ಅವಿಸ್ಮರಣೀಯ ಪ್ರಕೃತಿ ಸೌಂದರ್ಯವನ್ನು ಆಹ್ಲಾದಿಸುತ್ತ ರತಿಮನ್ಮಥರಂತೆ ಪ್ರಾಕೃತಿಕ ಕ್ರೀಡೆಯಲ್ಲಿ ತೊಡಗಿದವು. ಅಂತಹ ಪ್ರಕೃತಿ ಸೌಂದರ್ಯ, ಏಕಾಂತ, ರಮಣೀಯ ದೃಶ್ಯವನ್ನು ಆಹ್ಲಾದಿಸುವ ಭಾರತೀಯ ಸನಾತನಿ ಮತ್ತು ವಿನೂತನಿ ಅಮೆರಿಕನ್ ನಾನಾದರೂ ನನ್ನ ಸ್ನೇಹಿ_ ಅಷ್ಟೊಂದು ಪ್ರಕೃತಿ ಪ್ರೇಮಿ ಆಗಿರಲಿಲ್ಲ ಎಂದು ಹೇಳುತ್ತಾ ಈ ಕವಲಾದ ಕತೆಯ ಕವಲೇದುರ್ಗ ಸಂಗತಿ ಇತಿ ಸಮಾಪ್ತಹಃ! 


ಎಲ್ಲದಕ್ಕೂ ಸಾಕ್ಷಿ ಕೇಳುವ ನ್ಯಾಯಾಂಗವನ್ನು ಆವಾಹಿಸಿಕೊಂಡಿರುವವರಿಗಾಗಿ ಈ XXX ಸಾಕ್ಷಿ ಚಿತ್ರ.

No comments:

Post a Comment