ಸಮಾಜಮುಖಿ ಫೆಬ್ರುವರಿ ೨೦೨೩ ಲೇಖನ - ಚಿಂತಕರ ಓಲಾಟ

ತಾರ್ಕಿಕ ಹಾಗೂ ವೈಚಾರಿಕ ಆಲೋಚನೆಗಳ ಮುಖಾಂತರ ಸರ್ಕಾರಗಳನ್ನು ಶೂಲಕ್ಕೆ ಏರಿಸುವ ಸಾಮರ್ಥ್ಯ ಹೊಂದಿದ್ದ ನಮ್ಮ ಬುದ್ಧಿಜೀವಿಗಳ ವಿಚಾರ ತೀಕ್ಷ್ಣತೆ ಇನ್ನೂ ಉಳಿದಿದೆಯೇ..?

ಹದಿನೆಂಟನೇ ಶತಮಾನದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಬಹುಪಾಲು ಬುದ್ಧಿಜೀವಿಗಳು ತಟಸ್ಥರಾಗಿದ್ದರೂ ಬ್ಯಾರನ್ ಮಾಂಟೆಸ್ಕ್ಯೂ, ವಾಲ್ಟೇರ್, ಜೀನ್ ರೋಸ್ಯು ಅಂತಹ ತತ್ವಜ್ಞಾನಿ ಸಾಹಿತಿಗಳು ಫ್ರೆಂಚ್ ಜಾಗೃತಿಗೆ ಕಾರಣರಾಗಿದ್ದರು. ಹಿಟ್ಲರ್ ಕಾಲದ ಜರ್ಮನಿಯಲ್ಲಿ ಯಹೂದಿಗಳ ರಕ್ಷಣೆಗೆ ಮುಂದಾಗಿದ್ದ ಸಾಹಿತಿಗಳಾದ ಮಾರ್ಥಾ ವೇಟ್ಸ್ಟಿಲ್ ಶಾರ್ಪ್ ದಂಪತಿ, ವೇರಿಯನ್ ಫ್ರೈ, ಜೀನೋ ಬರ್ತಾಲಿ, ಜಾನ್ ಸ್ವಾರ್ಟರ್ನ್ಜಿಕ್, ಜಾನ್ ಕರಾಸ್ಕಿ ಮುಂತಾದವರ ಬರಹ ಮತ್ತು ವರದಿಗಳಲ್ಲದೆ ಅವರು ಖುದ್ದು ಅಪಾಯಕ್ಕೀಡಾಗುವ ಸನ್ನಿವೇಶವಿದ್ದರೂ ಯಹೂದಿಗಳನ್ನು ರಕ್ಷಿಸಿದ್ದರು. ಇನ್ನು ರಷ್ಯನ್ ಕ್ರಾಂತಿಯ ಉದಾರವಾದಿಗಳೆಂದು ಗುರುತಿಸಿಕೊಂಡಿದ್ದ ಪ್ರಗತಿಪರ ಸಾಹಿತಿಗಳಾದ  Intelligentsia ಗುಂಪಿನ ಆಂಟಾನ್ ಚೆಕೋವ್, ವಾಸಿಲಿ ಜುಕೊವ್ಸ್ಕಿ, ಅಲೆಕ್ಸಾಂಡರ್ ರಾಡಿಷ್ಚೆವ್, ಆಂಡ್ರೆ ಸಕರೋವರಂತಹ ಬುದ್ದಿಜೀವಿಗಳಲ್ಲದೆ ಲಿಯೋ ಟಾಲ್ಸ್ಟಾಯ್ ಅಂತಹ ಸಾಹಿತಿಗಳು ಸಹ ಕ್ರಾಂತಿಯ ಮೇಲೆ ಗಾಢ ಪ್ರಭಾವ ಬೀರಿದ್ದರು. ಅದೇ ರೀತಿ ಭಾರತೀಯ ವಿದ್ಯಾವಂತರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದರು. ಇವರೆಲ್ಲರ ಪ್ರಭಾವ ಸ್ವಾತಂತ್ರೋತ್ತರ ಭಾರತೀಯ ಬುದ್ದಿಜೀವಿಗಳ ಮೇಲೆಯೂ ಸಾಕಷ್ಟು ಪ್ರಭಾವ ಬೀರಿದೆ.

ಹಾಗಾಗಿ ೧೯೭೪ ರಲ್ಲಿ ಬಿಹಾರಿನ ವಿದ್ಯಾರ್ಥಿ ಸಂಘಟನೆಯು ಜಯಪ್ರಕಾಶ್ ನಾರಾಯಣ್ ಅವರ ನಾಯಕತ್ವದಡಿಯಲ್ಲಿ "ಸಂಪೂರ್ಣ ಕ್ರಾಂತಿ" ಎಂಬ ಚಳುವಳಿಯನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಿತು. ಮುಂದೆ ಈ ಕ್ರಾಂತಿಯು ದೇಶದ ತುಂಬೆಲ್ಲಾ ಕಾಳ್ಗಿಚ್ಚಿನಂತೆ ವ್ಯಾಪಕವಾಗಿ ಹಬ್ಬಿತು. ಇದರ ಆರಂಭವು ೧೯೭೩ರಲ್ಲಿಯೇ ಗುಜರಾತಿನಲ್ಲಿ "ನವ ನಿರ್ಮಾಣ" ಎಂಬ ಹೆಸರಿನ ಚಳುವಳಿಯಾಗಿ ಅಲ್ಲಿನ ವಿದ್ಯಾರ್ಥಿ ಸಂಘಗಳಿಂದ ಆರಂಭವಾಗಿತ್ತು. ಅದೇ ರೀತಿ ಮಧ್ಯಪ್ರದೇಶದ ಭೂಪಾಲದಲ್ಲೂ ವಿದ್ಯಾರ್ಥಿ ಸಂಘಟನೆಗಳು ಸರ್ಕಾರದ ವಿರುದ್ಧ ದಂಗೆದ್ದು ಎಂಟು ವಿದ್ಯಾರ್ಥಿಗಳು ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟಿದ್ದರು. ಇದರಿಂದ ಉದ್ರಿಕ್ತ  ಅಲ್ಲಿನ ವಿದ್ಯಾರ್ಥಿಗಳು ತಾವು ಜೆಪಿ ಚಳುವಳಿಯಲ್ಲಿ ಭಾಗವಹಿಸಿ ಚಳುವಳಿಯನ್ನು ವ್ಯಾಪಕವಾಗಿ ದೇಶಾದ್ಯಂತ ಹಬ್ಬಿಸಲು ಪಣ ತೊಟ್ಟರು. ಈ ಚಳುವಳಿಯ ಹಿಂದೆ ಸಾಮಾಜಿಕ ಚಿಂತನೆಯ ಅಧ್ಯಾಪಕ ವರ್ಗವೇ ವಿದ್ಯಾರ್ಥಿಗಳನ್ನು ಹೊಸ ಕ್ರಾಂತಿಗೆ ತಯಾರು ಮಾಡಿದ್ದರು.

ಹೀಗೆ ಗುಜರಾತಿನ ಒಂದು ಹಾಸ್ಟೆಲ್ಲಿನ ಊಟದ ವಿಷಯವಾಗಿ ಆರಂಭವಾದ ಒಂದು ಚಳುವಳಿಯು ಜೆಪಿ ಚಳುವಳಿಯಾಗಿ ಮುಂದೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿ ಬೆಳಿಯಿತು. ಇದಕ್ಕೆ ಭಾರತದ ಬಹುಪಾಲು ಚಿಂತಕರು, ಸಾಹಿತಿಗಳು, ಪ್ರಗತಿಪರರು ಬೆಂಬಲ ಸೂಚಿಸಿ ಭ್ರಷ್ಟ ಸರ್ಕಾರದ ವಿರುದ್ಧ ಜನರನ್ನು ವ್ಯಾಪಕವಾಗಿ ಸಂಘಟಿಸಿದ್ದರು.

ಮುಂದೆ ತುರ್ತುಪರಿಸ್ಥಿತಿಯಿಂದ ಮತ್ತಷ್ಟು ಸಂಘಟಿತರಾದ ಚಿಂತಕ ಪ್ರಗತಿಪರರು ಸರ್ಕಾರಕ್ಕೆ ಸರಿಯಾದ ಎಚ್ಚರಿಕೆಯನ್ನು ಕೊಟ್ಟದ್ದಲ್ಲದೇ ಸರ್ಕಾರವುರುಳಿ ಹೊಸ ಸರ್ಕಾರಕ್ಕೆ ನಾಂದಿ ಹಾಡಿದರು. ಇದರಿಂದ ಸರ್ಕಾರಕ್ಕೆ ಬುದ್ದಿಜೀವಿಗಳ ವಿಚಾರ ತೀಕ್ಷ್ಣತೆಯ ಶಕ್ತಿಯ ಅರಿವಾಯಿತು.

೧೯೮೦ ರಲ್ಲಿ ಕರ್ನಾಟಕದಲ್ಲಿ ಗುಂಡೂರಾವ್ ಸರ್ಕಾರ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಲೆವಿಯಾಗಿ ಎಕರೆಗೆ ರೂ. ೧೫೦೦ ಹೇರಿತು. ಈ ಅಚ್ಚುಕಟ್ಟು ಪ್ರದೇಶದ ಎಲ್ಲಾ ಭೂಮಿಯ ಮೇಲೆ ರೈತರು ತಮ್ಮ ಭೂಮಿ ನೀರಾವರಿಗೆ ಒಳಗಾಗಿರಲಿ ಇಲ್ಲದಿರಲಿ ಲೆವಿ ಕಟ್ಟಲೇಬೇಕಿತ್ತು. ಇದನ್ನು ವಿರೋಧಿಸಿ ನಡೆದ ಚಳುವಳಿ ಗುಂಡೂರಾವ್ ಸರ್ಕಾರವನ್ನು ಉರುಳಿಸಿದ್ದಲ್ಲದೇ ಕರ್ನಾಟಕ ರಾಜ್ಯ ರೈತ ಸಂಘದ ಉದಯಕ್ಕೆ ಕಾರಣವಾಯಿತು. ಈ ಚಳುವಳಿಗೆ

ಅದಾಗಲೇ ರಾಷ್ಟ್ರೀಯ ಮಟ್ಟದ ಜೆಪಿ ಚಳುವಳಿಯಲ್ಲಿ ಭಾಗವಹಿಸಿದ್ದ ಕನ್ನಡ ನಾಡಿನ ಚಿಂತಕರು, ಸಾಹಿತಿಗಳು, ಪ್ರಗತಿಪರರು ವ್ಯಾಪಕ ಬೆಂಬಲ ಕೊಟ್ಟಿದ್ದರು. ಮುಂದೆ ಈ ರೈತ ಸಂಘದ ಚಳುವಳಿಯಲ್ಲಿ ಪ್ರಗತಿಪರ ಚಿಂತಕರಾದ ಸಾಹಿತಿಗಳು, ಪತ್ರಕರ್ತರು, ಸಮಾಜವಾದಿ ಚಿಂತನೆಯ ಪ್ರಮುಖರೆಲ್ಲರೂ ಪಾಲ್ಗೊಂಡರು. ಇವರಲ್ಲಿ ಪ್ರಮುಖರಾದ ಲಂಕೇಶ್, ನಂಜುಂಡಸ್ವಾಮಿ, ಸುಂದರೇಶ್, ಪೂರ್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ ಮುಂತಾದವರು ಭಾಗವಹಿಸಿ ಕರ್ನಾಟಕದ ತುಂಬೆಲ್ಲಾ ಸಮಾಜವಾದದ ಕಂಪನ್ನು ಹರಡಿದ್ದಲ್ಲದೆ ಆಳುವ ಸರ್ಕಾರಕ್ಕೆ ಮಾರ್ಗದರ್ಶಕ ಎಚ್ಚರಿಕೆಗಳನ್ನು ಕೊಡುತ್ತಿದ್ದರು. ಆಳುವ ಸರ್ಕಾರಗಳೂ ಇವರೆಲ್ಲರನ್ನು ಗಂಭೀರವಾಗಿ ಪರಿಗಣಿಸಿದ್ದವು. ಅದೆಲ್ಲಕ್ಕಿಂತ ಹೆಚ್ಚಾಗಿ ಯುವಜನತೆ ಇವರನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿ ತಮ್ಮ ರೋಲ್ ಮಾಡೆಲ್ ಆಗಿ ಸ್ವೀಕರಿಸಿದ್ದರು. ಯುವಜನತೆಯಂತೂ ಇವರನ್ನೇ ಆದರ್ಶವ್ಯಕ್ತಿಗಳಾಗಿ ಆದರಿಸುತ್ತಿದ್ದರು. ಇದಕ್ಕೆ ಕಾರಣ, ಇವರ ಸಾಮಾಜಿಕ ಕಳಕಳಿ, ನಿಷ್ಠೆ, ಮತ್ತು ಅರಿವು ಅವರ ಲೇಖನಗಳಲ್ಲಿ ಪ್ರಶ್ನಾತೀತವಾಗಿ ಪ್ರಭಾವಶಾಲಿಯಾಗಿ ಮೂಡಿಬರುತ್ತಿದ್ದವು. ಸರ್ಕಾರಗಳು ದಾರಿ ತಪ್ಪಿದಾಗ ಬೆಚ್ಚಿ ಬೀಳುವಂತಹ ಪ್ರತಿಕ್ರಿಯೆ ಕೊಟ್ಟು ಸರ್ಕಾರಗಳ ಕಿವಿ ಹಿಂಡುತ್ತಿದ್ದರು. ಇವರಿವರಲ್ಲೇ ಕೆಲವು ಭಿನ್ನಾಭಿಪ್ರಾಯ, ಈರ್ಷ್ಯೆಗಳಿದ್ದರೂ ವೈಯಕ್ತಿಕವಾಗಿ ಇವರ ಚಿಂತನೆ ಸಮಾಜೋದ್ಧಾರದ ಏಕಮಾತ್ರ ಗುರಿಯನ್ನು ಹೊಂದಿದ್ದವು.

ಕಾಲಕ್ರಮೇಣವಾಗಿ ಇವರಲ್ಲಿ ಕೆಲವರ ಸಮಾಜೋದ್ದಾರದ ಆಸಕ್ತಿಯು ವಯೋಮಾನ, ಸಾಂಸಾರಿಕ ಜವಾಬ್ದಾರಿಯಲ್ಲಿ ಕುಂದಿದರೆ ಕೆಲವರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ, ಉನ್ನತ ಅಧಿಕಾರದ ಲಾಲಸೆಗೆ ಸಿಕ್ಕು ಬೇರೆಯೇ ಆದ ರೂಪವನ್ನು ಪಡೆದುಕೊಂಡಿತು. ಕೆಲವರಂತೂ ಎಕ್ಸ್ಪೈರಿ ಆದ ಸಿದ್ಧಾಂತಗಳಿಗೆ ಜೋತು ಬಿದ್ದುದನ್ನು ಅಣಕಿಸುವಂತೆ ಪೂರ್ಣಚಂದ್ರ ತೇಜಸ್ವಿಯವರು ತಮ್ಮ 'ಜುಗಾರಿ ಕ್ರಾಸ್' ಕಾದಂಬರಿಯಲ್ಲಿ 'ಪ್ರೊ. ಗಂಗೂಲಿ' ಎಂಬ ಒಂದು ಪಾತ್ರವನ್ನೇ ಸೃಷ್ಟಿಸಿದ್ದರು.

ಜನರೂ ಸಹ ತಮ್ಮ ತಮ್ಮ ಸಾಂಸಾರಿಕ ಜವಾಬ್ದಾರಿ, ವೈಯಕ್ತಿಕ ಆಸಕ್ತಿಗಳ ಕಡೆ ಗಮನ ಹರಿಸಿದರು. ಹೊಸ ಶತಮಾನದ ಹೊರಳಿನ ತಲೆಮಾರಿನ ಯುವಜನತೆ ಮಾರ್ಗದರ್ಶನಕ್ಕಾಗಿ ಅತ್ತಿತ್ತ ನೋಡಿದಾಗ ಕಂಡದ್ದು, ಎಲ್ಲಾ ಧರ್ಮಗಳ "ಧರ್ಮೋ ರಕ್ಷತಿ ರಕ್ಷಿತಃ!"  

ಇದಕ್ಕೆ ಆಯಾಯ ಸಿದ್ಧಾಂತದ ರಾಜಕಾರಣಿಗಳು ತಮ್ಮ ಪ್ರಚಂಡ ಮಾತುಗಾರಿಕೆಯಿಂದ ಓಲೈಸಿ ಸ್ಪಂದಿಸಿ ಚಿಂತಕರ ಸ್ಥಾನವನ್ನು ತುಂಬಿ ಮಾರ್ಗದರ್ಶನ ನೀಡಿದರು. ಆದರೆ ಇದೆಲ್ಲವೂ ಒಂದೇ ಸಾರಿಯೇ ಆದ ಬದಲಾವಣೆಯಲ್ಲ!

ದೇಶದ ಈ ಸ್ಥಿತ್ಯಂತರ ಘಟ್ಟವನ್ನು ಕರಾರುವಾಕ್ಕಾಗಿ ಗುರುತಿಸಬಹುದು. ಅಂದು ಸಲ್ಮಾನ್ ರಶ್ದಿ ಅವರು ತಮ್ಮ ಕೃತಿ "ಸಟಾನಿಕ್ ವರ್ಸಸ್"ನಿಂದಾಗಿ ಫತ್ವಾಕ್ಕೊಳಗಾದಾಗ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಕ್ಕೊರಲಿನಿಂದ ಬೆಂಬಲಿಸಿದ್ದ ಭಾರತೀಯ ಪ್ರಗತಿಪರ ಸಾಹಿತ್ಯ ವಲಯವು ಮುಂದೆ ಚಾರ್ಲಿ ಹೆಬ್ಡೋ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಕಾಲಕ್ಕಾಗಲೇ ಓಲೈಕೆಯ ಜಾಣ ಪ್ರಭಾವಕ್ಕೊಳಗಾಗಿ ಮೌನವಾಗಿತ್ತು. ರಶ್ದಿ ಫತ್ವಾ ವಿರೋಧಿಸಿದ್ದ ಸಾಹಿತಿಗಳೇ ಹೆಬ್ಡೋ ಫತ್ವಾಕ್ಕೆ ಮೌನ ವಹಿಸಿದ್ದರು ಎಂಬುದು ಗಮನಾರ್ಹ. ಏಕೆಂದರೆ ಅದಾಗಲೇ ಭಾರತೀಯ ಚಿಂತನೆಯು ಆತ್ಮರತಿ, ಓಲೈಕೆ, ಸ್ವಜನ ಪಕ್ಷಪಾತ

ಮತ್ತು ಜಾತಿ/ಪಂಥ ಆಧಿನಾಯಕತ್ವಕ್ಕೆ ಹೊರಳಿತ್ತು. ಅಂದು ಒಗ್ಗಟ್ಟಾಗಿ ಕ್ರಿಯಾಶೀಲವಾಗಿದ್ದ ಪ್ರಗತಿಪರ ಚಿಂತಕರು ಮುಂದೆ ಎಡ, ಬಲ ಎಂದು ಭಿನ್ನಗೊಂಡರು. ಆದರೂ ಬಲದ ಕಡೆ ವಾಲಿದವರು ಅತ್ಯಂತ ಕಡಿಮೆಯೇ.

ಈ ಮಧ್ಯೆ ಬಂದ ತಸ್ಲೀಮಾ ನಸ್ರೀನ್ ಅವರಿಗೆ ಭಾರತೀಯ ಜನ ಸಾಮಾನ್ಯರ ಒಕ್ಕೊರಲಿನ ಬೆಂಬಲ ಸಿಕ್ಕರೂ ಭಾರತೀಯ ಸಾಹಿತಿಗಳ ಬೆಂಬಲ ರಶ್ದಿ ಕಾಲಕ್ಕಿಂತ ಇಲ್ಲವೇ ಇಲ್ಲ ಎನ್ನುವಷ್ಟು ಇಳಿಮುಖಗೊಂಡಿತ್ತು ಎಂಬುದೂ ಗಮನಾರ್ಹ! ಮಾತನಾಡಲೇಬೇಕಾದಾಗ ಇವರೆಲ್ಲಾ ಜಾಣಮೌನಕ್ಕೆ ಜಾರಿದ್ದರು. ಆದರೆ ಜನಸಾಮಾನ್ಯರು ಇನ್ನೂ ಇವರಷ್ಟು ಭಿನ್ನಗೊಂಡಿರಲಿಲ್ಲ. ಅದನ್ನು ರಾಮಜನ್ಮಭೂಮಿ ಘಟನೆ ಸಮರ್ಥವಾಗಿ ನೆರವೇರಿಸಿತು.  ಆದರೆ ಆ ಕ್ರಿಯೆಗೆ ಪ್ರತಿಕ್ರಿಯೆಯಾಗಿ ರಶ್ದಿ ಕಾಲದಲ್ಲಿ ಧರ್ಮಾತೀತವಾಗಿದ್ದ ಪ್ರಗತಿಪರ ಚಿಂತನೆಯು ಹೆಬ್ಡೋ ಕಾಲಕ್ಕೆ ಎಡಬಲದ ಧರ್ಮಾಧೀನವಾಗಿ ಓಲೈಕೆಯನ್ನು ಅಪ್ಪಿಬಿಟ್ಟಿತು.

ಮುಂದೆ ಸಾಮಾಜಿಕ/ಸಂವಹನ ಮಾಧ್ಯಮ ತಂತ್ರಜ್ಞಾನದ ಆಸ್ಫೋಟವು ಚಿಂತಕರಿಗೆ ಸಾಕಷ್ಟು ಪ್ರಚಾರ ನೀಡಿ ಮುಂದೆ ಅವರ ಮುಳುವಾಗಲು ಕಾರಣವಾಯಿತು. ಏಕೆಂದರೆ ಈ ವರ್ಗವು ಒಂದೊಮ್ಮೆ ಯಾವ ಸಮಾಜವಾದಿ ಚಿಂತನೆಯಡಿಯಲ್ಲಿ ಒಂದು ಪಕ್ಷವನ್ನು ವಿರೋಧಿಸಿತ್ತೋ ಅದೇ ಪಕ್ಷದ ರಾಜಕಾರಣಿಗಳ ಹುನ್ನಾರಕ್ಕೆ ತಾಳ ಹಾಕುತ್ತಾ ತಾವೇ ಪ್ರತಿಪಾದಿಸುತ್ತಿದ್ದ "ವೈವಿಧ್ಯತೆಯಲ್ಲಿ ಏಕತೆ, ಸರ್ವಜನಾಂಗದ ಶಾಂತಿಯ ತೋಟ" ಎಂಬೆಲ್ಲ ಉದಾತ್ತ ಚಿಂತನೆಯ ಭಾರತೀಯತೆಯನ್ನು ದ್ವಂದ್ವ, ಓಲೈಕೆ, ಜನಾಂಗೀಯ ದ್ವೇಷ, ವೈಯಕ್ತಿಕ ಅವಹೇಳನ, ಸೋಶಿಯಲ್ ಮೀಡಿಯಾ ಬುಲ್ಲಿಯಿಂಗ್, ಜಾತೀಯತೆಯ ಭಾವನೆಗಳನ್ನು ಸಂಶೋಧನೆ, ಬಹುತ್ವ, ಅಸ್ಮಿತೆ, ಸನಾತನ, ಸಂಸ್ಕೃತಿ, ಒಳಗೊಳ್ಳುವಿಕೆಗಳೆಂಬ ಸುಂದರ ಭಾವುಕ ಪದಗಳಿಂದ ಆಯಾಯ ಪಂಥೀಯರು ಅಲಂಕರಿಸತೊಡಗಿದರು. ಹೀಗೆ ಆರಂಭವಾದ ಭಾರತೀಯ ಚಿಂತಕರ ವಿಭಜನೆ ಎರಡು ಪ್ರಮುಖ ಪಕ್ಷಗಳ ಭಜನೆಯಲ್ಲಿ ಲೀನವಾಯಿತು. ಈ ಮಧ್ಯೆ ಸಾಕಷ್ಟು ಹೋರಾಟಗಳನ್ನು ಬುದ್ಧಿಜೀವಿಗಳು ರೂಪಿಸಿದರೂ ಮೇಲ್ನೋಟಕ್ಕೆ ಆ ಹೋರಾಟಗಳೆಲ್ಲವೂ ಯಾವ ಪಕ್ಷದ ಮತ್ತು ಮುಖಂಡನ ಪ್ರಭಾವದಲ್ಲಿವೆ ಎಂದು ಜನ ಸುಲಭವಾಗಿ ಗ್ರಹಿಸುವಂತಿದ್ದವು. ಎಲ್ಲಾ ಚಿಂತಕರ ವೈಚಾರಿಕತೆಯು ಎಡ ಬಲ ಸಿದ್ಧಾಂತಕ್ಕೆ ಬದ್ಧವಾಗಿ ಚಿಂತಕರ ಪ್ರಗತಿಪರತೆಯು ರಾಜಾರೋಷವಾಗಿ ಪಕ್ಷಪರತೆಯಾಯಿತು. ಹಾಗಾಗಿ ಅವರ ಎಲ್ಲಾ ಹೋರಾಟಗಳೂ ಆಯಾಯ ಪಂಥನಿಷ್ಠರ ಮನ್ನಣೆ ಗಳಿಸದವೇ ಹೊರತು ಜನಮನ್ನಣೆಯನ್ನಲ್ಲ. 

೨೦೧೪ ರಿಂದ ಕೇಂದ್ರ ಮತ್ತು ರಾಜ್ಯದ ಆಡಳಿತ ಸರ್ಕಾರಗಳು ಸಾಕಷ್ಟು ಕಿವಿ ಹಿಂಡುವ ಅವಕಾಶಗಳನ್ನು ಕೊಟ್ಟರೂ ಈ ವರ್ಗದ ವಿಚಾರ ತೀಕ್ಷ್ಣತೆ ಯಕಶ್ಚಿತ್ ಟ್ರೋಲಿಗೆ ಸೀಮಿತವಾಯಿತು. ಯಾವುದೇ ತಾರ್ಕಿಕ ಮತ್ತು ನೈತಿಕ ಪ್ರಶ್ನಾರ್ಥಿಗಳನ್ನು ಪ್ರಶ್ನೆಯ ಆಧಾರದ ಮೇಲೆ ಎಡ ಬಲ ಎಂದು ಹಣೆಪಟ್ಟಿ ಹಚ್ಚಿ ತುಚ್ಚೀಕರಿಸಲಾಯಿತು. ಕೇಂದ್ರದ ಅಮಾನ್ಯೀಕರಣ, ಸ್ಮಾರ್ಟ್ ಸಿಟಿ, jಪುಲ್ವಾಮಾ, RCEP, CAA, NRC, GST, ಕಾಶ್ಮೀರ ಸ್ವಾಯತ್ತತೆ, ಕೋವಿಡ್ ನಿರ್ವಹಣೆ ಮುಂತಾದ ಸರಣಿ ಅವಕಾಶಗಳನ್ನು ಕೇಂದ್ರ ಸರ್ಕಾರವು ಬುದ್ದಿಜೀವಿಗಳ ಟೀಕೆಗೆ ಅವಕಾಶ ಮಾಡಿಕೊಟ್ಟಿತು. ಆದರೆ ಇಲ್ಲಿ  ಸಮರ್ಥ ಸಂಶೋಧನಾತ್ಮಕ, ತಾರ್ಕಿಕ ತೀಕ್ಷ್ಣ ವಾದವನ್ನು ಮಂಡಿಸಿ ಜನಜಾಗೃತಿಗೊಳಿಸದೆ ಬುದ್ಧಿಜೀವಿಗಳು ಕೇವಲ ಕರುಣಾಜನಕ ಸೃಜನಶೀಲ ಕತೆಗಳನ್ನು ಹೆಣೆದು, ಅತಾರ್ಕಿಕ ಟ್ರೋಲ್ ಮಾಡಿ ಖುದ್ದು ಟ್ರೋಲಿಗೆ ಒಳಗಾದರು. ಅತ್ತ ಟ್ರೋಲ್ ಆಗುತ್ತಾ/ಮಾಡುತ್ತಾ ಹಿಂದಿನ ರಾಜ್ಯ ಸರ್ಕಾರದ ಲಿಂಗಾಯತ ಪ್ರತ್ಯೇಕ ಧರ್ಮ ಸಮಿತಿಯ ಭಾಗವಾಗಿ ಎಲ್ಲಾ ಸಂಶೋಧನೆಗಳನ್ನು ತೂರಿ ಜೈಕಾರ ಹಾಕಿ ಸರ್ಕಾರದ ನಿರ್ಣಯ ಬೆಂಬಲಿಸಿದರು. ಬಹಳಷ್ಟು ಎಡದ ಬುದ್ದಿಜೀವಿಗಳು ಇದೇ ಸರ್ಕಾರದ ಕೆಲವು ಸ್ಥಾನಮಾನಗಳನ್ನು ಪಡೆದುಕೊಂಡರು. ಹಾಗೆ ಸ್ಥಾನಮಾನ ಪಡೆದುಕೊಂಡವರ ಪ್ರತಿರೋಧ, ಹೋರಾಟ, ಬೆಂಬಲಗಳೆಲ್ಲವೂ ಸಹಜವಾಗಿ "ಆಯ್ದ" ವಿಷಯಗಳಾದವು. ಅವರ ನೈತಿಕತೆ, ಬದ್ಧತೆ ಪ್ರಶ್ನಾರ್ಹವಾಯಿತು. ತಟ್ಟೆ ಕಾಸು, ಗಂಜಿ ಗಿರಾಕಿ ಮುಂತಾದ ಹೊಸ ಪರಿಭಾಷೆಗಳು ಸಾಹಿತ್ಯ ವಲಯಕ್ಕೆ ಕಾಲಿಟ್ಟವು. ಬದಲಾದ ರಾಜ್ಯ ಸರ್ಕಾರದಲ್ಲಿ ಬಲದ ಬುದ್ದಿಜೀವಿಗಳು ಸ್ಥಾನಮಾನ ಪಡೆದುಕೊಂಡರು. ಗೋಹತ್ಯೆ ನಿಷೇಧ, ಪಠ್ಯ ಪುಸ್ತಕ ಪರಿಷ್ಕರಣೆಯಂತಹ "ಆಯ್ದ" ವಿಷಯ ಅವರದಾಗಿತ್ತು. ಎಡ ಬಲರ ಚಿತ್ರ ವಿಚಿತ್ರ ಸಂಶೋಧನೆಗಳು ಯಾವುದೇ ಪುರಾವೆಗಳಿಲ್ಲದೆ ಅಥವಾ ಸೃಷ್ಟಿಸಿದ ಪುರಾವೆಗಳೊಂದಿಗೆ ವಿಶ್ವವಿದ್ಯಾಲಯಗಳ ಮಟ್ಟದಲ್ಲೇ ಸೃಷ್ಟಿಯಾದವು. ತಮ್ಮ ತಮ್ಮ ಪಂಥಕ್ಕೆ ಸೇರಿದ್ದ ಇವೆಲ್ಲ ಅಪಸವ್ಯಗಳನ್ನು ಎಡ ಬಲ ಬುದ್ಧಿಜೀವಿಗಳು ಬೆಂಬಲಿಸಿದರಲ್ಲದೆ ಪ್ರಮಾಣಪತ್ರಗಳನ್ನೂ ನೀಡಿ ಅಧಿಕೃತಗೊಳಿಸಿದರು.

ಹೀಗೆ ಎಡ ಬಲ ಪ್ರಗತಿಪರರ ಕ್ರಿಯೆ-ಪ್ರಕ್ರಿಯೆಗಳ ಆಯ್ದ ಹೋರಾಟಗಳ ಅತೀವ ಓಲೈಕೆಯ ಫಲವೇ ಇಂದು ಸಮಾಜದಲ್ಲಿ ಗೋಹತ್ಯೆ ನಿಷೇಧ, ಹಿಜಾಬ್-ಕೇಸರಿಶಾಲು, ಹಲಾಲ್-ಜಟ್ಕಾ, ಜಾತ್ರೆ-ಉರ್ಸ್ ಕ್ರಿಯೆ-ಪ್ರಕ್ರಿಯೆಗಳ ವ್ಯಾಪಾರದ ಜಂಜಾಟಕ್ಕೆ ಸ್ಫೂರ್ತಿ ಕೊಟ್ಟಿವೆ! ಸಾಂಸ್ಕೃತಿಕವಾಗಿ ರಿಕ್ಷಾ, ಟ್ಯಾಕ್ಸಿ, ಕಾರು, ಲಾರಿಗಳ ಮೇಲೆಲ್ಲಾ ಜಾತಿ ಪ್ರೌಢಿಮೆ ಮೆರೆಯುತ್ತಿದೆ.

ಇನ್ನು ಆಡಳಿತ ವಿರೋಧಿ ಎಡಬಣದ "ತೋಳ ಬಂತು ತೋಳ" ಕತೆಯಂತಹ ಅಕಾರಣ ಕೂಗನ್ನು ಕೇಳಿ ಕೇಳಿ ಬೇಸತ್ತಿದ್ದ ಜನ ಇವರನ್ನು ಅತ್ಯಂತ ತೀವ್ರ ಅನುಮಾನದಿಂದ ನೋಡತೊಡಗಿದರು. ಆ ಅನುಮಾನವನ್ನು ಹೆಚ್ಚಿಸುವಂತೆ ಆ ಬಣದ ಚಿಂತಕರು ಮತ್ತಷ್ಟು ಟ್ರೋಲೆಂಬ ಸುಳಿಯಲ್ಲಿ ಸಿಲುಕಿ ಹೊರಬರದಾದರು.

ಇಂತಹ ಸುಳಿಯಲ್ಲಿ ಸಿಕ್ಕವರು ಮೊನ್ನೆ ಮೊನ್ನೆ ಸಹ ಕನ್ನಡ ಸಾಹಿತ್ಯ ಸಮ್ಮೇಳನದ ಸಮತೋಲಿತ ಅಲ್ಪಸಂಖ್ಯಾತ ಪ್ರತಿನಿಧಿತ್ವವನ್ನು ಇವರು ಸಮರ್ಥವಾಗಿ ವಿರೋಧಿಸದಾದರು. ಪರ್ಯಾಯ ಎಂದು ಸಮ್ಮೇಳನ ಮಾಡಿದರೂ ಅಲ್ಲಿ ಓಲೈಕೆಯನ್ನೇ ಮೆರೆದರು. ಬೌದ್ಧ ತತ್ವದ ಚಿಂತಕ ಎನಿಸಿದವರು, ಬುದ್ಧನ ತತ್ವ ಹರಡಿ ಸ್ತೂಪಗಳನ್ನು ಕಟ್ಟಿದ ವೈಶ್ಯರನ್ನು ಮೂದಲಿಸಿ ಕವಿ ಸಾಹಿತಿಗಳೇ ದೇಶ ಕಟ್ಟುವವರು ಎಂದು ಜನಾಂಗೀಯ ದ್ವೇಷದ ಕರೆ ನೀಡಿದರು. ಮೂರ್ತರೂಪದ ವಂದೇ ಮಾತರಂ ವಿರೋಧಿಸುತ್ತ ಅದೇ ಮೂರ್ತರೂಪದ ಜಯಹೇ ಕರ್ನಾಟಕ ಮಾತೆ ನಾಡಗೀತೆಯನ್ನು ಎಲ್ಲರೂ ಹಾಡಿದರು. ಓಲೈಕೆಯ ಭರದಲ್ಲಿ ಟಿಪ್ಪು ಕರ್ನಾಟ(ಕ) ಎಂಬ ಹೆಸರನ್ನು ಮೊಟ್ಟ ಮೊದಲು ಬಳಸಿದ ವ್ಯಕ್ತಿ ಎಂದು ನಿವೃತ್ತ ಸಂಶೋಧಕರು ಅಮೋಘವರ್ಷ, ಕರ್ನಾಟಕ (ವಿಜಯನಗರ) ಸಾಮ್ರಾಜ್ಯ, ನಾಗಚಂದ್ರ ಕವಿಗಳು ಬಳಸಿದ್ದ ಈ ಪದದ ಈವರೆಗಿನ ಎಲ್ಲಾ ಸಂಶೋಧನೆಗಳನ್ನು ಗಾಳಿಗೆ ತೂರಿ ಕೋಮು ಓಲೈಕೆಯ ಕರೆ ನೀಡಿದರು. ಕೆಂಪು ಹಳದಿ ಬಣ್ಣದ ಕನ್ನಡ ಬಾವುಟವನ್ನು ಧ್ವಜಾರೋಹಣ ಮಾಡಿ ಜಯಹೇ ಕರ್ನಾಟಕ ಮಾತೆ ಎಂದು ಮೂರ್ತರೂಪವನ್ನು ಹಾಡಿದ ಸೆಕ್ಯುಲರ್ ಉದಾರವಾದಿ ಅಧ್ಯಕ್ಷರು ಭಾಷಣದಲ್ಲಿ ಕನ್ನಡ ಧ್ವಜವನ್ನು ಕುಂಕುಮ ಅರಿಶಿಣದ ಬಣ್ಣದ್ದು ಮಾಡಿ, ಕರ್ನಾಟಕ ಮಾತೆಗೆ ಭುವನೇಶ್ವರಿ ರೂಪ ಕೊಟ್ಟು ನಮ್ಮನ್ನು ಹೊರಗಿಡಲಾಗಿದೆ ಎಂದು ತಮ್ಮ ಧಾರ್ಮಿಕ ಸಂಕುಚಿತ ನಿಲುವು ತೋರಿದರು. ಆಯೋಜಕ ಪತ್ರಕರ್ತರು ಇಲ್ಲಿ ಸಾಹಿತ್ಯವಿಲ್ಲ, ನಮ್ಮದು ಪ್ರತಿರೋಧ ಅಷ್ಟೇ ಎಂದರು. ಆಹಾರತಜ್ಞೆಯೊಬ್ಬರು, 'ದಿನಕ್ಕೆ ಒಂದೂವರೆ ಸಾವಿರ ರೂಪಾಯಿ ದುಡಿಯುವ ವ್ಯಕ್ತಿಗೆ ಕುಟುಂಬಕ್ಕೆ ನಿತ್ಯ ತರಕಾರಿ ಕೊಳ್ಳುವ ಆರ್ಥಿಕ ಶಕ್ತಿ ಇರದು. ಆದರೆ ಮಾಂಸವನ್ನು ಕೊಂಡರೆ ಅದನ್ನು ಎರಡು ದಿನ ಊಟ ಮಾಡಬಹುದು' ಎಂದು ಸಸ್ಯಾಹಾರವನ್ನು ಖರ್ಚಿನ ಬಾಬ್ತು ಮಾಡಿದರು. ಬೀಫ್ ಬ್ಯಾನ್ ಹೇರಿಕೆಯಿಂದಾಗುವ ರಾಷ್ಟ್ರೀಯ ವಿಪತ್ತನ್ನು ವಿಶ್ಲೇಷಿಸದೆ ಕೇವಲ "ಸಸ್ಯಾಹಾರ ಮೇಲು, ಮಾಂಸಾಹಾರ ಕೀಳು" ಎಂಬ ಸತ್ತ ಪುರಾತನ ಭಾವುಕ ಹೆಣಕ್ಕೇ CPR ಕೊಟ್ಟರು. ಹೀಗೆ ಅತಾರ್ಕಿಕ ಅವಾಸ್ತವಿಕ, ಮೂರ್ಖ ಸಂಕಥನಗಳನ್ನು ಸೃಷ್ಟಿಸಿದರೆ, ಪುನರುಚ್ಚರಿಸಿದರೆ ಇಪ್ಪತ್ತೊಂದನೇ ಶತಮಾನದ ಯುಗದಲ್ಲಿ ಅದನ್ನು ಜನರು ಕೇಳಿಯಾರೆ!?

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಅಧ್ಯಕ್ಷರ ಪಕ್ಷಪಾತ, ಅದಕ್ಷತೆ, ಓಲೈಕೆ, ಆತ್ಮರತಿಗಳನ್ನು ಸಮರ್ಥವಾಗಿ ಅದೇ ವೇದಿಕೆಯಲ್ಲಿ ಪ್ರತಿಭಟಿಸುವ ತೀಕ್ಷ್ಣ ವೈಚಾರಿಕ ಪ್ರಯತ್ನವೇ ಆಗದೆ ಖುದ್ದು ಪರ್ಯಾಯ ಟ್ರೋಲ್ ಆದರು. ಒಟ್ಟಾರೆ ಇಂತಹ ಒಂದು ಅತಿ ಸಾಮಾನ್ಯ ವಿಷಯದ ಪ್ರತಿರೋಧದಲ್ಲಿಯೇ ದಾರುಣವಾಗಿ ಎಡವಿದ್ದಾರೆ.  ಒಂದೊಮ್ಮೆ ಪ್ರಖರ ಸಂಶೋಧನೆ, ತಾರ್ಕಿಕ ವಾದ ಮಂಡನೆ, ತೀಕ್ಷ್ಣ ವೈಚಾರಿಕತೆ, ವಿಷಯ ಸ್ಪಷ್ಟತೆ, ಆದರ್ಶತತ್ವಗಳ ಪರಿಚಾರಕರಾಗಿದ್ದ ಈ ವರ್ಗಕ್ಕೆ ಇಷ್ಟೊಂದು ವೈಚಾರಿಕ ದಾರಿದ್ರ್ಯತೆ ಏಕೆ ಬಂದಿತು ಎಂಬುದೇ ಇಂದಿನ ದುರಿತ ಕಾಲದ ರಾಷ್ಟ್ರೀಯ ದುರಂತ. 

ಸಾಮಾನ್ಯ ತಿಳಿವಳಿಕೆಯ ಓರ್ವ ನಾಗರಿಕನನ್ನೇ ಪ್ರಭಾವಿಸಲಾಗದೆ ಖುದ್ದು ಸ್ವಾಮಿಭಕ್ತಿಯಲ್ಲಿ ಲೆಂಕರಾಗಿರುವ ಈ ವರ್ಗವು ಸರ್ಕಾರವನ್ನು ಹೇಗೆ ಶೂಲಕ್ಕೇರಿಸಬಲ್ಲದು?!?

#

No comments:

Post a Comment