ಅರಿದಡೆ ಆರದು, ಮರೆದೊಡೆ ಮೂರದು - ಬಿಡುಗಡೆ ಭಾಷಣ

 ಅರಿದಡೆ ಆರದು, ಮರೆದೊಡೆ ಮೂರದು.


ವೇದಿಕೆಯ ಮೇಲಿರುವ ಎಲ್ಲಾ ಗಣ್ಯರಿಗೆ ಮತ್ತು ಈ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಮಿತ್ರರಿಗೂ ನನ್ನ ಅನಿವಾಸಿ ಅಪ್ರಮೇಯ ಸಪ್ರೇಮ ವಂದನೆಗಳು. 


ಅನಿವಾಸಿ ಎಂದು ಏಕೆ ಹೇಳುತ್ತಿದ್ದೇನೆ ಎಂದರೆ...


ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಒಂದೊಮ್ಮೆಯ ಅನಿವಾಸಿಗಳಾಗಿದ್ದ ಗಾಂಧಿ, ನೆಹರೂ ಅವರ ಮಹತ್ವದ ಕೃತಿಗಳು ಅವರನ್ನು ಸಮಾಜದಿಂದ ಬೇರ್ಪಡಿಸಿ ಜೈಲಿನಲ್ಲಿ ದೂರವಿರಿಸಿದಾಗಲೇ ರಚಿತಗೊಂಡಿವೆ. ಅವರ ಹೋರಾಟಗಳ ಮೇಲೆ ಅವರ ಅನಿವಾಸಿತನ ಗಾಢ ಪ್ರಭಾವ ಬೀರಿದೆ. ವಿದೇಶಗಳಲ್ಲಿ ಅವರು ಕಂಡ ರಾಜಕೀಯ, ಸಾಮಾಜಿಕ ವ್ಯವಸ್ಥೆಗಳು ಭಾರತದಲ್ಲಿಯೂ ಇರಬೇಕು ಎಂಬ ಅವರ ಬಯಕೆಯನ್ನು ಪೋಷಿಸಿದೆ. ಇದಕ್ಕೆ ಸಾವರ್ಕರ್, ಜಿನ್ನಾ ಸಹ ಹೊರತಲ್ಲ. ಒಟ್ಟಾರೆ ಭಾರತದ ಸ್ವಾತಂತ್ರ್ಯ ಚಳುವಳಿ ಮೇಲೇರಲು ಅನಿವಾಸಿಗಳೇ ಕಾರಣ.


ಹೀಗೆ ಸಮಾಜವನ್ನು, ರಾಷ್ಟ್ರವನ್ನು, ಆಗುಹೋಗುಗಳನ್ನು ಅನಿವಾಸಿತನದಿಂದ, ದೂರದಿಂದ ನೋಡಿದಾಗ ಅದು ಕೊಡುವ ಹೊಳಹು ವಿಭಿನ್ನ. ಹಾಗಾಗಿ ಭಾರತಕ್ಕೆ ಕೇವಲ ಸ್ವಾತಂತ್ರ್ಯವಲ್ಲದೆ ಗಮನಾರ್ಹ ಚಿಂತನೆ, ಕೃತಿ, ಕಾರ್ಯಗಳಿಗೆ ಅನಿವಾಸಿತನದ ಕೊಡುಗೆ ಅತ್ಯಂತ ಮಹತ್ವದ್ದು. ಕೇವಲ ಭಾರತವಲ್ಲದೆ ಜಾಗತಿಕವಾಗಿ ಸಹ ಪಾಬ್ಲೋ ನೆರೂಡಾ ಅನಿವಾಸಿಯಾಗಿ ಶ್ರೀಲಂಕಾದಲ್ಲೇ ತಮ್ಮ ಕಾವ್ಯದ ನೆಲೆಯನ್ನು, ಹೆಮಿಂಗ್ವೇ ಪ್ಯಾರಿಸ್, ಹವಾನಾದಲ್ಲಿ ಅನಿವಾಸಿಯಾಗಿದ್ದಾಗಲೇ ಮಹತ್ವದ ಕೃತಿಗಳನ್ನು ರಚಿಸಿದ್ದರು ಎಂಬುದು ಗಮನಾರ್ಹ.


ರಾಜೀವ್ ಗಾಂಧಿ, ಸ್ಯಾಮ್ ಪಿತ್ರೋಡ ಅಲ್ಲದೆ ಇಂದಿನ ವರ್ತಮಾನದಲ್ಲಿ ಸಹ ಖೇಣಿ, ನೀಲೇಕಣಿ, ಎಸ್ಸಾರ್ ಹಿರೇಮಠ, ರವಿಕೃಷ್ಣಾರೆಡ್ಡಿ ಮುಂತಾದವರ ಹೋರಾಟ ಮತ್ತು ಸಾಮಾಜಿಕ ಕಳಕಳಿಗೆ ಇದೇ ಅನಿವಾಸಿತನ ಕಾರಣವಾಗಿದೆ. ಆದರೆ ಅದನ್ನು ಸ್ವೀಕರಿಸುವ ಮನಃಸ್ಥಿತಿ ವರ್ತಮಾನದ ಭಾರತದಲ್ಲಿ ನಂದಿದೆ. ಅನಿವಾಸಿ ಸಾಹಿತ್ಯ ಸ್ವೀಕಾರವೂ ಸೇರಿ.


ಈಗ ಅನಿವಾಸಿ ಎಂದರೇನೇ ಬೇವರ್ಸಿ ಎಂಬ ಒಂದು ಸಿದ್ಧ ತಿರಸ್ಕಾರ ಜನರಲ್ಲಿ ಬೇರೂರಿದೆ. ಇಲ್ಲಿನ ಆಗುಹೋಗುಗಳಿಗೆ ಓರ್ವ ಅನಿವಾಸಿ ಸ್ಪಂದಿಸಿದರೆ, "ಅವನೇ(ಳೇ)ನು ಕಂಡಿದ್ದಾನೆ(ಳೆ), ಏಸಿ ರೂಮಿನಲ್ಲಿ ಕುಳಿತವನು(ಳು)" ಎಂಬ ಮೂದಲಿಕೆಯೇ ಮೆರೆದು ಉಳಿದದ್ದೆಲ್ಲಾ ಗೌಣವಾಗಿಬಿಡುತ್ತದೆ. ಏಕೆಂದರೆ ರೋಚಕತೆಯನ್ನು ಬಯಸುವ ಭಾರತೀಯನಿಗೆ ಇಂತಹ ಮೂದಲಿಕೆ ಒಂದು ಥ್ರಿಲ್ ಕೊಡುತ್ತದೆ. ಹಾಗಾಗಿಯೇ ಇಂದಿನ ಎಲ್ಲಾ ಆಯಾಮಗಳಲ್ಲೂ ರೋಚಕತೆ ಎಲ್ಲೆಲ್ಲೂ ಮೆರೆಯುತ್ತಿದೆ. ಅದು ತಪ್ಪಲ್ಲ.


ಆದರೆ ಇಂತಹ ಮೂದಲಿಕೆ, ತಿರಸ್ಕಾರಗಳ ಆಚೆ ಮೌಲಿಕ ಟೀಕೆಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ಗಂಭೀರವಾಗಿ ಆಳವಾದ ಅಭ್ಯಾಸ, ವಿಷಯ ಮಂಡನೆ, ದೂರಗಾಮಿ ಚಿಂತನೆ, ವಿಶ್ಲೇಷಣೆ ಕೆಲವು ಅನಿವಾಸಿಗಳ ಬರಹದಲ್ಲಿ ಇರುತ್ತದೆ. ಏಕೆಂದರೆ ಅನಿವಾಸಿ ಬರೆದಿದ್ದಾನೆ ಎಂದಾಕ್ಷಣ ಯಾವುದೇ ಮೀಸಲಾತಿ ಕಕ್ಕುಲಾತಿ ಇಲ್ಲದೆ ಅದರಲ್ಲಿ ಏನಾದರೂ ಹುಳುಕುಗಳಿವೆಯೇ ಎಂದು ಭೂತಗಾಜು, ಮೈಕ್ರೋಸ್ಕೋಪು, ಟೆಲಿಸ್ಕೋಪು, ಇಲ್ಲದ ಸ್ಕೋಪು ಹಿಡಿದು ನೋಡಿ ಏನಾದರೂ ಕಂಡರೆ ನಿಕೃಷ್ಟವಾಗಿ ಝಾಡಿಸಲಾಗುತ್ತದೆ. ಏನೂ ಕಾಣದಿದ್ದರೆ ಅದರಲ್ಲಿನ ಹೊಳಹುಗಳ ಬಗ್ಗೆ ದಿವ್ಯಮೌನ ವಹಿಸಲಾಗುತ್ತದೆ. 


ಒಟ್ಟಿನಲ್ಲಿ ಅನಿವಾಸಿಗಳು ತಾಯ್ನಾಡಿನ ತಿರಸ್ಕಾರಕ್ಕೆ ಗುರಿಯಾಗಿದ್ದಾರೆ. ಆದರೆ ಅದೇ ಅನಿವಾಸಿ ಅವನಿರುವ ದೇಶದ ಸಂಸ್ಕೃತಿ, ಸಮಾಜ, ವ್ಯವಸ್ಥೆಯನ್ನು ಸಾರಾಸಗಟಾಗಿ ತಿರಸ್ಕರಿಸಿ ಮೂದಲಿಸಿ ಬರೆದು ಭಾರತೀಯ ಸಂಸ್ಕೃತಿ, ಸಾಹಿತ್ಯ, ವ್ಯವಸ್ಥೆಯನ್ನು ಕುರುಡಾಗಿ ಹಾಡಿ ಹೊಗಳಿ ಬರೆದಾಗ "ಅಬ್ಬಬ್ಬಾ" ಅದರ ಆದರವೇ ಬೇರೆ! 


ಇದು ನನ್ನ ಅನಿವಾಸಿ ಪ್ರಲಾಪ! 


ಇನ್ನು ವರ್ತಮಾನದ ಇಂದಿನ ಸೈದ್ಧಾಂತಿಕ ಅಮಲಿನಲ್ಲಿ ಭಾರತದ ತುಂಬೆಲ್ಲಾ ಪಂಥೀಯ ಸಿದ್ಧಾಂತಿಗಳು ತಮ್ಮ ತಮ್ಮವೇ ದ್ವೀಪೀಯ ಸಮಾಜಗಳನ್ನು ಸೃಷ್ಟಿಸುತ್ತಾ ಬರುತ್ತಿದ್ದಾರೆ. ಇದು ದೇಶ ವಿಭಜಕ ಕೃತ್ಯವೆನಿಸಿ ಮುಂದೆ ಆತಂಕಕಾರಿ ಸನ್ನಿವೇಶವನ್ನಷ್ಟೇ ಅಲ್ಲದೆ ಆತಂಕವಾದಿಗಳ ಮಹಾಪೂರವನ್ನೇ ಸೃಷ್ಟಿಸಲಿದೆ. ಈ ಎಲ್ಲಾ ವೇದಿಕೆಗಳಲ್ಲಿಯೂ ಮಠಾಧೀಶರು, ಮೌಲ್ವಿಗಳು, ಪಾದ್ರಿಗಳು ಸಮಾನವಾಗಿ ಕಂಗೊಳಿಸುತ್ತಿದ್ದಾರೆ. ಮೌಲ್ವಿಗಳ, ಪಾದ್ರಿಗಳ, ಬ್ರಹ್ಮಚಾರಿಗಳ ಕರ್ಮಕಾಂಡಗಳು ಸುದ್ದಿ ಮಾಡಿದ್ದರೂ ಅವರ ಕಂಗೊಳಿಸುವಿಕೆ ಮಾತ್ರ ಅಭಾದಿತವಾಗಿ ಮುಂದುವರಿದಿದೆ. ಹಾಗಾಗಿಯೇ ನನ್ನ ಈ ಕೃತಿ, "ಅರಿದಡೆ ಆರದು, ಮರೆದೊಡೆ ಮೂರದು" ಇಂದು ಪೀಠಾರೋಹಣವಾಗುತ್ತಿದೆ. ಇದನ್ನು ನಾನು ಬ್ರಿಟಿಷ್ sattire ಸಾಹಿತ್ಯ ಯಾನೆ ವಿಡಂಬನಾತ್ಮಕ ಶೈಲಿಯನ್ನು ಮುಖ್ಯವಾಗಿರಿಸಿಕೊಂಡು ರೋಚಕತೆಯನ್ನು ಬಹುವಾಗಿ ಮೆಚ್ಚುವ ಭಾರತೀಯ ಓದುಗರ ರುಚಿಗೆ ತಕ್ಕಂತೆ ಮಠೀ(ತೀ)ಯ ವ್ಯವಸ್ಥೆಯ ಕಥೆಯನ್ನು ಸಾದರಪಡಿಸಿದ್ದೇನೆ.


ಇದನ್ನು ಪುಸ್ತಕವಾಗಿ ಪ್ರಕಟಿಸುವ ಮುನ್ನ ಒಂದು ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದರೆ ಹೆಚ್ಚು ಜನ ಓದಿ ಜಾಗರೂಕರಾಗಬಹುದು ಎಂದು ನಾನು ಆರಂಭದಲ್ಲಿ ಆಲೋಚಿಸಿದ್ದೆ. ಹಾಗಾಗಿ ನನ್ನಿಂದ ಸತತವಾಗಿ ಅಂಕಣ ಬರೆಸಿಕೊಂಡಿದ್ದ ದಿನಪತ್ರಿಕೆಯ ಸಂಪಾದಕರನ್ನು ಸಂಪರ್ಕಿಸಿದಾಗ ಅವರು, "ಜಾಹೀರಾತು ಲೆಕ್ಕದಲ್ಲಿ ಪ್ರಕಟಿಸುತ್ತೇನೆ" ಎಂದು ನನ್ನ "ಅನಿವಾಸಿತನ"ವನ್ನು ಗಣಿಗಾರಿಕೆ ನಡೆಸುವ ಆಲೋಚನೆ ಮುಂದಿಟ್ಟರು! ಅಲ್ಲಿಗೆ ಗಣಿಗಾರಿಕೆ ಕೇವಲ ಬಳ್ಳಾರಿಗೆ ಸೀಮಿತವಾಗಿಲ್ಲ ಎಂದು ನನಗರಿವಾಯಿತು. ಬಳ್ಳಾರಿ, ಮಾಧ್ಯಮವಲ್ಲದೆ ಇನ್ನೆಲ್ಲೆಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ನಿಮ್ಮ ಊಹೆಗೆ ಬಿಡುತ್ತೇನೆ. ಎಷ್ಟೇ ಆಗಲಿ ನಾನು ಏಸಿ ರೂಮಿಗ, ನಾನೇನು ಬಲ್ಲೆ?!


ಇನ್ನುಳಿದಂತೆ ಓದುಗರು ಈ ಕೃತಿಯನ್ನು ಸ್ವೀಕರಿಸಿ ಕಿಂಚಿತ್ ನೈತಿಕತೆಯನ್ನು ರೂಢಿಸಿಕೊಂಡರೆ ನಾನು ಏಸಿ ರೂಮಿನಲ್ಲಿ ಬೆವರಿದ್ದು, ಮೆಮರಿ ಫೋಮ್ ಬೆಡ್ಡಿನಲ್ಲಿ ಬೆಚ್ಚಿದ್ದು, ಮತ್ತು ಭಾರತೀಯ ತತ್ವಜ್ಞಾನದ ಆರು ಮೂರು ಒಂಬತ್ತು, ಒಂಬತ್ತು ತೂತಿನ ಕೊಡನಾಗಿದ್ದು ಸಾರ್ಥಕ ಎನಿಸುತ್ತದೆ.


ಧನ್ಯವಾದಗಳು!

ರವಿ ಹಂಜ್ 

----

No comments:

Post a Comment