"ಅರಿದಡೆ ಆರದು, ಮರೆದೊಡೆ ಮೂರದು" ಕುರಿತು ಮಹೇಂದ್ರ ಮೂರ್ತಿ ಅವರ ಅಭಿಪ್ರಾಯ.

 ರವಿ ಹಂಜ್ ಅವರು ಈಗಾಗಲೇ ಸಾಹಿತ್ಯವಲಯದಲ್ಲಿ ಭದ್ರವಾದ ಹೆಜ್ಜೆಗಳನ್ನು ಇರಿಸಿದವರು. ಅವರು ಅನಿವಾಸಿ ಭಾರತೀಯರಾಗಿರುವ ಕಾರಣ ಅವರ ಕೃತಿಗಳು ಹೆಚ್ಚು ಚರ್ಚೆಯಾಗಿಲ್ಲ. ಇದು ಎಲ್ಲಾ ಅನಿವಾಸಿ ಭಾರತೀಯ ಸಾಹಿತಿಗಳಿಗೂ ಅನ್ವಯಿಸುತ್ತದೆ. "ಭಾರತ ಒಂದು ಮರುಶೋಧನೆ" ಕೃತಿಯಲ್ಲಿ ಶ್ರೀಯುತರು ಚರಿತ್ರೆ, ಧರ್ಮ, ರಾಜಕಾರಣ, ಸಾಹಿತ್ಯವನ್ನು ಹೇಗೆ ಗ್ರಹಿಸಬೇಕೆಂಬ ಮಾದರಿಯನ್ನೇ ಸೃಜಿಸಿದ್ದಾರೆ. ಹಾಗೆಯೇ ಅವರ "ಅಗಣಿತ ಅಲೆಮಾರಿ"ಯಲ್ಲಿ ಭಾರತ ಮತ್ತು ಚೈನಾ ವ್ಯವಸ್ಥೆಗಳನ್ನು ತೌಲನಿಕವಾಗಿ ವಿಶ್ಲೇಷಿಸಿ ಹೊಸ ಬೆಳಕಿಂಡಿಯನ್ನು ತೆರೆದಿದ್ದಾರೆ. "ಹುಯೆನ್ ತ್ಸಾಂಗ್ ನ ಮಹಾಪಯಣ" ಮತ್ತು "ಬಸವರಾಜಕಾರಣ" ಸಂಶೋಧನೆಯ ನೆಲೆಯಲ್ಲಿ ಬೆಲೆ ಕಟ್ಟಿದ್ದರೆ, "ರ ಠ ಈ ಕ" ಕೇವಲ ಆತ್ಮಚರಿತ್ರೆಯಾಗಿ ದಾಖಲಾಗದೆ ಸಾಂಸ್ಕೃತಿಕ ಪಠ್ಯವಾಗಿ ಗಮನ ಸೆಳೆಯುತ್ತದೆ. ನನಗೆ ತಿಳಿದಂತೆ ಭಾರತದ ಕರ್ನಾಟಕದ ಸಾಂಸ್ಕೃತಿಕ ಸಂಗತಿಗಳಿಗೆ ಬರಹಗಳ ಮೂಲಕ ಸದಾ ಸ್ಪಂದಿಸುವ ಏಕೈಕ ಅನಿವಾಸಿ ಬರಹಗಾರರಾಗಿ ರವಿ ಹಂಜ್ ಕಾಣುತ್ತಾರೆ.

ಅವರ ಇಂತಹ ಸ್ಪಂದನೆಯ ಮನಸ್ಥಿತಿಯೇ ಅವರಿಂದ ಅವರ ನೂತನ ಕಾದಂಬರಿ "ಅರಿದಡೆ ಆರದು, ಮರೆದೊಡೆ ಮೂರದು"ಯನ್ನು ಬರೆಸಿದೆ. ಈ ಕೃತಿಯು ತನ್ನ ಹೆಸರಿನಿಂದಲೇ ಗಮನ ಸೆಳೆಯುತ್ತದೆ. ’ನೂರನೋದಿ ನೂರ ಕೇಳಿದಡೇನು! ಆಸೆ ಬಿಡದು ರೋಷ ಹರಿಯದು’ ಎಂಬ ಬಸವಣ್ಣನವರ ವಚನವನ್ನು ಈ ಕೃತಿ ಸ್ಫಟಿಕ ಸದೃಶದಂತೆ ಅನಾವರಣಗೊಳಿಸುತ್ತದೆ. 

ಸುತ್ತಣ ಜಗತ್ತಿನಲ್ಲಿ ಇಂದ್ರಿಯ-ವಿಜೇತರನ್ನು ಗೌರವಿಸುವ, ಪೂಜಿಸುವ, ದೇವರೆಂದೇ ಬಗೆಯುವ ಪರಂಪರೆಯೊಂದು ಮನುಷ್ಯ ಲೋಕದಲ್ಲಿ ಪ್ರಾರಂಭಗೊಂಡಾಗಿನಿಂದ ಮಠ, ಸ್ವಾಮೀಜಿಗಳ ಪರಂಪರೆ ಆರಂಭವಾಯಿತು. ಅಂತಹ ಮಠಗಳು ಹೇಗೆ ಎಲ್ಲಾ ಇಂದ್ರಿಯ ವಾಂಛೆಗಳನ್ನು ಆವಾಹಿಸಿಕೊಳ್ಳುತ್ತಾ ಬಂದವು ಎಂಬುದನ್ನು ಸೃಜನಶೀಲತೆಯಿಂದ ರವಿ ಹಂಜ್ ಕಥೆ ಕಟ್ಟುತ್ತಾ ಸಾಗುತ್ತಾರೆ. ಶಕ್ತಿ ಕವಿ ರನ್ನ ತನ್ನ ’ಸಾಹಸಭೀಮ ವಿಜಯಂ’ ಕಾವ್ಯದಲ್ಲಿ ಕಾವ್ಯಶಕ್ತಿಯನ್ನು ವಿಮರ್ಶಿಸುವವರಿಗೆ ಎಂಟೆದೆ ಇರಬೇಕೆನ್ನುತ್ತಾನೆ. ಅಂತಹ ಎಂಟೆದೆ ಇದ್ದವರೇ ಅದನ್ನು ವಿಮರ್ಶಿಸಿದರು ಎನ್ನುವ ಮಾತು ಬೇರೆ. ಇಲ್ಲಿ ರವಿ ಹಂಜ್ ಮಠೀಯ ವ್ಯವಸ್ಥೆಯ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಅಂತಹ ಎಂಟೆದೆಯವರಾಗಿದ್ದಾರೆ. ಈ ಕೃತಿಯ ಪ್ರಕಾಶಕರಾದ ಲೋಕಪ್ಪನವರೂ ಅಂತಹ ಧೀಮಂತರೇ. 

ಸಾಹಿತ್ಯ ಸಾಮಾಜಿಕ ಅಸ್ತ್ರವಾಗಬೇಕು, ಸಮಾಜದ ಆರೋಗ್ಯ ಕಾಪಿಡಬೇಕು ಎನ್ನುವ ಷೆಲ್ಲಿಯು ಕವಿಗಳನ್ನು ಶಾಸನಕಾರರು ಎಂದು ಕರೆದಿದ್ದಾನೆ. ಆ ಹಿನ್ನೆಲೆಯಲ್ಲಿಯೇ ವಚನಕಾರರು ಸಮಾಜ ತಿದ್ದಲು ಸಾಹಿತ್ಯವನ್ನು ಮಾಧ್ಯಮವಾಗಿಸಿಕೊಂಡರು. ’ಶೂದ್ರತಪಸ್ವಿ’ ಮೂಲಕ ಕುವೆಂಪುರವರು ಸಾಹಿತ್ಯವನ್ನು ಅಸ್ತ್ರವಾಗಿಸಿದರು. ರವಿ ಹಂಜ್ ಅವರು ಕನ್ನಡದ ಈ ಪರಂಪರೆಯ ವಾರಸುದಾರರಂತೆ ಈ ಕೃತಿಯ ಮೂಲಕ ಕಾಣುತ್ತಿದ್ದಾರೆ.

ಇಪ್ಪತ್ತೊಂಬತ್ತು ಅಧ್ಯಾಯಗಳ ಕಥಾನಕವು "ಅರಿದಡೆ ಆರದು, ಮರೆದೊಡೆ ಮೂರದು" ಕೃತಿಯಾಗಿದೆ. ಈ ಕಥಾವಸ್ತುವನ್ನು ಆಯ್ದುಕೊಳ್ಳುವುದು ಸುಲಭ; ಆದರೆ ಅದನ್ನು ನಿರ್ವಹಿಸುವುದು ಕಷ್ಟಸಾಧ್ಯ. ರವಿಯವರು ವಸ್ತುವನ್ನು ಚೆನ್ನಾಗಿ ದುಡಿಸಿಕೊಂಡಿರುವುದು ಅವರ ಸೃಜನಶೀಲತೆಯನ್ನು ತೋರಿಸುತ್ತದೆ. ಕೃತಿಯಾದ್ಯಂತ ಬಳಸಿರುವ ವಚನಗಳು ಕೀಲಿಕೈಯಂತಿವೆ. ದಖ್ಖನ್ ಪ್ರಸ್ತಭೂಮಿಯ ವರ್ಣನೆಯೊಂದಿಗೆ ಕೃತಿ ಆರಂಭವಾಗಿ ಸಂಚಾರಿ ಜಂಗಮ ಯೋಗಿಗಳು ಪಾಳೆಯಗಾರರ ಬಿಂಬಗಲ್ಲಿನಲ್ಲಿ ನೆಲೆನಿಲ್ಲುವುದರೊಂದಿಗೆ ಕೃತಿಯ ಆವರಣ ಅನಾವರಣವಾಗುತ್ತದೆ. ಕೃತಿಯಲ್ಲಿ ರಾಜಕೀಯ, ಸಾಮಾಜಿಕ, ರಾಜತಾಂತ್ರಿಕ ಆಯಾಮಗಳಲ್ಲದೆ ವೀರಶೈವ-ಶೈವ-ಲಿಂಗಾಯತ ಪಂಥ ಮತ್ತು ವಚನಗಳ ಕುರಿತ ಆರೋಗ್ಯಕರ ಚರ್ಚೆಗಳಿವೆ.

ವಿಶೇಷ ಕಥಾಹಂದರ, ಪಾತ್ರ ನಿರ್ವಹಣೆ, ವಿಡಂಬನೆ, ಆಯಾಯ ಕಾಲಘಟ್ಟದ ಸನ್ನಿವೇಶಗಳ ಸೃಷ್ಟಿಯೊಂದಿಗೆ ಕೃತಿಕಾರನಿಗಿರಬೇಕಾದ ಸ್ಥಿತಪ್ರಜ್ಞತೆ ಓದುಗರನ್ನು ಒಂದು ಮಾಯಾಲೋಕಕ್ಕೆ ಕರೆದೊಯ್ಯುತ್ತದೆ.

ಈ ಕಾದಂಬರಿಯನ್ನು ಓದುತ್ತ ಜಿ.ಎಸ್. ಶಿವರುದ್ರಪ್ಪನವರ ’ವಿಚಾರಣೆ’ ಕವಿತೆಯ ಕೆಲವು ಪಂಕ್ತಿಗಳು ನನಗೆ ನೆನಪಾದವು. ಅವು ಹೀಗಿವೆ:

"ಬಾ, ಪಾಪೀ ಬಾ; ಕೈ ಕಟ್ಟಿ ನಿಂತುಕೋ

ಈ ಕಟಕಟೆಯೊಳಗೆ-

ಬೊಗಳು, ಇದುವರೆಗೂ ಮಾಡಿದ್ದೆಲ್ಲವನು ಬಾಯ್ಬಿಟ್ಟು;

----------

ಎದುರಿಗಿದೆ ವೇದ - ಪುರಾಣಭಗವದ್ಗೀತೆ - ಬೈಬಲ್ಲು 

ಯಾವುದರ ಮೇಲಾದರೂ ಸರಿ, ಆಣೆಯಿಡು, ಹೇಳು,

ಶೋಧಿಸು, ನರನರದ ಒಳಪದರದಲ್ಲೂ ಹುದುಗಿ -

ದಿತಿಹಾಸಗಳ ಹಳೆಯ ಸರಕ.

ನೆನಪಿಲ್ಲವೇ ನಿನಗೆ? ಬರೆದಿಟ್ಟಿದ್ದಾನೆ

ಎಲ್ಲವನ ಈ ಗೂಢಾಚಾರ.

ಬೇರಿಂದ ತುದಿಯೆಲೆತನಕ ಗೊತ್ತಿದೆ ನಮಗೆ

ನಿನ್ನ ಅವತಾರ."

ಸಾಹಿತ್ಯ ಕಲೆಯೂ ಹೌದು; ಜೀವನವೂ ಹೌದು. ಸಮಾಜವನ್ನು ಹಸನುಗೊಳಿಸುವ ಸಾಧನವೂ ಹೌದು ಎಂಬುದನ್ನು ಈ ಕೃತಿ ತೋರಿಸಿದೆ. ಡೋಂಗಿ ಸ್ವಾಮಿಗಳ ಬಗ್ಗೆ ಬರೆಯಲು ತುಂಬಾ ಧೈರ್ಯ ಬೇಕಾಗುತ್ತದೆ. ಕಪಟ ಸನ್ಯಾಸಿಗಳ ಒಳಾವರಣ ಬದುಕು ಎಷ್ಟು ಹೊಲಸಾಗಿದೆ ಎಂಬುದನ್ನು ಈ ಕೃತಿ ಸಾಧ್ಯಂತ ಚರ್ಚಿಸಿದೆ. ಕನ್ನಡದ ಮಟ್ಟಿಗೆ ಈ ಕೃತಿ ಸಂಚಲನ ಉಂಟುಮಾಡುವಂತಿದೆ. 

’ನನ್ನ ಬರವಣಿಗೆ ನಿಂತಾಗ ನನ್ನ ಉಸಿರೂ ನಿಲ್ಲುತ್ತದೆ’ ಎಂದಿದ್ದ ಬಸವರಾಜ ಕಟ್ಟೀಮನಿಯವರ ’ಮೋಹದ ಬಲೆ’, ’ಜರತಾರಿ ಜಗದ್ಗುರು’ ಕಾದಂಬರಿಗಳು ದೊಡ್ಡ ಸಂಚಲನ ಸೃಷ್ಟಿಸಿ ಸಾಹಿತ್ಯಿಕ ಚರ್ಚೆ ಹುಟ್ಟು ಹಾಕಿದ್ದು ಈಗ ಚರಿತ್ರೆಯಾಗಿದೆ. ಮೆಚ್ಚುಗೆ, ವಿರೋಧ ಎರಡನ್ನೂ ಇಂತಹ ಕೃತಿಗಳು ದೊರಕಿಸಿಕೊಡುವಂಥವು. ೧೯೫೨ರಷ್ಟು ಹಿಂದೆಯೇ ಸಾಹಿತ್ಯವನ್ನು ಸಾಮಾಜಿಕ ಅಸ್ತ್ರವನ್ನಾಗಿ ಪಳಗಿಸಿ, ಝಳಪಿಸಿದವರು ಕಟ್ಟೀಮನಿಯವರು! ಅದೇ ಜಾಡನ್ನು ರವಿ ಹಂಜ್ ಹಿಡಿದು ಸಾಗಿದ್ದಾರೆ. ಈ ಕೃತಿಯ ಉದ್ದಕ್ಕೂ ನಿರ್ಭಯ, ನಿರ್ದಾಕ್ಷಿಣ್ಯ, ಸತ್ಯನಿಷ್ಠೆ, ನ್ಯಾಯಪರತೆಗಳು ಕೆಲಸ ಮಾಡಿವೆ. ಕಣ್ಣು ಮುಚ್ಚಿರುವ ಸಮಾಜವನ್ನು ಈ ಕೃತಿಯು ಎಚ್ಚರಿಸುವಂತಿದೆ. ಸಂಸ್ಕೃತಿಯ ಹೆಸರಿನಲ್ಲಿ ಮೆರೆಯುತ್ತಿರುವ ಅನಿಷ್ಟ, ಅನೈತಿಕ, ಅರಾಜಕತೆಗಳನ್ನು ಈ ಕೃತಿ ಪ್ರಕಟಿಸಿ ತನ್ನ ಎದೆಗಾರಿಕೆಯನ್ನು ತೋರಿಸಿದೆ. ಸಮಚಿತ್ತ, ಸಂಯಮದಿಂದ ವಸ್ತುವನ್ನು ನಿರ್ವಹಿಸಲಾಗಿದೆ. ಎಲ್ಲಿಯೂ ಭಾವೋದ್ರೇಕಗಳಿಲ್ಲ; ಅದರ ಅಗತ್ಯವೂ ಬೇಕಿಲ್ಲ. ವೈಚಾರಿಕತೆ, ಸೂಕ್ಷ್ಮಸಂವೇದನಾಶಕ್ತಿ, ವಾಸ್ತವಗಳ ಮೂಲಕ ರವಿ ಹಂಜ್ ಅವರು ಸದಭಿರುಚಿಯ ಲೇಖಕರೆಂದು ತೋರುತ್ತ ತಮ್ಮ ವಿಡಂಬನಾ ಶೈಲಿಯನ್ನು ಅಷ್ಟೇ ತಣ್ಣಗೆ ನಿರ್ವಹಿಸಿದ್ದಾರೆ. ಪಾತ್ರನಿರ್ವಹಣೆ, ಸಂಭಾಷಣೆಯ ಕೌಶಲ್ಯ, ಭಾಷಾಪ್ರಯೋಗ, ಜೀವನಸತ್ಯಗಳು ಮೇಲ್ತರಗತಿಯಲ್ಲಿವೆ. ಇಂದು ಏನಾದರೂ ಸಾಧಿಸಲು ಹೊರಟವರಿಗೆ ಪಲಾಯನ ಮಾಡಿಸಲು ದುರ್ವ್ಯವಸ್ಥೆ ಬೇರುಬಿಟ್ಟು ಕಾದು ಕುಳಿತಿದೆ. ಇಂತಹ ಚಕ್ರವ್ಯೂಹದಲ್ಲಿಯೂ ಇಂತಹ ಕಥಾವಸ್ತುವನ್ನಿಟ್ಟುಕೊಂಡು ಕೃತಿ ರಚಿಸಿದ ರವಿ ಹಂಜ್ ಅವರನ್ನು ನಾನು ಕನ್ನಡದ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕರ್ಮ, ಧರ್ಮ, ಮೋಕ್ಷ, ಸ್ವರ್ಗ, ನರಕ, ಪಾಪಪುಣ್ಯಗಳಲ್ಲಿ ಮಿಂದೇಳುವ ಮನುಷ್ಯನ ತಳಮಳವನ್ನು ಕಾದಂಬರಿಯ ಅಂತ್ಯ ಚೆನ್ನಾಗಿ ದುಡಿಸಿಕೊಂಡಿದೆ. ಆತ್ಮವನ್ನು ಉದ್ಧಾರಕ್ಕಾಗಿ ಚೆನ್ನಾಗಿ ಬಳಸಿಕೊಂಡ ಅನಂತರ ಬುದ್ಧಿಯ ವ್ಯವಹಾರದಲ್ಲಿ ಸಿಲುಕಿ ನಲುಗುವಂತಾಗುವ ಸ್ಥಿತಿಯದು. ತುಂಬಾ ಸಂಕೀರ್ಣವೂ ಮೂಲಭೂತವೂ ಆದ ನಮ್ಮ ದೇಶದ ಇತ್ತೀಚಿನ ವಿಶಿಷ್ಟ ವಸ್ತುವೊಂದರ ನಿರೂಪಣೆ ಈ ಕೃತಿಯಲ್ಲಿರುವುದು ವಿಶೇಷ.

ಪೂರ್ಣಚಂದ್ರ ತೇಜಸ್ವಿಯವರ 'ಚಿದಂಬರ ರಹಸ್ಯ', 'ಕರ್ವಾಲೋ', 'ಜುಗಾರಿ ಕ್ರಾಸ್', ಮತ್ತು 'ಮಾಯಾಲೋಕ' ಕೃತಿಗಳು ಹೇಗೆ ಓದುಗರಲ್ಲಿ ಇವುಗಳ ಮುಂದುವರಿದ ಭಾಗಗಳು ಬರಬಹುದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕುತ್ತವೆಯೋ ಅಂತಹುದೇ ಅಂತ್ಯದ ತಂತ್ರಗಳನ್ನು ಶ್ರೀಯುತ ಹಂಜ್ ಅವರ 'ಅಗಣಿತ ಅಲೆಮಾರಿ', 'ರ ಠ ಈ ಕ' ಕೃತಿಗಳಲ್ಲದೇ ಈ ನೂತನ ಕೃತಿಯಲ್ಲಿಯೂ ಕಾಣಬಹುದಾಗಿದೆ. 

ಲೇಖಕನೊಬ್ಬ ನಿಜವಾಗಿ ನೀಡಬೇಕಾದ ಕೊಡುಗೆಯಾಗಿ ಈ ಕೃತಿಯಿದೆ. ಸಮಾಜದ ಅನೀತಿಯನ್ನು ನೋಡಿದಾಗ ಬರೆಯಬೇಕೆನಿಸುತ್ತದೆ. ಆದರೆ ಕೆಲವರಿಗೆ ಬರೆಯಲು ಕೈ, ಹೃದಯ ದುರ್ಬಲವಾಗಿಬಿಡುತ್ತವೆ. ಆದರೆ ರವಿಯವರು ಇದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಏಕೋ ಏನೋ ಜಿ.ಎಸ್. ಶಿವರುದ್ರಪ್ಪನವರೇ ಮತ್ತೆ ನೆನಪಾಗುತ್ತಿದ್ದಾರೆ:

"ಕಾವಿಯೊಳಗೇ ಕೋವಿಯೆದ್ದು

ತನ್ನನ್ನು ತಾನೇ ಕೊಂದುಕೊಂಡದ್ದ ಕಂಡೆ.

ದೊಡ್ಡ ಪೀಠಗಳ ಮೇಲೆ ಸಣ್ಣಜನ

ಇಲಿ ಹೆಗ್ಗಣಗಳಾಗಿ ಹರಿದಾಡಿದ್ದ ಕಂಡೆ"

- ಡಾ. ಮಹೇಂದ್ರಮೂರ್ತಿ ದೇವನೂರು.

ವಿಮರ್ಶಕರು, ಮೈಸೂರು.

No comments:

Post a Comment