ಬಸವ ಜಯಂತಿ ೨೦೨೪

 ಅನ್ಯಾಯದ ವಿರುದ್ಧ ಜಗತ್ತಿನಾದ್ಯಂತ ಜನಸಾಮಾನ್ಯರು ಒಂದು ಕಾಲಘಟ್ಟದಲ್ಲಿ ಸಂಘಟಿತರಾಗಿ ಎದ್ದು ನಿಂತದ್ದು ಧರ್ಮದ ಛಾಯೆಯಲ್ಲಿ! ಭಾರತ ಜನನಿಯ ಭಕ್ತಿಪಂಥವೂ, ತನುಜಾತೆ ಕರ್ನಾಟಕದ ವಚನ ಚಳುವಳಿಯೂ ಇದಕ್ಕೆ ಹೊರತಾಗಿರಲಿಲ್ಲ.

ಹಾಗಾಗಿಯೇ ಕಾರ್ಲ್ ಮಾರ್ಕ್ಸ್ ಹೇಳಿದ್ದು: "ಧರ್ಮ ಎಂಬುದು ಸಾಮಾನ್ಯರ ಅಫೀಮು. ಅದು ಭರವಸೆಯೇ ಇಲ್ಲದವರ ಭರವಸೆಯಾಗಿ, ಬೇಗುದಿಗರ ಬೇಗುದಿಯಾಗಿ, ಆತ್ಮಚೈತನ್ಯವಿಲ್ಲದವರ ಆತ್ಮವಾಗಿದೆ;

ಅದನ್ನು ನೀವು ಬದಲಿಸಬೇಕೆಂದು ಆಲೋಚಿಸುವುದಾದರೆ ಅದರ ಪರ್ಯಾಯವು ಸಹ ಜನರಿಗೆ ಧರ್ಮ ನೀಡಿರುವ ಭರವಸೆಯನ್ನೇ ನೀಡಬೇಕಾಗುತ್ತದೆ."

ಇಲ್ಲಿ ಇಲ್ಲದ ಆದರೆ ಇರಲೇಬೇಕಾದ ಎಚ್ಚರಿಕೆಯನ್ನು ನಾವು ಇತಿಹಾಸದಿಂದ ಕಲಿಯಬಹುದು! ಅದು, ಜನರ ಅಂತಹ ಭರವಸೆಗೆ ಕಿಂಚಿತ್ ಮುಕ್ಕಾದರೂ....ದಾರುಣ ಸೋಲು ಕಟ್ಟಿಟ್ಟ ಬುತ್ತಿ, ಎಂಬುದು.

ಇಂತಹ ಯಾವ ವಚನ ಚಳುವಳಿಯ ಪೂರ್ವಾರ್ಧದಲ್ಲಿ ಹಿರಿಯರನ್ನು, ಪುರಾತನರನ್ನು ವಚನಕಾರರು ಹಾಡಿ ಹೊಗಳಿದ್ದರೋ ಅದೇ ಹಿರಿಯರನ್ನು, ಪುರಾತನರನ್ನು ವಚನ ಚಳುವಳಿಯ ಉತ್ತರಾರ್ಧದಲ್ಲಿ ಭ್ರಮನಿರಸನಗೊಂಡು ಹೀನಾಯವಾಗಿ ಹೀಯಾಳಿಸಿದ್ದಾರೆ. ಅದೇ ರೀತಿ ಕಲ್ಯಾಣ ಕ್ರಾಂತಿಯ ನಂತರ ಕೂಡ ಬಸವಭ್ರಮನಿರಸನಗೊಂಡು ಮಾಚಿದೇವನಲ್ಲದೆ ಇನ್ನೂ ಹಲವು ವಚನಕಾರರು ಇಂತಹ ಕೆಲವು ವಚನಗಳನ್ನು ರಚಿಸಿದ್ದಾರೆ.

ಬಸವಾಧಿಪತ್ಯದಿಂದ ಬಸವಧಃಪತನದ ಸೋಪಾನುಪಾತವನ್ನು ಮಾಚಿದೇವನ ಈ ಎರಡು ವಚನಗಳು ಕಟ್ಟಿಕೊಡುತ್ತವೆ.

೧. 

ಅರಿದಲ್ಲದೆ ಗುರುವ ಕಾಣಬಾರದು.

ಅರಿದಲ್ಲದೆ ಲಿಂಗವ ಕಾಣಬಾರದು.

ಅರಿದಲ್ಲದೆ ಜಂಗಮವ ಕಾಣಬಾರದು.

ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ

ಎನಗೆ ಸ್ವಾಯತವಾಯಿತ್ತಾಗಿ,

ಭಿನ್ನವಿಲ್ಲ ಕಾಣಾ ಕಲಿದೇವರದೇವ.

೨.

ಹಣದಾಸೆಗೆ ಹದಿನೆಂಟುಜಾತಿಯ ಭಕ್ತರ ಮಾಡಿ,

ಲಿಂಗವ ಕೊಟ್ಟು ಲಿಂಗದ್ರೋಹಿಯಾದ.

ಪ್ರಸಾದವ ನೀಡಿ ಪ್ರಸಾದದ್ರೋಹಿಯಾದ.

ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕಕ್ಕೊಳಗಾದ.

ಇಂತೀ ಹೊನ್ನ ಹಂದಿಯ ಕೊಂದು,

ಬಿನ್ನಾಣದಲ್ಲಿ ಕಡಿದುತಿಂಬ ಕುನ್ನಿಗಳನೇನೆಂಬೆನಯ್ಯಾ,

ಕಲಿದೇವರದೇವ.

"ದ್ರೋಹಿಯಾದ", "ಮಹಾಪಾತಕಕ್ಕೊಳಗಾದ" ಎಂಬ ಏಕವಚನದ ಪದಗಳು ಇಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯ ಕುರಿತಾಗಿವೆ. 

ಕಾರ್ಲ್ ಮಾರ್ಕ್ಸ್ ಮಾತಿನ ಒಂದು ವಾಕ್ಯವನ್ನು ಮಾತ್ರ ಹೆಕ್ಕಿದ ಬುದ್ಧಿವಂತರಂತೆಯೇ ವಚನಗಳು ಸಹ ಅವರವರ ಅನುಕೂಲಕ್ಕೆ ಹೆಕ್ಕಲ್ಪಟ್ಟಿವೆ. 

ಇತಿ ಬಸವರಾಜಕಾರಣ ಸಂಪ್ರತಿ!

ರಜೆಯ ಮಜೆಯ ಶುಭಾಶಯಗಳು!

- ರವಿ ಹಂಜ್ 

No comments:

Post a Comment