ಕೋವಿಡ್ ವ್ಯಾಕ್ಸಿನ್ನುಗಳ "ಉಪ"ದ್ರವಗಳು

 ಅಮೇರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಪ್ರಕಾರ ಈವರೆಗಿನ ಎಲ್ಲಾ ಕಂಪೆನಿಗಳ ಕೋವಿಡ್ ವ್ಯಾಕ್ಸಿನ್ನುಗಳ "ಉಪ"ದ್ರವಗಳು ಹೀಗಿವೆ:

ಅನಾಫಿಲ್ಯಾಕ್ಸಿಸ್: ಉರಿಯೂತ ಅಲರ್ಜಿ. ಇದು ಕೇವಲ ಕೋವಿಡ್ ಅಲ್ಲದೆ ಎಲ್ಲಾ ರೀತಿಯ ವ್ಯಾಕ್ಸಿನ್ನುಗಳಿಗೂ ಅನ್ವಯ.
ಗಿಲಿಯನ್ ಬಾರ್ ಕುರುಹು : ಸ್ನಾಯು ಸೆಳೆತ, ಪಾರ್ಶ್ವವಾಯು. ಸಾಮಾನ್ಯವಾಗಿ ಐವತ್ತಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಕಂಡಿದೆ. ಇದು ಫೈಝರ್ ಅಥವಾ ಮೋಡರ್ನಾ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಕಂಡಿದೆ.
ಮೈಯೋಕಾರ್ಡೈಟಿಸ್ ಮತ್ತು ಪೆರಿಕಾರ್ಡೈಟಿಸ್ ಕುರುಹು: ಹೃದಯದ ತೊಂದರೆ. ಹದಿನೆಂಟರಿಂದ ಮೂವತ್ತು ವಯಸ್ಸಿನ ಒಳಗಿನವರಲ್ಲಿ ಕಂಡಿದೆ. ಇದು ಮೋಡರ್ನಾ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಕಂಡಿದೆ.
ತ್ರಾಂಬಾಸಿಸ್ ತ್ರಾಂಬೋಸೈಟೋಪೆನಿಯಾ ಕುರುಹು: ದೊಡ್ಡ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ,
ಪ್ಲೇಟ್ಲೆಟ್ಸ್ ಕ್ಷೀಣವಾಗುವುದು. ಇದು ಜೆ ಅಂಡ್ ಜೆ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಕಂಡಿದೆ.
ಈಗ ಈ ತ್ರಾಂಬಾಸಿಸ್ ಕುರುಹೇ ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಕಂಡಿರುವುದು ಮತ್ತು ಅದನ್ನು ಆಸ್ಟ್ರಾಜೆನಿಕಾ ಒಪ್ಪಿಕೊಂಡಿರುವುದು. ಮಾನ್ಯತೆ ಸಿಕ್ಕ ಮೊದಲ ವರ್ಷ ಎರಡು ಶತಕೋಟಿ ವ್ಯಾಕ್ಸಿನ್ನುಗಳನ್ನು ಆಸ್ಟ್ರಾಜೆನಿಕಾ ಹಂಚಿದೆ. ಈಗ ಸದ್ಯಕ್ಕೆ ಐವತ್ತೊಂದು ಜನರು ದಾವೆ ಹೂಡಿದ್ದಾರೆ.
ಇನ್ನು ಈ ಎಲ್ಲಾ ಕುರುಹುಗಳೂ ವ್ಯಾಕ್ಸಿನ್ ಹಾಕಿಸಿಕೊಂಡ ಹತ್ತು ಲಕ್ಷ ಜನರಲ್ಲಿ ಐದರಿಂದ ಹತ್ತರಷ್ಟು ಜನರಿಗೆ ಅಡ್ಡ ಪರಿಣಾಮವಾಗಿ ಕಾಣಿಸಿಕೊಂಡಿವೆ ಮತ್ತು ವ್ಯಾಕ್ಸಿನ್ ಹಾಕಿಸಿಕೊಂಡ ಕೆಲ ವಾರಗಳಲ್ಲೇ ಅಂಥವರಲ್ಲಿ ಕಾಣಿಸಿಕೊಂಡಿವೆ. ನಿಮಗೆ ಇಂತಹ ಲಕ್ಷಣಗಳು ಕಂಡಿಲ್ಲ ಎಂದರೆ ನೀವು ಭಯಪಡುವ ಅಗತ್ಯವಿಲ್ಲ.
ಹೀಗಿದ್ದರೂ ಭಯಪಡದೆ ಇವೆಲ್ಲವನ್ನೂ ಮೀರಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಅಮೇರಿಕಾದ ಸಿಡಿಸಿ ಕರೆ ಕೊಟ್ಟಿದೆ. ಹೀಗೆಯೇ ಪ್ರಪಂಚದ ಬಹುಪಾಲು ದೇಶಗಳು ವ್ಯಾಕ್ಸಿನ್ ಅನ್ನು ಅಲಿಖಿತವಾಗಿ ಕಡ್ಡಾಯಗೊಳಿಸಿವೆ. ಅದನ್ನೇ ಭಾರತ (ಮೋದಿ ಅಲ್ಲದೆ ಖರ್ಗೆ ಇದ್ದರೂ) ಸಹ ಮಾಡಿದೆ.
ನನ್ನ ವೈಯಕ್ತಿಕ ಆರೋಗ್ಯ ಮತ್ತು ನನ್ನ ಸಾಮಾಜಿಕ ಚಟುವಟಿಕೆಗಳಾದ ಪ್ರಯಾಣ, ಪಾರ್ಟಿ, ಮದುವೆ, ಮನರಂಜನೆಯಂತಹ ಕಾರ್ಯಕ್ರಮಗಳಲ್ಲಿ ಸಮಾಜಜೀವಿಯಾಗಿ ವ್ಯಾಕ್ಸಿನ್ ಕಾರ್ಡು ತೋರಿಸಿ ಸಮಾಜದಲ್ಲಿ ಬೆರೆಯಲೇಬೇಕಾದ ದರ್ದು ಇದ್ದ ನಾನು ಯಾವುದೇ ಹೆಚ್ಚಿನ ಪ್ರಯೋಗವಿರದೆ ಮಾರುಕಟ್ಟೆಗೆ ಬಂದ ಫೈಝರ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇನೆ. ಅಡ್ಡ ಪರಿಣಾಮವಾಗಿದ್ದರೆ ನನ್ನ ದೇಶದ ಕಾನೂನಿನ ಅನ್ವಯ ದಾವೆ ಹೂಡಿ ಪರಿಹಾರ ಪಡೆಯುತ್ತಿದ್ದೆ.
ವಿರಳಾತಿ ವಿರಳವನ್ನು ಅತಿ ಸಾಮಾನ್ಯ ಎಂದುಕೊಂಡು ತಲೆಗಿಂತ ತರಡನ್ನು ದಪ್ಪ ಮಾಡಿಕೊಂಡು ಕೈಯಲ್ಲಿ ಹಿಡಿದು ಚಿಂತಾಕ್ರಾಂತನಾಗಲಾರೆ.
ಏಕೆಂದರೆ ವ್ಯಾಕ್ಸಿನ್ ಅಡ್ಡ ಪರಿಣಾಮಕ್ಕಿಂತ ಕರೋನಾ ಬಂದು ಹೋದ ನಂತರ ಅದರ ಅಡ್ಡ ಪರಿಣಾಮದಿಂದ ಹೆಚ್ಚು ಜನರಲ್ಲಿ ಹೃದಯಾಘಾತ, ಪಾರ್ಶ್ವವಾಯು, ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿಸುವಿಕೆ ಕಂಡುಬಂದಿದೆ.
ಉಳಿದಂತೆ ನಿಮ್ಮ ನಿಮ್ಮ ವಿವೇಚನೆ.

No comments:

Post a Comment