ಸುದ್ಧವೋ ಆಸುದ್ಧವೋ....ನಾ ಕಾಣೆ ದೇವನೇ!

ಸುದ್ಧವೋ ಆಸುದ್ಧವೋ....ನಾ ಕಾಣೆ ದೇವನೇ!


ಶುದ್ಧ ಕನ್ನಡ ಎಂಬುದನ್ನು ಲಘು ವ್ಯಾಖ್ಯಾನದಲ್ಲಿ ಹೇಳುವುದಾದರೆ ಸ್ಪಷ್ಟ ಉಚ್ಚಾರಣೆ, ವ್ಯಾಕರಣಬದ್ದ ವಾಕ್ಯರಚನೆ, ಕಾಗುಣಿತ ತಪ್ಪಿಲ್ಲದ ಬರವಣಿಗೆ ಮತ್ತು ಶಿಷ್ಟತೆಯ ಪರಿಧಿಯೊಳಗಿನ ಕನ್ನಡ ಭಾಷಾ ಬಳಕೆ ಎನ್ನಬಹುದು. ಇದು ಹೀಗ್ಹೀಗೆ ಎಂದು ಗೆರೆ ಕೊರೆದು ವಿಂಗಡಿಸುವ ಭಾಷಾ ಸಂಹಿತೆ ಏನೂ ಇಲ್ಲ. ಹಾಗೇನಾದರೂ ಸಂಹಿತೆ ಎನ್ನುವುದು ಇದ್ದರೆ ಅದು ಸೆನ್ಸಾರ್, ಸಂವಿಧಾನಿಕ, ಸಾಮಾಜಿಕ ಜವಾಬ್ದಾರಿ ಪರಿಧಿಯಲ್ಲಿ ಇದೆಯೇ ಹೊರತು ಯಾವುದೇ ಭಾಷೆಯ ಬಳಕೆಗೆ ಎಂದಿಲ್ಲ ಎಂದುಕೊಂಡಿದ್ದೇನೆ. ಹಾಗಾಗಿಯೇ ಸಾಹಿತ್ಯಿಕವಾಗಿ ಸಭ್ಯ, ಅಸಭ್ಯ, ಪ್ರಾದೇಶಿಕ, ಜಾಗತಿಕ ಭಾಷಾ ಪ್ರಯೋಗ ಜೀವಂತಿಕೆಯಿಂದ ಕೂಡಿದೆ.


ಇತ್ತೀಚೆಗೆ ಇಂತಹ ಸಭ್ಯತೆಯ ಭಾಷೆಯ ಬಳಕೆಯನ್ನು ಕನ್ನಡ ಚಿಂತಕರು ಎಂಬ ಸ್ವಘೋಷಿತ ಗುಂಪುಗಳು ಶುದ್ಧ ಕನ್ನಡ ಎಂಬುದು ಕ್ಯಾನ್ಸರ್. ಇದು ಬ್ರಾಹ್ಮಣ್ಯ. ಇದು ದ್ರಾವಿಡರ ಮೇಲಿನ ಆರ್ಯರ ಹೇರಿಕೆ. ಮೇಲರಿಮೆಯ ಹೇರಿಕೆ ಇತ್ಯಾದಿಯಾಗಿ ಅವರವರ ಶೈಕ್ಷಣಿಕ ಮತ್ತು ಅರಿವಳಿಕೆಯ ಮಿತಿಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.  ಆರ್ಯ, ದ್ರಾವಿಡ, ಬ್ರಾಹ್ಮಣ್ಯ ಇತ್ಯಾದಿ ಇಸಂ, ಪಂಥನೀತಿಗಳ "Brainwashed" ಎನ್ನುವ ಕಾರಣ ಇಲ್ಲಿ "ಅರಿವಳಿಕೆ" ಎಂದಿದ್ದೇನೆ ಎನ್ನುವುದು ಒಂದು ಸ್ಥಿತಪ್ರಜ್ಞ ಸ್ಪಷ್ಟನೆ.


ಜಗತ್ತಿನ ಎಲ್ಲಾ ಭಾಷೆಗಳೂ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕವೇ ವಿಕಾಸಗೊಂಡಿವೆ. ಹಾಗೆಂದು ಈವರೆಗಿನ ಎಲ್ಲಾ ಭಾಷಾ ವಿಕಾಸ ಕುರಿತಾದ ಸಂಶೋಧನೆಗಳು ಹೇಳಿವೆ. ಇದಕ್ಕೆ ಭಾರತದ ಯಾವುದೇ ಭಾಷೆ ಸಹ ಹೊರತಲ್ಲ. ಹಾಗಾಗಿ ಕನ್ನಡವು ಸಂಸ್ಕೃತದಿಂದ ಮತ್ತು ಸಂಸ್ಕೃತವು ಕನ್ನಡದಿಂದ ಪದಗಳನ್ನು ಪಡೆದುಕೊಂಡಿವೆ.  ಭಾರತೀಯ ಭಾಷೆಗಳಷ್ಟೇ ಅಲ್ಲ, ಇಂಗ್ಲಿಷ್ ಸಹ ಸಂಸ್ಕೃತ ಪದಗಳನ್ನು ಬಳಸಿಕೊಂಡೇ ವಿಕಾಸಗೊಂಡಿದೆ. ಉದಾಹರಣೆಗೆ, mother ಮಾತಾರ್, father ಪಿತಾರ್, brother ಭ್ರಾರ್ತಾರ್!


ಒಟ್ಟಾರೆ ಸರ್ವಜ್ಞನ ನುಡಿಯಂತೆ, 


ಸರ್ವಜ್ಞನೆಂಬುವನು ಗರ್ವದಿಂದಾದವನೆ? ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ!


ಎಂಬಂತೆ ಜಗತ್ತಿನ ಎಲ್ಲ ಭಾಷೆಗಳೂ ವಿಕಾಸವಾಗಿವೆ ಎಂಬುದು ಸತ್ಯ. ಇಲ್ಲಿ ಗರ್ವ ಪಡುವ ಅಥವಾ ನಾಚಬೇಕಾದ ಯಾವ ಸಂಗತಿಯೂ ಇಲ್ಲ. ನಮ್ಮ ನಿಮ್ಮ ಮಿಶ್ರಿತ ವಂಶವಾಹಿಯಷ್ಟೇ ನಮ್ಮ ಭಾಷಾ ವಂಶವಾಹಿ ಸಹ ಮಿಶ್ರಿತ.


ಇನ್ನು ಈ ಶುದ್ಧಭಾಷಾ ಪ್ರಯೋಗ ಬ್ರಾಹ್ಮಣ್ಯ/ಆರ್ಯ/ಸಂಸ್ಕೃತದ ಹೇರಿಕೆ ಎನ್ನುವ ಈ ಅರಿವಳಿಕೆ ತಜ್ಞರ ಅಭಿಪ್ರಾಯವನ್ನು ಒಪ್ಪಿ ಇದು ಸತ್ಯವೇ ಎಂದು ವಿಚಾರ ಮಾಡೋಣ. ಹಾಗಾಗಿ ಕನ್ನಡವಲ್ಲದೆ ಎಲ್ಲಾ ಭಾರತೀಯ ಭಾಷೆಗಳನ್ನು ಬಿಟ್ಟು ಸಂಸ್ಕೃತ/ಬ್ರಾಹ್ಮಣ್ಯದ ಪ್ರಭಾವವಿರದ ವಿದೇಶಿ ಭಾಷೆಯಾದ ನಾವು ನೀವೆಲ್ಲ ಬಲ್ಲ ಬ್ರಾಹ್ಮಣ್ಯರಹಿತ ಇಂಗ್ಲಿಷ್ ಭಾಷೆಯನ್ನು ಪರಿಗಣಿಸೋಣ. ಬೇರೆ ಭಾಷೆಯ ಉದಾಹರಣೆ ಕೊಡಬಲ್ಲೆನಾದರೂ ಹೆಚ್ಚಿನ ಜನರು ಅರ್ಥೈಸಿಕೊಳ್ಳಬಹುದಾದ ಭಾಷೆ ಇಂಗ್ಲಿಷ್ ಆದ ಕಾರಣ ಅದನ್ನು ಆಯ್ದುಕೊಳ್ಳೋಣ.


ಓದುಗರೊಬ್ಬರು ಶಿಶ್ನ ಯೋನಿ ಎಂಬ ಸಂಸ್ಕೃತ ಪದಗಳನ್ನು ಶುದ್ಧ ಎಂದು ನಮ್ಮ ಕನ್ನಡದ ಪದಗಳಾದ ತು ತು ಪದಗಳನ್ನು ಅಶುದ್ಧ ಎನ್ನುತ್ತಾರೆ. ನಾವೇಕೆ ಅವುಗಳನ್ನು ಬಳಸಬಾರದು ಎಂದು ಪ್ರಶ್ನಿಸಿದ್ದರು. ಆದರೆ ಅವರೇ ಆ ಪದಗಳನ್ನು ಪೂರ್ತಿ ಬರೆಯದೇ ತು ತು ಎಂದು ಬಳಸಿದ್ದರು. ಪಾಪ, ಅವರ ಮೇಲೆ ಅಷ್ಟರ ಮಟ್ಟಿಗೆ ಬ್ರಾಹ್ಮಣ್ಯ ಹೇರಿಕೆಯಾಗಿದೆ. ಇರಲಿ, ಈ ಇಂಗ್ಲಿಷಿನಲ್ಲಿ ಸಹ ಭಾಷಾ ಶುದ್ಧತೆಯ ಪರಿಧಿಯಲ್ಲಿ pennis, ಮತ್ತು vagina ಎಂದು ಬಳಸುತ್ತಾರೆಯೇ ಹೊರತು dick, pussy ಮತ್ತಿತರೆ ಅಂಗ್ರೇಜಿ ನೆಲಮೂಲ ಪದಗಳಿಂದಲ್ಲ. ಏಕೆಂದರೆ pennis, vagina ಸಭ್ಯ ಎಂದೂ dick pussy ಅಸಭ್ಯ ಎಂದು ಅಲ್ಲಿಯೂ ವಿಂಗಡನೆಯಾಗಿಬಿಟ್ಟಿದೆ. ಇದೇ ರೀತಿ ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಸಭ್ಯ/ಅಸಭ್ಯ ಎಂಬ ಪದ ವಿಂಗಡನೆ ಇದೆ. ಹಾಗಾಗಿ ಇಲ್ಲಿ ಸಭ್ಯತೆ ಎಂಬುದು ಬ್ರಾಹ್ಮಣ್ಯವೇ?


ಇನ್ನು there their, liar lawyer, ಕೃತಜ್ಞ ಕೃತಘ್ನ, ಆಸನ ಹಾಸನ ಇತ್ಯಾದಿಯಾಗಿ ಒಂದೇ ರೀತಿಯ ಆದರೆ ಕಾಗುಣಿತ ಮತ್ತು ಉಚ್ಚಾರಣೆಯಲ್ಲಿ ಸೂಕ್ಷ್ಮ ವ್ಯತ್ಯಾಸ ಇರುವ ಪದಗಳೂ ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಸಾಕಷ್ಟಿವೆ. ಅವುಗಳಂತೆಯೇ ಕನ್ನಡವು ಸಹ ಅಲ್ಪಪ್ರಾಣ ಮಹಾಪ್ರಾಣ ಪದಗಳನ್ನು ಪಡೆದುಕೊಂಡು ಭಾಷಾಶ್ರೀಮಂತವಾಗಿರಬಹುದಲ್ಲವೇ! ಹಾಗಿದ್ದರೆ ಅಂತಹ ಭಾಷಾ ವಿಕಾಸವನ್ನು ಧಿಕ್ಕರಿಸಬೇಕೆ?


ಇರಲಿ, ಸಂವಿಧಾನವನ್ನು ಗುರಾಣಿ ಮಾಡಿಕೊಂಡು ಪಂಥಕತ್ತಿಯಿಂದ ಇರಿಯುವ ಭಾರತೀಯ ಅರಿವಳಿಕೆ ಚಿಂತಕರ ಶುದ್ಧತೆಯ ಕ್ಯಾನ್ಸರ್ ನೋಡಿದರೆ, ಭಾರತೀಯ ಪ್ರಜಾಪ್ರಭುತ್ವದ ಅಂಬೇಡ್ಕರ್ ವಿರಚಿತ ಸಂವಿಧಾನದ ಸಂಸತ್ತು, ವಿಧಾನಸಭೆ ಮತ್ತಿತರೆ ಶಾಸನಸಭೆಗಳಲ್ಲಿ "ಅಸಂವಿಧಾನಿಕ ಪದ" ಗಳು ಕಡತಕ್ಕೆ ಹೋಗದಂತೆ ಅಥವಾ ತೆಗೆದು ಹಾಕುವಂತೆ ಏಕೆ ಅನುಸೂಚಿ ಇದೆ?!?! ಅದು ಬ್ರಾಹ್ಮಣ್ಯದ ಹೇರಿಕೆಯಲ್ಲವೇ? ಅವರ ಗುರಾಣಿಯನ್ನೇ ತೂತು ಕೊರೆದು ತೂರಿಬಿಟ್ಟಿದೆ ಬ್ರಾಹ್ಮಣ್ಯ!


ಸದ್ಯ, ನಮ್ಮ ಅದೃಷ್ಟಕ್ಕೆ ಈ ಅರಿವಳಿಕೆ ತಜ್ಞರ ಗುರುಮಾನ್ಯರೆಂದೇ ಖ್ಯಾತಿ ಹೊತ್ತ ಪ್ರೊಫೆಸರರು ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಪ್ರೊಫೆಸರರ ಆರಾಧ್ಯದೈವವಾಗಿರುವ ವ್ಯಕ್ತಿಯೇ ಮುಖ್ಯಮಂತ್ರಿಯೂ ಆಗಿದ್ದಾರೆ. ಅವರನ್ನು ಹೊಗಳಿ ಹೊಗಳಿಯೇ ಇವರು ಸ್ಥಾನವನ್ನು ಗಳಿಸಿದ್ದಾರೆ ಎಂಬುದೂ ಜಾಗತಿಕ ಸತ್ಯ. ಅದಕ್ಕೆ ಇವರ ಚಿಂತಕ ಸಮಾಜ ಸಹ ತನುಮನದಿಂದ ಬೆಂಬಲಿಸಿದೆ! ಮೇಲಾಗಿ ಅವರು ಕನ್ನಡ ಭಾಷಾ ವಿದ್ವಾನರು ಸಹ. ಹಾಗಾಗಿ ಕನ್ನಡದ ಈ ಜ್ವಲಂತ ಶುದ್ಧ ಅಶುದ್ಧ ವಿವಾದವು ಅವರ ಪ್ರಪ್ರಥಮ ಆದ್ಯತೆಯಾಗಬೇಕು. ಏಕೆಂದರೆ ನೆಲಮೂಲ ದ್ರಾವಿಡ ಪದಗಳು ಅಸಂವಿಧಾನಿಕ ಶೂದ್ರಪದಗಳೆಂದು ಕಡತಕ್ಕೆ ಸೇರದೆ ಅಸ್ಪೃಶ್ಯತೆಯ ಹೇರಿಕೆಯಲ್ಲಿ ನಲುಗುತ್ತಿವೆ. ಈ ಭಾಷಾ ಬ್ರಾಹ್ಮಣ್ಯ ಹೇರಿಕೆ ಹೇಗೋ ಏನೋ ಸಾಂವಿಧಾನಿಕವಾಗಿ ನುಸುಳಿ ಅಪ್ಪಟ ಕನ್ನಡ ಪದಗಳನ್ನು ಸಾಂವಿಧಾನಿಕವಾಗಿ ಕೊಲ್ಲುತ್ತಿದೆ.


ಆದರೆ ನಮ್ಮ ಘನವೆತ್ತ ಪ್ರಾಧಿಕಾರದ ಅಧ್ಯಕ್ಷರೋ ತಾವು ಪ್ರಯಾಣಿಸುವಾಗ ಯಾವ ಊರು ಬಂತು ಎಂದು ಇತ್ತೀಚೆಗೆ ಗೊತ್ತಾಗುತ್ತಿಲ್ಲ. ಏಕೆಂದರೆ ಜನರು ತಮ್ಮ ಊರಿನ ಹೆಸರನ್ನು ತಮ್ಮ ಅಂಗಡಿ ಮುಂಗಟ್ಟುಗಳ ಬೋರ್ಡುಗಳ ಮೇಲೆ ಬರೆಸುತ್ತಿಲ್ಲ ಎಂದು ಪೆಂಡಾಲ್ ಹಾಕಿಕೊಂಡು ಖುದ್ದು ಬೋರ್ಡು ಬರೆಯುವ ಕಾಯಕದಲ್ಲಿ ತೊಡಗಿದ್ದಾರೆ. ಈ ಕಾಯಕದ ಉಪಸಂಶೋಧನೆಯಾಗಿ ಸ್ವಾತಂತ್ರ್ಯಪೂರ್ವದಲ್ಲಿ ವ್ಯಕ್ತಿಯ ಹೆಸರಿನ ಊರುಗಳು ಇದ್ದಿಲ್ಲ ಎಂದೂ ಮಂಡಿಸಿದ್ದಾರೆ. ಆದರೆ ಅವರು ತಕ್ಷಣಕ್ಕೆ ಊರು ಸುತ್ತಿ ಬೋರ್ಡು ಬರೆಯುವ ತಮ್ಮ ಕಾಯಕವನ್ನು ಖೈದು ಮಾಡಿ ತಮ್ಮ ಆಪ್ತ ಬೆಂಬಲಿಗ ಅಲ್ಪಪ್ರಾಣಿಗಳಿಗೆ ಪ್ರಾಣ ತುಂಬುವ ಕಾರ್ಯದಲ್ಲಿ ಕಿಂಕರ್ತವ್ಯಮೂಢರಾಗಿ ತೊಡಗಬೇಕು. ಇಲ್ಲದಿದ್ದರೆ ಅಲ್ಲಿಯವರೆಗೆ ಅಲ್ಪಪ್ರಾಣದ ಜನ ಉಳಿದಾರೆಯೇ?!?


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment