ವಿಶ್ವವಾಣಿ ಬಸವ ಮಂಟಪ - ವಚನಗಳು ಮಾತ್ರ ಲಿಂಗಾಯತ ಧರ್ಮಗ್ರಂಥಗಳಲ್ಲ

 ಲಿಂಗಾಯತ ಸ್ವತಂತ್ರ ಧರ್ಮ ಎನ್ನುವ ಕೂಗನ್ನು ಒಪ್ಪಿ ಲಿಂಗಾಯತವನ್ನು ಹಿಂದೂ ಮತ್ತು ವೀರಶೈವ ಎರಡರಿಂದಲೂ ದೂರವಿಟ್ಟು ಅದನ್ನು ಸ್ವತಂತ್ರ ಧರ್ಮ ಎಂದೇ ಈಗೊಮ್ಮೆ ವಿಶ್ಲೇಷಿಸೋಣ. ಈ ಕೂಗಿಗರು ಹೇಳುವಂತೆ ಇದು ಬಸವ-ಸ್ಥಾಪಿತ ಸ್ವತಂತ್ರ ಧರ್ಮ. ಇದರ ಸಂಸ್ಥಾಪಕ ಬಸವಣ್ಣ ಮತ್ತು ಧರ್ಮಗ್ರಂಥ ವಚನ ಸಾಹಿತ್ಯ ಎನ್ನೋಣ.


ಆದರೆ ಲಿಂಗಾಯತವು ಸ್ಥಾಪಿತಗೊಂಡ ಹನ್ನೆರಡನೇ ಶತಮಾನದ ಶರಣರು ಕೇವಲ ವಚನ ಸಾಹಿತ್ಯವನ್ನಷ್ಟೇ ರಚಿಸಿಲ್ಲ. ಅದು ಪ್ರಮುಖವಾಗಿ ವಚನ ಸಾಹಿತ್ಯ ಮತ್ತು ವಚನೇತರ ಸಾಹಿತ್ಯ ಎಂಬ ಎರಡು ಬಗೆಯ ಸಾಹಿತ್ಯವನ್ನು ಹೊಂದಿದೆ.


ಈ ಧರ್ಮದ ಸಂಸ್ಥಾಪಕರಾಗಲಿ ಅಥವಾ ಅವರು ಬೋಧಿಸಿದ ಧರ್ಮಾನುಷ್ಟಾನವು ವಚನ ಸಾಹಿತ್ಯವನ್ನು ಧಾರ್ಮಿಕ ಗ್ರಂಥ ಅಥವಾ ಧರ್ಮಪಾಲನ ಮಾರ್ಗದರ್ಶಿ ಎಂದು ಎಲ್ಲಿಯೂ ಹೇಳಿಲ್ಲ. ವಚನ ಸಾಹಿತ್ಯವು ಕೇವಲ ಶ್ರೀಸಾಮಾನ್ಯನ ದೈನಂದಿನ ಜೀವನ, ಸಾಮಾಜಿಕ ನೀತಿ, ಕಾಯಕ, ದಾಸೋಹಗಳ ಮಹತ್ವವನ್ನು ತಿಳಿಸುವುದರ ಜೊತೆಗೆ ತಮ್ಮ ಧರ್ಮದ ಮಹಿಮೆ, ಗರಿಮೆ, ಪರಧರ್ಮ ಅವಹೇಳನ, ಸ್ವಧರ್ಮ ವಿಸ್ತರಣೆಯ ಸಾಧನಗಳ ಕುರಿತಾಗಿದೆಯೇ ಹೊರತು ಲಿಂಗಾಯತ ಧರ್ಮದ ಧರ್ಮಾನುಷ್ಟಾನ, ಆಧ್ಯಾತ್ಮಿಕ ಸಾಧನೆಯ ಕುರಿತಲ್ಲ.  ಆ ವಿಷಯಗಳಿಗಾಗಿಯೇ ವಚನೇತರ ಸಾಹಿತ್ಯವಿದೆ. ಹಾಗೆಂದು ವಚನೇತರ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಶರಣರೇ ಹೇಳಿದ್ದಾರೆ.


ಬಸವಣ್ಣ ಮತ ವಿಸ್ತರಣೆ ಕಾಯಕದಲ್ಲಿ ತೊಡಗಿದರೆ, ಚೆನ್ನಬಸವಣ್ಣ ಮತಕ್ಕೆ ಸೇರಿದವರ ಆಚಾರ ವಿಚಾರಗಳನ್ನು ಕ್ರಮಗೊಳಿಸುವ ಕಾರ್ಯವನ್ನು ಕೈಗೊಂಡಿದ್ದನು. ಬಸವಣ್ಣನು ಲಿಂಗವೆಂದು ಕಲ್ಲು ಕಟ್ಟಿಕೊಂಡು ಬಂದವರೆಲ್ಲರಿಗೂ ಅನುಭಾವ ಮಂಟಪಕ್ಕೆ ಪ್ರವೇಶವಿತ್ತಿದ್ದರೆ, ಚೆನ್ನಬಸವಣ್ಣನ ಷಟ್ಸ್ಥಲಮಂದಿರಕ್ಕೆ ಸಾಧನೆಯ ಮಾನ್ಯತೆ ಪಡೆದವರಿಗೆ ಮಾತ್ರ ಪ್ರವೇಶವಿತ್ತು. ಪ್ರಾಣಲಿಂಗಿಯಾದ ಸಿದ್ಧರಾಮನಿಗೂ ಅಲ್ಲಿ ಪ್ರವೇಶವಿರಲಿಲ್ಲ. ರಾಜಯೋಗಿ ಎನಿಸಿದ್ದ ಸಿದ್ಧರಾಮನು ಎಲ್ಲಾ ರೀತಿಯಿಂದ ಪರಿಪೂರ್ಣನಿದ್ದರೂ ಶಿವಯೋಗರಹಸ್ಯ ಅರಿಯದ ಕಾರಣ ಅಲ್ಲಮನಿಂದ ನಿರ್ದಿಷ್ಟನಾಗಿ ಚೆನ್ನಬಸವಣ್ಣನಿಂದ ಸಂಸ್ಕಾರ ಪಡೆದ ನಂತರವೇ ಪ್ರಮಥಗಣ ಮಾಲಿಕೆ ಸೇರಿ ಇಲ್ಲಿಗೆ ಪ್ರವೇಶ ಪಡೆದನು. - ಹೀಗೆಂದು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ವಾಗ್ಮಯ ಶಾಖೆಯು ೧೯೩೪ ರಲ್ಲಿ ಪ್ರಕಟಿಸಿದ "ಚೆನ್ನಬಸವ ಪುರಾಣ"ದ ಪ್ರಸ್ತಾವನೆಯಲ್ಲಿ ಮುರಿಗೆಪ್ಪ ಚೆಟ್ಟಿಯವರು ಬರೆದಿದ್ದಾರೆ.


ಹೀಗೆ ಲಿಂಗಾಯತ ಧರ್ಮಕ್ಕೆ ಸೇರಿದವರು ಷಟ್ಸ್ಥಲಗಳ ಮಜಲುಗಳಾದ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣಗಳನ್ನು ಏರಿ ಅಂತಿಮವಾಗಿ ಐಕ್ಯರಾಗುತ್ತಿದ್ದರು. ಈ ಮಜಲುಗಳನ್ನು ಏರಲು ವಚನೇತರ ಸಾಹಿತ್ಯದ ಅಧ್ಯಯನ ಸಾಧನೆ ಅವಶ್ಯವಿತ್ತು.


ವಚನ ಸಾಹಿತ್ಯವು ಜನಸಾಮಾನ್ಯರ ಸಾಮಾಜಿಕ ಸಾತ್ವಿಕ ಜೀವನ ಕ್ರಮಕ್ಕೆ ಬೇಕಾದ ಕನಿಷ್ಠ ಶಿಕ್ಷಣ ಮಾರ್ಗಸೂಚಿ ಎನಿಸಿದರೆ ಹೆಚ್ಚಿನ ಸಾಧನೆಗೆ ಅನುವಾಗಲು ಸ್ನಾತಕೋತ್ತರ, "ಪೋಸ್ಟ್ ಡಾಕ್ಟೋರಲ್" ಎನ್ನಬಹುದಾದ ವಚನೇತರ ಸಾಹಿತ್ಯ ಕೃತಿಗಳಿವೆ. ಅವು ಕರಣ ಹಸಿಗೆ (ಶಾರೀರಿಕ ವಿಜ್ಞಾನ), ಮಿಶ್ರಾರ್ಪಣ - ಶರಣಸತಿ ಲಿಂಗಪತಿ ಪಾರಮಾರ್ಥಿಕ (ಸಕೀಲಗಳ ಷಟ್ಸ್ಥಳ ಸಿದ್ಧಾಂತದ ತಳಹದಿಯ ಮೇಲೆ ದೇಹೀಂದ್ರಿಯ, ಸೃಷ್ಟಿ ಶಾಸ್ತ್ರ, ಮನಃಶಾಸ್ತ್ರಗಳನ್ನು ತಾರ್ಕಿಕವಾಗಿ ಬೋಧಿಸುವ ಶಿವಯೋಗ), ಮಂತ್ರಗೋಪ್ಯ - (ಯೋಗ ಸಿದ್ಧಿ, ಆತ್ಮಸಿದ್ದಿ),  ಘಟಚಕ್ರ - ಸೃಷ್ಟಿಯ ಉತ್ಪತ್ತಿ, ಪಿಂಡಾಂಡ - ಬ್ರಹ್ಮಾಂಡ ಸಂಯೋಗ, ಮತ್ತು ಅಲ್ಲಮ/ಮಹಾದೇವಿಯವರ ಸೃಷ್ಟಿ ವಚನಗಳು.


ಲಿಂಗಾಯತದ ಶರಣ ಸ್ಥಲವೇರಿದ ನಂತರ ಗಣಂಗಳು ಎಂದು ವಿಶೇಷ ಸಾಧನೆ ಅಥವಾ ಹುದ್ದೆ ಎನ್ನುವಂತಹ ಎಂಟು ಗಣಂಗಳ ಪೂಜ್ಯ ಸ್ಥಾನಗಳಿವೆ. ಈ ಸ್ಥಾನಗಳನ್ನು ಗಳಿಸಿದವರು ಚೆನ್ನಬಸವಣ್ಣನ ಷಟ್ಸ್ಥಲಮಂದಿರದ ಪ್ರವೇಶಕ್ಕೆ ಅರ್ಹರಾಗಿದ್ದರು ಎಂದು ಚೆನ್ನಬಸವ ಪುರಾಣ ಹೇಳುತ್ತದೆ. ಹಾಗಾಗಿಯೇ ಮುರಿಗೆಪ್ಪ ಚೆಟ್ಟಿಯವರು ತಮ್ಮ ಪ್ರಸ್ತಾವನೆಯಲ್ಲಿ, ಅಂತಹ ಪ್ರಮಥಗಣ ಸ್ಥಾನವನ್ನು ಪಡೆದ ನಂತರವೇ ಸಿದ್ಧರಾಮನಿಗೆ ಇಲ್ಲಿ ಪ್ರವೇಶ ಸಿಕ್ಕದ್ದು ಎಂದಿರುವುದು.


ಹೀಗೆ ಕಳಬೇಡ ಕೊಲಬೇಡ...ಎನ್ನುವ ಪಂಚಶೀಲದ ವಚನದ ಶಿಶುವಿಹಾರ ಪಠ್ಯದಿಂದ ಹಿಡಿದು ಸ್ನಾತಕೋತ್ತರದ ಸೃಷ್ಟಿ ವಚನಗಳವರೆಗಿನ ವಚನಗಳನ್ನು ಗ್ರಹಿಸಿ ಅನುಭಾವ ಪಡೆದು ನಂತರ ಪೋಸ್ಟ್ ಡಾಕ್ಟೋರಲ್ ಅನುಭಾವಕ್ಕೆ ವಚನೇತರ ಸಾಹಿತ್ಯವನ್ನು ಅಭ್ಯಸಿಸಿ ಸಾಧನೆ ಮಾಡಿ ಶರಣನಾಗಿ ಪೀಠಾಧಿಪತಿಯಾಗಿ, ಶೂನ್ಯ ಪೀಠಾಧಿಪತಿಯಾಗಿ ಸ್ಥಾನ ಗಳಿಸಲು ಸಾಧ್ಯ ಎನ್ನುತ್ತವೆ ಈ ಎಲ್ಲಾ ಲಿಂಗಾಯತ ಧರ್ಮಗ್ರಂಥಗಳು. ಜೀವನಕ್ರಿಯೆಗೆ ಅಷ್ಟಾವರಣ, ನೀತಿಗೆ ಪಂಚಾಚಾರ, ಜ್ಞಾನಕ್ಕೆ ಷಟ್ಸ್ಥಲ ಎಂಬ ಶಿಕ್ಷಣ ಮಾರ್ಗಸಾಧನೆಯ ನಂತರ ಗಣ, ಪೀಠದ ಹುದ್ದೆ.... ಇದಿಷ್ಟು ಲಿಂಗಾಯತ ಸಾಧನೆಯ ಸಿದ್ಧಿ ಮಾರ್ಗ!


ಈ ಎಲ್ಲಾ ಕಾರಣಗಳಿಂದಾಗಿ ಈ ಧರ್ಮಕೂಗಿಗರು ಹೇಳುವಂತೆ ಕೇವಲ ವಚನ ಸಾಹಿತ್ಯದ ಕಟ್ಟು ಲಿಂಗಾಯತದ ಧರ್ಮಗ್ರಂಥವಲ್ಲ! 


ಇದೇ ರೀತಿ ಪೀಠಾಧಿಪತಿಯಾಗಿ ಪಟ್ಟ ಕಟ್ಟಿ ಮಾನ್ಯ ಮಾಡಲು ಸಹ ಕಟ್ಟುನಿಟ್ಟಾದ ಕ್ರಮಗಳಿವೆ.


ಪಟ್ಟಾಧಿಕಾರದ ಪ್ರತಿಯೊಬ್ಬ ಸ್ವಾಮಿಗೂ ಈ ವಚನೇತರ

ಸಾಹಿತ್ಯದ ಒಂದು ಕಟ್ಟು ಕೊಡಲಾಗುತ್ತದೆ. ಅದರಲ್ಲೂ ಮೊದಲು ಓರ್ವ ಚರಮೂರ್ತಿಗಳಿಂದ ಅವರಿಗೆ ಶಿವ ಪುರಾಣ, ಬಸವ ಪುರಾಣ, ಚೆನ್ನಬಸವ ಪುರಾಣ ಗ್ರಂಥಗಳನ್ನು ಕೊಡಿಸಿ ಪುರಾಣ ಚರಂತಿ ಎಂದು ನೇಮಕಾತಿ ಮಾಡುತ್ತಾರೆ. ಈ ಪುರಾಣ ಚರಂತಿಯು ಮುಂದೆ ಕರಣ ಹಸಿಗೆ, ಮಂತ್ರಗೋಪ್ಯ, ಮಿಶ್ರಾರ್ಪಣ, ಸೃಷ್ಟಿ ವಚನಗಳನ್ನು ಅಭ್ಯಾಸ ಮಾಡಿ ಸಾಧನೆ ಮಾಡಿದ ನಂತರ ಅವನಿಗೆ ಸಭಾಮಧ್ಯದಲ್ಲಿ ಗುರುವಿನಿಂದ ಈ ಕೃತಿಗಳನ್ನು ಗೌರವಪ್ರಧಾನ (ಒಂದು ರೀತಿಯಲ್ಲಿ ಪದವಿ ಪ್ರದಾನ ಸಮಾರಂಭದಂತೆ) ಮಾಡಿದಾಗ ಮಾತ್ರ ಚರಂತಿಯು ವಿರಕ್ತನಾಗಿ ಪಟ್ಟಾಧಿಕಾರಿಯಾಗುವನು. ಇಲ್ಲದಿದ್ದರೆ ಆತ ಕೇವಲ ಪುರಾಣ ಚರಂತಿ ಮಾತ್ರವಾಗಿರುತ್ತಾನೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಆಸಕ್ತರು "ನಿರಂಜನ ವಂಶ ರತ್ನಾಕರ" ಕೃತಿಯನ್ನು ಪರಾಂಭರಿಸಬಹುದು.


ಹೀಗೆ ಚರಂತಿಯಾಗಿ ಗುರುವಿನಿಂದ ಪಟ್ಟ ಕಟ್ಟಿಸಿಕೊಂಡ ಒಬ್ಬನೇ ಒಬ್ಬ ವಿರಕ್ತ ಇಂದಿನ ಇಪ್ಪತ್ತೊಂದನೇ ಶತಮಾನದಲ್ಲಿ ಇಲ್ಲವೇ ಇಲ್ಲ ಎಂದೇ ಹೇಳಬಹುದು. ವಚನೇತರ ಸಾಹಿತ್ಯದಲ್ಲಿ ಜ್ಞಾನ ಪಡೆದಿದ್ದರೋ ಇಲ್ಲವೋ ಆದರೆ ಗುರುವಿನಿಂದ ಹೀಗೆ ವಚನೇತರ ಸಾಹಿತ್ಯದ ಕಟ್ಟು ಪಡೆದು ಪೀಠಾಧಿಪತಿಯಾಗಿದ್ದು ನಾನು ಬಲ್ಲಂತೆ ಇಂದು ಬಂಧಿಖಾನೆಯಲ್ಲಿರುವ ಮುರುಘಾಶರಣರು ಮಾತ್ರ!


ಇನ್ನು ಈ ಎಲ್ಲಾ ಲಿಂಗಾಯತ ತತ್ವಜ್ಞಾನ ಆಚರಣಾ, ಸಾಧನಾ ಸೂತ್ರಗಳನ್ನು ಭಾರತದಲ್ಲಿ ಅದಾಗಲೇ ಆಚರಣೆಯಲ್ಲಿದ್ದ ಸನಾತನ ಧರ್ಮದ ಆತ್ಮ, ಪರಮಾತ್ಮ, ಅಂತರಾತ್ಮ, ನ್ಯಾಯ, ಮೀಮಾಂಸೆ, ತರ್ಕ, ಧ್ಯಾನಗಳ ಪಾಶುಪತ, ಕಾಳಾಮುಖ, ತಾಂತ್ರಿಕ, ಬೌದ್ಧ, ಜೈನ, ಮುಂತಾದ ತತ್ವಜ್ಞಾನ ಶಾಲೆಗಳಿಂದ ಪಡೆದ ಮೂಲ ವಿಷಯಗಳ ಸರಳೀಕೃತ, ಪರಿಷ್ಕೃತ, ಉನ್ನತೀಕರಿಸಿದ ಪಠ್ಯವೇ ಆಗಿದೆ ಎಂಬುದು ಗಮನಾರ್ಹ. 


ಇಂತಿಪ್ಪ ಕಟ್ಟುನಿಟ್ಟಿನ ಲಿಂಗಾಯತವನ್ನು ಈಗಿನ ಆಧುನಿಕ ಶರಣ ವಿರಕ್ತರು ಜಾತಿಗೆ, ಆಸ್ತಿಗೆ, ಅಧಿಕಾರಕ್ಕೆ, ಮೀಸಲಾತಿಗೆ, ಮತ(vote)ಬ್ಯಾಂಕಿಗೆ ಮತ(Religion) ಬೇಕೆಂಬ "ಶರಣ ಹಸಿಗೆ" ಮಾಡಿ ಪಟ್ಟ ಕಟ್ಟಿಸಿಕೊಂಡು ಅವಿರಕ್ತರೇ ಆಗಿ ಇಂದು ಈ ಪ್ರತ್ಯೇಕತೆಯ ಕೂಗಿನಲ್ಲಿ ವಿಜೃಂಭಿಸುತ್ತಿದ್ದಾರೆ. ಲಿಂಗಾಯತ ಧರ್ಮದ ಶಿಶುವಿಹಾರದ ಪ್ರಾಸಸಾಹಿತ್ಯದಂತಹ ಬೆರಳೆಣಿಕೆಯ ಕೆಲವು ವಚನಗಳನ್ನು ಕಂಠಪಾಠ ಮಾಡಿ ರಾಜಕೀಯ ಹುರುಪಿನಿಂದ ಭಾಷಣ ಮಾಡುವ ಒಂದೊಮ್ಮೆಯ ತೆಂಗಿನಕಾಯಿಕಳ್ಳ, ಕುಡುಕರಿಗೆ ನಿಪ್ಪಟ್ಟು ತಂದುಕೊಡುತ್ತಿದ್ದವ, ಊಟಕ್ಕೆ ವಿಷ ಬೆರೆಸಿ ಕೊಂದು ಮಠ ಸೇರಿದ್ದವ, ತಮ್ಮ ಕಾಮಕ್ಕೆ ವಿವೇಕಾನಂದ-ನಿವೇದಿತಾ, ಗಾಂಧಿ ಮತ್ತವರ ಆಜುಬಾಜಿಗಿದ್ದ ಇಬ್ಬರು ಹೆಣ್ಣುಗಳ ಸಂಬಂಧದಂತೆಯೇ ನಾನೂ ಸಹ ಕೇವಲ ಇಂದ್ರಿಯ ನಿಗ್ರಹ ಪ್ರಯೋಗ ಮಾಡುತ್ತಿದ್ದೆ ಎಂದಂತಹ ಕದ್ದ, ಕೊಂದ, ಹುಸಿಯ ನುಡಿವ ಗುರು-ಗುರುಮಾತೆಯರಷ್ಟೇ ನಮಗೆ ಬೇಕೆನ್ನುವ ಭಕ್ತರೂ ಇದಕ್ಕೆ ಮೂಲ ಕಾರಣ ಎನ್ನಬಹುದು. 


ಹಾಗಾಗಿ ಇವರೆಲ್ಲರ ವಾದ ಏನೇ ಇದ್ದರೂ ಲಿಂಗಾಯತವನ್ನು ಕರಣ ಹಸಿಗೆಯ ಸೂತ್ರದಂತೆ ಹಸುಗೆ ಮಾಡಿ ನೋಡಿದಾಗ ಅದು ಭಾರತ ನೆಲಮೂಲದ ಹಿಂದೂ ಎನ್ನುವ, ಸನಾತನ ಎನ್ನುವ, ಅಹಿಂದೂ ಎನ್ನುವ, ಆರ್ಯ ಎನ್ನುವ, ದ್ರಾವಿಡ ಎನ್ನುವ, ವೈದಿಕ ಎನ್ನುವ, ಅವೈದಿಕ ಎನ್ನುವ, ತಂತ್ರ ಎನ್ನುವ, ಮಂತ್ರ ಎನ್ನುವ, ಉತ್ಕೃಷ್ಟ ಎನ್ನುವ, ಅನಿಷ್ಟ ಎನ್ನುವ ಮುಂದೆ ಇನ್ನೂ ಏನೇನೋ ಎನ್ನಲಿರುವ ಈ ನೆಲದಲ್ಲೇ ಘನಿರ್ಭೂತಗೊಂಡ ಕರಣದ ಹಸುಗೆಗೊಂಡ ತತ್ವಜ್ಞಾನದ ಭಾಗವೇ ಆಗಿದೆ. 


-ರವಿ ಹಂಜ್

No comments:

Post a Comment