ನವೆಂಬರ್ 2024 ಸಮಾಜಮುಖಿ ಮಾಸಿಕದಲ್ಲಿ: ತೇಜಸ್ವಿ ಜೀವನಶೈಲಿ

 

ನಾನಾಗ ಹತ್ತು ವರ್ಷದ ಬಾಲಕನಾಗಿದ್ದೆ. ನನ್ನ ಶಾಲೆಯ ದಸರಾ ಅಥವಾ ಬೇಸಿಗೆ ರಜೆಗೆ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಉಂಡಿಗನಾಳು ಎಂಬ ಗ್ರಾಮದ ಸರಹದ್ದಿನಲ್ಲಿದ್ದ ನಮ್ಮ ಅತ್ತೆಯ ತೆಂಗಿನತೋಟದ ಮನೆಗೆ ಹೋಗುತ್ತಿದ್ದೆ. ಹೀಗೆ ಅಜ್ಜಿಯ ಮನೆಗೆ ಅಥವಾ ಅತ್ತೆ ಮಾವಂದಿರ ಮನೆಗೆ ರಜಾದಿನಗಳಲ್ಲಿ ಹೋಗುವುದು ಅಂದು ಅತ್ಯಂತ ನೈಸರ್ಗಿಕ ಕ್ರಿಯೆಯಾಗಿತ್ತು. ನಮ್ಮ ಅತ್ತೆಯ ಸಿದ್ದರವನ ಎಸ್ಟೇಟಿನಿಂದ ಅವರು ಹೊಸದಾಗಿ ಮಾಡಿದ್ದ ಇನ್ನೂ ಹೆಸರಿಡದ ಎರಿತೋಟ ಎನ್ನುತ್ತಿದ್ದ ಎರೆಭೂಮಿಯ ತೆಂಗಿನ ತೋಟಕ್ಕೆ ಎರಡು ಕಿಲೋಮೀಟರ್ ದೂರವಿತ್ತು. ಸಿದ್ದರವನ ಅಪ್ಪಟ ಹೆಣ್ಣುಮಕ್ಕಳ ಕೇಂದ್ರಸ್ಥಾನವಾದರೆ, ಎರಿ ತೋಟ ಅಪ್ಪಟ ಬ್ರಹ್ಮಚಾರಿ ಗಂಡುಗಳ ಪ್ರ(ಸ್ತ)ಸ್ಥಭೂಮಿಯಾಗಿತ್ತು. ಇಲ್ಲಿಯ ಉಸ್ತುವಾರಿ ನಮ್ಮತ್ತೆಯ ಬ್ರಹ್ಮಚಾರಿ ಮಗನದಾಗಿತ್ತು. ಆದರೆ ನಾನು ಮತ್ತು ನನ್ನಂತೆಯೇ ರಜೆಗೆ ಬಂದಿದ್ದ ನನ್ನ ಇತರೆ ಅತ್ತೆಯಂದಿರ ಗಂಡುಮಕ್ಕಳುಗಳು ಬ್ರಹ್ಮಚಾರಿಗಳು ಎನಿಸಿಕೊಳ್ಳದ ಬಾಲಕರಾಗಿದ್ದೆವು. ನಿತ್ಯ ಬೆಳಿಗ್ಗೆ ತಿಂಡಿ ತಿಂದು ಸಿದ್ಧರವನದಿಂದ ಎರಿ ತೋಟಕ್ಕೆ ದಂಡಯಾತ್ರೆ ಹೋಗುತ್ತಿದ್ದೆವು. ದಿನವೆಲ್ಲಾ ಅಲ್ಲಿ ಲಂಗುಲಗಾಮಿಲ್ಲದ ಸ್ವತಂತ್ರ ಕಾರ್ಯ ಚಟುವಟಿಕೆಗಳನ್ನು ಮುಗಿಸಿ ಸಂಜೆಗೆ ಸಿದ್ದರವನಕ್ಕೆ ವಾಪಸ್ ಆಗುತ್ತಿದ್ದೆವು. ಈ ದಂಡಯಾತ್ರೆಯಲ್ಲಿ ಪ್ರಕೃತಿ ನನಗೆ ಕಲಿಸಿದ ಪಾಠಗಳು ಅಪಾರ. ಬಾಲ್ಯದ ಕುತೂಹಲ, ಗಮನಿಸುವಿಕೆ, ಉದ್ದೀಪನ, ಕಲಿಯುವಿಕೆಯ ಪ್ರಕ್ರಿಯೆಗಳಿಗೆ ಪ್ರಕೃತಿ ತನ್ನದೇ ರೀತಿಯಲ್ಲಿ ಪಾಠ ಮಾಡುತ್ತಿತ್ತು. ದಾರಿಯಲ್ಲಿ ಬಾಯಾರಿಕೆಯಾದರೆ ಕೈಯಿಂದ ಮಣ್ಣನ್ನು ಬಗೆದು ಗುಂಡಿ ತೋಡಿದರೆ ನೀರುಕ್ಕುತ್ತಿತ್ತು. ನೋಡಿದೆಲ್ಲೆಡೆ ಬಣ್ಣಬಣ್ಣದ ಹಕ್ಕಿಗಳು ಕಾಣುತ್ತಿದ್ದವು. ಮರಕುಟಿಗ ಟಕಟಕನೆ ಮರವನ್ನು ಕುಟ್ಟುವುದು, ಕುಂಡೆಕುಸುಗವು ಬಾಲವನ್ನು ಮೇಲಕ್ಕೂ ಕೆಳಕ್ಕೂ ಆಡಿಸುತ್ತ ಲಗುಬಗೆಯಿಂದ ಸಂಚರಿಸುವುದು, ದಿಢೀರನೆ ನಮ್ಮ ಕಾಲಬುಡದಿಂದ ಮೊಲಗಳು ಚಂಗನೆ ಎಗರಿ ಓಡುವುದು, ನಮ್ಮೊಡನೆ ಬರುತ್ತಿದ್ದ ನಾಯಿಗಳು ಅವುಗಳನ್ನು ಅಟ್ಟಿಸಿಕೊಂಡು ಮೊಲಗಳ ಬಿಲಗಳನ್ನು ಮೂಸುತ್ತ ನಿಲ್ಲುತ್ತಿದ್ದುದು, ಕೇಕೆ ಹಾಕುವ ನವಿಲುಗಳು, ಸರಿದಾಡುವ ಹಾವುಗಳು, ದೂರದ ಗುಡ್ಡದಲ್ಲಿ ಒಮ್ಮೊಮ್ಮೆ ಕಾಣುತ್ತಿದ್ದ ಕರಡಿಗಳು, ಒಮ್ಮೊಮ್ಮೆ ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ಕಿರುಬ, ತೋಟದಲ್ಲಿ ಬೇಸಿಗೆಯಲ್ಲಿ ಹಳ್ಳದಲ್ಲಿ ಬೆಳೆದ ಕಳೆಗಳನ್ನು ತೆಗೆಯುವಾಗಿ ಸಿಗುತ್ತಿದ್ದ ಆಮೆಗಳನ್ನು ಆಳುಗಳು ಹಿಡಿದು ಇಂಗ್ಲಿಷ್ ಸಿನೆಮಾಗಳ ರೀತಿ ಕಡ್ಡಿಗೆ ಸಿಕ್ಕಿಸಿ ಸುಡುತ್ತಿದ್ದುದು, ಹಾವುಗಳನ್ನು ಅವುಗಳ ರೋಷಕ್ಕಿಂತ ರೋಷ ಏರಿಸಿಕೊಂಡಂತೆ ಚಚ್ಚಿಹಾಕುತ್ತಿದ್ದುದು...ಹೀಗೆ ಅನೇಕ ಚಿತ್ರಣಗಳನ್ನು ಉಂಡಿಗನಾಳು ತೆರೆದಿಡುತ್ತಿತ್ತು.
ಅಲ್ಲದೆ ಎರಿತೋಟದಲ್ಲಿ ನಮ್ಮತ್ತೆಯ ಮಗ ಮತ್ತವನು ಕೆಲಸದ ಆಳುಗಳೊಂದಿಗೆ ಒಡನಾಡುವ ರೀತಿ ಅತ್ಯಂತ ತಮಾಷೆಯಾಗಿರುತ್ತಿತ್ತು. ಆಳುಗಳು ಪಟ್ಟಾಂಗ ಹೊಡೆಯುತ್ತ ಕುಳಿತಿದ್ದರೆ, "ಯಾಕ್ರಲಾ ಹಿಂಗ್ ಹಡಿಯಾಕ್ ಕೂತಿದೀರ! ಮಲಕ್ಕಂಬಿಡ್ರೋ ಅತ್ಲಾಗಿ, ದಿನಗೋಳು ತುಂಬಿ ಗಂಡಸರು ಸಾಯ್ತರ ಕನ್ರಲಾ, ಹಡಿಯಾಕುಲ್ಲ!" ಎಂದು ಆಳುಗಳಿಗೆ ಹುರಿದುಂಬಿಸುತ್ತಿದ್ದ. "ರಾ ರಾ ರಾ, ಕಾ ಕಾ ಕಾ ಹೋವ್ ಹೋವ್" ಎನ್ನುತ್ತಾ ಬೇಸಾಯ ಹೊಡೆಯುವವನಿಗೆ "ಅಪ್ಪಯ್ಯ, ನೇಗ್ಲು ಹಾಕಿ ಅದುಮಿ ಹಿಡಕಬೇಕು. ನೇಗ್ಲೇ ಹಿಂಗ ಅದುಮೋನು ರಾತ್ರಿ ಹೆಂಗ್ಲಾ ಅದುಮಿಯಾ? ಹಾಕಿ ಅದುಮಿದ್ರೆ ಕಣಪ್ಪ ಬೀಜ ಸೇರ್ಕಳತಾವ ಸೇರ್ಕಂಡು ಮೊಳಕೆ ಒಡಿಯಾದು" ಎಂದು ಬೇಸಾಯದವನನ್ನು ರಸಿಕಮಯವಾಗಿ ’ಎ’ ಸರ್ಟಿಫ಼ಿಕೇಟ್ ಮಾತಾಡಿ ಕಿಚಾಯಿಸುತ್ತಿದ್ದ. ಅದಕ್ಕೆ ಕಿಚಾಯಿಸಿಕೊಂಡವನೂ ಹುರುಪು ಬಂದು "ಅಣಾ, ಇವ್ನು ಮದ್ವೆಯಾದಗಿಂದ ಹಾಕಿ ಅಮುಕ್ತನೇ ಅವ್ನೆ, ಇನ್ನೂ ಬೀಜ ಮೊಳಕೆ ಒಡೆದಿಲ್ಲ" ಎಂದು ಪ್ರತಿ ’ಎ’ ಸರ್ಟಿಫ಼ಿಕೇಟ್ ಮಾತಾಡಿ ಆ ಕಿಚಾಯಿಸುವಿಕೆಗೆ ಅವನ ಸಹವರ್ತಿಯನ್ನೂ ಸೇರಿಸಿಕೊಂಡು ಬಿಡುತ್ತಿದ್ದ.
"ಇಲ್ಲೇ ನೀವು ಇಷ್ಟೊಂದು ನೇಗ್ಲು ಅಮುಕ್ಸಿದ್ರೆ ಮನೇಲಿ ಏನು ಅಮುಕ್ತನೆ! ತಣ್ಣಕೆ ಬಿದ್ಕತನೆ ಬುಡ್ರಿ ಸೋಮೇ" ಎಂದು ತಮ್ಮ ಗಂಡಂದಿರ ಮೇಲಿನ ಅತೃಪ್ತಿಯನ್ನು ಬೇರೆಯವರ ಅತೃಪ್ತಿ ಎನ್ನುವಂತೆ ಕಿರಗೂರಿನ ಗಯ್ಯಾಳಿಗಳಂತೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರು ಹುಸಿ ಕೋಪ ತೋರುತ್ತಿದ್ದರು. ಆಗ "ಎಲ್ಲಾ ಅವ್ನೆ ಮಾಡ್ಬೇಕಂದ್ರೆ ಹೆಂಗೆ? ಹೆಂಡ್ರೂವ ಸ್ವಲ್ಪ ಎತ್ತಿ ಕೊಡಬೇಕು" ಎಂದು ನಮ್ಮತ್ತೆಯ ಮಗ ಸಮಾನತೆಯನ್ನು ಬೋಧಿಸುತ್ತಿದ್ದ!
ಹೀಗೆ ರಜೆಯಲ್ಲಿ ಸಿಗುತ್ತಿದ್ದ ಪ್ರಕೃತಿ ಮತ್ತು ಪ್ಲಾಂಟೇಶನ್ ಕೃಷಿ ಹಿನ್ನೆಲೆಯ ಜೀವನಶೈಲಿಯ ಜೋಕನ್ನು ಮೆಲುಕು ಹಾಕುತ್ತಿದ್ದ ನನಗೆ ಪ್ರೌಢಶಾಲೆಗೆ ಬರುತ್ತಿದ್ದಂತೆಯೇ ಲೈಬ್ರರಿಯಲ್ಲಿ ಸಿಕ್ಕ ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು ನನ್ನ ಭವಿಷ್ಯದ ಪ್ರೌಢ ಜೀವನಶೈಲಿ ಹೇಗಿರಬೇಕು ಎಂಬ ಅಸ್ಪಷ್ಟ ಚಿತ್ರಣವನ್ನು ನೀಡತೊಡಗಿದವು. ಕ್ರಮೇಣ ಈ ಅಸ್ಪಷ್ಟ ಚಿತ್ರಣ ನನ್ನ ವಯಸ್ಕ ಜೀವನ ಹೇಗಿರಬೇಕು ಎಂಬುದನ್ನು ಸ್ಪಷ್ಟವಾಗಿಸತೊಡಗಿತು. ನನಗರಿವಿಲ್ಲದಂತೆ ನಾನೊಂದು ಸಮ್ಮೋಹನಕ್ಕೊಳಗಾಗಿ, ಇದುವೇ ಜೀವ, ಇದುವೇ ಜೀವನ. "ಮನುಷ್ಯನಾದವನು ಜೀವಿಸಬೇಕಾದದ್ದೇ ಹೀಗೆ" ಎಂದು ಬಲವಾಗಿ ನಂಬತೊಡಗಿದೆ. ಮೊದಲೇ ಉಂಡಿಗನಾಳಿನ ತೋಟದ ಅನುಭವದಿಂದ ಮಂಗನಾಗಿದ್ದ ನನಗೆ ತೇಜಸ್ವಿ ಕೃತಿಗಳು ಒಂದು ರೀತಿ "ಮಂಗಗಳಿಗೆ ಏಣಿ ಹಾಕಿಸಿಕೊಟ್ಟಂತಾಯಿತು". ಮುಂದೆ ನಾನು ಅಮೆರಿಕೆಗೆ ಬಂದದ್ದು ಜುಗಾರಿ ಕ್ರಾಸಿನ ಸುರೇಶನಿಗೆ ಅವರ ಮಲೇಷಿಯನ್ ಅಪ್ಪ ಮತ್ತು ಪ್ಲಾಂಟೇಶನ್ ಮಾವ ಸಿಕ್ಕಂತಾಯಿತು. ಪಟಪಟನೆ ಚಿಕ್ಕಮಗಳೂರಿನ ಸಮೀಪದಲ್ಲಿ ತೋಟ ಮಾಡಿದ್ದ ಓರ್ವ ಜರ್ಮನ್ ಮಹಿಳೆಯ ತೋಟವನ್ನು ಖರೀದಿಸಿ ನನ್ನ ಕನಸಿನ 'ತೇಜಸ್ವಿ ಜೀವನಶೈಲಿ'ಯನ್ನು ದಿಟವಾಗಿಸಿಕೊಳ್ಳಲು ದಾಂಗುಡಿಯಿಟ್ಟೆ, ಬೆಂಗಳೂರಿನ ಎಲ್ಲಾ ರಿಯಲ್ ಎಸ್ಟೇಟ್ ವಹಿವಾಟಿನ ಅನುಭವ ಮತ್ತು ಉಜ್ವಲ ಆರ್ಥಿಕ ಭವಿಷ್ಯದ ಅರಿವಿದ್ದೂ!
ಆದರೆ ನಮ್ಮಪ್ಪ ನನ್ನನ್ನು 'ಐಲು ನನ್ಮಗ' ಎಂದು ಚಿಕ್ಕಮಗಳೂರಿನಲ್ಲಿ ಜರ್ಮನ್ ಲೇಡಿಯ ತೋಟ ಖರೀದಿಸಿವುದನ್ನು ತಪ್ಪಿಸಿ ಸರಿಯಾಗಿ ಮಳೆ ಬಾರದ ಬರಡು ಪ್ರದೇಶದಲ್ಲಿ ಭೂಮಿ ಕೊಂಡು ಇತ್ತ ದಾವಣಗೆರೆಯೂ ಅಲ್ಲದೆ ಅತ್ತ ಚಿಕ್ಕಮಗಳೂರು ಅಲ್ಲದ ತ್ರಿಶಂಕು ಸ್ಥಿತಿಯಲ್ಲಿ ನಿಲುಕಿಸಿ ನನಗೆ ಒಂದು ರೀತಿಯ ಜೀವನ ದರ್ಶನವಾಗಿಸಿದ್ದು ಬೇರೆಯದೇ ಕತೆ!
ಒಟ್ಟಾರೆ, ಹೀಗೆ ತೇಜಸ್ವಿ ಸಮ್ಮೋಹನಕ್ಕೊಳಗಾಗಿ 'ತೇಜಸ್ವಿ ಜೀವನಶೈಲಿ'ಗಾಗಿ ಹಾತೊರೆದದ್ದು ಕೇವಲ ನಾನಷ್ಟೇ ಅಲ್ಲದೆ ನನ್ನಂತಹ ಒಂದು ತಲೆಮಾರಿನ ಯುವಜನತೆಯೇ ಪ್ರವಾಹದೋಪಾದಿಯಲ್ಲಿ 'ತೇಜಸ್ವಿ ಜೀವನಶೈಲಿ'ಗೆ ಹಾತೊರೆಯುತ್ತಿತ್ತು!
ಆದರೆ ಈ ಹಾತೊರೆಯುವಿಕೆಯ ಫಲಶ್ರುತಿ ಪ್ರಕೃತಿಯ ಕಳಕಳಿಯಾಗದೆ ಇಂದಿನ ಮಲೆನಾಡಿನ ಭೂಕುಸಿತಕ್ಕೆ ಒಂದು ಕಾರಣವಾಗಿದರಬಹುದೇ...!?
ಯಾರೂ ಊಹಿಸದ ಮಾಹಿತಿ ತಂತ್ರಜ್ಞಾನದ ಬಿಳಿ ಕೊರಳಪಟ್ಟಿ ಗುಲಾಮಿಕೆಯ ಆರ್ಥಿಕತೆಯ ನೆಪದಲ್ಲಿ ಆಸ್ಫೋಟಗೊಂಡ ನಗರೀಕರಣ ಮತ್ತದರ ನೆಪದಲ್ಲಿ ಭೂಮಾರಾಟದ ನಗದೀಕರಣ ತಂದ ದಿಢೀರ್ ಶ್ರೀಮಂತಿಕೆಯು ಭಾರತೀಯರ ಸುಪ್ತ ಊಳಿಗಮಾನ ಅನುವಂಶೀಯತೆಯನ್ನು ಒಂದು ಕ್ರಿಯಾಶೀಲ ಪ್ರಕೃತಿಯೊಂದಿಗಿನ ಸಹಜೀವನ ಎಂಬ ಮಾಯಾಲೋಕದ ಸಂಪುಟದಲ್ಲಿ ಹುದುಗಿಸಿದಂತೆ 'ತೇಜಸ್ವಿ ಜೀವನಶೈಲಿ' ಎಂಬ ಹೆಬ್ಬಾಗಿಲನ್ನು ತೆರೆಯಿತು ಎನ್ನಲು ನನಗೆ ಯಾವುದೇ ಹಿಂಜರಿಕೆಯೂ ಇಲ್ಲ. ಇಂತಹ ಒಂದು ಜೀವನಶೈಲಿಯನ್ನು ಕುವೆಂಪು ಅವರ ಮಲೆನಾಡ ಪ್ರಾಕೃತಿಕ ಸೌಂದರ್ಯದ ಹಿನ್ನೆಲೆಯ ಭೂಮಾಲೀಕ ಉಳಿಗಮಾನದ ಅನುಭವದ ಮೂಸೆಯಿಂದ ಪ್ರಭಾವಿತರಾಗಿರಬಹುದಾದ ತೇಜಸ್ವಿಯವರು ಅವರಿಗರಿವಿಲ್ಲದಂತೆ ಅಂತಹುದೇ ಪ್ರಭಾವವನ್ನು ಯಶಸ್ವಿಯಾಗಿ ಒಂದು ತಲೆಮಾರಿಗೆ ದಾಟಿಸಿದರು. ಇಂತಹ ದಾಟಿಸುವಿಕೆಯ ಸಮ್ಮೋಹನಕ್ಕೆ ಕನ್ನಡದ ಒಂದು ತಲೆಮಾರು ಒಳಗಾಗಿದೆ ಎನ್ನಬಹುದು. ಇದು ಹೀಗಾದೀತು ಎಂಬ ಕಿಂಚಿತ್ ಊಹೆಯೂ ತೇಜಸ್ವಿಯವರಿಗೆ ಇತ್ತೋ ಇಲ್ಲವೋ ಗೊತ್ತಿಲ್ಲ.
ಯುರೋಪಿನ ವಸಾಹತುಶಾಹಿ ನೀಲಿ ಕೊರಳ ಪಟ್ಟಿಯ ಹೊರಗುತ್ತಿಗೆಯ ಗುಲಾಮಿಕೆಯಿಂದ ಸ್ವಾತಂತ್ರ್ಯ ಗಳಿಸಿದ್ದ ಭವ್ಯ ಭಾರತವು ಹೀಗೆ ಬಿಳಿಯ ಕೊರಳ ಪಟ್ಟಿಯ ಗುಲಾಮಿಕೆಗೆ ಒಳಗಾಗಿ ಭೂಮಾಫಿಯಾ ಬೆಳೆದು ಆಮ್ಲೀಯ ಆರ್ಥಿಕ ಉಬ್ಬರವು ಎಲ್ಲವನ್ನೂ ಆಮ್ಲೀಯಗೊಳಿಸೀತು ಎಂಬ ಅಂದಾಜು "ಧರ್ಮಸ್ಥಳದ ಮಂಜುನಾಥನಿಗೂ, ಕುಕ್ಕೆ ಸುಬ್ರಹ್ಮಣ್ಯನಿಗೂ" ಇರಲಿಲ್ಲ.
ಈ ನವ್ಯ ಆರ್ಥಿಕತೆಯ ಶ್ರೀಮಂತಿಕೆಯಲ್ಲಿ ತೇಲುತ್ತಿರುವ ಜನರು ಮೊದಮೊದಲಿಗೆ ತೇಜಸ್ವಿಯವರ "ಪರಿಸರದ ಕತೆ" ಓದಿ ಸ್ಫೂರ್ತಿಗೊಂಡು ಆ ಪರಿಸರವನ್ನು ಕಾಣಲು ಚಿಕ್ಕಮಗಳೂರು, ಕೊಡಗು, ಸಕಲೇಶಪುರ ಮುಂತಾದ ಕಾಫಿ ಬೆಲ್ಟಿಗೆ ಪ್ರವಾಸ ಮಾಡುತ್ತಾ ಕ್ರಮೇಣ ಹೋಮ್ ಸ್ಟೇ ಎನ್ನುವ ನವೋದ್ಯಮಕ್ಕೆ ನಾಂದಿ ಹಾಡಿದರು. ನಂತರ ತೇಜಸ್ವಿಯವರಂತೆ ಕೊರಳಿಗೆ ಉದ್ದನೆಯ ಲೆನ್ಸುಗಳ ಕ್ಯಾಮೆರಾ ತೂಗುಹಾಕಿಕೊಂಡು ಹಾರುವ ಹಲ್ಲಿ, ಓಡುವ ಹಂದಿ, ಮೇಯುವ ಹಿಂಡು ಕೋಳಿ, ಗೀಜಗ, ಕೆಂಬತ್ತ, ಕೆಂಜಳಿಲು ಹುಡುಕುತ್ತಾ ಎತ್ತಿನಭುಜ ಟ್ರೆಕ್ಕಿಂಗು ಮುಳ್ಳಯ್ಯನಗಿರಿ ಡ್ರೈವಿಂಗು, ಹೇಮಾವತಿ ಫಿಶಿಂಗನ್ನು ವೀಕೆಂಡ್ ದಿನಚರಿ ಮಾಡಿಕೊಂಡರು. ಕ್ರಮೇಣ ಅವರ ಒಂದು ೩೦*೪೦ ಸೈಟ್ ಮಾರಿ ಹತ್ತಾರು ಎಕರೆ ತೋಟ ಖರೀದಿಸಿ ತಮ್ಮ ಕನಸಿನ 'ತೇಜಸ್ವಿ ಜೀವನಶೈಲಿ'ಯನ್ನು ಸಾಕಾರ ಮಾಡಿಕೊಳ್ಳಲಾರಂಭಿಸಿದರು.
ಹೀಗೆ ಎಕರೆಗಟ್ಟಲೆ ಜಮೀನು ಖರೀದಿಸಿ ಅಲ್ಲಿ ಯಾವುದೇ ಯಶಸ್ಸು ಪಡೆಯದೆ ಸದಾ ನಷ್ಟವನ್ನು ಅನುಭವಿಸಿದರೂ ಆ ನಷ್ಟವನ್ನು ಇನ್ನೆಲ್ಲೋ ಭರಿಸುತ್ತ ತಾವು ಪರಿಸರ ಸಂರಕ್ಷಣೆಯಲ್ಲಿ ಕೈ ಜೋಡಿಸುತ್ತಿದ್ದೇವೆ ಎಂಬ ಅಮಲಿನಲ್ಲಿ ತಮ್ಮ ಸ್ನೇಹಿತರೊಡನೆ, "ಏನ್ರಯ್ಯ ನೀವೆಲ್ಲ ಐದಾರು ಗಿಡಗಳನ್ನು ಕುಂಡಗಳಲ್ಲಿ ನೆಟ್ಟು ದೊಡ್ಡ ಪರಿಸರ ಸಂರಕ್ಷಣೆ ಬಗ್ಗೆ ಮಾತಾಡುತ್ತೀರಿ! ನಾನು ಸಾವಿರಾರು ಮರಗಳನ್ನು ಬೆಳೆಸಿದ್ದೇನೆ" ಎಂದು ಬೀಗುತ್ತಾ ಫೇಸ್ಬುಕ್ಕು, ಕುಕ್ಕೂ, ಬ್ಲಾಗುಗಳಲ್ಲಿ ಫೋಟೋ ಹಾಕುತ್ತಾ, ಲೇಖನ ಬರೆಯುತ್ತಾ ಬೀಗುತ್ತಿದ್ದಾರೆ. ಏಕೆಂದರೆ ಅವರು ಖರೀದಿಸಿದ ಭೂಮಿಯ ಬೆಲೆ ನೂರು ಪಟ್ಟು ಹೆಚ್ಚಾಗಿರುವ ಕಾರಣವೇ ಅವರ ಈ ಎಲ್ಲಾ ಬೀಗು ತೇಗಿಗೆ ಕಾರಣ ಅಷ್ಟೇ.
ಆಮ್ಲೀಯ ಬೆಲೆಯೇರಿಕೆಯ ಕಾರಣ ಹತ್ತಾರು ಎಕರೆ ತೋಟ ಖರೀದಿಸುವ ಶಕ್ತಿ ಇಲ್ಲದ 'ತೇಜಸ್ವಿ ಜೀವನಶೈಲಿ'ಯನ್ನು ಬಯಸುವ ಕನಸಿಗರಿಗಾಗಿಯೇ ಈಗ ಈ ಪರಿಸರದ ಕಾಫಿ ತೋಟಗಳು ಅರ್ಧ, ಒಂದು ಅಥವಾ ಎರಡು ಎಕರೆ ತೋಟದ ಪ್ಲಾಟುಗಳಾಗಿ 'ತೇಜಸ್ವಿ ಜೀವನಶೈಲಿ'ಯ ಕನಸಿಗೆ ನೀರೆರೆಯುವ ಲೇಔಟುಗಳಾಗಿವೆ!
ಮೊದಲಿನಿಂದಲೂ ವಿರಳಾತಿ ವಿರಳ ಜನಸಂಖ್ಯೆಯ ಮಲೆನಾಡ ಪರಿಸರವು ಈ ಆಮ್ಲೀಯ ಜನಸಂದಣಿಯ ಒತ್ತಡ, ಅದರಿಂದುಂಟಾದ ಪರಿಸರ ಮಾಲಿನ್ಯವನ್ನು ತಾಳಲಾರದೆ ತನ್ನದೇ ಆದ ರೀತಿಯ ಅಸಹಕಾರ ಚಳುವಳಿಯನ್ನು ಗೊಂದಲದ ಮಾನ್ಸೂನ್ ಚಕ್ರ, ಏರಿದ ತಾಪಮಾನ, ಆಕಾಲ ಋತುಮಾನದ ಮೂಲಕ ಆರಂಭಿಸಿ ಇತ್ತೀಚೆಗೆ ಭೂಕುಸಿತದಂತಹ ಉಗ್ರ ಆಸ್ಫೋಟಕರ ಸ್ವರೂಪಕ್ಕೆ ತಿರುಗಿಸಿದೆ ಎನಿಸುತ್ತಿದೆ.
ತಾವು ಅಂದುಕೊಂಡ ಜೀವನಶೈಲಿಯನ್ನು ಅನುಭವಿಸುವಲ್ಲಿ ತೇಜಸ್ವಿ ಏನು ಮಾಡಿದ್ದರೋ ಅದನ್ನೇ ಅವರಿಂದ ಪ್ರಭಾವಿತ ಯುವಜನತೆ ಮುಗ್ಧವಾಗಿ ಅನುಕರಿಸಿರಬಹುದು. ಇದರಲ್ಲಿ ಯಾರ ಯಾವ ತಪ್ಪೂ ಇಲ್ಲ. ಆದರೆ ಜನರು ತಾವೆಂದುಕೊಂಡ ಜೀವನ ಶೈಲಿಯನ್ನು ಅನುಭವಿಸಲು ಅದನ್ನು ಒಂದು ವ್ಯವಸ್ಥಿತ ಪ್ರಕೃತಿಸ್ನೇಹಿ ವ್ಯವಸ್ಥೆಯಾಗಿ ರೂಪಿಸುವಲ್ಲಿ ಕಿಂಚಿತ್ತಾದರೂ ಪ್ರೋತ್ಸಾಹಕರ ವ್ಯವಸ್ಥೆಯನ್ನು ಸರ್ಕಾರಗಳು ಹೊಂದಿರಬೇಕು. ಅದಿಲ್ಲದೆ ಸರ್ಕಾರವೂ ಸಹ ಬಂಡವಾಳಶಾಹಿಗಳೊಂದಿಗೆ ಶಾಮೀಲಾಗಿ
"ಇಲ್ಲಿನ ನೆಲಜಲ ಪ್ರಕೃತಿ ಸಂಪತ್ತನ್ನು ಎಲ್ಲೆಲ್ಲೂ ಬಿದ್ದಿರುವ ಬೆಲೆಬಾಳುವವಜ್ರ ವೈಢೂರ್ಯ ಕೆಂಪುಕಲ್ಲಿನಂತೆ" ಕಂಡು ಯಾವ ದೂರಾಲೋಚನೆಯಿರದೆ ಪ್ರಕೃತಿಯನ್ನು ಹರಿದು ಹಂಚಲು ತೊಡಗಿದಾಗ ಇಂತಹ ಅವಘಡಗಳು ಶತಸಿದ್ಧ.
ಇದಕ್ಕೆ "ತೇಜಸ್ವಿ ಜೀವನಶೈಲಿ"ಯನ್ನು ಬಯಸಿದ ನಾವೆಲ್ಲರೂ ಗೊತ್ತಿಲ್ಲದಂತೆ "ಕಿಂಕರ್ತವ್ಯ ಮೂಢ"ರಾಗಿ ಜವಾಬ್ದಾರರಾಗಿದ್ದೇವೇನೋ!!!
- ರವಿ ಹಂಜ್

No comments:

Post a Comment