ಮನೆಮುರುಕ ಧಾರಾವಾಹಿಗಳೂ, ಸ್ತ್ರೀಶಕ್ತಿ ಸಂಘಗಳೂ.

ನೀವು ಅನಿವಾಸೀ ಕನ್ನಡಿಗರಾಗಿದ್ದರೆ, ನೀಮೊಮ್ಮೆ ಈಟೀವಿ, ಆಟೀವಿಗಳಲ್ಲಿ ಬರುವ ಕನ್ನಡ ಧಾರಾವಾಹಿಗಳ ಒಂದೆರಡಾದರೂ ಎಪಿಸೋಡ್ ಗಳನ್ನು ನೋಡಿರಬೇಕು ಇಲ್ಲಾ ನೋಡಬೇಕು, ಈ ಲೇಖನವು ನಿಮ್ಮನ್ನು ಮುಟ್ಟಲು ತಟ್ಟಲು.

ದೂರದರ್ಶನ ಮಾಧ್ಯಮದಲ್ಲಿ ಕ್ರಾಂತಿಯಾಗಿ ಭಾರತದಲ್ಲಿ ನೂರೆಂಟು ಛಾನೆಲ್ಲುಗಳು ಹುಟ್ಟಿಕೊಂಡು, ಸಂಸಾರ / ಕುಟುಂಬವನ್ನು ಕೇಂದ್ರವಾಗಿಟ್ಟುಕೊಂಡು ಧಾರಾವಾಹಿಗಳನ್ನು ತೋರಿಸುತ್ತ ಭಾರತದ ಪ್ರಬಲ ಶಕ್ತಿಯಾದ ಗೃಹಿಣಿಯರನ್ನು ಹಾದಿ ತಪ್ಪಿಸುತ್ತಿವೆ. ಅದಾಗಲೇ ಸಿನಿಮಾರಂಗ ಸಾಕಷ್ಟು ಜನರನ್ನು ಉದ್ದರಿಸಿದ್ದರೂ, ಈ ಟೀವೀ ಮಾಧ್ಯಮದಷ್ಟು ಉದ್ದರಿಸಿರಲಿಲ್ಲ. ಮೊದಲೆಲ್ಲಾ ವಾರಕ್ಕೊಂದು ಎಪಿಸೋಡ್ ಗಳಿದ್ದರೆ ಇಂದು ಈ ಮೆಗಾಸೀರಿಯಲ್ ಗಳು ನಿತ್ಯವೂ ನೂತನ ಎಪಿಸೋಡ್ ನೀಡುತ್ತಿವೆ. ಪುಕ್ಕಟೆ ಮನರಂಜನೆಗೆಂದು ಇದನ್ನು ನೋಡುತ್ತಿದ್ದ ಗೃಹಿಣಿ, ಇಂದು ಇದಕ್ಕೆ ದಾಸಳಾಗಿರುವುದಷ್ಟೇ ಅಲ್ಲ ಆ ಧಾರಾವಾಹಿಗಳ ನಾಯಕಿಯೇ ತಾನಾಗುತ್ತಿದ್ದಾಳೆ.

ಈ ಎಲ್ಲಾ ಧಾರಾವಾಹಿಗಳ ಕತೆ ಏನು ಗೊತ್ತೆ? ಸಂಸಾರ, ಸಂಸಾರ ಮತ್ತು ಸಂಸಾರ. ಇದರ ಸುತ್ತಲೇ ಗಿರಿಕಿ ಹೊಡೆಯುತ್ತ, ಗಂಡನ ಮನೆಯೆಂದರೆ ಅದು ವೈರಿಭೂಮಿ, ಅಲ್ಲಿನವರೆಲ್ಲಾ ವೈರಿಗಳು, ತನ್ನ ಗಂಡ ಅವುರುಗಳ ಕಪಿಮುಷ್ಟಿಯಲ್ಲಿರುವ ಮಿಕ, ಅವನನ್ನು ಅಲ್ಲಿಂದ ಬಿಡಿಸಿಕೊಂಡು ತನ್ನ ತವರಿಗೆ ಕೊಂಡೊಯ್ಯಬೇಕೆಂದೋ; ಇಲ್ಲಾ ಅಲ್ಲಿನ ಅವಿಭಾಜ್ಯ ಕುಟುಂಬಗಳ ಮಧ್ಯದಲ್ಲಿನ ರಾಜಕೀಯ, ಅದರ ಹಿರಿಯನ ದರ್ಪ, ಕಿರಿಯನ ಮೌಢ್ಯ.......ಇತ್ಯಾದಿ, ಇತ್ಯಾದಿ; ಇನ್ನು ಕೆಲವೋ ಇದೇ ಕತೆಯನ್ನು ಕೊಂಚ ಹೈಟೆಕ್ ಆಗಿ ಮಾನವ ಸಂಬಂಧಗಳ ಸೂಕ್ಷ್ಮಗಳನ್ನು ತೋರುವ ಚತುರ್ಮತಿಗಳಂತೆ ಕತೆ ಹೆಣೆದು ತೋರಿಸುತ್ತವೆ. ಸಂಸಾರದ ಸದಸ್ಯರ ಪಾತ್ರಗಳನ್ನು ಪಗಡೆಯಾಟದ ದಾಳದಂತೆ ಈ ವಿಕೃತ ಧಾರಾವಾಹಿ ಅಜ್ಞಾನೀ ನಿರ್ದೇಶಕರುಗಳು ಆಡಿಸುತ್ತಾರೆ. ಈ ಪಾತ್ರಗಳಿಗೆ ಕತೆಯಲ್ಲಿ ಕೈತುಂಬ ಕೆಲಸವಿರದೆ ಕುಟುಂಬ ರಾಜಕೀಯವೇ ಬಹುಮುಖ್ಯ ಉದ್ಯೋಗವಾಗಿರುತ್ತದೆ. ಈ ಪಾತ್ರಗಳು ವ್ಯವಹಾರ/ಉದ್ಯೋಗದಲ್ಲಿದ್ದರೂ ಅದು ನೆಪಕ್ಕಷ್ಟೇ ಎಂಬಂತಿರುತ್ತದೆ. ಈ ರೀತಿ ಸೋಮಾರಿತನ/ ಸಣ್ಣತನ/ಸ್ವಾರ್ಥಗಳನ್ನೇ ವೈಚಾರಿಕತೆ, ಸ್ತ್ರೀ ಸ್ವಾತಂತ್ರ್ಯ, ಸ್ವಾಭಿಮಾನ, ತನ್ನತನಗಳೆಂದು ಪ್ರತಿಪಾದಿಸುತ್ತಾರೆ. ಅಷ್ಟೇ ಅಲ್ಲದೆ ತಮ್ಮನ್ನು ಸ್ತ್ರೀ ಸಂವೇದನೆಯ ಅಪ್ರತಿಮ ಬುದ್ದಿಜೀವಿಗಳೆಂದು ಬಿಂಬಿಸಿಕೊಳ್ಳುತ್ತಾರೆ. ಪುಟ್ಟಣ್ಣ ಕಣಗಾಲರ ವಾರಸುದಾರರೆಂದು ಕರೆಯಲ್ಪಡುವ ನಿರ್ದೇಶಕರೋರ್ವರ ಮೆಗಾ ಧಾರಾವಾಹಿಗಳನ್ನೇ ಗಮನಿಸಿ ನೋಡಿ! ಸಮಸ್ಯೆಯಲ್ಲದ ಸಮಸ್ಯೆಗಳನ್ನು ತೋರುತ್ತ ಆರೋಗ್ಯವಂತ ಸಮಾಜದಲ್ಲಿ ಈ ನಿರ್ದೇಶಕರು ’ಸಮೂಹ ಮನೋವ್ಯಾಧಿ’ಯನ್ನು ಪಸರಿಸುತ್ತಿದ್ದಾರೆಂದೇ ನನ್ನ ಅನಿಸಿಕೆ!

ಗಂಡನೆಂಬ ಪ್ರಾಣಿ ಹೇಗೆ ನಡೆದುಕೊಂಡರೂ ಅವನು ಹೆಂಡತಿಯನ್ನು ಅವಮಾನಿಸುತ್ತಿದ್ದಾನೆ, ಅನುಮಾನಿಸುತ್ತಿದ್ದಾನೆ, ಅವಳೊಂದಿಗೆ ಏನೋ ಮುಚ್ಚಿಡುತ್ತಿದ್ದಾನೆ ಎಂಬಂತೆಯೋ ಅಥವಾ ಈ ನಿರ್ದೇಶಕರುಗಳಿಗೆ ಸಂಸಾರ ಸೂಕ್ಷ್ಮಗಳು ಚೆನ್ನಾಗಿ ಅರಿತಂತೆಯೋ ಧಾರಾವಾಹಿಗಳನ್ನು ತೋರುತ್ತ ನಾರ್ಮಲ್ ಗೃಹಿಣಿಯರನ್ನು ಅಬ್ ನಾರ್ಮಲ್ ಮಾಡುತ್ತಿದ್ದಾರೆ. ಅನ್ಯೋನ್ಯವಾಗಿರುವ ಕುಟುಂಬವೊಂದರ ಅತ್ತೆ / ಸೊಸೆಯರು ಒಟ್ಟಿಗೆ ಕುಳಿತು ಈ ಧಾರಾವಾಹಿಗಳನ್ನು ನೋಡುತ್ತ ನೋಡುತ್ತ ಆ ಧಾರಾವಾಹಿ ಪಾತ್ರಗಳೇ ತಾವಾಗಿ ತಮ್ಮ ತಮ್ಮಲ್ಲೇ ಒಂದು ಬಗೆಯ ಸಂಕಟವನ್ನು ತುಂಬಿಕೊಳ್ಳುತ್ತ ತಮ್ಮ ಸಂಸಾರಗಳಲ್ಲಿ ಒಂದು ಸಣ್ಣ ಬಿರುಕನ್ನು ಸೃಷ್ಟಿಸಿಕೊಂಡುಬಿಡುತ್ತಾರೆ. ಈ ಧಾರಾವಾಹಿಗಳು ಮೆಗಾ ಧಾರಾವಾಹಿಗಳಾದಂತೆಯೇ, ಈ ಬಿರುಕು ಮೆಗಾ ಬಿರುಕಾಗಿ ತುಂಬಿದ ಸಂಸಾರಗಳನ್ನು ಒಡೆಯುತ್ತಿವೆ.

ಏನೇ ಕಷ್ಟ ಬಂದರೂ ಕುಟುಂಬವೇ ಮೇಲೆಂದು ಬಗೆದಿದ್ದ ಭಾರತೀಯ ಗೃಹಿಣಿ ಇಂದು ತನ್ನ ಸ್ವಾಭಿಮಾನವೇ (ಇದು ಸಣ್ಣತನದ ಪೊಳ್ಳು ಪ್ರತಿಷ್ಟೆಯಾದರೂ ಅವಳು ಅದನ್ನು ಸ್ವಾಭಿಮಾನವೆಂದೇ ಬಗೆಯುತ್ತಾಳೆ ಏಕೆಂದರೆ ಆ ಧಾರಾವಾಹಿಗಳ ನಿರ್ದೇಶಕ ಹಾಗೆ ಭಿತ್ತಿಸುತ್ತಿರುತ್ತಾನೆ!) ಬಹುಮುಖ್ಯವೆಂದು ಹೆಡೆ ಎತ್ತಿ ಬುಸುಗುಡುತ್ತಿದ್ದಾಳೆ!

ಈ ರೀತಿ ಬುಸುಗುಟ್ಟು ಗಂಡನೆಂಬ ಪ್ರಾಣಿಯನ್ನು ಬಿಟ್ಟ ಶಕ್ತ ಮಹಿಳೆ, ಆಶ್ರಯವಾಗಿ ಅಶಕ್ತ/ನೊಂದ ಮಹಿಳೆಯರಿಗಾಗಿ ಇರುವ ಸ್ತ್ರೀಶಕ್ತಿ ಸಂಘಕ್ಕೆ ಸೇರಿಕೊಳ್ಳುತ್ತಾಳೆ. ಈ ರೀತಿಯ ಮಹಿಳೆಯರಿಂದಾಗಿ ಸ್ತ್ರೀಶಕ್ತಿ ಸಂಘಗಳು ಅರ್ಥಹೀನವಾಗುತ್ತಿದ್ದಾವೆ. ಮೊದಲೆಲ್ಲಾ ನಿಜಾರ್ಥದಲ್ಲಿ ನೊಂದ, ಅಶಕ್ತ ಮಹಿಳೆಯರಿಗೆ ಬೆಳಕು ಕಾಣಿಸುವಂತಿದ್ದ ಈ ಮಹಿಳಾ ಸಂಘಗಳ ಉದ್ದೇಶಗಳು ಪ್ರಸ್ತುತ ವಿದ್ಯಮಾನದಲ್ಲಿ ಶಕ್ತ ಮಹಿಳೆಯರಿಂದ ತುಂಬಿ ವಿರೋಧಾಭಾಸವೆನಿಸುತ್ತವೆ. ಅಲ್ಲಿ ರೊಟ್ಟಿ ತಟ್ಟುತ್ತ ಹಪ್ಪಳ ಉದ್ದುತ್ತಾ ತನ್ನ ನೆಚ್ಚಿನ ಧಾರಾವಾಹಿಗಳನ್ನು ನೋಡುತ್ತ ತನ್ನ ಕತೆಯನ್ನು ತನ್ನಂತೆಯೇ ಇರುವ ಇತರೆ ಭಗಿನಿಯರೊಂದಿಗೆ ಪರಸ್ಪರ ಹಂಚಿಕೊಳ್ಳುತ್ತ ತಾನೊಂದು ಒಳ್ಳೆಯ ನಿರ್ಧಾರವನ್ನು ಕೈಗೊಂಡೆನೆಂದು ಬೀಗುತ್ತಾಳೆ. ಹಾಗೆಯೇ ಇಂದಿನ ಗೃಹಿಣಿ ತಾನೀ ಧಾರಾವಾಹಿಗಳನ್ನು ನೋಡಲೋಸುಗ ತನ್ನ ಅಡಿಗೆ ಕಾರ್ಯವನ್ನು ಖೈದು ಮಾಡಿ ಸ್ತ್ರೀಶಕ್ತಿ ಸಂಘಗಳಿಂದ ತನ್ನೆಲ್ಲ ಅಡುಗೆ ಪದಾರ್ಥಗಳನ್ನು ಖರೀದಿಸಿ ಮೆಗಾಸೀರಿಯಲ್ ಗಳಿಗಾಗಿ ತನ್ನ ಮೆಗಾ ಸಮಯವನ್ನು ಕಾಯ್ದಿರಿಸುತ್ತಾಳೆ. ಈ ಸ್ತ್ರೀಶಕ್ತಿ ಸಂಘಗಳು ಇಂದು ಅನೇಕ ಖಾಂದಾನೀ ಹೋಟೆಲ್ಲಿಗರಿಗೆ ಸವಾಲೆಸೆಯುತ್ತ ರೊಟ್ಟಿ, ಚಪಾತಿ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಮುಂತಾದ ಸಾಂಪ್ರದಾಯಿಕ ತಿಂಡಿಗಳನ್ನು ಮಾರುವುದಲ್ಲದೇ, ಭಾರತದ ಆಧುನಿಕ ತಿಂಡಿಗಳಾದ ಗೋಬೀ ಮಂಚೂರಿ, ಚಿಕನ್ ಕಬಾಬ್, ಕಟ್ಲೆಟ್, ಚೈನೀಸ್ ನೂಡಲ್, ಸ್ಯಾಂಡ್ವಿಚ್, ಪಿಜ್ಜಾಗಳನ್ನೂ ತಯಾರಿಸಿ ಮಾರುತ್ತ ಪೂರ್ವ ಪಶ್ಚಿಮಗಳ ಸಮನ್ವಯವನ್ನು ಮೆರೆಯುತ್ತಿವೆ. ಇವರ ಭರಾಟೆ ಮತ್ತು ಭಾರತೀಯರ ಪಾಶ್ಚಾತ್ಯ ತೀಟೆಯನ್ನು ನೋಡಿದರೆ ಮುಂದೆ ಈ ಸ್ತ್ರೀಶಕ್ತಿ ಸಂಘಗಳು ಬ್ಯಾಚೆಲರ್ ಪಾರ್ಟಿಗಳನ್ನು ಕೂಡಾ ನಡೆಸಿಕೊಡುವರೇನೋ ಎಂದು ಗಾಬರಿಯಾಗುತ್ತದೆ.

ಮೊದಲೆಲ್ಲಾ ಅತ್ಯಂತ ಶ್ರ್‍ಈಮಂತ ವರ್ಗದಲ್ಲೋ ಅಥವಾ ಅತೀ ವಿದ್ಯಾವಂತರಲ್ಲೋ ಕಾಣುತ್ತಿದ್ದ ಈ ಸೂಕ್ಷ್ಮ ಸಂವೇದನೆಯ ಸಮಸ್ಯೆಗಳನ್ನು, ಧಾರಾವಾಹಿ ನಿರ್ದೇಶಕ ಹಳ್ಳಿಯ ಕೂಲಿನಾಲಿ ಮಾಡುವ ಗೃಹಿಣಿಯರಿಗೂ ಪರಿಚಯಿಸಿ ಅತ್ಯಂತ ನಿಕಟವಾಗಿ ಮನದಟ್ಟು ಮಾಡಿಕೊಟ್ಟಿದ್ದಾನೆ. ಗಂಡ ’ಇವತ್ತು ಅಡಿಗೆ ಏನೇ?’ ಎಂದರೂ ಅವನು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದುಕೊಳ್ಳುವ ಇಂದಿನ ಭಾರತನಾರೀ, ಗಂಡನೆಂಬ ಪ್ರಾಣಿ ’ಬಾರೆ ಮಂಚಕೆ’ ಎಂದರಂತೂ ಅವನು ತನ್ನನ್ನು ಕ್ಷುಲ್ಲಕವಾಗೇ ನೋಡುತ್ತಿದ್ದಾನೆ ಎಂದು ಮಹಾಮಾರಿಯಾಗಿ ಗಂಡನನ್ನು ಚಚ್ಚುತ್ತಿದ್ದಾಳೆ. ಈ ಧಾರಾವಾಹಿ ಮಹಿಮೆಯರಿಯದ ಗಂಡು ತನ್ನಲ್ಲೆನೋ ಐಬಿರಬಹುದೆಂದು ಡಾಕ್ಟರನ ಬಳಿ ಗುಪ್ತಸಮಾಲೋಚನೆಯಲ್ಲಿ ತೊಡಗುತ್ತಾನೆ ಅಥವಾ ಒಳಗೇ ಕೊರಗುತ್ತ ಮದ್ಯದಲ್ಲಿ ಮಜಾ ಕಾಣುತ್ತಾನೆ.

ಒಟ್ಟಾರೆ ಏರುತ್ತಿರುವ ಸ್ತ್ರೀಶಕ್ತಿ ಸಂಘಗಳ ಸಂಖ್ಯೆಗೂ, ಸೊರಗುತ್ತಿರುವ ಗಂಡಸರ ಸಂಖ್ಯೆಗೂ ಮತ್ತು ಮೆಗಾ ಸೀರಿಯಲ್ ಗಳ ಮೆಗಾತನಕ್ಕೂ ನೇರ ಸಂಬಂಧವಿದೆಯೆನಿಸುತ್ತದೆ.

ಸಾಮಾಜಿಕವಾಗಿಯೂ ಕೂಡ ಈ ಧಾರಾವಾಹೀ ಪಿಡುಗು ಎಷ್ಟು ವ್ಯಾಪಕವಾಗಿದೆಯೆಂದರೆ ನೀವು ನಿಮ್ಮ ನೆಂಟರ ಮನೆಗೋ ಸ್ನೇಹಿತರ ಮನೆಗೋ ಅಪರೂಪಕ್ಕೆ ಮನಸ್ಸನ್ನು ಮುದಗೊಳಿಸುವ ಆತ್ಮೀಯ ಮಾತುಕತೆಗಾಗಿ ಹೋದರೆ, ಅವರುಗಳು ನಿಮ್ಮನ್ನು ಕೂರಿಸಿ ಟೀವಿ ಹಾಕುತ್ತಾರೆ. ನೀವು ಮಾತನಾಡಬೇಕೆಂದುಕೊಂಡಿದ್ದುದೆಲ್ಲಾ ಉಭಯಕುಶಲೋಪರಿಯಲ್ಲೇ ಮುಗಿದು ಅವರಿಟ್ಟ ಟೀ/ಕಾಫಿಗಳನ್ನು ಕುಡಿದು ಒಂದು ’ಪ್ರೀತಿ ಇಲ್ಲದ ಮೇಲೆ’ ಎಂಬ ಧಾರಾವಾಹಿಯ ಎಪಿಸೋಡ್ ಅನ್ನು ನೋಡಿಕೊಂಡು ಬರುತ್ತೀರಿ. ಹೆಚ್ಚೆಂದರೆ ಎಪಿಸೋಡ್ ಮಧ್ಯದಲ್ಲಿ ಪರಸ್ಪರರ ಮುಖಗಳನ್ನು ನೋಡಿ ಹಲ್ಕಿರಿದಿರುತ್ತೀರಿ, ಅಷ್ಟೇ!

ಹಂಸಲೇಖಾ ಹಾಡಿಗೆ ಬೆಚ್ಚಗಾಗಿ, ಮಾಲಾಶ್ರೀ ಡ್ಯಾನ್ಸಿಗೇ ಒದ್ದೆಯಾಗುತ್ತಿದ್ದ ಜನ, ಈ ಧಾರಾವಾಹಿಗಳ ಪ್ರಭಾವದಿಂದಾಗಿ ಸದಾ ಚಿಂತೆಗೀಡಾದವರಂತೆ ತೋರುತ್ತಾರೆ! ಜೀವನೋತ್ಸಾಹವೇ ಬತ್ತಿದಂತೆ ಸದಾ ಸೀರಿಯಸ್ ಆಗಿ ಕಾಣುತ್ತ, ಎದ್ದು ಕೂರುವುದಕ್ಕೂ ವಿಟಮಿನ್ / ವೈಯಾಗ್ರ ಬೇಕೆನ್ನುತ್ತಿದ್ದಾರೆ. ಕಣ್ಬಿಟ್ಟು ಸುತ್ತಮುತ್ತಲೆಲ್ಲೇ ನೋಡಿದರೂ ಭಾರತದ ತುಂಬೆಲ್ಲಾ ಕಾಣಿಸಬಹುದಾದಂತಹ ಈ ಮಾಮೂಲೀ ಗೋಳಿನ ಕತೆಗಳಿಗಿಂತ ಭಿನ್ನವಾಗಿ ಬೇರೆಯದನ್ನು ಬಯಸದೇ ಭಾರತೀಯ ಮಹಿಳೆ ಮತ್ತದೇ ಗೋಳಿನ ಧಾರಾವಾಹಿಗಳನ್ನು ಬಯಸುವುದು ಜಗತ್ತಿನ ಅದ್ಭುತಗಳಲ್ಲೊಂದೋ ಅಥವಾ ಟೀವಿಯನ್ನು ಆರಿಸಲಾಗದ ಅಸಹಾಯಕತೆಯೋ ತಿಳಿಯದು! ಬಹುಶಃ, ಆ ಧಾರಾವಾಹಿಗಳಲ್ಲಿ ಪರಕಾಯ ಪ್ರವೇಶ ಮಾಡುತ್ತ ಭಾರತೀಯ ಗೃಹಿಣಿ ಅದ್ಭುತ ದುರಂತ ನಾಯಕಿಯಾಗುವತ್ತ ದಾಪುಗಾಲಿಡುತ್ತಿರುವದಂತೂ ದಿಟ.

ಇತ್ತ, ಧಾರಾವಾಹಿಗಳನ್ನು ನೋಡಿರದ ಬಡಪ್ರಾಣಿ ಗಂಡ, ತಾನು ತಪ್ಪಿದ್ದೆಲ್ಲಿ? ಎಂದು ಬಾರುಗಳನ್ನು ಸುತ್ತುತ್ತ ಕಂಡ ಕಂಡವರೊಂದಿಗೆ ತನ್ನ ಕರುಣಾಜನಕ ಕತೆಯನ್ನು ಹೇಳಿ ಪ್ರಶ್ನಿಸುತ್ತಿರುತ್ತಾನೆ! ಏಕೆಂದರೆ ಈ ರೀತಿ ನನಗೂ ಒಬ್ಬ ಬಾರೊಂದರಲ್ಲಿ ತನ್ನ ಕತೆಯನ್ನು ಸುತ್ತಿ ಸುಸ್ತುಗೊಳಿಸಿದ್ದ! ಅವನ ಕತೆಯನ್ನು ನನ್ನೊಂದಿಗೆ ಕೇಳಿದ ನನ್ನ ಆಪ್ತಮಿತ್ರ "ನೋಡಿದೆಯಾ, ತನ್ನ ಗಂಡನ ತಪ್ಪನ್ನೆಲ್ಲಾ ಮನ್ನಿಸಿ ತನ್ನ ಸಂಸಾರವನ್ನು ಉಳಿಸಿಕೊಳ್ಳುವುದರ ಮೂಲಕ ಅಮೇರಿಕನ್ ಹಿಲರಿ ಕ್ಲಿಂಟನ್ ಕುಟುಂಬ ಮೌಲ್ಯಗಳನ್ನು ಜಾಗತಿಕವಾಗಿ ಎತ್ತಿಹಿಡಿದರೆ, ಈ ಧಾರಾವಾಹಿಗಳನ್ನು ನೋಡಿದ ಭಾರತನಾರಿಯರು ಡೈವೋರ್ಸ್ ಡಿಮ್ಯಾಂಡಿಸುತ್ತಿದ್ದಾರೆ. ನಿಮ್ಮ ಅಮೇರಿಕಾದ ಹಿಲರಿ ಕ್ಲಿಂಟನ್, ಇಂದು ಅಮೇರಿಕೆಗಿಂತ ಹೆಚ್ಚಾಗಿ ಭಾರತಕ್ಕೇ ಅನಿವಾರ್ಯವಾಗಿದ್ದಾಳೆ" ಎಂದು ಮಾರ್ಮಿಕವಾಗಿ ನುಡಿದಾಗ ’ಹೌದಲ್ವೆ’ ಎನ್ನಿಸಿತು.

ಅಣಕ:

ಭಾರತದ ಇಂದಿನ ಯಾವುದೇ ಭಾಷೆಯ ಧಾರಾವಾಹಿಗಳನ್ನು ವಿನೋದಾರ್ಥವಾಗಿ ನೋಡಿ. ಅವುಗಳ ಕರುಣಾಜನಕ ಕತೆಗಳು, ಮತ್ತು ಅವುಗಳನ್ನು ಸೀರಿಯಸ್ ಆಗಿ ನೋಡುವ ಪ್ರೇಕ್ಷಕರು ನಿಮಗೆ ಇಲ್ಲಿನ ಅಣಕಕ್ಕಿಂತ ವಿನೋದವಾಗಿ ಕಾಣುತ್ತಾರೆ. ಸುಮ್ಮನೆ ನೀವೊಮ್ಮೆ ’ಸಿಲ್ಲಿ ಲಲ್ಲಿ’ ಎಂಬ ನಗೆ ಧಾರಾವಾಹಿಯೆಂಬ ಕರುಣಾಜನಕ ಧಾರಾವಾಹಿಯ ಕೆಲ ಎಪಿಸೋಡ್ ಗಳನ್ನು ನೋಡುಗರ ಹಿಂದಿನಿಂದ ನೋಡಿ! ಅದರಲ್ಲಿ ಇನ್ವಾಲ್ವ್ ಆಗದೆ ಈ ಧಾರಾವಾಹಿಯನ್ನು, ಅದರ ಪಾತ್ರಗಳನ್ನು ಗಮನಿಸಿದರೆ ನಿಮಗೆ ’ಇಂತಹ ಪ್ಯಾಥೆಟಿಕ್’ ಧಾರಾವಾಹಿಯನ್ನು ನೋಡುತ್ತ ಗಹಗಹಿಸಿ ನಗುವವರನ್ನು ಕಂಡು ನೀವು ಅನುಕಂಪಪಡದಿದ್ದರೆ ಕೇಳಿ!

No comments:

Post a Comment