ಇತ್ತೀಚಿನ ಸೆನ್ಸೇಷನ್ ಸುದ್ದಿಯಾದ ಮಾಜಿ ಮಂತ್ರಿ ವಿಶ್ವನಾಥರ ಆತ್ಮಕಥನದ ಪ್ರಸಂಗವನ್ನು ತಿಳಿದಿದ್ದೀರಷ್ಟೇ. ನಾನೊಬ್ಬ ವೃತ್ತಿಪರ ಅಂಕಣಕಾರನಲ್ಲದ್ದರಿಂದ ಈ ವಿಷಯದ ಬಗ್ಗೆ ಬರೆಯುವ ಮುನ್ನ ನನ್ನ ಹೋಂವರ್ಕ್ ಮಾಡಿಯೇ ಬರೆಯುತ್ತಿದ್ದೇನೆ. ಕೆಲ ವೃತ್ತಿಪರ ಅಂಕಣಕಾರರಿಗೆ ಹೂಸಿನ ವಾಸನೆ ಸಿಕ್ಕರೂ ಸಾಕು, ಅದು ಹೆಂಗಸಿನದೇ ಗಂಡಸಿನದೇ, ಆ ವ್ಯಕ್ತಿ ಏನನ್ನು ತಿಂದಿರಬಹುದು, ಎಲ್ಲಿ ತಿಂದಿರಬಹುದು, ಆಗ ಅವರೊಂದಿಗೆ ಯಾರ್‍ಯಾರಿದ್ದರು ಎಂಬುದನ್ನೆಲ್ಲ ಗ್ರಹಿಸುವ ಚಾಣಾಕ್ಷತೆ ಇರುತ್ತದೆ! ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರನ್ನೂ ಮೀರಿಸುವಷ್ಟು ಪತ್ತೇದಾರಿಕೆ ಚಮತ್ಕಾರವನ್ನು ಮೆರೆಯುವ ಇವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ವ್ಯಕ್ತಿಗಳು ತಮಗೆ ಬಹುಕಾಲದಿಂದ ಚಿರಪರಿಚಿತರೆನ್ನುವಷ್ಟು ತಮ್ಮ ಲೇಖನದಲ್ಲಿ ಬರೆದುಕೊಳ್ಳುತ್ತಾರೆ! ನನ್ನಲ್ಲಿ ಆ ಶಕ್ತಿ ಇಲ್ಲ. ಬರೆಯುವ ಮುನ್ನ ಸಾಕಷ್ಟು ಹೋಂವರ್ಕ್ ಮಾಡಲೇ ಬೇಕಾದ ಅನಿವಾರ್ಯತೆ ನನಗಿದೆ! ಹಾಗೆ ನೋಡಿದರೆ ಹೆಚ್. ವಿಶ್ವನಾಥರ ’ಹಳ್ಳಿ ಹಕ್ಕಿಯ ಹಾಡು’ ಇಷ್ಟೊಂದು ಸಂಚಲನವನ್ನುಂಟು ಮಾಡುವ ’ಬರ್ಡ್ ಆಫ್ ಪ್ಯಾರಡೈಸ್’ ಆಗಿರದೆ, ನಮ್ಮ ನಿಮ್ಮಲ್ಲಿ ಕಾಣುವ ಬಾನಾಡಿ ಹಕ್ಕಿಯ ಹಾಡಾಗಿದೆ. ಇದೊಂದು ಸುದ್ದಿಯಾಗಲೇ ಬಾರದಂತಹ ಸಂಗತಿ. ಸಾರ್ವಜನಿಕ ರಂಗಗಳನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಳ್ಳುವ ಜನ, ತಮ್ಮ ಕೆಲ ವೈಯುಕ್ತಿಕ ಜೀವನದ ಭಾಗವು ಕೂಡ ಸಾರ್ವತ್ರಿಕವಾಗುತ್ತದೆಂಬುದನ್ನು ಅರಿತೇ ಆ ರಂಗಗಳಿಗೆ ಬರಬೇಕು.
ಇಲ್ಲಿ ವಿರೋಧ ವ್ಯಕ್ತವಾಗಿರುವ ಅಂಶವೆಂದರೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿಯೋರ್ವರು ಮತ್ತು ಮಾಜಿ ಕನ್ನಡ ನಾಯಕಿ ನಟಿಯೋರ್ವರ ಪರಸ್ಪರ ಪ್ರೇಮಜಾಲದಲ್ಲಿ ಬಿದ್ದಿದ್ದರೆಂದೂ, ಕರ್ನಾಟಕದಲ್ಲಿ ಜನಜನಿತವಾಗಿರುವ ಸಂಗತಿಯನ್ನು ವಿಶ್ವನಾಥರು ಆ ಮಾಜಿ ಮುಖ್ಯಮಂತ್ರಿಯವರೊಂದಿಗಿದ್ದ ತಮ್ಮ ಸಲುಗೆಯಿಂದ ಅವರೊಡನೆ ಈ ವಿಷಯವನ್ನು ಪ್ರಾಸ್ತಾಪಿಸಿದ್ದಾಗಿ ಹೇಳಿಕೊಂಡಿದ್ದಾರೆ. ವಿಶ್ವನಾಥರು ಈ ಸಂಬಂಧವನ್ನು ಧೃಢೀಕರಿಸುವ ಯತ್ನವನ್ನಾಗಲೀ, ಈ ಈರ್ವರ ತೇಜೋವಧೆಯನ್ನು ಮಾಡುವ ಪ್ರಯತ್ನವನ್ನಾಗಲೀ ಮಾಡಿಲ್ಲ. ಇದು ತಮ್ಮ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವಿನ ಸಲುಗೆಯನ್ನು ಹೇಳುವ ಪ್ರಯತ್ನವಾಗಿದೆಯೇ ಹೊರತು ಮತ್ಯಾವ ಮಹತ್ವವನ್ನೂ ಪಡೆದಿಲ್ಲ.
ಈ ಹಿಂದೆ ನಾವು ನೀವೆಲ್ಲ ಲಂಕೇಶ್ ಪತ್ರಿಕೆ ಮತ್ತಿತರ ಪತ್ರಿಕೆಗಳಲ್ಲಿ ಗುಂಡೂರಾವ್ ಮತ್ತು ಭರತನಾಟ್ಯ ಕಲಾವಿದೆಯೋರ್ವರ ಸಂಬಂಧ, ಜೆ.ಹೆಚ್.ಪಟೇಲರ ಸಿನಿಮಾನಟಿಯೋರ್ವರ ಸಂಬಂಧ ಮತ್ತು ಡಾ: ರಾಜ್ ಮತ್ತು ಲೀಲಾವತಿಯವರ ಕುರಿತು ಸಾಕಷ್ಟು ಓದಿದ್ದೇವೆ. ಸಾರ್ವಜನಿಕ ರಂಗದಲ್ಲಿದ್ದು ಇದನ್ನೆಲ್ಲ ಅರಿತಿದ್ದ ಅವರುಗಳೂ ಯಾವ ಪ್ರತಿಭಟನೆಯನ್ನು ತೋರಿರಲಿಲ್ಲ. ಹಾಗೆಯೇ ಈ ಈರ್ವರು ಕೂಡ ಯಾವುದೇ ಪ್ರತಿಭಟನೆಯನ್ನು ತೋರಿಲ್ಲವೆಂಬುದು ಗಮನಿಸಬಹುದಾದ ಅಂಶ!
ಆದರೆ ಇದನ್ನು ಕೆಲ ಕುಹಕಿಗಳು ಯಾರನ್ನೋ ಮೆಚ್ಚಿಸಲೆಂಬಂತೆ ಈ ಕೃತಿಯ ಬಿಡುಗಡೆಯನ್ನು ಪ್ರತಿರೋಧಿಸುತ್ತ ಪ್ರಚಾರ ಕೊಡುತ್ತಿದ್ದಾರೆ ಮತ್ತು ತೆಗೆದುಕೊಳ್ಳುತ್ತಿದ್ದಾರೆ.
ಇನ್ನು ಈ ವಿಷಯದ ಸತ್ಯಾನ್ವೇಷಣೆಯಲ್ಲಿ ಈ ಅಪವಾದವನ್ನು ಹೊತ್ತ ಮುಖ್ಯಮಂತ್ರಿಗಳನ್ನು, ಒಬ್ಬ ವಿಗ್ ಧರಿಸುವ ವ್ಯಕ್ತಿಯಾಗಿ ಮನೋಶಾಸ್ತ್ರದ ಪರಿಧಿಯಲ್ಲಿ ವಿಶ್ಲೇಷಿಸಿದರೆ, ಇದು ಅವರಲ್ಲಿನ ಕೀಳರಿಮೆಯನ್ನು ಮುಚ್ಚಿ ಹಿರಿಮೆಯನ್ನು ಬೆಳೆಸುತ್ತದೆಂದೋ, ಅವರು ಸಂಗತಿಗಳನ್ನು ಮುಚ್ಚಿಡುವ ವ್ಯಕ್ತಿತ್ವದರೆಂದೋ ಅಭಿಪ್ರ್‍ಆಯಿಸಬಹುದು. ಆದರೆ ಕರ್ನಾಟಕದ ಬಡ ಬೋರೇಗೌಡನ ಸೇವೆಯನ್ನು ಮಾಡಲು ರಾಜಕೀಯ ರಂಗದಲ್ಲಿರುವ ವ್ಯಕ್ತಿಯೋರ್ವರು, ’ಪಾಪ್’ ಜಗತ್ತಿನ ತಾರೆಯಂತೆ ವಿಗ್ ಧರಿಸುವುದು, ತಮ್ಮ ವಿಚಾರಗಳನ್ನು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳುವುದು, ಪ್ರತಿಭಟನೆ, ಗಲಾಟೆಗಳಿಗೆಲ್ಲ ತಮ್ಮ ಬಲಗೈ ಬಂಟನೆಂದೇ ಇರುವ ಯುವ ನಾಯಕರೋರ್ವರನ್ನು ಮುಂದಿಟ್ಟು ನಡೆಸುವುದು...ಇತ್ಯಾದಿ ಅವರ ವ್ಯಕ್ತಿತ್ವದ ಮೇಲೆ ತೀವ್ರ ಗುಮಾನಿಯನ್ನಂತೂ ಹುಟ್ಟಿಸುತ್ತವೆ!
ಇನ್ನು ವಿಶ್ವನಾಥರು ತಮ್ಮ ಪುಸ್ತಕದಲ್ಲಿ ತಮ್ಮ ಕಿಲಾಡಿತನ, ದೌರ್ಬಲ್ಯ, ಅದರಿಂದೊದಗಿದ ಅನಿವಾರ್ಯತೆಗಳು, ತಮ್ಮ ಎರಡು ವಿವಾಹಗಳು ಇನ್ನೆಲ್ಲವನ್ನೂ ತೆರೆದಿಡುತ್ತ ಒಬ್ಬ ಸಂವೇದನಾಶೀಲ ವ್ಯಕ್ತಿಯಾಗಿ ಗೋಚರಿಸುತ್ತ ಪ್ರಭಾವೀ ರಾಜಕಾರಣಿಯೆನಿಸದೆ ನಮ್ಮ ನಿಮ್ಮೊಳಗಿನ ವಿಶಿಷ್ಟ ವ್ಯಕ್ತಿಯಾಗಿ ಕಾಣಿಸುತ್ತಾರೆ. ಇವರ ವಿಚಾರಧಾರೆ, ಭಾಷಣಗಳನ್ನು ಕೇಳಿದಾಗ ಇವರೋರ್ವ ಸಾಹಿತಿಯಾಗಿರಬೇಕಿತ್ತೆಂದೇ ಅನಿಸುತ್ತದೆ.
ಹಾಗಂತ ಇಲ್ಲಿ ಪ್ರತಿಭಟಿಸಬೇಕಾದ ಸಂಗತಿಯೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಇಲ್ಲಿ ಪ್ರತಿಭಟಿಸಲೇಬೇಕಾದ ಸಂಗತಿಯೊಂದಿದೆ! ಅದೇನು ಗೊತ್ತೆ?
ಸಾರ್ವಜನಿಕ ಸೇವೆಯಲ್ಲಿರುವ ಈ ರಾಜಕಾರಣೀ ವಿಶ್ವನಾಥರು ಭಾರತದ ನ್ಯಾಯಾಂಗ / ಸಂವಿಧಾನಗಳನ್ನು ಎತ್ತಿಹಿಡಿಯಬೇಕಾದ್ದು ಅವರ ಆದ್ಯ ಕರ್ತವ್ಯ. ಆದರೆ ಈ ಸಾರ್ವಜನಿಕ ಸೇವಕ ನ್ಯಾಯಬಾಹಿರವಾದ ’ಬಹು ವಿವಾಹ’ದ ಅಪರಾಧವೆಸಗಿದ್ದಾರೆ. ತಾವು ಎರಡು ವಿವಾಹವಾಗಿದ್ದೇವೆಂದು ಅವರೇ ಹೇಳಿಕೊಂಡಿರುವ ಸಾಕ್ಷಿಯಾಗಿ ಅವರ ಪುಸ್ತಕವೇ ಕೈಯಲ್ಲಿದೆ. ಇದು ನಮ್ಮ ಕಾನೂನಿನ ಪ್ರಕಾರ ಅಪರಾಧ ಕೂಡ. ಅದರಲ್ಲೂ ಈ ಅಪರಾಧವನ್ನೆಸಗಿದ ವ್ಯಕ್ತಿ ಒಬ್ಬ ಪ್ರತಿಷ್ಟಿತ ಜನ ಪ್ರತಿನಿಧಿ. ಈ ರೀತಿಯ ಜನನಾಯಕರೊಬ್ಬರು ಹೀಗೆ ಹೇಳಿಕೊಂಡರೆ ಇದು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುವುದಷ್ಟೇ ಅಲ್ಲದೆ, ಇವರನ್ನು ಹಿಂಬಾಲಿಸುವ ಮುಗ್ಧ ಜನತೆ ’ಬಹು ವಿವಾಹ’ವನ್ನು ಒಪ್ಪಿಕೊಳ್ಳಲು ಪ್ರಚೋದಿಸಿದಂತಾಗುತ್ತದೆ. ಈ ಕಾರಣಕ್ಕಾಗಿ ಇವರನ್ನು ಅಪರಾಧಿಯಾಗಿಸಿ ನ್ಯಾಯಾಲಯಕ್ಕೆ ಹೋಗಿ ತಕ್ಕ ಶಾಸ್ತಿಯನ್ನು ಮಾಡಿಸಲೇಬೇಕು. ಆದರೆ ಕುರಿಮಂದೆಯಂತೆ ಈ ಪುಸ್ತಕವನ್ನೂ ಓದದೆ, ಅದರಲ್ಲೂ ಸಲ್ಲದ ಕ್ಷುಲ್ಲಕ ಕಾರಣಗಳಿಗೆ ಪ್ರತಿಭಟಿಸುವುದಂತೂ ನಮ್ಮಗಳ ಅಧಃಪತನವನ್ನು ಮೆರೆಸುವ ಸಂಕೇತವೇ ಆಗಿದೆ. ಒಟ್ಟಾರೆ ಈ ಪುಸ್ತಕಕ್ಕಂತೂ ಭಾರೀ ಉಚಿತ ಪಬ್ಲಿಸಿಟಿ!
ಅಣಕ:
ಕಳೆದೆರಡು ವಾರಗಳ ಹಿಂದೆ ಪೀಠಗಳ ಬಗ್ಗೆ ಬರೆದ ಲೇಖನದ ಅಣಕ ನೆನಪಿದೆಯಷ್ಟೇ? ಅಲ್ಲಿ ಅಣಕವಾಗಿ ಬರೆದದ್ದನ್ನು ಶ್ರೀಗಳು, ತಮ್ಮ ಅಗ್ರ ಶಿಷ್ಯೋತ್ತಮರೋರ್ವರನ್ನು ಪೀಠಾಧಿಪತಿಗಳಾಗಿ ಒಪ್ಪಿಕೊಳ್ಳದ ಪಂಚಮಸಾಲೀ ಭಕ್ತಮಂಡಲಿಯನ್ನು ಥೇಟ್ ಬ್ರಿಟಿಷರ ಮಾದರಿಯಲ್ಲಿ ಹೋಳುಮಾಡಿ ಒಂದು ಪಂಥಕ್ಕೆ ತಮ್ಮ ಅಗ್ರ ಶಿಷ್ಯನನ್ನು ಪೀಠಾಧಿಪತಿಯಾಗಿ ಪ್ರತಿಷ್ಟಾಪಿಸಿ, ನಮ್ಮ ಅಣಕಕ್ಕೆ ಶೇಕಡಾ ನೂರು ಗುಣಕಗಳನ್ನು ಕೊಟ್ಟಿದ್ದಾರೆ! ಅಪ್ಪಟ ಬ್ರಹ್ಮಚಾರಿಗಳಾದ ಇವರು ದೇವೇಗೌಡರ ಮಾದರಿಯಲ್ಲಿ ’ಎಫ್’ ಮಾಡಿದ್ದನ್ನು ಪಂಚಮಸಾಲಿಯ ಇನ್ನರ್ಧ ಮಂಡಲಿ, ಈ ಅನಿರೀಕ್ಷಿತ ಗುರುಪ್ರಸಾದದಿಂದ ಸ್ತಂಭೀಭೂತರಾಗಿದ್ದಾರೆ! ಇದರಿಂದ ಪ್ರಭಾವಿತಗೊಂಡಿರುವ ನನ್ನ ಸ್ನೇಹಿತರೋರ್ವರು ನಮಗೂ ಕೂಡ ಪೀಠವೊಂದರ ಅನಿವಾರ್ಯತೆಯಿದ್ದು, ಎನ್.ಆರ್.ಐ. ಪೀಠದ ಬೇಡಿಕೆಯನ್ನು ಈ ಶ್ರೀಗಳ ಮುಂದಿಡುವ ಪ್ರಸ್ತಾಪವನ್ನು ಹೊಂದಿದ್ದಾರೆ. ಮೊಟ್ಟ ಮೊದಲ ಎನ್.ಆರ್.ಐ. ಪೀಠಾಧಿಪತಿಗಳಾಗ ಬಯಸುವ ಅರ್ಹ (?) ಅಭ್ಯರ್ಥಿಗಳು ಶ್ರೀಗಳನ್ನು ಸಂಪರ್ಕಿಸಬೇಕಾಗಿ ವಿನಂತಿ.
ಹಕ್ಕಿಯ ಹಾಡಿಗೆ ಇಂತಹ ಪ್ರತಿಕ್ರಿಯೆಗೆ ಕಾರಣ ನಮ್ಮ ‘ಉತ್ತಮ ಸಮಾಜಕ್ಕಾಗಿ’ ಬ್ರಾಂಡಿನ ಟಿವಿ ೯. ಯಾವುದು ಸುದ್ದಿ, ಯಾವುದು ಅಲ್ಲ ಎಂಬ ಸಾಮಾನ್ಯ ವಿವೇಕವಿಲ್ಲದಂತೆ ವರ್ತಿಸುವ ಈ ಸುದ್ದಿ ಸಂಸ್ಥೆಯಿಂದಾಗಿ ಪುಸ್ತಕ ಬಿಡುಗಡೆಯಾಗುವ ಮೊದಲೇ, ಅದನ್ನು ಓದುವ ಮೊದಲೇ ಜನರು ತಮ್ಮ ಅಭಿಪ್ರಾಯಗಳನ್ನು ತಳೆದರು. ಪ್ರತಿಭಟನೆ ಹೋರಾಟ ಹಾರಾಟ ನಡೆಯಿತು.
ReplyDeleteಇನ್ನು ಪುಸ್ತಕದ ಬಗ್ಗೆ, ಕಮೆಂಟ್ ಮಾಡಲು ನಿಮ್ಮಷ್ಟು ಹೋಂ ವರ್ಕ್ ಮಾಡುವ ಆವಶ್ಯಕತೆ ಇಲ್ಲದುದರಿಂದ ಪತ್ರಿಕೆಯೊಂದರಲ್ಲಿ ಓದಿದ ಆಯ್ದ ಭಾಗಗಳ ಆಧಾರದ ಮೇಲೆ ಹೇಳುವುದಾದರೆ ನಾವು ಈ ಕೃತಿಯನ್ನು ಅದರ ಕರ್ತೃವಿನ ವ್ಯಕ್ತಿತ್ವದ ಇಮೇಜಿನ ನೆರಳಿನಿಂದ ಹೊರತಂದು ಓದಬೇಕು.
ಇನ್ನು ‘ಬಹು ಪತ್ನಿತ್ವ’ದ ಬಗ್ಗೆ ಬಹಿರಂಗವಾಗಿ ಬರೆದಿದ್ದಾರೆ ಎನ್ನುವುದರ ಬಗೆಗಿನ ನಿಮ್ಮ ಆರೋಪ ನನಗೆ ತಮಾಷೆಯಾಗಿ ಕಾಣುತ್ತದೆ. ಅದರ ಡಿಟೇಲ್ಸ್ ಹಾಗೂ ಕಾನೂನಿನಲ್ಲಿ ಯಾವಾಗಿನಿಂದ ಬಹು ಪತ್ನಿತ್ವ ನಿಷೇಧ ಜಾರಿಯಾಯಿತು, ಅದು ಜಾರಿಯಾಗುವ ಮುನ್ನ ಈರ್ವರು ಹೆಂಡಿರು ಇದ್ದವರಿಗೆ ವಿನಾಯಿತಿ ಸಿಕ್ಕಿತೇ ಎಂಬುದು ನನಗೆ ತಿಳಿದಿಲ್ಲ. ಆದರೆ ಈ ಸತ್ಯವನ್ನು ಅವರು ಬಹಿರಂಗವಾಗಿ ಹೇಳಬಾರದಿತ್ತು ಎನ್ನುವುದು ನನಗೆ ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಒಬ್ಬ ವ್ಯಕ್ತಿ ಆತ್ಮಕತೆಯನ್ನು ಬರೆದಾಗ ಅದರಲ್ಲಿ ತಾನೆಷ್ಟು ಬೆತ್ತಲಾಗುವ ವಿನಯವನ್ನು ತೋರಿದ್ದಾನೆ ಎನ್ನುವುದನ್ನು ಆಧರಿಸಿಯೇ ಆತ್ಮಕತೆಯನ್ನು ಅಳೆಯುವುದು ಹೀಗಿರುವಾಗ ಅವರು ಎರಡು ಮದುವೆಯಾಗಿದ್ದರೂ ಪರ್ವಾಗಿಲ್ಲ ಅದನ್ನು ಆತ್ಮಚರಿತ್ರೆಯಲ್ಲಿ ಬರೆಯಬಾರದಿತ್ತು ಎನ್ನುವುದರಲ್ಲಿ ಯಾವ ಅರ್ಥವಿದೆ?
http://uniquesupri.wordpress.com
ವಿಶ್ವನಾಥರ ಬಹುಪತ್ನಿತ್ವ ಅಪರಾಧವೆಂದಾದರೆ,ನಮ್ಮ ರಾಷ್ಟ್ರಕವಿಗಳಿಗೇನು ಹೇಳುವಿರಿ?
ReplyDelete