ಕಸದಿಂದ ರಸವೆಂಬುದನ್ನು ಅಕ್ಷರಶಃ ಜೀವಿಸಿ ತಮ್ಮ ಸೃಷ್ಟಿಯ ಹಿಂದಿನ ಆ ಸೃಷ್ಟಿಕರ್ತನ ಉದ್ದೇಶವನ್ನು ಪ್ರತ್ಯಕ್ಷಿಕವಾಗಿ ತೋರುತ್ತಿರುವ ದಾವಣಗೆರೆಯ ಹಂದಿಗಳ ಬಗ್ಗೆ ಓದಿದ್ದಿರಷ್ಟೆ. ಹಾಗೆಯೇ ಒಮ್ಮೆ ಪ್ರಾಂತ್ಯಗಳು, ರಾಜ್ಯಗಳು, ದೇಶಗಳಿಗನುಗುಣವಾಗಿ ಆ ಭಗವಂತನು ಸೃಷ್ಟಿಸಿರುವ ಜೀವರಾಶಿಗಳನ್ನು ಒಮ್ಮೆ ಗಂಭೀರವಾಗಿ ಅವಲೋಕಿಸಿ ನೋಡಿ. ಈ ಪ್ರತಿಯೊಂದು ಸೃಷ್ಟಿಗಳೂ ಒಂದೊಂದು ಭೌಗೋಳಿಕ ಲಕ್ಷಣಗಳಲ್ಲಿ ಯಾವುದೋ ಒಂದು ಘನ ಉದ್ದೇಶದಿಂದ ಅಲ್ಲಲ್ಲಿ ನಿಯೋಜಿತಗೊಂಡು ಇತರೆಡೆ ನಿಯಮಿತಗೊಂಡಿವೆ. ಇದನ್ನು ಮನಗಂಡೇ ಮುಂದುವರಿದ ರಾಷ್ಟ್ರಗಳು ತಮ್ಮ ನೈಸರ್ಗಿಕ ಜೀವಸಂಕುಲವಲ್ಲದೇ ಇತರೆ ಯಾವುದೇ ಜೀವಸಂಕುಲವೂ ಯಾವ ವಿಧದಿಂದಲೂ ತಮ್ಮ ನಿಸರ್ಗದಲ್ಲಿ ಕಲಬೆರಕೆಯಾಗದಂತೆ ತಡೆಗಟ್ಟುತ್ತಿವೆ. ಇತ್ತೀಚೆಗೆ ನಾನಿರುವ ಶಿಕಾಗೋ ಏರಿಯಾದಲ್ಲಿ ಕಂಡುಬಂದ ವಲಸೆಗಾರ ಏಷಿಯನ್ ಕಾರ್ಪ್ (ಗೆಂಡೆಮೀನು) ಅನ್ನು ಇಲ್ಲಿನ ಪರಿಸರ ಸಂರಕ್ಷಣಾ ಇಲಾಖೆಯು ಯುದ್ಧದ ಮಾದರಿಯಲ್ಲಿ ತಂತ್ರಗಳನ್ನು ಅಳವಡಿಸಿಕೊಂಡು ಈ ಮೀನುಗಳನ್ನು ಬಲಿಹಾಕಿ ನಾಮಾವಶೇಷ ಮಾಡಿತು! ಇದು ಅತ್ಯಂತ ಸಾಮಾನ್ಯ ಸಂಗತಿಯಾಗಿ ನಮಗೆಲ್ಲ ಅನ್ನಿಸಬಹುದು. ಆದರೆ ಆ ಮೀನು ಏಷ್ಯಾದಿಂದ ಅದು ಹೇಗೋ ಬಂದು ಇಲ್ಲಿ ಸೇರಿ ಅತಿ ಶೀಘ್ರವಾಗಿ ವಂಶಾಭಿವೃದ್ಧಿ ಮಾಡುತ್ತ, ಇಲ್ಲಿನ ನೈಸರ್ಗಿಕ ಕಾರ್ಪ್ ಮೀನುಗಳನ್ನು ಕ್ರಮೇಣವಾಗಿ ಇಲ್ಲವಾಗಿಸಿ ಈ ಪರಿಸರದ ಒಂದು ಜೀವ ಸಂಕುಲವನ್ನು ಇಲ್ಲವಾಗಿಸಿಬಿಡುತ್ತಿತ್ತು. ಪರಿಸರ ಸಂರಕ್ಷಣೆಯೆಂದರೆ, ಕೇವಲ ಪ್ರಾಣಿಗಳನ್ನು ಸಂರಕ್ಷಿಸುವುದಷ್ಟೇ ಅಲ್ಲದೆ ಆಯಾ ಪ್ರಾಂತೀಯ ಪ್ರಭೇಧ ವರ್ಗಕ್ಕೆ ಹಾನಿ ಬರುವ ಕೊಂಚ ಸುಳಿವು ದೊರಕಿದರೂ ಅದನ್ನು ಕೂಡಲೇ ನಿಯಂತ್ರಿಸಬೇಕೆಂಬುದು ಗಮನೀಯ ಅಂಶ.
ವಿಶ್ವದೆಲ್ಲೆಡೆಯ ಜನರಿಲ್ಲಿಗೆ ವಲಸೆ ಬಂದು ಕಲೆತು, ಬೆರೆತು ವಿಶಿಷ್ಟ ಮನುಕುಲದ ಕಲಬೆರಕೆ ತಳಿಯೆಂಬಂತಿರುವ ಅಮೇರಿಕನ್ನರು ತಮ್ಮ ಪ್ರಾಣಿ, ವನ, ಗಿಡ, ಮರವಲ್ಲದೇ ನಿಸರ್ಗದ ಯಾವುದೇ ಜೀವಸಂಕುಲವಿರಲಿ ಅದನ್ನು ಅತ್ಯಂತ ನಿಷ್ಟವಾಗಿ ಕಲಬೆರಕೆಯಾಗದಂತೆ ಕಾಯ್ದು ಕಾಪಾಡುತ್ತಾರೆ. ಆದ್ದರಿಂದಲೇ ಇಲ್ಲಿನ ನಾಯಿ, ಬೆಕ್ಕು, ಹಸುಗಳೆಲ್ಲ ಇನ್ನೂ ಕಲಬೆರಕೆಯಾಗದೇ ಆದಷ್ಟೂ ತಮ್ಮ ಮೂಲ ವಂಶವಾಹಿನಿಯನ್ನು ಕಾಪಾಡಿಕೊಂಡಿವೆ. ಕೆಲವು ಕಲಬೆರಕೆ ನಾಯಿ, ಬೆಕ್ಕುಗಳಿದ್ದರೂ ಅವುಗಳನ್ನು ವಿವಿಧ ವಿಂಗಡನೆಗೊಳಪಡಿಸಿ ಪ್ರತ್ಯೇಕವಾಗಿಯೇ ನೋಡುತ್ತಾರೆ.
ನಿಮಗೆ ಇನ್ನೊಂದು ಘಟನೆಯನ್ನು ಹೇಳಬೇಕೆಂದರೆ, ಇಲ್ಲಿನ ಓರೆಗಾನ್ ರಾಜ್ಯದ ರೈತರಿಗೆ ಬೇಸಿಗೆಯಲ್ಲಿ ಕೊಲಂಬಿಯಾ ನದಿಯಿಂದ ಹೆಚ್ಚುವರಿಯಾಗಿ ನೀರನ್ನಿತ್ತು ೫ ಲಕ್ಷ ಎಕರೆ ಭೂಮಿಯನ್ನು ಅಧಿಕೃತವಾಗಿ ನೀರಾವರಿಗೆ ಒಳಪಡಿಸವ ಯೋಜನೆಯನ್ನು ಅಲ್ಲಿನ ಸರ್ಕಾರ ಹಾಕಿಕೊಂಡಿತು. ಅದರ ಅನುಷ್ಟಾನಕ್ಕೆ ಮುನ್ನ ಪರಿಸರದ ಮೇಲೆ ಪರಿಣಾಮವೇನಾಗಬಹುದೆಂದು ಸಂಶೋಧಿಸಿ, ಈ ಯೋಜನೆಯಿಂದ ಆ ನದಿಯಲ್ಲಿರುವ ಮೂಲ ಕಾರ್ಪ್ ಮೀನುಗಳ ಸಂತತಿಗೆ ಈ ಯೋಜನೆ ಮಾರಕವಾಗುತ್ತದೆಂದು ಯೋಜನೆಯನ್ನು ಕೈಬಿಟ್ಟಿತು.
ಇದೆಲ್ಲವನ್ನು ಏಕೆ ಹೇಳಿದೆನೆಂದರೆ, ಇಂದು ಭಾರತದ ಜೀವಸಂಕುಲದ ಹಲವಾರು ಪ್ರಭೇಧಗಳು ನಾಮಾವಶೇಷವಾಗಿವೆ ಮತ್ತು ಆಗುತ್ತಲಿವೆ ಅಥವಾ ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಕಲಬೆರಕೆಗೊಳ್ಳುತ್ತಿವೆ.
ಗಿಡ, ಮರ, ಕಲ್ಲು, ಬೆಟ್ಟ, ಎಲೆ, ಹೂ, ಕಾಯಿಗಳೆಲ್ಲವೂ ಪೂಜ್ಯ, ಪವಿತ್ರವೆಂದು ನಿಸರ್ಗವನ್ನೇ ಪೂಜಿಸುತ್ತಿದ್ದ ಭಾರತೀಯ, ನವನಾಗರೀಕತೆಯ ಶಿಕ್ಷಣವನ್ನು ಪಡೆಯುತ್ತ ಉನ್ನತಿ ಹೊಂದಿ ತನ್ನ ಸಂಸ್ಕೃತಿಯ ಸಂಸ್ಕಾರವನ್ನರಿಯದೆ ಇಂದು ಹೀಗೆ ಪೂಜಿಸುವುದೆಲ್ಲ ಮೌಢ್ಯವೆಂದು ತನ್ನ ಬೇರುಗಳನ್ನು ಕಡಿದುಕೊಳ್ಳುತ್ತ ಮರೀಚಿಕೆಯ ಬೆನ್ನು ಬಿದ್ದಿದ್ದಾನೆ. ಮಲ್ಲಿಗೆ, ಸಂಪಿಗೆ, ಹೂವಮ್ಮ, ಪೂವಮ್ಮ, ಕನಕಾಂಬರಿ, ಪಾರಿಜಾತ, ಎಂಬೆಲ್ಲ ಪರಿಸರ ಸಂಬಂಧಿ ಹೆಸರುಗಳಿಗೆ ತಿಲಾಂಜಲಿಯಿತ್ತು, ನತಾಷಾ, ಬಿಪಾಸಾ, ಕರಿಷ್ಮಾ, ರೀಟಾ, ಎಂದೆಲ್ಲ ಮಿಂಚುಳ್ಳಿಗಳಾಗುತ್ತಿದ್ದಾವೆ ನಮ್ಮ ಹೆಣ್ಣುಗಳು. ಇನ್ನು ಗಂಡಸರು ಕಾಡಪ್ಪ, ಅಡವಿಯೆಪ್ಪ, ಕಲ್ಲಪ್ಪ, ಬಸವಣ್ಣ, ಹುಲಿಯಪ್ಪ, ಕರಡೆಪ್ಪ ಎಂಬ ಪರಿಸರಸ್ನೇಹೀ ಹೆಸರುಗಳಿಂದ ಬಹುದೂರ ಸಾಗಿದ್ದಾರೆ. ಪ್ರಕೃತಿಯೊಂದಿಗೆ ಪ್ರಕೃತಿಯಾಗಿ ಹಾಸುಹೊಕ್ಕಾಗಿ ಬಾಳುವುದು ನಾಗರೀಕತೆಯೋ, ಪರಿಸರಕ್ಕೆ ವಿರುದ್ಧವಾಗಿ ನಡೆದು ವಿಕೋಪಗಳನ್ನು ಸೃಷ್ಟಿಸುವುದು ನಾಗರೀಕತೆಯೋ ಅರಿಯದಾಗಿದೆ.
ನಮ್ಮ ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ ನಮ್ಮ ನದಿಗಳೆಲ್ಲ ಚರಂಡಿಗಳಾಗಿ ಅಲ್ಲಿ ಯಾವ್ಯಾವ ಜಾತಿಯ ಮೀನುಗಳಿದ್ದವೋ ಬಲ್ಲವರ್ಯಾರು? ಸುಮ್ಮನೆ ಅಲ್ಲಲ್ಲಿ ಕೇಳರಿತ ಕತೆಗಳ ಆಧಾರದ ಮೇಲೆ ನಮ್ಮ ನದಿಯಲ್ಲಿರಬಹುದಾಗಿದ್ದ ಮೀನುಗಳ ತಳಿಗಳನ್ನು ದಾಖಲಿಸಿ ಅವುಗಳಲ್ಲಿ ಯಾವ್ಯಾವು ಅಳಿಸಿಹೋಗಿದ್ದಾವೆಂದು ಕಂಡುಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಹೊಣೆಗೇಡಿ ನಾಯಕರುಗಳ ಸ್ವಾತಂತ್ರ್ಯದ ಪರಿಕಲ್ಪನೆಯ ದೆಸೆಯಿಂದ ಬಂದೊದಗಿದೆ.
ಈ ನಿಟ್ಟಿನಲ್ಲಿ ರಾಮಚಂದ್ರಾಪುರದ ಸ್ವಾಮೀಜಿಯೋರ್ವರು ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲ್ಲದಿದ್ದರೂ ಧಾರ್ಮಿಕ ದೃಷ್ಟಿಯಿಂದಲಾದರೂ ಸ್ಥಳೀಯ ಗೋ ತಳಿಯನ್ನು ರಕ್ಷಿಸುತ್ತಿರುವುದು ಸ್ತುತ್ಯಾರ್ಹ. ಆದರೆ ಪೂಜ್ಯನೀಯವಲ್ಲದ, ಯಾವುದೇ ಧಾರ್ಮಿಕ ಕವಚವಿಲ್ಲದ ಅಸಂಖ್ಯಾತ ಭಾರತೀಯ ಜೀವ, ಸಸ್ಯ ಸಂಕುಲಗಳನ್ನು ರಕ್ಷಿಸುವವರ್‍ಯಾರು?
ಹಿಂದೆಲ್ಲ ಬೇಲಿ ಸಾಲಿನಲ್ಲಿ, ಕುರುಚಲು ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಬಾರೆ, ಕಾರೆಯಂತಹ ಕಾಡುಹಣ್ಣಿನ ಗಿಡಗಳು; ಮುಳ್ಳುಬೆಂಡೆ, ಮುಳ್ಳುಬದನೆ, ತೊಂಡೆಯಂತಹ ತರಕಾರಿ ಸಸ್ಯಗಳು; ಮುತ್ತುಗ, ಜಾಲಿ, ಮುರುಗಲದಂತಹ ಚಿಕ್ಕ ಮರಗಳು ಇಲ್ಲವಾಗಿ ಇವುಗಳ ಸ್ಥಾನವನ್ನು ಲಂಟಾನ, ಪಾರ್ಥೇನಿಯಮ್ ಮತ್ತು ನೀಲಗಿರಿಯಂತಹ ವಿದೇಶೀ ತಳಿಗಳು ಬದಲಾಯಿಸುತ್ತಿವೆ. ಪರಿಸರ ಸಂರಕ್ಷಣೆಯೆಂದರೆ ಹಸಿರು ಬೆಳೆಸುವುದೆಂದುಕೊಂಡಿರುವ ನಮ್ಮ ಅರಣ್ಯ ಇಲಾಖೆ ಪರಿಸರದ ಆಳ ಪರಿಜ್ಞಾನವಿಲ್ಲದೆ ಸಾಗುವಾನಿ, ಬೀಟೆ, ಮಾವು, ಹಲಸು, ಮತ್ತಿತರೆ ಅತ್ಯಂತ ಮಲೆನಾಡ ತಳಿಗಳೆನ್ನಬಹುದಾದ ಮರಗಳನ್ನು ಅಲ್ಲಲ್ಲಿ ಅಕೇಶಿಯಾ, ನೀಲಗಿರಿ, ಸಿಲ್ವರ್, ಆಸ್ಟ್ರೇಲಿಯನ್ ಯೂಕಲಿಪ್ಟಸ್ ಮುಂತಾದ ವಿದೇಶೀ ತಳಿಗಳಿಂದ ಕಾಡು ಅಳಿದ ಮಲೆನಾಡ ಕೆಲ ಪ್ರದೇಶಗಳಲ್ಲಿ ಬದಲಾಯಿಸುತ್ತಿದೆ. ಖಾಲಿ ಪ್ರದೇಶಗಳಲ್ಲಿ ಶೀಘ್ರವಾಗಿ ಹಸಿರು ತುಂಬಿ ಜನಮನ್ನಣೆ ಗಳಿಸಲೋ, ಸರ್ಕಾರೀ ಯಂತ್ರವನ್ನು ಸಂತೃಪ್ತಗೊಳಿಸಲೋ ಒಟ್ಟಾರೆ ಈ ರೀತಿಯ ದೇಶೀ ತಳಿಗಳನ್ನು ಬದಲಾಯಿಸುತ್ತ ಮುಂದೆ ಮಲೆನಾಡನ್ನೆಲ್ಲ ಬೆರಕೆನಾಡನ್ನಾಗಿ ಪರಿವರ್ತಿಸುವರೇನೋ!
ನಮ್ಮ ಭೌಗೋಳಿಕ ಪರಿಸರದ ಒಂದು ಸ್ಪಷ್ಟ ರೂಪುರೇಷೆಯಿಲ್ಲದೆ, ಆಳ ಅಭ್ಯಾಸವಿಲ್ಲದೆ ಎಡಬಿಡಂಗಿಯಂತೆ ಯೋಜನೆಗಳನ್ನು ಹಾಕಿಕೊಳ್ಳುತ್ತಿರುವ ನಮ್ಮ ಅರಣ್ಯ ಇಲಾಖೆಗಳ ಮತ್ತು ನಮ್ಮ ದಿಕ್ಕೆಟ್ಟ ರೈತರ ದೆಸೆಯಿಂದಲೇ ಇಂದು ಬಯಲು ಸೀಮೆಯ ಬೆಳೆಗಳಾದ ತೊಗರಿ, ಮೆಕ್ಕೆಜೋಳ, ಮತ್ತಿತರೆ ಬೆಳೆಗಳನ್ನು ಮಲೆನಾಡಿನಲ್ಲಿ ಬೆಳೆಯುವ ಪರಿಸ್ಥಿತಿ ಬಂದಿರುವುದು ಮತ್ತು ಬರುತ್ತಿರುವುದು.
ಮೊದಲೆಲ್ಲಾ ಆಯುರ್ವೇದ ಔಷಧಿಗಳಿಗೆ ಕಾಡು ಹೊಕ್ಕು ಈ ಸಸ್ಯಮೂಲಿಕೆಗಳನ್ನು ತರುತ್ತಿದ್ದರೆ, ಈಗ ಅವುಗಳೆಲ್ಲ ನಮ್ಮ ನಿಸರ್ಗದಿಂದ ಕಣ್ಮರೆಯಾಗಿ ನಮ್ಮ ಮಾದರೀ ರೈತರು ಅಶ್ವಗಂಧಿ, ತುಂಬೆ, ಆನೆಗಡ್ಡೆ, ಅಮೃತಬಳ್ಳಿ, ಇನ್ನು ಮುಂತಾದ ಕಾಡುಗಿಡಗಳನ್ನು ಬೇಸಾಯಬೆಳೆಗಳಾಗಿ ಬೆಳೆಯುವಂತಹ ಪರಿಸ್ಥಿತಿ ಸೃಷ್ಟಿಯಾಗಿರುವುದು ಪರಿಸರ ನಾಶದ ಕರೆಗಂಟೆಯೆಂಬ ಪರಿಜ್ಞಾನವೂ ನಮ್ಮವರಿಗಿಲ್ಲ.
ಪರಿಸರ ಸಂರಕ್ಷಣೆಯ ಸಮಗ್ರತೆ, ಆಳ, ಮುನ್ನೋಟಗಳ ಕಿಂಚಿತ್ತೂ ಪರಿಜ್ಞಾನವಿಲ್ಲದ ಇಲಾಖೆಗಳು, ಸರ್ಕಾರಗಳು ಬೆಂಗಳೂರನ್ನು ಸಿಂಗಾಪುರವನ್ನು ಮಾಡಿದಂತೆ ನಮ್ಮ ಪರಿಸರವನ್ನು ಮಂಗಳನನ್ನಾಗಿ ಮಾಡುವತ್ತ ದಾಪುಗಾಲಿಡುತ್ತಿದ್ದಾರೆ.
ಹುಚ್ಚು ಅಮೇರಿಕನ್ನರು ಮಂಗಳನಲ್ಲಿಗೆ ಹೋಗುವತ್ತ ಯೋಚಿಸುತ್ತಿದ್ದರೆ, ಜಾಣ ಭಾರತೀಯರು ಮಂಗಳನನ್ನೇ ಭಾರತದಲ್ಲಿ ಸೃಷ್ಟಿಸುತ್ತಿದ್ದಾರೆ!
ಒಮ್ಮೊಮ್ಮೆ ಗಹನವಾಗಿ ಯೋಚಿಸಿದಾಗ, ಸ್ವತಂತ್ರ ಭಾರತದ ಧೀರ್ಘ ರೂಪುರೇಷೆಗಳಿಲ್ಲದೆ, ಸಮಗ್ರ ಅಭಿವೃದ್ಧಿಯ ಸ್ಪಷ್ಟ ಚಿತ್ರಣವೂ ಇಲ್ಲದೆ, ಕಠೋರ ಸತ್ಯಗಳನ್ನು ಹುಂಬ ಭಾವನೆಗಳಿಂದ ಮರೆಮಾಚಿ, ನಮ್ಮ ಹಿರಿಯರು ಭಾವುಕರಾಗಿ ಸ್ವಾತಂತ್ರ್ಯಕ್ಕೆ ಹೋರಾಡಿ ಸ್ವಾತಂತ್ರ್ಯ ಗಳಿಸಿದ್ದು, ಮಿಲನ ಮುನ್ನವೇ ಶೀಘ್ರಸ್ಖಲನವಾದಂತಾಗಿ ನಮ್ಮ ಸ್ವಾತಂತ್ರ್ಯ ನಿರೀಕ್ಷಿತ ಫಲ ನೀಡಲಿಲ್ಲವೇನೋ ಅನ್ನಿಸುತ್ತದೆ.
ಹಾಂ! ನಮ್ಮ ಮಠಾಧೀಶ್ವರರೂ, ಪೀಠಾಧಿಪತಿಗಳೂ ಮೂಲಿಕೆ ವನ, ಬೀಜ ರಕ್ಷಣೆ, ವನ್ಯಧಾಮ, ಪರಿಸರ ರಕ್ಷಣೆಗೆ ಹಠಾತ್ತಾಗಿ ಮುಂದಾಗಿ ಈ ವಿಷಯಗಳಲ್ಲಿ ಕೈಂಕರ್ಯರಾಗಿರುವುದನ್ನು ಕಂಡು, ಇದು ಅವರುಗಳ ಇನ್ನೊಂದು ’ಪ್ರಚಾರಪ್ರಿಯತೆ’ ತೀಟೆಯೆಂಬುದು ಮನವರಿಕೆಯಾಗಿದ್ದರೂ ಅಷ್ಟಾದರೂ ಒಂದು ಒಳ್ಳೆಯ ಕಾರ್ಯವನ್ನು ಈ ಪುಣ್ಯಾತ್ಮರು ಮಾಡುತ್ತಿದ್ದಾರಲ್ಲ ಎಂದು ಸಮಾಧಾನಗೊಂಡಿದ್ದೆ. ಆದರೆ ಇವರ ಈ ಕೈಂಕರ್ಯ ಕೇಂದ್ರ ಸರ್ಕಾರದ ’ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್’ ನ ಸಂಶೋಧನಾ ನಿಧಿಯನ್ನು ’ಸ್ವಾಹಾ’ ಮಾಡಲು ಎಂದು ನನ್ನ ಕೃಷಿ ವಿಜ್ಞಾನಿ ಮಿತ್ರರು ಇತ್ತೀಚೆಗೆ ತಿಳಿಸಿದಾಗಲೇ ಇವರ ಮರ್ಮ ತಿಳಿದಿದ್ದು!
ಅಣಕ:
ಹೀಗೆಯೇ ಒಮ್ಮೆ ನನ್ನ ಚೀನೀ ಗೆಳತಿಯೊಂದಿಗೆ ಮಾತನಾಡುತ್ತ ಭಾರತೀಯರ ಜಾತಿಪದ್ದತಿ, ಒಳಪಂಗಡಗಳನ್ನು ಕುರಿತು ಮಾತನಾಡುತ್ತ, ಬಹುಶಃ ಈ ಪದ್ದತಿಗಳನ್ನು ತಮ್ಮ ’ಜನಾಂಗೀಯ ನೇಟಿವಿಟಿ’ಯನ್ನು ಉಳಿಸಿಕೊಳ್ಳಲು ಜಾರಿಗೊಳಿಸಿಕೊಂಡು ಅದನ್ನು ಇಂದಿಗೂ ಪಾಲಿಸುತ್ತಿರುವುದರಿಂದ, ಭಾರತೀಯರೇ ಅಧಿಕವಾಗಿ ತಮ್ಮ ’ಜನಾಂಗೀಯ ನೇಟಿವಿಟಿ’ಯನ್ನು ಕಾಪಾಡಿಕೊಂಡಿದ್ದಾರೆಂದು ನಾವು ಹೇಳಬಹುದೆಂದೆನು. ಅದನ್ನವಳು ಸಾರಾಸಗಟಾಗಿ ತಿರಸ್ಕರಿಸುತ್ತ "ನಾನು ಕಂಡುಕೊಂಡಂತೆ ಭಾರತೀಯರೇ ಅತಿ ಹೆಚ್ಚಾಗಿ ಮಿಶ್ರತಳಿಗಳಾಗಿರುವುದೆಂದೂ ನಮಗೆ ತಿಳಿದ ಕೆಲವು ಭಾರತೀಯ ಮಿತ್ರರನ್ನೇ ಹೆಸರಿಸಿ ಇವರೆಲ್ಲ ವಿವಿಧ ಆಕಾರ, ಚರ್ಮದ ಬಣ್ಣ, ಕೂದಲು ಪ್ರತಿಯೊಂದು ಚರ್ಯೆಗಳೂ ವಿಧವಿಧವಾಗಿದ್ದು, ಅವರೆಲ್ಲ ಬಿಳಿಯ, ಕರಿಯ, ಕೊಲ್ಲಿ, ಇನ್ನು ಯಾವ್ಯಾವುದೋ ತಳಿಗಳೆಲ್ಲದರ ಸಮ್ಮಿಳಿತವಾಗಿ ಕಾಣುತ್ತಾರೆಂದು ವರ್ಣಿಸಿ, ಅತ್ಯಂತ ಶುಭ್ರ ಮಾನವ ತಳಿಯೆಂದರೆ ಓರಿಯೆಂಟಲ್ ತಳಿಯೆಂದು ಹೇಳುತ್ತ "ಯಾರೊಬ್ಬರಾದರೂ ಗುಂಗುರು ಕೂದಲಿನ ಚೀನೀಯರನ್ನು ತೋರು"ಎಂದು ಸವಾಲೆಸೆದಳು. ಅಲ್ಲಿಯವರೆಗೂ ಭಾರತೀಯ ಪರಿಸರವಷ್ಟೇ ಕೆಟ್ಟುಹೋಗಿದೆಯೆಂದುಕೊಂಡು ಯೋಚಿಸುತ್ತದ್ದ ನನಗೆ ಭಾರತೀಯ ಮನುಜ ತಳಿಯ ಈ ಸಹಜ ಸತ್ಯವನ್ನು ತೋರಿ, ತುಂಟನಗೆಯ ಆ ಚೀನೀ ಪೋರಿ ನನ್ನ ಮರ್ಮಕ್ಕೇ ಕೈ ಹಾಕಿದ್ದಳು.
ಅದಕ್ಕೆ ನಾವುಗಳು ’ಭಾರೀ ಬೆರಿಕಿ ಅದೀವಿ!’ (ಉತ್ತರ ಕರ್ನಾಟಕದ ಶೈಲಿ)!
No comments:
Post a Comment