ಯೇ ಕಚ್ಚರಾ ಲೋಗ್ ಹೈ!

ಅಂತೂ ಇಂತೂ ’ಇಂದಿನ ಭಾರತದ ವ್ಯಕ್ತಿರೂಪ’ದಂತಿರುವ ಲಾಲೂ ಪ್ರಸಾದ್ ಯಾದವ್, ಕನ್ನಡ ಓರಾಟಗಾರರನ್ನು ’ಡರ್ಟಿಃ ಪೀಪಲ್’ ಎಂದು ಅಭಿಪ್ರಾಯಿಸಿದ್ದಾರೆ. ಇದನ್ನು ವಿರೋಧಿಸುವ ಮೊದಲು ನಾವೇಕೆ ’ಕಚಡಾ ಲೋಗ್’ ಎಂಬುದನ್ನು ಒಮ್ಮೆ ಅವಲೋಕಿಸೋಣ.

ಹುಟ್ಟುತ್ತಿದ್ದಂತೆಯೇ ಎರಡು ಬಣವಾದ ’ಕನ್ನಡ ರಕ್ಷಣಾ ವೇದಿಕೆ’ಯ ಹಿಂದೆ ವಿವಿಧ ರಾಜಕಾರಣಿಗಳಿರುವುದು ಯಾರಿಗೂ ತಿಳಿಯದ್ದೇನಲ್ಲ. ಗೋಕಾಕ್ ವರದಿ ಜಾರಿಗೆ ಹೋರಾಡಿದ ಅಂದಿನ ಕನ್ನಡ ಕಾಳಜಿಗೂ ಇಂದಿನ ಸುದ್ದಿಪ್ರಿಯ ಸಂಘಗಳ ಕನ್ನಡ ಕಾಳಜಿಗೂ ಬೆಟ್ಟದಷ್ಟು ವ್ಯತ್ಯಾಸವಿದೆ. ರೈಲ್ವೇಯಲ್ಲಿ ಸಾಕಷ್ಟು ಕನ್ನಡಿಗರಿಲ್ಲದಿರುವುದು ಅತ್ಯಂತ ಕಠೋರ ಸತ್ಯವಾದರೂ ಇದಕ್ಕೆ ಕಾರಣ ನಾವುಗಳು, ನಮ್ಮ ಸಂಸದರು ಮತ್ತು ಮಂತ್ರಿಗಳು. ಸದಾ ಹೈಕಮ್ಯಾಂಡಿನ ಅಡಿಯಾಳಾಗಿರುವ ಈ ರಾಜಕಾರಣಿಗಳು ಪಕ್ಷಭೇದವನ್ನು ಮರೆತು ಯಾವತ್ತಾದರೂ ಒಂದು ಜನಪರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆಯೇ? ನಮ್ಮವರೇ ಆದ ಜಾಫರ್ ಶರೀಫ್ ಅದೆಷ್ಟು ಕಾಲ ರೈಲ್ವೆ ಸಚಿವರಾಗಿರಲಿಲ್ಲ! ’ಜೀ ಹುಜೂರ್ ಮ್ಹಾ’ ಎಂದು ಕಾಲ ಹಾಕಿದ ಇವರು ಒಂದೆರಡು ರೈಲು ಬಿಟ್ಟಿದ್ದು, ಕಾಲಕ್ಕೆ ತಕ್ಕಂತೆ ಬ್ರಾಡ್ಗೇಜ್ ಮಾಡಿಸಿದ್ದು ಬಿಟ್ಟರೆ ಇನ್ನೇನು ಮಾಡಿದ್ದಾರೆ?

ಇದೇ ಕರವೇ ಕರ ಮುಗಿದು ಸರ್ವ ಸಂಸದರ ಸಭೆಯನ್ನು ಕರೆದರೆ ಬಂದದ್ದು ಬೆರಳೆಣಿಕೆಯಷ್ಟು. ಅದಕ್ಕೇ ನಾವುಗಳು ಕಚಡಾಫೆಲೋಸ್! ಬಾರದ ಈ ಸಂಸದರ ವಿರುದ್ಧ ತೀವ್ರ ಚಳುವಳಿ ಮಾಡಿ ಅವರಿಗೆ ಬುದ್ದಿ ಕಲಿಸದೆ, ಬಡ ಬಿಹಾರೀ ನಿರುದ್ಯೋಗಿಗಳಿಗೆ ತಡೆಯೊಡ್ಡಿ ಸಂದರ್ಶನವನ್ನು ತಪ್ಪಿಸಿದ್ದಕ್ಕೇ ನಾವುಗಳು ಗೂಂಡಾ ಲೋಗ್! ಸಾಮಾನ್ಯವಾಗಿ ವಿಶ್ವದೆಲ್ಲೆಡೆಯ ಜನರು ಸೇರುವ ಒಲಿಂಪಿಕ್ಸ್ ತರಹದ ಅಂತರ್ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಾದ್ಯಸಂಗೀತದಲ್ಲಿಯೇ ರಾಷ್ಟ್ರಗೀತೆಗಳನ್ನು ಹಾಡಿಸುವ ಪರಿಪಾಠವಿರುವಂತೆಯೇ ತಮ್ಮ ಒಂದು ಅಂತರ್ರಾಷ್ಟ್ರೀಯ ಕಾರ್ಯಕ್ರಮದಲ್ಲಿ ವಾದ್ಯಸಂಗೀತದಲ್ಲಿ ರಾಷ್ಟ್ರಗೀತೆಯನ್ನು ನುಡಿಸುವಂತೆ ಮಾಡಿದ್ದಕ್ಕೆ ಒಬ್ಬ ಹೆಮ್ಮೆಯ ಕನ್ನಡಿಗನನ್ನು ರಾಷ್ಟ್ರದ್ರೋಹಿಯೆಂದ ನಾವುಗಳು ಅಲ್ಪಜರಲ್ಲವೇ? ಕನ್ನಡ ಹೋರಾಟಗಾರರೆಂದು ಹೇಳಿಕೊಳ್ಳುತ್ತಾ ಸಿನಿಮಾ ಲಾಬಿ, ರಿಯಲ್ ಎಸ್ಟೇಟ್ ಲಾಬಿ, ಟ್ರಾನ್ಸಫರ್ ಲಾಬಿ, ಮಾಫಿಯಾ ಮುಂತಾದ ಡರ್ಟಿ ವ್ಯವಹಾರಗಳನ್ನು ಮಾಡುತ್ತಿರುವ ಇಂದಿನ ಕನ್ನಡ ಓರಾಟಗಾರರು ಅದ್ಯಾವ ರೀತಿಯಿಂದ ಡರ್ಟಿಯಾಗಿರದೇ ಸರ್ವಾಂಗಶುದ್ಧರಾಗಿರುವರೋ?

ಇದೆಲ್ಲವನ್ನೂ ಮೀರಿದ ಸಂಗತಿಯೆಂದರೆ, ರೈಲ್ವೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆಯೆಂದು ನಮ್ಮ ಆತ್ಮೀಯ ಚಿತ್ರದುರ್ಗದ ಶ್ರೀಗಳು ತಮ್ಮ ಬೆಂಬಲಿಗರೊಂದಿಗೆ ರೈಲು ನಿಲ್ಲಿಸಿ, ಎಲ್ಲಾ ದಿನಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಂಡವರು, ತಾವೇ ಸ್ಪಾನ್ಸರ್ ಮಾಡಿದ ’ಯಾದವ ಪೀಠ’ದ ಉದ್ಘಾಟನೆಗೆ ಬಂದ ಲಾಲೂ ಬಳಿ ಈ ವಿಷಯದ ಬಗ್ಗೆ ತುಟಿಪಿಟಿಕ್ ಎನ್ನದೆ ಜಾಣ ಮರೆವು ತೋರಿದರು. ಆ ಸಮಾರಂಭಕ್ಕೆ ಬಂದದ್ದರಿಂದಲೇ ತಾನೇ ಲಾಲೂ ಈ ಮಾತುಗಳನ್ನಾಡಿದ್ದು. ಆದರೂ ಕೂಡಾ ಈ ವಿಷಯದ ಬಗ್ಗೆ ಚಕಾರವೆತ್ತದೆ ಈ ಶ್ರೀಗಳು ಸುಮ್ಮನಿದ್ದದ್ದೇಕೋ? ಬಹುಶಃ ರೈಲ್ವೇ ಪೀಠವನ್ನು ಕಟ್ಟುವ ಕನಸು ಕಾಣುತ್ತಿದ್ದರೆನಿಸುತ್ತದೆ. ಆ ಸಮಾರಂಭದಲ್ಲಿ ಈ ಬ್ರಹ್ಮಚಾರಿಗಳು ವೈದಿಕತೆಯನ್ನು ಧಿಕ್ಕರಿಸಿ ವೈಚಾರಿಕತೆಯನ್ನು ಮೆರೆಸಿ ಎಂದು ಪ್ರಲೋಭಿಸಿದ್ದನ್ನು ಪೋಲೀ ಲಾಲೂ, ’ಬ್ರಹ್ಮಚರ್ಯೆ ಕೂಡ ವೈದಿಕತೆಯ ಪ್ರತೀಕ. ಅದನ್ನು ಧಿಕ್ಕರಿಸಿ ಕಾಮಿಸಿ ನೋಡು’ ಎಂದು ಅರ್ಥೈಸಿಕೊಂಡೇ ಇರಬೇಕು ’ಕ್ಯಾ ಕಚ್ಚರಾ ಲೋಗ್ ಹೈ!’ ಎಂದು ಉದ್ಗರಿಸಿದ್ದುದು.

ಇಂದು ’ಕನ್ನಡ ಪರ ಹೋರಾಟ’ವೆಂಬುದು ಒಂದು ಹುಲುಸಾದ ಉದ್ಯಮ. ಅದಕ್ಕೇ ಕಂಡ ಕಂಡಲ್ಲಿ ಕನ್ನಡ ಸೇನೆ, ಕನ್ನಡ ಪಕ್ಷ, ಕನ್ನಡ ಸಮಿತಿ ಇನ್ನೂ ಏನೇನೋ ಕನ್ನಡ ಹೆಸರಿನ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವುದು, ಮತ್ತು ಆ ಸಂಸ್ಥೆಗಳು ಹಲವು ಬಣಗಳಾಗುತ್ತಿರುವುದು! ಒಂದು ಸಮಗ್ರ ದೂರದರ್ಶಿತ್ವವಿಲ್ಲದೆ ಈ ಎಲ್ಲಾ ಸಂಘಗಳೂ ಹಿರಿಯ ಪುಡಾರಿಗಳಿಗೆ ಮರಿ ಪುಡಾರಿಗಳು ತಯಾರು ಮಾಡಿಕೊಡುವ ಓಟ್ ಬ್ಯಾಂಕ್ ಗಳಾಗಿರುವುದು ಕನ್ನಡದ ದುರಂತವೇ ಸರಿ.

ಇದಕ್ಕೆ ಉದಾಹರಣೆಯೇನೋ ಎಂಬಂತೆ ಇತ್ತೀಚೆಗೆ ಕನ್ನಡ ಪಕ್ಷವೊಂದನ್ನು ಹುಟ್ಟು ಹಾಕಿರುವ ನಮ್ಮ ಕನ್ನಡ ಲೇಖಕ ಕಂ ಹೋರಾಟಗಾರ ಕಂ ಉದಯೋನ್ಮುಖ ರಾಜಕಾರಣಿ ಚಂಪಾ "ಕನ್ನಡಿಗರಿಗೆ ರಾಜ್ ಠಾಕ್ರೆ ಆದರ್ಶವಾಗಬೇಕು" ಎಂದಿರುವುದು. ಸದ್ಯ ನಮ್ಮ ಪುಣ್ಯ, "ಹಿಟ್ಲರ್ ನಮ್ಮ ಆದರ್ಶವಾಗಬೇಕು" ಎಂದಿಲ್ಲವಲ್ಲ!

ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಅಭಿವೃದ್ಧಿ ಕರ್ನಾಟಕದೆಲ್ಲೆಡೆ ವಿಭಜಿತಗೊಂಡಿದ್ದರೆ, ಈ ಸಂಸ್ಥೆಗಳಲ್ಲಿ ಕೆಲಸಕ್ಕೆ ಬರುವ ವಲಸಿಗರಿಗೆ ತಮ್ಮ ಭಾಷಿಗರು ಸಿಕ್ಕದೇ ನಿತ್ಯ ವ್ಯವಹರಿಸಲು ಬೇರೆ ದಾರಿಯಿಲ್ಲದೆ ಕನ್ನಡ ಕಲಿಯುತ್ತಿದ್ದರು. ಆಗ ಆ ಅನಿವಾರ್ಯತೆಯ ಕಾರಣ ಅವರುಗಳ ಭಾಷೆ ಬರೀ ಅವರ ಮನೆಮಾತಾಗಿರುತ್ತಿತ್ತು. ಹೀಗೊಂದು ಅನಿವಾರ್ಯ ಪರಿಸ್ಥಿತಿ ಹಿಂದೆ ಇದ್ದುದರಿಂದಲೇ ಕನ್ನಡ ಮನೆಮಾತಲ್ಲದ ಮೂವರು ಕನ್ನಡಿಗರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿರುವುದು! ಇಂದು ಯಥೇಚ್ಚವಾಗಿ ಸುಲಭವಾಗಿ ಬೆಂಗಳೂರಿನಲ್ಲಿ ತಮ್ಮ ತಮ್ಮ ಭಾಷಿಗರು ಈ ವಲಸಿಗರಿಗೆ ಸಿಕ್ಕುವುದರಿಂದ ಕನ್ನಡದ ಅನಿವಾರ್ಯತೆಯೇ ಅವರಿಗಾಗುವುದಿಲ್ಲ!

ಇನ್ನು ಕನ್ನಡಕ್ಕಾಗಿ ಹೋರಾಡಲು ನಮ್ಮ ಕನ್ನಡ ಹೋರಾಟಗಾರರಿಗೆ ಬೆಂಗಳೂರಿನ ಗಾಂಧಿನಗರದಲ್ಲಿಯೇ ಕಛೇರಿ ಬೇಕೆ? ಅದನ್ನು ಹಂಪಿಗೋ ಬನವಾಸಿಗೋ ಬದಲಾಯಿಸಿಕೊಂಡು ಕನ್ನಡ ಪರ್‍ಅ ಹೋರಾಟವನ್ನು ಮಾಡಬಹುದಲ್ಲವೇ? ಸರಿ, ಗಾಂಧಿನಗರದಲ್ಲಿದ್ದರೂ ಅಲ್ಲಿ ತಯಾರಾಗುವ ಕನ್ನಡ ಸಿನೆಮಾಗಳಲ್ಲಿನ ಕನ್ನಡ ಭಾಷೆಯನ್ನು ಸುಧಾರಿಸಲು ಯಾವುದಾದರೂ ಪ್ರಯತ್ನವನ್ನು ಮಾಡಿದ್ದಾರೆಯೇ?

ಸುಮ್ಮನೇ ಇಂದಿನ ಕನ್ನಡ ಸುದ್ದಿಪತ್ರಿಕೆಗಳು, ಪಠ್ಯಪುಸ್ತಕಗಳು, ಚಿತ್ರರಂಗ ಇವುಗಳನ್ನು ಗಮನಿಸಿದರೇ ಸಾಕು ನಮ್ಮ ಕನ್ನಡ ಮಟ್ಟ ಹೇಗಿದೆಯೆಂದು ತಿಳಿಯುತ್ತದೆ. ಇನ್ನು ಕನ್ನಡಿಗರೋ ಕೊಟ್ಟ ಕೆಲಸವನ್ನು ಮಾಡದ ಸೋಮಾರಿಗಳಾದ್ದರಿಂದಲೇ ವಲಸಿಗರು ಬರುತ್ತಿರುವುದು. ವಲಸಿಗರು ಮಾಡುವ ಕೆಲಸ ಅವರೊಪ್ಪುವ ಸಂಬಳಕ್ಕೆ ಕನ್ನಡಿಗರ್‍ಯಾರೂ ದೊರಕದ ಕಾರಣವೇ ಅಲ್ಲವೇ ವಲಸಿಗರು ಬಂದಿದ್ದುದು, ಬರುತ್ತಿರುವುದು. ಕೂಪ ಮಂಡೂಕಗಳಂತೆ ಏನೋ ಬಿಂಕ, ಕೊಂಕು ಈರ್ಶೆ ಎಲ್ಲ ಗುಣಗಳನ್ನು ತುಂಬಿಕೊಂಡು ಇರುವ ಕೆಲಸದಲ್ಲಿಯೂ ಇರಲಾಗದ ಅದೆಷ್ಟು ಕನ್ನಡಿಗರಿಲ್ಲ. ಇಂದು ಬೆಂಗಳೂರಿನಲ್ಲಿ ಕಟ್ಟಡ ಕಟ್ಟುವ, ಗಾರೆ ಕೆಲಸಕ್ಕೆ ತಮಿಳರಾದರೆ, ನೆಲಹಾಸು, ಮಾರ್ಬಲ್ ಕೆಲಸಕ್ಕೆ ಬಿಹಾರಿಗಳು, ಬಡಿಗೆ ಕೆಲಸಕ್ಕೆ ರಾಜಸ್ಥಾನಿಗಳು ಬಂದಿರುವುದು ನಮ್ಮಲ್ಲಿಯ ಜನಶಕ್ತಿಯ ಕೊರತೆಯಿಂದಲೇ ತಾನೆ? ಇಂದು ಕನ್ನಡಿಗ ರೈತ ಸೋಮಾರಿಯಾಗಿ ಆಂಧ್ರದ ಕುಶಲಮತಿಗಳಿಗೆ ತಮ್ಮ ಹೊಲಗಳನ್ನು ಗುತ್ತಿಗೆ ಕೊಟ್ಟು ’ಕಟ್ಟೆ ಪುರಾಣ’ದಲ್ಲಿ ತೊಡಗಿರುವುದಕ್ಕೆ ಹೊರರಾಜ್ಯದವರು ಕಾರಣವೇ? ನಮ್ಮ ನಮ್ಮ ನೀತಿ ನಿಯಮಗಳನ್ನು ಸರಿಪಡಿಸಿ ಕನ್ನಡಿಗರಿಂದ ಸೋಮಾರಿತನದ ಭೂತವನ್ನು ಬಿಡಿಸುವಂತಹ ಹೋರಾಟವನ್ನು ಕನ್ನಡ ಸೇನೆಗಳು ಹಾಕಿಕೊಳ್ಳಬೇಕೇ ವಿನಹ ಕನ್ನಡಿಗರನ್ನು ಇನ್ನಷ್ಟು ಸೋಮಾರಿಗಳನ್ನಾಗಿ ಮಾಡುವಂತಹ ಯೋಜನೆಗಳನ್ನಲ್ಲ.

ಒಟ್ಟಾರೆ ಇವರ ಹೋರಾಟದ ಏಕಾಂಶವೆಂದರೆ ಅನ್ಯಭಾಷಿಗರನ್ನು ಸದೆಬಡಿಯುವುದು. ಇದು ದ್ವೇಷವನ್ನು ಬೆಳೆಸುತ್ತದೇ ವಿನಹ ಭಾಷೆಯನ್ನಂತೂ ಅಲ್ಲ!

ಇನ್ನು ರೈಲ್ವೇ ಒಂದು ಕೇಂದ್ರ ಸರ್ಕಾರದ ಸಂಸ್ಥೆಯಾದರೂ ಆ ಸಂಸ್ಥೆಯನ್ನು ಯಾವ ರೀತಿ ಸ್ಥಳೀಯರಿಗೆ ಅದನ್ನು ’ನಮ್ಮ ರೈಲ್ವೇ’ ಎಂಬ ಭಾವನೆ ಮೂಡಿಸಬೇಕೆಂಬ ದೂರದೃಷ್ಟಿಯಿಲ್ಲದೆ, ಯಾವ ಯಾವ ಉದ್ಯೋಗಗಳಲ್ಲಿ ಸ್ಥಳೀಯ ಭಾಷಿಕರು ಅವಶ್ಯಕವೆಂಬ ತಿಳುವಳಿಕೆಯಿದ್ದರೂ ಅದನ್ನು ಅಳವಡಿಸಬೇಕೆಂಬ ಛಲವಿಲ್ಲದೆ ಆ ಸಂಸ್ಥೆಯೊಂದು ಸೇವಾ ಸಂಸ್ಥೆಯಾಗಿರದೆ ಆಡಳಿತಶಾಹೀ ಕೇಂದ್ರವಾಗಿದೆ. ಜಾತಿಬಲ, ಹಣಬಲ, ಕುತಂತ್ರಿತನ, ತಲೆಹಿಡುಕುತನಗಳಿಂದ ಮಂತ್ರಿಗಳಾದವರಿಗೂ, ಅಮಿತಾಭ್ ಬಚ್ಚನ್ ಹೈಟ್ ಎಷ್ಟು; ಮಾಧುರಿ ದೀಕ್ಷಿತ್ ಸೊಂಟದ ಅಗಲವೆಷ್ಟು; ಎಂಬಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಉರು ಹೊಡೆದು ಐ.ಎ.ಎಸ್. / ಐ.ಪಿ.ಎಸ್. ಪಾಸು ಮಾಡಿ ಅಧಿಕಾರಿಗಳಾದ ಬಚ್ಚಾಗಳಿಗೆ ಒಂದು ಸಂಸ್ಥೆಯನ್ನು ನಡೆಸುವ ಶಕ್ತಿ ಇರುತ್ತದೆಯೇ?

ಇಲ್ಲಿ ನಿಮಗೊಂದು ವಿಷಯವನ್ನು ಹೇಳಬಯಸುತ್ತೇನೆ. ಇಂದು ಬ್ರಿಟಿಷ್, ಲುಫ್ತಾನ್ಸಾ, ಏರ್ ಫ್ರಾನ್ಸ್ ಏರ್ ಲೈನ್ ಗಳು ಬೆಂಗಳೂರಿಗೂ, ಹೈದರಾಬಾದಿಗೂ ಸೇವೆಯನ್ನೊದಗಿಸುತ್ತಿರುದು ತಿಳಿದಿದೆ ತಾನೆ. ಈ ಸಂಸ್ಥೆಗಳು ಮೊದಲಿನಿಂದಲೂ ಮದ್ರಾಸ್, ಬಾಂಬೆಗಳಿಗೆ ಹಾರುತ್ತಿದ್ದರೂ ಅದರಲ್ಲಿ ಭಾರತೀಯ ಊಟ, ಸಿನಿಮಾಗಳು ಇರುತ್ತಿರಲಿಲ್ಲ. ಯಾವಾಗ ಭಾರತೀಯ ಮೂಲದ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಯಿತೋ ಈ ಸಂಸ್ಥೆಗಳು ಭಾರತೀಯ ’ಹೋಸ್ಟ್’ಗಳನ್ನು ನೇಮಿಸಿಕೊಂಡು ಹಿಂದಿ, ತೆಲುಗು, ತಮಿಳಿನಲ್ಲಿ ಸ್ವಾಗತ, ಧನ್ಯವಾದಗಳೊಂದಿಗೆ ಸೀಟ್ ಬೆಲ್ಟ್ ಹಾಕಿಕೊಳ್ಳುವ ಮತ್ತಿತರೆ ರಕ್ಷಣಾಸೂಚಿಗಳನ್ನೂ ಹೇಳುತ್ತಾರೆ. ಏಕೆಂದರೆ ತಮ್ಮ ಆದಾಯದ ಮೂಲವಾದ ಈ ಪ್ರಯಾಣಿಕರಿಗೆ ಇದು ’ನಮ್ಮ ಏರ್ ಲೈನ್’ ಎಂಬ ಭಾವನೆಯನ್ನು ಮೂಡಿಸಲು. ಹಲವಾರು ಬಾರಿ ಕೆಲಸದ ನಿಮಿತ್ತ ಚೆನ್ನೈ, ಹೈದರಾಬಾದಿಗೆ ಶಿಕಾಗೋನಿಂದ ಪ್ರಯಾಣಿಸಿರುವ ನನಗೆ ಈ ಏರ್ ಲೈನುಗಳಲ್ಲಾದ ’ಪರ್ಸನಲೈಜೇಷನ್’ ಬದಲಾವಣೆ ಗಮನಕ್ಕೆ ಬಂತು. ಹೈದರಾಬಾದ್ ಫ್ಲೈಟ್ ಗಳಲ್ಲಿ ತೆಲುಗು ಸಂದೇಶ, ಸಿನಿಮಾಗಳನ್ನು ಭಿತ್ತರಿಸಿ, ಚೆನ್ನೈ ಫ್ಲೈಟ್ ಗಳಲ್ಲಿ ತಮಿಳು ಬಳಸುತ್ತಾರೆ.

ಅದೇ ವೈಯುಕ್ತಿಕವಾಗಿ ಬೆಂಗಳೂರಿಗೆ ಬರುವ ನನಗೆ ಈ ಏರ್ ಲೈನುಗಳು ಕನ್ನಡ ಬಳಸದಿರುವುದೂ ಗಮನಕ್ಕೆ ಬಂತು. ಇವರ ಪ್ರಕಾರ ಮುಂಬೈನಲ್ಲಿ ಮರಾಠಿ ಮಾತನಾಡುವವರು ಕಡಿಮೆ ಇದ್ದು ಹಿಂದಿಯೇ ಅಲ್ಲಿನ ಅಧಿಕೃತ ಭಾಷೆಯಾದುದರಿಂದ ಮುಂಬೈಗೆ ಹೋಗುವ ವಿಮಾನಗಳಲ್ಲಿ ಹಿಂದಿಯನ್ನು ಬಳಸಿದಂತೆಯೇ, ಬೆಂಗಳೂರಿನಲ್ಲಿಯೂ ಕೂಡ ಹಿಂದಿಯೇ ಪ್ರಮುಖ ಭಾಷೆಯಾದುದರಿಂದ ಈ ವಿಮಾನಕ್ಕೂ ಹಿಂದಿ ಬಳಸುತ್ತೇವೆಂದು ನನ್ನ ಹೋಸ್ಟ್ ತಿಳಿಸಿದಳು. ಸದ್ಯ, ಬೆಂಗಳೂರಿನ ಏರ್ ಪೋರ್ಟಿನ ತುಂಬೆಲ್ಲಾ ಕೂಲಿಯಿಂದ ಗ್ರೌಂಡ್ ಆಫೀಸರ್ ವರೆಗೂ ತುಂಬಿರುವ ತಮಿಳು / ಮಲಯಾಳೀ ಭಾಷಿಗರನ್ನು ನೋಡಿ, ಬೆಂಗಳೂರಿನ ಅಧಿಕೃತ ಭಾಷೆ ತಮಿಳು, ಮಲಯಾಳಂ, ಎನ್ನದೇ ನಮ್ಮ ರಾಷ್ಟ್ರಭಾಷೆಯನ್ನು ಹೆಸರಿಸಿದಳಲ್ಲಾ ಅದೇ ಸಮಾಧಾನ!

ಇರಲಿ ಅದು ಬೇರೆ ವಿಷಯ. ಆದರೆ ಅಂತಹ ಒಂದು ಸಣ್ಣ ಆದರೆ ಅತಿಮುಖ್ಯವಾದ ’ಪರ್ಸನಲೈಜೇಷನ್’ ವ್ಯಾಪಾರೀ ತಂತ್ರವನ್ನು ನಮ್ಮ ಪೂರ್ವಜರು ’ಅತಿಥಿ ದೇವೋಭವ’ ಎಂದು ಎಂದೋ ಘೋಷಿಸಿದ್ದರೂ ಅದರ ವಿಶಾಲಾರ್ಥ ಇನ್ನೂ ನಮ್ಮ ರೈಲ್ವೇಗೆ ತಿಳಿದಿಲ್ಲವೇನೋ?

ಅಣಕ:

ಸದಾ ಹುಂಬನಂತೆ, ಮೂರ್ಖಶಿಖಾಮಣಿಯಂತಿದ್ದ ಲಾಲೂ ಬಗೆಗಿನ ಜೋಕುಗಳನ್ನು ಓದಿದ್ದೀರಷ್ಟೆ. ಹಾಗಿದ್ದ ಲಾಲೂ, ಇಂದು ಒಬ್ಬ ಸಮರ್ಥ ನಾಯಕನಂತೆ ರೈಲ್ವೇಯನ್ನು ನಿಭಾಯಿಸುತ್ತಿರುವುದು; ಐ.ಐ.ಎಮ್. ನಂತಹ ಪ್ರತಿಷ್ಟಿತ(?) ವಿದ್ಯಾಸಂಸ್ಥೆಗಳಲ್ಲಿ ಮ್ಯಾನೇಜಮೆಂಟ್ ಬಗ್ಗೆ ಲೆಕ್ಚರ್ ಕೊರೆಯುವುದು; ಕಾರ್ಪೋರೇಟ್ ಅಧಿಕಾರಿಯ ಮಾದರಿ ರೈಲ್ವೇ ಬಡ್ಜೆಟ್ ಮಂಡಿಸುವುದು ಮುಂತಾದ ಅಸಾಮಾನ್ಯ ಬುದ್ದಿಮತ್ತೆಯ ಪ್ರತಿಭೆಯನ್ನು ಗಳಿಸಿದ್ದು ಹೇಗೆ ಬಲ್ಲಿರಾ?

ಅದಕ್ಕೆ ನೀವು ಹುಲ್ಲು ಮೇಯಬೇಕು, ಮೇದ ಮೇವನ್ನು ಆಗಾಗ್ಗೆ ಬಾಯಿಗೆ ತಂದುಕೊಂಡು ಚಪ್ಪರಿಸಬೇಕು,

ಸುಮ್ಮನೇ ’ಡರ್ಟಿ ಪೀಪಲ್’ ತರಹ ರಾಜಾ ವ್ಹಿಸ್ಕಿ ಕುಡಿದು ತಲೆ(ಮಾಂಸ) ತಿನ್ನದ್ರಿಂದಲ್ಲ!

1 comment:

  1. ಎಲ್ರನ್ನೂ ಬಯ್ದಿದ್ದಾಯ್ತು. ಇನ್ನು ನಿಮ್ಮನ್ನು ನೀವು ಬಯ್ಕೊಂಬುಟ್ರೆ ಎಲ್ರನ್ನೂ ಬಯ್ದಂಗಾಗುತ್ತೆ. ಸಭಾಸ್ ಮಗ.... ಇಂಗಿರಬೇಕು. ಯಾಕೋ ಈಗೀಗ ಒಂದಿಬ್ರನ್ನಾದ್ರೂ ಬಯ್ದೇ ಇದ್ರೆ ಸಮಾಧಾನಾನೇ ಇರಲ್ಲ. ಈಗ ಬರೆಯೋರ ಮುಖ್ಯ ಉದ್ದೇಶ ಅಂದ್ರೆ ಯಾರನ್ನಾದ್ರೂ ಬಯ್ಯೋದು.

    ReplyDelete