ಕಳೆದ ವಾರದ ಲಾಲೂ ಲೇಖನವನ್ನು ಮೆಚ್ಚಿ ಹಲವಾರು ಓದುಗರು ಮೆಚ್ಚುಗೆ ಸೂಚಿಸಿ ಇಮೇಲ್ ಸಿದ್ದರು. ಹಾಗೆಯೇ ಬಾರ್ಸಿಲೋನಾದಿಂದ ರಂಗಸ್ವಾಮಿಯವರು ಲೇಖನವನ್ನು ಮೆಚ್ಚುತ್ತ ಹಿಂದಿಯು ನಮ್ಮ ರಾಷ್ಟ್ರಭಾಷೆಯಲ್ಲವೆಂದೂ, ಹಿಂದಿಯು ಕೂಡ ಭಾರತ ಸರ್ಕಾರವು ನಿಗದಿ ಪಡಿಸಿರುವ ಆಡಳಿತ ಭಾಷೆಗಳಲ್ಲಿಯೊಂದೆಂದು ತಿಳಿಸಿದರು. ಅದ್ಯಾವ ಕಾರಣದಿಂದ ನನ್ನ ಹೈಸ್ಕೂಲು ಮೇಷ್ಟ್ರುಗಳು ಹಿಂದಿಯನ್ನು ನಮ್ಮ ರಾಷ್ಟ್ರಭಾಷೆಯೆಂದು ನಮಗೆ ಭೋಧಿಸಿದ್ದರೋ ಗೊತ್ತಿಲ್ಲ. ಭಾರತಕ್ಕೆ ಯಾವುದೇ ರಾಷ್ಟ್ರಭಾಷೆಯಿಲ್ಲದೇ ಕೇವಲ ಆಡಳಿತ ಭಾಷೆಗಳಿವೆ ಎಂಬುದು ಸತ್ಯ ಸಂಗತಿ. ಹಿಂದಿಯನ್ನು ರಾಷ್ಟ್ರಭಾಷೆಯೆಂದುಕೊಂಡಿದ್ದ ನನ್ನ ಮೌಢ್ಯಕ್ಕೆ ಕ್ಷಮೆಯಿರಲಿ.
ಮೊನ್ನೆ ನನ್ನ ಸ್ನೇಹಿತನೊಬ್ಬ ಚೆನ್ನೈನಲ್ಲಿ ಡಿ.ಎಲ್.ಎಫ್. ಕಂಪೆನಿಯವರು ೨೭೦೦ ರೂಪಾಯಿಗೆ ಚದರಡಿಯಂತೆ ಅಪಾರ್ಟಮೆಂಟುಗಳನ್ನು ಬುಕ್ಕಿಸಿಕೊಳ್ಳುತ್ತಿರುವರೆಂದೂ, ಇದು ಕೇವಲ ’ಆರಂಭ ಮುನ್ನಾ’ದ ಬೆಲೆಯಾಗಿದ್ದು ಅದು ವಾರದೊಳಗೆ ’ಆರಂಭ ನಂತರ’ದ ಬೆಲೆಗೇರುವುದೆಂದೂ, ತಾನು ತುರ್ತಾಗಿ ಬ್ಯಾಂಕಿಗೆ ಹೋಗಿಬರುವ ಕಾರಣ ಒಂದು ಘಂಟೆ ಇರುವುದಿಲ್ಲವೆಂದು ಹೇಳಿ ಹೋದನು. "ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ"ನಾಗ ಬಯಸುತ್ತಿರುವ ಅವನನ್ನು ಕಂಡು ಖುಷಿಯಾಯಿತು. ಕೆಲಸದ ಒತ್ತಡದಲ್ಲಿ ನಂತರ ಆ ವಿಷಯವನ್ನು ನಾನು ಮರೆತುಹೋದೆನು. ಕೆಲವು ವಾರಗಳ ನಂತರ ನನ್ನಲ್ಲಿಗೆ ಬಂದ ನನ್ನ ಆ ಸ್ನೇಹಿತನನ್ನು ಕಂಡು ಅವನ ಚೆನ್ನೈ ವಿಷಯ ನೆನಪಾಗಿ ವಿಚಾರಿಸಿದೆನು. ಅದಕ್ಕವನು ಆ ಕಂಪೆನಿ ಬುಕ್ಕಿಂಗ್ ತೆರೆದ ದಿನ ಜನರು ರಜನೀಕಾಂತ್ ಸಿನೆಮಾ ಕ್ಯೂ ಮಾದರಿಯಲ್ಲಿ ಕ್ಯೂ ನಿಂತು ಕೊಂಡುದುದರ ಪರಿಣಾಮವಾಗಿ ಕೇವಲ ನಾಲ್ಕು ಘಂಟೆಗಳಲ್ಲಿಯೇ ಎಲ್ಲಾ ೭೦೦ ಯುನಿಟ್ ಗಳೂ ಮಾರಾಟವಾಗಿಹೋದವೆಂದೂ, ಮತ್ತು ಅವನಿಗೆ ಅದು ಸಿಕ್ಕಲಿಲ್ಲವಾದರೂ ಮುಂದಿನ ಎರಡನೇ ಪೇಃಸ್ ನಲ್ಲಿ ಐದು ಲಕ್ಷ ಮುಂಗಡ ಕೊಟ್ಟು ಬುಕ್ಕಿಸಿದ್ದಾಗಿ ಹೇಳಿದನು. ಬರುತ್ತಿರುವ ಆ ಅಪಾರ್ಟಮೆಂಟ್ ಕಟ್ಟಡವು ಅಕ್ಸೆಂಚರ್, ಹೆಚ್.ಪಿ., ಇನ್ನು ಮುಂತಾದ ಬಹುರಾಷ್ಟ್ರ್‍ಈಯ ಕಂಪೆನಿಗಳ ಹತ್ತಿರದಲ್ಲಿದೆಯೆಂದೂ, ಆ ಏರಿಯಾದಲ್ಲಿ ಕಡಿಮೆಯೆಂದರೂ ೪೦೦೦ ರೂಪಾಯಿಗೆ ಚದರಡಿ ನಡೆಯುತ್ತಿದೆಯೆಂದನು.
ಅಲ್ಲಾ, ಅತ್ಯಂತ ಮುಂದುವರಿದ ರಾಷ್ಟ್ರ, ಎಲ್ಲಾ ದೇಶಗಳ ಹಿರಿಯಣ್ಣ(?)ನೆನ್ನುವ ಅಮೇರಿಕಾವು ತನ್ನಲ್ಲಿ ಅಂಕೆಯಿಲ್ಲದ ಗೃಹಸಾಲಗಳ ಮತ್ತು ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಕಾರಣವಾಗಿ ಇಲ್ಲಿನ ಮನೆಗಳ ಬೆಲೆಗಳು ಇಳಿಮುಖವಾಗಿವೆ ಎಂದು ಅದನ್ನು ತಡೆಯಲು ಯೋಜನೆಗಳನ್ನು ಹಾಕಿಕೊಳ್ಳುತ್ತಿರುವಾಗ, ಭಾರತದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಇದೇ ಅಮೇರಿಕಾದ ಕಂಪೆನಿಗಳಲ್ಲಿನ ಉದ್ಯೋಗಗಳ ಮೇಲೆ ಆಧಾರಗೊಂಡು ರಿಯಲ್ ಎಸ್ಟೇಟ್ ಬೆಲೆ ವಿಪರೀತವಾಗಿ ಏರಿದೆ, ಏರುತ್ತಿದೆ. ಆದರೆ ಇದು ನಿಜಕ್ಕೂ ಭಾರತದ ಸ್ವಾವಲಂಬಿತ ಆರ್ಥಿಕತೆಯ ಕಾರಣವೇ? ಅಲ್ಲವೇ ಅಲ್ಲವೆನ್ನಬಹುದು. ಯಾಕೆಂದರೆ ಈ ಎಲ್ಲಾ ಬೆಳವಣಿಗೆ ಪರಾವಲಂಬೀ ಆರ್ಥಿಕತೆಯ ಪರಿಣಾಮ! ಹಾಗಾಗಿಯೇ ಆ ಬಿಲ್ಡರ್ ಗಳು ಬರೀ ಸಾಫ್ಟ್ ವೇರ್ ಕಂಪೆನಿಗಳ ಹೆಸರುಗಳನ್ನೆತ್ತಿ ರೂಪಾಯಿಗಳ ಭಾರತದಲ್ಲಿ ಅಮೇರಿಕಾದ ಡಾಲರ್ ನಲ್ಲಿಯೇ ಬೆಲೆ ನಿಗದಿಪಡಿಸುತ್ತಿದ್ದಾರೆ. ’ಎಂಪ್ಲಾಯಮೆಂಟ್ ಅಟ್ ವಿಲ್’ ಎಂಬ ತತ್ವದ ಮೇಲೆ, ಅಲ್ಪಖರ್ಚಿನ ಇಂಗ್ಲಿಷ್ ಮಾತನಾಡಬಲ್ಲ ಭಾರತದ ಮಾನವ ಶಕ್ತಿಯ ಒಂದೇ ಕಾರಣಕ್ಕಾಗಿ ಭಾರತಕ್ಕೆ ಬಂದಿರುವ ಈ ಕಂಪೆನಿಗಳ ಈ ’ಟೆಂಪರರಿ’ ಆರ್ಥಿಕತೆಯನ್ನು ನಂಬಿ ಶಾಶ್ವತ ಪಂಗನಾಮ ಹಾಕಿಸಿಕೊಳ್ಳುತ್ತಿರುವ ಭಾರತೀಯ ಅದ್ಯಾವ ಪರಿ ರೂಪಾಯಿ ಲೋಕದಲ್ಲಿ ಡಾಲರ್ ಬೆಲೆಗೆ ಈ ಮನೆಗಳನ್ನು ಕೊಳ್ಳುತ್ತಿರುವನೋ?
ಇದಕ್ಕೆಲ್ಲಾ ಭಾರತದ ಬೆಳೆಯುತ್ತಿರುವ ಪ್ರಬಲ ಸ್ವಾವಲಂಬೀ ಆರ್ಥಿಕತೆ ಕಾರ್‍ಅಣವೆಂದು ನಂಬಲು ನನಗಾಗುವುದಿಲ್ಲ. ಪ್ರಬಲ ಲ್ಯಾಂಡ್ ಮಾಫಿಯಾ, ದುರುಳ ರಾಜಕಾರಣಿಗಳು ಅಮೇರಿಕಾದ ಈ ಕಂಪೆನಿಗಳ ನೆಪವೊಡ್ಡಿ ಭಾರತೀಯರೇ ಭಾರತೀಯರನ್ನು ಮೋಸಗೊಳಿಸುತ್ತಿರುವ ಕಹಿಸತ್ಯವೇ ಎಂದು ನನಗನಿಸುತ್ತದೆ. ಆದರೂ ಇದು ಎಷ್ಟು ಹಾಸ್ಯಾಸ್ಪದವೆಂದರೆ ಬೆಂಗಳೂರಿನ ಕೆಲ ಹೋಟೇಲುಗಳಲ್ಲಿ ಇಂಗ್ಲಿಷ್ ಹೆಸರಿಡುವ ಹುರುಪಿನಲ್ಲಿ ಹುರಿದ ಕೋಳಿ ಕಾಲಿಗೆ "ಚಿಕನ್ ಲಾಲಿಪಾಪ್" ಎನ್ನುವಂತೆ! ಲಾಲಿಪಾಪ್ ಎಂದೊಡನೆ ಕೋಳಿ ನೆಕ್ಕಿದೊಡನೆ ಸಿಹಿಯಾಗಿ ಬಾಯಲ್ಲಿ ಕರಗುವುದೇ ಇಲ್ಲಾ ವಿದೇಶೀ ಡಾಲರ್ ಬೆಲೆಗೆ ಈ ಮನೆಗಳನ್ನು ಕೊಂಡೊಡನೆ ಭಾರತ ಅಮೇರಿಕಾವಾಗಿಬಿಟ್ಟೀತೇ?
ಯೋಚಿಸಿ ನೋಡಿ, ಬೆಂಗಳೂರಿನ ಹೊರವಲಯದಲ್ಲಿ ಒಂದು ೬೦:೪೦ ರ ಸೈಟಿಗೆ ಒಂದು ಕೋಟಿಯೆಂದರೆ ಸರಾಸರಿ ಎರಡೂವರೆ ಲಕ್ಷ ಡಾಲರ್. ಮನೆ ಕಟ್ಟಲು ಮತ್ತೊಂದು ಅರ್ಧ ಕೋಟಿ ರೂಪಾಯಿಯೆಂದುಕೊಂಡರೂ ಒಟ್ಟು ಮೂರೂಮುಕ್ಕಾಲು ಲಕ್ಷ ಡಾಲರ್. ಆ ಬೆಲೆಗೆ ನಾನಿರುವ ಶಿಕಾಗೋದ ಹೊರವಲಯದಲ್ಲಿ ೧೦೦:೧೮೦ ಜಾಗೆಯಲ್ಲಿ ಕಟ್ಟಿರುವ ೨೮೦೦ ಚದರಡಿಯ, ಶುದ್ಧ ಗಾಳಿ / ಬೆಳಕಿನ ಎರಡಂತಸ್ತಿನ ಮನೆ ಬರುತ್ತದೆ. ವಿಷಯ ಹೀಗಿರುವಾಗ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಶಿಕಾಗೋಗಿಂತ ಆರ್ಥಿಕ ಉನ್ನತಿಯಲ್ಲಿದೆಯೇ ಅಥವಾ ಕನಿಷ್ಟ ಅಲ್ಲಿಯಷ್ಟು ಶುದ್ಧ ಗಾಳಿ ಬೆಳಕಿನಿಂದೊಡಗೂಡಿದೆಯೆ? ಬೆಂಗಳೂರು ಅತೀ ದುಬಾರಿಯಾಯಿತೆಂದುಕೊಂಡು ಈ ಕಂಪೆನಿಗಳು ಜೆಕ್ ರಿಪಬ್ಲಿಕ್ಕಿಗೋ, ಹಂಗರಿಗೋ ಅಥವಾ ಕಜಕಿಸ್ತಾನಕ್ಕೋ ಹೋದರೆ, ಸಾಲದ ಮೇಲೆ ಈ ಮನೆಗಳನ್ನು ತೆಗೆದುಕೊಂಡಿರುವವರು ಏನು ಮಾಡುತ್ತಾರೆಯೋ? ಯಾಕೆಂದರೆ ಇಲ್ಲಿನ ಕಂಪೆನಿಗಳು ಆ ದೇಶಗಳತ್ತ ಆಗಲೇ ಮುಖ ಮಾಡಿವೆ. ನಾನೇ ಖುದ್ದಾಗಿ ಈ ಉದ್ದೇಶವಾಗಿ ನನ್ನ ಕಂಪೆನಿಯಿಂದ ಹಂಗರಿಗೆ ಹೋಗಿ ಬಂದಿದ್ದೇನೆ!
ವಿಷಯ ಹೀಗಿರುವಾಗಿ ಅದು ಯಾರು ಹೇಗೆ ಈ ಬೆಲೆಗೆ ಕೊಳ್ಳುತ್ತಿರುವವರು? ಇದಕ್ಕೆಲ್ಲ ಕಾರಣ, ಭಾರತದಲ್ಲಿ ಇತ್ತೀಚೆಗೆ ಅತೀ ಸುಲಭವಾಗಿ ಸಿಗುತ್ತಿರುವ ಸಾಲಗಳು! ಈ ಅತೀ ಸುಲಭ ಸಾಲ ಸಿಗುವಂತಾಗಿದ್ದುದಕ್ಕೆ ಪ್ರಮುಖ ಕಾರ್‍ಅಣ, ಕೊಟ್ಟ ಚೆಕ್ಕುಗಳು ಬೌನ್ಸ್ ಆದರೆ ಅದು ಕ್ರಿಮಿನಲ್ ಅಪರಾಧವೆಂದು ಕಾನೂನು ಮಾಡಿದ್ದುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು ಅಲ್ಲವೇ?
"ಕೊಟ್ಟವನು ಕೋಡಂಗಿ, ಇಸ್ಕೊಂಡವನು ಈರಭದ್ರ" ಎಂಬುದನ್ನು ಹತೋಟಿಗೆ ತರಲು ಈ ಕಾಯ್ದೆಯನ್ನು ನಮ್ಮ ನಾಯಕರುಗಳು ಜಾರಿಗೊಳಿಸಿದರೆ, ಬ್ಯಾಂಕುಗಳು ಇದನ್ನು ಚಾಣಾಕ್ಷವಾಗಿ "ಸಾಲವನು ಕೊಂಬಾಗ ಹಾಲೋಗರವನುಂಡಂತೆ, ಸಾಲಿಗನು ಬಂದು ಎಳೆದಾಗ ಕಿಬ್ಬದಿಯ ಕೀಲು ಮುರಿದಂತೆ" ಎಂದು ಗ್ರಾಹಕರಿಗೆ ಅರ್ಥೈಸಲು ಅನುಕೂಲವಾಗಿ ಬಳಸಿಕೊಳ್ಳುತ್ತಿವೆ. ಅದಕ್ಕೇ ನಾನು ಸದಾ ಒತ್ತಿ ಹೇಳುವುದು ನಮ್ಮ ನಾಯಕರುಗಳಿಗೆ ಧೀರ್ಘಾಲೋಚನೆಗಳು ಇಲ್ಲವೆಂದು! ಈ ಕಾನೂನಿನ ಪರಿಣಾಮದಿಂದ ಇಂದು ಬ್ಯಾಂಕುಗಳು ತಮ್ಮೆಲ್ಲಾ ನಿಯಮಗಳನ್ನು ಸಡಿಲಿಸಿಕೊಂಡು ಸಾಲದ ಪೂರ್ಣಾವಧಿಯ ಎಲ್ಲಾ ಕಂತುಗಳ ಪ್ರತಿ ಕಂತಿನ ಮೊತ್ತದ ’ಪೋಸ್ಟ್ ಡೇಟೆಡ್ ಚೆಕ್’ಗಳನ್ನು ತೆಗೆದುಕೊಂಡು ಸುಲಭವಾಗಿ ಸಾಲವನ್ನು ನೀಡುತ್ತವೆ. ಹಾಗೆಯೇ ಯಾವುದಾದರೂ ಕಂತಿನ ಚೆಕ್ಕು ಬೌನ್ಸ್ ಆದರೆ ಆ ವ್ಯಕ್ತಿಯ ವಿರುದ್ಧ ದಾವೆ ಹೂಡುತ್ತವೆ. ಇಂದು ಈ ಕಾನೂನಿನ ದೆಸೆಯಿಂದ ಕೋರ್ಟುಗಳಲ್ಲಿ ಈ ರೀತಿಯ ದಾವೆಗಳು ಅತ್ಯಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಅದೆಷ್ಟು ಕೇಸುಗಳೆಂದರೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ’ಕೋರ್ಟುಗಳು ಸಾಲ ವಸೂಲಿ ಮಾಡಿಕೊಡುವ ಸಂಸ್ಥೆಗಳಲ್ಲ’ವೆಂದು ಈ ಬಗೆಯ ದಾವೆಗಳನ್ನು ತಿರಸ್ಕರಿಸುವತ್ತ ಮುಖ ಮಾಡಿದೆ. ಕೋರ್ಟಿಗೆ ಇದು ತಲೆನೋವಿನ ಸಂಗತಿಯಾದರೂ ಅದು ಆ ಕಾನೂನಿಗೆ ತಿದ್ದುಪಡಿಯನ್ನು ತರಬೇಕೇ ಹೊರತು ಈ ರೀತಿ ಕೇಸುಗಳನ್ನು ತಿರಸ್ಕರಿಸುವುದು ಸರಿಯಲ್ಲವೆನಿಸುತ್ತದೆ.
ಇರಲಿ, ಒಟ್ಟಾರೆ ದೂರಗಾಮಿತ್ವವಿಲ್ಲದ ನಾಯಕತೆ, ದಿಢೀರ್ ಶ್ರೀಮಂತರಾಗಬೇಕೆಂಬ ದುರಾಸೆ, ಭದ್ರ ಬುನಾದಿಯಿಲ್ಲದ ಆರ್ಥಿಕ ಬೆಳವಣಿಗೆ ಇದೆಲ್ಲವೂ ಅತಿಯಾಗಿ ತಿಂದು ಅಸಿಡಿಟಿಯಾದವರ ಹೊಟ್ಟೆಯ ಮಾದರಿಯಲ್ಲಿ ಈ ನಗರಗಳ ರಿಯಲ್ ಎಸ್ಟೇಟ್ ಬೆಲೆ ಊದಿಕೊಂಡಿದೆ. ಅದಕ್ಕೆ ಸರಿಯಾಗಿ ಅಮೇರಿಕಾದ ’ಗ್ಯಾಸ್ ಎಕ್ಸ್’ ಇಲ್ಲ ಬಡ ಭಾರತದ ’ನಿಂಬು ಸೋಡಾ’ ಕೊಡುವಂತಹ ಕನಸುಗಾರ ಚಿಕಿತ್ಸಕ ನಾಯಕರ ಬರುವಿಕೆಗಾಗಿ ಭಾರತ ಬಹುಕಾಲದಿಂದ ಕಾಯುತ್ತಿದೆಯೇನೋ? (ರಾಮನಿಗಾಗಿ ಕಾಯುತ್ತಿದ್ದ ಶಬರಿಯ ಮಾದರಿ).
ಹಾಂ, ಇನ್ನೊಂದು ಸಂಗತಿ ಕಳೆದೆರಡು ವಾರಗಳ ಹಿಂದೆ ’ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ’ಯ ಕುರಿತಾಗಿಯೂ, ಈ ಬಾರಿ ’ಚೆಕ್ಕುಗಳು ಬೌನ್ಸ್’ ಕುರಿತಾಗಿಯೂ ಅಕ್ಷೇಪಿಸಿರುವ ಸುಪ್ರೀಂ ಕೋರ್ಟ್, ಹೆಚ್.ಪಿ. ಕಾಲ್ ಸೆಂಟರ್ ಉದ್ಯೋಗಿಯ ಅತ್ಯಾಚಾರ/ಕೊಲೆ ಕೇಸಿನಲ್ಲಿ ತನ್ನ ಉದ್ಯೋಗಿಗಳಿಗೆ ಸರಿಯಾಗಿ ರಕ್ಷಣೆ ಕೊಡದ ಹೆಚ್.ಪಿ. ಅಧಿಕಾರಿ ಸೋಮ್ ಮಿತ್ತಲ್ ರನ್ನೂ ಅಪರಾಧಿಯಾಗಿಸಿ ಎಂದು ಆದೇಶಿಸಿದೆ. ತನ್ನ ಸಂಸ್ಥೆಯಲ್ಲಿ ಉದ್ಯೋಗದಲ್ಲಿಲ್ಲದ ಡ್ರೈವರ್ ಒಬ್ಬ ಮೋಸದಿಂದ ಆ ಉದ್ಯೋಗಿಯನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಕ್ಕೆ ಈ ಸಂಸ್ಥೆಯ ಅಧಿಕಾರಿಗಳು ಅದು ಹೇಗೆ ಜವಾಬ್ದಾರಿಯಾಗುತ್ತಾರೋ? ಭಾರತದಲ್ಲಿ ನಡೆಯುವ ಕೊಲೆ, ಸುಲಿಗೆ, ಅತ್ಯಾಚಾರಗಳಿಗೆಲ್ಲಾ ಪೊಲೀಸ್ ಅಧಿಕಾರಿಗಳನ್ನೂ, ಗೃಹಸಚಿವರುಗಳನ್ನೂ, ಮುಖ್ಯಮಂತ್ರಿಗಳನ್ನೂ ಮತ್ತು ರಾಷ್ಟ್ರಪತಿಗಳನ್ನೂ ಜವಾಬ್ದಾರಿ ಮಾಡಿ, ತಮ್ಮ ದೇಶದ ನಾಗರೀಕರಿಗೆ ರಕ್ಷಣೆ ಕೊಡುವುದು ಇವರೆಲ್ಲರ ಆದ್ಯ ಕರ್ತವ್ಯವಾಗಿದೆಯೆಂದು ಅವರುಗಳನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸಬಹುದೇನೋ?
ಅಣಕ:
ಬೆಂಗಳೂರಿನ ಬೆಳವಣಿಗೆ, ಇಷ್ಟೆಲ್ಲಾ ಅಮೇರಿಕಾದ ಕಂಪೆನಿಗಳ ಮೇಲೆ ಆಧಾರಗೊಂಡಿದ್ದರೂ ಅಮೇರಿಕಾದ ರಿಸೆಷನ್ನೂ, ಇನ್ಫ್ಲೇಷನ್ನೂ ಬೆಂಗಳೂರನ್ನು ಅಭಾದಿತವಾಗಿಟ್ಟಿರುವುದು ಯಾಕೆ ಗೊತ್ತೆ?
ಬೆಂಗಳೂರಿನ ಎ೧ ಮುಖ್ಯಮಂತ್ರಿಗಳಿಂದ ಹಿಡಿದು ದರಿದ್ರ ನಾರಾಯಣನವರೆಗೂ ಎಲ್ಲರೂ "ವಾಸ್ತು", "ಫೆಂಗ್ ಶ್ವೇ"ಗಳಿಗನುಸಾರವಾಗಿ ತಮ್ಮ ತಮ್ಮ ವಸತಿ, ವ್ಯವಹಾರಗೃಹಗಳನ್ನು ನಿರ್ಮಿಸಿಕೊಂಡಿರುವುದು ಅಥವಾ ಮಾರ್ಪಾಡಿಸಿಕೊಂಡಿರುವುದು! ಇಂದು ಬೆಂಗಳೂರಿನ ಚರಂಡಿಗಳೂ ವಾಸ್ತು ಪ್ರಕಾರವಾಗಿವೆ.
ವಿಷಯ ಹೀಗಿರುವಾಗ "ಬ್ಲಡೀ ಅಮೇರಿಕಾದ ರಿಸೆಷನ್ನೂ" ನಮಗ್ಯಾವ ಲೆಕ್ಕ?
ಹಾಗೇನಾದರೂ ಒಂದು ವೇಳೆ ಹೆಚ್ಚು ಕಮ್ಮಿಯಾದರೇ "ಎಡೆಯೂರಪ್ಪ" "ಎಡ್ಡ್ಯೂರಪ್ಪ" ಆದಂಗೆ ಹೆಸರು ಬದಲಾಯಿಸ್ಕಂಡರಾಯ್ತು!
ಪ್ರಿಯರೇ,
ReplyDeleteನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ