ಕತ್ತಲು ರಾತ್ರಿ!

ಹೀಗೆಂದು ಚುನಾವಣೆಯ ಮುನ್ನಾ ದಿನದ ರಾತ್ರಿಯನ್ನು ಕರೆಯುತ್ತಿದ್ದರು! ಆ ರಾತ್ರಿಯಲ್ಲಿ ಅಭ್ಯರ್ಥಿಗಳ ಚೇಲಾಗಳು ಕಾರು ಜೀಪುಗಳಲ್ಲಿ ಸಾರಾಯಿ, ರಮ್ಮುಗಳನ್ನು ಹೇರಿಕೊಂಡು ಡಿಸ್ಟ್ರಿಬ್ಯೂಷನ್ ಗೆ ಹೊರಡುತ್ತಿದ್ದರು. ಆಯಾ ಡಿಸ್ಟ್ರಿಬ್ಯೂಷನ್ ಏರಿಯಾಗೆ ಅನುಗುಣವಾಗಿ ಸಾರಾಯಿ ಇಲ್ಲವೇ ರಮ್ ಹಂಚುತ್ತಿದ್ದರು. ಒಂದು ಓಟಿಗೆ ಇಂತಿಷ್ಟು ಎಂದು ಹಣವೂ ಹಂಚಿಕೆಯಾಗುತ್ತಿದ್ದಿತು.

ಹೀಗೊಂದು ಕತ್ತಲ ರಾತ್ರಿಯ ಅನುಭವ ನನಗೂ ಆಗಿದೆ. ಆಗ ದೇವೇಗೌಡ ಮತ್ತು ಶ್ರೀಕಂಠಯ್ಯ ಹಾಸನದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆಗೆಲ್ಲಾ ರಾಜೀವ್ ಹತ್ಯೆಯ ಅನುಕಂಪದ ಕಾಲ. ಅಂದಿನ ಕತ್ತಲ ರಾತ್ರಿಗೆ ಖೋಡೇಸ್ ರಮ್ ಕ್ವಾರ್ಟರ್ ಬಾಟಲಿಗಳ ಕೇಸುಗಳು ನಮ್ಮ ಹಾಸ್ಟೆಲ್ಲಿಗೆ ಬಂದಿಳಿದವು. ಆಯಾ ಡಿಸ್ಟ್ರಿಬ್ಯೂಷನ್ ಏರಿಯಾದ ಪ್ರತಿಷ್ಟೆಗೆ ತಕ್ಕಂತೆ ಸಾರಾಯಿ, ರಾಜಾ ವಿಸ್ಕಿ, ಖೋಡೇಸ್ ರಮ್ಮುಗಳು ಹಂಚಲ್ಪಡುತ್ತಿದ್ದವು. ನಮ್ಮದು ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್ ಆದ್ದರಿಂದ ನಮ್ಮ ಹಾಸ್ಟೆಲ್ಲಿಗೆ ರಮ್ ಬಂದಿದ್ದಿತು. ನಾನೂ ನನ್ನ ರೂಂಮೇಟ್ ದಶಕುಮಾರನೂ ನಮ್ಮ ಬ್ಲಾಕಿನಲ್ಲಿದ್ದ ಎಲ್ಲಾ ರೂಮುಗಳ ಡಿಸ್ಟ್ರಿಬ್ಯೂಷನ್ ವಹಿಸಿಕೊಂಡು ನಮ್ಮ ರೂಮಿಗೆ ಸಾಕಷ್ಟು ರಮ್ ಕೇಸುಗಳನ್ನು ತಂದಿಟ್ಟುಕೊಂಡು ಅದನ್ನು ಹಲವಾರು ತಿಂಗಳುಗಳ ಕಾಲ ಕುಡಿಯುತ್ತ, ಕುಡಿಸುತ್ತಾ ಅವುಗಳನ್ನು ಖಾಲಿ ಮಾಡಿದ್ದೆವು.

ಅಲ್ಲಾ, ಹಾಸ್ಟೆಲ್ಲಿನಲ್ಲಿರುವವರಿಗೆ ಓಟಿನ ಹಕ್ಕಿದ್ದರೂ ಅದು ಹಾಸನದಲ್ಲಿರುವುದಿಲ್ಲ. ಅದು ಹೇಗೆ ಇವರಿಗೆ ಲಿಕ್ಕರ್ ಹಂಚಿದರೋ ಎಂದುಕೊಳ್ಳುವಿರಾ? ಹಾಸ್ಟೆಲ್ ಹುಡುಗರ ಕೆಲಸ ಪ್ರಾಕ್ಸಿ ಓಟುಗಳನ್ನು ಹಾಕುವುದು. ಹೇಗೂ ನೀಟಾಗಿರುತ್ತಿದ್ದ ಎಂಜಿನಿಯರಿಂಗ್ ಹಾಸ್ಟೆಲ್ ಹುಡುಗರನ್ನು ನೋಡಿದರೆ ಅದ್ಯಾವ ಬೂತ್ ಅಧಿಕಾರಿಯೂ ಸಂಶಯಗೊಳ್ಳುತ್ತಿರಲಿಲ್ಲ. ಹಾಗಾಗಿ ಈ ಎಂಜಿನಿಯರಿಂಗ್ ಹಾಸ್ಟೆಲ್ ಹುಡುಗರೆಂದರೆ ಅಲ್ಲಿನ ಅಭ್ಯರ್ಥಿಗಳಿಗೆ ಬಲು ಇಷ್ಟವಾಗುತ್ತಿದ್ದರು. ಹಾಗಾಗಿಯೇ ಇಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ, ತನ್ನ ಪಕ್ಷದ ಅಭ್ಯರ್ಥಿಯ ಪರ ಮತ ಯಾಚಿಸುತ್ತಿದ್ದ ದಾವಣಗೆರೆಯ ಮೆಡಿಕಲ್ ಹಾಸ್ಟೆಲ್ಲಿನ ಹುಡುಗರನ್ನು ಭೇಟಿ ಮಾಡಿರುವುದು!!

ಹಾಗಾಗಿಯೇ ನಮಗೆಲ್ಲ ಪ್ರತಿಷ್ಟಿತ(??) ಖೋಡೇಸ್ ರಮ್ ಬರುತ್ತಿದ್ದಿತು. ಇದೆಂತಹ ಪ್ರತಿಷ್ಟಿತ ಮದ್ಯವೆಂದುಕೊಳ್ಳುವಿರಾ? "ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಕಡಿಮೆ ಅಂದಳಂತೆ" ಎನ್ನುವಂತೇ ಪುಗಸಟ್ಟೆ ಕೊಡುವ ಮೂರು ಬ್ರಾಂಡುಗಳಲ್ಲಿ ಇದೇ ಪ್ರತಿಷ್ಟಿತವಾದುದು. ಅಷ್ಟೇ ಅಲ್ಲದೆ ಎಂಜಿನಿಯರಿಂಗ್ ಹುಡುಗರೆಂದು ಕಾರಿನಲ್ಲಿ ಓಟಿಂಗ್ ಬೂತಿಗೆ ಕರೆದೊಯ್ದು ಮತ್ತೆ ವಾಪಸ್ ಬಿಡುತ್ತಿದ್ದರು.

ಬರೀ ಥ್ರಿಲ್ ಬಯಸುತ್ತಿದ್ದ ಆ ವಯಸ್ಸಿನಲ್ಲಿ ಇದೂ ಒಂಥರಾ ಥ್ರಿಲ್ಲಾಗಿರುತ್ತಿದ್ದಿತು. ಥ್ರಿಲ್ಲಿಗಾಗಿ ಏನೇನೋ ಮಾಡುತ್ತಿದ್ದ ಅಂದಿನ ವಯಸ್ಸು ಈ ರೀತಿಯ ಪ್ರಾಕ್ಸಿ ಓಟು ಹಾಕುವ ಅವಕಾಶವನ್ನು ಬಿಡುವುದೇ? ಅಂದು ನಾನು "ಸತ್ತವರಿಗೆ ಸಂತಾಪ" ಎಂದು ಮತ್ತು ನಮಗೆ ಮದ್ಯವನ್ನು ಸಪ್ಲೈಸಿದವರ ಪರವಾಗಿ ಕಾಂಗ್ರೆಸ್ಸಿಗೆ ನಿಯತ್ತಾಗಿ(?) ಓಟಿಸಿದ್ದರೆ, ನನ್ನ ಸ್ನೇಹಿತ ದಶಕುಮಾರ್ ಕಾಂಗ್ರೆಸ್ ರಮ್ ಕುಡಿದು ಜನತಾ ಪರಿವಾರದ ದೇವೇಗೌಡರಿಗೆ ಓಟಿಸಿದ್ದ! ಕೇಳಿದ್ದಕ್ಕೆ "ಆ ನನ್ಮಕ್ಕಳು ರಮ್ ಕೊಟ್ರೆ ಅದನ್ನು ಸುಮ್ನೆ ಇಸ್ಕೊಂಡು ನಮಗೆ ಸರಿ ಎನಿಸಿದವರಿಗೆ ಓಟು ಹಾಕಬೇಕು" ಎಂದು ಭಾರತೀಯ ಶ್ರೀಸಾಮಾನ್ಯನನ್ನು ಅದ್ಭುತವಾಗಿ ಪ್ರತಿನಿಧಿಸಿದ್ದ!

ಇರಲಿ, ಇಂದು ಆ ರೀತಿಯ ಕತ್ತಲು ರಾತ್ರಿಗಳಿಲ್ಲ. ಚುನಾವಣಾ ಆಯೋಗ, ಈ ಚುನಾವಣಾ ವೈಭವವನ್ನು ಸಂಪೂರ್ಣ ಅಳಿಸಿಹಾಕಿದೆ. ಒಂದು ರೀತಿ ಮದುವೆಗಳು ಶ್ರಾದ್ಧಗಳಂತೆ ಕಂಡಂತೆ! ಮೇಲ್ನೋಟಕ್ಕೆ ಇದು ಎಲ್ಲಾ ಅಭ್ಯರ್ಥಿಗಳಿಗೂ ಸಮಾನ ಅವಕಾಶವನ್ನು ಕೊಟ್ಟು, ಮತದಾರರು ಯಾವುದೇ ರೀತಿಯಿಂದ ಆಮಿಷಗಳಿಗೋ, ಪೊಳ್ಳು ಭರವಸೆಗಳಿಗೋ, ಭಾಷಣವೀರರ ಮೋಡಿಗೆ ಬಲಿಯಾಗದಂತೆ ಕಾಪಾಡುತ್ತಿದೆ ಎನಿಸಿದರೂ, ಅದಕ್ಕೆ ಅನೇಕ ಪರ್ಯಾಯಗಳನ್ನು ನಮ್ಮ ರಾಜಕಾರಣಿಗಳು ಅದಾಗಲೇ ಕಂಡುಕೊಂಡಿದ್ದಾರೆ. ಈಗ ಹೆಂಡ, ಪಂಚೆ, ಸೀರೆಗಳಿಲ್ಲ. ಎಲ್ಲಾ ಕ್ಯಾಷ್. ಪ್ರತಿಯೊಂದು ಓಟಿಗೆ ಒಂದು ಸಾವಿರದಿಂದ ಮೂರು ಸಾವಿರದವರೆಗೆ ಬೆಲೆ ನಿಗದಿಯಾಗುತ್ತಿದೆ. ಹಂಚಿಕೆಗೆ ಸ್ತ್ರೀಶಕ್ತಿ ಸಂಘಗಳು, ಕನ್ನಡ ಸಂಘಗಳು, ಜಾತಿ/ಧಾರ್ಮಿಕ ಸಂಸ್ಥೆಗಳು, ಪೀಠಗಳು....ಈ ಸಂಘಟನೆಗಳು, ಆ ಸಂಘಟನೆಗಳು! ಪ್ರತಿಯೊಂದು ಸಂಘಕ್ಕೂ ಅದರ ಸದಸ್ಯರ ಲೆಕ್ಕವ್ಹಿಡಿದು ಹಣ ಹಂಚಿಕೆಯಾಗುತ್ತಿದೆ. ಅದ್ಯಾವ ಸದುದ್ದೇಶಕ್ಕೆ ಸ್ಥಾಪಿತಗೊಂಡಿದ್ದವೋ ಈ ಸಂಘ ಸಂಘಟನೆಗಳು ಇಂದು ತತ್ಕಾಲಿಕವಾಗಿ ಹಣ ಹಂಚುವ ಏಜೆಂಟರಾಗುತ್ತಿವೆ. ಬಹುಶಃ ಈ ಸಂಘಟನೆಗಳಾಗಲೇ ತಮ್ಮ ಮೂಲ ಉದ್ದೇಶಕ್ಕಿಂತ ರಾಜಕಾರಣಿಗಳ ಬಾಲಬಡುಕತನವೇ ಉತ್ತಮ ಬಿಸಿನೆಸ್/ಸೇವೆ ಎಂದು ಆಗಲೇ ಕಂಡುಕೊಂಡಿರಬೇಕು.

ಒಟ್ಟಾರೆ ಅಂದು ಹುಡುಗು ಬುದ್ಧಿಯ ನಾವುಗಳು ಥ್ರಿಲ್ಲಿಗಾಗಿ ಏನೋ ಮಾಡಿದ್ದನ್ನು ಇಂದು ಜನ ಸಂಘಟನೆಯಾಗಿ ಮಾಡುತ್ತಿದ್ದಾರೆ!

ಅದರಲ್ಲೂ ಈಗ ಸಂಘಟನೆಗಳು ಜಾತಿ, ಒಳಜಾತಿ, ಉಪಜಾತಿಗಳಿಗೆಲ್ಲಾ ಒಂದೊಂದು ಸಂಘ, ಸಂಸ್ಥೆ, ಪೀಠಗಳನ್ನು ಸ್ಥಾಪಿಸಿಕೊಂಡು ಓಟಿನ ಬೇಟೆ, ಅಧಿಕಾರ ಹಂಚಿಕೆಯಲ್ಲಿ ತೊಡಗಿವೆ. ಒಂದು ರೀತಿಯಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು!

ಮೊದಲೆಲ್ಲಾ ಜನ ತತ್ವಸಿದ್ಧಾಂತಗಳಿಗೆ ಓಟು ಹಾಕುತ್ತಿದ್ದರೆ, ಈಗ ಪ್ರತಿಯೊಂದಕ್ಕೂ ಜಾತಿಗಳೇ ಪ್ರಾಮುಖ್ಯವಾಗಿ ಜಾತಿ ಪದ್ಧತಿ ಇನ್ನೂ ಬಲವಾಗಿ ಬೇರೂರುತ್ತಿದೆಯೇನೋ ಎನಿಸುತ್ತದೆ. ಈ ಮೊದಲೆಲ್ಲಾ ನೀವು ಇಷ್ಟೊಂದು ಉಪಜಾತಿಗಳ ಹೆಸರುಗಳನ್ನು ಕೇಳಿದ್ದೆದೆಯೇ? ಒಟ್ಟಾರೆ ಯಾವುದನ್ನು ತೊಲಗಿಸಿಬೇಕೆಂದು ಭಾರತ ನಾಯಕರುಗಳು ಹೋರಾಡಿದ್ದರೋ ಅವರ ಸಂತತಿ ಅದನ್ನೇ ತ್ವರಿತವಾಗಿ ಭದ್ರವಾಗಿ, ಸ್ಥಿರವಾಗಿ ನೆಲೆಯೂರಿಸುತ್ತಿದ್ದಾರೆ. ಭ್ರಷ್ಟಾಚಾರ, ಜಾತೀಯತೆ, ಸ್ವಜನಪಕ್ಷಪಾತ ಇವುಗಳೆಲ್ಲಾ ಈಗ ಸಂಘ/ಸಂಘಟನೆಯ ರೂಪವನ್ನು ತಾಳಿ ಕತ್ತಲು ರಾತ್ರಿ ಮಾತ್ರವಿದ್ದ ಹಣ ಹಂಚಿಕೆ, ಓಲೈಕೆಗಳೆಲ್ಲಾ ದಿನನಿತ್ಯವೂ ಹಗಲಿನಲ್ಲೇ ರಾಜರೋಷವಾಗಿ ವ್ಯವಸ್ಥೆಯ ಅಂಗವಾಗಿ ನಡೆಯುವಂತಾಗಿದೆ.

ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತದೆ!
(ಇದು ಒಬ್ಬ ದಿವಂಗತ ರಾಜಕಾರಣಿಯ ಹಳೆಯ ಚುನಾವಣಾ ಉದ್ಘೋಷ! ಆದರೆ ಇದು ನಮ್ಮ ನಿಮ್ಮೆಲ್ಲರ ಹೃದಯಾಂತರಾಳದ ನಿತ್ಯ ನರಳಾಟ).

ಅಣಕ:

ಚುನಾವಣೆಯ ಈ ಬಿಸಿಯಲ್ಲಿ ನೀವುಗಳು ಖಂಡಿತವಾಗಿಯೂ "ಎಡಗೈ" ಮತ್ತು "ಬಲಗೈ" ಎಂಬ ದಲಿತ ಜಾತಿಯ ಎರಡು ಉಪಜಾತಿಗಳನ್ನು ಕೇಳಿರುತ್ತೀರಿ. ಹಾಗೆ ನೋಡಿದರೆ ಈ ಎಡಗೈ/ಬಲಗೈ ಕೇವಲ ದಲಿತರಿಗಷ್ಟೇ ಅಲ್ಲದೇ ಪ್ರಪಂಚದೆಲ್ಲಾ ಮಾನವ ಜೀವಿಗಳಿಗೂ ಅನ್ವಯಿಸುತ್ತದೆ ಎಂದರೆ ಆಶ್ಚರ್ಯವಾಗುವುದಲ್ಲವೇ?

ಪ್ರಪಂಚದೆಲ್ಲೆಡೆಯ ಜನ ಶೌಚಕ್ಕೆ ಎಡಗೈ ಬಳಸಿ "ಎಡಗೈ" ಎನಿಸಿಕೊಂಡರೆ, ಅಮೇರಿಕನ್ನರು ಬಲಗೈ ಬಳಸಿ "ಬಲಗೈ" ಪಂಗಡದವರಾಗಿದ್ದಾರೆ.

ಎಲ್ಲದಕ್ಕೂ ಅಮೇರಿಕನ್ನರನ್ನು ಕಾಪಿ ಮಾಡುವ ಭಾರತೀಯರ ಚಟ ಎಲ್ಲಾ ಓಕೆ. ಆದರೆ ಈ ವಿಷಯದಲ್ಲಿ ಇನ್ನೂ ’ಎಡಗೈ’ ಯಾಕೆ?

2 comments:

  1. ಜಾತಿಯನ್ನು ಜನರು ತಮ್ಮ ಐಡೆಂಟಿಟಿಯನ್ನಾಗಿ ಎಲ್ಲಿಯವರೆಗೆ ಭಾವಿಸುತ್ತಾರೋ ಅಲ್ಲಿಯವರೆಗೆ ನಮಗೆ ಜಾತಿ ಪದ್ಧತಿಯಿಂದ ಮುಕ್ತಿಯಿಲ್ಲ ಎಂಬುದು ನನ್ನ ಅನಿಸಿಕೆ. ಉದಾಹರಣೆಗೆ ಸ್ವತಂತ್ರ ಚಿಂತನೆ, ನಾಡಿನ ಆಗುಹೋಗುಗಳ ಮೇಲೆ ಗಮನವಿರಿಸುವ ಹವ್ಯಾಸವಿರುವ ವಿದ್ಯಾವಂತರಿಗೆ ಜಾತಿಯೆಂಬುದು ಅಂಥಾ ಪ್ರಭಾವವನ್ನು ಬೀರಲಾಗದು...
    ಅಂದಹಾಗೆ ಅಣಕ ಸಖತ್ತಾಗಿದೆ. ಈ ಎಡಗೈ ಬಲಗೈ ದಲಿತರ ಬಗ್ಗೆ ಸ್ವಲ್ಪ ತಿಳಿಸಿ...

    ReplyDelete
  2. ಅಮೆರಿಕೆಯಿಂದ ಅವಲೋಕಿಸುವವರಿಗೆ ನಮಸ್ತೆ,

    ನಿಮ್ಮ ಬ್ಲಾಗನ್ನು ಮೊದಲಿಂದ ಗಮನಿಸುತ್ತಾ ಬಂದವನು ನಾನು.
    ಸಮಕಾಲೀನ ವಿಚಾರಗಳ ಬಗ್ಗೆ ನಿಮ್ಮ ವಿಶ್ಲೇಷಣೆ ಬಹಳ ಇಷ್ಟವಾಗುತ್ತದೆ. ಬಹಳ ಮಾಹಿತಿಗಳೂ ಇರುತ್ತವೆ. ನಿಮ್ಮ ನಿರೂಪಣಾ ಶೈಲಿ ಬಹಳ ಚೆನ್ನಾಗಿದೆ. thank you.

    @ಸುಪ್ರೀತ್
    ದಲಿತರಲ್ಲಿ ಮಾದಿಗರಿಗೆ ಎಡಗೈ ಅಂತಲೂ ಹೊಲೆಯರಿಗೆ ಬಲಗೈ ಅನ್ನುತ್ತಾರಂತಲೂ ಎಲ್ಲೋ ಓದಿದ ನೆನಪು. not sure. ಬಲಗೈನವರು ಎಡಗೈನವರಿಗಿಂತ ಮೇಲಂತೆ!!

    ReplyDelete