ಕನ್ನಡ ಓರಾಟಗಾರರ "ಕೆಂಪೇಗೌಡ" ಹೆಸರಿನ ಜಾಡಿನಲ್ಲಿ...

ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೆ ಮುನ್ನ ಅದರ ಹೆಸರಿನ ಬಗ್ಗೆ ಅದಾಗಲೇ ಹೋರಾಟಗಳು ಉದ್ಘಾಟನೆಗೊಂಡಿವೆ! ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬೆಂಗಳೂರಿನ ಹೊಸ ವಿಮಾನ ನಿಲ್ದಾಣಕ್ಕೆ "ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ"ವೆಂದು ಹೆಸರಿಸದಿದ್ದರೆ ವಿಮಾನ ನಿಲ್ದಾಣವನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಕೆಯನ್ನು ಹೊರಡಿಸಿದೆ.

ಇರಲಿ, ಈಗ ಈ ಕೆಂಪೇಗೌಡ ಬಗ್ಗೆ ಕೊಂಚ ತಿಳಿದುಕೊಳ್ಳೋಣ. ಕ್ರಿ.ಶ. ೧೫೧೩ ರಿಂದ ೧೫೬೩ ಕೆಂಪೇಗೌಡ ಹುಟ್ಟಿ, ಆಳಿ ಹೋದ ಕಾಲ. ವಿಜಯನಗರದ ಸಾಮಂತನಾಗಿದ್ದ ಕೆಂಪೇಗೌಡ ಯಲಹಂಕ ಪ್ರಾಂತವನ್ನು ಆಳುತ್ತಿದ್ದು, ಕ್ರಿ.ಶ. ೧೫೩೭ ರಲ್ಲಿ ಬೆಂಗಳೂರನ್ನು ಸ್ಥಾಪಿಸಿದನು. ಮುಂದೆ ಶಿವಾಜಿಯ ತಂದೆ ಶಹಾಜಿಯು ಬೆಂಗಳೂರನ್ನು ಬಿಜಾಪುರದ ಸುಲ್ತಾನರ ಸರ್ದಾರನಾಗಿದ್ದಾಗ ವಶಪಡಿಸಿಕೊಂಡು ಬೆಂಗಳೂರು, ಬಿಜಾಪುರದ ಸುಲ್ತಾನನ ಆಡಳಿತಕ್ಕೆ ಒಳಪಡುವುದಕ್ಕೆ ಕಾರಣನಾದನು. ಕೆಂಪೇಗೌಡ ತನ್ನ ಆಡಳಿತದಲ್ಲಿ ಬೆಂಗಳೂರಿನ ನಾಲ್ಕು ದಿಕ್ಕಿಗೆ ನಾಲ್ಕು ಗಡಿ ಗೋಪುರಗಳನ್ನು ಕಟ್ಟಿಸಿ ಒಂದು ಮಣ್ಣಿನ ಕೋಟೆಯನ್ನು ಕಟ್ಟಿಸಿದ್ದನು.

ಒಟ್ಟಾರೆ ಇದು ಕೆಂಪೇಗೌಡ ಕುರಿತಾದ ಸಂಕ್ಷಿಪ್ತ ಮಾಹಿತಿ. ಈ ರೀತಿಯ ಸಾಮಂತರು, ಸರದಾರರು ಕನ್ನಡ ನಾಡಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಿಹೋಗಿದ್ದಾರೆ. ಕಲ್ಲಿನ ಕೋಟೆಗಳನ್ನು ಕಟ್ಟಿ ಹೋದ ಇನ್ನೂ ಹೆಚ್ಚಿನ ಸರದಾರ ಸಾಮಂತರುಗಳ ಹೆಸರುಗಳೇ ಇಂದು ಯಾರಿಗೂ ನೆನಪಿಲ್ಲ. ಮದಕರಿ ನಾಯಕ, ಶಿವಪ್ಪ ನಾಯಕ, ಎಚ್ಚಮ ನಾಯಕರಂತಹ ಅಗ್ರಪಂಕ್ತಿಯ ಸರದಾರರೊಂದಿಗೆ ಹೋಲಿಸಿದರೆ ಕೆಂಪೇಗೌಡರ ಕೊಡುಗೆ ಅತ್ಯಂತ ಗೌಣ. ಒಟ್ಟಾರೆ ಕೆಂಪೇಗೌಡ ಅಂದಿನ ಕಾಲದ ಯಾವುದೇ ಸಣ್ಣ ಸಾಮಂತನಿಗಿಂತ ಬೇರೆಯಾಗಿ ನಿಲ್ಲುವಂತೆ ಕಾಣಿಸುವ ಯಾವುದೇ ಚಾರಿತ್ರ್ಯಾರ್ಹ ಕುರುಹುಗಳಾಗಲೀ, ಐತಿಹಾಸಿಕ ದಾಖಲೆಗಳಾಗಲೀ ಇಲ್ಲ. ಈ ಕೆಂಪೇಗೌಡ ಕನ್ನಡ ನಾಡು ನುಡಿಗಾಗಿಯಾಗಲೀ, ಒಗ್ಗಟ್ಟಿಗಾಗಲೀ ಹೋರಾಡಿದ್ದೂ ಇಲ್ಲ ಮತ್ತು ಆ ಅಧಿಕಾರವೂ ಇರಲಿಲ್ಲ. ಏಕೆಂದರೆ ಅವನೊಬ್ಬ ವಿಜಯನಗರ ಸಾಮ್ರಾಜ್ಯದ ಸಾಮಂತ ಮಾತ್ರ! ಅರಸರ ಅಡಿಯಾಳಾಗಿ ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ಅಧಿಕಾರವನ್ನು ನಡೆಸುವುದಷ್ಟೇ ಅಂದಿನ ಸಾಮಂತರ ಕರ್ತವ್ಯವಾಗಿದ್ದಿತು. ಒಟ್ಟಾರೆ ಕೆಂಪೇಗೌಡರು ಕನ್ನಡ ನಾಡು ನುಡಿಗಳ ದೆಸೆಯಿಂದ ಯಾವುದೇ ರೀತಿಯಲ್ಲಿ ಐತಿಹಾಸಿಕ ವ್ಯಕ್ತಿಯಲ್ಲ.

ಹಾಗೆ ಕನ್ನಡ ನಾಡು ನುಡಿಗಾಗಿ ಹೋರಾಡಿದ ಅಮೋಘವರ್ಷ, ಮಯೂರವರ್ಮ, ಹೊಯ್ಸಳರು, ಚಾಲುಕ್ಯರು, ವಿಜಯನಗರದ ಅರಸರು ಇನ್ನು ಮುಂತಾದ ಅನೇಕ ಸಮಗ್ರ ಕರ್ನಾಟಕಕ್ಕೆ ಹೋರಾಡಿದ ನೂರು ಅರಸರ, ಸಾವಿರಾರು ಸಾಮಂತರ ಸಮೀಪಕ್ಕೆ ಕೂಡ ಕೆಂಪೇಗೌಡ ಹೆಸರು ಸಂದುವುದಿಲ್ಲ. ಏಕೆಂದರೆ ವಿಜಯನಗರ ಸಾಮ್ರಾಜ್ಯದ ನೂರಾರು ಸಾಮಂತರಲ್ಲಿ ಕೆಂಪೇಗೌಡನೂ ಕೂಡ ಒಬ್ಬ ಸಾಮಾನ್ಯ ಸಾಮಂತನಾಗಿದ್ದನು.

ಇನ್ನು ಬೆಂಗಳೂರು ವಿಮಾನ ನಿಲ್ದಾಣ ಕೇವಲ ಬೆಂಗಳೂರಿಗಷ್ಟೇ ಸೀಮಿತವಲ್ಲ. ಇದು ಇಡೀ ಕರ್ನಾಟಕದ ಆಸ್ತಿ. ಏಕೆಂದರೆ ಎಂತಹ ಮುಂದುವರಿದ ರಾಷ್ಟ್ರಗಳಲ್ಲಿಯೂ "ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ"ಗಳು ರಾಜ್ಯಕೊಂದರಂತೆಯೇ ಇರುತ್ತವೆ. ಪ್ರತಿ ರಾಜ್ಯದಲ್ಲಿ ಅನೇಕ ವಿಮಾನ ನಿಲ್ದಾಣಗಳಿದ್ದರೂ ಅವೆಲ್ಲಾ ಅಂತರ್ರಾಷ್ಟ್ರೀಯವಾಗಿರುವುದಿಲ್ಲವೆಂಬುದು ಗಮನಿಸಬೇಕಾದ ಅಂಶ. ಹಾಗಾಗಿಯೇ ಈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ರಾಜ್ಯಮಟ್ಟದ / ರಾಷ್ಟ್ರಮಟ್ಟದ ಚಾರಿತ್ರ್ಯಾರ್ಹ ವ್ಯಕ್ತಿಗಳ ಹೆಸರುಗಳನ್ನಿಟ್ಟಿರುತ್ತಾರೆ.

ವಿಷಯ ಹೀಗಿರುವಾಗ ಚಕ್ರವರ್ತಿ, ಅರಸರಾಗಿ ಮೆರೆದು, ಕನ್ನಡ ನಾಡು ನುಡಿಗಾಗಿ ಅಪಾರ ಕೊಡುಗೆಯನ್ನು ನೀಡಿರುವ ಚಾರಿತ್ರಿಕ/ಐತಿಹಾಸಿಕ ಅಮೋಘವರ್ಷ, ಪುಲಕೇಶಿ, ಹೊಯ್ಶಳ, ಮಯೂರವರ್ಮ, ವಿಜಯನಗರದ ಅರಸರುಗಳು ಇನ್ನು ಮುಂತಾದವರ ಹೆಸರುಗಳೆಲ್ಲಾ ಕೇವಲ ರಸ್ತೆ, ಬಡಾವಣೆ, ವೃತ್ತಗಳಿಗೆ ಸೀಮಿತವಾಗಿರುವಾಗ, ಒಬ್ಬ ಸಾಮಂತನಗಿದ್ದವನ ಹೆಸರನ್ನು ಇಡೀ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ಕುರುಹಾಗಿರುವ ವಿಮಾನ ನಿಲ್ದಾಣಕ್ಕಿಡುವುದು ಸಮಗ್ರ ಕರ್ನಾಟಕದ ಪರಿಕಲ್ಪನೆಯ ಅಪಹಾಸ್ಯವೇ ಸರಿ.

ಮೊದಲಿನಿಂದಲೂ ಬೆಂಗಳೂರೇ ಕರ್ನಾಟಕ, ಬೆಂಗಳೂರು ಶೈಲಿಯ ಕನ್ನಡವೇ ಸ್ವಚ್ಚ ಕನ್ನಡ, ಬೆಂಗಳೂರಿನಲ್ಲಿ ಕನ್ನಡಕ್ಕೆ ಕುಂದುಂಟಾದರೆ ಇಡೀ ಕನ್ನಡಕ್ಕೇ ಕುಂದುಂಟಾಯಿತೆಂದು ಬಗೆಯುವ, ಬೆಂಗಳೂರಿಗೆ ತೊಂದರೆಯಾದರೆ ಅದು ಇಡೀ ಕರ್ನಾಟಕದ ತೊಂದರೆ ಎಂದು ಬೊಬ್ಬಿಡುವ, ಒಟ್ಟಾರೆ "ಘನ ಬೆಂಗಳೂರೇ" ಕರ್ನಾಟಕವೆಂಬ ಸಿದ್ದಾಂತವನ್ನು ಹೊಂದಿರುವ ಈ ಓರಾಟಗಾರರ ಅಲ್ಪದೃಷ್ಟಿಯ "ಹುಗ್ರ ಓರಾಟ"ವೇ ಇಂದಿನ ಬೆಂಗಳೂರಿಗೆ ಕಾರಣವೆನಿಸುತ್ತದೆ.

ಬೆಂಗಳೂರಿನಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡಕ್ಕೆ ಮಾನ್ಯತೆ, ಕನ್ನಡಕ್ಕೆ ಪ್ರಾಧಾನ್ಯತೆ ಎಂದೆಲ್ಲಾ ಇಂದು ಹೋರಾಡುತ್ತಿರುವ ಈ ಬೆಂಗಳೂರು ಕೇಂದ್ರಿತ ಓರಾಟಗಾರರು ತಮ್ಮ ಹೋರಾಟದಿಂದ ಕನ್ನಡ ಸೇವೆ ಮಾಡುತ್ತಿದ್ದಾರೆನ್ನುವಿರಾ? ಖಂಡಿತವಾಗಿಯೂ ಅಲ್ಲವೆನಿಸುತ್ತದೆ. ಅವರ ಈ ಹೋರಾಟ ತತ್ವನಿಷ್ಟವಾಗಿದ್ದರೆ ಅದು ಅವರುಗಳು, ತಮ್ಮ ಬೆಂಗಳೂರಿನಲ್ಲಿ ಕನ್ನಡ ಈ ಹೀನಾಯ ಸ್ಥಿತಿಗೆ ಬರಲು ಒಂದೊಮ್ಮೆ ತಾವೇ ಕಾರಣಕರ್ತರಾಗಿದ್ದಕ್ಕಾಗಿ ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ್ತವೆನಿಸುತ್ತದೆ. ಆ ಪ್ರಾಯಶ್ಚಿತ್ತದ ಭರದಲ್ಲಿ ಕರ್ನಾಟಕದ ಪೂರ್ವಾತಿಹಾಸವನ್ನು ಅರಿಯದೆ ಕೇವಲ ಒಂದು ವರ್ಗಕ್ಕೆ, ಒಂದು ಹೋಬಳಿಗೆ ಸೀಮಿತವೆನಿಸುವಂತಹ ಕೆಂಪೇಗೌಡನ ಹೆಸರನ್ನು ಮೆರೆಸಿ, ಕನ್ನಡ/ಕರ್ನಾಟಕಕ್ಕೆ ಇನ್ನಷ್ಟು ಚ್ಯುತಿ ತರುತ್ತಿದ್ದಾರೆ.

ಬಹುಶಃ ಬೆಂಗಳೂರಿಗೆ "ಬೆಂದಗಾಳೂರು" ಎಂದು ಹೆಸರಿಸಿಸುವ ಮೂಲಕ ಕೆಂಪೇಗೌಡ, ಬೆಂಗಳೂರಿನಲ್ಲಿನ ಇಂದಿನ ದಿಢೀರ್‍ ದೋಸೆಗಳು; ಇನ್ಸ್ಟಂಟ್ ಮಸಾಲೆಗಳು; ತ್ವರಿತಗತಿಯ ತಿಂಡಿಗಳ ದರ್ಶಿನಿಗಳಿಂದ ಹಿಡಿದು ಇನ್ಸ್ಟಂಟ್ ಮದುವೆಗಳು; ಇನ್ಸ್ಟಂಟ್ ಹೋರಾಟಗಳು; ಸದಾ ರೆಡಿಯಾಗಿರುವ ನಾಯಕರುಗಳು....ಒಟ್ಟಾರೆಯ ಇನ್ಸ್ಟಂಟ್ ಸಂಸ್ಕೃತಿಗೆ ಕಾರಣೀಭೂತನಾದನೆಂದು ಈ ಇನ್ಸ್ಟಂಟ್ ಹೋರಾಟಗಾರರು ಸಂಶೋಧಿಸಿಕೊಂಡಿದ್ದಾರೇನೋ?

ಏಕೆಂದರೆ ಇದರ ಹೆಸರೇ "ಬೆಂದಗಾಳೂರು" ಅರ್ಥಾತ್ ಇನ್ಸ್ಟಂಟ್ ರೆಡಿ ಇರುವ ಊರು. ಹಾಗಾಗಿಯೇ ಇಲ್ಲಿ ಎಲ್ಲಾ ಇನ್ಸ್ಟಂಟ್. ಕಟ್ಟಿ ರೆಡಿ ಇರುವ ಏರ್ ಪೋರ್ಟಿಗೆ ಇನ್ಸ್ಟಂಟ್ ಕೆಂಪೇಗೌಡ ನಾಮಧಾರಣೆ!!!

ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಅವಕಾಶವಾದಿಗಳಿಗೆ ಸಿಕ್ಕಿರುವ ಒಂದು ಸುವರ್ಣಾವಕಾಶ. ಈ ಸುವರ್ಣಾವಕಾಶದಲ್ಲಿ ಭೂಮಿಯನ್ನು ಹೆಚ್ಚಿನ ಬೆಲೆಗೆ ಮಾರಿದ ರೈತ, ವಿಮಾನ ನಿಲ್ದಾಣವನ್ನು ಕಟ್ಟಿ ನಿರ್ವಹಿಸುವ ಸಂಸ್ಥೆ, ರಾಜಕಾರಣಿಗಳು, ಭೂ ಮಾಫಿಯಾ....ಗಳಂತೆಯೇ ಈ ಹೋರಾಟಗಾರರು ಕೂಡ. ಈ ಹೋರಾಟದ ಮುಂಚೂಣಿಯಲ್ಲಿರುವವರಿಗೆ ಕನ್ನಡವೂ ಬೇಕಿಲ್ಲ, ಕೆಂಪೇಗೌಡನೂ ಬೇಕಿಲ್ಲ, ಬಡ ಬೋರೇಗೌಡನೂ ಲೆಕ್ಕಕ್ಕಿಲ್ಲ. ಈ ನಾಯಕರುಗಳಿಗೆ ಬೇಕಿರುವುದು ಸಿಕ್ಕಿರುವ ಈ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡು ಮತ್ತೊಬ್ಬ ಒಕ್ಕಲಿಗ ನಾಯಕನೂ, ಕನ್ನಡ ಕಂಠೀರವನೂ ಉದಕವಾಗುವುದು. ಹಾಗಾಗಿಯೇ ಇಂದು ಇವರು ನಮ್ಮ ನಿಮ್ಮೆಲ್ಲರ ಭಾಷಾ ಅಭಿಮಾನದ ಭಾವನೆಗಳನ್ನು ಶೋಷಿಸುತ್ತ, ಆ ಭಾವನೆಗಳನ್ನು ಯಶಸ್ವಿಯಾಗಿ ಬಿಕರಿಸುತ್ತಾ ತಮ್ಮ ನಾಯಕತ್ವದ ಬೇಳೆಯನ್ನು ಬೆಂದಗಾಳೂರಿನಲ್ಲಿ ಬೇಯಿಸಿಕೊಳ್ಳುತ್ತಿದ್ದಾರೆ.

ಈ ರೀತಿಯ ಹುನ್ನಾರಗಳಿರದಿದ್ದರೆ, ಇವರ ಹೋರಾಟ ತತ್ವನಿಷ್ಟ್ವವಾಗಿದ್ದರೆ ಕರವೇ ಎರಡು ಬಣಗಳಾಗುತ್ತಿತ್ತೇ? ಇಲ್ಲಿ ಕರವೇಯ ಒಂದು ಬಣ ತಮ್ಮ "ಸ್ವಜಾತಿ" ಪಕ್ಷಪಾತವನ್ನು ಮೆರೆಸುವ ಪ್ರಯತ್ನವನ್ನು ಮಾಡುತ್ತಿದೆಯೇ? ಹಾಗೆ ಸ್ವಜಾತೀ ಪಕ್ಷಪಾತವನ್ನು ಮಾಡಲೇಬೇಕಿದ್ದರೆ, ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಿಯಾಗಿದ್ದ, ಕನ್ನಡಿಗರ (ಕು)ಖ್ಯಾತಿಯನ್ನು ಭಾರತದಾದ್ಯಂತ ಮೆರೆಸಿದ ದೇವೇಗೌಡರ ಹೆಸರು, ಬೆಂಗಳೂರಿನ ಒಬ್ಬ ಮಾಜೀ ಮೇಯರ್ ಆಗಿದ್ದ ಕೆಂಪೇಗೌಡಗಿಂತ ಅತ್ಯಂತ ಹೆಚ್ಚು ಸೂಕ್ತವೆನಿಸುತ್ತದೆ.

ಭಾರತ ಅದ್ಯಾವ ದಿಕ್ಕಿನಲ್ಲಿ ಮುನ್ನಡೆಯುತ್ತಿದೆಯೋ ಅರ್ಥವಾಗುತ್ತಿಲ್ಲ. ಜಾತಿಗಳು ಇಂದು ಹೆಚ್ಚು ಹೆಚ್ಚು ಪ್ರಬಲವಾಗಿ ಪ್ರಜಾಪ್ರಭುತ್ವದಲ್ಲಿ ಬೇರೂರುತ್ತಿವೆ. ಯಾವ ಪ್ರಜಾಪ್ರಭುತ್ವದಿಂದ ಜಾತಿಗಳನ್ನು ಕೇವಲ ಜೀವನಶೈಲಿಗಳನ್ನಾಗಿ ಸೀಮಿತಗೊಳಿಸಬೇಕಾಗಿದ್ದಿತೋ ಅದೇ ಪ್ರಜಾಪ್ರಭುತ್ವ, ಜಾತಿಗಳನ್ನು ಪೋಷಿಸಿ ಹೆಮ್ಮರಗಳನ್ನಾಗಿಸಿದೆ. ಒಂದೆಡೆ ಹೆಮ್ಮರಗಳೆಲ್ಲಾ ನಾಶವಾಗಿ ಪರಿಸರ ವಿನಾಶದಂಚಿನಲ್ಲಿದ್ದರೆ, ಈ ಜಾತೀ ಪರಿಸರ ಅತ್ಯಂತ ಪ್ರಬಲವಾಗಿ ವಿಕಸಿಸುತ್ತಿದೆ.

ಕೆಂಪೇಗೌಡನೇನಾದರೂ ಇಂದು ಬದುಕಿದ್ದರೆ, ತನ್ನನ್ನು ಪಾಲಿಸಿ ಪೋಷಿಸಿದ ಅರಸು, ಚಕ್ರವರ್ತಿಗಳಿಗೆ ದೊರಕದ ಗೌರವ ತನಗೆ ತನ್ನ ಜಾತಿ ಪ್ರತಿಭೆಯಿಂದ ಈ ಓರಾಟಗಾರರು ಕೊಡಲು ಹೊರಟಿರುವುದನ್ನು ಕಂಡು ಖಡ್ಗ ಹಿರಿದು ಓರಾಟಗಾರರ ಧೂಳು ಕೊಡವುತ್ತಿದ್ದನೋ ಅಥವಾ ಇದು ತನ್ನ ಜನ ತನಗೆ ಮಾಡುತ್ತಿರುವ ಅವಮಾನವೆಂದು ಆತ್ಮಹತ್ಯೆಗೆ ಮುಂದಾಗುತ್ತಿದ್ದನೋ!?

ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿ ಅರಿಯದ ಅನ್ಯಭಾಷಿಗ ಬೆಂಗಳೂರಿಗರಿಂದುಂಟಾಗುವ ಅಪಾಯಕ್ಕಿಂತ, ಸಮಗ್ರ ಕರ್ನಾಟಕದ ಪರಿಕಲ್ಪನೆಯಿಲ್ಲದ ಅಲ್ಪಜ್ಞಾನೀ ಓರಾಟಗಾರರ ಹೋರಾಟ ಕನ್ನಡಕ್ಕೆ ಅತ್ಯಂತ ಅಪಾಯಕಾರಿಯೆನಿಸುತ್ತದೆ. ಅನ್ಯಭಾಷಿಗರು ತಮ್ಮದೇ ದ್ವೀಪಗಳನ್ನು "ಬೆಂಗಳೂರಿನಲ್ಲಷ್ಟೇ" ಸೃಷ್ಟಿಸಿಕೊಂಡರೆ, ನಮ್ಮವರೇ ಆದ ಓರಾಟಗಾರರು ನಮ್ಮ ನಮ್ಮಲ್ಲೇ "ರಾಜ್ಯಾದ್ಯಂತ" ದ್ವೀಪಗಳನ್ನು ಸೃಷ್ಟಿಸುತ್ತಿದ್ದಾರೆ. "ದಕ್ಷಿಣಪಥೇಶ್ವರ"ನೆಂದು ಇಡೀ ವಿಶಾಲ ದಕ್ಷಿಣ ಭಾರತವನ್ನೇ ಆಳಿದ ಪುಲಕೇಶಿ ಇಂದು "ಉತ್ತರ ಕರ್ನಾಟಕ"ದವನಾಗಿ ಕೇವಲ ಬಾದಾಮಿಗೆ ಸೀಮಿತಗೊಂಡಿದ್ದರೆ, ಸಮಾನತೆಯ ಹರಿಕಾರ ಬಸವಣ್ಣ ವೀರಶೈವರ ಅದರಲ್ಲೂ "ವಿರಕ್ತ" ಪಂಥಿಗೆ ಮಾತ್ರ ಸೀಮಿತನಾಗಿದ್ದಾನೆ. ಹಾಗೆಯೇ ಕೃಷ್ಣದೇವರಾಯ, ಹೊಯ್ಸಳ, ವೀರರಾಜೇಂದ್ರ, ಚೆನ್ನಮ್ಮ, ಹೊನ್ನಮ್ಮ.....ಮುಂತಾದ ಸೀಮಾತೀತರೆಲ್ಲಾ ಇಂದು ಅತ್ಯಂತ ಸೀಮಿತ.

ಈಗಾಗಲೇ "ನಾಡ ಪ್ರಭು" ಕೆಂಪೇಗೌಡ ಎನ್ನುತ್ತಿರುವ ಈ ಓಲೈಕೆ ಹೋರಾಟಗಾರರು ಮುಂದೆ "ಕನ್ನಡ ನಾಡ ಪ್ರಭು" ಕೆಂಪೇಗೌಡರು ಎಂದು ಇತಿಹಾಸವನ್ನು ತಿರುಚುವ ಸಾಹಸಕ್ಕೆ ಕೂಡ ಕೈ ಹಾಕುವರೇನೋ? ಯಾರಾದರೂ ಸೊಲ್ಲೆತ್ತಿದರೆ ಇದ್ದದ್ದೇ ಹೊಡಿಮಗಾ, ಕಡಿಮಗಾ ಬಿಡಬೇಡ ಅವ್ನ, ಮಾಡುಮಗಾ, ಮಾಡುಮಗಾ ಕೈಮಾ ಅವ್ನ... ಈ ರೀತಿಯ ಕೆಟ್ಟ ರಾಜಕಾರಣದ ದೆಸೆಯಿಂದಾಗಿಯೇ ಪಾಟೀಲ್ ಪುಟ್ಟಪ್ಪ ಬೇರೆ ರಾಜ್ಯವನ್ನೂ, ಕೊಡವರು ತಮ್ಮದೇ ರಾಜ್ಯವನ್ನೂ, ಕರಾವಳಿಯವರು ಕರಾವಳಿ ರಾಜ್ಯ(?)ವನ್ನೂ ಕೇಳುತ್ತಿದ್ದಾರೆ ಇಲ್ಲಾ ಕೇಳುವ ಹಾದಿಯಲ್ಲಿದ್ದಾರೆ. ಅಷ್ಟೇ ಅಲ್ಲಾ ಬೆಳಗಾವಿಯ ಕನ್ನಡಿಗರು ಕೂಡಾ ತಮಗೆ ಮಹಾರಾಷ್ಟ್ರವೇ ಸರಿಯೆಂದುಕೊಳ್ಳುತ್ತಿದ್ದಾರೆ.

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರೆಂಬ ಪಂಚಿಂಗ್ ಲೈನಿನ, ಕರ್ನಾಟಕವೆಂದರೆ ಬರೀ ಬೆಂಗಳೂರೆಂಬ ಭ್ರಾಮಕದಲ್ಲಿ ಮುಳುಗಿರುವ ಈ ಓರಾಟಗಾರರಿಂದ ಕನ್ನಡಕ್ಕೆ ಅದೇನು ಗಂಡಾಂತರ ಕಾದಿದೆಯೋ?

ಈ ಓಲೈಕೆಯ ಪ್ರಭಾವ ನಮ್ಮಗಳ ಮೇಲೆ ಅದೆಷ್ಟು ಗಾಢವಾಗಿದೆಯೆಂದರೆ, ಈ ಲೇಖನವನ್ನು ಓದುತ್ತಾ, ಓದುತ್ತಾ ವಿದ್ಯಾವಂತರಾದ ನೀವುಗಳೂ ಕೂಡಾ "ಈ ರವಿ ಹಂಜ್ ಬಹುಶಃ ಬ್ರಾಹ್ಮಣನೋ, ಲಿಂಗಾಯ್ತರವನೋ ಇರಬೇಕು. ಅದಕ್ಕೆ ಕೆಂಪೇಗೌಡನ ಬಗ್ಗೆ ಹೀಗೆ ಬರೆದಿದ್ದಾನೆ!?" ಎಂದು ನನ್ನ ಇತಿಹಾಸದಲ್ಲಿ ಕುತೂಹಲಿಗಳಾಗುತ್ತಾ ಕರ್ನಾಟಕದ ಐತಿಹಾಸಿಕ ಅಂಶಗಳನ್ನು ಮರೆತೇಬಿಡುವಿರಿ. ಇದು "ಭಾರತ ಪ್ರಜಾಪ್ರಭುತ್ವ"ದ ದುರಂತ ವಿಪರ್ಯಾಸ!

ಅಣಕ:

ಕ್ರಿ.ಶ. ೨೦೨೫ ರಲ್ಲಿ ಒಂದು ಕನ್ನಡ ಕುಟುಂಬದ ತಂದೆ ಮಗುವಿನ ಸಂಭಾಷಣೆ ಹೀಗಿರುತ್ತದೆ.

ಆಗಷ್ಟೇ ಪೋಷಕರ ಜತೆ ಕರ್ನಾಟಕ ಪ್ರವಾಸ ಮಾಡಿ ಹಿಂದಿರುಗಿದ್ದ ಮಗು, "ಡ್ಯಾಡೀ, ಇಲ್ಲಿನ ಕಿಂಗ್ಸ್ ಅಂತಹ ಹಂಪಿ, ಗೋಲಗುಮ್ಮಟ, ಬಾದಾಮಿ ಗುಹೆಗಳು, ಹಳೇಬೀಡು-ಬೇಲೂರು ಟೆಂಪಲ್ ಮಾನ್ಯುಮೆಂಟ್ಸ್, ಚಿತ್ರದುರ್ಗದಂತಹ ಕಲ್ಲಿನ ಫೋರ್ಟ್ ಗಳನ್ನು ಕಟ್ಟಿಸಿದರೆ, ಕೆಂಪೇಗೌಡ ಏಕೆ ಕೇವಲ ನಾಲ್ಕು ಗೋಪುರ ಕಟ್ಟಿಸಿದ್ದಾನೆ?" ಎಂದು ಪ್ರಶ್ನಿಸಿತು.

"ಸನ್, ಕೆಂಪೇಗೌಡ ವಾಸ್ ಅ ಬಿಗ್ ಎಂಪರರ್. ಅವನಿಗೆ "ನಾಡ ಪ್ರಭು" ಅಂತಾರೆ ಗೊತ್ತ? ಅವನು ತನ್ನೆಲ್ಲಾ ಹಣವನ್ನು ತನ್ನ ಸಾಮಂತ/ಸರದಾರರಾಗಿದ್ದ ಈ ಸಿಲ್ಲೀ ಹಂಪಿ, ಬಾದಾಮಿ, ದುರ್ಗ ರಾಜರುಗಳಿಗೆ ಇವುಗಳನ್ನೆಲ್ಲಾ ಕಟ್ಟಿಸಲು ಕೊಟ್ಟುದುದರಿಂದ ಅವನು ಕೇವಲ ನಾಲ್ಕು ಗೋಪುರಗಳನ್ನು ಕಟ್ಟಿಸುವಂತಾಯಿತು. ಬೈ ದ ವೇ, ಯು ವಿಲ್ ಬಿ ಲರ್ನಿಂಗ್ ಇಟ್ ಇನ್ ಯುವರ್ ಸಿಕ್ಸ್ತ್ ಗ್ರೇಡ್ ಹಿಸ್ಟರಿ" ಎಂದು ತಂದೆ ಉತ್ತರಿಸಿದನು.

ಭಾರತ ಪ್ರಜಾಪ್ರಭುತ್ವದ ಅವಿರತ ಓಲೈಕೆಯ ದೆಸೆಯಿಂದಾಗಿ ಆ ತಂದೆಯಾಗಲೇ ತನ್ನ ಶಾಲಾ ಇತಿಹಾಸ ಪಠ್ಯದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಸ್ ಚಂದ್ರ ಬೋಸರನ್ನು ಉಗ್ರಗಾಮಿಗಳೆಂದು ಓದುತ್ತಾ ಬೆಳೆದಿದ್ದನು!

19 comments:

  1. FYI

    http://thatskannada.oneindia.in/news/2008/05/24/narayagowda-vents-ire-on-paper-reports.html

    :-)

    ReplyDelete
  2. ಬಹಳ ಒಳ್ಳೆಯ ವಿಮರ್ಶೆ. ಜಾತಿಯ ಹೆಸರಿನಲ್ಲಿ ಎಂತಹ ಇತಿಹಾಸವನ್ನಾಗಲೀ ತಲೆಕೆಳಗು ಮಾಡಬಹುದೆನ್ನುವುದಕ್ಕೆ ಇದೊಂದು ನಿದರ್ಶನ ಹಾಗೂ ವಿಪರ್ಯಾಸ ಕೂಡ:-(

    ReplyDelete
  3. america dalli kutu talege tukku hiDidide.. pathetic write up.

    nammuru belagavi ge banni,, 18 varshada mele kannada davaru obbaru mayor aagoke KRV yeshtu hard work maadide antha gottagutte..

    allello kutu tammanna taave buddi jivi anno nimagu, ille tale kettora haage aaDo kavita lankeshu, anant murthy gu jaasti difference illa.

    ReplyDelete
  4. ಅಮೇರಿಕಾದಲ್ಲಿ ಕೂತುಕೊಂಡು ಅವಲೋಕಿಸಿದರೆ ಹೀಗೆ ಆಗುವುದು, ವಸ್ತು ಸ್ಥಿತಿ ಗೊತ್ತಿಲ್ಲದೆ ಸುಮ್ಮನೆ ಲೇವಡಿ ಮಾಡಬೇಕು ಅಂತ ಬರೆದರೆ ಎನು ಪ್ರಯೋಜನ.
    ಸ್ವಾಮಿ, ನೀವು ಬೆಚ್ಚಗೆ ಪಾಶ್ಚಿಮಾತ್ಯ ದೇಶದ ಗುಲಾಮರಾಗಿ ಕೈ ತುಂಬಾ ಸಂಪಾದಿಸುತ್ತ, ಸೊಷಿಯಲ್ ಲೈಫ್ ಇಲ್ಲದೇ ಕಾಲ ನೂಕುತ್ತ ಕರ್ನಾಟಕದ ಜನರ ಬಗ್ಗೆ ಕಾಲೇಳುವುದೇ ದೊಡ್ಡ ಕೆಲ್ಸ ಅಂತ ಭಾವಿಸಿದ ಹಾಗೆ ಇದೆ, ಅದಕ್ಕೆ ನೋಡಿ ನಿಮಗೆ ಕ.ರಾ.ವೇ ಓರಾಟಗಾರರು ಅನಿಸೋದು, ಕನ್ನಡಿಗರಿಗೆ ಉದ್ಯೋಗ ಕೊಡಬೇಕು ಅನ್ನುವುದು ನಿಮಗೆ ಮಹತ್ವ ಅನಿಸೊಲ್ಲ.
    ಇವತ್ತಿಗೆ ಕರ್ನಾಟಕದಲ್ಲಿ ಎಂ.ಇ.ಎಸ್ ಮತ್ತು ಇತರ ಕನ್ನಡ ದ್ರೋಹಿಗಳ ಸೊಕ್ಕು ಅಡಗಿಸಿದ್ದು ಇದೇ ಜನ. ಕಾವೇರಿ,ಚಿತ್ರಾವತಿ, ಕಳಸಾ-ಬಂಡೂರ ಬಗ್ಗೆ ಹೋರಾಟ ಮಾಡಿದ್ದು ಇದೇ ಜನ. ನಯಾಗರ ನೀರು ಕುಡಿಯುವ ಜನಕ್ಕೆ ನಮ್ಮ ಉತ್ತರ ಕರ್ನಾಟಕದ ಮಂದಿಯ ಕಷ್ಟ ಎಲ್ಲಿ ಅರಿಯಬೇಕು ಬಿಡಿ.
    ಇಲ್ಲಿ ಎದ್ದು ಕಾಣುತ್ತ ಇರುವುದು ಹೆಸರನ್ನು ನೆಪ ಮಾಡಿಕೊಂಡು ಸುಮ್ಮನೆ ನಿಮ್ಮ ಬಾಯಿ ಚಪಲವನ್ನು ತೀರಿಸಿಕೊಂಡಿದ್ದೀರಾ ಅಷ್ಟೇ... ಇಷ್ಟು ಮಾತನಾಡುವ ಬದಲು ಇಲ್ಲಿಗೆ ಬಂದು ಕೆಲ್ಸ ಮಾಡಿ, ಸುಮ್ಮನೆ ಮಾತಾನಾಡುವದಕ್ಕೆ ೧೦೦೦ ಜನ ಇದ್ದಾರೆ, ನೀವು ೧೦೦೧ ಆಗಬೇಡಿ ...
    ನಿಮ್ಮ
    ಮಹಂತೇಶ್

    ReplyDelete
  5. Muni here...

    Whats wrong in kempegowda name ?
    Does it just symbolizes Vokkaliga caste or entire bengaluru ?

    For your info, we are taking about naming a Airport of Bengaluru not some Timbaktu. Though he was a samantha, he ruled Bengaluru and scope of his name is more appropriate for tht instance.
    Chandrashekar Azad, Bhagath singh names which you recommended are no way related Karnataka. Please dont mix your hindu fantics ideas.

    ReplyDelete
  6. ಸ್ವಾಮಿ ಅಮೇರಿಕ ನಲ್ಲಿ ಕೂತು ಬ್ಲಾಗ್ ಬರೆಯೊದು ತುಂಬ ಸುಲಭದ ಕೆಲಸ, ಕನ್ನಡ-ಕರ್ನಾಟಕ-ಕನ್ನಡಿಗನ ಬಗ್ಗೆ ಅಷ್ಹ್ಟು ಆಸಕ್ತಿ ಇದ್ರೆ ಕರ್ನಾಟಕಕ್ಕೆ ಬಂದು ಕನ್ನಡ ಹೋರಾಟನ ಮಾಡಿ ಅದುನ್ನ ಬಿಟ್ಟು ಎಲ್ಲೋ ಕೂತು ಕಾಲೆಳೆಯೋ ಕೆಲ್ಸ ಮಾಡೊದನ್ನ ನಿಲ್ಲಿಸಿ. ಕರವೇ ನವರು ಹೊರಾಟ ಮಾಡ್ತಾಯಿರೋದು ಬರಿ ಹೆಸರನ್ನು ಇಡಬೇಕು ಅಂತ ಅಲ್ಲ ಅವರು ಯಾವುದಕ್ಕಾಗಿ ಹೋರಾಟ ಮಾಡ್ತಿದ್ದಾರೆ ಅಂತ ಸಂಪೂರ್ಣವಾಗಿ ತಿಳಿದು ಆಮೇಲೆ ಬರಿರಿ.
    ಕರವೇಯವರು ಬಿ.ಎ.ಐ.ಎಲ್ ಗೆ ಕೊಟ್ಟ ಮನವಿ ಪತ್ರ ಮತ್ತು ಅದನ್ನ ಸ್ವೀಕರಿಸಿದ ಅಲ್ಲಿನ ಅಧಿಕಾರಿಯ ಸಹಿ ಕೆಳಗಿನ ಕೊಂಡಿನಲ್ಲಿ ಇದೆ ಒಮ್ಮೆ ಅದುನ್ನ ನೋಡಿ

    http://www.karnatakarakshanavedike.org/modes/view/70/vimaana-nildaana_manavi-patra.html

    ಸುಮ್ನೆ ಗೊತ್ತಿಲ್ಲದೇ ಏನೇನೋ ಬರೆದು ಜನರ ದಾರಿ ತಪ್ಪಿಸಬೇಡಿ

    ReplyDelete
  7. ರವಿಯವರೇ,



    ತುಂಬಾ ಒಳ್ಳೆಯ ಲೇಖನ. ಈ ಟೀಕಾಕಾರರ ಟೀಕೆಗಳಿಗೆ ಧೃತಿಗೆಡಬೇಡಿ. ಜಾತೀಯತೆಯ ಅಂಧತೆಯಲ್ಲಿ ಮುಳುಗಿರುವ ಇವರಿಗೆ -ಮಧ್ಯ ಕರ್ನಾಟಕದ ದಾವಣಗೆರೆಯೋ/ಚಿತ್ರದುರ್ಗವೋ ರಾಜಧಾನಿಯಾಗಿಸಬೇಕೆಂಬ ಕನ್ನಡಿಗರ ಅಪೇಕ್ಷೆಯನ್ನು ತಿರಸ್ಕರಿಸಿ ಏಕಪಕ್ಷೀಯವಾಗಿ ಬೆಂಗಳೂರನ್ನು ರಾಜಧಾನಿಯಾಗಿ ಘೋಷಿಸಿದ ಕೆಂಗಲ್ ಹನುಮಂತಯ್ಯ, ಹುಬ್ಬಳ್ಳಿಗೆ ಬರಲಿದ್ದ ರೈಲ್ವೇ ನೈರುತ್ಯ ವಲಯಕ್ಕೆ ತೊಡರುಗಾಲು ಹಾಕಿದ್ದ ದೇವೇಗೌಡ, ಬೆಂಗಳೂರಿನಾಚೆಗೆ ಕರ್ನಾಟಕವಿದೆಯೆಂಬುದನ್ನು ಮರೆತು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಲಾಬಿ ಉದಯವಾಗಲು ಕಾರಣೀಭೂತರಾದ ಎಸ್ಸೆಮ್ ಕೃಷ್ಣ ಮತ್ತವರ ಶಿಶ್ನ ಡಿಕೆಶಿ ಇವರೆಲ್ಲಾ ಕನ್ನಡ/ಕರ್ನಾಟಕಕ್ಕೆ ಮಾಡಿದ್ದಾದರೂ ಏನು? ಅವರ ಹಾದಿಯಲ್ಲೇ ಸಾಗುತ್ತಿರುವ ಕನ್ನಡ ಶೋಷಣೆಯ "ಒಕ್ಕಲಿಗ ರಕ್ಷಣಾ ವೇದಿಕೆ" ಇನ್ನೇನು ಮಾಡಲು ಹೊರಟಿರುವುದು? ಕನ್ನಡವೆಂದೊಡನೆಯೇ ನೆನಪಾಗುವ ಕುವೆಂಪು, ಕನ್ನಡಿಗರೆಲ್ಲರೂ ಧೃವೀಕರಣಗೊಂಡು ಒಗ್ಗೂಡುವಂತಹ "ಗೋಕಾಕ್ ವರದಿ"ಯಂತಹ ಸುನಾಮಿ ಅಲೆಗೆ ಕಾರಣರ್‍ಆದ ಗೋಕಾಕರ ಹೆಸರುಗಳು ಇವರಿಗೆ ಹೊಳೆಯಲಿಲ್ಲವೆ? ಹೊಯ್ಸಳನ ಸಾಹಸ, ಪುಲಕೇಶಿಯ ಕೆಚ್ಚು, ಚೆನ್ನಮ್ಮನ ರೊಚ್ಚು ಇವೇನೂ ಇಲ್ಲದೆ ತಣ್ಣಗೆ ಮುದ್ದೆ ನುಂಗುವ ಕೆಂಪೇಗೌಡ ಇವರಿಗೇಕೆ ನೆನಪಾದನು? ಬೆಂಗಳೂರಿನಾಚೆಗೆ ಯೋಚಿಸದ, ಮುಂದೊಂದು ದಿನ ಒಕ್ಕಲಿಗರಷ್ಟೇ ಕನ್ನಡಿಗರೆಂಬ ಹುನ್ನಾರವನ್ನೂ ಮಾಡಲು ಹೇಸದ ಈ ಜನ ಜಾತಿಯ ಪರಿಧಿಯೊಳಗಿಂದ ಹೊರಬಂದು ಯೋಚಿಸಲಿ, ಗೊತ್ತಾಗುತ್ತದೆ ಆಗ ಕರ್ನಾಟಕವನ್ನು ಬಿಹಾರ್ ಮಾಡಿದ್ದ ದೇವೇಗೌಡ ಇನ್ನೂ ಹೇಗೆ ೨೮ ಸೀಟುಗಳನ್ನು ಗೆದ್ದನೆಂದು.



    ಈ ದಡ್ಡ-ದಡ್ಡಿಯರಿಗೆ ಕರಿಬೇವಿನ ಕಷಾಯವಲ್ಲ, ಅಸಲೀ ಬೇವಿನ ಕಷಾಯವನ್ನು ಮಾಡಿ ಹಾಕಿ. ವಯಾಗರ ನುಂಗಿದಂತಾಡುತ್ತಿರುವ ಈ ಟೀಕಾಕಾರರಿಗೆ ಆಗಲಾದರೂ ಹೊಳೆಯಲಿ ನಯಾಗರದ ನೀರು ಕುಡಿಯುವ, ಐಟಿ ಗುಲಾಮರ ದೆಸೆಯಿಂದಲಾಗಿಯೇ ಬೆಂಗಳೂರಿಗೆ "ಅಂತರರಾಷ್ಟ್ರೀಯ" ವಿಮಾನ ನಿಲ್ದಾಣ ಬಂದಿರುವುದು ಮತ್ತು ಈ ಹೆಬ್ಬೆಟ್ಟಿನ ತಂಗಳು ತಿನ್ನುತ್ತಿದ್ದ ಮಂದಿಯ ಜಮೀನಿಗೆ ಕೋಟಿಗಳ ಬೆಲೆ ಬಂದು ಇವರು ತಂಗಡಿ ಕಬಾಬ್ ತಿನ್ನುವ ಯೋಗ ಸಿಕ್ಕಿದ್ದು ಎಂದು.

    ReplyDelete
  8. ಅಲ್ರೀ ದೂರದ ಅಮೇರಿಕಾದಲ್ಲಿ ಕೂತು ಬರೀತೀರಲ್ಲ. ನಿಮ್ಮ ಅಮೇರಿಕಾ ದೇಶಕ್ಕೆ ಆ ಹೆಸರು ಯಾಕ್ರಿ ಇಟ್ರು? ಎಂತೆಂತಾ ವಿಜ್ನಾನಿಗಳ, ರಾಜಕಾರಣಿಗಳ, ಗಣ್ಯವ್ಯಕ್ತಿಗಳ ಹೆಸರು ಬಿಟ್ಟು ಅದ್ಯಾರೋ ಅಮೆರಿಕಾ ಕಂಡುಹಿಡಿದ ಅಂತ ಅಮೆರಿಗೊ ವೆಸ್‌ಪುಚ್ಚಿ ನಾವಿಕನ ಅನ್ನೋನ ಹೆಸರು ಇಟ್ಟಿದಾರಲ್ಲ? ಅಂತಹ ಅದೆಷ್ಟೋ ನಾವಿಕರು ಆಗಿಹೋಗಿದ್ದಾರೋ...

    ReplyDelete
  9. ಕನ್ನಡಿಗರಿಗೆ ಅಗ್ರೆಷನ್ ಅಷ್ಟು ಪ್ರಿಯವಾಗುವುದಿಲ್ಲ ಎಂದು ಕಾಣುತ್ತದೆ. ನಮ್ಮ ಹಕ್ಕನ್ನು ನಾವು ಕೇಳುವುದಕ್ಕೂ ಮುಲಾಜು ನೋಡುತ್ತಾ ಕಾಲ ಕಳೆಯುತ್ತೇವೆ. ದನಿಯೆತ್ತಿ ಕೇಳಿದರೆಲ್ಲಿ ತಪ್ಪಾಗುತ್ತದೆಯೋ ಎಂದು ಒಳಗೆ ಸರಿಯುತ್ತೇವೆ. ಆದರೆ ಪಕ್ಕದಲ್ಲಿ ನಿಂತವನೊಬ್ಬ ನಮ್ಮ ಹಕ್ಕನ್ನು ಕೇಳಿ ದನಿ ಎತ್ತರಿಸಿದಾಗ ನಾವು ಆತನನ್ನು ಒರಟನ ಹಾಗೆ ನೋಡುತ್ತೇವೆ. ಇದೇ ಮನಸ್ಥಿತಿ ನಮ್ಮ ಕನ್ನಡ ಹೋರಾಟಗಾರರ ಬಗೆಗೆ ನಮ್ಮಲ್ಲಿ ಮೂಡುತ್ತಿದೆಯಾ?
    ಕನ್ನಡಕ್ಕಾಗಿ ಧ್ವನಿ ಎತ್ತಿರುವುದು ಕನ್ನಡ ರಕ್ಷಣಾ ವೇದಿಕೆ. ಒಂದು ಸಂಘಟನೆ, ಸಂಸ್ಥೆಗಳ ಬಗ್ಗೆ ಎಷ್ಟೇ ಟೀಕೆ ಟಿಪ್ಪಣಿಯನ್ನು ಹೊರಡಿಸಬಹುದು. ಒಂದು ಸಂಘಟನೆಯ ಆದರ್ಶ, ಧ್ಯೇಯಗಳೇಷ್ಟೇ ಉನ್ನತವಾಗಿದ್ದರೂ ಅದು ಕೆಲವು ದೋಷಗಳಿಂದ ಮುಕ್ತವಾಗುವುದು ಅಸಾಧ್ಯವಾದ ಮಾತು. ಹೀಗಿರುವಾಗ ನಾವು ಒರಟೊರಟಾಗಿ ಹೋರಾಟಕ್ಕೆ ನಿಲ್ಲುವ ಸಂಘಟನೆಯನ್ನು ನಮ್ಮ ಮನೆಯಲ್ಲಿ ದಾಢಸಿ ಹುಡುಗನ ಹಾಗೆ ನೋಡಬೇಕು. ಕನ್ನಡಿಗರು ಸೌಮ್ಯ ಸ್ವಭಾವದವರು ಎಂಬುದು ನಮ್ಮ ದೌರ್ಬಲ್ಯವಾಗಬಾರದು.
    ಇನ್ನು ಹೆಸರಿನ ಬಗ್ಗೆ ನಡೆಯುತ್ತಿರುವ ಜಗಳ, ವಾಗ್ವಾದ, ಚರ್ಚೆಗಳಲ್ಲಿ ಬಹುಪಾಲು ಕೊಡುಗೆ ಇರುವುದು ವೇದಿಕೆ ಪಟ್ಟಿ ಮಾಡಿರುವ ಬೇರೆ ಯಾವ ಅಂಶಗಳಲ್ಲೂ ಆಸಕ್ತಿ ಇಲ್ಲದವರು ಹಾಗೂ ರಿಲೇಟ್ ಮಾಡಿಕೊಳ್ಳದವರು. ಅವರಿಗೆ ಕನ್ನಡಿಗರಿಗೆ ಉದ್ಯೋಗಾವಕಾಶ ಸಿಕ್ಕಬೇಕು ಎನ್ನುವುದರ ಬಗ್ಗೆ ಯಾವ ಒಲವೂ ಇಲ್ಲ. ಅಲ್ಲಿನ ಆಡಳಿತದಲ್ಲಿ ಕನ್ನಡಕ್ಕೆ ತಕ್ಕ ಗೌರವ ಕೊಡಬೇಕು ಎಂಬುದರ ಬಗ್ಗೆ ಕಾಳಜಿಯಿಲ್ಲ. ಸುಮ್ಮನೆ ಕುಳಿತಲ್ಲಿಂದಲೇ ಹೆಸರನ್ನು ಸೂಚಿಸಬಹುದಲ್ಲವಾ, ಅದಕ್ಕಾಗಿ ಇದೊಂದೇ ಅಂಶ ಮಾಧ್ಯಮಗಳಲ್ಲಿನ ಸಮಯವನ್ನು ತಿನ್ನುತ್ತಿದೆ. ಎನ್ನಿಸುತ್ತಿದೆ....

    ReplyDelete
  10. ನಿಮ್ಮೆಲ್ಲಾ ಅಸಹನೆ, ಆಕ್ಷೇಪಗಳಿಗೆ ಲೇಖನದಲ್ಲಿಯೇ ಸಮಾಧಾನಗಳಿವೆ. ನಿಮ್ಮಗಳ ಪೂರ್ವಾಗ್ರಹಪೀಡಿತ ಮನಸ್ಸಿನಿಂದ ಹೊರಬಂದು ಮತ್ತೊಮ್ಮೆ, ಮಗದೊಮ್ಮೆ ಲೇಖನವನ್ನು ಓದಿ. ನಿಮ್ಮ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ. ಬೆಂಗಳೂರಿನಲ್ಲಿ ಕಟ್ಟಿರುವ "ಅಂತರ್ರಾಷ್ಟ್ರೀಯ" ವಿಮಾನ ನಿಲ್ದಾಣ ಕೇವಲ ಬೆಂಗಳೂರಿಗೆ ಸೀಮಿತವಲ್ಲ. ಅದು ಕರ್ನಾಟಕದ ಹೆಬ್ಬಾಗಿಲು. ನನ್ನಂಥಹ ಐಟಿ ಗುಲಾಮರಿಗಾಗಿಯೇ ಕಟ್ಟಿರುವ ಈ ವಿಮಾನನಿಲ್ದಾಣ ನನ್ನನ್ನು ಕೇವಲ ಬೆಂಗಳೂರಿಗೆ ಕರೆತರುವುದಿಲ್ಲ. ಅದು ಕರ್ನಾಟಕಕ್ಕೆ ಕರೆತರುತ್ತದೆ.



    ಹಾಗೆಯೇ ಕೆಂಪೇಗೌಡನಾಗಲೀ, ಟಿಪ್ಪೂ ಆಗಲೀ ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವುದಿಲ್ಲ. ಯಾವುದೇ ಜಾತಿ ಸೋಂಕಿಲ್ಲದ, ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವ ಅಮೋಘವರ್ಷ, ಹೊಯ್ಸಳ, ಪುಲಕೇಶಿ, ಪಂಪ...ಮುಂತಾದವರ ಹೆಸರುಗಳು ಹೆಚ್ಚು ಸಮಂಜಸವೆಂಬುದು ಲೇಖನದ ತಿರುಳು. ಹಾಗೆಯೇ ಸಮಗ್ರ ಕರ್ನಾಟಕದ ಪರಿಕಲ್ಪನೆಯಿಲ್ಲದೇ ಭಾವುಕ ಕನ್ನಡ ಹೋರಾಟ ನಡೆಸುವುದು ಐತಿಹಾಸಿಕ ಚರಿತ್ರೆಗೆ ಅರಿಯದೇ ಮಾಡುವ ಅಪಚಾರವೇ ಆಗಿದೆ. ಈ ಲೇಖನವನ್ನು ಓದಿದ ನಂತರ ನಿಮಗೆ ಹಾಗೆನಿಸದಿದ್ದರೆ ನನ್ನ "ನಯಾಗರ ನೀರು ಕುಡಿಯುವ ಕನ್ನಡ"ಕ್ಕೆ, ಕನ್ನಡ ಭಾವನೆಗಳಿಗೆ ಕಾವೇರಿ ನೀರಿನ ಕನ್ನಡಿಗರ ಕ್ಷಮೆಯಿರಲಿ.

    ReplyDelete
  11. Dear Ravi Hanj -

    Mr.Patil Puttapa agrees with you as he expressed his view similar to yours.
    Let Revoor, Mahantesh, Muni, Hansa and other ananymous folks learn from the master Mr.Puttappa.

    http://www.prajavani.net/Content/May282008/netmail2008052781483.asp

    ReplyDelete
  12. http://www.prajavani.net/Content/May282008/netmail2008052781483.asp

    ReplyDelete
  13. ಕನ್ನಡ ಹೋರಾಟಗಾರ್ರನ್ನು “ಹುಗ್ರ ಓರಾಟಗಾರ್ರು” ಎಂದು ನೀವು ಟೀಕಿಸಿರುವುದು ನಿಮ್ಮ ಸಂಕುಚಿತ ಮನೋಭಾವ. ಕೆಲವು ಪಂಗಡಗಳಿಗೆ ಸೇರಿದ ಜನರು ಹಕಾರ ಅಕಾರ ವ್ಯತ್ಯಾಸ ಮಾಡುವುದನ್ನು ವೈಜ್ಞಾನಿಕ ಮನೋಭಾವದಿಂದ ನೋಡಬೇಕು ಭಾಷೆ ಇರುವುದು ಜನತೆಗಾಗಿಯೇ ಹೊರತು ಜನತೆ ಭಾಷೆಗೆ ಹೊಂದಿಕೊಳ್ಳುವುದಲ್ಲ. ಜಾರ್ಜ್ ಬುಷ್ ನಂತಹ ವ್ಯಕ್ತಿಯ ಉಚ್ಚಾರಣೆಯಲ್ಲಿಯೇ ಹಲವಾರು ದೋಷಗಳನ್ನು ಕಾಣಬಹುದು.

    ಕನ್ನಡ ಹೋರಾಟಗಾರ್ರು ಕನ್ನಡ ಭಾಷೆಯಲ್ಲಿ ಪಂಡಿತರಾಗಿರಬೇಕಿಲ್ಲ. ನೆನಪಿಡಿ ಕನ್ನಡ ರಕ್ಷಣಾ ವೇದಿಕೆ ಕನ್ನಡಕ್ಕಾಗಿ ಅಷ್ಟೋ ಇಷ್ಟೋ ಹೋರಾಟ ಮಾಡುತ್ತಿದೆ. ಕುಲಕ್ಕೆ ಮೃತ್ಯು ಕೊಡಲಿ ಕಾವು ಅಂದಂತೆ ನಾವು ಕನ್ನಡಿಗರೇ ಕರವೇಯನ್ನು ಅವಮಾನಿಸುತ್ತಿದ್ದರೆ ನಮ್ಮನ್ನು ಆ ದೇವರೂ ಕಾಪಾಡುವುದಿಲ್ಲ. ನಿಮ್ಮಂತಹ ಓದಿದವರು ಬುದ್ದಿವಂತ ಕನ್ನಡಿಗರು ಕನ್ನಡ ಹೋರಾಟಗಾರರಿಗೆ ಸರಿಯಾದ ದಾರಿ ತೋರಿಸಿ ಪ್ರೋತ್ಸಾಹಿಸಬೇಕೇ ವಿನಃ ಹಿಯ್ಯಾಳಿಸುವುದಲ್ಲ.

    -ಸಿಂಹಾದ್ರಿ

    ReplyDelete
  14. illi dooradha deshadalli koothu nammoorina agu hogugalannu sariyagi thoogi haliyadhe lekhanavannu baredare kanditha buddivantaru oppuvudilla..karnataka rakshana vedike ivattu horatada astu yesaru madalu narayana gowdaru mattu avara sahudyogigalu yestu raktha/bevaru surisiddare anta neevu modalu tilidukondare uttama..nimma prakara adenu madabekendukondiddiro dayavittu illinda (USA) kalachikondu nammoorige vapasu hogi nimma horatada moolaka torsidare aga nimma chintaneyannu opputteve,adu bittu sampporna satyavallada whishyavannu yellarigu unabadisuttenendare yellaru buddhi illadavaralla..nimma lekhanadalli nimmannu neeve samarthane madikolluvudu yestu uchitha yehli !!!

    ReplyDelete
  15. "ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರೆಂಬ ಪಂಚಿಂಗ್ ಲೈನಿನ, ಕರ್ನಾಟಕವೆಂದರೆ ಬರೀ ಬೆಂಗಳೂರೆಂಬ ಭ್ರಾಮಕದಲ್ಲಿ ಮುಳುಗಿರುವ ಈ ಓರಾಟಗಾರರಿಂದ ಕನ್ನಡಕ್ಕೆ ಅದೇನು ಗಂಡಾಂತರ ಕಾದಿದೆಯೋ?"

    ಯಾವುದೇ ವಿಷಯ ಅರ್ದಂಬರ್ದ ತಿಳಿದುಕೊಂಡು ಬರೆದರೆ ಹೀಗೇ ಆಗೋದು! ಈ ಕೆಳಗಿನ ಲಿಂಕ್ ನೋಡಿ. ಕರವೇ ಯಾವ ಯಾವ ಪ್ರದೇಶದಲ್ಲಿ ಏನೇನು ಹೋರಾಟ ಮಾಡಿದೆ ಎಂದು ತಿಳಿಯುತ್ತೆ.

    http://karnatakarakshanavedike.org/modes/pages/10/horaatagalu.html

    by the way, ಕನ್ನಡಕ್ಕೆ ಗಂಡಾಂತರ ಇರೋದು ನಿಮ್ಮಂತಹ ಅರೆಬೆಂದ ಮೆದುಳಿನವರಿಂದ ಹೊರತು ಕರವೇ ಇಂದಲ್ಲ.

    -ಸುದರ್ಶನ್ ಎಚ್.ಎಸ್

    ReplyDelete
  16. ಎಲ್ಲರಿಗು ನಮಸ್ಕಾರ,
    ಇ ಥಿಂಕ್ ರವಿ ಅವ್ರು ತುಂಬ ಒಳ್ಳೆ ಲೇಖನ ಬರೆದಿದ್ದಾರೆ. ಕೆಲೋವೊಂದು ಅಂಶಗಳು ಸರಿ ಇಲ್ಲದೆ ಇದ್ದರು ವಿಷಯ ಹಾಗು ವಾದ ದಲ್ಲಿ ತೂಕ ಇದೆ.
    ಬಟ್ ಬೆಂಗಳೂರು ಲಿ ಇರೋವ್ರಿಗೆ ಗೊತ್ತು ಕ ರ ವೇ ಇಂದ ಎಷ್ಟೊಂದು ಒಳ್ಳೆ ಕೆಲಸಗಳು ಆಗಿವೆ ಅಂತ, ಇಡಿ ಕರ್ನಾಟಕ ದಲ್ಲಿ ಕನ್ನಡಕ್ಕಾಗಿ ದನಿ ಎತ್ತಿರುವುದು ಇವರೊಬ್ಬರೇ. ಬೆಂಗಳೂರು ಲಿ ಹೊರಗಿನವರು .ರೇಡಿಯೋ... ಅವರು ಕನ್ನಡಕೆ ಸ್ವಲ್ಪ ಮರ್ಯಾದೆ ಕೊಡ್ತಾ ಇದ್ರೆ ಅದು ಕ ರ ವೇ ಇಂದ. ಕೆಲೋವ್ರಿಗೆ ಇ ಮನವಿ ಅಲ್ಲಿ ಜಾತಿಯ ಲೇಪನ ವಿದ್ದಹಾಗೆ ಕಂಡರೂ , ರವಿ ಅವರು ಇಲ್ಲಿ ಎಡವಿದ್ದಾರೆ ಅಂದ್ಕೊಳ್ತ್ಹಿನಿ. ರವಿ ಅವರೇ ನೀವೇ ಹೇಳಿ ಇಡಿ ಕರ್ನಾಟಕದಲ್ಲಿ ಇಲ್ಲಿಯ ತನಕ ನಮ್ಮ ಹಳೆಯ ರಾಜ ರಿಗೆ ಹಾಗು ರಾಜ ವಂಶಗಳಿಗೆ ಸಿಗಬೇಕಾದ ಮರ್ಯಾದೆ ಎಲ್ಲಿ ಸಿಕ್ಕಿದೆ ಅಂತ ..ಕರ್ನಾಟಕದಲ್ಲಿ ಒಂದ್ ಜಾಗ ಹೇಳಿ ಹೋಟೆಲ್ ಬಿಟ್ಟು ಮಯೂರ, ಕೃಷ್ಣ ದೇವ ರಾಯ, ಪುಲಕೇಶಿ ...ಅವ್ರ ಹೆಸರು ಇಟ್ಟಿರೋ ಜಾಗ ಅಥವಾ ಸರಕಾರೀ ಬಿಲ್ಡಿಂಗ್ ...ಬರಿ ಗಾಂಧೀ, ಅಂಬೇಡ್ಕರ್, ನೆಹರೂ ಇರ್ತಾವೆ ಹೊರತು ಇವರದು ಎಲ್ಲಿ ಇದೆ ?? ಹಾಗಿದ್ದಾಗ ಕ ರ ವೇ ಅವ್ರು ಕೊನೆ ಪಕ್ಷ ಒಂದು ದನಿ ಎತ್ತುತ್ತ ಇದ್ದರಲ್ಲ ಅನ್ನೋದೇ ಕುಷಿ..

    ಜೊತೆಗೆ ಒಕ್ಕಲಿಗರ ಹೆಸ್ರು ಬೇಕು ಅಂದಿದ್ರೆ ಕುವೆಂಪು ಒರ್ ಸರ್ ಎಂ ವಿ ಹೆಸ್ರುನ್ನು ಹೇಳಬಹುದಿತು ಬಟ್ ಅವ್ರಿಗೆ ಕೆಂಪಣ್ಣ ದೇ ಹೆಸ್ರು ಬೇಕು :) .ಹಾಗಾಗಿ ನನ್ ಪ್ರಕಾರ ಜಾತಿಯ ಲೇಪನ ಇದ್ದ ಹಾಗೆ ಕಂಡರೂ ಅದೇ ಕಾರಣ ಅಗಿಲಾರದು .

    ಅಲ್ಸೋ ನನ್ನ ಪ್ರಕಾರ ೨೧ ಶತಮಾನ ದಲ್ಲಿ ಕರು ನಾಡಿಗೆ ಅತ್ಯಂತ ಹೆಚ್ಚು ಕೊಡುಗೆ ಬಂದಿರುವುದು ಕುವೆಂಪು ಹಾಗು "ಸರ್ ಎಂ ವಿ " ಅವರಿಂದ. ಹಾಗಾಗಿ ಯಾರೋ ೧೫ ಶತಮಾನದ ಸಾಮಂಥ ಅಥವಾ ಇನ್ನು ಹಳೆಯ ರಾಜ ನ ಹೆಸರು ಬದಲು ಇವರಲ್ಲಿ ಒಬ್ಬರ ಹೆಸರಿತ್ತಿದ್ರೆ ಸೂಕ್ತ ವಾಗಿರುತ್ತಿತು....

    ReplyDelete
  17. Dear Ravi,

    On the occasion of 8th year celebration of Kannada saahithya. com we are arranging one day seminar at Christ college, Bangalore on July 8th 2008.

    As seats are limited interested participants are requested to register at below link.

    Please note Registration is compulsory to attend the seminar.

    If time permits informal bloggers meet will be held at the same venue after the seminar.

    For further details and registration click on below link.

    http://saadhaara.com/events/index/english

    http://saadhaara.com/events/index/kannada


    Please do come and forward the same to your like minded friends

    ReplyDelete
  18. ಕೆಂಪೇಗೌಡರ ಹೆಸರನ್ನೇ ಇಡಬೇಕು ಅಂತಾ ಹೇಳೋಕೆ ನಾರಾಯಣ "ಗೌಡ"ರು ಸಮಸ್ತ ಜನಾಂಗಗಳ ಪ್ರತಿನಿಧಿಯಾಗಿಲ್ಲ. ಒಕ್ಕಲಿಗರ ಹೆಸರನ್ನೇ ಇಡಬೇಕು ಅಂತಾದ್ರೆ, ಕುವೆಂಪು ಹೆಸರು ಸರ್ ಎಂ ವಿ ಹೆಸರು ಇಡ್ರಿ ಅನ್ನೋದು ಸೂಕ್ತ ಅನ್ನೋದಾದ್ರೂ ಅವರೆಂದೂ ಜಾತಿ ರಾಜಕೀಯ ಮಾಡಲಿಲ್ಲ. ಹಾಗೆ ಮಾಡಿದ್ದ್ರೆ, ನಮ್ ದೇವೇಗೌಡರಂಗೆ ಗ್ರಾಮ ಪಂಚಾಯ್ತಿ ರಾಜಕೀಯ ಮಾಡಿಕೊಂಡಿರಬೇಕಿತ್ತು.

    ನಾವು ಕುವೆಂಪು ಅವರನ್ನ ಗೌರವಿಸೋದು ಕವಿ,ದಾರ್ಶನಿಕ ಅಂತಾ. ಸರ್ ಎಂ ವಿ ಅವರನ್ನ ಗೌರವಿಸೋದು ಒಬ್ಬ ಸಮರ್ಥ ಎಂಜಿನಿಯರ್ ಅಂತ. ಜಾತಿಗಳನ್ನ ಮೀರಿ ಇವರೆಲ್ಲ ಬೆಳೆದಿದ್ದಾರೆ. ದುಡಿದಿದ್ದಾರೆ, ಅನ್ನ ಕೊಟ್ಟಿದ್ದಾರೆ ಕರ್ನಾಟಕದ ಜನತೆಗೆ.

    ಇದು ಇಷ್ಟೆಲ್ಲಾ ರಾದ್ಧಾಂತ ಆಗಲಿಕ್ಕೆ ಕಾರಣ ಕರವೇ ನಾರಾಯಣಗೌಡರು ಬಾಲಗಂಗಾಧರನಾಥ ಸ್ವಾಮಿಯವರೊಂದಿಗೆ ಪ್ರತಿಭಟನೆ ಮಾಡಿದ್ದು. ಎಲ್ಲ ಸಮುದಾಯದವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಒಕ್ಕಲಿಗ ಸ್ವಾಮಿನ ಇಟ್ಟುಕೊಂಡು "ಗೌಡ"ರ ಹೆಸರು ಇಡ್ರಿ ಅಂದ್ರೆ ಹೆಂಗೆ..?

    ಪ್ರತಾಪ ಸಿಂಹ ಈ ಬಗ್ಗೆ ಸವಿಸ್ತಾರ ಲೇಖನ ಬರೆದಿದ್ದರು. ವಿಶ್ವೇಶ್ವರಯ್ಯ ಹೆಸರು ಸೂಕ್ತ ಯಾಕೆ ಅನ್ನೋದನ್ನ ಹೇಳಿದ್ದರು.

    ಈಗ ನಾರಾಯಣಗೌಡರು ಪತರುಗುಟ್ಟಿ ಹೋಗಿ, ತಮ್ಮ ಅಜೆಂಡಾ ಕೆಂಪೇಗೌಡರ ಹೆಸರು ಇಡಿಸುವುದಲ್ಲ ಅಂತಾ ಅಂದಿದ್ದಾರೆ. ಕನ್ನಡಿಗರಿಗೆ ಕೆಲಸ ದೊರಕಿಸಿಕೊಡುವುದು ಅಂದಿದ್ದಾರೆ. ಕನ್ನಡಿಗರಿಗೆ ಕೆಲಸ ಕೊಡಿ ಅಂತಾ ಪ್ರತಿಭಟಿಸುತ್ತಿರುವ ಕರವೇ ಗೆ ನಮ್ಮ ಬೆಂಬಲವಿದೆ. ಆದ್ರೆ, ಜಾತಿ ರಾಜಕೀಯ ಮಾಡಿ "ಅಂದು ಕೆಂಪೇಗೌಡ ಇಂದು ನಾರಾಯಣಗೌಡ" ಅನ್ನೋ ಸ್ಲೋಗನ್ನು ಇನ್ನೂ ಪಸರಿಸಬೇಕೆಂದರೆ ಕೆಂಪೇಗೌಡರಿಗೆ ಮರ್ಯಾದೆ ಇನ್ನಷ್ಟು ದೊರಕಬೇಕಲ್ಲವೇ..?

    ಕೆಂಪೇಗೌಡರಿಗೆ ಸಾಕಷ್ಟು ಮರ್ಯಾದೆ ಕೊಡಮಾಡಲಾಗಿದೆ. ಬಿಎಂಟಿಸಿ ಬಸ್ ಸ್ಟ್ಯಾಂಡ್ ಹೆಸರು, ಬಸ್ಸುಗಳ ಮೇಲೆ ಕೆಂ.ಬಸ್ ನಿಲ್ದಾಣ ಅನ್ನೋದು ಕಾಣುತ್ತೆ. ಕಾರ್ಪೊರೇಷನ್ ಸರ್ಕಲ್ ನಲ್ಲಿ ಕೆಂಪೇಗೌಡರ ಪ್ರತಿಮೆ ಇದೆ. ಆದ್ರೆ, ನಾರಾಯಣ ಗೌಡರು ಮೆಜೆಸ್ಟಿಕ್ ನಲ್ಲಿ ಕೂಡಾ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಜಾಗ ಕಾಯ್ದಿರಿಸಿದ್ದಾರೆ.

    ಸುಮ್ನೆ ಕೆಂಪೇಗೌಡರ ಹೆಸರನ್ನ ಸೂಚಿಸಿದ್ದರೆ, ಎಲ್ಲರೂ ಒಮ್ಮತ ವ್ಯಕ್ತ ಪಡಿಸಬಹುದಿತ್ತೇನೋ. ಆದರೆ, ಬಾಲಗಂಗಾಧರನಾಥ ಸ್ವಾಮಿಯವರು ಯಾಕೆ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕಿತ್ತು? ಬೇರೆ ಬ್ರಾಹ್ಮಣ, ವೀರಶೈವ, ಕುರುಬ, ವಾಲ್ಮೀಕಿ ಜನಾಂಗದ ಸ್ವಾಮೀಜಿಗಳು ಏಕೆ ಭಾಗವಹಿಸಲಿಲ್ಲ..? ನಾರಾಯಣಗೌಡರು ಕರೆದಿದ್ದರೇ ಬೇರೆ ಸ್ವಾಮೀಜಿಯವರನ್ನ..? ದೇವೇಗೌಡರು ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಅಂತ ಹೇಳಿಕೆ ಕೊಟ್ಟಾಗ ಈ ಗೌಡರು ಏನು ಮಾಡ್ತಾ ಇದ್ರು..? ಪಾಪ ಪ್ರತಿಭಟಿಸಿದರೆ, ದೇವೇಗೌಡರು ಬೇಸರಿಸಿಕೊಳ್ಳೋದಿಲ್ವಾ..? ಕನ್ನಡದ ಬಗ್ಗೆ ಹುಸಿ ಕಾಳಜಿ ಅಂದ್ರೆ ಇದೇನಾ..? ಕನ್ನಡ, ಕರ್ನಾಟಕವನ್ನ, ಪ್ರತಿಭಟನೆಗಳನ್ನ ಗುತ್ತಿಗೆ ಹಿಡಿದು ಪೇಟೆಂಟ್ ಪಡೆದವರಂತೆ ವರ್ತಿಸುವುದು ಸರಿಯಾ..?

    ನ್ಯಾಯಯುತವಾಗಿ ಕರ್ನಾಟಕದವರಿಗೆ ದೊರಕಬೇಕಾದ ಸ್ಥಾನಮಾನಗಳಿಗೆ ಕರವೇ ಹೋರಾಡಿದೆ. ಬೆಂಬಲಿಸೋಣ. ಆದ್ರೆ, ಜಾತಿ ರಾಜಕೀಯ ಮಾಡಕ್ಕೆ ಹೊರಟರೆ ಸುಮ್ಮನಿರೋದಿಲ್ಲ.

    ಗಣೇಶ್.ಕೆ.
    www.pratispandana.wordpress.com/

    ReplyDelete
  19. ಗಣೇಶ್,

    ಉಗ್ರಪ್ರತಾಪ ಸಿಂಹನ ಲೇಖನ ಓದಿ ನಾರಾಯಣಗೌಡರು ಪತರಗುಟ್ಟಿ ಹೋದರಾ ???? ವಾರೆ ವ್ಹಾ ಎಂತಹಾ ಪೌರುಷ! ಆದರೆ ಈಗ ಅಂಡು ಸುಟ್ಟ ಬೆಕ್ಕಿನ ಮರಿಯ ಹಾಗೆ ಅವರು ದಟ್ಸ್‌ಕನ್ನಡದಲ್ಲಿ ಲೇಖನಗಳನ್ನು ತೆಗೆಸಿ ಹಾಕಿದ್ದೇಕೆ? ಆರ್ಕುಟ್ ನಲ್ಲಿ ಈಗ ಕರವೇ ಬಗ್ಗೆ ಒಳ್ಳೆ ಮಾತುಗಳನ್ನು ಆಡುತ್ತಿರುವುದೇಕೆ?

    ಆದರೂ ನೀವು ಹೇಳಿದಂತೆ ನಾರಾಯಣ ಗೌಡ ಅವರು ರ್ಯಾಲಿಯಲ್ಲಿ ಯಾವುದೇ ಸ್ವಾಮಿಗಳನ್ನೂ ಕರೆಸಬಾರದಿತ್ತು. ಸ್ವಾಮಿಗಳನ್ನ ಕರೆಸಿದ್ದಕ್ಕೆ ಈ ಜಾತಿ ವಿವಾದ ಹುಟ್ಟಿಕೊಂಡಿದ್ದು. ಗೌಡರು ಇನ್ನು ಮುಂದೆ ಸ್ವಲ್ಪ ಎಚ್ಚರಿಕೆ ವಹಿಸಬೇಕು.

    ReplyDelete