ಮೊನ್ನೆ ನನ್ನ ಹೈಸ್ಕೂಲ್ ಸ್ನೇಹಿತ ರಾಜಣ್ಣನೊಡನೆ ಮಾತನಾಡುತ್ತಿದ್ದೆ. ನಮ್ಮಿಬ್ಬರಿಗೂ ರೈತಾಪಿ ಹಿನ್ನೆಲೆ ಪರೋಕ್ಷವಾಗಿ ಇರುವುದರಿಂದ ಸಹಜವಾಗಿ ಗೊಬ್ಬರದ ಕೊರತೆ, ರೈತರ ಆತ್ಮಹತ್ಯೆಗಳು ನಮ್ಮ ಚರ್ಚೆಯ ವಿಷಯವಾಯಿತು. ನಾವು ಹೈಸ್ಕೂಲಿನಲ್ಲಿದ್ದಾಗ ಒಂದು ಹಸು ಸಾಕಿದ್ದೆವು. ಹಾಗೆಯೇ ರಾಜಣ್ಣನ ಮನೆಯಲ್ಲಿ ಎಮ್ಮೆಗಳನ್ನು ಸಾಕಿದ್ದರು. ನಮ್ಮ ಹೊಲವನ್ನು ಕೋರಿಗೆ ಪಡೆದಿದ್ದ ನಮ್ಮ ರೈತ, ನಮ್ಮಗಳ ಮೇಲಿನ ಪ್ರೀತಿಯಿಂದ ತನ್ನ ಒಂದು ಹಸುವನ್ನು ತಂದು ನಮ್ಮ ಮನೆಯಲ್ಲಿ ಕಟ್ಟಿಹೋಗಿದ್ದ. ಆ ಹಸುವಿನ ಚಾಕರಿ ಮಾಡಲು ನಮ್ಮಲ್ಲಿ ಜಗಳಗಳೇ ಆಗುತ್ತಿದ್ದವು. ಆದರೆ ಈಗ ನಗರ/ಪಟ್ಟಣಗಳನ್ನು ಬಿಡಿ, ನಮ್ಮ ಹಳ್ಳಿ ಮುದಾಹದಡಿಯಲ್ಲಿಯೇ ಇಂದು ಯಾರೂ ದನಗಳನ್ನು ಸಾಕುತ್ತಿಲ್ಲ. ಮುದಾಹದಡಿಯ ರೈತರು ಕೂಡ ಇಂದು ’ನಂದಿನಿ’ ಹಾಲನ್ನೋ ಇನ್ನೊಂದು ಎಂತದೋ ’ಆರೋಕ್ಯ’ ಎಂಬ ಹಾಲನ್ನು ಕೊಂಡುಕೊಳ್ಳುತ್ತಿದ್ದಾರೆ. ಮೊದಲೆಲ್ಲ ಮನೆಯಲ್ಲೇ ಇರುತ್ತಿದ್ದ ದನಗಳ ಸಗಣಿ ಗೊಬ್ಬರ, ತಿಪ್ಪೆ ಗೊಬ್ಬರವನ್ನು ಹಾಕಿ ಬೆಳೆ ಬೆಳೆಯುತ್ತಿದ್ದವರು, ಕೆಲವೇ ಕೆಲವು ಬೆಳೆಗಳಿಗೆ ’ಸರ್ಕಾರಿ ಗೊಬ್ಬರ’ಗಳನ್ನು ಸೀಮಿತವಾಗಿ ಬಳಸುತ್ತಿದ್ದರು. ಬಹುಕಾಲ ನಾನು ಸರ್ಕಾರಿ ಗೊಬ್ಬರವೆಂದರೆ ಸರ್ಕಾರದವರು ಪುಕ್ಕಟೆ ಕೊಡುವ ಗೊಬ್ಬರವೇನೋ ಅಂದುಕೊಂಡಿದ್ದೆ. ಬೆಳೆದಂತೆ ಅದು ರಸಗೊಬ್ಬರಕ್ಕೆ ನಮ್ಮ ಕಡೆಯ ರೈತರು ಹಾಗೆ ಕರೆಯುತ್ತಾರೆಂದು ತಿಳಿಯಿತು. ಹಾಗೆಯೇ ನಮ್ಮ ಹಳ್ಳಿಯ ರೈತನೊಬ್ಬ ’ವೀರ್ಯ’ ತಗಬೇಕು, ಸ್ವಲ್ಪ ಉದ್ರಿ ಕೊಡಲು ನಿಮ್ಮ ಪರಿಚಿತ ಗೊಬ್ಬರದ ಅಂಗಡಿಯವರಿಗೆ ಹೇಳು ಬಾ ಎಂದು ಕರೆಯುತ್ತಿದ್ದನು. ಇದರಿಂದ ಗಾಬರಿ/ಆಶ್ಚರ್ಯ/ಸಂಕೋಚಗೊಂಡು ಕೊಂಚ ವಿಚಾರಿಸಿದಾಗ ’ಯೂರಿಯಾ’ವನ್ನು ಅವನು ’ವೀರ್ಯ’ ಎನ್ನುವನು ಎಂದು ತಿಳಿದೆನು. ಇದು ನನಗೂ ನನ್ನ ಸ್ನೇಹಿತ ರಾಜಣ್ಣನಿಗೂ ತಮಾಷೆಯ ವಿಷಯವಾಗಿತ್ತು. ಹಾಗೆಯೇ ಕೀಟನಾಶಕಗಳಿಗೆ ’ಎಣ್ಣೆ’ ಹೊಡಿಯುವುದು ಎಂದು ತನ್ನ ಜನಪದ ಸೊಗಡಿನಲ್ಲಿ ಎನ್ನುತ್ತಿದ್ದನು ಆ ನಮ್ಮ ಹಳ್ಳಿಯವ.
ಇರಲಿ, ಈಗ ಆ ಕಷ್ಟಜೀವಿ ರೈತನಿಲ್ಲ. ಆತನ ಮಕ್ಕಳು ತಮ್ಮ ತಮ್ಮ ಜಮೀನುಗಳನ್ನು ಬಾಡಿಗೆ ಟ್ರ್‍ಆಕ್ಟರಿನಿಂದ ಉಳುಮೆ ಮಾಡಿಸಿ, ಭತ್ತ ನೆಡುವ, ನೀರು ಕಟ್ಟುವ, ಕೀಟನಾಶಕ ಸಿಂಪಡಿಸುವ, ಗೊಬ್ಬರ ಚೆಲ್ಲುವ ಎಲ್ಲಾ ಕೃಷಿ ಕಾರ್ಯಗಳನ್ನಾದಿಯಾಗಿಯೂ ಗುತ್ತಿಗೆ ಕೊಟ್ಟು, ತಣ್ಣಗೆ ಕಟ್ಟೆ ಸೇರಿ, ಕಟ್ಟೆಪುರಾಣದಲ್ಲಿ ತೊಡಗಿದ್ದಾರೆ! ಅಲ್ಲಿ ಬೆಳೆಯುವ ಬೆಳೆಗಳೂ ಕೂಡ ತಮ್ಮ ’ಕಟ್ಟೆ ಅಡಿಕ್ಟ್’ ಧಣಿಗಳಂತೆ, ಪೇಟೆಯ ’ಡ್ರಗ್ ಅಡಿಕ್ಟ್’ ವ್ಯಸನಿಗಳಂತೆ ಈ ಕೀಟನಾಶಕ, ರಸಗೊಬ್ಬರಗಳಿಗೆ ಅಡಿಕ್ಟ್ ಆಗಿವೆ. ಏನೇ ಮಾಡಿದರೂ ಕಾಲಕಾಲಕ್ಕೆ ಇಂತಿಷ್ಟು ಎಂದು ಈ ಕೀಟನಾಶಕ/ರಸಗೊಬ್ಬರಗಳನ್ನು ಕೊಡದಿದ್ದರೆ, ಈ ಬೆಳೆಗಳು ಮಲಗೇಬಿಡುತ್ತವೆ. ಒಮ್ಮೆ ನನ್ನ ಅಕ್ಕಿ ವ್ಯಾಪಾರಿ ಮಿತ್ರನೊಬ್ಬ ನನ್ನನ್ನು ಯಾವ ರೀತಿಯ ಅಕ್ಕಿಯನ್ನು ಶಿಕಾಗೋನಲ್ಲಿ ಉಪಯೋಗಿಸುತ್ತೀಯೆಂದು ಕೇಳಿದನು. ಅದಕ್ಕೆ ನಾನು ಇತ್ತೀಚಿನ ಕೆಲ ವರ್ಷಗಳಿಂದ ನಾನು ಶ್ರೀಲಂಕಾದಿಂದ ಬರುವ ಕೆಂಪು ಅಕ್ಕಿಯನ್ನು ಉಪಯೋಗಿಸುತ್ತೇನೆಂದೂ ಮತ್ತು ಇಲ್ಲಿ ಚಿಕ್ಕಮಗಳೂರು ಕಡೆ ಸಿಗುವ ಕೆಂಪುಅಕ್ಕಿಯನ್ನೋ, ಪಾಲಿಷ್ ಕಡಿಮೆ ಇರುವ ಕಂದು ಬಣ್ಣದ ಅಕ್ಕಿಯನ್ನು ತಿನ್ನುವುದು ಒಳ್ಳೆಯದೆಂದು ಹೇಳಿದೆನು. ಅವನು ಅದಕ್ಕೆ ಅವನು "ಹಾಗೆಲ್ಲ ಇಲ್ಲಿ ಹೇಳಬೇಡ, ಪಾಲಿಷ್ ಕಡಿಮೆ ಇಟ್ಟರೆ, ಕೀಟನಾಶಕ/ರಸಗೊಬ್ಬರಗಳ ರಾಸಾಯನಿಕಗಳು ಹಾಗೆಯೇ ಉಳಿದು, ಸದ್ಯಕ್ಕೆ ಐವತ್ತಕ್ಕೆ ಸಾಯುತ್ತಿರುವ ಜನ, ಕಡಿಮೆ ಪಾಲಿಷ್ ಇರುವ ಅಕ್ಕಿ ತಿಂದು ಮೂವತ್ತಕ್ಕೆ ಸಾಯುವಂತಾಗುತ್ತದೆ. ಹಾಗಾಗಿ ಆದಷ್ಟೂ ಹೆಚ್ಚು ಪಾಲಿಶ್ ಮಾಡಿ, ರಸಾಯನಿಕಗಳನ್ನು ಹೆರೆದ ಅಕ್ಕಿಯನ್ನು ಬಳಸಬೇಕು" ಎಂದು ಹೇಳಿದನು. ಹಾಗೆಯೇ ತೆಂಗಿಗೆ ನುಸಿರೋಗಕ್ಕೆ ಯಾವುದೋ ಕೀಟನಾಶಕವನ್ನು ಬಳಸಿದ ಮರದಿಂದ ಎಳನೀರು ಕುಡಿದು ಕೆಲವರು ಸತ್ತು ಹೋದರೆಂದು ಹೇಳಿದನು. ಎಷ್ಟು ನಿಜವೋ, ಎಷ್ಟು ಗಾಳಿಸುದ್ದಿಯೋ. ಒಟ್ಟಾರೆ ನಮ್ಮ ರೈತ ಈ ರಾಸಾಯನಿಕಗಳ ಮೇಲೆ ಆಧಾರಿತನಂತೂ ಆಗಿದ್ದಾನೆ.
ಇನ್ನು ಜನನಾಯಕರೋ ಪಕ್ಷಾತೀತವಾಗಿ ಎಲ್ಲಾ ಪಕ್ಷದವರೂ ರೈತನ ಮೇಲೆ ಸವಾರಿ ಮಾಡಿ, ಶಾಶ್ವತ ಕೃಷಿ ವ್ಯವಸ್ಥೆಗಳಾದ ಮಾರುಕಟ್ಟೆ, ಬೆಲೆ ನಿಯಂತ್ರಣ, ಉಗ್ರಾಣ, ಸಾರಿಗೆಯಂತಹ ವ್ಯವಸ್ಥೆಗಳನ್ನು ಸರಿಪಡಿಸದೇ ಪರಿಹಾರಗಳನ್ನೊ, ಪ್ಯಾಕೇಜುಗಳನ್ನೋ ಘೋಷಿಸುತ್ತಿದ್ದಾರೆ. ಈ ಪರಿಹಾರಗಳ ಪರಿಣಾಮವೇ ಇಂದು ರೈತರನ್ನು ಪರಿಹಾರಕ್ಕೆ ಕೈಚಾಚುವಂತಹ ನಿಸ್ಸಹಾಯಕರನ್ನಾಗಿ ಮಾಡಿವೆ. ಹಿಂದೆ ಕೃಷ್ಣ ಸರ್ಕಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಒಂದು ಲಕ್ಷ ಪರಿಹಾರ ಘೋಷಣೆಯಾದಾಗ ಸಾಲುಸಾಲಾಗಿ ಲಕ್ಷಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿಯೂ ಕೂಡ ಮೊನ್ನೆ ಗೋಲೀಬಾರಿಗೆ ಮೃತನಾದ ರೈತನ ಸಂಸಾರಕ್ಕೆ ಸರ್ಕಾರಿ ಉದ್ಯೋಗ/ಪರಿಹಾರಗಳು ಘೋಷಣೆಯಾದದ್ದೇ ತಡ, ರೈತರು ತಮಗೂ ಕೂಡ ಈ ಪರಿಹಾರಗಳು ದೊರಕುತ್ತವೇನೋ ಎಂದುಕೊಂಡು ಸಾಲುಸಾಲಾಗಿ ಅತ್ಮಹತ್ಯೆ ಮಾಡಿಕೊಳ್ಳುತ್ತಿರುವರೇನೋ ಎನಿಸುತ್ತದೆ. ಈ ಪರಿಹಾರ ಕೇವಲ ರೈತರಿಗಷ್ಟೇ ಅಲ್ಲ, ಇನ್ಯಾತರದ್ದೇ ಪರಿಹಾರಗಳಿಗೂ ಅನ್ವಯವಾಗುತ್ತದೆ. ಪ್ರತಿಯೊಂದಕ್ಕೂ ರಾಷ್ಟ್ರ್‍ಈಯ ವಿಮೆಯನ್ನು ಮಾಡಿಸಿ, ಪರಿಹಾರವನ್ನು ಹಕ್ಕನ್ನಾಗಿಯೂ, ನಿಶ್ಚಿತವಾಗಿಯೂ ಇರುವಂತೇ ಮಾಡಿದ್ದರೆ, ಜನ ಪರಿಹಾರಕ್ಕಾಗಿ ಸಾಯದೇ, ಪರಿಹಾರಾಪೇಕ್ಷಿಗಳಾಗಿ ಹೋರಾಡದೆ ಬದುಕುವ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರೇನೋ.
ಈ ರಾಸಾಯನಿಕಗಳ ಮೇಲಿನ ಅವಲಂಬನೆ ಅನಿವಾರ್ಯವೇ? ಹಿಂದೆಲ್ಲ, ಈ ರಾಸಾಯನಿಕಗಳಿಲ್ಲದೆ ತಲತಲಾಂತರದಿಂದ ಭಾರತೀಯ ಕೃಷಿಕ ಬೇಸಾಯವನ್ನು ಮಾಡಿಯೇ ಇಲ್ಲವೆ ಅನಿಸುವಷ್ಟರ ಮಟ್ಟಿಗೆ ನಮ್ಮ ರೈತರು ಈ ರಾಸಾಯನಿಕಗಳ ಮೇಲೆ ಅವಲಂಬನೆಗೊಂಡಿದ್ದಾರೆ. ಇದ್ದುದರಲ್ಲಿ ಅನೇಕರು ಈ ರಾಸಾಯನಿಕಗಳನ್ನು ತೊರೆದು ನೈಸರ್ಗಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗುತ್ತಿರುವ ಸಂಗತಿಗಳು ಅಲ್ಲಲ್ಲಿ ಕೇಳಬರುತ್ತಿದ್ದರೂ ನಮ್ಮ ರೈತರು ಯಾಕೋ ಮನಸ್ಸು ಮಾಡುತ್ತಿಲ್ಲ. ರೈತರ ಬಗ್ಗೆ ವಸ್ತುನಿಷ್ಟ ಕಾಳಜಿಯಿದ್ದಿದ್ದರೆ ರಾಜಕೀಯ ಪಕ್ಷಗಳು ರೈತನ ಹೆಸರಿನಲ್ಲಿ ರಾಜಕೀಯಗಳನ್ನು ಮಾಡದೆ, ಈ ನೈಸರ್ಗಿಕ ಕೃಷಿಯ ಪದ್ದತಿಗಳನ್ನು ಹೆಚ್ಚು ಪ್ರಚಾರಿಸುವತ್ತ ಎಂದು ಮುಖ ಮಾಡುವರೋ?
ರೈತ ಸಂಘಗಳು/ಕೃಷಿ ಅಭಿವೃದ್ಧಿ ಹೇಗಿರಬೇಕೆಂಬುದನ್ನು ನಮ್ಮ ನೆರೆಯ ಶ್ರೀಲಂಕಾವನ್ನು ನೋಡಿದರೆ ಸಾಕು, ಸಾಕಷ್ಟು ನಾವು ಕಲಿಯಬಹುದು. ಸಿದ್ಧವಸ್ತುಗಳನ್ನು ತಯಾರಿಸಿ ಮಾರುವುದನ್ನು ಬಿಡಿ, ತಾನು ಬೆಳೆದ ಭತ್ತ/ಬೇಳೆಗಳನ್ನೇ ನಮ್ಮ ರೈತರು ’ಗ್ರೇಡಿಂಗ್’ ಮಾಡಿಸಿ ಮಾರಲಾಗದಂತಹ ಸ್ಥಿತಿ ನಮ್ಮಲ್ಲಿದೆ. ಅದೇ ಪಕ್ಕದ ಶ್ರೀಲಂಕಾದ ರೈತ ತಾನು ಬೆಳೆದ ಪ್ರತಿಯೊಂದನ್ನು ಸಂಸ್ಕರಿಸಿ, ಸಿದ್ಧವಸ್ತುಗಳನ್ನಾಗಿಸಿಯೋ ಅಥವಾ ಅರೆ-ಸಿದ್ಧವಸ್ತುಗಳನ್ನಾಗಿಸಿಯೋ ತನ್ನ ರೈತ ಸಂಘದ ಮೂಲಕ ಐ.ಎಸ್.ಓ.೯೦೦೧ ಪ್ರಾಮಾಣಿಸಿ ಮಾರುಕಟ್ಟೆಗೆ ಕಳುಹಿಸುತ್ತಾನೆ. ಶ್ರೀಲಂಕಾದಿಂದ ಬರುವ ಕೆಂಪು ಅಕ್ಕಿ, ಟಿಲ್ಡಾ/ಪೆಪ್ಸಿ/ಕೋಕ್ ಕಂಪೆನಿಗಳ ಬಾಸ್ಮತಿ ಅಕ್ಕಿಯ ದುಪ್ಪಟ್ಟು ಬೆಲೆಗೆ ಅಮೇರಿಕಾದಲ್ಲಿ ಬಿಕರಿಯಾಗುತ್ತದೆ. ಆದರೇ ಅದೇ ತರಹದ ಚಿಕ್ಕಮಗಳೂರು ಕಡೆ ಬೆಳೆಯುತ್ತಿದ್ದ ಕೆಂಪು ಅಕ್ಕಿ ನಮ್ಮಲ್ಲೇ ಕಾಣೆಯಾಗಿದೆ! ಹಾಗೆಯೇ ಶ್ರೀಲಂಕಾದ ತೆಂಗಿನ ಸೇಂದಿ (ಟಾಡಿ)ಅರ್ಜೆಂಟೀನಾದ ವೈನ್ ಗಿಂತ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತದೆ. ನಮ್ಮಲ್ಲಿ ಸೇಂದಿಯೇ ಬ್ಯಾನ್ ಆಗಿದೆ! ಇದೆಲ್ಲವೂ ಅಲ್ಲಿನ ಕೃಷಿ ಸಹಕಾರಿ ಸಂಘಗಳು, ನಮ್ಮಲ್ಲಿನ ’ಅಗ್ಮಾರ್ಕ್’ ರೀತಿಯ ಶ್ರೀಲಂಕಾ ರಾಷ್ಟ್ರೀಯ ಸಂಸ್ಥೆಯ ಮುಖಾಂತರ ಇದೆಲ್ಲವನ್ನು ಸಾಧ್ಯವಾಗಿಸಿವೆ.
ಇನ್ನು ನಮ್ಮ ಅನೇಕ ನಾಯಕರು ರೈತರ ಉದ್ದಾರವೆಂದರೆ ಅವರು ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ರಫ್ತಾಧಾರಿತ ಸಫೇದ್ ಮುಸ್ಲಿ ತರಹದ ಬೆಳೆಗಳನ್ನು ಬೆಳೆಯಬೇಕೆಂದು ಪರಿಹಾರ ಸೂಚಿಸುತ್ತಾರೆ. ತಿನ್ನಲಿಕ್ಕೇ ಇಲ್ಲದಿದ್ದ ಮೇಲೆ ಕಾಮವರ್ಧಕ ಗೆಡ್ಡೆ ಬೆಳೆದು ಯಾರಿಗೆ ಏನನ್ನು ತಿನ್ನಿಸುವರೋ ಈ ನಾಯಕರು! ಬಹುಶಃ ಮಾನಿಕಾ ಲೆವಿನ್ಸ್ಕಿಯನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡಿರುವರೆನಿಸುತ್ತದೆ. ಇರಲಿ, ಒಂದು ವೇಳೆ ಆ ರೀತಿಯ ಬೆಳೆಗಳನ್ನು ಬೆಳೆದರೂ ಆ ರಫ್ತಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಂಥಹ ವಾತಾವರಣ ನಮ್ಮಲ್ಲಿದೆಯೇ? ತಿಳಿಯದು.
ಆದರೆ ನಮ್ಮಲ್ಲೇ ಇರುವ ಭಾರತದ ಅಗಾಧ ಗ್ರಾಹಕ ಶಕ್ತಿಯ ಅರಿವೇ ನಮ್ಮ ನಾಯಕರಿಗಿದ್ದಂತಿಲ್ಲ. ಮೆಗಾಸಿಟಿಗಳನ್ನು ಬಿಡಿ, ಸಾಮಾನ್ಯ ಊರುಗಳಲ್ಲೇ ’ದರ್ಶಿನಿ’, ’ಹಳ್ಳಿಮನೆ’, ’ದಿಲ್ಲಿದರ್ಬಾರ್’ ಎಂಬ ಅದೆಷ್ಟು ಹೋಟೇಲುಗಳಿಲ್ಲ. ಆ ಎಲ್ಲಾ ಹೋಟೇಲುಗಳ ಗ್ರಾಹಕ ಶಕ್ತಿಯನ್ನೂ ಕೂಡಾ ಕಾಣದಷ್ಟು ಕುರುಡರಾಗಿದ್ದಾರೆ ನಮ್ಮ ನಾಯಕರು. ಈ ಅಗಾಧ ಗ್ರಾಹಕ ಶಕ್ತಿಯನ್ನು ಕಂಡೇ ತಾನೆ ಪೆಪ್ಸಿ/ಕೋಕ್/ವಾಲ್ ಮಾರ್ಟ್...ಇನ್ನಿತರೇ ವಿದೇಶೀ ಕಂಪೆನಿಗಳು ಭಾರತದತ್ತ ಮುಖ ಮಾಡಿರುವುದು. ನೀರಿನ ಒಂದು ಬಾಟಲಿಗೆ ಹತ್ತು ರೂಪಾಯಿ ಕೊಟ್ಟು ನೀರು ಕುಡಿಯುವ ನಾವು ಐದು ರೂಪಾಯಿಗೆ ಒಂದು ಎಳನೀರು ಕುಡಿಯುತ್ತೇವೆಯೇ? ಉಹೂಂ. ಮುಂದೇ ಅದೇ ಎಳನೀರು ಪೆಪ್ಸಿ/ಕೋಕ್ ಕಂಪೆನಿಗಳಿಂದ ಬಾಟಲಿ ರೂಪದಲ್ಲಿ ಬಂದರೆ ಮೂವತ್ತು ರೂಪಾಯಿ ಕೊಟ್ಟು ಕುಡಿಯುತ್ತೇವೆ. ನಮ್ಮ ರೈತ ಟೊಮ್ಯಾಟೋ/ಮೆಣಸಿನಕಾಯಿಗಳನ್ನು ಬೆಲೆಯಿಲ್ಲದೇ ರಸ್ತೆಗೆ ಸುರಿಯುತ್ತಿದ್ದರೆ, ಅದೇ ರಸ್ತೆಯ ಮೂಲೆಯಲ್ಲಿರುವ ಬೇಕರಿಯಲ್ಲಿ ’ಮ್ಯಾಗ್ಗಿ’ ಟೊಮ್ಯಾಟೋ/ಚಿಲ್ಲಿ ಸಾಸ್/ಕೆಚಪ್ ಗಳ ಬಾಟಲಿಗಳು ಮೂವತ್ತು ರೂಪಾಯಿಗೆ ಬಿಕರಿಯಾಗುತ್ತಿರುತ್ತವೆ. ಈ ಒಂದು ಸರಳ ಆರ್ಥಿಕ ಲೆಕ್ಕಾಚಾರವನ್ನರಿಯದ, ಮಣ್ಣಿನ ಮಕ್ಕಳೆನಿಸಿಕೊಳ್ಳಲು ಹಪಹಪಿಸುವ ನಾಯಕರು, ರೈತನನ್ನು ಹೇಗೆ ಉದ್ಧರಿಸಿಬೇಕೆಂದು ಕಂಡುಕೊಳ್ಳಲು ದೂರದ ಇಸ್ರೇಲಿಗೋ ಹಾಲೆಂಡಿಗೋ ಹೋಗುತ್ತಾರೆ. ಇದು ನಮ್ಮ ಆರ್ಥಿಕ ವ್ಯವಸ್ಥೆಯ ವಿಪರ್ಯಾಸ!
ಇನ್ನು ರೈತರ ಪರ ಹೋರಾಟವೆಂದರೆ, ರೈತನಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ, ಪರಿಹಾರಗಳಿಗೆ ಹೋರಾಡುವುದೇ ಎಂದು ನಾವೇಕೆ ಅಂದುಕೊಳ್ಳಬೇಕೋ? ರೈತ ಸಂಘಗಳು ಕೇವಲ ಬಂದ್/ಹೋರಾಟ/ಪರಿಹಾರಯಾಚನೆಗಳಂಥಹ ರಾಜಕೀಯ ಪಕ್ಷಗಳ ಮಾದರಿಯ ಹೋರಾಟಗಳನ್ನು ಮಾಡೀ ಮಾಡೀ ರೈತರನ್ನು ಸೋಮಾರಿಗಳನ್ನಾಗಿಸುತ್ತಿವೆ. ಯಾರು ಹೆಚ್ಚು ಸೋಮಾರಿಗಳನ್ನು ಮಾಡುವನೋ ಅಂಥವನು ರಾಜಕಾರಣಿಯಾಗಿಯೂ, ಉಳಿದವರು ಅವನ ಬಾಲಬಡುಕರಾಗಿಯೋ ಅದಕ್ಕೂ ಮಿಕ್ಕುಳಿದವರು ಮಾನಸಿಕ ಖಿನ್ನತೆಯವರಾಗಿಯೂ ಈ ರಾಜಕಾರಣಿಗಳ ಆತ್ಮಹತ್ಯೆ ಯೋಜನೆಗೆ ಕುರಿಗಳಾಗುತ್ತಾರೆ. ಈ ರೈತ ಸಂಘಗಳು ತಮ್ಮ ಸಂಘಗಳ ಮುಖಾಂತರ ರೈತರು ಬೆಳೆದ ವಸ್ತುಗಳಿಗೆ ಮಾರುಕಟ್ಟೆ/ಸಂಸ್ಕರಣೆ/ಬಹುಮಹಡೀ ಕೃಷಿಪದ್ದತಿ/ ಅನುಭವ ಹಂಚಿಕೆಯಂಥಹ ಆರ್ಥಿಕ ಅಭಿವೃದ್ಧಿಯ ಸಹಕಾರೀ ಕಾರ್ಯಗಳನ್ನು ಕೈಗೊಳ್ಳಬಾರದೇಕೆ? ಚುನಾವಣೆಗಳಲ್ಲಿ ಸ್ಪರ್ಧಿಸಿ, ರಾಜ್ಯ/ರಾಷ್ಟ್ರ್‍ಅಗಳನ್ನು ಆಳುವ ಚತುರತೆಯಿರುವ ರೈತಸಂಘದ ನಾಯಕರು, ಈ ರೀತಿ ಸಹಕಾರಿ ಉದ್ದಿಮೆಗಳನ್ನು ಕಟ್ಟಿದರೆ ರೈತರ ಉದ್ದಾರ ತನ್ನಂತಾನೇ ಆಗುತ್ತದೆ. ಒಂದು ವಿರಕ್ತೀ ರಾಮಚಂದ್ರಾಪುರದ ಮಠ, ೨೦೦ ಮಿ.ಲೀ. ಗೋಮೂತ್ರವನ್ನು ಐವತ್ತು ರೂಪಾಯಿಗೆ ಮಾರುತ್ತಿರುವಾಗ, ಸಾರ್ವಜನಿಕ ನಾಯಕರೆನಿಸಿಕೊಳ್ಳುವ ಸಂಸಾರಿಗ ರೈತ ಮುಖಂಡರು ಈ ರೀತಿಯ ಉದ್ದಿಮೆಗಳನ್ನು ಸಹಕಾರೀ ಸಂಘಗಳ ಮುಖಾಂತರ ಮಾಡಬಹುದಲ್ಲವೇ? ರೈತಸಂಘಗಳು ಹಸಿರು ಟವೆಲ್ಲಿನಿಂದಾಚೆ ಎಂದು ಯೋಚಿಸುವರೋ?
ಹಿಡಿ ಬಿತ್ತಿ, ಖಂಡುಗ ತೆಗೆಯುವ ವ್ಯವಸಾಯವನ್ನು ಕಂಡೇ ಸರ್ವಜ್ಞ "ಕೋಟಿ ವಿದ್ಯೆಯಲಿ ಮೇಟಿ ವಿದ್ಯೆಯು ಲೇಸು" ಎಂದಿರುವನೇನೋ. ಇದ ಸರಿಯಾಗಿ ಅರಿಯದ ನಮ್ಮ ರಾಜಕಾರಣಿಗಳು, "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ, ಧೀರರೂ ಅಲ್ಲ! ಇದು ಕಾರಣ ನೆರೆ ಮೂರು ಲೋಕದ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗನವರೆತ್ತಬಲ್ಲರೋ!" ಎಂಬಂತೆ ಪರಸ್ಪರ ದೋಷಾರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆಯೇ ಹೊರತು ದೇಶವನ್ನು ಸರಿದಾರಿಯಲ್ಲಿ ಎಂದು ನಡೆಸುವರೋ!
ರೈತರಿಗೆ ಬೇಕಾದ್ದು ರಸಗೊಬ್ಬರವೂ ಅಲ್ಲ, ಪರಿಹಾರವೂ ಅಲ್ಲ. ಕೇಸರಿಯೂ ಅಲ್ಲ, ಬಡವರ ತಾಯಿಯೂ ಅಲ್ಲ, ಮಣ್ಣಿನ ಮಕ್ಕಳೂ ಅಲ್ಲ, ಹಾಗೆಯೇ ಹಸಿರು/ಕೆಂಪು/ಬಿಳಿ/ಕಪ್ಪು ಟವೆಲ್ಲುಗಳೂ ಅಲ್ಲ. ಬೇಕಾದ್ದು ಪ್ರಾಮಾಣಿಕ ಸ್ವಾವಲಂಬನೆಯ ಆರ್ಥಿಕ ವ್ಯವಸ್ಥೆ. "ಅನ್ನದೇವರ ಮುಂದೆ ಇನ್ನು ದೇವರು ಉಂಟೆ, ಅನ್ನವಿರುವತನಕ ಪ್ರಾಣವು-ಜಗದೊಳಗನ್ನವೇ ದೈವ ಸರ್ವಜ್ಞ" ಎಂಬುದ ವಸ್ತುನಿಷ್ಟವಾಗಿ ಎಂದು ನಮ್ಮವರಿಗೆ ಅರಿವಾಗುವುದೋ!
ಅಣಕ:
ವೀರ್ಯ, ಸಫೇದ್ ಮುಸ್ಲಿ, ಲೆವೆನ್ಸ್ಕಿ, ರೈತ, ಗೋಲೀಬಾರ್ ಆಜ್ಞೆ ಕೊಟ್ಟಿದ್ದ್ಯಾರೆಂದು ಗೊತ್ತಿಲ್ಲದ ಸರ್ಕಾರ,ಗೊಬ್ಬರದ ಕೊರತೆಗೆ ಕೇಂದ್ರ ಕಾರಣವೆಂದು ಗೊತ್ತಿದ್ದೂ ರಾಜ್ಯ ಸರ್ಕಾರವನ್ನು ವಿರೋಧಿಸುವ ವಿರೋಧ ಪಕ್ಷಗಳು.... ಇದೆಲ್ಲಕ್ಕಿಂತ ಮಿಗಿಲಾದ ಅಣಕ ನನಗಂತೂ ಸದ್ಯಕ್ಕೆ ಹೊಳೆಯುತ್ತಿಲ್ಲ!?
Subscribe to:
Post Comments (Atom)
1 comment:
ನಮ್ಮ ಸರ್ಕಾರಕ್ಕೆ, ನಮ್ಮ ಮಧ್ಯಮ ವರ್ಗದ ಚಿಂತನೆಯ ಚಾವಡಿಗೆ ರೈತರ ವಾಸ್ತವದ ಚಿತ್ರಣದ ಅರಿವಿಲ್ಲ ಎಂದೇ ಭಾವಿಸುತ್ತೇನೆ. ಮಧ್ಯಮ ವರ್ಗದ, ನಗರದ ಯುವಕನಾದ ನಾನೂ ಸಹ ರೈತರ ಬಗ್ಗೆ ಮಾತನಾಡುವಾಗ ಕೇವಲ ಬೌದ್ಧಿಕ ಜ್ಞಾನವನ್ನೋ, ಭಾವುಕವಾದ ಬಂಡವಾಳವನ್ನೋ ನೆಚ್ಚಿಕೊಂಡಿರುವುದನ್ನು ತಿಳಿದು ನಾಚಿಕೆಯಾಗುತ್ತದೆ.
‘ಮೇಟಿ ವಿದ್ಯೆಯ’ ಬಗ್ಗೆ ಗೌರವ ಮೂಡಿಸಿದ ಬರಹ ನಿಮ್ಮದು. ಧನ್ಯವಾದಗಳು.
ನಾನಿರುವ ಪರಿಸ್ಥಿತಿಯಲ್ಲಿ ರೈತನಿಗೆ ಗಟ್ಟಿ ಎದೆಯನ್ನು ಕೊಡು ಭಗವಂತ ಎಂದು ಆಶಿಸಬಹುದಷ್ಟೇ
Post a Comment