ರಿಸೆಷನ್ ರಿಸೆಷನ್ ರಿಸೆಷನ್!

ಇಂದಿನ ಉದಯಕಾಲದಲ್ಲಿ,

ರಿಸೆಷನ್, ರಿಸೆಷನ್, ರಿಸೆಷನ್!

PTI ವರದಿಯ ಪ್ರಕಾರ ಇಡೀ ದಕ್ಷಿಣ ಏಷ್ಯಾ, "ಜಾಗತಿಕ ಆರ್ಥಿಕ ಹಿಂಜರಿತ"ದ ಎಫೆಕ್ಟಿಗೆ ಒಳಗಾಗಿದೆ. ಅದರಲ್ಲಿ ಹೆಚ್ಚು ಜಾಗತೀಕರಣಕ್ಕೆ ತೆರೆದುಕೊಂಡಿರುವ ಭಾರತಕ್ಕೆ ಇದರ ಪರಿಣಾಮ ಬೇರೆಲ್ಲಾ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗಿಂತ ಅತಿ ಹೆಚ್ಚು ಪರಿಣಾಮ ಬೀರಲಿದೆ. ಏಕೆಂದರೆ ಭಾರತದಲ್ಲಿ ಜಾಗತಿಕ ಮಟ್ಟದ ಸಂಸ್ಥೆಗಳು ಕೇವಲ ಬಂಡವಾಳ ಹೂಡಿಕೆ ಮಾತ್ರವಲ್ಲದೆ ಇನ್ನಿತರೆ ವ್ಯವಹಾರ, ಉದ್ದಿಮೆಗಳ ಆಯಾಮಗಳಲ್ಲೂ ತೊಡಗಿಸಿಕೊಂಡಿವೆ. ಬಂಡವಾಳ ಹೂಡಿರುವ ಕಂಪೆನಿಗಳು ಬಂಡವಾಳವನ್ನು ಮುಂಜಾಗ್ರತಾ ಕ್ರಮವಾಗಿ ಹಿಂಪಡೆಯುವುದು ಮತ್ತು ಹೆಚ್ಚಿನ ಲಾಭವಿರುವ ಕಡೆ ಮರುತೊಡಗಿಸುವುದು ಅಥವಾ ನಗದನ್ನು ಹಿಡಿದಿಟ್ಟುಕೊಳ್ಳುವ ಪ್ರಕ್ರಿಯೆ ನಾವು-ನೀವು ನಮ್ಮ ಹಣ ಯಾ ಬಂಡವಾಳವನ್ನು ಹೇಗೆ ಸುಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆಯೋ ಹಾಗೆಯೇ ಇರುತ್ತದೆ. ನೀವು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ ಬಂಡವಾಳವನ್ನು ಹೇಗೆ ಕಾಲಕಾಲಕ್ಕೆ ತೆಗೆಯುವುದು ಅಥವಾ ಬದಲಾಯಿಸುವುದು ಮಾಡುತ್ತೀರೋ ಹಾಗೆ. ಎಲ್ಲಾ ಷೇರು ಮಾರುಕಟ್ಟೆಗಳು ಸದಾ ಏರುಗತಿಯಲ್ಲಿಯೇ ಹೇಗೆ ಇರುವುದಿಲ್ಲವೋ ಹಾಗೆಯೇ ಒಂದು ದೇಶದ ಆರ್ಥಿಕ ಸ್ಥಿತಿಗತಿಗಳು ಕೂಡ.

ಈ ಬಂಡವಾಳ ಹಿಂತೆಗೆತವನ್ನು ತಡೆಯಲು ಸರ್ಕಾರಗಳು ಕೆಲವೊಂದು ಆರ್ಥಿಕ ನೀತಿಗಳನ್ನು ಪ್ರಕಟಿಸಬಹುದು. ಆದರೆ ಹಿಂತೆಗೆತವನ್ನು ಸಂಪೂರ್ಣವಾಗಿ ನಿಲ್ಲಸಲಾಗುವುದಿಲ್ಲ. ಉದಾಹರಣೆಗೆ ನೀವು ಒಂದು ಬ್ಯಾಂಕಿನಲ್ಲಿಟ್ಟಿರುವ FD ಅನ್ನು ಹಿಂತೆಗೆದುಕೊಳ್ಳುವಾಗ ಬ್ಯಾಂಕಿನವರು ಹೆಚ್ಚಿನ ಬಡ್ಡಿಯ ಆಸೆಯನ್ನು ತೋರಿಸಬಹುದು. ಆದರೆ ನಿಮ್ಮ ಅನಿವಾರ್ಯ ಬಡ್ಡಿ ದರವೊಂದೇ ಆಗಿರದಿದ್ದರೆ ನೀವು ನಿಮ್ಮ FDಯನ್ನು ಹಿಂತೆಗದುಕೊಂಡೇತೀರುತ್ತೀರಿ. ಅದೇ ರೀತಿ ಆರ್ಥಿಕ ಹಿಂಜರಿತವನ್ನು ತಡೆಯಲು ಸರ್ಕಾರ ಬಡ್ಡಿ ಏರಿಸುವ/ಇಳಿಸುವ, ಯಾ ತೆರಿಗೆ ಸಡಿಲಿಸುವ, ಸಬ್ಸಿಡಿ ಘೋಷಿಸುವ ಇನ್ನೂ ಹಲವಾರು ಯೋಜನೆಗಳನ್ನು ಪ್ರಕಟಿಸಬಹುದು. ಆದರೆ ಈ ಯೋಜನೆಗಳು ತಕ್ಷಣಕ್ಕೆ ಫಲ ಕೊಡುವುದಿಲ್ಲ.
ಏಕೆಂದರೆ ಇನ್ಫಲೇಶನ್, ಡಿಫ್ಲೇಶನ್, ರಿಸೆಷನ್ನುಗಳು ಗಳು ಆರ್ಥಿಕ ವ್ಯವಸ್ಥೆಯ ಋತುಗಳಿದ್ದಂತೆ. ಆಯಾಯ ಋತುವಿಗೆ ತಕ್ಕಂತೆ ಕೋಟು ಹಾಕಿಕೊಳ್ಳುವುದೋ, AC ಹಾಕಿಕೊಳ್ಳುವುದೋ ಮಾಡಬಹುದೇ ಹೊರತು, ಋತುಗಳನ್ನೇ ಬದಲಾಯಿಸಲಾಗುವುದಿಲ್ಲ. ಹಾಗಾಗಿ ಸರ್ಕಾರಗಳು ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ನಿಯಮಗಳು ಕೇವಲ ಕೋಟು/AC ಆಗುವವೇ ಹೊರತು ಬದಲಾಗುವ ಋತುಗಳನ್ನು ನಿಲ್ಲಿಸಲಾರವು.

ಅಮೆರಿಕದಲ್ಲಿ ರಿಸೆಷನ್ ಎಂಬುದು ಆಗಾಗ್ಗೆ ಕ್ಲಿಂಟನ್, ಬುಷ್, ಒಬಾಮರ ಅಧಿಕಾರಾವಧಿಗಳಲ್ಲೂ ಬಂದಿದೆ, ಟ್ರಂಪನ ಕಾಲದಲ್ಲಿಯೂ ಬರಲಿದೆ. ಆದರೆ ಈ ರಿಸೆಷನ್ ಕುರಿತು ಭಾರತದಲ್ಲಿ ಇತ್ತೀಚೆಗೆ ಜನ ಸಾಮಾನ್ಯರು ಮಾತನಾಡಿಕೊಳ್ಳುವಂತಾಗಿರುವುದಕ್ಕೆ ಕಾರಣ, ಭಾರತ ಜಾಗತಿಕವಾಗಿ ಗುರುತಿಸಿಕೊಳ್ಳುವಂತಹ ಆರ್ಥಿಕತೆಯನ್ನು ಪಡೆದುಕೊಂಡಿರುವುದು.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಆಗಿಹೋದ ಸರ್ಕಾರಗಳು ಈ ರೀತಿಯ ಆರ್ಥಿಕ ಋತುಗಳನ್ನು ಗುರುತಿಸಿ ನಿಯಂತ್ರಿಸದೇ ಇನ್ಫಲೇಶನ್ ಎಂಬ ಭೂತವನ್ನು ಬೆಳೆಯಬಿಟ್ಟದ್ದೇ ಈಗ ರಿಸೆಷನ್ ಎಂಬ ಸಾಮಾನ್ಯ ಆರ್ಥಿಕ ಚಕ್ರ ಪೆಡಂಭೂತವಾಗಿ ಬಹುದೊಡ್ಡ ಮಟ್ಟದಲ್ಲಿ ಬಂದೆರಗಬಹುದಾದ ಸನ್ನಿವೇಶವನ್ನು ಸೃಷ್ಟಿಸಲು ಕಾರಣವೆನ್ನಬಹುದು.

ಇದೆಲ್ಲವೂ ಸೃಷ್ಟಿಯಾದದ್ದು ಸಾಫ್ಟವೇರ್ ಎಂಬ ಮೇಕೆಯ ಮೂತಿಗೆ ಬೆಣ್ಣೆ ಕದ್ದ ಕೋತಿಗಳು ಕೈಯೊರೆಸುವ ಅನೌಪಚಾರಿಕ, ಅವ್ಯವಸ್ಥಿತ ಆರ್ಥಿಕ ನಡೆ ಮತ್ತು ನೀತಿಗಳಿಂದಾದ ಅವಘಡ!

ಇಪ್ಪತ್ತೈದು ವರ್ಷಗಳ ಕೆಳಗೆ ಒಬ್ಬ ಸಾಮಾನ್ಯ ಸಾಫ್ಟವೇರ್ ಎಂಜಿನಿಯರನ ಸಂಬಳ ತಿಂಗಳಿಗೆ ಹದಿನೈದು ಸಾವಿರವಿದ್ದರೆ, ಒಬ್ಬ ಸಿವಿಲ್ ಎಂಜಿನಿಯರ್ ಯಾ ಉಪನ್ಯಾಸಕ ಯಾ ತಹಸೀಲ್ದಾರನ ಸಂಬಳ ನಾಲ್ಕು ಸಾವಿರವಿದ್ದಿತು. ಹಾಗೆಯೇ ಬೆಂಗಳೂರಿನ ಯಲಹಂಕಾದಲ್ಲಿ ಚದರಡಿ ಸೈಟಿಗೆ ಐವತ್ತು ರೂಪಾಯಿ!

ಯಾವತ್ತು ಕೇವಲ ಶೇಕಡಾ ಮೂರು ಪ್ರತಿಶತಕ್ಕಿಂತಲೂ ಕಡಿಮೆ ಜನಸಂಖ್ಯೆಯ ಸಾಫ್ಟವೇರ್ ಉದ್ಯೋಗಿಗಳ ಆದಾಯಕ್ಕನುಗುಣವಾಗಿ ದೇಶದ ಇನ್ನಿತರೆ ತೊಂಬತ್ತೇಳು ಪ್ರತಿಶತ ಜನಸಂಖ್ಯೆಗೆ ಆರ್ಥಿಕ ನೀತಿಗಳು, ವಸ್ತುವಿನ ಬೆಲೆಗಳು ರೂಪುಗೊಳ್ಳುತ್ತಾ ಸಾಗಿದವೋ, ಅದರ ದುಷ್ಪರಿಣಾಮವೇ ಇದೆಲ್ಲದುದರ ಮೂಲ.

ಇಪ್ಪತ್ತೈದು ವರ್ಷಗಳಲ್ಲಿ ಐವತ್ತು ರೂಪಾಯಿ ಚದರಡಿ ಇದ್ದ ಯಲಹಂಕಾದ ಸೈಟಿನ ಬೆಲೆ ಹತ್ತು ಸಾವಿರ ರೂಪಾಯಿಗಳನ್ನು ದಾಟಿದೆ. ನಾಲ್ಕು ಸಾವಿರವಿದ್ದ ಒಬ್ಬ ಸರ್ಕಾರಿ ಉಪನ್ಯಾಸಕ, ತಹಶೀಲ್ದಾರ, ಸಿವಿಲ್ ಎಂಜಿನಿಯರನ ಸಂಬಳ ಲಕ್ಷ ರೂಪಾಯಿಯಾಗಿದೆ. ಹಾಗೆಯೇ ಅದನ್ನು ಸರಿತೂಗಲು ಹೋಟೆಲ್, ವಸತಿ, ಜನಜೀವನ ದುಬಾರಿಯಾಗಿ ಬೆಳೆದಿದೆ. ಈ ಎಲ್ಲಾ ಬೆಲೆ ಏರಿಕೆಗಳನ್ನು ಭರಿಸಲು ಭ್ರಷ್ಟಾಚಾರ ಸರ್ಕಾರಿ ವಲಯವಷ್ಟೇ ಅಲ್ಲದೇ ಖಾಸಗಿ ಕಂಪೆನಿಗಳು, ಶಿಕ್ಷಣ ಸಂಸ್ಥೆಗಳು, ನರ್ಸಿಂಗ್ ಹೋಮುಗಳಿಂದ ಹಿಡಿದು ಸುಲಭ್ ಶೌಚಾಲಯದವರೆಗೆ ಪಸರಿಸಿದೆ. ಏಕೆಂದರೆ ಲಕ್ಷ ರೂಪಾಯಿ ಸಂಬಳವಿರದ ಖಾಸಗಿ ಕಾಲೇಜಿನ ಉಪನ್ಯಾಸಕ, ನೌಕರರು ಕೂಡ ವಸತಿ, ಊಟದಂತಹ ಮೂಲಭೂತ ವೆಚ್ಚವನ್ನು ದುಬಾರಿಯಾದರೂ ಭರಿಸಲೇಬೇಕಲ್ಲವೇ?

ಇಂದು ಕೊಡಗಿನ ಕಾಫ಼ಿ ತೋಟ ಎಕರೆಗೆ ಮೂವತ್ತು ಲಕ್ಷವಾಗಿರುವುದಿರಲಿ, ಬಿಜಾಪುರದ ಕೃಷ್ಣಾ ತೀರದ ಹೊಲಗಳೂ ಎಕರೆಗೆ ಮೂವತ್ತು ಲಕ್ಷವಾಗಿವೆ. ಈ ಬೆಲೆಗೆ ಕೊಂಡು ಅಲ್ಲಿ ಗಾಂಜಾ/ಅಫ಼ೀಮು ಬೆಳೆದರಷ್ಟೇ ಲಾಭಕರವಾಗಬಹುದಲ್ಲದೇ ಕಾಫ಼ಿ, ಕಬ್ಬು, ಹತ್ತಿ, ಭತ್ತ ಬೆಳೆದರೆ ಬಡ್ಡಿಯೂ ಗಿಟ್ಟದು.

ಇಂತಹ "ಆಮ್ಲೀಯ ಹಣದುಬ್ಬರ"ವನ್ನು ಆಗಿ ಹೋದ ಯಾವುದೇ ಸರ್ಕಾರಗಳು ನಿಯಂತ್ರಣವನ್ನು ಹೇರುವುದಿರಲಿ ಖುದ್ದು ಲಾಭ ಮಾಡಿಕೊಳ್ಳಲು ಆಸ್ತಿ ನೋಂದಣಿಯ ಮಾರ್ಗದರ್ಶಿ ಬೆಲೆಯನ್ನು ಹಿಂದುಮುಂದು ನೋಡದೆ ತಟಕ್ಕನೆ ಏರಿಸುತ್ತಲೇ ಸಾಗಿದವು! ಹೋಟೆಲ್, ವಸತಿ, ಖಾಸಗಿ ಶಿಕ್ಷಣ, ಆರೋಗ್ಯ ವ್ಯವಸ್ಥೆಗಳ ಬೆಲೆ ಇದಕ್ಕನುಗುಣವಾಗಿ ಗಗನಕ್ಕೇರಿದವು. ಬ್ಯಾಂಕ್ ಸಾಲ ಸೌಲಭ್ಯಗಳು ಸುಲಭವಷ್ಟೇ ಅಲ್ಲದೇ ಬೇಕಾಬಿಟ್ಟಿ ಸಿಗಲಾರಂಭಿಸಿದವು. ಹಾಗೆಯೇ ಹಲವಾರು ದೊಡ್ಡ ಮೊತ್ತದ ಸಾಲಗಳು ವಸೂಲಾಗದೆ ಪೇರಿಸಿಕೊಳ್ಳುತ್ತಾ ಸಾಗಿದವು. ಇನ್ನು ಜನಜೀವನದಲ್ಲಿ  KG ಕ್ಲಾಸಿಗೆ ಲಕ್ಷ ರೂಪಾಯಿಯ ಡೋನೇಷನ್ ಸಾಮಾನ್ಯವೆನಿಸಿಬಿಟ್ಟಿದೆ. ಟೈಫಾಯಿಡ್ ಬಂದಾಗಲೂ ಜನ ಹತ್ತಿರದ ಕ್ಲಿನಿಕ್ಕಿನಲ್ಲಿ ಚಿಕಿತ್ಸೆ ಪಡೆದು ಗುಣವಾಗುತ್ತಿದ್ದವರು ಈಗ ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗಲೇಬೇಕಾಗಿದೆ. ಅಸಿಡಿಟಿ ಎಂದು ಆಸ್ಪತ್ರೆಗೆ ಹೋದವನಿಗೆ ಹಾರ್ಟ್ ಬೈಪಾಸ್ ಮಾಡಿ ಕಳಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಪ್ರೊಫೆಸರರುಗಳು ತಮಗೆ ತೋಚಿದಂತೆ ಇಂಗ್ಲಿಷ್ ಲೇಖನ/ಸಂಶೋಧನಾ ಪ್ರಬಂಧ, ಪುಸ್ತಕಗಳನ್ನು ಅನುವಾದಿಸಿ ಬೋಧಿಸುತ್ತಿದ್ದಾರೆ. ಕೆಜಿಯಿಂದಲೇ ಲಕ್ಷ ಕಕ್ಕಿ ಕಲಿತ ವಿದ್ಯಾರ್ಥಿಗಳು, ಬೆರಳ ತುದಿಯಲ್ಲೇ ಮಾಹಿತಿಯಿದ್ದರೂ ಇದನ್ನೆಲ್ಲ ಪರಿಶೀಲಿಸುವ ತರ್ಕವನ್ನೇ ಮಾಡುವುದಿಲ್ಲ. ಅಂದರೆ ಎಲ್ಲಾ ವ್ಯವಸ್ಥೆಗಳ ಬೆಲೆ ಏರಿದೆಯೇ ಹೊರತು, ಗುಣಮಟ್ಟ ಪಾತಾಳಕ್ಕೆ ಕುಸಿದುಹೋಗಿದೆ. ಕೇವಲ ಬೆಲೆಯಲ್ಲಿ ಎಲ್ಲಾ ದೇಶಗಳನ್ನು ಮೀರಿಸಿ ನಾನು ವಿಶ್ವಗುರು ಎಂದು ಉದ್ಘೋಷಿಸಲಾಗದು. ಬೆಲೆಗೆ ತಕ್ಕ ತೂಕವಿದ್ದರೇನೇ ಕಳೆ, ಇಲ್ಲದಿದ್ದರೂ ಕಳೆಯೇ! ಒಂದು ಕಳೆ ಮೆರುಗನ್ನು ಕೊಟ್ಟರೆ ಇನ್ನೊಂದನ್ನು ಕಿತ್ತೆಸೆಯಬೇಕು.

ಒಟ್ಟಿನಲ್ಲಿ ವಿಶ್ವವೇ ಗೌರವಿಸುವ ಆರ್ಥಿಕ ತಜ್ಞರೆನಿಸಿಕೊಂಡ ಮನಮೋಹನ್ ಸಿಂಗ್, ಚಿದಂಬರಂ ಅವರ ಮಾರ್ಗದರ್ಶನದಲ್ಲೇ ಈ ಎಲ್ಲಾ ಆಮ್ಲೀಯ ಹಣದುಬ್ಬರ ಉಬ್ಬರಿಸುತ್ತಲೇ ಸಾಗಿತು. ನಂತರ ಸರ್ಕಾರ ಬದಲಾಯಿತು!  ಬ್ಯಾಂಕುಗಳಲ್ಲಿ ಪೇರಿಸಲ್ಪಟ್ಟಿದ್ದ ದೊಡ್ಡ ಮೊತ್ತದ ಸಾಲಗಾರರು ದೇಶ ಬಿಟ್ಟರು, ಬ್ಯಾಂಕಿನ ಅವ್ಯವಹಾರಗಳು ಬಯಲಾದವು. ಹಾಗೆಯೇ ನೋಟು ಅಮಾನ್ಯೀಕರಣವಾಯಿತು.

ನೊಬೆಲ್ ವಿಜೇತೆ ಎಸ್ತರ್ ಡಫ್ಲೋ ಪ್ರಕಾರ ಭಾರತದಲ್ಲಿ ಜಾರಿಯಲ್ಲಿರುವ ಸಂಖ್ಯಾಶಾಸ್ತ್ರ ನಿಯಮಾವಳಿಗಳು ಮತ್ತು ಚಾಲ್ತಿಯಲ್ಲಿರುವ ಕ್ರಮಗಳು ಅನೌಪಚಾರಿಕ ಮಾಮೂಲಿ ಆರ್ಥಿಕ ಬದಲಾವಣೆಯ ಕುರಿತಾಗಿ ಮಾಹಿತಿಯನ್ನು ಹೊಂದಿರದ ಮತ್ತು ಕ್ರಮಬದ್ಧವಾಗಿ ಸಂಗ್ರಹಿಸದ ಕಾರಣ ಅಮಾನ್ಯೀಕರಣದ ಪ್ರಗತಿಯನ್ನಾಗಲೀ, ಹಿನ್ನೆಡೆಯನ್ನಾಗಲಿ ಅಳೆಯಲು ಯಾವತ್ತೂ ಸಾಧ್ಯವಾಗದು ಎಂದಿದ್ದಾರೆ. ಅಂದರೆ ಮಾಹಿತಿಯ ಕೊರತೆಯಿಂದ ಅಮಾನ್ಯೀಕರಣದ ಪರಿಣಾಮವನ್ನು ಅಳೆಯಲಾಗುವುದಿಲ್ಲವೇ ಹೊರತು ಅದು ಒಳ್ಳೆಯದೋ ಕೆಟ್ಟುದೋ ಎಂದು ಹೇಳಲಾಗುವುದಿಲ್ಲ ಎಂಬುದು ಸ್ಪಷ್ಟ. ಹಾಗೆಂದು ಅಳೆಯಲಾಗುವುದಿಲ್ಲವೆಂದು ಅಮಾನ್ಯೀಕರಣವನ್ನು ಮಾಡಲೇಬಾರದೆಂಬುದು ಕೂಡಾ ಪ್ರಶ್ನಾರ್ಹವಾಗುತ್ತದೆ.

ಇರಲಿ, ಇಲ್ಲಿ ಎಸ್ತರ್ ಅವರ ಅಭಿಪ್ರಾಯದಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲಿ ಅನೌಪಚಾರಿಕ ಆರ್ಥಿಕತೆಯನ್ನು ಅಳೆಯುವ ಯಾವುದೇ ರೀತಿಯ ನೀತಿ ನಿಯಮಗಳು, ವ್ಯವಸ್ಥೆಗಳು ಜಗದ್ವಿಖ್ಯಾತ ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಮತ್ತು ಚಿದಂಬರಂ ನಾಯಕತ್ವದಲ್ಲಿಯೂ ರೂಪುಗೊಳ್ಳದಿದ್ದುದು!

ಇನ್ನು ಅದೇ ಹದಿನೈದು ಸಾವಿರವಿದ್ದ ಒಬ್ಬ ಸಾಮಾನ್ಯ ಸಾಫ್ಟವೇರ್ ಎಂಜಿನಿಯರನ ಸಂಬಳ ಇಂದು ಮೂವತ್ತು ಸಾವಿರದ ಆಜುಬಾಜು ಇದೆ, ಏಕೆಂದರೆ ಇದು ನಿಜದ ಆರ್ಥಿಕ ಪ್ರಗತಿ ಮತ್ತು ಜಾಗತಿಕ ಮಟ್ಟಕ್ಕೆ ಸರಿಸಮವಾಗಿ ಬೆಳೆದಿದೆ. ಅದೇ ಜಾಗತಿಕ ಮಟ್ಟದ ಆರ್ಥಿಕತೆಗೆ ಸರಿಸಮವಾಗಿ ಬೆಳೆಯದೆ, ಆಮ್ಲೀಯ ಹಣದುಬ್ಬರಕ್ಕೆ ತೆರೆದುಕೊಂಡು ಬೆಳೆದ ದೇಶೀಯ ಆರ್ಥಿಕತೆ ತತ್ತರಿಸಿದೆ. ಈ ಆಮ್ಲೀಯ ಹಣದುಬ್ಬರಕ್ಕೆ ಅನುಗುಣವಾಗಿ ಎಲ್ಲಾ ಉದ್ಯೋಗ/ಉದ್ದಿಮೆಗಳಲ್ಲಿಯೂ ಸಮೃದ್ಧವಾಗಿ ಬೆಳೆದದ್ದು ಭ್ರಷ್ಟಾಚಾರ.  ಇದು ಲಂಗುಲಗಾಮಿಲ್ಲದೆ ಭ್ರಷ್ಟಾಚಾರವನ್ನು ಬೆಳೆಸಿದ ಆರ್ಥಿಕ ನೀತಿಗಳ ನೇರ ಮತ್ತು ಪ್ರತ್ಯಕ್ಷ ಪರಿಣಾಮ. ಉದಾಹರಣೆಗೆ ಆಸ್ತಿ ನೋಂದಣಿಯಲ್ಲಿ ಕಡಿಮೆ ಬೆಲೆ ತೋರಿಸುತ್ತಾರೆಂದು ಸರ್ಕಾರಗಳೇ ಯಾವುದೇ ಆರ್ಥಿಕ ಸೂತ್ರಕ್ಕೂ ಅನ್ವಯವಾಗದಂತಹ ಮಾರ್ಗದರ್ಶಿ ನೋಂದಣಿ ಬೆಲೆಯನ್ನು ಜಾರಿಗೆ ತಂದದ್ದು.  ಹೀಗೆ ಸುನಾಮಿಯನ್ನೇ ಆರ್ಥಿಕ ಬಲೂನಿನಲ್ಲಿ ತುಂಬಿ ಈಗ ಬಲೂನು ಸ್ಪೋಟಿಸುತ್ತದೆ ಎಂದರೆ...!?! ಕೇವಲ ಮತ್ತು ಕೇವಲ ಜನಸಂಖ್ಯೆಯ ಏಕೈಕ ಕಾರಣಕ್ಕೆ ಭಾರತದಲ್ಲಿ ಈ ರಿಸೆಷನ್ ಕಳೆದ ಎರಡು ದಶಕಗಳಿಂದ ಮುಂದೂಡಿಕೊಂಡು ಬಂದಿದೆ. ಆದರೆ ಈಗ ಕುತ್ತಿಗೆಗೆ ಬಂದಿದೆ. ಬ್ಯಾಂಕುಗಳಲ್ಲಿ ಈಗ ಮೊದಲಿನಂತೆ ಬೇಕಾಬಿಟ್ಟಿ ಸಾಲ ಸಿಗುತ್ತಿಲ್ಲ, ಆಮ್ಲೀಯ ಉಬ್ಬರದ ತಾಯಿಯಾಗಿದ್ದ ಅಬ್ಬರದ ರಿಯಲ್ ಎಸ್ಟೇಟ್ ತಣ್ಣಗಾಗಿದೆ, ಇವುಗಳಿಗೆ ತಕ್ಕಂತೆ ಉಬ್ಬರ ನಿಂತಿದೆ.  ಇಂತಹ ಆರ್ಥಿಕತೆಯ ನೈಜ ಚಿತ್ರಣ ರೂಪುಗೊಳ್ಳುವ ಸಮಯದಲ್ಲಿ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಒಂದು ಸಮಗ್ರ ದೂರದೃಷ್ಟಿಯಿಲ್ಲದೆ ಕೇವಲ ಭಾವನಾತ್ಮಕವಾಗಿ "ಪವಿತ್ರ ಆರ್ಥಿಕತೆ" ಎಂಬಂತಹ ಸಿಲ್ಲಿ ಹೋರಾಟಗಳು ಭಜನೆ ಎನಿಸಿಬಿಡುತ್ತದೆ.

ರಿಸೆಷನ್ನಿನಂತಹ ಆರ್ಥಿಕ ಸೈಕ್ಲಿಕಲ್ ಬದಲಾವಣೆಗಳನ್ನು ಸಮರ್ಥವಾಗಿ ನಿಯಂತ್ರಿಸದೆ "ತಲೆಗಿಂತ ತರಡು ದಪ್ಪ" ಮಾಡಿಕೊಂಡಿದ್ದರೂ ಅದು ನನ್ನ ಶಕ್ತಿ ಎಂದುಕೊಂಡು ದುರ್ಮಾಂಸ ಬೆಳೆಸಿಕೊಂಡವರಿಗೆ ಈ ಶಸ್ತ್ರಚಿಕಿತ್ಸೆ ಅವಶ್ಯಕ. ಈಗಲೂ ಇದು ಶಕ್ತಿಯಲ್ಲ ದುರ್ಮಾಂಸವೆಂದರೆ  ಯಾರೂ ನಂಬುವುದಿಲ್ಲ ಕೂಡ. ಹಾಗೊಮ್ಮೆ ನಂಬಿಸಿದರೂ ಮೋದಿಯಂತಹ ನಾಯಕರು ಏನಾದರೂ ಶಸ್ತ್ರಚಿಕಿತ್ಸೆರಹಿತ ದುರ್ಮಾಂಸ ತೆಗೆಯುವ ಮ್ಯಾಜಿಕ್ ಕಂಡುಹಿಡಿದಿರಬಹುದೆಂಬ ಆಶೆ! ಇಲ್ಲಾ ಇದನ್ನು ಪರಿಹರಿಸುವ ಗೋಮೂತ್ರ, ಕತ್ತೆಹಾಲು, ಸಾವಯವ ಔಷಧೀಯ ಗಿಡಮೂಲಿಕೆಗಳಿರಬಹುದೆಂಬ ಭ್ರಮೆ! ಅಥವಾ ಮುಂಬರಬಹುದಾದ ರಾಹುಲರ ನ್ಯಾಯ್ ನ್ಯಾಯವೊದಗಿಸುತ್ತಾರೆಂಬ ಇನ್ನೊಂದು ಗುಂಪಿನ ಉಬ್ಬರದ ಅಬ್ಬರ.

ಇರಲಿ, ಈಗ ಯಾವ ಅಂತರರಾಷ್ಟ್ರೀಯ ಆರ್ಥಿಕ ತಜ್ಞರು ಈ ಹಿಂಜರಿತದ ಕುರಿತು ಮಾತನಾಡುತ್ತಿರುವರೋ ಅವರುಗಳೇ ಜಾಗತಿಕ ಮಟ್ಟದ ಅಂಕಿಅಂಶಗಳ ಪ್ರಕಾರ
ಈ ಪರಿಸ್ಥಿತಿ 2021ರಷ್ಟೊತ್ತಿಗೆ ಸರಿಪಡಿಸಿಕೊಂಡು ಭಾರತ ಆರ್ಥಿಕವಾಗಿ ಮುಂದುವರಿಯಲಿದೆ ಎಂದಿದ್ದಾರೆ.

ಆದರೆ ದೇಶೀಯ ಅಂಕಿ-ಅಂಶಗಳು ಏನೆನ್ನುತ್ತವೆ? ಗೊತ್ತಿಲ್ಲ.

ಈ ಆರ್ಥಿಕ ಹಿಂಜರಿತ ಯಾ ರಿಸೆಷನ್ ಎಂಬುದು ಕೇವಲ ಒಂದು tip of the iceberg!  ಇಂತಹ ಅನಾಹುತಗಳೇ ನಡೆದು ಒಂದೊಮ್ಮೆ ಅಮೆರಿಕಾದಂತಹ ಅಮೆರಿಕವೇ ದಿ ಗ್ರೇಟ್ ಡಿಪ್ರೆಷನ್ ಎಂಬ ಆರ್ಥಿಕ ಪ್ಲೇಗಿಗೆ ಒಳಗಾಗಿತ್ತು. ಅಲ್ಲಿನ ಜನಸಾಮಾನ್ಯರಿಗೆ ಮುಂದಿನ ಊಟ ಮತ್ಯಾವಾಗ ಸಿಗುವುದೋ ಎಂಬುದು ಕೂಡ ಗೊತ್ತಿರುತ್ತಿರಲಿಲ್ಲ, ಊಟ ಸಿಕ್ಕಾಗ ಗಡದ್ದಾಗಿ ತಿನ್ನುತ್ತಿದ್ದರು. ಹಾಗಾಗಿಯೇ ಇಂದಿಗೂ ಅಮೆರಿಕಾದ ಹೋಟೆಲುಗಳಲ್ಲಿ ಕೊಡುವ ಊಟದ ಪ್ರಮಾಣ ಅಧಿಕ. ಅಂತಹ ಪರಿಸ್ಥಿತಿಯನ್ನು ಡಿಪ್ರೆಷನ್ ಸೃಷ್ಟಿಸಿತ್ತು. ಭಾರತ  ಇದನ್ನು ಒಂದು ಜಾಗತಿಕ ಗುಣಮಟ್ಟದ ಆರ್ಥಿಕ ನೀತಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಯೊಟ್ಟಿಗೆ ತಹಬದಿಗೆ ತಂದು, ಒಂದು ಸತ್ಯದ ಆರ್ಥಿಕ ಅಭಿವೃದ್ಧಿ ಮಾಪನದ ಅಡಿಪಾಯದೊಂದಿಗೆ ಹೊಸ ಆರಂಭವನ್ನು ಆರಂಭಿಸದಿದ್ದರೆ ಆರ್ಥಿಕ ಡಿಪ್ರೆಷನ್ನಿಗೊಳಗಾಗಿ ದೇಶದ ತುಂಬೆಲ್ಲಾ ಇಂದಿರಾ ಕ್ಯಾಂಟೀನುಗಳನ್ನು ತೆರೆದು ಉಚಿತವಾಗಿ ಊಟ ಹಂಚಬೇಕಾಗುತ್ತದೆ. 
http://epaper.udayakala.news/

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment