RCEP, ಆರ್ಸಿಇಪಿ ಏನಪ್ಪಿ ಇದು?!


ರದ್ದಿ ಅಂಗಡಿ ಫೇಸ್ಬುಕ್ ಕಟ್ಟೆ ಮ್ಯಾಕೆ ಚಿಂತಕರ ಪಟಾಲಂ ಸೇರಿತ್ತು. ಏನ್ ಅಂಗೇ RCEP, ಆರ್ಸಿಇಪಿ ಅಂಥ ಅವರವರ ಫಾರಿನ್ ಫೋನಲ್ಲಿ ಎಲ್ಲಾ ಕುಟ್ಟತಾ ಇದ್ದೋ. ಆಗ ಸಡನ್ನಾಗಿ ಆಕಾಸವಾಣಿಯಿಂದ "ಇರಮ್ಮಿ, ಸುಮ್ಕೆ ಚಂದ್ರೇಗೌಡನ್ ಜುಮ್ಮಿ ತರಕೆ ಡವ್ ಬುಡಬೇಡ. ಇದೇನ್ ನಿಮ್ ಕುಂದಾಪುರದ್ ಘಿ ರೋಸ್ಟ್ ಅಂಕಂಡೇ... ನಮಗೂ ಗೊತ್ತದೆ ಆರ್ಸಿಇಪಿ, ವಸಿ ಅದಿಮಿಕೊಂಡು ಕುತ್ಕಾ ಯೋಳ್ತೀನಿ. ಕುಂದಾಪುರದ್ ಮೀನ್ ಕಂಡ್ ಜೊಲ್ ಸುರ್ಸ ಮಂಡೇವುದ್ ವಾಟಿಸ್ಸೆ ಭಾಸೆಲಿ ಯೋಳ್ಳಾ?...ಬ್ಯಾಡ ಬುಡು ನಿಂಗ್ ತಲೇಲಿ ನೆಟ್ಟಗೆ ಓಗಂಗೆ ಸುದ್ಧ ಪಂಪ ಪಂಪ ಅಂಥ ಬೊಮ್ಮಡಿ ವಡ್ಕತನಲ್ಲ ಮೈಸೂರು ಮೇಸ್ಟ್ರು ಉಗ್ರಿ...ಅವ್ನ ಭಾಸೇಲೆ ಬುಡ್ತೀನಿ ಕೇಳ್ಕ" ದನಿಯೊಂದು ಕೇಳಿತು.

ಹುಂ ಹುಂ...ರೆಡಿ ಒನ್, ಟೂ, ತ್ರೀ..ಬಾಲಣ್ಣ ಸವಂಡು ಜಾಸ್ತಿ ಮಾಡು...ಆ ತಕತಿಕದೋನಿಗೂ ಕೇಳ್ಳಿ ವಸಿ, ಕೆಪ್ಪಲೌಡಿದಿಕ್ಕೆ... ಗೋ!

RCEP ಎಂದರೆ ದಿ Regional Comprehensive Economic Partnership ಎಂದು. ಈ ಪಾಲುದಾರಿಕೆ ಒಪ್ಪಂದದ ಪ್ರಕಾರ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಏಷ್ಯಾದ ರಾಷ್ಟ್ರಗಳು ತಮ್ಮತಮ್ಮಲ್ಲಿ ಆಮದು/ರಫ್ತು ಸುಂಕಮುಕ್ತ ವ್ಯಾಪಾರ ಸಂಬಂಧವನ್ನು ಹೊಂದುವುದು ಎಂದು ಸಡಿಲಾಗಿ ಹೇಳಬಹುದು.

ಅಂದರೆ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಅಳವಡಿಸುವಲ್ಲಿ ಒಂದು ಮಹತ್ವದ ಹೆಜ್ಜೆ. ವಸುದೈವ ಕುಟುಂಬಕಂ ಯಾ ಜಾನ್ ಲೆನನ್ ಕನಸು ಕಂಡಂತೆ ಬೇಲಿಯಿಲ್ಲದ, ಗಡಿಗಳಿಲ್ಲದ ವಿಶ್ವದ ಕನಸನ್ನು ನನಸಾಗಿಸುವಲ್ಲಿನ ಒಂದು ದಿಟ್ಟ ಹೆಜ್ಜೆ ಎಂದು ಕೂಡ ಹೇಳಬಹುದು. ಈ ಕನಸನ್ನು ನನಸಾಗಿಸುವುದು ತಪ್ಪೇ? ಈ ಕನಸು ಕೇವಲ ಕನಸಾಗಿ, ಕವನವಾಗಿ, ಹಾಡಾಗಿಸಲು ಮಾತ್ರ ಯೋಗ್ಯ, ಇದು ಹಕೀಕತ್ತಾಗಕೂಡದು ಎನ್ನುತ್ತಿದ್ದಾರೆ ಈ RCEP ವಿರೋಧಿ ಮಸಲತ್ತುಗಾರರು! ಇದಕ್ಕೆ ಭಾರತ ಒಪ್ಪುತ್ತಿದೆಯೋ ಇಲ್ಲವೋ ಅದು ಭಾರತ ಸರ್ಕಾರಕ್ಕೆ ಬಿಟ್ಟದ್ದು. ಆದರೆ ಇದು ವಿಶ್ವವನ್ನು ಬೆಸೆಯುವಲ್ಲಿ ಒಂದು ಮುಕ್ತ ಹೆಜ್ಜೆ. ಆದರೆ ಮುಕ್ತತೆಯ ಠೇಕೆದಾರರೆಂದು ಸ್ವಘೋಷಿಸಿಕೊಂಡಿರುವವರು ಈ ಮುಕ್ತ ಮಾರುಕಟ್ಟೆಯ ಬಗ್ಗೆ ಸಂಕುಚಿತತೆ ಮತ್ತು ಅಸಹಿಷ್ಣುತೆಯನ್ನು ಏಕೆ ಪ್ರದರ್ಶಿಸುತ್ತಿದ್ದಾರೆ? ಆಲೋಚಿಸಿ.

ಇನ್ನು ನಾವು ನೀವೆಲ್ಲರೂ ಬಾಲ್ಯದಿಂದ ಈ ಮುಕ್ತ ಚಿಂತಕರ ರೈತ/ಉತ್ಪಾದಕ-ಗ್ರಾಹಕರ ನಡುವೆ ನೇರ ಸಂಪರ್ಕವೇರ್ಪಟ್ಟು ಈ ಮಧ್ಯವರ್ತಿಗಳನ್ನು/ವ್ಯಾಪಾರಿಗಳನ್ನು ತೆಗೆದುಹಾಕಬೇಕೆಂಬ ಚಿಂತನೆಯನ್ನು ಕೇಳುತ್ತಲೇ ಬೆಳೆದಿದ್ದೇವೆ. ಆ ತತ್ವವನ್ನು ಅಪ್ಪಿ ಆರಾಧಿಸಿ ಬಯಸುತ್ತಲೇ ಇದ್ದೇವೆ. ಇಂತಹ ಮಧ್ಯವರ್ತಿ ನಿವಾರಣೆಯ ಕನಸು ಇಂದಿನ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಅಮೇಜಾನ್, ಫ್ಲಿಪ್ಕಾರ್ಟ್ ಅಂತಹ ಸಂಸ್ಥೆಗಳಿಂದ ಸಾಧ್ಯವಾಗಿದೆ. ಈ ಕಂಪೆನಿಗಳು ಉತ್ಪಾದಕ-ಗ್ರಾಹಕರ ಸಂಪರ್ಕ ಸೇತುವಾಗಿ ಅದರ ಲಾಭವನ್ನು ಕಡಿಮೆ ಬೆಲೆಯ ರೂಪದಲ್ಲಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ ಮತ್ತು ಉತ್ತಮ ಗ್ರಾಹಕ ಸೇವೆಯನ್ನು ಕೊಡುತ್ತಿದ್ದಾರೆ. ಆದರೆ ಅದೇ ಚಿಂತಕರ ಚಾವಡಿ ಇಂದು ಮಧ್ಯವರ್ತಿಗಳ ಪರವಾಗಿ ನಿಂತಿದೆ. ಏಕೆಂದರೆ ಅವರಿಗಾಗದ ಓರ್ವ ಖುರ್ಚಿ ಹಿಡಿದಿದ್ದಾನೆ ಎಂಬ ಏಕೈಕ ಕಾರಣಕ್ಕಾಗಿ! ಉಳಿದದ್ದು ತಮ್ಮ ವಿವೇಚನೆಗೆ ಬಿಟ್ಟದ್ದು.

ಈಗ ಇದೇ ಚಾವಡಿ ನಮ್ಮ ರೈತರನ್ನು ಕತ್ತಿ ಗುರಾಣಿಯಾಗಿ ಬಳಸಲು ರೈತರನ್ನು ಪ್ರಚೋದಿಸುತ್ತಿದೆ. ಈ ಆರ್ಸಿಇಪಿ ಒಪ್ಪಂದದಿಂದ ಆಸ್ಟ್ರೇಲಿಯಾ/ನ್ಯೂಜಿಲೆಂಡ್ ನ ಬೃಹತ್ ಡೈರಿಗಳಿಂದ ಹಾಲು ದೂದ್ ಸಾಗರವಾಗಿ ಭಾರತಕ್ಕೆ ಹರಿದು ಬಂದು ನಮ್ಮ ದೇಸೀ ಹಾಲು ಉತ್ಪಾದಕರೆಲ್ಲಾ ಬರಡು ರಾಸುಗಳಾಗುತ್ತಾರೆ ಎಂದು ತುತ್ತೂರಿ ಊದುತ್ತಿದ್ದಾರೆ.

ಹಾಗಾಗಿ ಸ್ವಲ್ಪ ಸತ್ಯಾಸತ್ಯತೆಯನ್ನು ನೋಡೋಣ. ಆಸ್ಟ್ರೇಲಿಯಾ/ನ್ಯೂಜಿಲೆಂಡಿನಲ್ಲಿ ಒಂದು ಲೀಟರ್ ಹಾಲಿಗೆ ಆಸ್ಟ್ರೇಲಿಯನ್ $0.48. ಅಂದರೆ ರೂ.45 ರ ಆಜುಬಾಜು. ಆ ಹಾಲನ್ನು ಭಾರತಕ್ಕೆ ಹರಿಸಲು ಆಗುವ ಸಾಗಣೆಯ ವೆಚ್ಚ ಎಲ್ಲ ಸೇರಿ ಆ ಹಾಲಿನ ಬೆಲೆ ರೂ.90 ಆಗುತ್ತದೆ. ತೊಂಬತ್ತು ರೂಪಾಯಿ ಕೊಟ್ಟು ಆ ಹಳಸಲು ಹಾಲನ್ನು ಯಾರು ಕೊಳ್ಳುತ್ತಾರೆ?!? ಈ ದೇಶಗಳಿಂದ ಬರಬಹುದಾದ ಡೈರಿ ಉತ್ಪನ್ನ ಚೀಸ್! ಪನೀರ್ ಅಲ್ಲ. ಅಲ್ಲಿನ ಚೀಸ್ ಏನಿದ್ದರೂ ವಿದೇಶಿ ಅಡಿಗೆಗಳಲ್ಲಿ ಬಳಸುವಂತಹದು. ಇದರಿಂದ ವಿದೇಶಿ ಅಡಿಗೆ ಮಾಡುವ ಹೋಟೆಲುಗಳು ಲಾಭ ಮಾಡಬಹುದು ಮತ್ತು ಆ ಲಾಭವನ್ನು ಗ್ರಾಹಕರಿಗೆ ಕಡಿಮೆ ದರದ ಮುಖಾಂತರ ತಲುಪಿಸಬಹುದು. ಉಳಿದದ್ದು ನಿಮ್ಮ ವಿವೇಚನೆಗೆ ಬಿಟ್ಟದ್ದು.

ಇಲ್ಲಿ ಭಾರತ ಸರ್ಕಾರ ಅಂದರೆ ಪ್ರಧಾನಿ ಮೋದಿ ಈ ಒಪ್ಪಂದಕ್ಕೆ ಸಹಿ ಹಾಕುತ್ತಾರೆಯೋ ಇಲ್ಲವೋ ಗೊತ್ತಿಲ್ಲ. ಆದರೂ ಅವರ ವಿರೋಧಿಗಳ ಗುಂಪು ಈ ರೀತಿ ಒಂದು ಬೆದರುಬೊಂಬೆಯನ್ನು ಸೃಷ್ಟಿಸಿ ಸಮಾಜದಲ್ಲಿ ದುಗುಡ ದುಮ್ಮಾನ, ದುರಿತ, ಸನ್ನಿವೇಶವನ್ನು ಈ ರೀತಿಯಾಗಿ ಕೃತಕವಾಗಿ ಸೃಷ್ಟಿಸುತ್ತಿದೆ. ಹಾಗಾಗಿ ಕೊಂಚ ನಿಮ್ಮ ಬೆರಳುಗಳಿಗೆ ಕೆಲಸ ಕೊಟ್ಟು, ನಿಮ್ಮ ಡೇಟಾ ಪ್ಲ್ಯಾನ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಿ. ನಿಮ್ಮ ಬುದ್ದಿ ನಿಮ್ಮಲ್ಲೇ ಇರಲಿ ಎಂದು ಹಾರೈಸುವೆ.

"ಹಾಂ, ಇಂಥವರು ಬರುತ್ತಲೇ ಇರುತ್ತಾರೆ, ನೀವು ಓಡಿಸುತ್ತಲೇ ಇರಬೇಕು. ಇಂಥವರು ಬರುತ್ತಲೇ ಇರುತ್ತಾರೆ, ನೀವು ಓಡಿಸುತ್ತಲೇ ಇರಬೇಕು." ಇದು ಪಡುವಾರಹಳ್ಳಿ ಪಾಂಡವರು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ! ಇಂದಿಗೂ ಅನ್ವಯ.

ಏಯ್ ಚೇಂಜ್ ಮಾಡ್ರುಲಾ ಟೇಶನ್ನ ಅಂಥಾ ವಾಟಿಸ್ಸೆ ಕೂಗಿದ್ ಕಿಟ ಬಾಲಣ್ಣ ಟೇಶನ್ ಚೇಂಜ್ ಮಾಡಿದ. ಆಗ "ಓ ನನ್ನ ಚೇತನಾ ಆಗು ನೀ ಅನಿಕೇತನ..." ಎಂಬ ಹಾಡು ತೇಲಿ ಬಂತು.

ಇಲ್ಲಿಗೆ ರದ್ದಿ ಅಂಗಡಿಯ ಫೇಸ್ಬುಕ್ ಕಟ್ಟೆ ಪುರಾಣ ಪರಿಸಮಾಪ್ತಿ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment